Previous ಮಹಿಳಾ ಸ್ವಾತಂತ್ರ್ಯ: ಶರಣರ ನಿಲುವುಗಳು ಸ೦ಕ್ರಮಣವೆ೦ಬ ಮರುಶೋಧನೆ! Next

ಲಿಂಗಾಯತ ಹಿಂದೂಧರ್ಮವೆ ?

*

✍ ರಂಜಾನ ದರ್ಗಾ.

December 27, 2017

ವೀರಶೈವ (ಲಿಂಗಾಯತ)ವು ಹಿಂದೂ ಧರ್ಮದ ಶಾಖೆ ಎಂದು ಸಂಶೋಧಕರಾದ ಡಾ. ಎಂ. ಚಿದಾನಂದ ಮೂರ್ತಿ ಅವರು ೨೦೧೪ನೇ ಮಾರ್ಚ್ ೧೬ರಂದು ವಿಜಯವಾಣಿಯಲ್ಲಿ ಬರೆದದ್ದು ಹೊಸದೇನೂ ಅಲ್ಲ. ಅವರು ಈ ಸುಳ್ಳನ್ನು ಅನೇಕ ದಶಕಗಳಿಂದ ಪುನರಾವರ್ತನೆ ಮಾಡುತ್ತಲೇ ಇದ್ದಾರೆ. ಈ ಹಳೆರಾಗ ತೆಗೆಯುವುದು ಸಂಶೋಧನೆಯ ಲಕ್ಷಣವಲ್ಲ ಎಂಬುದು ಲಿಂಗಾಯತ ಧರ್ಮದ ಬಗ್ಗೆ ಕನಿಷ್ಠ ಅರಿವು ಇದ್ದವರಿಗೂ ಗೊತ್ತಾಗುತ್ತದೆ. ’ಹಿಂದು ಎಂದರೆ ವೀರಶೈವ. ವೀರಶೈವ ಎಂದರೆ ಲಿಂಗಾಯತ. ಆದ್ದರಿಂದ ಲಿಂಗಾಯತ ಎಂದರೆ ಹಿಂದು’ ಎಂಬ ಮೊಂಡು ವಾದವನ್ನು ಅವರು ಪ್ರತಿಪಾದಿಸುತ್ತಲೇ ಇದ್ದಾರೆ. ಸುಳ್ಳನ್ನು ಸಾವಿರ ಸಲ ಹೇಳಿದರೂ ಸುಳ್ಳೇ. ಆದರೆ ಸತ್ಯದ ಭ್ರಮೆಯನ್ನು ಹುಟ್ಟಿಸುವಲ್ಲಿ ಅದು ಅನೇಕ ಭಾರಿ ಯಶಸ್ವಿಯಾಗುತ್ತದೆ. ಈ ವಿಫಲ ಪಯತ್ನವನ್ನು ಚಿದಾನಂದಮೂರ್ತಿ ಅವರಂಥ ಹಿರಿಯ ಸಂಶೋಧಕರು ಮಾಡುವುದು ಸಂಶೋಧನಾ ಕ್ಷೇತ್ರಕ್ಕೇ ಮಾಡುವ ಅವಮಾನವಾಗಿದೆ.

ಬಸವಣ್ಣನ ಉದರದಲ್ಲಿ ಹುಟ್ಟಿತ್ತು ಲಿಂಗ ಎಂದು ಚೆನ್ನಬಸವಣ್ಣನವರು ಹೇಳಿದ್ದಾರೆ. ನಿನ್ನ ನಾನರಿಯದ ಮುನ್ನ ನೀನೆಲ್ಲಿ ಇದ್ದೆ ಎಂದು ಬಸವಣ್ಣನವರೇ ಇಷ್ಟಲಿಂಗವನ್ನು ಉದ್ದೇಶಿಸಿ ಹೇಳಿದ್ದಾರೆ. ಬಸವಣ್ಣನವರು ಇಷ್ಟಲಿಂಗದ ಜನಕರು ಎಂಬುದಕ್ಕೆ ೧೨ನೇ ಶತಮಾನದ ವಚನಕಾರರ ಅನೇಕ ವಚನಗಳೇ ಸಾಕ್ಷಿಯಾಗಿವೆ. ಆದರೆ ಚಿದಾನಂದಮೂರ್ತಿ ಅವರು ಬಸವಣ್ಣನವರ ಹೆಚ್ಚಿನ ವಚನವೊಂದನ್ನು ಎತ್ತಿಕೊಂಡು ಸತ್ಯವನ್ನು ಜಾಲಾಡಿಸುವ ವಿಫಲ ಯತ್ನ ಮಾಡುತ್ತಲೇ ಇದ್ದಾರೆ.

ಎನ್ನ ಬಂದ ಭವಂಗಳನ್ನು ಪರಿಹರಿಸಿ, ಎನಗೆ ಭಕ್ತಿ ಘನವೆತ್ತಿ ತೋರಿ, ಎನ್ನ ಹೊಂದಿದ ಶೈವಮಾರ್ಗಂಗಳನತಿಗಳೆದು, ನಿಜವೀರಶೈವಾಚಾರವನರುಹಿ ತೋರಿ .. .. .. ಚೆನ್ನಬಸವಣ್ಣ ಎನ್ನನಾಗುಮಾಡಿ ಉಳುಹಿದನಾಗಿ .. .. .. ನಾನು ಚೆನ್ನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕುವೆನು ಎಂಬ ಬಸವಣ್ಣನವರ ಹೆಚ್ಚಿನ ವಚನವನ್ನು ಉದ್ಧರಿಸುತ್ತ ಹಿಡಿಯುತ್ತ ವೀರಶೈವ ಮತ್ತು ಲಿಂಗಾಯತ ಒಂದೇ ಎಂಬ ವಾದವನ್ನು ಮಂಡಿಸುತ್ತಲೇ ಇದ್ದಾರೆ. ಆದರೆ ನಿಜಾಂಶವೇನು?

ಇಲ್ಲಿಯವರೆಗೆ ಬಸವಣ್ಣನವರ ೯೬೦ ಷಟ್‌ಸ್ಥಲದ ವಚನಗಳು ಮತ್ತು ೪೫೪ ಹೆಚ್ಚಿನ ವಚನಗಳು ಸಿಕ್ಕಿವೆ. ೧೨ನೇ ಶತಮಾನ ವಚನಯುಗವಾಗಿತ್ತು. ಆದರೆ ಆ ವಚನಕಾರರ ವಚನಕಟ್ಟುಗಳು ಯಾವುದೇ ಶಾಸ್ತ್ರಬದ್ಧವಾದ ವಚನ ಸಂಕಲನದ ಚೌಕಟ್ಟಿಗೆ ಸಿಲುಕಿರಲಿಲ್ಲ. ಇಂಥ ವಚನ ಸಂಕಲನದ ಕಾರ್ಯ ೧೫ನೇ ಶತಮಾನದಲ್ಲಿ ಆಯಿತು. ೧೨ನೇ ಶತಮಾನ ವಚನಯುಗವೆಂದು ಕರೆಯಿಸಿಕೊಂಡರೆ. ೧೫ನೇ ಶತಮಾನವನ್ನು ವಚನಸಂಕಲನ ಯುಗ ಎಂದು ಕರೆಯಲಾಯಿತು. ೧೨ನೇ ಶತಮಾನದ ಯಾವುದೇ ವಚನಕಾರರ ಮೂಲ ಹಸ್ತಪ್ರತಿಗಳು ಸಿಕ್ಕಿಲ್ಲ. ಅವೆಲ್ಲ ಸಿಕ್ಕಿದ್ದು ೧೫ನೇ ಶತಮಾನದಿಂದಿಚೆಗೆ. ಬಸವಣ್ಣನವರ ವಚನ ಕಟ್ಟು ಸಿಕ್ಕಿದ್ದು ೧೭ನೇ ಶತಮಾನದಲ್ಲಿ. ೫ ಶತಮಾನಗಳ ಅಂತರದಲ್ಲಿ!

ವಚನಸಂಕಲನದ ಸಂದರ್ಭದಲ್ಲಿ ಸಿಕ್ಕ ವಚನಗಳನ್ನು ಷಟ್‌ಸ್ಥಲಗಳಿಗನುಗುಣವಾಗಿ ವಿಂಗಡಿಸಿ ಪ್ರಕಟಿಸಲಾಗಿದೆ. ಬಸವಣ್ಣನವರ ಷಟ್‌ಸ್ಥಲದ ವಚನಗಳಂತೆ ಪ್ರಭುದೇವರ ಮತ್ತು ಚೆನ್ನಬಸವಣ್ಣನವರ ಷಟ್‌ಸ್ಥಲದ ವಚನಗಳೂ ಸಿಕ್ಕಿವೆ. ಇತರ ಯಾವುದೇ ವಚನಕಾರರ ವಚನಗಳನ್ನು ಷಟ್‌ಸ್ಥಲದ ಹೆಸರಿನಲ್ಲಿ ವಿಂಗಡಿಸಿಲ್ಲ. ಬಸವಣ್ಣ, ಚೆನ್ನಬಸವಣ್ಣ ಮತ್ತು ಅಲ್ಲಮಪ್ರಭುಗಳ ಯಾವುದೇ ಷಟ್‌ಸ್ಥಲದ ವಚನಗಳಲ್ಲಿ ’ವೀರಶೈವ’ ಪದ ಬಳಕೆಯಾಗಿಲ್ಲ.

೧೩ನೇ ಶತಮಾನದ ಶರಣಪ್ರಿಯ ಸಾಹಿತಿಗಳಾದ ಹರಿಹರ, ರಾಘವಾಂಕ ಮತ್ತು ಕೆರೆಯಪದ್ಮರಸರ ಕೃತಿಗಳಲ್ಲಿ ’ವೀರಶೈವ’ ಪದ ಪ್ರಯೋಗವಾಗಿಲ್ಲ. ಬಸವಣ್ಣನವರ ಸಮಕಾಲೀನರಾದ ಪಂಡಿತಾರಾಧ್ಯರ ’ಶಿವತತ್ತ್ವಸಾರಮು’ ತೆಲಗು ಕೃತಿಯಲ್ಲಿ ಕೂಡ ಈ ಪದ ಬಳಕೆಯಾಗಿಲ್ಲ. ಪಾಲ್ಕುರಿಕೆ ಸೋಮನಾಥನ ತೆಲಗು ಬಸವಪುರಾಣದಲ್ಲಿಯೂ ವೀರಶೈವ ಪದ ಬಳಕೆಯಾಗಿಲ್ಲ. ಈತನ ಕೃತಿಯ ಆಧಾರದ ಮೇಲೆ ಭೀಮಕವಿಯ ’ಬಸವಪುರಾಣ’ (೧೩೬೮) ರಚನೆಯಾಗಿದೆ. ಇಲ್ಲಿ ಮೊದಲಬಾರಿಗೆ ’ವೀರಮಾಹೇಶ್ವರ’ ಬದಲಿಗೆ ’ವೀರಶೈವ’ ಪದ ಬಳಕೆಯಾಗಿದೆ. ಅಂದರೆ ೧೪ನೇ ಶತಮಾನದ ವರೆಗೆ ಕನ್ನಡ ಭಾಷೆಯಲ್ಲಿ ’ವೀರಶೈವ’ ಪದ ಬಳಕೆಯಾಗಿರಲಿಲ್ಲ.

ಇನ್ನು ಷಟ್‌ಸ್ಥಲ ವಚನಗಳಲ್ಲಿ ಸಿಗದ ’ವೀರಶೈವ’ ಹೆಚ್ಚಿನ ವಚನಗಳಲ್ಲಿ ಹೇಗೆ ಕಂಡುಬಂದಿತು ಎಂಬುದರ ಕುರಿತು ಚಿಂತಿಸುವುದು ಅವಶ್ಯವಾಗಿದೆ. ಷಟ್‌ಸ್ಥಲ ವಚನ ಕಟ್ಟುಗಳು ಸಿದ್ಧವಾಗುವ ಸಂದರ್ಭದಲ್ಲಿ ’ವೀರಶೈವ’ ಪದಕ್ಕೆ ವಚನಸಾಹಿತ್ಯದಲ್ಲಿ ಮಹತ್ವವಿರಲಿಲ್ಲ. ನಂತರದ ಶತಮಾನಗಳಲ್ಲಿ ಆಚಾರ್ಯ ಪರಂಪರೆ (ಮೊದಲು ಚತುರಾಚಾರ್ಯ ನಂತರ ೧೭ನೇ ಶತಮಾನದಲ್ಲಿ ಕಾಶಿ ವಿಶ್ವಾರಾಧ್ಯ ಸೇರಿ ಪಂಚಾಚಾರ್ಯ) ಬೆಳೆದಾಗ, ವಚನಗಳಲ್ಲಿ ವೀರಶೈವ ಪದ ಸೇರಿಸುವ ಹುನ್ನಾರ ಆರಂಭವಾಯಿತು. ಆದರೆ ಬಸವಣ್ಣ, ಅಲ್ಲಮಪ್ರಭುದೇವರು ಮತ್ತು ಚೆನ್ನಬಸವಣ್ಣನವರ ಷಟ್‌ಸ್ಥಲ ವಚನಕಟ್ಟುಗಳು ಅದಾಗಲೇ ಭಕ್ತರ ಮನೆಗಳಲ್ಲಿ ರಾರಾಜಿಸುತ್ತಿದ್ದ ಕಾರಣ, ಆ ಹಸ್ತಪ್ರತಿಗಳಲ್ಲಿ ಪಟ್ಟಭದ್ರ ಹಿತಾಸಕ್ತಿಗಳಿಗೆ ಏನೂ ಮಾಡಲಿಕ್ಕಾಗಲಿಲ್ಲ. ನಂತರ ಸಿಕ್ಕ ಹೆಚ್ಚಿನ ವಚನಗಳ ಹಸ್ತಪ್ರತಿಗಳಲ್ಲಿ ’ವೀರಶೈವ’ ಪದ ಸೇರಿಸುವ ಮೂಲಕ ಹಸ್ತಕ್ಷೇಪ ಮಾಡಿದರು. ಅಂಥ ಹಸ್ತಕ್ಷೇಪದ ಹೆಚ್ಚಿನ ವಚನಗಳನ್ನು ತೆಗೆದುಕೊಂಡು ಚಿದಾನಂದಮೂರ್ತಿಗಳು ವಾದ ಮಾಡುತ್ತಿರುವುದು ಸಂಶೋಧನೆಗೆ ಮಾಡುವ ಅಪಚಾರವಾಗಿದೆ.
ದೇವನಾಮ ಸೊಗಸದು ಲಿಂಗಾಯತಂಗೆ, ಮಾನವನಾಮ ಸೊಗಸದು ಜಂಗಮ ಭಕ್ತಂಗೆ ಎಂಬ ಚೆನ್ನಬಸವಣ್ಣನವರ ವಚನ ಪ್ರಸಾದಿ ಸ್ಥಲದಲ್ಲಿದೆ. ವಚನಗಳಲ್ಲಿ ಲಿಂಗಾಯತಕ್ಕಿಂತಲೂ ’ಲಿಂಗವಂತ’ ಪದದ ಬಳಕೆ ಹೆಚ್ಚಾಗಿದೆ. ಏಕೆಂದರೆ ಲಿಂಗವು ಅಂಗಕ್ಕೆ ಬರವಂಥದ್ದು ಲಿಂಗಾಯತ. ಇದು ಮೊದಲ ಘಟ್ಟ. ಎರಡನೇ ಘಟ್ಟ ಲಿಂಗಸ್ವಾಯತ. ಮೊರನೇ ಘಟ್ಟ ಲಿಂಗಸನ್ನಿಹಿತ. ಈ ಮೂರೂ ಘಟ್ಟಗಳನ್ನು ತಲುಪಿದವನು ಲಿಂಗವಂತ. ಲಿಂಗಾಯತದಿಂದ ಆರಂಭವಾಗಿ ಲಿಂಗವಂತದಲ್ಲಿ ಕೊನೆಮುಟ್ಟುವುದರಿಂದ ವಚನಗಳಲ್ಲಿ ’ಲಿಂಗವಂತ’ ಪದ ಬಳಕೆಯಾಗಿದೆ. ಲಿಂಗವಂತದ ಮೂಲ ಲಿಂಗಾಯತದಲ್ಲಿದೆ. ಆದ್ದರಿಂದ ಲಿಂಗಾಯತರು ಎಂಬ ಪದವೇ ಜನಮನದಲ್ಲಿ ಅಚ್ಚೊತ್ತಿದೆ.

ಚೆನ್ನಬಸವಣ್ಣನವರ ಪ್ರಸಾದಿ ಸ್ಥಲದ ವಚನಗಳಲ್ಲಿನ ಭೃತ್ಯಾಚಾರಿಗಲ್ಲದೆ ಭಕ್ತ್ಯಾಚಾರವಳವಡದು. ವೇದಶಾಸ್ತ್ರ ಪುರಾಣಂಗಳನರಿದ ಸಂಬಂಧಿಗಲ್ಲದೆ ವೀರಶೈವ ಅಳವಡದು ಎಂಬ ವಚನದಲ್ಲಿ ’ವೀರಶೈವ’ ಪದ ಬಳಕೆಯಾದದ್ದು ನಿಜವೆ? ಎಂದು ಕೇಳಿದರೆ ’ಇಲ್ಲ’ ಎಂದು ಹೇಳಬೇಕಾಗುತ್ತದೆ. ಏಕೆಂದರೆ ಆ ವೀರಶೈವ ಪದವನ್ನು ಚೆನ್ನಬಸವಣ್ಣನವರ ವಚನ ಸಂಪುಟದ ಸಂಪಾದಕರಾದ ಡಾ. ಬಿ.ವಿ. ಮಲ್ಲಾಪುರ ಅವರು ತಮಗೆ ಸಿಕ್ಕ ಹಸ್ತಕ್ಷೇಪ ಪ್ರತಿಯಿಂದ ಬಳಸಿದ್ದಾರೆ. (ಕನ್ನಡ ಪುಸ್ತಕ ಪ್ರಾಧಿಕಾರ, ಸಮಗ್ರ ವಚನ ಸಂಪುಟ ೩- ದ್ವಿತೀಯ ಮುದ್ರಣ ೨೦೦೧ರ ೨೩೮ನೇ ವಚನ). ಆದರೆ ಕರ್ನಾಟಕ ವಿಶ್ವವಿದ್ಯಾಲಯ ಪ್ರಕಟಿಸಿದ, ಡಾ. ಆರ್.ಸಿ. ಹಿರೇಮಠ ಅವರ ಸಂಪಾದನೆಯ ’ಚನ್ನಬಸವಣ್ಣನವರ ವಚನಗಳು’ ದ್ವಿತೀಯ ಮುದ್ರಣ ೧೯೭೧ರಲ್ಲಿನ ೫೩೦ನೇ ವಚನ ಇದಾಗಿದ್ದು. ಭೃತ್ಯಾಚಾರಿಗಲ್ಲದೆ ಭಕ್ತ್ಯಾಚಾರವಳವಡದು; ವೇದಶಾಸ್ತ್ರಪುರಾಣಂಗಳನರಿದ ಸಂಬಂಧಿಗಳಿಗಲ್ಲದೆ ಆಚಾರವಳವಡದು ಎಂದಿದೆ. ಹೀಗೆ ಪಟ್ಟಭದ್ರರು ಹಸ್ತಕ್ಷೇಪ ಮಾಡಿ ’ಆಚಾರ’ ಶಬ್ದ ಜಾಗದಲ್ಲಿ ’ವೀರಶೈವ’ ಪದ ತಂದು ತುರುಕಿದ್ದಾರೆ. ಅದುವೇ ಪುಸ್ತಕ ಪ್ರಾಧಿಕಾರದ ಸಂಪುಟದಲ್ಲಿ ಮುಂದುವರಿದಿದೆ. ಇದಲ್ಲದೆ ಅನೇಕ ಪ್ರಕ್ಷಿಪ್ತ ವಚನಗಳನ್ನು ಕೂಡ ವಚನ ರಾಶಿಯಲ್ಲಿ ಸೇರಿಸಲಾಗಿದೆ.

ಚತುರ್ವರ್ಣಿಯಾದಡೇನು ಚತುರ್ವರ್ಣಾತೀತನೇ ವೀರಶೈವ ನೋಡಾ ಎಂಬ ಸಿದ್ಧರಾಮರದೆಂದು ಹೇಳಲಾದ ವಚನದ ಸಾಲನ್ನು ಚಿದಾನಂದಮೂರ್ತಿ ಅವರು ಉದ್ಧರಿಸುತ್ತಾರೆ. ಈ ಸಾಲೇ ಗೊಂದಲದ ಗೂಡಾಗಿದೆ. ವೀರಶೈವ ಚತುರ್ವಣಿಯಾದರೂ ಚತುರ್ವರ್ಣಾತೀತ ಎಂದರೆ ಏನು? ಚಾತರ್ವರ್ಣ್ಯ ಪದ್ಧತಿಯ ಸಮಾಜದಿಂದ ಹೊರಬಂದವನೇ ಲಿಂಗವಂತ ಅಲ್ಲವೆ? ಆದ್ದರಿಂದ ಚತುರ್ವರ್ಣಿಯಾದಡೇನು ಚತುರ್ವರ್ಣಾತೀತನೇ ಲಿಂಗವಂತ ನೋಡಾ ಎಂಬುದು ಮಾತ್ರ ಸಮಂಜಸವಾಗುತ್ತದೆ. ಹೀಗೆ ಚಾತರ್ವಣ್ಯ ಪದ್ಧತಿಯಿಂದ ಹೊರಬಂದು ಲಿಂಗಾಯತನಾಗುವುದೇ ಶರಣರ ದೃಷ್ಟಿಯಲ್ಲಿ ಪುನರ್ಜನ್ಮ. ವಚನಗಳಲ್ಲಿ ಈ ರೀತಿಯ ಹಸ್ತಕ್ಷೇಪಗಳು ಬಹಳಷ್ಟಾಗಿವೆ.

ವೀರಶೈವ ಪ್ರತಿಪಾದಿಸುವ ಗುರವರ್ಗದವರು ತಾವು ಬೇರೆಯವರಿಗಿಂತ ದೊಡ್ಡವರು ಎಂಬುದೇ ಬಸವಣ್ಣನವರ ಲಿಂಗತತ್ತ್ವಕ್ಕೆ ವಿರುದ್ಧವಾಗಿದೆ. ಲಿಂಗವಂತ ಶರಣರು ವರ್ಣಾರಹಿತ ಮತ್ತು ಜಾತಿರಹಿತ ಶರಣಸಂಕುಲವೆಂಬ ಸಮಾಜದ ನಿರ್ಮಾಪಕರಾಗಿದ್ದಾರೆ. ಆದ್ದರಿಂದ ಈ ಸಾಲಿನಲ್ಲಿ ಲಿಂಗವಂತ ತೆಗೆದು ವೀರಶೈವ ಪದ ಸೇರಿಸಿದ್ದು ಮೇಲ್ನೋಟಕ್ಕೇ ಸಾಬೀತಾಗುತ್ತದೆ. ಸಿದ್ಧರಾಮನ ವಚನಗಳನ್ನು ಷಟ್‌ಸ್ಥಲದಲ್ಲಿ ವಿಭಾಗಿಸದೆ ಇರುವುದು ಕೂಡ ಈ ಹಸ್ತಕ್ಷೇಪಕ್ಕೆ ಅನುಕೂಲವಾಗಿದೆ.

ಇನ್ನು ಚಿದಾನಂದಮೂರ್ತಿ ಅವರು ವಚನಪೂರ್ವ ಯುಗದ ಶೈವಮತದ ಕೊಂಡಗೂಳಿ ಕೇಶಿರಾಜನನ್ನು ಎಳೆದು ತರುತ್ತಾರೆ. ಆತನ ’ಶೀಲಮಹತ್ವ ಕಂದ’ದಲ್ಲಿ ಪಟ್ಟಭದ್ರರು ಲಿಂಗಾಯತ, ಲಿಂಗಾಯತವಂತ ಮತ್ತು ವೀರಶೈವ ಪದಗಳನ್ನು ಸೇರಿಸಿದ್ದಾರೆ. ಇವು ನಂತರದಲ್ಲಿ ಸೇರಿದವು ಎಂದು ಬೇರೆ ಹೇಳಬೇಕಿಲ್ಲ. ಇಲ್ಲಿಯ ಶೀಲಗಳು ಶರಣರಿಗೆ ಒಪ್ಪಿಗೆಯಾಗಿಲ್ಲ. ’ಹೂಭಾವಿ ಮಠಕ್ಕೆ ಸೀಮೆಯ ಮಾಡೂದು ಶೀಲವೆ?’ ಎಂದು ಬಸವಯುಗದ ವಚನಕಾರ ಸಕಲೇಶ ಮಾದರಸ ಈ ಕೃತಿಯನ್ನು ತಿರಸ್ಕರಿಸಿದ್ದಾನೆ. ಬಸವಾದಿ ಪ್ರಮಥರಾರೂ ಕೊಂಡಗೂಳಿ ಕೇಶಿರಾಜನನ್ನು ತಮ್ಮ ವಚನಗಳಲ್ಲಿ ಸ್ಮರಿಸಿಲ್ಲ. ಯಾಜ್ಞವಲ್ಕ್ಯಸ್ಮೃತಿ ಕಲಿಸುವ ಬ್ರಾಹ್ಮಣರಿಗೆ ದಾನ ಕೊಡುವ ಕೊಂಡಗೂಳಿ ಕೇಶಿರಾಜ ಅದು ಹೇಗೆ ಲಿಂಗಾಯತನಾಗುತ್ತಾನೆ?

ಹತ್ತನೇ ಶತಮಾನದ ಹೂಲಿ ಶಾಸನದಲ್ಲಿ ’ಅಷ್ಟಾವರಣ’ ಪದ ಬಂದಿದೆ ಎಂದು ಚಿಮೂ ಇನ್ನೂ ಹಿಂದೆ ಹೋಗುತ್ತಾರೆ. ಆದರೆ ಮೊದಲಿಗೆ ಆ ಶಾಸನದ ಅಧ್ಯಯನ ಮಾಡಿದ ಮಧುರಚೆನ್ನರು, ’ಆ ಶಾಸನದ ಲಿಪಿಯ ರೂಪ ಹತ್ತನೇ ಶತಮಾನದ್ದಲ್ಲ’ ಎಂದು ಕಳೆದ ಶತಮಾನದಲ್ಲೇ ಸಾಬೀತುಪಡಿಸಿದ್ದಾರೆ. ಆ ಶಾಸನದ ಲಿಪಿಯ ರೂಪ ೧೨ನೇ ಶತಮಾನದ ನಂತರದ್ದು ಎಂಬುದು ಲಿಪಿತಜ್ಞರಿಗೆ ಗೊತ್ತಿದೆ. ಹೀಗಾಗಿ ಚಿಮೂ ಅವರ ವಾದ ಇಲ್ಲಿಯೂ ಬಿದ್ದುಹೋಗುತ್ತದೆ.

ಇನ್ನು ಲಿಂಗಾಯತ ಯಾವ ಕಾಲಕ್ಕೂ ಹಿಂದುಧರ್ಮದ ಶಾಖೆಯಾಗದು. ಏಕೆಂದರೆ ಬಸವಣ್ಣನವರ ಕಾಲದಲ್ಲಿ ’ಹಿಂದು’ ಶಬ್ದದ ಬಳಕೆಯೆ ಇರಲಿಲ್ಲ. ವೇದ, ಉಪನಿಷತ್, ಆಗಮ, ಪುರಾಣ, ಭಗವದ್ಗೀತೆ, ಮನುಸ್ಮೃತಿ ಮುಂತಾದ ಪುರಾತನ ವೈದಿಕ ಸಾಹಿತ್ಯದಲ್ಲೂ ’ಹಿಂದೂ’ ಶಬ್ದದ ಬಳಕೆಯಾಗಿಲ್ಲ. ಬಸವಣ್ಣನವರ ಕಾಲದಲ್ಲಿ ಕೂಡ ’ಹಿಂದೂ’ ಹೆಸರಿನ ಧರ್ಮವೇ ಇರಲಿಲ್ಲ. ಆಗ ಸನಾತನ ಧರ್ಮ ಎಂದು ಕರೆಯಿಸಿಕೊಳ್ಳುವ ವೈದಿಕಧರ್ಮ ಚಾಲ್ತಿಯಲ್ಲಿತ್ತು. ಶೈವಧರ್ಮ ಕೂಡ ಬೇರೆಯಾಗಿಯೇ ಇತ್ತು. ಅಜ್ಞೇಯವಾದಿ ಬೌದ್ಧಧರ್ಮ ಮತ್ತು ತೀರ್ಥಂಕರರನ್ನೇ ದೈವತ್ವಕ್ಕೇರಿಸುವ ಜೈನ ಮುಂತಾದ ಅವೈದಿಕ ಧರ್ಮಗಳೂ ಜೊತೆಯಲ್ಲಿ ಇದ್ದವು.

ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ,
ತರ್ಕದ ಬೆನ್ನಬಾರನೆತ್ತುವೆ, ಆಗಮದ ಮೂಗ ಕೊಯಿವೆ, ನೋಡಯ್ಯಾ
ಮಹಾದಾನಿ ಕೂಡಲಸಂಗಮದೇವಾ
ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ.

ಎಂದು ಬಸವಣ್ಣನವರು ವೇದೋಕ್ತ ವೈದಿಕಧರ್ಮವನ್ನೂ ಆಗಮೋಕ್ತ ಶೈವಧರ್ಮವನ್ನೂ ಏಕಕಾಲಕ್ಕೆ ತಿರಸ್ಕರಿಸಿದ್ದಾರೆ. ಹೀಗಾಗಿ ವೇದಮೂಲದ ಇಂದಿನ ಹಿಂದುಧರ್ಮಕ್ಕೂ ಆಗಮಮೂಲದ ಇಂದಿನ ವೀರಶೈವಧರ್ಮಕ್ಕೂ ಲಿಂಗಾಯತ ಧರ್ಮದ ಜೊತೆ ಯಾವುದೇ ಸಂಬಂಧವಿಲ್ಲ ಎನ್ನುವುದಕ್ಕೆ ಬಸವಣ್ಣನವರ ಈ ವಚನವೇ ಸಾಕ್ಷಿಯಾಗಿದೆ.

ನಂತರ ಚಿಮೂ ಅವರು ಇಷ್ಟಲಿಂಗಕ್ಕೆ ಕೈ ಹಾಕಿದ್ದಾರೆ. ಅದು ಬಸವಣ್ಣನಿಗಿಂತ ಹಿಂದಿನದು ಎಂದು ಹೇಳುತ್ತಾರೆ. ಕೇಶಿರಾಜ ’ಉರಸಜ್ಜೆಯ ಲಿಂಗ’ ಎಂದು ಬಳಸಿದ್ದಾಗಿ ತಿಳಿಸಿದ್ದಾರೆ. ಆ ಉರಸಜ್ಜೆಯ ಲಿಂಗವು ಚರಲಿಂಗವಾಗಿದೆ. ಆ ಲಿಂಗವನ್ನು ಶಿವರಾತ್ರೀಶ್ವರ ಭಗವತ್ಪಾದರ ಚಿತ್ರದಲ್ಲಿ ಕಾಣಬಹುದು.

*
ಪರಿವಿಡಿ (index)
Previous ಮಹಿಳಾ ಸ್ವಾತಂತ್ರ್ಯ: ಶರಣರ ನಿಲುವುಗಳು ಸ೦ಕ್ರಮಣವೆ೦ಬ ಮರುಶೋಧನೆ! Next