ಬಸವ ಧರ್ಮ /ಲಿಂಗಾಯತ ಧರ್ಮ

- ✍ ಲೇ: ರಂಜಾನ್ ದರ್ಗಾ

(೨೦೦೬ನೇ ನವೆಂಬರ್ ೨೬ ಮತ್ತು ೨೭ರಂದು ಗುಲ್ಬರ್ಗಾ ಜಿಲ್ಲೆ (ಇಂದಿನ ಯಾದಗಿರಿ ಜಿಲ್ಲೆ) ಸುರಪುರ ತಾಲ್ಲೂಕಿನ ಕೊಡೆಕಲ್‌ನಲ್ಲಿ ನಡೆದ ಕಲ್ಯಾಣ ಕರ್ನಾಟಕ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೀಯ ಭಾಷಣ.)

ಪೂಜ್ಯರಿಗೆ, ಹಿರಿಯರಿಗೆ, ಎಲ್ಲ ಶರಣ ಶರಣೆಯರಿಗೆ ಶರಣುಶರಣಾರ್ಥಿ.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೊಡೇಕಲ್ಲಿನ ಶ್ರೀದುರದುಂಡೇಶ್ವರ ವಿರಕ್ತಮಠದಲ್ಲಿ ಕಲ್ಯಾಣ ಕರ್ನಾಟಕ ಪ್ರಥಮ ಶರಣ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಿದ್ದು ಅನೇಕ ಕಾರಣಗಳಿಂದ ಐತಿಹಾಸಿಕವಾಗಿದೆ. ಇಂಥ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ನಾನು ಅರ್ಹನಲ್ಲವೆಂದು ನನಗೆ ಅನಿಸುತ್ತಿದ್ದರೂ ಹಿರಿಯರ ಆಗ್ರಹಕ್ಕೆ ಮಣಿದು ಒಪ್ಪಿಕೊಂಡಿದ್ದೇನೆ.

ಎರಡು ಸಾವಿರ ವರ್ಷಗಳಿಗೂ ಹಿಂದೆ ಕೊಡೇಕಲ್‌ನಲ್ಲಿ ಜನವಸತಿ ಇದ್ದ ಬಗ್ಗೆ ನವಶಿಲಾಯುಗದ ಸಂಸ್ಕೃತಿಯ ಅವಶೇಷಗಳು ಸೂಚಿಸುತ್ತವೆ. ಆದರೆ ಈ ಊರು ಪ್ರಸಿದ್ಧವಾಗಿದ್ದು ೧೫ನೇ ಶತಮಾನದ ಕೊಡೇಕಲ್ ಬಸವಣ್ಣನವರಿಂದಾಗಿ. ಯೂಸುಫ್ ಆದಿಲ್‌ಖಾನ್ ಮತ್ತು ಕೊಡೇಕಲ್ ಬಸವಣ್ಣನವರ ಭೇಟಿ ಸೂಫಿ ಹಾಗೂ ಶರಣ ಸಿದ್ಧಾಂತದ ಭೇಟಿಯಾಗಿತ್ತು. ಕೊಡೇಕಲ್ ಬಸವಣ್ಣನವರು ಒಂದು ಮಹತ್ವದ ಕೆಲಸವನ್ನು ಮಾಡಿದರು. ಅದೇನೆಂದರೆ ಕೊಡೆಕಲ್ ಕ್ಷೇತ್ರವನ್ನು ಶರಣ ಮತ್ತು ಸೂಫಿ ಧರ್ಮಗಳ ಕೂಡಲಸಂಗಮ ಕ್ಷೇತ್ರವಾಗಿಸಿದರು. ಆ ಮೂಲಕ ಈ ಕ್ಷೇತ್ರ ಅಮರಕಲ್ಯಾಣವಾಯಿತು. ಕೊಡೇಕಲ್ ಬಸವಣ್ಣನವರು ಈ ಭಾವೈಕ್ಯದ ಸಾಧನೆ ಮಾಡಿದಾಗ ಅದು ಇಡೀ ಭರತಖಂಡದಲ್ಲೇ ಅದ್ವಿತೀಯವಾಗಿತ್ತು. ೧೪೮೯ರಲ್ಲಿ ವಿಜಾಪುರದಲ್ಲಿ ಆದಿಲ್‌ಶಾಹಿ ಸಾಮ್ರಾಜ್ಯ ಸ್ಥಾಪನೆ ಮಾಡಿದ ಯೂಸುಫ್ ಆದಿಲ್‌ಖಾನ್ ಶಹಾಪುರದ ಪಕ್ಕದಲ್ಲಿ ಇರುವ ಗೋಗಿಯ ಸೂಫಿಸಂತ ಚಂದಾಹುಸೇನಿಯ ಭಕ್ತನಾಗಿದ್ದ. ಚಂದಾಹುಸೇನಿ ನಿಧನರಾದ ಕೇವಲ ೫೦ ವರ್ಷಗಳ ನಂತರ ಸಾಮ್ರಾಜ್ಯ ಸ್ಥಾಪನೆ ಮಾಡಿದ ಆದಿಲ್‌ಖಾನನಿಗೆ ಆ ಸೂಫಿಸಂತನ ಬಗ್ಗೆ ಆಳವಾದ ಅರಿವು ಇತ್ತು. ೧೫೧೦ರಲ್ಲಿ ವಿಜಾಪುರದಲ್ಲಿ ಆದಿಲ್‌ಖಾನ್ ತೀರಿಕೊಂಡಾಗ ಆತನ ಪಾರ್ಥಿವ ಶರೀರವನ್ನು ಗೋಗಿಗೆ ತಂದು ಚಂದಾಹುಸೇನಿಯ ದರ್ಗಾದ ಪಕ್ಕದಲ್ಲೇ ಹೂಳಲಾಯಿತು. ತನ್ನ ಗೋರಿ ಈ ಸೂಫಿಸಂತನ ಸಮಾಧಿಯ ಪಕ್ಕದಲ್ಲೇ ಇರಬೇಕೆಂಬುದು ಆತನ ಬಯಕೆಯಾಗಿತ್ತು ಎಂಬುದು ಸೂಫಿ ತತ್ತ್ವದ ಮಹತ್ವವನ್ನು ಸಾರುತ್ತದೆ. ಹಂಪಿ ಮೂಲದ ಕೊಡೇಕಲ್ ಬಸವಣ್ಣನವರ ಮತ್ತು ಟರ್ಕಿ ಮೂಲದ ಯೂಸುಫ್ ಆದಿಲ್‌ಖಾನ್‌ನ ಸಮಾಧಿಗಳು ಸಗರನಾಡಿನಲ್ಲೇ ಇವೆ ಎಂಬುದು ಗಮನಾರ್ಹ ಸಂಗತಿಯಾಗಿದೆ. ಆದಿಲ್‌ಖಾನ್ ಜೊತೆಗಿನ ಕೊಡೇಕಲ್ ಬಸವಣ್ಣನವರ ಭೇಟಿ ಭಾರತೀಯ ಇತಿಹಾಸದಲ್ಲೇ ಮಹತ್ವಪೂರ್ಣದ್ದಾಗಿದೆ. ಸೂಫಿ ಮತ್ತು ಶರಣ ತತ್ತ್ವಗಳ ಸಂಗಮಕ್ಕೆ ಈ ಭೇಟಿ ನಾಂದಿಯಾಯಿತು. ಇದುವೆ ವಿಜಾಪುರದ ಆದಿಲ್‌ಶಾಹಿಗಳ ಹೆಮ್ಮೆಯ ಸಮ್ಮಿಶ್ರ ಸಂಸ್ಕೃತಿಗೆ ಕಾರಣವಾಯಿತು.

ವಿಜಾಪುರದ ಸಮ್ಮಿಶ್ರ ಸಂಸ್ಕೃತಿ ಇಡೀ ದೇಶದಲ್ಲೇ ನಡೆದ ಮೊದಲ ಪ್ರಯೋಗವಾಗಿದೆ. ಚಕ್ರವರ್ತಿ ಅಕ್ಬರ್ ಕೂಡ ವಿಜಾಪುರದಿಂದಲೇ ಸಮ್ಮಿಶ್ರ ಸಂಸ್ಕೃತಿಯ ಪಾಠ ಕಲಿತ. ದೇಶದ ಸಮ್ಮಿಶ್ರ ಸಂಸ್ಕೃತಿಯ ಮೂಲ ಕೊಡೇಕಲ್ಲಿನಲ್ಲಿದೆ ಎಂಬುದಕ್ಕೆ ಇತಿಹಾಸ ಸಾಕ್ಷಿ ಇದೆ.

ಕಲ್ಯಾಣದಲ್ಲಿ ಶರಣರ ಹತ್ಯಾಕಾಂಡವಾದ ಮೂರು ಶತಮಾನಗಳ ನಂತರ ವಿಜಯನಗರದಲ್ಲಿ ಬಸವಧರ್ಮದ ದೇಹ ಕಾಣಿಸಿಕೊಂಡರೆ ಕೊಡೆಕಲ್ಲಿನಲ್ಲಿ ಅದರ ಆತ್ಮವನ್ನು ಕೊಡೆಕಲ್ ಬಸವಣ್ಣನವರು ಹಿಡಿದಿಟ್ಟರು. ಅವರ ಶಿಷ್ಯ ಮಂಟೇಸ್ವಾಮಿ ಮತ್ತು ಮಗ ರಾಚಪ್ಪಾಜಿ ಈ ಸಂಪ್ರದಾಯವನ್ನು ಉತ್ತರದೇಶವೆನಿಸಿದ್ದ ಈ ಪ್ರದೇಶದಿಂದ ಕತ್ತಲೆ ರಾಜ್ಯವೆನಿಸಿದ್ದ ಮೈಸೂರು ಸೀಮೆಯ ಕಡೆಗೆ ಒಯ್ದರು. ಆ ಮೂಲಕ ಕೆಳವರ್ಗದವರಿಗೆ ಬಸವಣ್ಣ ತಾತ್ವಿಕವಾಗಿ ದೊರಕಿದ. ಎಲ್ಲ ಕೆಳವರ್ಗದವರಿಗೆ ಬಸವಣ್ಣ ಮತ್ತು ಶರಣರು ಇಂದು ಸಾಹಿತ್ಯಕವಾಗಿ ಸಿಕ್ಕಿದ್ದಾರೆ. ಧಾರ್ಮಿಕವಾಗಿಯೂ ಸಿಗಬೇಕಾಗಿದೆ.

ಬಸವ ತತ್ತ್ವಗಳು ಎಲ್ಲ ದೃಷ್ಟಿಯಿಂದಲೂ ವಿಶ್ವಮಾನ್ಯವಾಗಿವೆ. ಪ್ಲೇಟೋನ ಚಿಂತನೆಗಳು ಮತ್ತು ಬುದ್ಧನ ಸಂಘಜೀವನಕ್ರಮ ಬಿಟ್ಟರೆ ವಿಶ್ವಕ್ಕೆ ಪ್ರಜಾಪ್ರಭುತ್ವದ ಕಲ್ಪನೆಯೇ ಇರಲಿಲ್ಲ. ೧೨ನೇ ಶತಮಾನದಲ್ಲಿ ಅಮೆರಿಕ ದೇಶವೇ ಇರಲಿಲ್ಲ. ಇಂಗ್ಲಂಡ್, ಫ್ರಾನ್ಸ್, ಜರ್ಮನಿ, ಚೀನ, ರಷ್ಯಾ ಹೀಗೆ ಎಲ್ಲೆಡೆ ರಾಜಪ್ರಭುತ್ವದ ಅಟ್ಟಹಾಸವೇ ಮೆರೆಯುತ್ತಿತ್ತು. ಆ ಮಧ್ಯಯುಗದಲ್ಲಿ ಕ್ರೌರ್ಯವೇ ಪ್ರಧಾನವಾಗಿತ್ತು. ಅಂಥ ಸಂದರ್ಭದಲ್ಲಿ ಬಸವಣ್ಣನವರು ಪ್ರಜಾಪ್ರಭುತ್ವದ ಕನಸು ಕಂಡರು. ರಾಜ್ಯಶಕ್ತಿಯನ್ನು ಪ್ರಜಾಪ್ರಭುತ್ವ ಶಕ್ತಿಯಾಗಿ ಪರಿವರ್ತಿಸುವ ಮೊದಲು ಜನರಲ್ಲಿ ಪ್ರಜಾಪ್ರಭುತ್ವದ ಪ್ರಜ್ಞೆ ತುಂಬ ಬಯಸಿದರು, ಆ ಮೂಲಕ, ಇದ್ದ ಸಂಪ್ರದಾಯಬದ್ಧ ಸಮಾಜದಲ್ಲೇ ಪ್ರಜಾಪ್ರಭುತ್ವವಾದಿ ಪರ್ಯಾಯ ಸಮಾಜ ರಚಿಸಿದರು. ಈ ಸಮಾಜದ ಸದಸ್ಯರೆಲ್ಲ ಭಕ್ತರೆನಿಸಿದರು, ಶರಣರೆನಿಸಿದರು. ಅವರಲ್ಲಿ ಅನೇಕರು ವಚನಗಳನ್ನು ಬರೆದು ನವಸಮಾಜ ಮತ್ತು ನವಮಾನವನ ರೂಪುರೇಷೆಗಳನ್ನು ತೋರಿಸಿಕೊಟ್ಟರು.

"ಸಾಮಾಜಿಕ ಪ್ರಜಾಪ್ರಭುತ್ವ ಇರದಿದ್ದರೆ ಪ್ರಜಾಪ್ರಭುತ್ವದ ಔಪಚಾರಿಕ ಚೌಕಟ್ಟು ಬೆಲೆ ಇಲ್ಲದ್ದಾಗುತ್ತದೆ." ಎಂದು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ೧೯೪೩ರಲ್ಲೇ ತಿಳಿಸಿದ್ದಾರೆ. ನಮ್ಮ ಸಂವಿಧಾನ ಸ್ಟೇಟ್ ಸಮಾಜವಾದದ ಆಧಾರದ ಮೇಲೆ ನಿಂತಿರಬೇಕು. ಯಾವುದೇ ಸರ್ಕಾರ ಬಂದರೂ ಸ್ಟೇಟ್ ಸಮಾಜವಾದದ ಅಧೀನದಲ್ಲೇ ಇರಬೇಕು ಮತ್ತು ದೈನಂದಿನ ಸಾಮಾಜಿಕ ಬದುಕಿನಲ್ಲಿ ಪ್ರಜಾಪ್ರಭುತ್ವದ ಮಿಡಿತ ಇರಬೇಕು ಎಂಬುದು ಅಂಬೇಡ್ಕರರ ಆಶಯವಾಗಿತ್ತು. ಅವರ ಈ ಆಶಯ ಇಂದಿಗೂ ಈಡೇರಿಲ್ಲ. ಆದರೆ ಬಸವಣ್ಣನವರು ೮೫೦ ವರ್ಷಗಳ ಹಿಂದೆ ಜಾತಿಭೇದ, ವರ್ಣಭೇದ, ಲಿಂಗಭೇದ, ವರ್ಗಭೇದ ಮತ್ತು ಕಾಯಕಭೇದಗಳಿಲ್ಲದ ಹೊಸ ಪರ್ಯಾಯ ಸಮಾಜವನ್ನು ನಿರ್ಮಿಸುವಲ್ಲಿ ಯಶಸ್ಸು ಸಾಧಿಸಿದರು, ಅವರ ಸರ್ವಸಮಾನತೆಯ ಪ್ರಜಾಪ್ರಭುತ್ವವಾದಿ ಸಮಾಜ, "೨೧ನೇ ಶತಮಾನದ ನಮ್ಮ ಸಮಾಜ ಹೇಗಿರಬೇಕು" ಎಂಬುದಕ್ಕೆ ಮುನ್ಸೂಚನೆಯಾಗಿದೆ.

ನಮ್ಮ ನಮ್ಮ ದೇವರು ಮತ್ತು ಧರ್ಮಗಳು ನಮ್ಮೊಳಗೇ ಇರಬೇಕು. ಆದರೆ ನಾವು ಸಮಾಜದಲ್ಲಿ ಏಕೋಭಾವದೊಂದಿಗೆ ವ್ಯವಹರಿಸಬೇಕು. ಎಂಬುದು ಪ್ರಜಾಪ್ರಭುತ್ವದ ಅತಿದೊಡ್ಡ ಆಶಯವಾಗಿದೆ. ಈ ಆಶಯಕ್ಕೆ ಇಂದಿಗೂ ಬೆಲೆ ಸಿಗದ ಕಾರಣ ಭಾರತ ಕೋಮುಗಲಭೆಗಳ ತಾಣವಾಗುತ್ತಿದೆ. ಬಾಬರಿಮಸೀದಿ ಮತ್ತು ರಾಮಜನ್ಮಭೂಮಿ ವಿವಾದ ಸಹಸ್ರಾರು ಮುಗ್ಧಜೀವಿಗಳ ಬಲಿ ತೆಗೆದುಕೊಂಡಿತು. ದೇಶದ ಜನತೆ ಹತ್ತಾರು ಸಹಸ್ರ ಕೋಟಿ ರೂಪಾಯಿಗಳಷ್ಟು ನಷ್ಟ ಅನುಭವಿಸಿತು. ಆದರೆ ಬಸವಣ್ಣನವರ ಪರಿಕಲ್ಪನೆಯ ಸಮಾಜದಲ್ಲಿ ದೇವಸ್ಥಾನಗಳೇ ಇಲ್ಲ! ಅಲ್ಲಿ ಏನಿದ್ದರೂ ಪ್ರಜಾಪ್ರಭುತ್ವವಾದಿ ನೆಲೆಯ ಚಿಂತನಮಂಥನಕ್ಕಾಗಿ ಬೇಕಾದ ಅನುಭವ ಮಂಟಪ. "ಅನುಭವ ಮಂಟಪ" ಎಂಬುದು ವಿಶಿಷ್ಟವಾದ ಸಮಾಜೋ ಧಾರ್ಮಿಕ ಸಂಸತ್ ಆಗಿದೆ.

ಇಂದಿನ ಸಂವೈಧಾನಿಕ ಕಾನೂನಿನ ಆಳ್ವಿಕೆಗೆ ಮ್ಯಾಗ್ನಾಕಾರ್ಟಾ ಮೂಲ ಸೆಲೆಯಾಗಿದೆ. ರಾಜನ ಹಕ್ಕುಗಳಿಗೆ ಸಂಬಂಧಿಸಿದಂತೆ ಪೋಪ್, ದೊರೆ ಜಾನ್ ಮತ್ತು ಇಂಗ್ಲಂಡ್‌ನ ಕೆಳಹಂತದ ಜಹಗೀರದಾರರ ಮಧ್ಯೆ ಭಿನ್ನಾಭಿಪ್ರಾಯ ಉಂಟಾದಾಗ ೧೨೧೫ರಲ್ಲಿ ಒಂದು ಒಪ್ಪಂದಕ್ಕೆ ಬರಲಾಯಿತು. ಅದುವೆ ಮ್ಯಾಗ್ನಾಕಾರ್ಟಾ. ಅಂದರೆ ಮಹಾ ಒಪ್ಪಂದ. ಈ ಒಪ್ಪಂದದಿಂದಾಗಿ ದೊರೆ ಜಾನ್ ಕೆಲವೊಂದು ಹಕ್ಕುಗಳನ್ನು ಬಿಟ್ಟುಕೊಡಬೇಕಾಯಿತು. ರಾಜನ ಬಯಕೆಗಳು ಕಾನೂನಿನ ಚೌಕಟ್ಟಿನೊಳಗೆ ಇರಬೇಕು ಮುಂತಾದ ಪ್ರಜಾಪ್ರಭುತ್ವವಾದಿ ಅಂಶಗಳು ಮಾಗ್ನಾಕಾರ್ಟಾ ಒಪ್ಪಂದದಲ್ಲಿವೆ. ಹೀಗೆ ಕಾನೂನಿನ ಮೂಲಕ ರಾಜನ ಅಧಿಕಾರವನ್ನು ಮೊಟಕುಗೊಳಿಸಿದ ಕೀರ್ತಿ ಮ್ಯಾಗ್ನಾಕಾರ್ಟಾಗೆ ಸಲ್ಲುತ್ತದೆ. ಜಗತ್ತಿನ ಪ್ರತಿಯೊಂದು ದೇಶದ ಸಂವಿಧಾನದ ಮೇಲೆ ಮ್ಯಾಗ್ನಾಕಾರ್ಟಾದ ಪ್ರಭಾವವಿದೆ. ಮ್ಯಾಗ್ನಾಕಾರ್ಟಾ ಒಪ್ಪಂದಕ್ಕಿಂತ ಅರ್ಧ ಶತಮಾನ ಹಿಂದೆಯೆ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸುವುದರ ಮೂಲಕ ಜನರಲ್ಲಿ ಪ್ರಜಾಪ್ರಭುತ್ವದ ಅರಿವು ಮೂಡಿಸಿದ್ದರು. ಅಸ್ಪೃಶ್ಯರು ಮೊದಲು ಮಾಡಿ ವಿವಿಧ ಜಾತಿಗಳ ಜನ ಅನುಭವ ಮಂಟಪದಲ್ಲಿದ್ದರು. ೭೭೦ ಅಮರಗಣಂಗಳಲ್ಲಿ ಬಹುಪಾಲು ಮಂದಿ ವಿವಿಧ ಕಾಯಕಜೀವಿಗಳೇ ಆಗಿದ್ದರು. ಲೋಕವೇ ತಾನಾದವನು ಅಂದರೆ ಸಕಲಜೀವಾತ್ಮರಿಗೆ ಲೇಸನೇ ಬಯಸುವವನು ಮಾತ್ರ ಗಣ ಎಂದು ಕರೆಯಿಸಿಕೊಳ್ಳುತ್ತಾನೆ. ಹೀಗೆ ಶರಣರು ಎಲ್ಲ ರೀತಿಯ ಅಸಮಾನತೆಗಳಿಗೆ ವಿರುದ್ಧವಾಗಿದ್ದರು.

ಪ್ರಜಾಪ್ರಭುತ್ವದ ಆಶಯಗಳಿಗೆ ಪೂರಕವಾದ ವಿಚಾರಗಳನ್ನು ವಚನಕಾರರೆಲ್ಲ ಹೊಂದಿದ್ದರು ಎಂಬುದಕ್ಕೆ ಅವರ ಚಳವಳಿ ಮತ್ತು ವಚನಗಳು ಸಾಕ್ಷಿಯಾಗಿವೆ. ಬಸವಣ್ಣನವರು ಇಷ್ಟಲಿಂಗದ ಮೂಲಕ ದೇವರನ್ನು ಖಾಸಗೀಕರಣಗೊಳಿಸಿದರು. ಜಂಗಮಲಿಂಗದ ಮೂಲಕ ಮನುಷ್ಯನನ್ನು ಸಾಮಾಜೀಕರಣಗೊಳಿಸಿದರು. ಮನುಷ್ಯ ನಿಜವಾಗಿಯೂ ಸಾಮಾಜೀಕರಣಗೊಂಡಾಗ ಜೀವಕಾರುಣ್ಯದಿಂದ ತುಂಬಿದ ಸರ್ವಸಮಾನತೆಯ ಪ್ರಜ್ಞೆಯುಳ್ಳ ಶರಣನೆಂದಿನಿಸಿಕೊಳ್ಳುತ್ತಾನೆ. ಇಂಥ ವಿಶಾಲ ಮನೋಭಾವದವರು ಯಾವುದೇ ದೇಶದಲ್ಲಿದ್ದರೂ ಶರಣರೇ ಆಗಿರುತ್ತಾರೆ.

ಭಾರತದ ಸಂವಿಧಾನ ರಚನೆಗಾಗಿ ಬಾಬಾಸಾಹೇಬ ಅಂಬೇಡ್ಕರರು ವಿಶ್ವದ ಎಲ್ಲ ದೊಡ್ಡ ರಾಷ್ಟ್ರಗಳ ಸಂವಿಧಾನಗಳ ಅಧ್ಯಯನ ಮಾಡಿದರು ಮತ್ತು ವಿಶ್ವದಲ್ಲಿ ಮೊದಲಬಾರಿಗೆ ಪ್ರಜಾಪ್ರಭುತ್ವವನ್ನು ಉಸಿರಾಡಿದ ಬೌದ್ಧಧರ್ಮವನ್ನು ಸ್ವೀಕರಿಸಿ ಆಧ್ಯಾತ್ಮಿಕ ತೃಷೆಯನ್ನು ಇಂಗಿಸಿಕೊಂಡರು.

ಭಾರತದ ಸಂವಿಧಾನದ ಆಶಯಗಳು ಮತ್ತು ಬೌದ್ಧಧರ್ಮದ ಆಶಯಗಳು ಬಸವಪ್ರಜ್ಞೆಯಲ್ಲಿ ಇವೆ. ಬಸವಣ್ಣನವರ ಜೀವಿತ ಕಾಲದಲ್ಲಿ ಅವರ ಕ್ರಾಂತಿಕಾರಿ ವಿಚಾರಗಳಿಗೆ ರಾಜಾಶ್ರಯ ಸಿಗಲಿಲ್ಲ. ಸಮಗಾರ ಹರಳಯ್ಯನ ಮಗ ಮತ್ತು ಬ್ರಾಹ್ಮಣ ಮಧುವರಸನ ಮಗಳ ಮದುವೆಗೆ ವಿರೋಧ ವ್ಯಕ್ತವಾಗಿ ಕೊನೆಗೆ ಶರಣರ ಭೀಕರ ಹತ್ಯಾಕಾಂಡ ನಡೆಯಿತು. ರಾಜಾಶ್ರಯ ಹೊಂದಿದ್ದ ಮನುಧರ್ಮದ ಪ್ರಕಾರ ಅವರು ಬೇರೆಯಾಗಿದ್ದರೂ ಬಸವಧರ್ಮದ ಪ್ರಕಾರ ಒಂದೇ ಆಗಿದ್ದರು. ಆದರೆ ಪಟ್ಟಭದ್ರ ಹಿತಾಸಕ್ತಿಗಳು ಬಸವಧರ್ಮವನ್ನು ಹಾಳುಗೆಡವುದಕ್ಕಾಗಿ ಬಿಜ್ಜಳನ ಮನಸ್ಸು ಕೆಡಿಸಿ ಈ ಕೃತ್ಯ ಎಸಗಿದವು.

ಆದರೆ ಇಂದು ಬಸವಣ್ಣನವರ ವಿಚಾರಗಳಿಗೆ ಸಂವಿಧಾನದ ಮೂಲಕ ರಾಜಾಶ್ರಯ ಸಿಕ್ಕಿದೆ. ಅಂತರ್ಜಾತಿ ವಿವಾಹ, ವಿಧವಾ ವಿವಾಹ ಮತ್ತು ದೇವದಾಸಿಯರ ಮದುವೆಗಳಿಂದ ಕೂಡಿದ ಮಹಿಳಾ ವಿಮೋಚನಾ ಚಳವಳಿ, ಅಸ್ಪೃಶ್ಯತಾ ನಿವಾರಣಾ ಚಳವಳಿ, ಜಾತೀಯತೆ ವಿರುದ್ಧ ಚಳವಳಿ, ಲಿಂಗಭೇದದ ವಿರುದ್ಧ ಚಳವಳಿ, ವಿವಿಧ ಕಾಯಕಜೀವಿಗಳ ಚಳವಳಿ, ವಯಸ್ಕರ ಶಿಕ್ಷಣವೂ ಸೇರಿದಂತೆ ಶೈಕ್ಷಣಿಕ ಚಳವಳಿ ಹೀಗೆ ನವಸಮಾಜಕ್ಕಾಗಿ ತುಡಿಯುವ ಎಲ್ಲ ಚಳವಳಿಗಳನ್ನೂ ವಚನಕಾರರು ಮಾಡಿದ್ದರು. ಈಗ ಈ ಎಲ್ಲ ಚಳವಳಿಗಳು ಸಂವಿಧಾನಬದ್ಧವಾಗಿದ್ದು ಬಸವಣ್ಣನವರ ಮುಂದಾಲೋಚನೆಗೆ ಸಾಕ್ಷಿಯಾಗಿದೆ.

ಕಳೆದ ಶತಮಾನದಲ್ಲಿ ಕ್ಯೂಬಾ ದೇಶ ಅಮೆರಿಕದ ಅಧೀನದಲ್ಲಿದ್ದಾಗ ಅದರ ರಾಜಧಾನಿ ಹವಾನಾ ವೇಶ್ಯಾವಾಟಿಕೆಗಳಿಂದ ತುಂಬಿ ಹೋಗಿತ್ತು. ಸ್ವಾತಂತ್ರ್ಯಾನಂತರ ಕಮ್ಯೂನಿಸ್ಟ್ ಯುವಕರನೇಕರು ವೇಶ್ಯೆಯರನ್ನು ಮದುವೆಯಾಗುವ ಮೂಲಕ ಆದರ್ಶ ಮೆರೆದರು. ಕಲ್ಯಾಣದಲ್ಲಿ ಶರಣರು ಪಣ್ಯಾಂಗನೆಯರನ್ನು ಪುಣ್ಯಾಂಗನೆಯರನ್ನಾಗಿ ಮಾಡಿ ವೇಶ್ಯಾ ಸಮಸ್ಯೆಯನ್ನು ಬಗೆಹರಿಸುವತ್ತ ಮುನ್ನಡೆದರು.

೧೮೫೭ರಲ್ಲಿ ದೇಶದಲ್ಲಿ ಮೊದಲಬಾರಿಗೆ ಮುಂಬೈ ವಿಶ್ವವಿದ್ಯಾಲಯದ ಸ್ಥಾಪನೆಯಾಯಿತು. ೧೮೭೫ರಲ್ಲಿ ಬೆಳಗಾವಿಯ ಪೋಸ್ಟ್ ಮಾಸ್ತರರೊಬ್ಬರು ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಗೆ ಪತ್ರ ಬರೆದು ತಮ್ಮ ಮಗಳು ಮ್ಯಾಟ್ರಿಕ್ ಪರೀಕ್ಷೆ ಬರೆಯಲು ಅವಕಾಶವಿದೆಯೆ ಎಂದು ಕೇಳಿದರು. ವಿಶ್ವವಿದ್ಯಾಲಯದ ಕಾನೂನಿನಲ್ಲಿ ಮಹಿಳಾ ಶಿಕ್ಷಣಕ್ಕೆ ಅವಕಾಶ ಇದ್ದಿದ್ದಿಲ್ಲ. ಹೀಗಾಗಿ ಆ ಪೋಸ್ಟ್ ಮಾಸ್ತರ್ ಮಗಳಿಗೆ ಅವಕಾಶ ಸಿಗಲಿಲ್ಲ. ಆಗ ಮುಂಬೈ ವಿಶ್ವವಿದ್ಯಾಲಯ ಲಂಡನ್ನ ವಿಶ್ವವಿದ್ಯಾಲಯದ ಅಧೀನದಲ್ಲಿತ್ತು. ಆಡಳಿತ ಮಂಡಳಿ ಮಹಿಳಾ ಶಿಕ್ಷಣದ ಈ ಹೊಸ ಸಮಸ್ಯೆ ಕುರಿತು ಲಂಡನ್ ವಿಶ್ವವಿದ್ಯಾಲಯಕ್ಕೆ ತಿಳಿಸಿತು. ಆ ಕಾಲಕ್ಕೆ ಲಂಡನ್ ವಿಶ್ವವಿದ್ಯಾಲಯದಲ್ಲಿ ಕೂಡ ಮಹಿಳೆಯರಿಗೆ ಪ್ರವೇಶ ಇದ್ದಿದ್ದಿಲ್ಲ. ಈ ಕುರಿತು ಚಿಂತನೆ ನಡೆಸಿದ ಲಂಡನ್ ವಿಶ್ವವಿದ್ಯಾಲಯ ಎಂಟು ವರ್ಷಗಳ ತರುವಾಯ, ಮಹಿಳೆಯರು ಪರೀಕ್ಷೆ ಬರೆಯಬಹುದೆಂದು ನಿರ್ಧರಿಸಿ ಮುಂಬೈ ವಿಶ್ವವಿದ್ಯಾಲಯಕ್ಕೆ ತಿಳಿಸಿತು. ಮುಂದೆ ೧೮೮೫ರಲ್ಲಿ ಕೊರ್ನಿಲಿಯಾ ಸೊರಾಬ್ಜಿ ಎಂಬ ಮಹಿಳೆ ಪುಣೆಯ ಡೆಕ್ಕನ್ ಕಾಲೇಜಿನಿಂದ ಮೊದಲ ಪದವೀಧರೆಯಾದಳು ಎಂದು ಪ್ರೊ. ಡೋಂಗರಕರ್ ಸಂಶೋಧನೆ ಮಾಡಿರುವುದಾಗಿ ಮುಂಬೈ ಮಹಾನಗರ ಪಾಲಿಕೆಯ ನಿವೃತ್ತ ಅಸಿಸ್ಟಂಟ್ ಕಮೀಷನರ್ ಎಸ್.ಜಿ. ಮಸಳಿ ಅವರು ನನಗೆ ತಿಳಿಸಿದ್ದಾರೆ. ಆದರೆ ೧೨ನೇ ಶತಮಾನದಲ್ಲೇ ಶರಣಸಂಕುಲದಲ್ಲಿ ಅನೇಕ ವಚನಕಾರ್ತಿಯರಿದ್ದರು. ಇಲ್ಲಿಯ ವರೆಗೆ ೩೩ ವಚನಕಾರ್ತಿಯರ ವಚನಗಳು ಸಿಕ್ಕಿವೆ. ಇವರ ಭಾಷಾ ಪ್ರೌಢಿಮೆ, ಸಾಹಿತ್ಯ ಶಕ್ತಿ ಮತ್ತು ತತ್ತ್ವಜ್ಞಾನ ಅಚ್ಚರಿ ಮೂಡಿಸುತ್ತವೆ. ಒಂದೇ ಪ್ರದೇಶದಲ್ಲಿ, ಒಂದೇ ಕಾಲಘಟ್ಟದಲ್ಲಿ ಇಷ್ಟೊಂದು ಮಂದಿ ಉನ್ನತ ಸಾಧನೆಯ ಮಹಿಳಾ ಸಾಹಿತಿಗಳು ಕಾಣಿಸಿಕೊಂಡ ಉದಾಹರಣೆ ವಿಶ್ವದ ಇತಿಹಾಸದಲ್ಲಿ ಇನ್ನೊಂದು ಇಲ್ಲ.

ಪ್ರಜಾಪ್ರಭುತ್ವದ ತಾಯಿ ಎನಿಸಿಕೊಂಡ ಇಂಗ್ಲಂಡ್‌ನಲ್ಲಿ ೨೦ನೇ ಶತಮಾನದ ವರೆಗೂ ಮಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ. ಆದರೆ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಅಭಿಪ್ರಾಯ ಸ್ವಾಂತಂತ್ರ್ಯವಿತ್ತು. ಭಾರತದಲ್ಲಿ ಜಾತಿಭೇದ ನೀತಿ ಇರುವ ಹಾಗೆ ಅಮೆರಿಕದಲ್ಲಿ ಮೊನ್ನೆ ಮೊನ್ನೆಯ ವರೆಗೂ ವರ್ಣಭೇದ ನೀತಿ ಇತ್ತು. ಇಂದಿಗೂ ಅಲ್ಲಿ ಕರಿಯರನ್ನು ಎರಡನೆಯ ದರ್ಜೆಯ ಪ್ರಜೆಗಳ ಹಾಗೆ ಕಾಣುವ ಪರಿಸ್ಥಿತಿ ಇದೆ. ೧೯೬೮ರಲ್ಲಿ ಕೊಲೆಗೀಡಾದ ಅಮೆರಿಕದ ಕರಿಯರ ಗಾಂಧಿ ಮಾರ್ಟಿನ್ ಲೂಥರ್ ಕಿಂಗ್ ಅವರ "ಐ ಹ್ಯಾವ್ ಎ ಡ್ರೀಮ್" ಎಂಬ ಭಾಷಣ ಜಗತ್ ಪ್ರಸಿದ್ಧವಾಗಿದೆ. ಕಪ್ಪು ಮತ್ತು ಬಿಳಿ ಹುಡುಗ ಹುಡುಗಿಯರು ಜನಾಂಗ ದ್ವೇಷ ಮರೆತು ಒಂದಾಗಿ ಮುನ್ನಡೆಯಬೇಕೆನ್ನುವುದು ಆ ಭಾಷಣದ ತಿರುಳಾಗಿದೆ. ಶರಣರು ೧೨ನೇ ಶತಮಾನದಲ್ಲೇ ಹರಳಯ್ಯ ಮಧುವರಸರ ಮಕ್ಕಳ ಮದುವೆ ಮಾಡಿಸಿದರು. ಅದಕ್ಕಾಗಿ ಎಲ್ಲ ಕಷ್ಟನಷ್ಟಗಳನ್ನು ಎದುರಿಸಿದರು.

೧೯ನೇ ಶತಮಾನದಲ್ಲಿ ಕಮ್ಯೂನಿಸ್ಟ್ ತತ್ತ್ವಜ್ಞಾನಿ ಕಾರ್ಲ್ ಮಾರ್ಕ್ಸ್ "ಜಗತ್ತಿನ ಕಾರ್ಮಿಕರೇ ಒಂದಾಗಿರಿ ನೀವು ಒಂದಾದರೆ ನಿಮ್ಮ ಸಂಕೋಲೆಗಳನ್ನು ಹೊರತುಪಡಿಸಿ ನೀವು ಏನನ್ನೂ ಕಳೆದುಕೊಳ್ಳುವುದಿಲ" ಎಂದು ಸಾರಿದರು. ಬಸವಣ್ಣನವರು ೧೨ನೇ ಶತಮಾನದಲ್ಲೇ ಭಾರಿ ತೆರಿಗೆ ಮತ್ತು ಸುಲಿಗೆಯಿಂದ ನರಳುತ್ತಿದ್ದ ಕಾಯಕಜೀವಿಗಳನ್ನು, ಅಸ್ಪೃಶ್ಯತೆಯಿಂದ ಬಳಲುತ್ತಿದ್ದ ದಲಿತರನ್ನು, ಎಲ್ಲ ಹಕ್ಕುಗಳಿಂದ ವಂಚಿತರಾಗಿದ್ದ ಮಹಿಳೆಯರನ್ನು ವಿಮೋಚನೆಯ ದಾರಿಯೆಡೆಗೆ ತಂದರು.

ವಿಶ್ವಸಂಸ್ಥೆಯ ಮಾನವಹಕ್ಕುಗಳು ಕೂಡ ಬಸವಪ್ರಜ್ಞೆಯಿಂದ ಹೊರತಾಗಿಲ್ಲ. ಜೀವಿಸುವ ಹಕ್ಕು, ಮಾತನಾಡುವ ಹಕ್ಕು, ವರ್ಗ, ವರ್ಣ ಮತ್ತು ಲಿಂಗಭೇದ ನೀತಿಯ ವಿರುದ್ಧ ಹೋರಾಡುವ ಹಕ್ಕುಗಳು ಮಾನವಹಕ್ಕುಗಳಾಗುತ್ತವೆ. ವಿಶ್ವಸಂಸ್ಥೆಯ ಮಾನವಹಕ್ಕುಗಳ ವಿಭಾಗ ತನ್ನ ೩೦ ಅಂಶಗಳ ಕಾರ‍್ಯಕ್ರಮದಲ್ಲಿ ಈ ಮಾನವಹಕ್ಕುಗಳನ್ನು ಕುರಿತು ವಿವರಿಸಿದೆ. ಈ ಎಲ್ಲ ಮಾನವ ಹಕ್ಕುಗಳನ್ನು ಸಾಧಿಸುವುದೇ ವಚನಚಳವಳಿಯ ಗುರಿಯಾಗಿತ್ತು.

ಕುಟುಂಬ ಪ್ರೇಮ, ಸಮಾಜ ಪೇಮ, ದೇಶಪ್ರೇಮ ಮತ್ತು ವಿಶ್ವಪ್ರೇಮ ಬಸವಧರ್ಮದ ಪ್ರೇಮತತ್ವವಾಗಿದೆ. ಇವೆಲ್ಲ ಕೂಡಿದಾಗಲೆ ಲಿಂಗಪ್ರೇಮವಾಗುತ್ತದೆ. "ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ" ಎಂದು ಜೇಡರ ದಾಸಿಮಯ್ಯನವರು ಕುಟುಂಬ ಪ್ರೇಮದ ಮಹತ್ವವನ್ನು ತಿಳಿಸಿದ್ದಾರೆ. "ಜೀವಿಸುವ ಜೀವಕ್ಕೆ ಶೃಂಗಾರ ಗಣಮೇಳಾಪ" ಎಂದು ಅಕ್ಕ ಮಹಾದೇವಿ ಸಮಾಜ ಪ್ರೇಮ ಸಾರಿದ್ದಾರೆ. "ಕಳ್ಳ ನಾಣ್ಯ ಸಲುಗೆಗೆ ಸಲ್ಲದು ಎಂದು ಬಸವಣ್ಣ ದೇಶಪ್ರೇಮ ಸೂಚಿಸಿದ್ದಾರೆ. "ಆರಂಬವ ಮಾಡಿ ಸಂಸಾರ ಸ್ಥಿತಿ ಕಳೆಯದಿದ್ದರೆ ಆ ಆರಂಬವೆ ಕೇಡು’ ಎಂದು ಚನ್ನಬಸವಣ್ಣನವರು ವಿಶ್ವಪ್ರೇಮ ಮೆರೆದಿದ್ದಾರೆ.

ಬಸವಪ್ರಜ್ಞೆಯು ಮಾನವಹಕ್ಕುಗಳ ಪ್ರಜ್ಞೆಯಾಗಿದೆ; ಪ್ರಜಾಪ್ರುತ್ವವಾದಿ ಪ್ರಜ್ಞೆಯಾಗಿದೆ; ಮುಂದುವರಿದ ಸಮಾಜವಾದಿ ಪ್ರಜ್ಞೆಯಾಗಿದೆ, ಅದಕ್ಕೂ ಮುಂದುವರಿದ ಸಮತಾವಾದಿ ಪ್ರಜ್ಞೆಯಾಗಿದೆ. ಅಂತೆಯೆ ಬಸವಣ್ಣನವರು ಹಳೆಯ ೩೩ ಕೋಟಿ ದೇವತೆಗಳನ್ನು ಆಚೆ ತಳ್ಳಿದ ನಂತರ ನಮಗೆ ಹೊಸ ಸರ್ವಸಮತಾವಾದಿ ದೇವರನ್ನು ಕೊಟ್ಟರು. ಬಸವಣ್ಣನವರ ಕೂಡಲಸಂಗಮದೇವ ಮಾದಾರ ಚನ್ನಯ್ಯನ ಮನೆಯಲ್ಲಿ ಅಂಬಲಿಯನ್ನು ಕುಡಿಯುವ ದೇವರಾಗಿದ್ದಾನೆ. ಬಡವರ, ಹಿಂದುಳಿದವರ, ದಲಿತರ, ಕಾಯಕಜೀವಿಗಳ ಒಟ್ಟಾರೆ ಇಡೀ ಮಾನವಕುಲದ ದೇವರಾಗಿದ್ದಾನೆ.

*

ಬಸವ ಸಮಾಜ ಮನು ಸಮಾಜಕ್ಕೆ ಪರ್ಯಾಯವಾಗಿದೆ. ಬಸವ ಸಮಾಜವು ನಮ್ಮನ್ನು ಅಹಂಕಾರ ಭಾವದಿಂದ ದಾಸೋಹ ಭಾವಕ್ಕೆ, ಜಾತೀಯತೆಯಿಂದ ಜಾತ್ಯತೀತತೆಗೆ, ಅಸ್ಪೃಶ್ಯತಾ ಭಾವದಿಂದ ಸಮೂಹ ಪ್ರಜ್ಞೆಗೆ, ಮೂಢನಂಬಿಕೆಯಿಂದ ವೈಜಾರಿಕತೆಗೆ, ಬಹುದೇವೋಪಾಸನೆಯಿಂದ ಏಕದೇವೋಪಾಸನೆಗೆ, ಮಂದಿರದಿಂದ ಅನುಭವ ಮಂಟಪಕ್ಕೆ, ವ್ಯಕ್ತಿ ಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ, ಕರ್ಮದಿಂದ ಕಾಯಕಕ್ಕೆ, ಸ್ವಾರ್ಥದ ಭವಿ ಮಾರ್ಗದಿಂದ ನಿಸ್ವಾರ್ಥದ ಭಕ್ತ ಮಾಗಕ್ಕೆ, ಅಸಮಾನತೆಯಿಂದ ಸಮಾನತೆಗೆ, ಬಂಧನದಿಂದ ಸ್ವಾತಂತ್ರ್ಯದೆಡೆಗೆ ಕರೆದೊಯ್ಯುವಂಥದ್ದಾಗಿದೆ.

"ಏನೂ ಏನೂ ಇಲ್ಲದ ಬಯಲೊಳಗೊಂದು
ಬಗೆಗೊಳಗಾದ ಬಣ್ಣ ತಲೆದೋರಿತ್ತು.
ಆ ಬಯಲನಾ ಬಣ್ಣ ಶೃಂಗರಿಸಲು ಬಯಲು ಸ್ವರೂಪುಗೊಂಡಿತ್ತು.
ಅಂತಪ್ಪ ಸ್ವರೂಪಿನ ಬೆಡಗು ತಾನೆ
ನಮ್ಮ ಗುಹೇಶ್ವರ ಲಿಂಗದ ಪ್ರಥಮಭಿತ್ತಿ."

ಎಂದು ಅಲ್ಲಮಪ್ರಭುದೇವರು ಹೇಳುವಲ್ಲಿ ವಿಶ್ವದ ವಿರಾಟ್ ಸ್ವರೂಪದ ಕಲ್ಪನೆ ಇದೆ. ಚೈತನ್ಯವು ವಸ್ತುವಾಗಿ ರೂಪುಗೊಳ್ಳುವ ಕ್ರಮವಿದೆ. ಇದೇ ವಸ್ತುರಹಸ್ಯ.

ವಸ್ತುರಹಸ್ಯವನ್ನು ಅರಿಯದೆ ಈ ಭೂಮಿಯ ಮೇಲೆ ಸಕಲಜೀವಾತ್ಮರಿಗೆ ಲೇಸನ್ನೇ ಬಯಸುವಂಥ ವ್ಯವಸ್ಥೆಯನ್ನು ತರಲಿಕ್ಕಾಗದು. ಷಟ್‌ಸ್ಥಲವ ಮೀರಿ ನಿರವಯಸ್ಥಲವನೈದಿದ ಮಹಾನುಭಾವಿ ಬಸವಣ್ಣನವರು ವಸ್ತುರಹಸ್ಯವನ್ನು ಅರಿತವರಾಗಿದ್ದರು. ಎಲ್ಲವನ್ನೂ ಮೀರುತ್ತ ಚೈತನ್ಯವೇ ಆಗುವುದರ ಪರಿಕಲ್ಪನೆಯನ್ನು ಕೊಟ್ಟರು. "ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾದ ಜೀವಜಾಲದಲ್ಲಿದೆ ಚರಾಚರವೆಲ್ಲ" ಎಂದು ಸಾರಿದ ಬಸವಣ್ಣನವರು ಅಚರ ವಸ್ತುವನ್ನು ಕೂಡ ಜೀವಜಾಲದ ಭಾಗವೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಇದುವೆ ಚೈತನ್ಯಾತ್ಮಕ ಭೌತಿಕವಾದ. ಚೈತನ್ಯವು ವಸ್ತುವಿನ ಅವಿಭಾಜ್ಯ ಅಂಗವಾಗಿದೆ. ಅದುವೆ ಪ್ರತಿ ಅಣುವಿನಲ್ಲಿರುವ ಶಕ್ತಿ. ಆ ಶಕ್ತಿಯೇ ಚೈತನ್ಯ. ಚೈತನ್ಯವನ್ನು ಕಳೆದುಕೊಳ್ಳುವ ಚರಾಚರವೆಲ್ಲ ಲಯವಾಗುತ್ತದೆ. "ಗಂಗೆವಾಳುಕಸಮ ರುದ್ರರಿಗೂ ಲಯವುಂಟು" ಎಂದು ಬಸವಣ್ಣನವರು ಹೇಳಿದ್ದಾರೆ. ಒಂದಿಲ್ಲೊಂದು ದಿನ ಈ ಬ್ರಹ್ಮಾಂಡವೆಲ್ಲ ಲಯವಾಗುವುದು ಆದರೆ ಚೈತನ್ಯವು ನಿರವಯಸ್ಥಲದಲ್ಲಿ ನಿರಾಕಾರವಾಗಿ ಇರುವುದು. ವಸ್ತುವಿನ ಸೃಷ್ಟಿಗೆ ಕಾರಣವಾಗುವ ಚೈತನ್ಯವು ವಸ್ತುವಿನ ಒಳಗೂ ಹೊರಗೂ ಇರುವುದು. ಪಂಚ ಮಹಾಭೂತಗಳ ಸೃಷ್ಟಿಗೆ ಕಾರಣವಾಗಿರುವ ಚೈತನ್ನವು ಅವುಗಳ ಒಳಗೇ ಇದ್ದು ಅವೆಲ್ಲ ಲಯವಾದ ನಂತರ ಬಯಲಾಗಿ ಉಳಿಯುವುದು. ಇದಕ್ಕೆ ಶಂಕರಾಚಾರ್ಯರು "ಜಗನ್ಮಿಥ್ಯಾ ಬ್ರಹ್ಮ ಸತ್ಯ" ಎಂದು ಹೇಳಿದರು. ಆದರೆ ಒಂದು ವಸ್ತು ಅಸ್ತಿತ್ವದಲ್ಲಿರುವವರೆಗೂ ಮಿಥ್ಯೆ ಆಗಿರಲಾರದು. ವಾಸ್ತವವಾಗಿರುವುದು. ಆದ್ದರಿಂದ "ಜಗತ್ತು ವಾಸ್ತವ ಬ್ರಹ್ಮ ಸತ್ಯ" ಎಂದು ಹೇಳಬೇಕಾಗುತ್ತದೆ. ಜಗತ್ತು ವಾಸ್ತವವಾಗಿದ್ದಾಗ ಬದುಕೂ ವಾಸ್ತವವಾಗಿರುತ್ತದೆ. ನಾವು ಈಗ ಇದ್ದೇವೆ; ಇದು ವಾಸ್ತವ. ನೂರು ವರ್ಷಗಳ ನಂತರ ಇರುವುದಿಲ್ಲ; ಇದು ಸತ್ಯ. ಬಹುಪಾಲು ತತ್ತ್ವಜ್ಞಾನಿಗಳು ಸತ್ಯದ ಕುರಿತು ಮಾತನಾಡುತ್ತಾರೆಯೆ ಹೊರತು ವಾಸ್ತವದ ಕುರಿತು ಮಾತನಾಡುವುದಿಲ್ಲ. ಬಸವಣ್ಣನವರು ಸತ್ಯದ ಗುರಿಯನ್ನು ತೋರಿಸುತ್ತ ಈ ಜಗತ್ತಿನ ವಾಸ್ತವದ ಕುರಿತು ಮಾತನಾಡಿದರು. ಚೈತನ್ಯದ ಅನುಭಾವದ ಜೊತೆ ವಸ್ತುವಿನ ಅನುಭವದ ಕುರಿತು ಮಾತನಾಡಿದರು. ವಸ್ತುವಿನ ಅರಿವಾಗದೆ ಚೈತನ್ಯದ ಅರಿವಾಗುವುದಿಲ್ಲ ಎಂಬುದನ್ನು ಸಿದ್ಧಪಡಿಸಿದರು. "ಭಿತ್ತಿ ಇಲ್ಲದೆ ಬರೆಯಬಹುದೆ ಚಿತ್ತಾರವ" ಎಂದು ಪ್ರಶ್ನಿಸಿದರು. ಭಿತ್ತಿಯು ವಸ್ತುವಾದರೆ ಚಿತ್ತಾರವು ಚೈತನ್ಯವಾಗುವುದು. ಸತ್ಯವಾಗಿರುವ ಚೈತನ್ಯದ ಅನುಭಾವ ಹೊಂದಬೇಕಾದರೆ ವಾಸ್ತವವಾಗಿರುವ ವಸ್ತುವಿನ ಅನುಭವ ಹೊಂದಿರಬೇಕು. ಅಂತೆಯೆ ವಾಸ್ತವವಾಗಿರುವ ಬದುಕಿನ ಅನುಭವದ ಮೂಲಕವೇ ಚೈತನ್ಯದ ಅನುಭಾವ ಪಡೆಯಬೇಕು ಎಂಬುದು ಬಸವಣ್ಣನವರ ಪರಿಕಲ್ಪನೆಯಾಗಿತ್ತು. "ಚೆನ್ನಬಸವನೆಂಬ ಪ್ರಸಾದಿಯ ಪಡೆದು, ಅನುಭವ ಮಂಟಪವನನುಮಾಡಿ ಅನುಭವಮೂರ್ತಿಯಾದ ನಮ್ಮ ಬಸವಯ್ಯನು." ಎಂದು ನೀಲಮ್ಮನವರು ಹೇಳುತ್ತಾರೆ. ಮಾನವ ಕುಲದ ಚರಿತ್ರೆಗೆ ಅನುಭವವೇ ಮೂಲವಾಗಿದೆ. ಎಲ್ಲ ನಾಗರೀಕತೆಗಳು ಅರಳಿದ್ದು ಅನುಭವದ ಮೂಲಕವೇ. ವಸ್ತು ಸಂಬಂಧವಿಲ್ಲದೆ ಅನುಭವವಿಲ್ಲ. ಅನುಭವವಿಲ್ಲದೆ ಅನುಭಾವವಿಲ್ಲ. ಬಸವಣ್ಣನವರು ಈ ಸತ್ಯವನ್ನು ಜಗತ್ತಿಗೆ ಸಾರಿ ಜಗಜ್ಜ್ಯೋತಿಯಾದರು.

ಅನುಭಾವವು ಹಿಮಾಲಯಕ್ಕೆ ಹೋದರೆ ಸಿಗುವಂಥದ್ದಲ್ಲ. ಸಂಸಾರ ತ್ಯಜಿಸಿ ಹುಡುಕುವಂಥದ್ದಲ್ಲ. ಒಂಟಿಯಾಗಿ ಪಡೆಯುಂಥದ್ದಲ್ಲ. ಈ ಕಾರಣಗಳಿಂದಲೇ ಅನುಭಾವವು ಅಧ್ಯಾತ್ಮದಿಂದ ಭಿನ್ನವಾಗುವುದು. ಅನುಭಾವವು ಮಾನವನ ಒಳಜಗತ್ತಿನ ಧ್ಯಾನ ಮತ್ತು ಹೊರ ಜಗತ್ತುಗಳ ಪ್ರಜ್ಞೆಯ ಕೂಡಲಸಂಗಮವಾಗಿದೆ. ಬಸವಣ್ಣನವರ ದೇವ ಇಂಥ ಕೂಡಲಸಂಗಮದೇವರಾಗಿದ್ದಾನೆ. ಚೈತನ್ಯ ಮತ್ತು ವಸ್ತುವಿನ ಸಂಗಮವಾಗಿದ್ದಾನೆ. ಚೈತನ್ಯವೇ ಆಗಿದ್ದಾನೆ.

ಬಸವಣ್ಣನವರು ಈ ದೇವರ ಆವಿಷ್ಕಾರ ಮಾಡಿದರು. ಈ ದೇವರಿಗೆ ಭೂಮಿಯ ಮೇಲೆ ಗುಡಿ ಗುಂಡಾರಗಳಿಲ್ಲ. ಕೂಡಲಸಂಗಮದಲ್ಲಿರುವಾತ ಸಂಗಮನಾಥ ಹೊರತಾಗಿ ಕೂಡಲಸಂಗಮದೇವ ಅಲ್ಲ. "ತೋರಲಿಲ್ಲದ ಸಿಂಹಾಸನದ ಮೇಲೆ ಹೇಳಬಾರದ ಘನವು ಬಂದೆರಗಿದಡೆ ತೋರಿ ಮೆರೆವ ಸಂಗಮನಾಥನು ಎದ್ದು ಹೋದನು." ಎಂದು ಬಸವಣ್ಣನವರು ತಿಳಿಸಿದ್ದಾರೆ. ಹೀಗೆ ಬ್ರಹ್ಮಾಂಡವನ್ನು ಮೀರಿ ಅನಂತವಾಗಿರುವ ಶೂನ್ಯಸಿಂಹಾಸನದ ಮೇಲೆ ನಿರಾಕಾರವಾದ ಮತ್ತು ಹೇಳಲಸಾಧ್ಯವಾದ ಘನವೆಂಬ ಕೂಡಲಸಂಗಮದೇವ ಬಂದೆರಗಿದಾಲೇ ಸ್ಥಾವರವು ಮರುಮಾತನಾಡದೆ ಜಾಗ ಖಾಲಿ ಮಾಡಿತು. ಹೀಗೆ ಪಾತಾಳದಿಂದವೆ ಅತ್ತತ್ತ ಶ್ರೀಚರಣವುಳ್ಳ ಮತ್ತು ಬ್ರಹ್ಮಾಂಡದಿಂದವೆ ಅತ್ತತ್ತ ಶ್ರೀಮುಕುಟವುಳ್ಳ ಅಗಮ್ಯ, ಅಗೋಚರ, ಅಪ್ರತಿಮ ಲಿಂಗವೇ ಇಷ್ಟಲಿಂಗವಾಗಿ ಕರಸ್ಥಲಕ್ಕೆ ಬಂದಿತು. ಇದು ಅಂತರಂಗದೊಳಗಿನ ನಿರವಯ ಲಿಂಗವೂ ಆಗಿz. ಈ ಇಷ್ಟಲಿಂಗದಲ್ಲಿ ನಮ್ಮ ಹೊರ ಮತ್ತು ಒಳಜಗತ್ತುಗಳಿವೆ. ಬಸವಣ್ಣನವರು ಇಷ್ಟಲಿಂಗವನ್ನು ಕೊಡುವ ಮೂಲಕ ನಾವು ಹೊರ ಮತ್ತು ಒಳಜಗತ್ತಿಗೆ ಸಂಬಂಧಿಸಿದವರು ಎಂಬುದನ್ನು ತೋರಿಸಿಕೊಟ್ಟರು. ಒಳ ಜಗತ್ತು ಸತ್ಯ ಆದರೆ ಹೊರ ಜಗತ್ತು ವಾಸ್ತವ ಎಂಬುದರ ಅರಿವಾದೊಡನೆ. ಸಹಜವಾಗಿಯೇ ಈ ಬದುಕಿನ ಮಹತ್ವದ ಬಗ್ಗೆ ಅರಿವಾಗುತ್ತದೆ. ಸ್ವರ್ಗ ನರಕಗಳು ಗೌಣವಾಗುತ್ತವೆ. "ಅಯ್ಯಾ ಎಂದಡೆ ಸ್ವರ್ಗ, ಎಲವೊ ಎಂದಡೆ ನರಕ" ಸ್ವರ್ಗ ನರಕಗಳೆಲ್ಲ ಇಲ್ಲಿಯೇ ಇವೆ. "ಕೈಲಾಸವೆಂಬುದೇನೊ ಪೃಥ್ವಿಯ ಮೇಲೊಂದು ಮೊರಡಿ. ಆ ಪೃಥ್ವಿಗೂ ಲಯ ಉಂಟು, ಆ ಮೊರಡಿಗೆಯೂ ಲಯ ಉಂಟು" ಎಂದು ಬಸವಣ್ಣನವರು ಹೇಳುವಾಗ ವಾಸ್ತವ ಬದುಕಿನ ಮಹತ್ವದ ಅರಿವಾಗುತ್ತದೆ. "ಇದು ಸುಮ್ಮನೆ ಅದು ನಮ್ಮನೆ" ಎಂಬ ಭಾವ ಮಾಯವಾಗುತ್ತದೆ. ಹಿಂದಿನ ಬದುಕಿನ ಕರ್ಮದ ಬಲೆಯಲ್ಲಿ ಬಿದ್ದು ಹೊರಳಾಡುವುದು ತಪ್ಪುತ್ತದೆ. ಮರಣದ ನಂತರದ ಸುಂದರ ಬದುಕಿನ ಭ್ರಮೆ ತಪ್ಪುತ್ತದೆ. ಈ ಕ್ಷಣದ ಬದುಕನ್ನು ಅದು ಹೇಗೆ ಬಾಳುವೆಯಾಗಿ ಪರಿವರ್ತಿಸಬೇಕೆಂಬುದನ್ನು ಬಸವಣ್ಣನವರು ಕಲಿಸಿಕೊಟ್ಟಿದ್ದಾರೆ.

"ಲಿಂಗ ವ್ಯಸನಿ ಜಂಗಮ ಪ್ರೇಮಿ" ಎಂದೆನಿಸಯ್ಯಾ ಎಂದು ಬಸವಣ್ಣನವರು ಹೇಳುವಲ್ಲಿ ಮೌಲ್ಯಗಳಿಂದ ತುಂಬಿದ ಒಳಜಗತ್ತು ಹೊರ ಜಗತ್ತನ್ನು ಆಳಬೇಕೆಂದು ಸೂಚಿಸುತ್ತಾರೆ. ನಮ್ಮ ವ್ಯಸನಗಳೆಲ್ಲ ಒಳಜಗತ್ತಿಗೆ ಸಂಬಂಧಿಸಿರಬೇಕು. ಆದರೆ ನಮ್ಮ ಪ್ರೇಮಭಾವ ಹೊರಜಗತ್ತಿಗೆ ಸಂಬಂಧಿಸಿರಬೇಕು ಎಂದು ಬಸವಣ್ಣನವರು ಬಯಸುತ್ತಾರೆ. ಬಸವ ತತ್ತ್ವದ ಪ್ರಕಾರ ಮಾನವೀಯ ಮೌಲ್ಯಗಳು ಜಗತ್ತನ್ನು ಆಳಬೇಕು. ಆದರೆ ಇಂದು ಮಾರುಕಟ್ಟೆ ಮೌಲ್ಯಗಳು ಜಗತ್ತನ್ನು ಆಳತೊಡಗಿವೆ. ಸಕಲ ಜೀವಾತ್ಮರನ್ನು ಬಯಸುವವನು ಭಕ್ತ. ಸಕಲ ವಸ್ತುಗಳನ್ನು ಬಯಸುವವನು ಭವಿ. ಸದ್ಯ ಜಗತ್ತು ಭವಿಗಳ ಸಾಮ್ರಾಜ್ಯವಾಗುತ್ತಿದೆ. ಈ ಜಗತ್ತನ್ನು ಭಕ್ತರ ಸಾಮ್ರಾಜ್ಯ ಮಾಡಿದಾಗ ಮಾತ್ರ ಮೇಲು ಕೀಳಿಲ್ಲದ, ಸುಲಿಗೆ ಇಲ್ಲದ, ಘನತೆವೆತ್ತ ಸ್ವತಂತ್ರ ಮಾನವನ ಉದಯವಾಗುತ್ತದೆ. ಇಂಥ ಹೊಸ ಮನುಷ್ಯರ ಸಮಾಜವನ್ನು ಸೃಷ್ಟಿಸುವುದು ಬಸವಣ್ಣನವರ ಉದ್ದೇಶವಾಗಿತ್ತು. ದೇವರಿಗೆ ಶರಣಾಗುವುದೆಂದರೆ ಭವದಲ್ಲಿ ಯಾರಿಗೂ ಶರಣಾಗತರಾಗದೆ ಸ್ವತಂತ್ರಧೀರರಾಗಿ ಬದುಕುವುದು. "ಕೂಡಲಸಂಗನ ಶರಣರು ಸ್ವತಂತ್ರಧೀರರು" ಎಂದು ಬಸವಣ್ಣನವರು ಹೇಳುತ್ತಾರೆ. ಸ್ವತಂತ್ರಧೀರರ ಸಮಾಜದಲ್ಲಿ ಮರ್ತ್ಯ ಲೋಕವೆಂಬುದು ಕರ್ತಾರನ ಕಮ್ಮಟವಾಗುತ್ತದೆ. ಇಲ್ಲದಿದ್ದರೆ ಅದು ಸ್ವಾರ್ಥಿಗಳ ಕಮ್ಮಟವಾಗುತ್ತದೆ.

ಇಂಥ ಸಮಾಜವನ್ನು ರೂಪಿಸಬೇಕಾದರೆ ಮಾನವನ ವ್ಯಕ್ತಿತ್ವ ವಿಕಸನಗೊಳ್ಳಬೇಕಾಗುತ್ತದೆ. ಬಸವ ಧರ್ಮವು ವ್ಯಕ್ತಿತ್ವ ವಿಕಸನ ಧರ್ಮವಾಗಿದೆ. ಬಸವ ಧರ್ಮದಲ್ಲಿ ವ್ಯಕ್ತಿತ್ವ ವಿಕಸನಗೊಳುತ್ತ ಕೊನೆಗೊಂದು ದಿನ ಮಾನವನು ದೇವರಿಗಿಂತ ಮಿಗಿಲಾಗುತ್ತಾನೆ. ಮನುಧರ್ಮದ ಜಾತಿವ್ಯವಸ್ಥೆಯಲ್ಲಿ ಕಟ್ಟಕಡೆಯ ಸ್ಥಾನದಲ್ಲಿರುವ ಮಾದಾರ ಚೆನ್ನಯ್ಯನವರು ಬಸವಧರ್ಮದ ನೀತಿವ್ಯವಸ್ಥೆಯಲ್ಲಿ ಕುಲಕ್ಕೆ ತಿಲಕರಾಗುತ್ತಾರೆ. "ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ ನಿಮ್ಮಿಂದಧಿಕ ನೋಡಾ ಕೂಡಲಸಂಗಮದೇವಾ" ಎಂದು ಬಸವಣ್ಣನವರು ಕೊಂಡಾಡಿದ್ದಾರೆ. ಶರಣನಾಗುವುದೆಂದರೆ ಹೀಗೆ ಹೊಸ ಮಾನವನಾಗುವುದು. ಇಂಥ ಹೊಸ ಮಾನವರ ಜಗತ್ತಿನಲ್ಲಿ ಯುದ್ಧಗಳಿರುವುದಿಲ್ಲ. ಮಹಿಳೆಯ ಶೋಷಣೆ ಇರುವುದಿಲ್ಲ, ಜಾತೀಯತೆ ಇರುವುದಿಲ್ಲ, ವರ್ಗಗಳಿರುವುದಿಲ್ಲ.

ಬಸವಣ್ಣನವರು ವ್ಯಕ್ತಿತ್ವ ವಿಕಸನದ ನೀಲನಕ್ಷೆಯನ್ನು ಪರಿಪೂರ್ಣವಾಗಿ ಬಿಡಿಸಿಟ್ಟಿದ್ದಾರೆ. ಮಾನವರು ಆ ಪ್ರಕಾರ ನಡೆದುಕೊಂಡರೆ ನಿಜಮಾನವರಾಗುವುದರಲ್ಲಿ ಸಂಶಯವಿಲ್ಲ. ಮಾನವನ ವ್ಯಕ್ತಿತ್ವ ವಿಕಸನಗೊಳ್ಳಬೇಕಾದರೆ ಮೊದಲಿಗೆ ಕಾಯಕ ಮಾಡಬೇಕು. ಅಂತರಂಗ ಶುದ್ಧಿಗಾಗಿ ಸಮರ್ಪಣಾ ಭಾವದ ಮೂಲಕ ಧ್ಯಾನ ಅಂದರೆ ಇಷ್ಟಲಿಂಗ ಪೂಜೆ ಮತ್ತು ಬಹಿರಂಗ ಶುದ್ಧಿಗಾಗಿ ಕಾಯಕ ದಾಸೋಹದ ಮೂಲಕ ಜಂಗಮಲಿಂಗದ ಪೂಜೆ ಮಾಡಬೇಕು. ಅಂತರಂಗ ಶುದ್ಧಿಯಿಂದ ಆತ್ಮಕಲ್ಯಾಣವಾಗುತ್ತದೆ. ಬಹಿರಂಗ ಶುದ್ಧಿಯಿಂದ ಲೋಕಕಲ್ಯಾಣವಾಗುತ್ತದೆ. ಆತ್ಮಕಲ್ಯಾಣ ಸ್ವಾತಂತ್ರ್ಯದ ಆನಂದ ನೀಡಿದರೆ ಲೋಕಕಲ್ಯಾಣ ಜವಾಬ್ದಾರಿಯ ಪ್ರಜ್ಞೆ ಮೂಡಿಸುವುದು. ಇವೆಲ್ಲ ಸೇರಿ ವ್ಯಷ್ಟಿ ಅನುಭವವಾಗುವುದು. ಅನುಭವ ಮಂಟಪದ ಚಿಂತನ-ಮಂಥನದಲ್ಲಿ ಸರ್ವರೂ ಸಮಷ್ಟಿ ಅನುಭವ ಪಡೆಯುವರು. ಈ ಸಮಷ್ಟಿ ಅನುಭವದ ಅರಿವೇ ಗುರುವಾಗಿ ಅನುಭಾವದೆಡೆಗೆ ಒಯ್ಯುವುದು. ಆಗ ಮಾನವ ನಿಜ ಮಾನವನಾಗುವನು. ಆ ನಿಜಮಾವನೇ ಶರಣ. ಆತನೇ ನವಮಾನವ. ಜಗತ್ತು ಇಂಥ ಶರಣರ ಸಂಕುಲವಾಗಬೇಕು ಎಂದು ಬಸವಣ್ಣನವರು ಬಯಸಿದ್ದರು.

ನಿರಹಂಕಾರದಿಂದ ಮಾತ್ರ ಮಾನವ ಇಷ್ಟೆಲ್ಲ ಸಾಧನೆಗಳನ್ನು ಮಾಡಬಲ್ಲ. ಅಹಂಭಾವದಿಂದ ವಿಶ್ವ ನಾಶವಾಗುವುದು. ದಾಸೋಂಭಾವದಿಂದ ವಿಶ್ವದ ರಕ್ಷಣೆಯಾಗುವುದು. ಮಾನವನು ಉನ್ನತ ಮೌಲ್ಯಗಳೊಂದಿಗೆ ಬಾಳುತ್ತ ಈ ಭೂಮಿಯ ಹಿತವನ್ನು ಕಾಪಾಡಬೇಕೆಂಬುದು ಬಸವಣ್ಣನವರ ಆಶಯವಾಗಿದೆ. ಈ ಕಾರಣದಿಂದಲೇ "ಸೋಹಂ ಎಂದೆನಿಸದೆ ದಾಸೋಹಂ ಎಂದಿನಿಸಯ್ಯಾ" ಎಂದು ಅವರು ಹೇಳಿದ್ದಾರೆ.

ಭಕ್ತನಲ್ಲಿ ಸರ್ವಸಮತ್ವ ಭಾವ ಮೂಡುತ್ತದೆ. ಲಿಂಗಕ್ಕೆ ಸತಿಯಾಗಿ ಅಂದರೆ ಜಗತ್ತಿನ ತಾಯಿಯಂತಾಗಿ ಸರ್ವಸಮರ್ಪಣಾ ಭಾವ ಮೂಡಿದಾಗ ಭಕ್ತನೆನಿಸಿಕೊಂಬವನು ಶರಣನಾಗುತ್ತಾನೆ. ವಿಶ್ವಕುಟುಂಬಿಯಾಗುತ್ತಾನೆ. ವ್ಯಕ್ತಿ ತನ್ನನ್ನು ತಾನು ಸುಧಾರಿಸಿಕೊಳ್ಳಬೇಕು. ಕುಟುಂಬ, ಸಮಾಜ, ದೇಶ ಮತ್ತು ವಿಶ್ವದ ಕಲ್ಯಾಣ ಬಯಸಬೇಕು ಹೀಗೆ ಕ್ರಿಯಾಶೀಲವಾಗಿ ಪರಮಾತ್ಮನಲ್ಲಿ ತಾದಾತ್ಮ್ಯ ಹೊಂದಬೇಕು. ನಂತರ ಬಯಲಲ್ಲಿ ಬಯಲಾಗಬೇಕು. ಹೀಗೆ ಬಸವಧರ್ಮವು ಬಯಲು ಧರ್ಮವಾಗಿದೆ.

ನಮ್ಮೊಳಗೇ ನಾವು ಬಯಲಾಗುವ ಕ್ರಮವನ್ನು ಅರಿತುಕೊಳ್ಳಲು ಕೂಡ ಬಸವಣ್ಣನವರು ಮಾರ್ಗದರ್ಶನ ಮಾಡಿದ್ದಾರೆ. ಅವುಗಳಲ್ಲಿ ಗುರು-ಲಿಂಗ-ಜಂಗಮ ಮತ್ತು ಕಾಯಕ-ಪ್ರಸಾದ-ದಾಸೋಹ ವಿಚಾರಗಳು ಬಹುಮುಖ್ಯವಾಗಿವೆ.

ಬೌದ್ಧಧರ್ಮದಲ್ಲಿ ಬುದ್ಧ-ಧಮ್ಮ-ಸಂಘ ಇರುವಂತೆ ಬಸವಧರ್ಮದಲ್ಲಿ ಗುರು-ಲಿಂಗ-ಜಂಗಮ ಪರಿಕಲ್ಪನೆ ಇದೆ. ಎರಡೂ ಧರ್ಮಗಳಲ್ಲಿ ಅರಿವೇ ಗುರುವಾಗಿದೆ. ಧಮ್ಮ ಮತ್ತು ಲಿಂಗಗಳು ಸನ್ಮಾರ್ಗಗಳಾಗಿವೆ, ಸಂಘ ಮತ್ತು ಜಂಗಮ ಸಮಾಜವಾಗಿದೆ. "ನಾನು ಆರಂಭವ ಮಾಡುವೆನಯ್ಯಾ ಗುರುಪೂಜೆಗೆಂದು, ನಾನು ಬೆವಹಾರವ ಮಾಡುವೆನಯ್ಯಾ ಲಿಂಗಾರ್ಚನೆಗೆಂದು, ನಾನು ಪರಸೇವೆಯ ಮಾಡುವೆನಯ್ಯಾ ಜಂಗಮದಾಸೋಹಕ್ಕೆಂದು" ಎಂದು ಬಸವಣ್ಣನವರು ಹೇಳುವಾಗ ಕಾಯಕ ಕೇವಲ ಸ್ವಾವಲಂಬನೆಗಾಗಿ ಅಲ್ಲ, ಅದಕ್ಕೆ ತ್ರಿವಿಧ ದಾಸೋಹದ ಜವಾಬ್ದಾರಿಗಳಿವೆ ಎಂಬುದನ್ನು ಸೂಚಿಸುತ್ತಾರೆ. ದಾಸೋಹವು ಇಸ್ಲಾಮಿನ ಜಕಾತ್ ಪರಿಕಲ್ಪನೆಗೆ ಹೋಲುತ್ತದೆ. ದಾಸೋಹ ಕೂಡ ಜಕಾತ್ ಹಾಗೆ ದಾನವಲ್ಲ. ನಮ್ಮ ಕಾಯಕದಿಂದ ಬಂದದ್ದನ್ನು ದೇವರ ಪ್ರಸಾದವಾಗಿ ಸ್ವೀಕರಿಸುವುದರ ಮೂಲಕ ಗಳಿಕೆಯ ಅಹಂನಿಂದ ಹೊರಬಂದು, ಆ ಗಳಿಸಿದ್ದನ್ನೆಲ್ಲ ನಮಗಾಗಿಯೇ ಖರ್ಚು ಮಾಡದೆ ಸಾಮಾಜಿಕ ಜವಾಬ್ದಾರಿಯನ್ನು ಸಮರ್ಪಣಾ ಭಾವದಿಂದ ನಿಭಾಯಿಸುವುದಕ್ಕೆ ದಾಸೋಹವೆಂದು ಕರೆಯುತ್ತಾರೆ. ಅಂತೆಯೆ ಬಸವಧರ್ಮದಲ್ಲಿ ಗುರು-ಲಿಂಗ-ಜಂಗಮಕ್ಕೂ ಕಾಯಕ-ಪ್ರಸಾದ-ದಾಸೋಹಕ್ಕೂ ಅವಿನಾಭಾವ ಸಂಬಂಧವಿದೆ. ಇವುಗಳನ್ನು ಪ್ರತಿಪಾದಿಸುವ ವಚನ ಸಾಹಿತ್ಯ ನಿಜವಾದ ಕ್ರಾಂತಿಕಾರಿ ಸಾಹಿತ್ಯವಾಗಿದೆ. ವಚನಗಳಲ್ಲಿ ಸಂಪೂರ್ಣ ಕ್ರಾಂತಿಯ ಬೀಜಮಂತ್ರಗಳಿವೆ. ವಚನಗಳು ಲೋಕಹಿತದ ಸಾಹಿತ್ಯ ಮತ್ತು ತತ್ತ್ವದ ಆಗರಗಳಾಗಿವೆ. ಸಾಮ್ರಾಜ್ಯಶಾಹಿಗಳು ಬೀಸಿದ ಜಾಗತೀಕರಣದ ಜಾಲದಲ್ಲಿ ಜಗತ್ತು ಸಿಕ್ಕಿಕೊಂಡು ಒದ್ದಾಡುತ್ತಿದೆ. ವಚನ ಸಾಹಿತ್ಯ ಸಾರುವ ಭಕ್ತಿಸಾಮ್ರಾಜ್ಯದ ಸ್ಥಾಪನೆಯಾದಾಗ ಮಾತ್ರ ಜಗತ್ತು ಎಲ್ಲರೀತಿಯ ಹಿಂಸೆ, ಸುಲಿಗೆ, ಗಲಭೆ ಮತ್ತು ಕ್ರೌರ್ಯದಿಂದ ಮುಕ್ತವಾಗುವುದು. ಸುಲಿಗೆಯ ಸಾಮ್ರಾಜ್ಯಕ್ಕೆ ಭಕ್ತಿಸಾಮ್ರಾಜ್ಯವೊಂದೇ ಉತ್ತರ ಎಂಬುದನ್ನು ಜಗತ್ತು ಅರಿತುಕೊಳ್ಳುವ ದಿನಗಳು ದೂರವಿಲ್ಲ. ಬಸವಣ್ಣನವರ ಬಡ್ಡಿರಹಿತ ಅರ್ಥಶಾಸ್ತ್ರವೊಂದೇ ಈ ಜಗತ್ತನ್ನು ಕಾಪಾಡಬಲ್ಲುದು. ಯೋಗ್ಯ ಉತ್ಪಾದನೆ, ಯೋಗ್ಯ ಬಳಕೆ ಮತ್ತು ಯೋಗ್ಯ ವಿತರಣೆ ಇವು ಮೂರು ಬಸವಣ್ಣನವರ ಅರ್ಥಶಾಸ್ತ್ರದ ಪ್ರಮುಖ ಅಂಶಗಳಾಗಿವೆ. ಕಾಯಕವೆಂದರೆ ಯೋಗ್ಯವಾದುದನ್ನೇ ಉತ್ಪಾದಿಸುವ ಕ್ರಿಯೆ. ಪ್ರಸಾದವೆಂದರೆ ಯೋಗ್ಯ ಬಳಕೆ, ದಾಸೋಹವೆಂದರೆ ಯೋಗ್ಯ ವಿತರಣೆ. ಈ ಮೂರು ಆರ್ಥಿಕ ಪ್ರಕ್ರಿಯೆಗಳನ್ನು ಜಾಗತೀಕರಣದ ಮೂಲಕ ಹಾಳುಗೆಡವಿ ಭಾರತದಂಥ ಬಡರಾಷ್ಟ್ರಗಳನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಳ್ಳುವುದೇ ಸಾಮ್ರಾಜ್ಯಶಾಹಿ ರಾಷ್ಟ್ರಗಳ ಮುಖ್ಯ ಉದ್ದೇಶವಾಗಿದೆ. ರೈತರು, ಕೃಷಿಕಾರ್ಮಿಕರು, ದಲಿತರು, ಮಹಿಳೆಯರು ಮತ್ತು ಎಲ್ಲ ವಿಧವಾದ ಕಾಯಕಜೀವಿಗಳ ಧರ್ಮವಾದ ಬಸವಧರ್ಮ ಇಂಥ ಜಾಗತಿಕ ಬಿಕ್ಕಟ್ಟನ್ನು ಪರಿಹರಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ಮಾನವೀಯ ಜಗತ್ತಿಗಾಗಿ ಬಸವಧರ್ಮದ ರಹಸ್ಯವನ್ನು ಅರಿತುಕೊಳ್ಳುವುದು ಈ ಕಾಲದ ತುರ್ತು ಅವಶ್ಯಕತೆಯಾಗಿದೆ.

ಬಸವಧರ್ಮ ನಿಜವಾದ ಅರ್ಥದಲ್ಲಿ ನಿಸರ್ಗ ಧರ್ಮವಾಗಿದೆ. ಆದ್ದರಿಂದ ಬಸವಣ್ಣನವರು ಎಲ್ಲವನ್ನು ನೈಸರ್ಗಿಕ ನೆಲೆಯಲ್ಲೇ ನೋಡುವ ಕ್ರಮ ಅನನ್ಯವಾಗಿದೆ. ಬಯಲು ಇದರ ವಿಸ್ತಾರವಾಗಿದೆ. ಆ ಬಯಲಿನ ಮೂಲವೇ ಚೈತನ್ಯವಾಗಿದೆ. ಆ ಚೈತನ್ಯದಿಂದಲೇ ಸಕಲವಸ್ತುಗಳ ಸೃಷ್ಟಿಯಾಗಿದೆ. ವಸ್ತುವಿನ ಪ್ರತಿ ಕಣದಲ್ಲಿ ಚೈತನ್ಯ ಕ್ರಿಯಾಶೀಲವಾಗಿದೆ. ವಸ್ತುವೆಂದರೆ ಚೈತನ್ಯದ ಮೂರ್ತ ಸ್ವರೂಪ. ಅದು ತನ್ನ ಸ್ವರೂಪವನ್ನು ಕಳೆದುಕೊಂಡು ಬಯಾಲಾದ ನಂತರ ಮತ್ತೆ ಅಮೂರ್ತ ಚೈತನ್ಯವಾಗಿ ಉಳಿಯುವುದು. ಆದ್ದರಿಂದ ಬಸವಧರ್ಮವನ್ನು ಕಾಸ್ಮಿಕ್ ರಿಲಿಜನ್ ಎಂದೂ ಕರೆಯಬಹುದು. "ಐ ಅಸರ್ಟ್ ದ್ಯಾಟ್ ಕಾಸ್ಮಿಕ್ ರಿಲೀಜಿಯಸ್ ಎಕ್ಸ್‌ಪೀರಿಯನ್ಸ್ ಈಸ್ ದಿ ಸ್ಟ್ರಾಂಗೆಸ್ಟ್ ಅಂಡ್ ದಿ ನೋಬಲೆಸ್ಟ್ ಡ್ರೈವಿಂಗ್ ಫೋರ್ಸ್ ಬಿಹೈಂಡ್ ಸೈಂಟಿಫಿಕ್ ರಿಸರ್ಚ್" ಎಂದು ಮಹಾವಿಜ್ಞಾನಿ ಅಲ್ಬರ್ಟ್ ಐನ್‌ಸ್ಟೀನ್ ಹೇಳುತ್ತಾರೆ.

ಇಡೀ ಬ್ರಹ್ಮಾಂಡವು ಕಾಯಕ ತತ್ತ್ವದ ಮೇಲೆ ನಿಂತಿದೆ. ಪೃಥ್ವಿಯು ಸೂರ್ಯನ ಸುತ್ತ ತಿರುಗುವ ಕಾಯಕ ಮಾಡುವುದು. ಸೂರ್ಯ ಬೆಳಕನ್ನು ಕೊಡುವ ಕಾಯಕ ಮಾಡುವನು. ಚಂದಿರ ಬೆಳದಿಂಗಳು ಕೊಡುವನು. ನದಿಗಳು ಸಮುದ್ರ ಸೇರುವ ಕಾಯಕದಲ್ಲಿ ತೊಡಗಿವೆ. ಸೂರ್ಯನ ತಾಪಕ್ಕೆ ಸಮುದ್ರದ ನೀರು ಆವಿಯಾಗುವುದು. ಮೋಡಾಗುವುದು, ಮಳೆಯಾಗುವುದು, ಸಕಲ ಜೀವರಾಶಿಗೆ ನೀರಾಗುವುದು. ನದಿಗಳು ಮತ್ತೆ ತುಂಬಿ ಹರಿಯುವವು. ಸಾಗರದ ಕಡೆಗೆ ಧಾವಿಸುವವು. ರೈತರು ಸೂರ್ಯಾಸ್ತದ ನಂತರ ಹೊಲದ ಕಾಯಕ ಮುಗಿಸಿ ಮನೆಗೆ ಬಂದರೂ ಎರೆಹುಳುಗಳು ಅವರ ಭೂಮಿಯನ್ನು ಹದಗೊಳಿಸುವ ಕಾಯಕವನ್ನು ಮಾಡುತ್ತಲೇ ಇರುವವು. ಮರಗಳು ಬಯಲಲ್ಲಿ ನಿಂತಲ್ಲೇ ಕಾಯಕ ನಿರತವಾಗಿರುತ್ತವೆ. ಅವು ಬೇರುಗಳ ಮೂಲಕ ಭೂಮಿ ಮತ್ತು ನೀರಿನ ಜೊತ ಸಂಬಂಧ ಹೊಂದಿರುತ್ತವೆ. ಎಲೆಗಳ ಮೂಲಕ ಸೂರ್ಯ ಮತ್ತು ಗಾಳಿಯ ಜೊತೆ ಸಂಬಂಧ ಹೊಂದಿರುತ್ತವೆ. ಅವು ಭೂಮಿಯ ಸತ್ವವನ್ನು ಪ್ರಸಾದದ ಹಾಗೆ ಎಷ್ಟು ಬೇಕೊ ಅಷ್ಟು ಮಾತ್ರ ಸ್ವೀಕರಿಸುತ್ತವೆ. ನಂತರ ದಾಸೋಹ ರೂಪದಲ್ಲಿ ನಮಗೆ ಹೂ ಹಣ್ಣು ಮುಂತಾದವುಗಳಲ್ಲದೆ ಪ್ರಾಣವಾಯುವನ್ನು ಕೊಡುವ ಕೆಲಸವನ್ನೂ ಮಾಡುತ್ತವೆ. ಹೀಗೆ ಇಡೀ ಬ್ರಹ್ಮಾಂಡವೇ ಕಾಯಕನಿರತವಾಗಿದೆ. ನಿಸರ್ಗದಲ್ಲಿ ಒಂದು ಮರ ಕೂಡ ಕಾಯಕ-ಪ್ರಸಾದ-ದಾಸೋಹ ತತ್ತ್ವವನ್ನು ಪಾಲಿಸುವಾಗ ನರರಿಗೇಕೆ ಸಾಧ್ಯವಾಗದು ಎಂದು ಬಸವಧರ್ಮ ಪ್ರಶ್ನಿಸುತ್ತದೆ.

ಕಾಯಕವು ನಮ್ಮ ದೈಹಿಕ ಮತ್ತು ಬೌದ್ಧಿಕ ಶಕ್ತಿಯನ್ನು ಹೆಚ್ಚಿಸುವುದು. ನಮ್ಮ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡುವುದು. ಮಾನಸಿಕ ಒತ್ತಡಗಳಿಂದ ರಕ್ಷಿಸುವುದು. ಪರಾವಲಂಬಿಗಳಾಗದಂತೆ ನೋಡಿಕೊಳ್ಳುವುದು. ಕೊನೆಗೆ ನಮ್ಮನ್ನು ಸ್ವತಂತ್ರಧೀರರನ್ನಾಗಿ ಮಾಡುವುದು. "ಕೂಡಲಸಂಗನ ಶರಣರು ಸ್ವತಂತ್ರ ಧೀರರು" ಎಂದು ಬಸವಣ್ಣನವರು ಹೇಳುತ್ತಾರೆ. ಕಾಯಕ ಮಾಡದವನಿಗೆ ಹಸಿವು, ರುಚಿ, ವಿಶ್ರಾಂತಿ ಮತ್ತು ನಿದ್ರೆಯ ಮಹತ್ವ ಗೊತ್ತಾಗುವುದಿಲ್ಲ. ಕಾಯಕ ಜೀವಿಯ ಹಸಿವು ಎಲ್ಲ ಆಹಾರ ಪದಾರ್ಥಗಳನ್ನು ಪ್ರಸಾದವಾಗಿಸುತ್ತದೆ. ರುಚಿಕರವಾಗಿಸುತ್ತದೆ. ಆತನಿಗೆ ವಿಶ್ರಾಂತಿ ಮತ್ತು ನಿದ್ರೆಯ ಸುಖ ಸಹಜವಾಗಿಯೇ ಸಿಗುತ್ತದೆ. ಸತ್ಯಶುದ್ಧ ಕಾಯಕದಿಂದ ಮನಸ್ಸು ಪವಿತ್ರವಾಗಿರುತ್ತದೆ. ಆದ್ದರಿಂದ ಕಾಯಕ ತತ್ತ್ವವು ವಿಶ್ವಮಾನ್ಯವಾಗಿದೆ. ಬಲ್ಗೇರಿಯದ ಮಹಾನ್ ಕಲಾವಿದ ಜಾರ್ಜಿ ದಿಮಿತ್ರೊವ್ ಒಂದು ಬೃಹತ್ ಗಾತ್ರದ ತೈಲಚಿತ್ರ "ಕಾಯಕದಿಂದ ವಿಶ್ರಾಂತಿಯ ಆನಂದ ಲಭಿಸುತ್ತದೆ" ಎಂಬುದನ್ನು ಸೂಚಿಸುತ್ತದೆ. ರೈತ ತನ್ನ ಹೆಂಡಿರು ಮಕ್ಕಳೊಡನೆ ರಾಶಿ ಮಾಡಿದ್ದಾನೆ. ರಾತ್ರಿ ರಾಶಿಯ ಸುತ್ತ ಎಲ್ಲರೂ ಮಲಗಿದ್ದಾರೆ. ದುಡಿದ ದೇಹ ವಿಶ್ರಾಂತಿ ಬಯಸಿದಾಗ ಮಾತ್ರ ಚೆನ್ನಾಗಿ ನಿದ್ರೆ ಬರುವುದು ಎಂದು ಸಾರುವ ಆ ತೈಲ ಚಿತ್ರಕ್ಕೆ ದಿಮಿತ್ರೊವ್ "ವಿಶ್ರಾಂತಿ" ಎಂದು ಹೆಸರಿಟ್ಟಿದ್ದಾನೆ. ಆ ರೈತ ಕುಟುಂಬ ಗಾಢ ನಿದ್ರೆಯಲ್ಲೂ ರಾಶಿ ಕಾಯುವ ಕಾಯಕ ಮಾಡುತ್ತಿದೆ! ಇದು ನಮ್ಮ ಹಳ್ಳಿಗಳಲ್ಲಿ ಕೂಡ ಕಂಡುಬರುವ ದೃಶ್ಯವಾಗಿದೆ.

"ಕಾಯಕದ ಮೂಲಕ ಗಳಿಸಿದ ಒಂಡು ಡಾಲರಿನ ಮೌಲ್ಯ ಪುಕ್ಕಟೆ ಸಿಕ್ಕ ಐದು ಡಾಲರಿಗಿಂತ ಬಹಳಷ್ಟು ಹೆಚ್ಚಿಗೆ ಇರುತ್ತದೆ ಎಂಬುದನ್ನು ನನ್ನ ಮಗನಿಗೆ ಕಲಿಸಿರಿ" ಎಂದು ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಅವರು ತಮ್ಮ ಮಗ ಕಲಿಯುತ್ತಿದ್ದ ಶಾಲೆಯ ಮುಖ್ಯೋಪಾಧ್ಯಾಯರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಹೀಗೆ ಕಾಯಕ ನಮ್ಮ ನೈತಿಕ ಶಕ್ತಿಯನ್ನು ಹೆಚ್ಚಿಸುವುದು.

"ರಾಟೆ ತಿರುಗಿಸಲು ನನಗೆ ಶಕ್ತಿ ಇದ್ದು, ಜಪಮಣಿಗಳನ್ನು ಎಣಿಸುವುದು ಅಥವಾ ರಾಟೆ ತಿರುಗಿಸುವುದು ಇವುಗಳ ನಡುವೆ ಆಯ್ಕೆ ಮಾಡಬೇಕಾದಲ್ಲಿ ನಾನು ಬಡತನ ಮತ್ತು ಉಪವಾಸ ದೇಶವನ್ನು ಗುಪ್ತವಾಗಿ ಬೆನ್ನಟ್ಟಿರುವುದನ್ನು ಕಾಣುತ್ತಿರುವವರೆಗೆ ಖಂಡಿತವಾಗಿಯೂ ರಾಟೆಯ ಪರವಾಗಿ ತೀರ್ಮಾನಿಸುತ್ತೇನೆ ಮತ್ತು ಅದನ್ನೇ ನಾನು ನನ್ನ ಜಪಸರವನ್ನಾಗಿ ಮಾಡಿಕೊಳ್ಳುತ್ತೇನೆ." ಎಂದು ಗಾಂಧೀಜಿಯವರು ಕಾಯಕದ ಮಹತ್ವವನ್ನು ಸಾರಿದ್ದಾರೆ.

"ತಮ್ಮ ಕೈಯಿಂದ ಸಂಪಾದಿಸಿದುದಕ್ಕಿಂತ ಉತ್ತಮ ಆಹಾರವನ್ನು ಎಂದೂ ಯಾರೂ ತಿಂದಿಲ್ಲ" ಎಂದು ಮುಹಮ್ಮದ್ ಪೈಗಂಬರರು ಹೇಳುತ್ತಾರೆ.

"ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯಪ್ರಿಯ ಅಮರೇಶ್ವರ ಲಿಂಗದ
ಸೇವೆಯುಳ್ಳನ್ನಕ್ಕರ"

ಎಂದು ಆಯ್ದಕ್ಕಿ ಲಕ್ಕಮ್ಮ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾಳೆ. ಬಡ ವಚನಕಾರರ ಆತ್ಮವಿಶ್ವಾಸ ಶ್ರೀಮಂತರನ್ನು ದಂಗುಬಡಿಸುತ್ತದೆ.

"ಮನೆ ನೋಡಾ ಬಡವರು, ಮನ ನೋಡಾ ಘನ
ಸೋಂಕಿನಲ್ಲಿ ಶುಚಿ; ಸರ್ವಾಂಗ ಕಲಿಗಳು.
ಪಸರಕ್ಕನುವಿಲ್ಲ; ಬಂದ ತತ್ಕಾಲಕ್ಕೆ ಉಂಟು.
ಕೂಡಲಸಂಗನ ಶರಣರು ಸ್ವತಂತ್ರ ಧೀರರು."

ಎಂದು ಬಸವಣ್ಣನವರು ಕಾಯಕಜೀವಿಗಳ ವ್ಯಕ್ತಿತ್ವದ ಕುರಿತು ಕಣ್ಣಿಗೆ ಕಟ್ಟುವಂತೆ ಹೇಳಿದ್ದಾರೆ. ಅವರು ಘನಮನದವರೂ ಪರಿಶುದ್ಧರೂ ಸ್ವತಂತ್ರ ಧೀರರೂ ಆಗಿದ್ದಾರೆ.

"ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ
ಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುಲ ಹರಿವುದು
ಜಂಗಮವಾದರೂ ಕಾಯಕದಿಂದಲೇ ವೇಷಪಾಶ ಹರಿವುದು
ಇದು ಚೆನ್ನಬಸವಣ್ಣಪ್ರಿಯ ಚಂದೇಶ್ವರ ಲಿಂಗದ ಅರಿವು"

ಎಂದು ನುಲಿಯ ಚಂದಯ್ಯನವರು ಕಾಯಕದ ಮಹತ್ವವನ್ನು ಸಾರಿದ್ದಾರೆ. ಗುರು-ಲಿಂಗ-ಜಂಗಮಕ್ಕೆ ಕಾಯಕವೇ ಆಧಾರವಾಗಿದೆ ಎಂದು ಮನಂಬುಗುವಂತೆ ಹೇಳಿದ್ದಾರೆ.

"ಕಾಯಕದಲ್ಲಿ ನಿರತನಾದಡೆ
ಗುರುದರ್ಶನವಾದಡೂ ಮರೆಯಬೇಕು
ಲಿಂಗಪೂಜೆಯಾದಡೂ ಮರೆಯಬೇಕು
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು
ಕಾಯಕವೇ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು."

ಎಂದು ಆಯ್ದಕ್ಕಿ ಮಾರಯ್ಯ ಹೇಳುವಲ್ಲಿ ಕಾಯಕದ ಮಹತ್ವ ಪರಾಕಾಷ್ಠೆಯನ್ನು ತಲುಪುತ್ತದೆ.

"ಆವ ಕಾಯಕವಾದಡೂ ಸ್ವಕಾಯಕವ ಮಾಡಿ
ಗುರು ಲಿಂಗ ಜಂಗಮದ ಮುಂದಿಟ್ಟು,
ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು,
ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ,
ಭಾಪು ಲದ್ದೆಯ ಸೋಮಾ."

ಹುಲ್ಲಿನ ಹೊರೆ ಹೊರುವ ಕಾಯಕದ ಸೋಮಯ್ಯ ಬದುಕೆಂಬುದು ಜೈವಿಕ ಪ್ರಕ್ರಿಯೆ ಎಂದು ಹೀಗೆ ಸೂಚಿಸುತ್ತಾನೆ. ಆ ಮೂಲಕ ಸಾವನ್ನು ಗೆಲ್ಲುತ್ತಾನೆ. ದೇವರ ಹಂಗಿಗೆ ಒಳಗಾಗದೆ ದೇವರನ್ನು ಆರಾಧಿಸುವ ಕ್ರಮವನ್ನು ನಮಗೆ ಕಲಿಸಿಕೊಟ್ಟಿದ್ದಾನೆ. ಜನಸಾಮಾನ್ಯರು ಶರಣಸಂಕುಲ ಸೇರಿ ಹೀಗೆ ಆತ್ಮಸ್ಥೈರ್ಯ ಪಡೆದು ಅಸಾಮಾನ್ಯರಾಗುವಲ್ಲಿ ಬಸವಣ್ಣನವರ ಶ್ರಮ ಅಡಗಿದೆ. ಅಂತೆಯೆ ಶರಣರಿಗೆ ಬದುಕೆಂಬುದು ದುಃಖದ ಆಗರವೆಂದು ಅನಿಸುವುದಿಲ್ಲ. ಶರಣರು ಸವಾಲನ್ನು ಎದುರಿಸುತ್ತ ಆನಂದವನ್ನು ಅನುಭವಿಸುವವರು.

"ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ
ಸತ್ಯಶುದ್ಧವಿಲ್ಲದುದು ಕಾಯಕವಲ್ಲ
ಆಸೆಯೆಂಬುದು ಭವದ ಬೀಜ
ನಿರಾಸೆಯೆಂಬುದು ನಿತ್ಯಮುಕ್ತಿ
ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ." ಎಂದು ಉರಿಲಿಂಗಪೆದ್ದಿಗಳ ಮುಣ್ಯಸ್ತ್ರೀ ಕಾಳವ್ವೆ ಹೇಳುತ್ತಾಳೆ.

ಕಾಯಕದಲ್ಲಿ ಮುಕ್ತಿ ಕಾಣುವ ಪರಿ ಇದು. ಒಬ್ಬ ದಲಿತ ಮಹಿಳೆ ಶರಣಸಂಕುಲದೊಳಗೆ ಬಂದು ಇಷ್ಟೊಂದು ಮಹತ್ತರವಾದ ವಿಚಾರವನ್ನೊಳಗೊಂಡ ವಚನರಚನೆ ಮಾಡಿದ್ದಾಳೆಂದರೆ ಬಸವಣ್ಣನವರು ಜಗತ್ತಿನಲ್ಲಿ ಮೊದಲಬಾರಿಗೆ ಯಾವರೀತಿ ವಯಸ್ಕರ ಶಿಕ್ಷಣದ ವ್ಯವಸ್ಥೆ ಮಾಡಿರಬಹುದು ಎಂಬುದರ ಕುರಿತು ಸಂಶೋಧನೆಯಾಗಬೇಕಿದೆ. ಶರಣರ ವಚನಗಳು ಮತ್ತು ತತ್ತ್ವ ಕೂಡ ಕಾಯಕದ ಉತ್ಪತ್ತಿಯಾಗಿವೆ ಎಂಬುದನ್ನು ಮರೆಯಬಾರದು. ವಚನಗಳು ಅನನ್ಯವಾಗಿರುವುದು ಇದೇ ಕಾರಣದಿಂದ. ಅನೇಕ ವಚನಕಾರರು ತಮ್ಮ ಕಾಯಕಗಳ ಅನುಭದ ಮೂಲಕವೇ ಅನುಭಾವಿಯಾಗಿದ್ದಾರೆ. ಅವರ ವಚನಗಳಲ್ಲಿನ ಪ್ರತಿಮೆ, ಪ್ರತೀಕ ಮತ್ತು ಸಂಕೇತಗಳು ಅವರವರ ಕಾಯಕಗಳ ಅನುಭವದ ಮೂಲಕವೇ ಸೃಷ್ಟಿಯಾಗಿವೆ. ಕಾಯಕದ ವಸ್ತುಗಳು ಹೀಗೆ ಕಾವ್ಯ ಪ್ರತಿಮೆಗಳಾಗುತ್ತಲೇ ತತ್ತ್ವವನ್ನು ಸ್ಫುರಿಸತೊಡಗುತ್ತವೆ.

"ಕೈಯಲ್ಲಿ ಕನ್ನಡಿಯಿರಲು ತನ್ನ ತಾ ನೋಡಬಾರದೆ? ಎಂದು ಕನ್ನಡಿ ಕಾಯಕದ ರೇವಮ್ಮ ಹೇಳುತ್ತಾಳೆ. "ನಾ ತಿರುಹುವ ರಾಟೆಯ ಕುಲಜಾತಿಯ ಕೇಳಿರಣ್ಣಾ" ಎಂದು ಕದಿರ ರೆಮ್ಮವ್ವೆ ತಿಳಿಸುತ್ತಾಳೆ. "ಹದತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿಯಿಲ್ಲ" ಎಂದು ಕೊಟ್ಟಣದ ಸೋಮಮ್ಮನ ವಚನ ತಿಳಿಸುತ್ತದೆ. "ಹದ ಮಣ್ಣಲ್ಲದೆ ಮಡಕೆಯಾಗಲಾರದು" ಎಂದು ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ ತಿಳಿಸುತ್ತಾಳೆ. "ಕೈ ತಪ್ಪಿ ಕೆತ್ತಲು ಕಾಲಿಗೆ ಮೂಲ, ಮಾತು ತಪ್ಪಿ ನುಡಿಯಲು ಬಾಯಿಗೆ ಮೂಲ" ಎಂದು ಬಾಚಿಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವೆ ಎಚ್ಚರಿಸುತ್ತಾಳೆ. "ಲಂಚವಂಚನಕ್ಕೆ ಕೈಯಾನದ ಭಾಷೆ! ಬಟ್ಟೆ (ಬೀದಿ)ಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದಡೆ ಕೈ ಮುಟ್ಟಿ ಎತ್ತಿದೆನಾದಡೆ, ಅಯ್ಯಾ ನಿಮ್ಮಾಣೆ! ಎಂದು ಕಸಗುಡಿಸುವ ಸತ್ಯಕ್ಕ ಕಾಯಕನಿಷ್ಠೆಯನ್ನು ಸೂಚಿಸುತ್ತಾಳೆ. ಸ್ವಾವಲಂಬಿಯಾಗಿಸುವ ಕಾಯಕವು ಪ್ರಶ್ನಿಸುವ ಶಕ್ತಿಯನ್ನು ಕೊಡುತ್ತದೆ. "ನಿಮ್ಮ ಗುರುತನಕ್ಕಿದು ಪಥವೆ, ನಾರಿಯರಿಬ್ಬರೊಡನೆ ಇಪ್ಪುದು? ಶಿವಶಿವಾ ನಿಮ್ಮ ನಡವಳಿ!" ಎಂದು ಸತ್ಯಕ್ಕ ಶಿವನನ್ನೇ ಪ್ರಶ್ನಿಸುತ್ತಾಳೆ. "ಅಂಗ ವಿಕಾರ ಸಾಕೇಳಿ" ಎಂದು ಎಚ್ಚರಿಕೆಯ ಕಾಯಕದ ಮುಕ್ತಿನಾಥಯ್ಯ ಎಚ್ಚರಿಸುತ್ತಾನೆ. "ಈ ಸೀರೆಯ ನೆಯ್ದವ ನಾನೊ ನೀನೋ ರಾಮನಾಥ" ಎಂದು ಜೇಡರ ದಾಸಿಮಯ್ಯ ಕೇಳುತ್ತಾರೆ. "ಕಾಯವೆಂಬ ಡಕ್ಕೆಯ ಮೇಲೆ ಜೀವವೆಂಬ ಹೊಡೆಚೆಂಡು ಬೀಳೆ ತ್ರಿವಿಧವ ತಾ ತಾಯೆಂಬ ಆಸೆ ಹಿಂಡಿ ಡಿಂಡಿಯೆನುತ್ತಿದೆ" ಎಂದು ಡಕ್ಕೆಯ ಬೊಮ್ಮಣ್ಣ ಹಾಡುತ್ತಾನೆ. "ಕೋಲೊಂದರಲ್ಲಿ ಹಲವು ಕುಲದ ಗೋವುಗಳ ಚಲಿಸದೆ ನಿಲಿಸುವಂತೆ" ಏಕಚಿತ್ತನಾಗಿರಬೇಕು ಎಂಬುದು ತುರುಗಾಹಿ ರಾಮಣ್ಣನ ಆಶಯವಾಗಿದೆ. "ನಾದ ಹರಿದು ಸ್ವರವು ಸೂಸಿದ ಬಳಿಕ ಈ ಬಹುರೂಪ ಬಲ್ಲವರಾರೋ" ಎಂದು ಬಹುರೂಪಿ ಚೌಡಯ್ಯ ಬದುಕಿನ ನಿಗೂಢತೆಯನ್ನು ವ್ಯಕ್ತಪಡಿಸುತ್ತಾನೆ. "ಆರು ದರ್ಶನವೆಲ್ಲ ಎನ್ನ ಬಾಚಿಯ ಕಲೆ ಮಿಕ್ಕಾದ ಮೀರಿದ ಅವಧೂತರುಗಳೆಲ್ಲ ಎನ್ನ ಉಳಿಯೊಳಗಣ ಒಡಪು" ಎಂದು ಹೇಳುವ ಬಾಚಿ ಕಾಯಕದ ಬಸವಣ್ಣನಿಗೆ ಕಾಯಕದ ಮೂಲಕವೇ ದರ್ಶನವಾಗಿದೆ. "ಅಟ್ಟೆಯ ಚುಚ್ಚುವ ಉಳಿಯ ಮೊನೆಯಲ್ಲಿ ಪ್ರತ್ಯಕ್ಷವಾದ ಪರಮೇಶ್ವರನ ಕಂಡು, ಇತ್ತಲೇಕಯ್ಯಾ ಕಾಯದ ತಿತ್ತಿಯ ಹೊತ್ತಾಡುವನ ಮುಂದೆ, ನಿನ್ನ ಭಕ್ತರ ಠಾವಿನಲ್ಲಿಗೆ ಹೋಗಿ ಮುಕ್ತಿಯ ಮಾಡು" ಎಂದು ಮಾದಾರ ಧೂಳಯ್ಯ ಶಿವನನ್ನೇ ಗದರಿಸುತ್ತಾನೆ. ಆನೆ ಕುದುರೆ ಭಂಡಾರವಿರ್ದಡೇನೊ ತಾನುಂಬುದು ಪಡಿಯಕ್ಕಿ ಒಂದಾವಿನ ಹಾಲು ಮಲಗುವುದರ್ಧ ಮಂಚ. ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ" ಎಂದು ಕಾಶ್ಮೀರದಿಂದ ಬಂದ ದೊರೆ ಮಹಾದೇವ ಭೂಪಾಲ (ಮೋಳಿಗೆ ಮಾರಯ್ಯ) ಕಟ್ಟಿಗೆ ಮಾರುವ ಕಾಯಕ ಮಾಡುತ್ತ ಬದುಕಿನ ಮಹತ್ವವನ್ನು ತಿಳಿಸುತ್ತಾರೆ. ಸಂಪತ್ತಿನ ಆನಂದಕ್ಕಿಂತ ಕಾಯಕದ ಆನಂದ ಮಹತ್ವದ್ದು ಎಂಬುದನ್ನು ಸೂಚಿಸುತ್ತಾರೆ. "ಸಕಲೇಂದ್ರಿಯವೆಂಬ ಹಿಂಡು ಮಂದೆಯಾಗಿವೇಕೊ. ಇದರ ಸಂಗವ ಬಿಡಿಸು ನಿಮ್ಮ ನಿಜದಂಗವ ತೋರಿ." ಎಂಬುದು ವೀರಗೊಲ್ಲಾಳನ ಬಯಕೆಯಾಗಿದೆ. "ನೆಲ್ಲು ನೆಲದಲ್ಲಿಯೆ ಅಳಿದು ಹುಲ್ಲಿನ ಒಡಲಲ್ಲಿಯೆ ಜನಿಸಿ ಆ ಹುಲ್ಲ ತನ್ನೊಳಗಿರಿಸಿದ ಭೇದವ ನೋಡ" ಎಂದು ಹೊಡೆಹುಲ್ಲ ಬಂಕಣ್ಣ ತನ್ನ ಕಾಯಕದ ಮೂಲಕ ಬಂದ ಜ್ಞಾನದಿಂದಲೇ ತತ್ತ್ವಜ್ಞಾನವನ್ನು ಉಸುರುತ್ತಾನೆ.

"ವೇದಶಾಸ್ತ್ರವನೋದುವುದಕ್ಕೆ ಹಾರುವನಲ್ಲ
ಇರಿದು ಮೆರೆವುದಕ್ಕೆ ಕ್ಷತ್ರಿಯನಲ್ಲ
ವ್ಯವಹರಿಸುವುದಕ್ಕೆ ವೈಶ್ಯನಲ್ಲ
ಉಳುವ ಒಕ್ಕಲಮಗನ ತಪ್ಪ ನೋಡದೆ ಒಪ್ಪುಗೊಳ್ಳಯ್ಯಾ
ಕಾಮಭೀಮಜೀವಧನದೊಡೆಯ ನೀನೆ ಬಲ್ಲೆ."

ಎಂದು ಒಕ್ಕಲಿಗ ಮುದ್ದಯ್ಯ ಹೇಳುವಲ್ಲಿ, ಬಸವಣ್ಣನವರು ರೈತಾಪಿ ಜನರನ್ನು ಹಾಗೂ ಇತರ ಕಾಯಕಜೀವಿಗಳನ್ನು ಯಾವ ರೀತಿ ವರ್ಣವ್ಯವಸ್ಥೆಯನ್ನು ಎತ್ತಿಹಿಡಿಯುವ ಮನುಧರ್ಮದ ವಿರುದ್ಧ ಪ್ರಜ್ಞೆ ಮೂಡಿಸಿದ್ದರು ಎಂಬುದರ ಬಗ್ಗೆ ಅರಿವಾಗದಿರದು.

ಶೂದ್ರರಾದ ರೈತಾಪಿ ಜನರು, ಕಾಯಕಜೀವಿಗಳು, ಮಹಿಳೆಯರು ಮತ್ತು ಪಂಚಮರು ಈ ದೇಶದಲ್ಲಿ ಸಹಸ್ರಾರು ವರ್ಷಗಳಿಂದ ಮನುಧರ್ಮದ ಪುರುಷಪ್ರಧಾನವಾದ ವರ್ಣ ವ್ಯವಸ್ಥೆಯಿಂದಾಗಿ ಪಡಬಾರದ ಕಷ್ಟಪಟ್ಟಿದ್ದಾರೆ. ಮೇಲ್ವರ್ಗ ಮತ್ತು ಮೇಲ್ಜಾತಿಯ ಅನುತ್ಪಾದಕ ಪುರುಷರಿಗಾಗಿಯೇ ಬದುಕಿನ ಎಲ್ಲ ಸುಖಭೋಗಗಳು ಮೀಸಲಾಗಿದ್ದವು. ಇವರು ಮಾತ್ರ ಜನಿವಾರ ಧರಿಸುವ ಹಕ್ಕನ್ನು ಪಡೆದಿದ್ದರು. ಜನಿವಾರ ಧರಿಸುವ ಬ್ರಾಹಣ ಓದಿರಬಹುದು, ಬರಿದಿರಬಹುದು ಆದರೆ ಕಾಯಕಜೀವಿಯಾಗಿ ಉತ್ಪಾದನೆಯಲ್ಲಿ ತೊಡಗಿಲ್ಲ. ಉತ್ಪಾದನೆಯ ಅನುಭವದಿಂದ ಬರುವ ಜ್ಞಾನವನ್ನು ಹಿಂದಿನ ಕಾಲದಲ್ಲಿ ಅವನೆಂದೂ ಪಡೆಯಲಿಲ್ಲ. ಕ್ಷತ್ರಿಯ ಕಾದಿರಬಹುದು ಆದರೆ ಉತ್ಪಾದನೆಯಲ್ಲಿ ತೊಡಗಲಿಲ್ಲ. ವೈಶ್ಯ ವಸ್ತುಗಳ ಮಾರಾಟ ಮಾಡಿರಬಹುದು, ಕೃಷಿಭೂಮಿಯ ಒಡೆಯನೂ ಆಗಿರಬಹುದು ಆದರೆ ಸ್ವತಃ ಉತ್ಪಾದನೆ ಮಾಡಲಿಲ್ಲ. ಈ ಮೂರೂ ವರ್ಣದವರಿಗೂ ಜನಿವಾರ ಇದೆ. ಆದರೆ ಉತ್ಪಾದನೆಯಲ್ಲಿ ತೊಡಗಿದ ಕಾಯಕಜೀವಿಗಳಿಗೆ ಮತ್ತು ಪಂಚಮರಿಗೆ ಜನಿವಾರ ಇಲ್ಲ. ಯಾರಿಗೆ ಜನಿವಾರ ಇತ್ತೋ ಅವರು ದುಡಿಯದೆ ಸುಖಜೀವನವನ್ನು ಅನುಭವಿಸಿದರು. ಯಾರಿಗೆ ಜನಿವಾರ ಇದ್ದಿದ್ದಿಲ್ಲವೊ ಅವರು ದುಡಿದೂ ಕಷ್ಟ ಜೀವನವನ್ನು ಅನುಭವಿಸಿದರು. ಅಂತೆಯೆ ಬಸವಣ್ಣನವರು ಕಟ್ಟಕಡೆಯ ಮನುಷ್ಯನ ಕಡೆಗೆ ಬಂದರು ಈ ಅನ್ಯಾಯದ ವಿರುದ್ಧ ಸಿಡಿದೆದ್ದರು. "ಜಾತಿ ಸಂಕರವಾದಬಳಿಕ ಕುಲವನರಸುವರೆ" ಎಂದು ಪ್ರಶ್ನಿಸಿ ಕಾಯಕಜೀವಿಗಳ ಕೇಂದ್ರಿತ ಶರಣ ಸಂಕುಲವನ್ನು ಸೃಷ್ಟಿಸಿದರು. ವಿವಿಧ ಕಾಯಕಗಳ ಶೂದ್ರರಿಗೆ, ಮಹಿಳೆಯರಿಗೆ ಮತ್ತು ಪಂಚಮರಿಗೆ ಮೊದಲ ಬಾರಿಗೆ ಶಿಕ್ಷಣ ನೀಡುವ ವ್ಯವಸ್ಥೆ ಮಾಡಿದರು. ಅವರೆಲ್ಲ ಅನುಭವ ಮಂಟಪದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಭಾರತದಲ್ಲಿ ವಿವಿಧ ಜಾತಿಗಳ ಕಾಯಕಜೀವಿಗಳು ಮೊದಲ ಬಾರಿಗೆ ಜಾತಿಯನ್ನು ಮೀರಿ ಒಂದು ವರ್ಗವಾಗಿದ್ದು ಶರಣಸಂಕುಲದಲ್ಲಿ ಎಂಬುದು ಹೆಮ್ಮೆಯ ವಿಚಾರವಾಗಿದೆ. ಅವರೆಲ್ಲ ತಮ್ಮ ಕಾಯಕಗಳ ಹೆಸರುಗಳನ್ನು ಅಭಿಮಾನದಿಂದ ಉಳಿಸಿಕೊಂಡರು. ಆದರೆ ಆ ಕಾಯಕಗಳ ಒಳಗೆ ಇದ್ದ ಜಾತಿವಿಷವನ್ನು ಹೊರಹಾಕಿದರು. ಹೀಗೆ ಶರಣರಲ್ಲಿ ಸಮಗಾರ, ಮಾದಾರ, ಮೇದಾರ, ಡೋಹರ, ಅಂಬಿಗ ಮುಂತಾದ ಪದಗಳು ಜಾತಿ ಸೂತಕವನ್ನು ಕಳೆದುಕೊಂಡು ಕಾಯಕ ಸೂಚಕಗಳಾಗಿ ಉಳಿದವು.

"ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ.
ಜಲ-ಬಿಂದುವಿನ ವ್ಯವಹಾರ ಒಂದೇ,
ಆಶೆಯಾಮಿಷರೋಷಹರುಷ ವಿಷಯಾದಿಗಳೆಲ್ಲಾ ಒಂದೇ.
ಏನನೋದಿ, ಏನ ಕೇಳಿ, ಏನು ಫಲ?
ಕುಲಜನೆಂಬುದಕ್ಕೆ ಆವುದು ದೃಷ್ಟ?
ಸಪ್ತಧಾತು ಸಮಂ ಪಿಂಡಂ ಸಮಯೋನಿ ಸಮುದ್ಭವಂ|
ಆತ್ಮ ಜೀವ ಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ|| ಎಂದುದಾಗಿ,
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ,
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ.
ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ?
ಇದು ಕಾರಣ ಕೂಡಸಂಗಮದೇವಾ,
ಲಿಂಗಸ್ಥಲವನರಿದವನೆ ಕುಲಜನು."

ಎಂದು ಬಸವಣ್ಣನವರು ಹೇಳುವಲ್ಲಿ ಬಸವಧರ್ಮ ಮನುಧರ್ಮಕ್ಕೆ ಮುಖಾಮುಖಿಯಾಗಿ ನಿಲ್ಲುವ ಮೂಲಕ ಜಾತಿ, ವರ್ಣಗಳ ಮಹತ್ವವನ್ನು ಅಲ್ಲಗಳೆದು ಕಾಯಕದ ಮಹತ್ವವನ್ನು ಎತ್ತಿ ಹಿಡಿಯುತ್ತದೆ.

"ಹಿಂದೂ ಧರ್ಮದಷ್ಟು ಭಾರೀ ಪ್ರಯಾಸಪಟ್ಟು ಭೂಮಿಯ ಮೇಲಿನ ಯಾವ ಧರ್ಮವೂ ಮಾನವೀಯತೆಯ ಘನತೆ ಕುರಿತು ಬೋಧನೆ ಮಾಡುವುದಿಲ್ಲ. ಹಿಂದೂಧರ್ಮದ ಹಾಗೆ ಭೂಮಿಯ ಮೇಲಿನ ಯಾವ ಧರ್ಮವೂ ಬಡವರ ಮತ್ತು ದುರ್ಬಲರ ಕತ್ತನ್ನು ಬಿಗಿಯುವುದಿಲ್ಲ. ಧರ್ಮದಲ್ಲಿ ತಪ್ಪಿಲ್ಲವೆಂದು ದೇವರು ನನಗೆ ತೋರಿಸಿಕೊಟ್ಟಿದ್ದಾನೆ. ಆದರೆ ಹಿಂದೂ ಧರ್ಮದಲ್ಲಿನ..... ಗೋಮುಖವ್ಯಾಘ್ರರು ಎಲ್ಲ ರೀತಿಯ ಪ್ರಜಾಪೀಡನ ಯಂತ್ರಗಳ ಸಂಶೋಧನೆ ಮಾಡುತ್ತಾರೆ. ಭಂಗಿಗಳನ್ನು ದಲಿತರನ್ನು ಇಷ್ಟೊಂದು ಹೀನಾಯ ಸ್ಥಿತಿಗೆ ಇಳಿಸಿದವರು ಯಾರು? ನಮ್ಮ ನಡವಳಿಕೆಯಲ್ಲಿ ಹೃದಯಹೀನತೆ ಇದೆ. ಆದರೆ ಅದೇ ವೇಳೆಗೆ ಅದ್ಭುತವಾದ ಅದ್ವೈತ ತತ್ತ್ವವನ್ನು ಉಪದೇಶಿಸುತ್ತೇವೆ. ಇದು ಗಾಯದ ಮೇಲೆ ಉಪ್ಪು ಸುರಿದಂತೆ." ಎಂದು ಸ್ವಾಮಿ ವಿವೇಕಾನಂದ ಅವರು ವಿಷಾದಿಸುತ್ತಾರೆ. ವಿವೇಕಾನಂದರಿಗೆ ಬಸವಧರ್ಮದ ಪರಿಚಯವಾಗಿದ್ದರೆ ಈ ದೇಶದ ಭವಿಷ್ಯ ಉಜ್ವಲವಾಗುತ್ತಿತ್ತು.

ಐದು ಸಾವಿರ ವರ್ಷಗಳಷ್ಟು ಹಳೆಯದಾದ ಹಾಗೂ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ಫರೋಹಾ ಖುಫುನ ೪೫೦ ಅಡಿ ಎತ್ತರದ ಮಹಾ ಪಿರಮಿಡ್ ಈಜಿಪ್ಟ್‌ನಲ್ಲಿದೆ. ಹತ್ತಾರು ಟನ್ ಭಾರದ ೨೦ ಲಕ್ಷ ಶಿಲೆಗಳನ್ನು ಬಳಸಲಾಗಿದೆ. ಆ ಶಿಲೆಗಳನ್ನು ಎಷ್ಟೊಂದು ವ್ಯವಸ್ಥಿತವಾಗಿ ಜೋಡಿಸಲಾಗಿದೆ ಎಂದರೆ ಅವುಗಳ ಮಧ್ಯೆ ಒಂದು ಹಾಳೆಯನ್ನು ಕೂಡ ಸೇರಿಸಲಿಕ್ಕಾಗದು. ಅಂಥ ಭಾರಿ ಶಿಲೆಗಳು ಸಾವಿರ ಕಿಲೊ ಮೀಟರ್‌ಗಳಷ್ಟು ಸುತ್ತಳತೆಯಲ್ಲಿ ಕೂಡ ಸಿಗುವುದಿಲ್ಲ. ಅಷ್ಟು ಭಾರದ ಶಿಲೆಯನ್ನು ೪೫೦ ಅಡಿಗಳಷ್ಟು ಎತ್ತರವರೆಗೆ ಒಯ್ಯುವಂಥ ಕ್ರೇನ್ ಕೂಡ ಇನ್ನೂ ತಯಾರಾಗಿಲ್ಲ. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆಯದ ಆ ಕಾಲದಲ್ಲಿ, ವಿದ್ಯಚ್ಛಕ್ತಿ ಕೂಡ ಇರದಂಥ ಸಂದರ್ಭದಲ್ಲಿ ಮಾಡಿದ ಈ ಸಾಧನೆಯ ರಹಸ್ಯ ಕಾಯಕದಲ್ಲಿ ಅಡಗಿದೆ.

ವಾನರನಿಂದ ನರನಾಗುವ ಪ್ರಕ್ರಿಯೆಯಲ್ಲಿ ಕಾಯಕದ ಪಾತ್ರ ಮಹತ್ವದ್ದಾಗಿದೆ ಎಂದು ಕಾರ್ಲ್ ಮಾರ್ಕ್ಸ್ ಅವರ ಆಪ್ತ ಸಂಗಾತಿಯಾಗಿದ್ದ ಫ್ರೆಡರಿಕ್ ಏಂಗೆಲ್ಸ್ ಅವರು ತಮ್ಮ "ದಿ ಪಾರ್ಟ್ ಪ್ಲೇಯ್ಡ್ ಬೈ ಲೇಬರ್ ಇನ್ ದಿ ಟ್ರಾಂಜಿಷನ್ ಫ್ರಾಂ ಏಪ್ ಟು ಮ್ಯಾನ್" ಕಿರುಹೊತ್ತಿಗೆಯಲ್ಲಿ ತಿಳಿಸಿದ್ದಾರೆ. "ಮಾನವನ ಎಲ್ಲ ಇರುವಿಕೆಗೆ ದುಡಿಮೆ ಮೊಟ್ಟಮೊದಲ ಆಧಾರ. ಇದು ಎಷ್ಟರ ಮಟ್ಟಿಗೆ ನಿಜವೆಂದರೆ ಒಂದರ್ಥದಲ್ಲಿ ದುಡಿಮೆಯೆ ಮನುಷ್ಯನನ್ನು ಸೃಷ್ಟಿಸಿತೆಂದು ನಾವು ಹೇಳಬೇಕಾಗುತ್ತದೆ." ಎಂದು ಏಂಗೆಲ್ಸ್ ಬರೆದಿದ್ದಾರೆ. ಇವೆಲ್ಲ ಕಾಯಕ ಸಿದ್ಧಾಂತ ಮೂಲಾಧಾರಗಳಾಗಿವೆ.

ಕಾಯಕವು ಮಾನವ ಏಕತೆಯನ್ನು ಸಾಧಿಸುವ ಮೂಲಮಂತ್ರವಾಗಿದೆ. ಕಾಯಕವು ಭೂಲೋಕದ ಮಹತ್ವವನ್ನು ತಿಳಿಸುತ್ತದೆ. ಈ ಭೂಮಿಯನ್ನು ಬದುಕಲು ಹೆಚ್ಚು ಯೋಗ್ಯವಾಗುವಂತೆ ಮಾಡುತ್ತದೆ. ಕಾಯಕವು ಮಾನವರ ಮಧ್ಯದ ಅಂತಸ್ತುಗಳನ್ನು ಒಡೆದು ಹಾಕುತ್ತದೆ. ಕಂದಕಗಳನ್ನು ತುಂಬುತ್ತದೆ. ಕಾಯಕ ಮಾಡುವುದೆಂದರೆ ಬದುಕನ್ನು ಪ್ರೀತಿಸುವುದು.

"ದೇವ ಸಹಿತ ಮನೆಗೆ ಬಂದಡೆ
ಕಾಯಕವಾವುದೆಂದು ಬೆಸಗೊಂಡಡೆ
ನಿಮ್ಮಾಣೆ, ನಿಮ್ಮ ಪುರಾತರಾಣೆ! ತಲೆದಂಡ! ತಲೆದಂಡ! ತಲೆದಂಡ!
ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಿಸಿದಡೆ
ನಿಮ್ಮ ರಾಣಿವಾಸದಾಣೆ."

ಹೀಗೆ ಬಸವಣ್ಣನವರು ಭಕ್ತರಲ್ಲಿ ಸರ್ವಸಮಾನತೆಯನ್ನು ಕಾಣುತ್ತಾರೆ. ಶರಣರ ದೃಷ್ಟಿಯಲ್ಲಿ ಯಾವ ಕಾಯಕವೂ ಚಿಕ್ಕದಲ್ಲ ಅಥವಾ ದೊಡ್ಡದಲ್ಲ.

ನಾವು ಗಳಿಸಿದ್ದೆಲ್ಲ ನಮ್ಮದು ಎಂಬ ಅಹಂಕಾರವನ್ನು ಪ್ರಸಾದ ಪ್ರಜ್ಞೆ ಹೊಡೆದು ಹಾಕುತ್ತದೆ. ನಾವು ಗಳಿಸಿದ್ದೆಲ್ಲ ದೇವರ ಕೃಪೆ ಎಂಬುದರ ಅರಿವಾದಾಗ ಅದನ್ನು ಪ್ರಸಾದವೆಂದು ಜೋಪಾನವಾಗಿಟ್ಟುಕೊಂಡು ಸುವ್ಯಸ್ಥಿತವಾಗಿ ಬಳಸುತ್ತೇವೆ. ಸತ್ಕಾರ್ಯಗಳಿಗಾಗಿ ವ್ಯಯಸುತ್ತೇವೆ. ಆ ವಸ್ತುವಿನ ಮಹತ್ವವನ್ನು ಅರಿತುಕೊಂಡು ಅನ್ಯಾಯವಾಗಿ ದುಂದುವೆಚ್ಚ ಮಾಡದಂತೆ ಎಚ್ಚರಿಕೆ ವಹಿಸುತ್ತೇವೆ. ಸೇವಾ ಮನೋಭಾವ ತಾಳುತ್ತೇವೆ. ದುಃಖಿಗಳಿಗೆ ಮತ್ತು ಕಷ್ಟದಲ್ಲಿರುವವರಿಗೆ ಒಳ್ಳೆಯದಾಗುವ ಹಾಗೆ ನಮ್ಮಲ್ಲಿರುವ ದೇವರ ಸಂಪತ್ತನ್ನು ವಿನಿಯೋಗಿಸಬಯಸುತ್ತೇವೆ. ಜಗತ್ತಿನ ಬಗ್ಗೆ ತೀವ್ರವಾದ ಕಾಳಜಿ ಹೊಂದುತ್ತೇವೆ.

ಸುಡಾನ್‌ನಲ್ಲಿ ಭೀಕರ ಬರಗಾಲ ಬಿದ್ದಾಗ ಅಶಕ್ತ ಮಗುವೊಂದು ಹಸಿದು ಅಂಬೆಗಾಲು ಹಾಕುತ್ತ ವಿಶ್ವಸಂಸ್ಥೆಯ ಗಂಜಿಕೇಂದ್ರದ ಕಡೆಗೆ ಹೊರಟಿತ್ತು. ಅದು ಯಾವಾಗ ಸಾಯುವುದು ಅದನ್ನು ಯಾವಗ ತಿನ್ನಲಿ ಎಂದು ಲೆಕ್ಕ ಹಾಕುತ್ತ ರಣಹದ್ದೊಂದು ಅದರ ಬಳಿಯೇ ಕಾಯುತ್ತಿತ್ತು. ಕೆವಿನ್ ಕಾರ್ಟರ್ ಎಂಬ ಛಾಯಾಗ್ರಾಹಕ ತೆಗೆದ ಈ ಚಿತ್ರ ವಿಶ್ವವನ್ನೇ ತಲ್ಲಣಗೊಳಿಸಿತು. ಈ ಚಿತ್ರಕ್ಕೆ ೧೯೯೪ರಲ್ಲಿ ವಿಶ್ವಪ್ರಸಿದ್ಧವಾದ ಪುಲಿಟ್ಸ್‌ರ್ ಪ್ರಶಸ್ತಿ ದೊರೆಯಿತು. ಆದರೆ ಕೆವಿನ್ ಕಾರ್ಟರ್ ಹಾಗೆ ಚಿತ್ರ ತೆಗೆಯುವ ಭರಾಟೆಯಲ್ಲಿ ಮಗುವಿನ ಭವಿಷ್ಯದ ಬಗ್ಗೆ ಯೋಚಿಸದೆ ಇರುವುದು ಬೇಸರ ಹುಟ್ಟಿಸಿತು. ತುತ್ತು ಅನ್ನಕ್ಕಾಗಿ ಆ ಮಗು ಪರಿತಪಿಸುತ್ತಿದ್ದುದನ್ನು ಮತ್ತು ಆ ಮಗುವನ್ನು ತಿನ್ನಲು ಕಾದು ಕುಳಿತ ರಣಹದ್ದನ್ನು ಆತ ಪದೆ ಪದೆ ಜ್ಞಾಪಿಸಿಕೊಳ್ಳುತ್ತಿದ್ದ. ಅನ್ನದ ಮಹತ್ವವನ್ನು ಸಾರತೊಡಗಿದ. ಅನ್ನವನ್ನು ಪ್ರಸಾದವಾಗಿ ಕಾಣತೊಡಗಿದ. ಹಾಗೆಂದು ತನ್ನ ತಾಯಿಗೆ ಪತ್ರ ಬರೆದ. "ನನ್ನ ಹೊಟ್ಟೆ ತುಂಬಿದ್ದರೂ ಎಷ್ಟೇ ಅರುಚಿಯಾಗಿದ್ದರೂ ನನ್ನ ಪಾಲಿಗೆ ಬಂದ ಆಹಾರವನ್ನು ನಾನೆಂದೂ ಹಾಳು ಮಾಡುವುದಿಲ್ಲ. ಆ ಮಗುವನ್ನು ರಕ್ಷಿಸು, ದಾರಿ ತೋರು ಮತ್ತು ದುರಂತದಿಂದ ಪಾರು ಮಾಡು ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ. ನಮ್ಮ ಸುತ್ತಲಿನ ಜಗತ್ತಿನ ಬಗ್ಗೆ ನಾವು ಹೆಚ್ಚು ಸಂವೇದನಾಶೀಲರಾಗಿರಬೇಕು ಎಂದು ನಾನು ಆಶಿಸುತ್ತೇನೆ. ನಾವು ನಮ್ಮ ಸ್ವಾರ್ಥಭಾವ ಮತ್ತು ಹಿತಾಸಕ್ತಿಗಳಿಂದ ಕುರುಡರಾಗಬಾರದು....... ಈ ವಿಚಾರವನ್ನು ಎಲ್ಲರಿಗೂ ಹಂಚುತ್ತಲೇ ಇರು. ಜಗತ್ತಿನ ದುಃಖದಿಂದ ಬಳಲುತ್ತಿರುವ ಎಲ್ಲರಿಗಾಗಿ ಪ್ರಾರ್ಥಿಸೋಣ. ಈ ಸ್ನೇಹಭಾವದ ಪತ್ರವನ್ನು ಬೇರೆಯವರಿಗೆ ಕಳುಹಿಸೋಣ.... ನೀವು ಆಹಾರದ ಬಗ್ಗೆ ದೂರುವಾಗ ಮತ್ತು ಪ್ರತಿದಿನ ಆಹಾರವನ್ನು ಹಾಳುಮಾಡುವಾಗ ಈ ಕುರಿತು ಚಿಂತನೆ ಮಾಡಿರಿ...." ಎಂದು ಆತ ಪತ್ರದಲ್ಲಿ ತಿಳಿಸಿದ್ದಾನೆ.

ಕೆವಿನ್ ಕಾರ್ಟರ್ ಆ ಮಗುವಿನ ಘಟನೆಯಿಂದಾಗಿ ಮಾನಸಿಕವಾಗಿ ಜರ್ಝರಿತನಾದ. ಮೂರು ತಿಂಗಳನಂತರ ಆತ್ಮಹತ್ಯೆ ಮಾಡಿಕೊಂಡ. ಆತ ಪ್ರಸಾದದ ಮಹತ್ವ ಕುರಿತು ತಾಯಿಗೆ ಬರೆದ ಪತ್ರದ ಪ್ರತಿಗಳು ಜಗತ್ತಿನ ತುಂಬೆಲ್ಲ ಹರಡುತ್ತಿವೆ. ಲೋಕದ ಮಾನವರನ್ನು ಎಚ್ಚರಿಸುತ್ತಿವೆ. ಪ್ರಸಾದದಲ್ಲಿ ಅರುಚಿ ಇಲ್ಲ ಎಂದು ತಿಳಿಸುವುದರ ಮೂಲಕ ಬಸವಣ್ಣನವರು ನಮಗೆ ಉಣಲು ಕಲಿಸಿದ್ದಾರೆ. ಬಸವಣ್ಣನವರ ನಿಜವಾದ ಅನುಯಾಯಿಗಳು ಒಂದು ಅಗಳಿನ ಕಣವನ್ನೂ ಹಾಳುಮಾಡುವುದಿಲ್ಲ.

ಒಂದು ಲೆಕ್ಕಾಚಾರದ ಪ್ರಕಾರ ದೇಶದಲ್ಲಿ ಶೇಕಡಾ ೨೫ರಷ್ಟು ಆಹಾರ ಪೋಲಾಗುತ್ತಿದೆ. ಆಹಾರ ಪದಾರ್ಥಗಳ ಸಂಗ್ರಹಣೆ, ಪ್ಯಾಕೇಜ್, ಸಾರಿಗೆ ಮತ್ತು ಆಹಾರ ಸೇವನೆಯಲ್ಲಿ ಹಾಳುಮಾಡುವ ಕಾರಣ ದೇಶ ಇಷ್ಟೊಂದು ನಷ್ಟ ಭರಿಸಬೇಕಾಗಿದೆ. ಒಂದು ವೇಳೆ ಬಸವಣ್ಣನವರು ಹೇಳಿದಹಾಗೆ ದೇಶದ ಜನತೆ ಆಹಾರ ಸೇವಿಸುವುದನ್ನು ಕಲಿತರೆ ಈ ದೇಶದಲ್ಲಿ ಯಾರೂ ಹಸಿವಿನಿಂದ ಬಳಲುವುದಿಲ್ಲ. ಆರೋಗ್ಯದ ದೃಷ್ಟಿಯಿಂದ "ಆಹಾರವ ಕಿರಿದು ಮಾಡಿರಣ್ಣಾ" ಎಂದು ಅಕ್ಕ ಮಹಾದೇವಿ ಹೇಳಿದ್ದಾರೆ. ಇಂದು ಆಹಾರ ಬಹುದೊಡ್ಡ ಮಾರಾಟದ ವಸ್ತುವಾಗಿದೆ. ಆಹಾರ ಸೇವನೆ ಕೂಡ ಒಂದು ಮಾನಸಿಕ ಪ್ರಕ್ರಿಯೆ ಕೂಡ ಎಂಬುದನ್ನು ನಾವು ಮರೆತಿದ್ದೇವೆ. ಪ್ರತಿ ತುತ್ತನ್ನು ಲಿಂಗಾರ್ಪಿತ ಮಾಡುವುದೆಂದರೆ ಆಹಾರ ಸೇವನೆಯಲ್ಲಿ ದೇಹ ಮನಸ್ಸುಗಳು ಒಂದಾಗಿಸಿ ಪ್ರತಿ ತುತ್ತೂ ದೇವರ ಕೃಪೆ ಎಂದು ಸ್ವೀಕರಿಸುವುದು. ಆಹಾರವನ್ನು ಪ್ರಸಾದವಾಗಿಸುವ ಕ್ರಮ ಇದು.

ನಾವು ಸೇವಿಸುವ ಆಹಾರವೊಂದೇ ಪ್ರಸಾದವಲ್ಲ. ಸೂರ್ಯ, ಚಂದ್ರ, ನಕ್ಷತ್ರ, ಈ ಭೂಮಿ ಮತ್ತು ನಮ್ಮ ಕಾಯ ಕೂಡ ದೇವರ ಪ್ರಸಾದವೇ ಆಗಿದೆ. ನಾವು ಈ ಭೂಮಿಯ ಮೇಲೆ ಏನೆಲ್ಲ ಗಳಿಸಬಹುದು. ಆದರೆ ಈ ಭೂಮಿಯಿಂದ ಏನನ್ನೂ ಒಯ್ಯಲು ಸಾಧ್ಯವಿಲ್ಲ. ನಮ್ಮ ದೇಹವನ್ನು ಕೂಡ ಒಯ್ಯಲಾರೆವು. ಆದ್ದರಿಂದ ಎಲ್ಲವನ್ನೂ ದೇವರ ಪ್ರಸಾದವೆಂದು ಭಾವಿಸಬೇಕು. ನಮ್ಮಲ್ಲಿರುವ ಸಂಪತ್ತು ದೇವರು ಕೊಟ್ಟದ್ದು. ಆದ್ದರಿಂದ ಅದರ ಮೇಲೆ ಸಕಲಜೀವಾತ್ಮರ ಹಕ್ಕಿದೆ ಎಂಬುದನ್ನು ಮರೆಯಬಾರದು. ಹೀಗೆ ಕಾಯಕ ಪ್ರಜ್ಞೆಯು ಪ್ರಸಾದ ಪ್ರಜ್ಞೆಗೆ ದಾರಿ ಮಾಡಿಕೊಟ್ಟಂತೆ ಪ್ರಸಾದ ಪ್ರಜ್ಞೆಯು ದಾಸೋಹ ಪ್ರಜ್ಞೆಗೆ ದಾರಿಮಾಡಿಕೊಡುವುದು. ಆದ್ದರಿಂದ ಕಾಯಕ-ದಾಸೋಹ-ಪ್ರಸಾದದಂಥ ಆರ್ಥಿಕ ಮತ್ತು ಪಾರಮಾರ್ಥಿಕ ತತ್ತ್ವ ಧಾರ್ಮಿಕ ಸಮತಾವಾದದ ತತ್ತ್ವವಾಗಿದೆ. ಈ ಸಮತಾವಾದದಲ್ಲಿ ಮನುಷ್ಯರಷ್ಟೇ ಅಲ್ಲ ಸಕಲ ಜೀವಿಗಳೂ ಸೇರುತ್ತವೆ. ಬಸವಧರ್ಮ ಇಡೀ ಲೋಕವ್ಯವಹಾರದ ಧರ್ಮವಾಗಿದೆ. ಅವರ ದೇವರು ಲೋಕವ್ಯವಹಾರದ ಮಹಾದೇವಸೆಟ್ಟಿಯಾಗಿದ್ದಾನೆ.

"ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ
ಹರದ ಕುಳಿತಿರ್ದ ನಮ್ಮ ಮಹಾದೇವ ಸೆಟ್ಟಿ.
ಒಮ್ಮನವಾದಡೆ ಒಡನೆ ನುಡಿವನು,
ಇಮ್ಮನವಾದಡೆ ನುಡಿಯನು,
ಕಾಣಿಯ ಸೋಲ, ಅರ್ಧಗಾಣಿಯ ಗೆಲ್ಲ,
ಜಾಣ ನೋಡವ್ವ ನಮ್ಮ ಕೂಡಲಸಂಗಮದೇವ."

"ದೇವನೊಬ್ಬ ನಾಮ ಹಲವು" ಎಂದು ಬಸವಣ್ಣನವರು ಹೇಳುತ್ತಾರೆ. ದೇವರು ಒಬ್ಬನೇ ಇದ್ದಾನೆ. ಆತ ಒಂದು ಪೈಸೆಯಷ್ಟೂ ಸೋಲದೆ, ಅರ್ಧ ಪೈಸೆಯಷ್ಟೂ ಗೆಲ್ಲದೆ ಜೀವಜಾಲ ಸಮತೋಲನವನ್ನು ಕಾಪಾಡುತ್ತಾನೆ. ಇದು ಬಸವಣ್ಣನವರ ಪರಿಸರ ಪ್ರಜ್ಞೆ. ಬಸವಣ್ಣನವರು ವ್ಯಕ್ತಿಯಿಂದ ಹಿಡಿದು ಜೀವಜಾಲ ಸಮತೋಲನದ ವರೆಗೆ ಚಿಂತನೆ ಮಾಡಿದ್ದಾರೆ. ಇದಕ್ಕಿಂತ ದೊಡ್ಡ ಸಮತಾವಾದ ಇನ್ನೊಂದಿಲ್ಲ. ಇಡೀ ಶರಣ ಸಂಕುಲದ ಚಿಂತನೆಯ ಕೇಂದ್ರ ಬಿಂದು ವ್ಯಷ್ಟಿ ಮತ್ತು ಸಮಷ್ಟಿ ಪ್ರಜ್ಞೆಯಾಗಿದೆ. ಇಷ್ಟಲಿಂಗವೇ ವ್ಯಷ್ಟಿ ಪ್ರಜ್ಞೆ; ಜಂಗಮಲಿಂಗವೆ ಸಮಷ್ಟಿ ಪ್ರಜ್ಞೆ. ಕಾಯಕ-ಪ್ರಸಾದ-ದಾಸೋಹ ತತ್ತ್ವದ ಮೂಲಕ ಮಾನವನಿಗೆ ಗಣಪ್ರಜ್ಞೆ ಮೂಡಿದಾಗ ವ್ಯಕ್ತಿಸ್ವಾತಂತ್ರ್ಯದ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನೂ ಹೊಂದುವುದರಿಂದ ಲೋಕವು ಶಾಂತಿ ಮತ್ತು ಸಹಬಾಳ್ವೆಯ ಧಾಮವಾಗುವುದು. ಇದೇ ಕರ್ತಾರನ ಕಮ್ಮಟ. ಅಂದರೆ ದೇವರ ಆನಂದಭವನ. ಇಂಥ ಆನಂದಭವನದಲ್ಲಿ ಸಾಹಿತ್ಯ, ತತ್ತ್ವ ಮತ್ತು ಬದುಕು ಒಂದಾಗಿ ಹೋಗುತ್ತದೆ. ವಚನಕಾರರ ವಚನಗಳು ಹೀಗೆ ಸಾಹಿತ್ಯ, ತತ್ತ್ವ ಮತ್ತು ಬದುಕನ್ನು ಒಳಗೊಂಡಿವೆ. ಭೌತಿಕ ಜಗತ್ತಿನಲ್ಲಿ ಎಷ್ಟು ಸಾಧ್ಯವೊ ಅಷ್ಟು ಕಡಿಮೆ ವಸ್ತುಗಳೊಂದಿಗೆ ಮತ್ತು ಆಂತರಿಕ ಜಗತ್ತಿನಲ್ಲಿ ಎಷ್ಟು ಸಾಧ್ಯವೊ ಅಷ್ಟು ಹೆಚ್ಚು ಆನಂದಮಯವಾಗಿ ಬದುಕುವವನೇ ಶರಣ.

ಶರಣನೆಂದರೆ ಅಹಂಕಾರದ ಮೇಲೆ ವಿಜಯ ಸಾಧಿಸಿದ ವೀರ. ಪರಿಪೂರ್ಣ ಸತ್ಯಕ್ಕೆ ಮಾತ್ರ ತಲೆಬಾಗುವವ. ಕೇರಳದ ಮಾರ್ತಾಂಡಂನಲ್ಲಿ ಮಾರ್ತಾಂಡವರ್ಮ ಎಂಬ ರಾಜ ಆಳುತ್ತಿದ್ದ. ಮಹಾಶೂರನಾಗಿದ್ದ ಆತ ಸುತ್ತಮುತ್ತಲಿನ ರಾಜ್ಯಗಳನ್ನೆಲ್ಲ ಗೆದ್ದುಕೊಂಡ. ನಂತರ ಏನು ಮಾಡಬೇಕೆಂದು ತಿಳಿಯದೆ ಗಾಬರಿಯಾದ. ಆತನಿಗೆ ಸಮಾಧಾನವೆಂಬುದೇ ಇರಲಿಲ್ಲ. ಐಹಿಕ ವಸ್ತುಗಳ ಮಧ್ಯೆ ಒದ್ದಾಡತೊಡಗಿದ. ಕೊನೆಗೆ ಪದ್ಮನಾಭ ಮಂದಿರಕ್ಕೆ ಹೋಗಿ ದೇವರ ಪಾದಗಳ ಅಡಿಯಲ್ಲಿ ತನ್ನ ನೆಚ್ಚಿನ ಖಡ್ಗವನ್ನಿಟ್ಟು ಶರಣಾಗತನಾದ. "ನಾನು ನಿನಗೆ ಶರಣಾಗತನಾಗಿದ್ದೇನೆ. ಎಲ್ಲ ಮಾನಸಿಕ ಒತ್ತಡಗಳಿಂದ ಮತ್ತು ಐಹಿಕ ಆಸೆಗಳಿಂದ ದೂರವಾಗುವಂತೆ ಕೃಪೆ ಮಾಡು ಎಂದು ಬೇಡಿಕೊಂಡ. ನಂತರ ತನ್ನ ರಾಜಧಾನಿಯ ಹೆಸರನ್ನೇ ಬದಲಾಯಿಸಿ ಪದ್ಮನಾಭಪುರ ಎಂದು ಕರೆದ. ಐಹಿಕ ಜಗತ್ತನ್ನು ಗೆಲ್ಲದವ ಶರಣನಾಗಲಾರ. ದಾಸೋಹಂಭಾವ ತಾಳಲಾರ.

ಜಗತ್ತಿನಲ್ಲಿ ದಾಸೋಹ ಭಾವ ಇರುವುದರಿಂದಲೇ ಶೇಕಡಾ ೭೫ರಷ್ಟು ಮಂದಿ ಬದುಕುತ್ತಿದ್ದಾರೆ. "ಆಧುನಿಕ ಔಪಚಾರಿಕ ಅರ್ಥವ್ಯವಸ್ಥೆ ಜಗತ್ತಿನ ಕಾರ್ಮಿಕ ಶಕ್ತಿಯ ಶೇಕಾಡಾ ೨೫ರಷ್ಟನ್ನು ಮಾತ್ರ ಬಯಸುತ್ತದೆ. ಉಳಿದ ಶೇಕಡಾ ೭೫ರಷ್ಟು ಜನ ಅನೌಪಚಾರಿಕ ಅರ್ಥವ್ಯವಸ್ಥೆಯಿಂದಾಗಿ ಬದುಕುವುದರಲ್ಲಿ ತಲ್ಲೀನರಾಗಿದ್ದಾರೆ." ಎಂದು ಖ್ಯಾತ ಸಮಾಜವಿಜ್ಞಾನಿ ಮತ್ತು ಆರ್ಥಿಕ ತಜ್ಞ ಥಿಯೊಡೊರ್ ಶನಿನ್ ಹೇಳುತ್ತಾರೆ. ಅವರು ನೂರಾರು ದೇಶಗಳ ಜನರ ಆರ್ಥಿಕ ಸ್ಥಿತಿಗತಿಗಳ ಆಧ್ಯಯನ ಮಾಡಿ ಈ ನಿರ್ಣಯಕ್ಕೆ ಬಂದಿದ್ದಾರೆ. ಜಗತ್ತಿನ ಶೇಕಡಾ ೭೫ರಷ್ಟು ಮಂದಿ ನೆರೆಹೊರೆಯವರ ಸಹಾಯ ಸಹಕಾರದೊಂದಿಗೆ ಬದುಕುತ್ತಿದ್ದಾರೆ. ಜನ ಇನ್ನೂ ಪರಸ್ಪರ ಕಷ್ಟಸುಖಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂಬುದು ಇದರರ್ಥ. ಜಗತ್ತಿನಲ್ಲಿ ಇನ್ನೂ ದಾಸೋಹಂಭಾವ ಇದೆ ಎಂಬುದು ಇದರಿಂದ ವ್ಯಕ್ತವಾಗುತ್ತದೆ.

"ಲೋಕ ತಾನಾದ ಬಳಿಕ
ಲೋಕದ ಸೊಮ್ಮು ತನಗೇಕಯ್ಯಾ.
ಪರುಷ ತಾನಾದ ಬಳಿಕ
ಸುವರ್ಣದ ಸೊಮ್ಮು ತನಗೇಕಯ್ಯಾ.
ಧೇನು ತಾನಾದ ಬಳಿಕ
ಅನ್ಯ ಗೋವಿನ ಸೊಮ್ಮು ತನಗೇಕಯ್ಯಾ
ಕಪಿಲಸಿದ್ಧಮಲ್ಲಿಕಾರ್ಜುನ."

ಹೀಗೆ ಸಿದ್ಧರಾಮ ಹೇಳುವ ಹಾಗೆ ದಾಸೋಹಂಭಾವವು ಸಹಜವಾಗಿಯೆ ನಮ್ಮನ್ನು ವಿಶ್ವಮಾನವರನ್ನಾಗಿ ಮಾಡುತ್ತದೆ. ಎಲ್ಲ ಐಹಿಕ ದುರಾಸೆಗಳಿಂದ ದೂರ ಉಳಿಯುವಂತೆ ಮಾಡುತ್ತದೆ. ಆದರೆ ಜಂಗಮ (ಸಾಮಾಜಿಕ) ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ. ಇದೇ ಬಸವಧರ್ಮದ ವೈಶಿಷ್ಟ್ಯ.

"ಶಿವಭಕ್ತರೇ ಅಧಿಕರು ನೋಡಯ್ಯಾ
ಇದಕ್ಕೆ ಅಧಿಕವಾಗಿ ಜಂಗಮವ ಕಂಡೆ.
ಈ ದ್ವಿವಿಧವನೊಂದೆ ಎಂದು ನಂಬಿದೆ
ಕೂಡಲಸಂಗಮದೇವಾ."

ಹೀಗೆ ವಚನ ಸಾಹಿತ್ಯ ಈ ಜಗತ್ತಿನ ಗೌರವ ಕಾಪಾಡುತ್ತದೆ. ಭೂಮಿಯ ಮಹತ್ವ ಸಾರುತ್ತದೆ. ಲೋಕದ ಜನರ ಹಿತಚಿಂತನೆ ಮಾಡುತ್ತದೆ. ಮಾನವರ ಹಿತ ಕಾಪಾಡುವುದೇ ಸಾಹಿತ್ಯದ ಮುಖ್ಯ ಉದ್ದೇಶವಾಗಿದೆ. ವಚನ ಸಾಹಿತ್ಯ ಮಾನವನ ಹಿತ ಕಾಪಾಡುವ ಕ್ರಮ ವಿಶ್ವಸಾಹಿತ್ಯಕ್ಕೆ ಮಾರ್ಗದರ್ಶಕವಾಗಿದೆ. ಇಲ್ಲಿಯ ವರೆಗೆ ಲಭ್ಯವಾದ ೨೦ ಸಾವಿರದಷ್ಟು ವಚನಗಳು ಜಗತ್ತಿನ ಎಲ್ಲ ಜನಸಮುದಾಯಗಳ ಆಸ್ತಿಯಾಗಿವೆ. ಈ ಆಸ್ತಿಯನ್ನು ಜಗತ್ತಿಗೆ ಹಂಚುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ.

ವಚನ ಸಾಹಿತ್ಯವು ಕನ್ನಡದ ವಿಶಿಷ್ಟ ಸಾಹಿತ್ಯವಾಗಿದೆ. ಆದರೆ ಇದು ಸಂಸ್ಕೃತ ಸಾಹಿತ್ಯದ ಪರಿಕಲ್ಪನೆಯಂತೆ ಕಾಂತಾಸಮ್ಮಿತವಾದ ಸಾಹಿತ್ಯವಲ್ಲ ಆತ್ಮಸಮ್ಮಿತವಾದ ಸಾಹಿತ್ಯ. ವಚನಗಳನ್ನು ಓದುವಾಗ ನಮ್ಮ ಆತ್ಮವೇ ನಮಗೆ ಉಪದೇಶ ಮಾಡಿದಂತಾಗುತ್ತದೆ. ವಚನಗಳು ವಚನಕಾರರ ಆತ್ಮನಿವೇದನೆಯಾಗಿರುವ ಕಾರಣ ಅವು ಆತ್ಮಸಮ್ಮಿತವಾಗಿವೆ. ರಾಜಾಜ್ಞೆಯಂಥ ಪ್ರಭುಸಮ್ಮಿತ ವಚನಗಳೂ ಇವೆ. ಗೆಳೆಯನ ಹಾಗೆ ತಿಳಿಹೇಳುವ ಮಿತ್ರಸಮ್ಮಿತ ವಚನಗಳೂ ಇವೆ. ಸತಿಯ ಹಾಗೆ ಸೂಚ್ಯವಾಗಿ ಹೇಳುವ ಕಾಂತಾಸಮ್ಮಿತ ವಚನಗಳೂ ಇವೆ. ವಚನದಲ್ಲಿ ಧರ್ಮವೂ ಇದೆ, ಕಾವ್ಯಧರ್ಮವೂ ಇದೆ, ಜೀವನಧರ್ಮವೂ ಇದೆ. ಒಟ್ಟಾರೆ ರಚನೆಯಲ್ಲಿ ಕನ್ನಡದ ಮೊದಲ ನವ್ಯಕಾವ್ಯವಾಗಿರುವ ಹಾಗೂ ತಿರುಳಿನಲ್ಲಿ ಮೊದಲ ಬಂಡಾಯ ಕಾವ್ಯವಾಗಿರುವ ವಚನಗಳು ಬದುಕಿನ ದಾರಿದೀಪಗಳಾಗಿವೆ.

ಸರ್ವರಿಗೂ ಮತ್ತೊಮ್ಮೆ ಶರಣುಶರಣಾರ್ಥಿ.

ಪರಿವಿಡಿ (index)
*
Previousಲಿಂಗಾಯತ ಧರ್ಮ ಪ್ರಶ್ನೋತ್ತರ ವಚನ ಸಾಹಿತ್ಯ ಬಿತ್ತಿ ಬಸವ ತತ್ವ ಬೆಳೆಯೋಣ (By Sowing Vachanas We Grow Lingayatism) Next
*