ಪೂಜ್ಯ ಶ್ರೀ ಡಾ|| ಮಹಾಜಗದ್ಗುರು ಮಾತೆ ಮಹಾದೇವಿ

Her Holiness Dr. Mate Mahadevi, ಪೂಜ್ಯ ಶ್ರೀ ಡಾ|| ಮಹಾಜಗದ್ಗುರು ಮಾತೆ ಮಹಾದೇವಿ

ಪೂಜ್ಯ ಶ್ರೀ ಮಾತಾಜಿಯವರು ಚಿನ್ಮೂಲಾದ್ರಿಯ ಚಿತ್ಕಳೆಯಾಗಿ ೧೯೪೬ರಲ್ಲಿ ಜನಿಸಿ, ವಿಜ್ಞಾನ-ತತ್ವಜ್ಞಾನ ಸ್ನಾತಕೋತ್ತರ ಪದವಿಧರೆಯಾಗಿ ೧೯೬೬ರಲ್ಲಿ ಪೂಜ್ಯ ಶ್ರೀ ಸದ್ಗುರು ಲಿಂಗಾನಂದ ಸ್ವಾಮಿಗಳವರಿಂದ ಜಂಗಮ ದೀಕ್ಷೆ ಪಡೆದು, ಮಾತೆ ಮಹಾದೇವಿ ಎಂಬ ಅಭಿಧಾನ ತಾಳಿ, ೧೯೭೦ರಲ್ಲಿ ವಿಶ್ವವಿನೂತನ ಸ್ತ್ರೀ ಜಗದ್ಗುರು ಪೀಠವನ್ನಲಂಕರಿಸಿ, ಭಕ್ತಿ-ಜ್ಞಾನ-ವಿರಕ್ತಿಗಳ ದಿವ್ಯ ಸಂಗಮವಾಗಿ ಶೋಭಿಸುತ್ತಿರುವರು.

ಕಿರಿದಾದ ವಯಸ್ಸಿನಲ್ಲಿಯೇ ಹಿರಿದಾದ ಜ್ಞಾನಗಳಿಸಿ, ಜಗದ ಜಾಗೃತಿಗಾಗಿ ಆ ಜ್ಞಾನಸುಧೆಯನ್ನು ಪ್ರವಚನ, ಗ್ರಂಥಗಳ ಮೂಲಕ ಜನತೆಗೆ ಧಾರೆಯೆರೆಯುತ್ತಲಿರುವ ಪೂಜ್ಯ ಶ್ರೀ ಮಾತೆಯವರ ಮೊದಲ ಕಾದಂಬರಿ ಬಹುಮಾನ ವಿಜೇತ "ಹೆಪ್ಪಿಟ್ಟ ಹಾಲು", ಅಕ್ಕಮಹಾದೇವಿಯ ಜೀವನವನ್ನು ಕುರಿತಾದ "ತರಂಗಿಣಿ" ಮಾತೆಯವರ ಹಸ್ತದಲ್ಲಿ ರೂಪುಗೊಂಡ ದ್ವಿತೀಯ ಕಾದಂಬರಿ.

ಬಸವ ಧರ್ಮದ ಪರಮೋಚ್ಛ ಪೀಠವನ್ನೇರಿದ ಪ್ರಥಮ ಜಗದ್ಗುರುಗಳಾದ ಪೂಜ್ಯ ಶ್ರೀಮನ್ ನಿರಂಜನ ಮಹಾ ಜಗದ್ಗುರು ಲಿಂಗಾನಂದ ಮಹಾಸ್ವಾಮಿಗಳು ದಿ. ೩೦-೬-೧೯೯೫ರಂದು ಲಿಂಗೈಕ್ಯರಾದ ಮೇಲೆ ಪೂಜ್ಯ ಶ್ರೀ ಮಾತಾಜಿಯವರೇ ದ್ವಿತೀಯ ಪೀಠಾಧಿಕಾರಿಗಳಾಗಿದ್ದಾರೆ. ೧೯೮೮ರಲ್ಲಿ ಆರಂಭಿಸಿ ಪ್ರತಿ ವರ್ಷ ಜನವರಿ ೧೧ ರಿಂದ ೧೫ ರವರೆಗೆ ಶರಣ ಮೇಳವನ್ನು ನಡೆಸಿಕೊಂಡು ಬರುತ್ತಿರುವುದು ಪೂಜ್ಯ ಶ್ರೀ ಮಾತಾಜಿಯವರ ಅಗ್ಗಳಿಕೆ. ಮಾತಾಜಿ, ಬಸವಾತ್ಮಜೆ ಇವರ ಕಾವ್ಯನಾಮ. ಸಚ್ಚಿದಾನಂದ ಇವರ ವಚನ ಮುದ್ರಿಕೆ.

ನಿರ್ಭೀತ ನಿಲುವು ತತ್ವ ನಿಷ್ಠೆ, ಸತ್ಯಪ್ರಿಯತೆ, ಸಮಾಜೋದ್ಧಾರದ ಕಳಕಳಿ, ಇವುಗಳಿಂದ ವೈಶಿಷ್ಟಪೂರ್ಣರಾಗಿರುವ ಮಾತೆಯವರು ತಮ್ಮ ಅಮೋಘವಾಣಿಯಿಂದ ಜನರನ್ನು ಆಕರ್ಷಿಸಿ, ಮುದಗೊಳಿಸಿ, ಚೇತನಿಸುತ್ತಾರೆ. ದೈವೀದತ್ತ ಪ್ರತಿಭೆ, ಅಸಾಮಾನ್ಯ ಪಾಂಡಿತ್ಯ, ದಿವ್ಯ ಮಧುರವಾಣಿ, ಪ್ರಶಾಂತ ಚಿತ್ತಗಳ ಸಂಗಮವಾದ ಶ್ರೀ ಮಾತೆಯವರು ವಿಶ್ವಧರ್ಮದ ಮಣಿಹ ಹೊತ್ತು ಸ್ವದೇಶ-ವಿದೇಶಗಳಲ್ಲೂ ಸಂಚರಿಸಿ, ಭಾರತದ ಅಧ್ಯಾತ್ಮಿಕ ಸಂದೇಶವನ್ನು ಯಶಸ್ವಿಯಾಗಿ ಸಾರುತ್ತಿದ್ದಾರೆ.

೨೦೦೨ರಲ್ಲಿ ಬಸವ ಕಲ್ಯಾಣದಲ್ಲಿ ಅಲ್ಲಮಪ್ರಭು ಶೂನ್ಯಪೀಠವನ್ನು ಸ್ಥಾಪಿಸಿ 12ನೇ ಶತಮಾನದ ಶೂನ್ಯಪೀಠ ಪರಂಪರೆಯನ್ನು ಮು೦ದುವರೆಸಿಕೊ೦ಡು ಬರುತ್ತಿದ್ದಾರೆ; ಮಾತ್ರವಲ್ಲ ಬಸವ ಕಲ್ಯಾಣದಲ್ಲಿ 108 ಅಡಿ ವಿಶ್ವಗುರು ಬಸವಣ್ಣನವರ ಮೂತಿ೯ಯನ್ನು ಸಹ ಸ್ಥಾಪಿಸಿದ್ದಾರೆ. ೨೦೦೭ರಲ್ಲಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಅಳತ್ ಗ್ರಾಮದಲ್ಲಿರುವ ಅಲ್ಲಮ ಗಿರಿಯಲ್ಲಿ ಅಲ್ಲಮಪ್ರಭು ಯೋಗಪೀಠವನ್ನು ಸ್ಥಾಪಿಸಿದ್ದಾರೆ. ೨೦೦೬ರಲ್ಲಿ ರಾಷ್ಟ್ರದ ರಾಜಧಾನಿ ನವ ದೆಹಲಿಯಲ್ಲಿ ಬಸವ ಧರ್ಮ ಪೀಠದ ಶಾಖೆಯನ್ನು ತೆರೆದು ಬಸವ ಮಂಟಪವನ್ನು ಸ್ಥಾಪಿಸಿದ್ಧಾರೆ. ಲಿಂಗಾಯತ ಧರ್ಮದ ಪುನರುತ್ಥಾನಗೈಯುತ್ತ, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಹೋರಾಡುತ್ತಿರುವ ಪೂಜ್ಯ ಶ್ರೀ ಮಾತಾಜಿಯವರ ಶ್ರೀ ಚರಣಗಳಲ್ಲಿ ವಂದಿಸುತ್ತಾ ಲಿಂಗದೇವರು ಮಾತಾಜಿಯವರಿಗೆ ಆಯುರಾರೋಗ್ಯ ದೀರ್ಘಾಯುಷ್ಯವನ್ನು ನೀಡಿ ನಮ್ಮೆಲ್ಲರಿಗೆ ಬಹುಕಾಲ ಮಾರ್ಗದರ್ಶನ ಮಾಡಿಸುವಂತಾಗಲಿ ಎಂದು ಗುರು ಬಸವಣ್ಣ ನವರಲ್ಲಿ ಪ್ರಾರ್ಥಿಸುತ್ತೇವೆ.

ಪರಿವಿಡಿ (index)
Previousಲಿಂಗಾಯತ ಯಾರು? Who is Lingayatಮುರಘಾ ಮಠ ಚಿತ್ರದುರ್ಗNext