Previous ವಚನ ಸಾಹಿತ್ಯ: ಅಪವರ್ಣೀಕರಣ... ವೈದಿಕ ವಿರೋಧ ಶುಭ ಮುಹೂರ್ತವೆಂದರೇನು? Next

ಗಡಿನಾಡ ಹುಲಿ, ಜಂಗಮತಾಯಿ,

ಶರಣೆ ಜಯದೇವಿತಾಯಿ ಲಿಗಾಡೆ.

*

೧೯ರ ಶತಮಾನದಲ್ಲಿ ಮರಾಠಿ ಪ್ರಾಬಲ್ಯವಿದ್ದ ನಾಡಲ್ಲಿ, ಕರ್ನಾಟಕ, ಕನ್ನಡ ಮತ್ತು ಕನ್ನಡ ಜನರಿಗೋಸ್ಕರ ದೂರದ ಗಡಿ ಸೊಲ್ಲಾಪುರದಲ್ಲಿ ನಿಂತು ಗುಟುರು ಹಾಕಿ ಕನ್ನಡಿಗರ ಕೋಟೆ ಕಟ್ಟಿ ಅದನ್ನ ರಕ್ಷಣೆ ಮಾಡಿದ ಅಪ್ರತಿಮ ಹೋರಾಟಗಾರ್ತಿ ಗಡಿನಾಡ ಧೀರೋದ್ದಾತ ಮಹಿಳೆ ಗಡಿನಾಡ ಹುಲಿ ಬಿರುದಾಂಕಿತೆ ಜಯದೇವಿತಾಯಿ ಲಿಗಾಡೆ. ಆಧ್ಯಾತ್ಮ ಚಿಂತನಕಾರರು. ಕುಟುಂಬವತ್ಸಲೆ, ಸಾಹಿತ್ಯಸಾಧಕಿ, ಸಮಾಜಸೇವಕಿ ಹೀಗೆ ತ್ರಿವೇಣಿ ಸಂಗಮವಾಗಿದ್ದ ಈ ಜಂಗಮತಾಯಿ ತಾಯ್ನುಡಿಯ ಸೇವೆಗಾಗಿ ಸವೆದರು. ಕನ್ನಡ ನುಡಿಗೆ, ಕನ್ನಡ ನಾಡಿಗೆ ತನ್ನನ್ನು ಅರ್ಪಿಸಿಕೊಂಡು ಅಜರಾಮರ ಕೀರ್ತಿಪಾತ್ರರಾದ ಶ್ರೀಮತಿ ಜಯದೇವಿ ತಾಯಿ ಲಿಗಾಡೆ ಅವರ ಜೀವನ ದರ್ಶನವೆಂದರೆ ಅದೊಂದು ಯಶೋಗಾಥೆ.

ಕನ್ನಡ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷೆ, ‘ಗಡಿನಾಡ ದುರ್ಗಾ’ ಎಂದು ಬಿರುದಾಂಕಿತರಾಗಿರುವ ಅಖಂಡ ಕರ್ನಾಟಕದ ಕನಸು ಕಂಡು, ಕರ್ನಾಟಕದ ಏಕೀಕರಣಕ್ಕಾಗಿ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಾ, ಕನ್ನಡನಾಡು-ನುಡಿಗಾಗಿ ದುಡಿಯುತ್ತ ಬರಿ ಮಾತಲ್ಲೇ ಹೇಳದೆ ಕೃತಿಯಲ್ಲಿ ಮಾಡಿ ತೋರಿಸಿದ ಗಟ್ಟಿಗಿತ್ತಿ.

ಬೆಳಗಾವಿಯಂಥ ಗಡಿ ಪ್ರದೇಶದಲ್ಲಿ ಕನ್ನಡದ ಗುಡಿ ಕಟ್ಟಲು ಮತ್ತು ರಕ್ಷಣೆ ಮಾಡಲು ಹೋರಾಡಿದ ಅಪ್ರತಿಮ ಹೋರಾಟಗಾರ್ತಿ, ಮಹಾರಾಷ್ಟ್ರದಲ್ಲಿ ಕನ್ನಡ ಪ್ರಧಾನವಾಗಿರುವ ಸೋಲ್ಲಾಪುರ, ಅಕ್ಕಲಕೋಟೆ, ಜತ್ತ, ಜೊತೆಗೆ ಕೇರಳದ ಕಾಸರಗೋಡು ಹಾಗೂ ಇತರ ಕನ್ನಡ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ಅವರ ಜೀವನದುದ್ದಕ್ಕೂ ಹೋರಾಟ ನಡೆಸಿದ್ದಾರೆ.

ಸೊಲ್ಲಾಪುರದಲ್ಲಿ ಕನ್ನಡಿಗರು ಎಲ್ಲಾ ರೀತಿಯಲ್ಲೂ ಹೆಚ್ಚಾಗಿದ್ದಾರೆ ಎಂದು ಸರ್ವವೇದ್ಯವಾಗಿದ್ದರೂ ಸೊಲ್ಲಾಪುರ ಕರ್ನಾಟಕಕ್ಕೇ ಸೇರಬೇಕೆಂಬ ಜಯದೇವಿ ತಾಯಿಯವರ ನಿರಂತರ ಯತ್ನಗಳು ಮರಾಠಿಗರ ಕುತಂತ್ರದಿಂದ ಮತ್ತು ಕನ್ನಡಿಗರ ನಿಷ್ಕ್ರಿಯತೆಯಿಂದ ಫಲಕೊಡಲಿಲ್ಲ. ಈ ಕಾಯಕ್ಕಾಗಿ ಅವರು ಎಲ್ಲಾ ಮಂತ್ರಿಗಳು, ಕಡೆಗೆ ಇಂದಿರಾಗಾಂಧಿಯವರನ್ನು ಭೇಟಿ ಮಾಡಿ ಮಹಾಜನ ಆಯೋಗದ ಶಿಫಾರಸ್ಸು ಅನ್ವಯಿಸಿ ಸೊಲ್ಲಾಪುರ ಕರ್ನಾಟಕದ ಭಾಗವಾಗಬೇಕೆಂದು ಮನವಿಸಲ್ಲಿಸಿ ಅವರಿಂದ ಆಶ್ವಾಸನೆ ಪಡೆದುಕೊಂಡರೂ ಕನ್ನಡದ ಮಂತ್ರಿಗಳ ಮತ್ತು ಶಾಸಕರ ಔದಾಸೀನ್ಯ ಅದನ್ನು ಆಗಗೊಡಲಿಲ್ಲ.

ಹೈದರಾಬಾದ್ ಪ್ರಾಂತ್ಯದ ಅನೇಕ ಭಾಗಗಳಲ್ಲಿ ಕನ್ನಡಿಗರು ವಲಸೆಹೊಗಿದ್ದರು. ಅವರೆಲ್ಲರಿಗೆ ಬೆಂಬಲವಾಗಿ ಕನ್ನಡತನವನ್ನು ಅಲ್ಲಿ ಉಳಿಸಿದರು, ಅಲ್ಲಲ್ಲಿ ಕನ್ನಡ ಶಾಲೆಗಳನ್ನು ಪ್ರಾರಂಭಿಸಿದರು. ಸ್ವಯಂಸೇವಾ ಶಿಕ್ಷಕರನ್ನು ಕಳಿಸಿದರು. ಆಗಿನ ಮುಖ್ಯಮಂತ್ರಿಗಳು ‘ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರೇ ಸಿಗುವುದಿಲ್ಲ’ ಎಂಬ ಕಾರಣ ಮುಂದೊಡಿದಾಗ ತಾಯಿಯವರು ಸ್ವಂತ ಖರ್ಚಿನಿಂದ ನಾಲ್ಕುನೂರು ಜನ ಶಿಕ್ಷಕರನ್ನು ನೇಮಿಸಿದ್ದು ಅವರ ಕನ್ನಡ ಪ್ರೇಮಕ್ಕೆ ಸಾಕ್ಷಿಯಾಗಿದೆ. ಮರಾಟಿಗರ ಕುತಂತ್ರದಿಂದ ಮುಂದೆ ಆ ಶಾಲೆಗಳು ಅರ್ಥಿಕ ಕೊರೆತೆ ಎದುರಾದಾಗ ಬಿಕ್ಷೆ ಬೇಡಿ ಆ ಶಾಲೆಗಳನ್ನ ಮುಚ್ಚದಂತೆ ನೋಡಿಕೊಂಡರು.

ಮಹಿಳೆಯರಿಗೆ ವಿದ್ಯಾಭ್ಯಾಸ ಕಲ್ಪಿಸುವುದಕ್ಕಾಗಿ 27 ಮಹಿಳಾ ಕನ್ನಡ ಶಾಲೆಗಳನ್ನು ತಾಯಿ ಲಿಗಾಡೆ ತೆರೆದಿದ್ದರು. ಆ ಕಾಲಘಟ್ಟದಲ್ಲಿಯೇ ಮಹಿಳೆಯರಿಗೆ ವಿದ್ಯಾದಾನ ಮಾಡಬೇಕೆಂಬ ಆಲೋಚನೆ ಅವರಿಗೆ ಬಂದಿದ್ದು, ಆಲೋಚನಾ ಶಕ್ತಿಯನ್ನು ಪ್ರದರ್ಶಿಸುತ್ತದೆ. ಈ ಸಮಾಜದಲ್ಲಿ ಜಾತಿ ಚೀತಗಳು, ಕಿರಾತಕರ ನಡುವೆಯೂ ಕನ್ನಡದ ಉದಯಕ್ಕಾಗಿ ಹೋರಾಟ ಮಾಡಿದ ಈ ತಾಯಿ ನೀಜಕ್ಕೂ ದೀರಳೆ

ಕಾವೇರಿಯಿಂದ ಗೋದಾವರಿವರೆಗಿದ್ದ ಕನ್ನಡ ನಾಡು ಪರಕೀಯ ಆಳ್ವಿಕೆಗೆ ಒಳಪಟ್ಟು ಜರ್ಜರಿತವಾಗಿ ವಸಾಹತು ಶಾಹಿಗಳ ಕಾಲಕ್ಕೆ ಹಂಚಿ ಹರಿದು ಹೋಯಿತು. ಹೀಗೆ ಪರಕೀಯರಿಂದ ಸ್ವಾಂತಂತ್ರ್ಯ ಪಡೆಯುವುದು, ಕರ್ನಾಟಕ ಏಕೀಕರಣ ಮಾಡುವುದು ಜಯದೇವಿ ತಾಯಿಯವರಿಗೆ ಮುಖ್ಯವಾಗಿತ್ತು. ಹೈದ್ರಾಬಾದ ಕರ್ನಾಟಕ ವಿಮೋಚನೆಗೆ ದುಡಿದ ತಾಯಿಯವರು ಮುಂದೆ ಕರ್ನಾಟಕ ಏಕೀಕರಣಕ್ಕಾಗಿ ಪಣತೊಟ್ಟರು. ಆಗ ಕನ್ನಡ ನಾಡಿನ ಮಕ್ಕಳು, ನಮ್ಮ ತಾಯಿ ಅನೇಕ ಪ್ರಾಂತಗಳಲ್ಲಿ ಹಂಚಿ ಹೋದಾಗ ನಾವು ನೆಮ್ಮದಿಯಿಂದ ಇರುವುದು ಹೇಗೆ? ಒಡೆದು ಹೋದ ಕರ್ನಾಟಕ ಒಂದಾಗಬೇಕು. ಎಂದು ಬಲವಾಗಿ ಪ್ರತಿಪಾದಿಸಿದರು. ಅನೇಕರ ಅವಿರತ ಹೋರಾಟದ ಫಲವಾಗಿ ಕರ್ನಾಟಕ ಏಕೀಕರಣವಾಯಿತು.

ಗಡಿಯಲ್ಲಿ ಕಟ್ಟಿ ಕನ್ನಡದ ಕೋಟೆ, ಉಡಿಯಲ್ಲಿ
ಇಡಿಯ ನಾಡಕ್ಕರೆಯ ಮಕ್ಕಳಾಡುಂಬೊಲವೆ
ಒಡವೆಗಳನುಳಿದ ರುದ್ರಾಕ್ಷಿ ಕಂಕಣ ಬಲವೆ
ಇದ್ದಲ್ಲೇ ಮರಳಿ ಗೆದ್ದಿರಿ ತುತ್ತತುದಿಯಲ್ಲಿ..

ಜಯದೇವಿ ತಾಯಿಯವರ ಈ ಮಹಾ ಕವನ ಸಾಹಿತ್ಯವನ್ನು ಓದಿದ ಜನ ಇವರನ್ನು ಆಧುನಿಕ ಕಾಲದ ಅಕ್ಕಮಹಾದೇವಿ ಅಂತ ಕರೆದಿದ್ದುಂಟು. ಇವರು ಹಲವಾರು ಸಾಹಿತ್ಯಗಳಲ್ಲಿ ಮಹಿಳೆಯರ ಹಕ್ಕುಗಳ ಬಗೆಗೆ ದ್ವನಿ ಎತ್ತಿದ್ದಾರೆ. ರವೀಂದ್ರನಾಥ ಠಾಕೂರರ ಭಕ್ತಿಗೀತೆಯಂತೆ ಬರೆದ ಗೀತೆಗಳು ಈ ಕೃತಿಯಲ್ಲಿವೆ. ಇಲ್ಲಿನ ಕೆಲವು ಗೀತೆಗಳು ಭಾರತೀಯ ಕವಿತಾ ಪುಸ್ತಕದಲ್ಲೂ ಸೇರ್ಪಡೆಯಾಗಿವೆ. ಇವರ ಈ ಕೃತಿಯಲ್ಲಿ ಸಾಮಾಜಿಕ ಪ್ರಜ್ಞೆಯ ಜೊತೆಗೆ ಅಧ್ಯಾತ್ಮಿಕ ಭಾವವೂ ತುಂಬಿದೆ.

ತಾಯಿಯವರು ಒಟ್ಟು ಹದಿನಾಲ್ಕು ಕೃತಿಗಳನ್ನು ಪ್ರಕಟಿಸಿದ್ದಾರೆ. ಕೃತಿಗಳು – ಜಯಗೀತೆ, ತಾಯಿಯ ಪದಗಳು, ಶ್ರೀ ಸಿದ್ಧರಾಮ ಪುರಾಣ, ತಾರಕ ತಂಬೂರಿ, ಬಂದೇವು ಕಲ್ಯಾಣಕೆ, ಸಾವಿರದ ಪದಗಳು, ಅರುವಿನಾಗರದಲ್ಲಿ ಮುಂತಾದವು.

ಭಾರತ ಸ್ವಾತಂತ್ರ್ಯ, ಹೈದ್ರಾಬಾದ್ ಕರ್ನಾಟಕದ ವಿಮೋಚನೆ ಮತ್ತು ಕರ್ನಾಟಕ ಏಕೀಕರಣ, ಗಡಿಯಲ್ಲಿ ಕನ್ನಡ ಶಾಲೆಗಳನ್ನು ಕಟ್ಟಿದ್ದು ಒಳಗೊಂಡಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ದುಡಿದ ಜಯದೇವಿತಾಯಿಯವರಿಗೆ ಕರ್ನಾಟಕದಲ್ಲಿ ಅತ್ಯಂತ ಸಾಮಾನ್ಯ ಬರಹಗಾರರಿಗೆ ಸಂದ ಗೌರವ, ನೆರವು ಕೂಡಾ ಬಂದಿಲ್ಲವೆನ್ನುವುದು ವಿಷಾದನೀಯ. ಸೋಲಾಪೂರ ಕರ್ನಾಟಕಕ್ಕೆ ಸೇರಬೇಕೆಂಬ ಜಯದೇವಿತಾಯಿ ಲಿಗಾಡೆಯವರ ಹೋರಾಟ ಫಲಪ್ರದವಾಗದಾಗ ತಾವೇ 1980ರಲ್ಲಿ ಸೋಲಾಪೂರ ತೊರೆದು ಕರ್ನಾಟಕದ ಗಡಿಭಾಗ, ಬಸವಾದಿ ಶರಣರ ಕಾಯಕಭೂಮಿ ಬಸವಕಲ್ಯಾಣದಲ್ಲಿ ಭಕ್ತಿಭವನ ಕಟ್ಟಿಕೊಂಡು ನೆಲೆಸಿದರು. 1986ರ ಜುಲೈ 24ರಂದು ಕನ್ನಡ ನೆಲದಲ್ಲಿ ಕೊನೆಯುಸಿರೆಳೆದರು. ಬಸವಕಲ್ಯಾಣದಲ್ಲಿರುವ ಅವರ ಸಮಾಧಿ (ಗದ್ದುಗೆ)ಯನ್ನು ಸ್ಮಾರಕ ಮಾಡುವ ಸೌಜನ್ಯವನ್ನು ಕೂಡ ನಮ್ಮ ಸರಕಾರ ತೋರಿಸಲಿಲ್ಲ ತೋರುತ್ತಿಲ್ಲ.

ಕನ್ನಡಿಗರೇ ಈ ರೀತಿಯಾಗಿ ಕನ್ನಡ ಉಳಿಸಲು ಬೆಳೆಸಲು ಅನೇಕರು ಹೋರಾಡಿದ್ದಾರೆ, ಆದರೆ ಆ ಹೋರಾಟದ ಹಾದಿಯಲ್ಲಿ ಬಂಗಾರದ ನಕ್ಷತ್ರ ಈ ನಮ್ಮ ತಾಯಿ ಜಯದೇವಿ ಲಿಗಾಡೆ. ಈ ತಾಯಿಯ ತತ್ವಗಳು ಸಮಾಜಪರ ಚಿಂತನೆಗಳು ಮತ್ತು ಕನ್ನಡ ನಾಡುನುಡಿಯ ವಿಚಾರಗಳನ್ನ ಮುಂದಿನ ಪೀಳಿಗೆಗೆ ಮುಟ್ಟಿಸುತ್ತ ಅವರ ಅಶೋತ್ತರಗಳನ್ನ ಇಡೆರಿಸಲು ನಾವೆಲ್ಲರೂ ಶ್ರಮಿಸೋಣ.

ಪರಿವಿಡಿ (index)
*
Previous ವಚನ ಸಾಹಿತ್ಯ: ಅಪವರ್ಣೀಕರಣ... ವೈದಿಕ ವಿರೋಧ ಶುಭ ಮುಹೂರ್ತವೆಂದರೇನು? Next