ಇಷ್ಟಲಿಂಗ ಜನಕ ಗುರು ಬಸವಣ್ಣ

ಲಿಂಗಾಯತ ಧರ್ಮದ ವಿಶೇಷವೆಂದರೆ, ದೇವರನ್ನು "ಇಷ್ಟಲಿಂಗ" ರೂಪದಲ್ಲಿ ಪೂಜೆ ಸಲ್ಲಿಸುವುದು. ಆದ್ದರಿಂದ ಇಷ್ಟಲಿಂಗವನ್ನು ರೂಪಿಸಿದವರೆ ಲಿಂಗಾಯತ ಧರ್ಮ ಸ್ಥಾಪಕರು. ಬಸವಣ್ಣನವರಿಗಿಂತ ಪೂರ್ವದಲ್ಲಿ ದೇವರನ್ನು, ಲಿಂಗಾಕಾರದಲ್ಲಿ (ಗುಡಿಯಲ್ಲಿರುವ ಲಿಂಗ), ಮೂರ್ತಿ ರೂಪದಲ್ಲಿ (ದೇವಾಲಯಗಳಲ್ಲಿ), ಗಿಡಮರಗಳ ರೂಪದಲ್ಲಿ, ಪ್ರಾಣಿಗಳ ರೂಪದಲ್ಲಿ ಪೂಜಿಸುತ್ತಿದ್ದರು. ಇನ್ನು ಕೆಲವರು ಸಣ್ಣ ಆಕಾರದ ಲಿಂಗವನ್ನು ಪೂಜಿಸುತ್ತಿದ್ದರು ಹಾಗೂ ಇದನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಿದ್ದರು, ತಲೆಯಲ್ಲಿ (ಕೂದಲಲ್ಲಿ) ಅಥವಾ ಜೋಳಿಗೆಯಲ್ಲಿ ಇದನ್ನು ಒಯ್ಯುತ್ತಿದ್ದರು ಇದನ್ನು ಚರಲಿಂಗ ಎನ್ನುತ್ತಾರೆ. ಆದರೆ ಇದು ಇಷ್ಟಲಿಂಗವಲ್ಲ. ಬಸವಣ್ಣನವರು ಇಷ್ಟಲಿಂಗದ ರೂಪದಲ್ಲಿ ದೇವನನ್ನು ಪೂಜಿಸುವದನ್ನು ತೋರಿಸಿಕೊಟ್ಟರು, ಈ ಕೆಳಗಿನ ವಚನವನ್ನು ಗಮನಿಸಿ:.

ಮುನ್ನಿನ ಜನ್ಮದಲ್ಲಿ ಗುರುಲಿಂಗಜಂಗಮವ ಪೂಜಿಸಲರಿಯದ ಕಾರಣ
ಬಹು ಜನ್ಮಕ್ಕೆ ತಂದು ಇಕ್ಕಿದೆಯಯ್ಯಾ ಎನ್ನನು
ಎನಗೆ ಗುರು ಪಥವ ತೋರಿದವರಾರು?
ಲಿಂಗ ಪಥವ ತೋರಿದವರಾರು?
ಜಂಗಮ ಪಥವ ತೋರಿದವರಾರು?
ಪಾದೋದಕ ಪ್ರಸಾದ ಪಥವ ತೋರಿದವರಾರು?
ತೋರುವ ಮನವೆ ನೀವೆಂದರಿತೆ,
ಎನ್ನಗಿನ್ನಾವ ಭವವಿಲ್ಲ,
ಕೂಡಲಸಂಗಮದೇವ
. - ಸ. ವ. ಸಂ.-೧ ವಚನ ಸಂಖ್ಯೆ: ೮೩೩

ಈ ವಚನದಲ್ಲಿ ಬಸವಣ್ಣವರು ಸ್ಪಷ್ಟವಾಗಿ "ತೋರುವ ಮನವೆ" ಎಂದು ಹೇಳಿದ್ದಾರೆ, ಇದನ್ನು ಗಮನಿಸಿದರೆ, ಬಸವಣ್ಣವರಿಗೆ, ಬೇರೆ ಯಾವುದೆ ಗುರುಗಳು, ಋಷಿಗಳು ಅಥವಾ ಇನ್ಯಾರೂ ಕೊಟ್ಟಿಲ್ಲವಂದು ಸ್ಪಷ್ಟವಾಗುತ್ತದೆ. ಒಂದು ವೇಳೆ ಬೇರೆ ಯಾರಾದರು ಕೊಟ್ಟಿದ್ದರೆ ಬಸವಣ್ಣನವರು ಅವರ ಹೆಸರನ್ನು ಇಲ್ಲಿ ಬಳಸುತ್ತಿದ್ದರು. ತೋರುವ ಮನವೇ ಎಂದು ಬಳಸುತ್ತಿರಲಿಲ್ಲ.

ಬಸವಣ್ಣನವರಲ್ಲದೆ ಈಗ ನಾವು ಬೇರೆ ಶರಣರ ವಚನಗಳನ್ನು ಗಮನಿಸೋಣ

ಬಸವಣ್ಣ ಮಾಡಲಿಕ್ಕೆ ಗುರುವಾಯಿತ್ತು
ಬಸವಣ್ಣ ಮಾಡಲಿಕ್ಕೆ ಲಿಂಗವಾಯಿತ್ತು
ಬಸವಣ್ಣ ಮಾಡಲಿಕ್ಕೆ ಜಂಗಮವಾಯಿತ್ತು
ಬಸವಣ್ಣ ಮಾಡಲಿಕ್ಕೆ ಪ್ರಸಾದವಾಯಿತ್ತು
ಇರೇಳು ಲೋಕವಾಯಿತ್ತು ಬಸವಣ್ಣನಿಂದ ಕಲಿದೇವಯ್ಯಾ.
- ಮಡಿವಾಳ ಮಾಚಿದೇವ ಸವಸ ೮/೬೮೨ ವ. ಸಂ. ೨೪೫

ಮಡಿವಾಳ ಮಾಚಿದೇವ ಶರಣರು ಈ ವಚನದಲ್ಲಿ ಗುರು, ಲಿಂಗ, ಜಂಗಮ, ಪ್ರಸಾದ ಬಸವಣ್ಣನವರಿಂದಲೆ ಅಯುತು ಅಂತ ಸ್ಪಷ್ಟವಾಗಿ ತಿಳಿಸಿದ್ದಾರೆ. ಒಂದು ವೇಳೆ ಬೇರೆ ಯಾರಾದರು ಕೊಟ್ಟಿದ್ದರೆ ಅವರ ಹೆಸರನ್ನು ಉಲ್ಲೇಖಿಸುತ್ತಿದ್ದರು. ಬೇರೆ ಎಲ್ಲಾ ಶರಣರು ಇದ್ದರೂ ಸಹ ಬಸವಣ್ಣ ಮಾಡಲಿಕ್ಕೆ ಗುರು, ಲಿಂಗ, ಜಂಗಮ, ಪ್ರಸಾದ ಆಯಿತ್ತು ಅಂತ ಹೇಳಿ ಬೇರೆ ಯಾರಿಂದಲೋ ಲಿಂಗ ಅಯಿತ್ತು ಅನ್ನುವದನ್ನು ಅಲ್ಲಗಳೆದಂತಾಯುತು.

ಎತ್ತೆತ್ತ ನೋಡಿದಡತ್ತತ್ತ ಬಸವನೆಂಬ ಬಳ್ಳಿ,
ಎತ್ತಿ ನೋಡಿದಡೆ ಲಿಂಗ ವೆಂಬ ಗೊಂಚಲು,
ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯಾ,
ಆಯತವು ಬಸವಣ್ಣನಿಂದ, ಸ್ವಾಯತವು ಬಸವಣ್ಣನಿಂದ ಸನ್ನಿಹಿತವು ಬಸವಣ್ಣನಿಂದ,
ಗುರು ಬಸವಣ್ಣನಿಂದ, ಲಿಂಗ ಬಸವಣ್ಣನಿಂದ, ಜಂಗಮ ಬಸವಣ್ಣನಿಂದ,
ಪಾದೋದಕ ಬಸವಣ್ಣನಿಂದ, ಪ್ರಸಾದ ಬಸವಣ್ಣನಿಂದ
ಅತ್ತ ಬಲ್ಲಡೆ ನೀವು ಕೇಳಿರೇ, ಇತ್ತ ಬಲ್ಲಡೆ ನೀವು ಕೇಳಿರೇ,
ಬಸವ ಬಸವ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ ಶೂನ್ಯ ಕಾಣಾ ಕಲಿದೇವರದೇವಾ.
- ಮಡಿವಾಳ ಮಾಚಿದೇವ ಸವಸ ೮/೫೨೬

ಮಡಿವಾಳ ಮಾಚಿದೇವರು ತಮ್ಮ ಇನ್ನೊಂದು ವಚನದಲ್ಲಿ ಗುರು, ಲಿಂಗ, ಜಂಗಮ,ಪಾದೋದಕ, ಮತ್ತು ಪ್ರಸಾದ ಬಸವಣ್ಣನಿಂದ ಎಂದು ಹೇಳಿ ಇಷ್ಟಲಿಂಗ ಪೂಜೆ ಮಾಡುವಾಗ ಬಸವ ಬಸವ ಎಂದು ಮಜ್ಜನಕ್ಕೆರೆಯಲು ಹೇಳುತ್ತಾರೆ. ಈ ಮೂಲಕ ಇಷ್ಟಲಿಂಗದಾತ ಗುರು ಬಸವಣ್ಣವರವನ್ನು ನೆನೆಯಲು ತಿಳಿಸುತ್ತಾರೆ.

ಆದಿ ಬಸವಣ್ಣ ಅನಾದಿ ಲಿಂಗವೆಂಬರು, ಹುಸಿ ಹುಸಿ ಈ ನುಡಿಯ ಕೇಳಲಾಗದು,
ಆದಿ ಲಿಂಗ, ಅನಾದಿ ಬಸವಣ್ಣನು! ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,
ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು, ಪ್ರಸಾದವು ಬಸವಣ್ಣನನುಕರಿಸಲಾಯಿತ್ತು,
ಇಂತೀ ತ್ರಿವಿಧಕ್ಕೆ ಬಸವಣ್ಣನೇ ಕಾರಣನೆಂದರಿದೆನಯ್ಯಾ ಕೂಡಲಚೆನ್ನ ಸಂಗಮದೇವಾ.
- ಚೆನ್ನ ಬಸವಣ್ಣ ಸವಸ ೩/೫
ಇಷ್ಟಲಿಂಗವು ಬಸವಣ್ಣನವರಿಗಿಂತ ಮುಂಚೆ ಇತ್ತು ಎಂದು ಹೇಳುವವರಿಗೆ ಚೆನ್ನಬಸವಣ್ಣವರು ಮೇಲಿನ ವಚನದಲ್ಲಿ ಸ್ಪಷ್ಟವಾಗಿ ಇದು ಹುಸಿ ಎಂದು ಹೇಳಿದ್ದಾರೆ. ಮತ್ತು ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು, ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು, ಪ್ರಸಾದವು ಬಸವಣ್ಣನನುಕರಿಸಲಾಯಿತ್ತು, ಎಂದು ಈ ತ್ರಿವಿಧಕ್ಕೆ ಬೇರೆ ಯಾರೂ ಕಾರಣರಲ್ಲ ಬಸವಣ್ಣವರೆ ಕಾರಣ ಎಂದು ತಿಳಿಸಿದ್ದಾರೆ. ಇನ್ನು ಅನೇಕ ಶರಣರು ತಮ್ಮ ವಚನಗಳಲ್ಲಿ ಗುರು ಬಸವಣ್ಣನವರೆ ಇಷ್ಟಲಿಂಗ ಕೊಟ್ಟವರು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಬಸವ ಮಾಡಿದಡಾಯ್ತು ಭುವಿಗೆ ಭಕ್ತಿಯ ಬೆಳಕು

ಬಸವ ಮಾಡಿದಡಾಯ್ತು ಭುವಿಗೆ ಭಕ್ತಿಯ ಬೆಳಕು.
ಬಸವ ಮಾಡಿದಡಾಯ್ತು ಗುರುಲಿಂಗಜಂಗಮ ಪೂಜೆ.
ಬಸವ ಮಾಡಿದಡಾಯ್ತು ಲಿಂಗಾಂಗ ಸಾಮರಸ್ಯದ ಸುಧೆಯು.
ಬಸವ ಮಾಡಿದಡಾಯ್ತು ಭಕ್ತ ಭಕ್ತರಲಿ ಸಮಭಾವ.
ಎನ್ನ ಕಂಗಳೊಳಗಿಂಬಾದ ಬಸವ,
ಎನ್ನ ಮನ ಭಾವಂಗಳೊಳಗಾದ ಬಸವ,
ಎನ್ನಂತರಂಗ ತುಂಬಿ ನಿಂದಾತ ಬಸವ.
ಹೊರಗೆ ಗುರುಬಸವನ ಕೀರುತಿ.
ಬಸವನ ಮಣಿಹವೇ ಎನ್ನ ಪ್ರಾಣವಿಂದಿಂಗೆ.
ಬಸವಣ್ಣಪ್ರಿಯ ಚೆನ್ನಸಂಗಯ್ಯನ ಸಾಕ್ಷಿಯಾಗಿ
ಬಸವಾ ಬಸವಾ ಜಯತು
ಗುರು ಸಂಗನಬಸವಾ ಜಯತು - ನಾಗಲಾಂಬಿಕೆ 797

ಬಸವ ಬಿಲ್ಲಾಳಾಗಿ, ಹೊಸಭಕ್ತಿ ಅಂಬಾಗಿ, ಎಸೆದನಯ್ಯಾ ಆ ಲಿಂಗವನು ಗುರಿಮಾಡಿ.
ಶಿಶುವ ಬಾಣ ಕೊಂಡು, ಬಸುರಮಧ್ಯವ ತಾಗೆ, ಹೊಸದೆಸೆಗಳೆಲ್ಲಾ ಕಾಣಬಂದವಯ್ಯಾ !
ಭಸ್ಮದೆಣ್ಣೆಯ ಹೂಸಿ ಕೂಡಲಚೆನ್ನಸಂಗನಲ್ಲಿ ಬಸವಪೂಯದ ಬಂದು ಆರೈದ ಲಿಂಗವನು - ಚೆನ್ನಬಸವಣ್ಣ 3/655

ಬಸವಣ್ಣನೆ ಗುರುವೆಂದರಿಯರಲ್ಲ, ಬಸವಣ್ಣನೆ ಲಿಂಗವೆಂದರಿಯರಲ್ಲ,
ಬಸವಣ್ಣನೆ ಕಾರಣವೆಂದರಿಯರಲ್ಲ, ಬಸವಣ್ಣನೆ ಪ್ರಸಾದವೆಂದರಿಯರಲ್ಲ.
ಬಸವಣ್ಣನೆ ಗುರುವೆಂದು ಅನುಮಿಷನರಿದ.
ಬಸವಣ್ಣನೆ ಲಿಂಗವೆಂದು ಚೆನ್ನಬಸವಣ್ಣನರಿದ.
ಬಸವಣ್ಣನೆ ಜಂಗಮವೆಂದು ಪ್ರಭುದೇವರರಿದರು.
ಬಸವಣ್ಣನೆ ಪ್ರಸಾದವೆಂದು, ಮರುಳಶಂಕರದೇವರು ಅರಿದು ಆಚರಿಸಿದರು.
ಇದು ಕಾರಣ, ಬಸವಣ್ಣನೆ ಗುರು, ಬಸವಣ್ಣನೆ ಲಿಂಗ,
ಬಸವಣ್ಣನೆ ಜಂಗಮ, ಬಸವಣ್ಣನೆ ಪ್ರಸಾದವೆಂದರಿಯದ
ಅನಾಚಾರಿಗಳ ಎನಗೆ ತೋರದಿರಯ್ಯ,
ಗುಹೇಶ್ವರಲಿಂಗದಲ್ಲಿ ಪ್ರಭುವೆ ಸಾಕ್ಷಿಯಾಗಿ
ಬಸವಪ್ರಿಯ ಕೂಡಲಸಂಗಮದೇವಾ. - ಗುಹೇಶ್ವರಲಿಂಗದಲ್ಲಿ ಪ್ರಭುವೆ ಸಾಕ್ಷಿಯಾಗಿ ಬಸವಪ್ರಿಯ ಕೂಡಲಸಂಗಮದೇವ/1236

ಗುರು ಬಸವಣ್ಣನೇ ಪ್ರಥಮಗುರು

ಆಯತದಲ್ಲಿ ಪೂರ್ವಾಚಾರಿಯ ಕಂಡೆ.
ಸ್ವಾಯತದಲ್ಲಿ ಪೂರ್ವಾಚಾರಿಯ ಕಂಡೆ.
ಸನ್ನಹಿತದಲ್ಲಿ ಪೂರ್ವಾಚಾರಿಯ ಕಂಡೆ.
ಗುಹೇಶ್ವರಲಿಂಗದಲ್ಲಿ ಪೂರ್ವಾಚಾರಿ ಸಂಗನಬಸವಣ್ಣನ,
ಶ್ರೀಪಾದಕ್ಕೆ ನಮೋ ನಮೋ ಎಂಬೆನು. - ಅಲ್ಲಮಪ್ರಭು ಸವಸ-೯೦೪

ಆದಿಯಲ್ಲಿ ನೀನೆ ಗುರುವಾದ ಕಾರಣ ನಿನ್ನಿಂದ ಹುಟ್ಟಿತ್ತು ಲಿಂಗ.
ಆದಿಯಲ್ಲಿ ನೀನೆ ಲಿಂಗವಾದ ಕಾರಣ ನಿನ್ನಿಂದ ಹುಟ್ಟಿತ್ತು ಜಂಗಮ.
ಆದಿಯಲ್ಲಿ ನೀನೆ ಜಂಗಮವಾದ ಕಾರಣ ನಿನ್ನಿಂದ ಹುಟ್ಟಿತ್ತು ಪ್ರಸಾದ.
ಆದಿಯಲ್ಲಿ ನೀನೆ ಪ್ರಸಾದಿಯಾದ ಕಾರಣ ನಿನ್ನಿಂದ ಹುಟ್ಟಿತ್ತು ಪಾದೋದಕ.
ಇಂತೀ_ಗುರು ಲಿಂಗ ಜಂಗಮ ಪ್ರಸಾದ ಪಾದೋದಕ ಸ್ವರೂಪ
ನೀನೆಯಾದ ಕಾರಣ;
ಜಂಗಮ ಪ್ರಾಣಿಯಾಗಿ ಸದಾಚಾರಿಯಾದೆ,
ಅದು ಕಾರಣ ನೀನೆ ಸರ್ವಾಚಾರಸಂಪನ್ನನಾಗಿ,
ಪೂರ್ವಾಚಾರಿಯೂ ನೀನೆಯಾದೆ,
ಅದು ಕಾರಣ, ಗುಹೇಶ್ವರಲಿಂಗದಲ್ಲಿ ಚಂದಯ್ಯಂಗೆ.
ಲಿಂಗದ ನಿಜವ ತಿಳುಹಾ ಸಂಗನಬಸವಣ್ಣಾ ! - ಅಲ್ಲಮಪ್ರಭು ಸವಸ-894


ಅಂಗದ ಮೇಲೆ ಧರಿಸುವ ಇಷ್ಟಲಿಂಗದ ಆಯತ, ಪ್ರಾಣದಲ್ಲಿ ಅಳವಡಿಸಿಕೊಳ್ಳುವ ಅತ್ಮಲಿಂಗದ ಸ್ವಾಯತ, ಭಾವದಲ್ಲಿ ಅನುಭವಿಸುವ ಭಾವಲಿಂಗ ಸನ್ನಿಹಿತ, ಈ ತತ್ವ-ಅನುಭವಗಳಿಗೆ ಗುರು ಬಸವಣ್ಣನೇ ಪ್ರಥಮಗುರು. ಇಂತಹ ಪೂರ್ವಾಚಾರಿ ಸಂಗನ ಬಸವಣ್ಣನ ಶ್ರೀ ಪಾದಕ್ಕೆ ನಮಿಸುತ್ತೇನೆ.

ಬಸವಣ್ಣಾ ಓಂಕಾರದಿಂದತ್ತತ್ತ ನೀನೆ;
ಬಸವಣ್ಣಾ ನಾದಬಿಂದುಕಳೆಗಳಿಂದತ್ತತ್ತ ನೀನೆ,
ಬಸವಣ್ಣಾ ಪ್ರಥಮಾಚಾರ್ಯ ನೀನೆ,
ಬಸವಣ್ಣಾ ಲಿಂಗಾಚಾರ್ಯ ನೀನೆ,
ಬಸವಣ್ಣಾ ಜಂಗಮಾಚಾರ್ಯ ನೀನೆ,
ಬಸವಣ್ಣಾ ಪ್ರಸಾದಾಚಾರ್ಯ ನೀನೆ,
ಬಸವಣ್ಣಾ ಎನಗೆ ಸರ್ವಾಚಾರ್ಯ ನೀನೆ,
ನೀನೇ ಗತಿಮತಿಯಾಗಿ ಎನ್ನನುಳುಹಿದ ಕಾರಣ
ಕೂಡಲಚೆನ್ನಸಂಗಮದೇವಾ
ಆವ ವರ್ಣವಿಲ್ಲದಂದು 'ಓಂ ನಮಃ ಶಿವಾಯ' ಎನುತಿರ್ದೆನು.
- ಚೆನ್ನಬಸವಣ್ಣ 3/14

ಡಾ|| ಎಸ್. ಮುನವಳ್ಳಿ[3] ಅವರು ತಮ್ಮ ಪುಸ್ತಕದಲ್ಲಿ ಬಸವಣ್ಣನವರೆ ಲಿಂಗಾಯತ ಧರ್ಮ ಸ್ಥಾಪಕರು ಎಂಬುದಕ್ಕೆ ಇತಿಹಾಸದ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಇದಲ್ಲದೆ ಬಸವಣ್ಣನ ನಂತರದ ಕಾಲದಲ್ಲಿಯ ಸಾಹಿತ್ಯದಲ್ಲಿಯೂ ಬಸವಣ್ಣನವರೆ ಇಷ್ಟಲಿಂಗವನ್ನು ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಇದರಲ್ಲಿ ಮುಖ್ಯವಾಗಿ

೧) ಹಂಪೆಯ ಕವಿ ಹರಿಹರ ಕ್ರಿ. ಶ. ೧೧೯೫
೨) ಪಾಲ್ಕುರಿಕೆ ಸೋಮನಾಥ ತೆಲುಗು ಭಾಷೆಯಲ್ಲಿ ಕ್ರಿ. ಶ. ೧೨೦೦ರ ಅಸುಪಾಸಿನಲ್ಲಿ
೩) ಚಾಮರಸ ತನ್ನ ಪ್ರಭುಲಿಂಗ ಲೀಲೆ ಯಲ್ಲಿ ಕ್ರಿ. ಶ. ೧೪೦೦ ಅಸುಪಾಸಿನಲ್ಲಿ
೪) ಮಗ್ಗೆ ಮಾಯಿದೇವ ಪ್ರಭು ಕ್ರಿ. ಶ. ೧೪೩೦
೫) ಚತುರ್ಮುಖ ಬೊಮ್ಮರಸ ಕ್ರಿ. ಶ. ೧೫೦೦ರ ಆಸುಪಾಸಿನಲ್ಲಿ
೬) ಗುಬ್ಬಿಯ ಮಲ್ಲಣ್ಣರಾಯ ತನ್ನ ಗುರುರಾಜ ಚರಿತ್ರೆಯಲ್ಲಿ ಕ್ರಿ. ಶ. ೧೬೫೦
೭) ಮರಿ ತೋಂಟಾದಾರ್ಯ ಕ್ರಿ. ಶ. ೧೫೬೦
೮) ವಿರೂಪಾಕ್ಷ ಪಂಡಿತ ತನ್ನ ಚೆನ್ನಬಸವ ಪುರಾಣದಲ್ಲಿ ಕ್ರಿ. ಶ. ೧೫೮೫
೯) ಲಕ್ಕಣ್ಣ ದಂಡೇಶ ತನ್ನ ಶಿವತತ್ವ ಚಿಂತಾಮಣಿಯಲ್ಲಿ ಕ್ರಿ. ಶ. ೧೪೨೮
೧೦) ಗುರುರಾಜ ಸಂಸ್ಕೃತ ಭಾಷೆಯಲ್ಲಿ ೧೫ನೇ ಶತಮಾನದಲ್ಲಿ
೧೧) ಕೆಳದಿಯ ಬಸವರಾಜ ಸಂಸ್ಕೃತ ಭಾಷೆಯಲ್ಲಿ

ರೆ. ಎಫ಼್ ಕಿಟ್ಟೆಲ್[4] ಅವರು ಕನ್ನಡ-ಇಂಗ್ಲೀಷ ಶಬ್ದಕೋಶದಲ್ಲಿ ಇಂಗಳೇಶ್ವರ ಪದದ ಅರ್ಥವನ್ನು ಈ ರೀತಿ ಕೊಟ್ಟಿದ್ದಾರೆ. "Meaning to the word” Ingaleshwara” is Name of the birth place of Basava the founder of Lingavanta ". ಹಿರೆಮಲ್ಲೂರ ಈಶ್ವರನ್ ತಮ್ಮ "ಲಿಂಗಾಯತ ಒಂದು ಅಧ್ಯಯನ"[1] ಪುಸ್ತಕದಲ್ಲಿ ಲಿಂಗಾಯತವು ಬಸವಣ್ಣವರಿಗಿಂತ ಪೂರ್ವದಲ್ಲಿ ಇರಲಿಲ್ಲ ಎಂದು ತಿಳಿಸಿದ್ದಾರೆ. ಪ್ರೋ. ವಿ. ವಿ. ಸಂಗಮದ[2] ಅವರು ಬಸವಣ್ಣವರು ಲಿಂಗಾಯತ ಧರ್ಮ ಸ್ಠಾಪಕರು ಎಂದು ತಿಳಿಸಿದ್ದಾರೆ. ಇದಲ್ಲದೆ ಈ ಕೆಳಗಿನ ಸಾಹಿತಿ, ಕವಿ, ಸಮಾಜದ ಪ್ರಮುಖರು ಬಸವಣ್ಣನವರೆ ಲಿಂಗಾಯತ ಧರ್ಮ ಸ್ಥಾಪಕರೆಂದು ತಿಳಿಸಿದ್ದಾರೆ.

೧) ಡಾ. ಸಿದ್ರಾಮಪ್ಪ ಪಾವಟೆ.
೨) ಶ್ರೀ ಹರ್ಡೆಕರ್ ಮಂಜಪ್ಪ
೩) ಶ್ರೀ ಉತ್ತಂಗಿ ಚೆನ್ನಪ್ಪ
೪) ಶ್ರೀ ಹಳೆಪೇಟೆ ಚಿಂತಾಮಣಿ
೫) ಶ್ರೀ ಎಮ್. ಆರ್. ಶ್ರೀನಿವಾಸ ಮೂರ್ತಿ
೬) ಶ್ರೀ ಅ. ನ. ಕೃಷ್ಣ ರಾವ
೭) ಶ್ರೀ ಆರ್. ಆರ್. ದೀವಾಕರ
೮) ಶ್ರೀ ಪಾಟೀಲ ಪುಟ್ಟಪ್ಪ
೯) ಡಾ. ಸಿದ್ದಯ್ಯ ಪುರಾಣಿಕ
೧೦) ಡಾ. ಡಿ. ಜವರೇ ಗೌಡ
೧೧) ಶ್ರೀ ಜಿ. ಎಮ್. ಪಾಟೀಲ (ನಿವೃತ್ತ ಗ್ರಂಥಾಲಯ ಅಧಿಕಾರಿ ಧಾರವಾಡ ವಿಶ್ವವಿದ್ಯಾಲಯ)
೧೨) Gazetteer of Govt of Mysore, @ 1876, Founder of Lingayath is Guru Basavanna.[5]

ಮತ್ತು ಇನ್ನೂ ಹಲವರು. ಇದಲ್ಲದೆ ಭಾರತದ ಯಾವುದೇ ಸಾಹಿತ್ಯದಲ್ಲಿ ೧೨ನೇ ಶತಮಾನಕ್ಕಿಂತ ಮುಂಚೆ ಇಷ್ಟಲಿಂಗದ ಕುರಿತು ಎಲ್ಲಿಯೂ ಉಲ್ಲೇಖಿಸಿಲ್ಲ. ಇಷ್ಟಲಿಂಗದ ಕುರಿತು ನಮಗೆ ಸಿಗುವ ಸಾಹಿತ್ಯ ೧೨ನೇ ಶತಮಾನದ ನಂತರವೇ. ಡಾ. ಪಿ. ಬಿ. ದೇಸಾಯಿ ಅವರ “Basaveshwara and his times” ಪುಸ್ತಕವು ಇತಿಹಾಸದ ಶಾಸನಗಳು, ಪುರಾಣಗಳು, ಕಾವ್ಯ ಎಲ್ಲವನ್ನು ಉಲ್ಲೇಖಿಸಿ ಬಸವಣ್ಣನವರೆ ಲಿಂಗಾಯತ ಸ್ಥಾಪಕರು ಎಂದು ತಿಳಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿದ ಪುಸ್ತಕ "ಯುಗ ಯತ್ರ್ ಭಾರತೀಯ ಸಂಸ್ಕೃತಿ" ಸಹ ಬಸವಣ್ಣನವರೆ ಲಿಂಗಾಯತ ಸ್ಥಾಪಕರು ಎಂದು ಸೂಚಿಸುತ್ತದೆ.

_____________________________________________________________________________________________________________________________
[1] Hiremalluru Eshwaran “Lingayath Dharma; Ondu Adhyana”, Page 85.
[2] Page no 1 of Basavannanavru Lingayath Dharma Samsthapakaru (Basavanna the founder of Lingayath religion). By: Prof: V. V. Sangamad.Pub: Basava Balaga, Akkamahadevi Road, Davanagere-3
[3] S. Munavalli. “The Veerashiava Religion its practices and principles”, Page 36,
[4] Ref. F. Kittel, Kannada-English Dictionary, 1894, first published in Mangalore,ISBN:8120603079.
[5] “Kalyana Kirana” Religious monthly magazine May-June issue. Reprint of Gazetteer of Govt. published in 1876 at Mysore, Volume I.

ಪರಿವಿಡಿ (index)
*
Previousಲಿಂಗಾಯತ ಸೇವೆಗಳುಲಿಂಗಾಯತ ಯಾರು? Who is LingayatNext
*