ಕರ್ನಾಟಕ ಸಂಗೀತ ಪಿತಾಮಹ: ಭಕ್ತಿಭಂಡಾರಿ ಬಸವೇಶ್ವರರು

*

-ವಿದ್ವಾನ್‌ ಬಿ. ಎಸ್‌. ವಿಜಯರಾಘವನ್‌

ಕರ್ನಾಟಕ ಸಂಗೀತ ಪಿತಾಮಹ: ಭಕ್ತಿಭಂಡಾರಿ ಬಸವೇಶ್ವರರು.

ಸಂಗೀತದ ಇತಿಹಾಸ ಬಹು ಪುರಾತನವಾದದ್ದು. ಇದರಲ್ಲಿ ಕರ್ನಾಟಕದ ಶರಣರು ಮತ್ತು ಹರಿದಾಸರು ಮುಖ್ಯವಾದ ಪಾತ್ರವನ್ನು ವಹಿಸಿದ್ದಾರೆ. ಆದ್ದರಿಂದಲೇ ಇದಕ್ಕೆ ’ಕರ್ನಾಟಕ ಸಂಗೀತ’ ಎಂದು ಹೆಸರು ಬಂತು. ಅಲ್ಲದೆ ಕರ್ನಾಟಕ ಸಂಗೀತದ ಆದ್ಯ ಪ್ರವರ್ತಕರಾದ ಭಕ್ತಿಭಂಡಾರಿ ಬಸವೇಶ್ವರರನ್ನು ’ಕರ್ನಾಟಕ ಸಂಗೀತ ಪಿತಾಮಹ’ ಎಂಬ ಈ ಮಾತನ್ನು ವಿದ್ವಾನ್ ವಿಜಯರಾಘವನ್‌ ಹೇಳಿದರು.

ಈಗ ಕರ್ನಾಟಕ ಸಂಗೀತಕ್ಕೆ ಶರಣರ ಕೊಡುಗೆಯನ್ನು ಗಮನಿಸೋಣ. ಕರ್ನಾಟಕದ ಇತಿಹಾಸ ಬಹು ಪುರಾತನವಾದದ್ದು ಬಸವಣ್ಣನವರು, ಅಲ್ಲಮಪ್ರಭುಗಳು, ಮಹಾದೇವಿಯಕ್ಕ ಅವರುಗಳು ’ವಚನ ಸಾಹಿತ್ಯ’ವನ್ನು ರಚಿಸಿದರು. ಜನಮನದಲ್ಲಿ ಈ ವಚನಗಳು ಮಹಾ ಪ್ರಭಾವವನ್ನೇ ಉಂಟು ಮಾಡಿತು, ಈ ಸಾಹಿತ್ಯ ಜನಪ್ರಿಯವಾಯಿತು. ಎಲ್ಲರೂ ಇವುಗಳನ್ನು ಹಾಡುವುದಕ್ಕೆ ಪ್ರಾರಂಭ ಮಾಡಿದರು.

ಸ್ವರವಚನಗಳು

ಶರಣರ ವಚನಗಳಲ್ಲದೆ ಹಾಡುಗಳನ್ನೂ ರಚಿಸಿದ್ದಾರೆ ಮತ್ತು ಅವುಗಳನ್ನು ’ಸ್ವರವಚನಗಳು’ ಎಂದು ಕರೆದಿದ್ದಾರೆ ಎಂಬುದಾಗಿ ಇತ್ತೀಚಿನ ವಿದ್ವಾಂಸರ ಸಂಶೋಧನೆಯಿಂದ ತಿಳಿದು ಬಂದಿದೆ.

ನಾನು ಕನ್ನಡ ಎಂ. ಎ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ನನ್ನ ಗುರುಗಳಾದ ಪ್ರೊ. ತೀ. ನಂ. ಶ್ರೀಕಂಠಯ್ಯನವರು ಈ ವಿಷಯವನ್ನು ಕುರಿತು ಮೊಟ್ಟಮೊದಲು ಸಂಶೋಧನೆ ಮಾಡಿದರು. ತಮ್ಮ ’ಸಮಾಲೋಕನ’ ಎಂಬ ಪುಸ್ತಕದಲ್ಲಿ ಅವರು ಮಹಾದೇವಿಯಕ್ಕನ ಒಂದು ವಚನವನ್ನು ಗಮನಿಸಿ, ’ಇದು ವಚನವಲ್ಲ, ಅಕ್ಕ ಇದನ್ನು ಮೊದಲು ಹಾಡಾಗಿ ರಚಿಸಿರಬೇಕು’ ಎಂಬ ನಿರ್ಣಯಕ್ಕೆ ಬಂದರು. ಆ ಹಾಡಿನ ಮೇಲೆ ಕಾಂಬೋಧಿ ರಾಗದ ಹೆಸರೂ ಇದೆ. ಈ ಜಾಡನ್ನು ಹಿಡಿದು, ಮುಂದೆ ನನ್ನ ಇನ್ನೊಬ್ಬ ಗುರುಗಳಾದ ಡಾ. ಎಲ್‌. ಬಸವರಾಜು ಅವರು ಸಂಶೋಧನೆಯನ್ನು ಮುಂದುವರೆಸಿ, ’ಶೂನ್ಯ ಸಂಪಾದನೆ’ ಮೊದಲಾದ ಗ್ರಂಥಗಳನ್ನು ಅಮೂಲಾಗ್ರವಾಗಿ ಅಧ್ಯಯನ ಮಾಡಿ ’ಶಿವದಾಸ ಗೀತಾಂಜಲಿ’ ಎಂಬ ಮಹಾಗ್ರಂಥವನ್ನು ಬರೆದಿದ್ದಾರೆ. ಇದನ್ನು ಪರಮಪೂಜ್ಯ ಲಿಂಗೈಕ್ಯ ಜಗದ್ಗುರುಗಳಾದ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳಿಗೆ ಅರ್ಪಣೆ ಮಾಡಿರುತ್ತಾರೆ. ಶ್ರೀಗಳು ತಮ್ಮ ಸಂತೋಷವನ್ನು ಆ ಕೃತಿಯಲ್ಲಿ ಹೀಗೆ ವ್ಯಕ್ತಪಡಿಸಿದ್ದಾರೆ.

"ಈ ಗ್ರಂಥ ಸಂಪಾದಕರಾದ ಶ್ರೀ ಎಲ್. ಬಸವರಾಜು ನಮ್ಮ ಬಳಿಗೊಂದು ದಿನ ಬಂದು ಬಸವಾದಿ ಪ್ರಮಥರೂ ರಾಗತಾಳ ಸಹಿತವಾದ ಹಾಡುಗಳನ್ನು ಬರೆದಿರುವರೆಂದು ಹೇಳಿದರು. ಕೇಳಿ ನಮಗೆ ಅತ್ಯಾಶ್ಚರ್ಯವಾಯಿತು. ಆಮೇಲೆ ಅವರು ತಮ್ಮ ಹೇಳಿಕೆಯನ್ನು ಸೋದಾಹರಣೆವಾಗಿ ವಿವರಿಸಿದರು. ನಮಗೆ ಅತ್ಯಾನಂದವಾಯಿತು. ನಮ್ಮ ಸಂಸ್ಕೃತಿಗೆ. ಅಮೃತತೀರ್ಥ ಸ್ವರೂಪರಾದ ಪ್ರಮಥರ ಗೇಯಕೃತಿಗಳು ಇಡೀ ಮಾನವಲೋಕದ ಸಾರಸ್ವತ ಸ್ವತ್ತೆಂದು ಅವನ್ನು ಪ್ರಕಟಿಸಲು ಸಂಕಲ್ಪಿಸಿದೆವು.

ಶ್ರೀ ಎಲ್‌. ಬಸವರಾಜು ಅವರು ತಮ್ಮ ಈ ಗ್ರಂಥದ ಪ್ರಥಮಾವೃತ್ತಿಯನ್ನು ನಮ್ಮ ಗ್ರಂಥಮಾಲೆಯಲ್ಲಿ ಪ್ರಕಟಿಸಲು ಅನುವು ಮಾಡಿ, ಅದರ ಅಚ್ಚಿನ ಕಾರ್ಯಭಾರವನ್ನೆಲ್ಲ ಹೊತ್ತುದಕ್ಕಾಗಿ ಅವರಿಗೆ ನಮ್ಮ ಆಶೀರ್ವಾದಗಳು.

ಈ ಗ್ರಂಥ ಸಂಪಾದಕರ ಸಾಹಿತ್ಯ ಸಂಶೋಧನ ಜೀವನ ಉತ್ತರೋತ್ತರ ವಿಶಾಲವೂ ರಾಷ್ಟ್ರಹಿತಕಾರಿಯೂ ಆಗಲೆಂದು ಹಾರೈಸುವೆವು."

ಶರಣರು ರಚಿಸಿರುವ ಸ್ವರವಚನಗಳ ಸ್ವರೂಪ ಸ್ಥೂಲವಾಗಿ ಹೀಗಿದೆ: ಮೊದಲು ಪಲ್ಲವಿ ಬಳಿಕ ಮೂರು ಅಥವಾ ಐದು ಚರಣಗಳು. ಸ್ವರವಚನಗಳಿಗೆ ಅವರು ಬಳಸಿರುವ ರಾಗಗಳ ಹೆಸರು ಹೀಗಿವೆ: ಆಹಿರಿ, ಆರಭಿ, ಕಾಂಬೋಧಿ, ಕೈಶಿಕಿಮಂಗಳ, ದೇವಗಾಂಧಾರಿ, ಘೊರ್ಜರಿ, ಗುಂಡಕ್ರಿಯ, ಗೌಳ, ಕನ್ನಡಗೌಳ, ನಾರಾಯಣಿ, ಮಾಳವಿ, ಗೌಳಿಪಂತು, ಜಂಝಾಟಿ, ಪುನ್ನಾಗವರಾಳಿ, ಫಲಮಂಜರಿ, ಭೌಳಿ, ದೇಶಾಕ್ಷಿ, ದೇಶಿ, ಧನ್ಯಾಸಿ, ನಾಟಿ, ನಾದನಾಮಕ್ರಿಯೆ, ಪಹಾಡಿ, ಪಂತುವರಾಳಿ, ಭೂಪಾಳಿ, ಭೈರವಿ, ಸಾರಂಗ, ಮಲಹರಿ, ಮಾಧುಮಾದವಿ, ರಾಮಕ್ರಿಯ, ಲಲಿತ, ವರಾಳಿ, ವಸಂತ, ಮಾಳವಗೌಳ, ಹಿಂದೋಳ, ಶಂಕರಾಭರಣ, ಶ್ರೀರಾಗ, ಸೌರಾಷ್ಟ್ರ - ಹೀಗೆ ಇಂದು ನಮ್ಮ ಕರ್ನಾಟಕ ಸಂಗೀತದಲ್ಲಿ ಪ್ರಸಿದ್ಧವಾಗಿರುವ ಎಲ್ಲ ರಾಗಗಳನ್ನೂ ಬಳಸಿಕೊಂಡು ’ಸ್ವರವಚನ’ಗಳನ್ನು ರಚಿಸಲಾಗಿದೆ. ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಮೇಲ್ಕಂಡ ರಾಗಗಳನ್ನು ’ಬತ್ತೀಸ ರಾಗಗಳು’ ಎಂದು ಬಣ್ಣಿಸಿದ್ದಾರೆ. ತಾಳಗಳಲ್ಲಿ ಆದಿತಾಳ, ರೂಪಕತಾಳ, ಆಟತಾಳ ಮತ್ತು ಝಂಪೆ ತಾಳಗಳನ್ನು ಬಳಸಲಾಗಿದೆ.

ಅನಂತರ ೧೬ನೇ ಶತಮಾನದಲ್ಲಿ ಬಂದ ಹರಿದಾಸರು ಇದೇ ’ಬತ್ತೀಸ’ ರಾಗ-ತಾಳಗಳನ್ನು ಬಳಸಿಕೊಂಡು ’ಪದ’ಗಳನ್ನು ರಚಿಸಿರುವುದನ್ನು ತಾವು ಗಮನಿಸಬಹುದು. ಇದಲ್ಲದೆ, ಶರಣರ ವಚನಗಳು ಹರಿದಾಸರ ಮೇಲೆ ತುಂಬಾ ಪ್ರಭಾವವನ್ನು ಬೀರಿವೆ. ಅವರ ವಚನಗಳನ್ನು ಅನಸರಿಸಿ, ಅನುಕರಿಸಿ ಹರಿದಾಸರು ಉಗಾಭೋಗಗಳನ್ನು ರಚಿಸಿದ್ದಾರೆ. ಕೆಲವು ಉದಾಹರಣೆಗಳನ್ನು ಗಮನಿಸಿ:

ವಚನ

ನಾಳೆ ಬಪ್ಪುದು ನಮಗಿಂದೆ ಬರಲಿ,
ಇಂದು ಬಪ್ಪುದು ನಮಗೀಗಲೆ ಬರಲಿ,
ಇದಕಾರಂಜುವರು, ಇದಕಾರಳುಕುವರು
`ಜಾತಸ್ಯ ಮರಣಂ ಧ್ರುವಂ' ಎಂದುದಾಗಿ
ನಮ್ಮ ಕೂಡಲಸಂಗಮದೇವರು ಬರೆದ ಬರೆಹವ ತಪ್ಪಿಸುವಡೆ
ಹರಿಬ್ರಹ್ಮಾದಿಗಳಿಗಳವಲ್ಲ. / ೬೯೭ - ಗುರು ಬಸವಣ್ಣನವರು.

ಉಗಾಭೋಗ

ಇದಕಾರಂಜುವರೋ ಗೋಪಾಲ?
ಇದಕಾರಂಜುವರೋ, ನಾಳೆ ಬಾಹೋದು
ಎಮಗಿಂದೆ ಬರಲಿ, ಇಂದೆ ಬಾಹೋದು
ನಾಳೆ ಬರಲಿ, ಆಗ ಬಾಹೋದು
ಎಮಗೀಕ್ಷಣ ಬರಲಿ ಯಾತರ ಭಯವು,
ಅಚಲಾನಂದವಿಠಲ. - ಪುರಂದರದಾಸ.

ಇನ್ನೊಂದು ಉದಾಹರಣೆಯನ್ನು ನೋಡಿ:

ವಚನ

ಹರಿವ ಹಾವಿಂಗಂಜೆ, ಉರಿಯ ನಾಲಿಗೆಗಂಜೆ,
ಸುರಗಿಯ ಮೊನೆಗಂಜೆ,
ಒಂದಕ್ಕಂಜುವೆ, ಒಂದಕ್ಕಳುಕುವೆ
ಪರಸ್ತ್ರೀ ಪರಧನವೆಂಬೀ ಜೂಬಿಂಗಂಜುವೆ.
ಮುನ್ನಂಜದ ರಾವಣನೇ ವಿಧಿಯಾದ !
ಅಂಜುವೆನಯ್ಯಾ, ಕೂಡಲಸಂಗಮದೇವಾ. /447 - ಗುರು ಬಸವಣ್ಣನವರು.

ಉಗಾಭೋಗ

ಉರಿಗಂಜೆ, ಸಿರಿಗಂಜೆ
ಶರೀರದ ಭಯಕಂಜೆ
ಪರಧನ ಪರಸತಿ ಎರಡಕ್ಕಂಜುವೆನಯ್ಯ
ಹಿಂದೆ ಮಾಡಿದ ರಾವಣನೇನಾಗಿ ಪೋದನು
ಮುಂದೆನ್ನ ಸಲಹಯ್ಯ ಪುರಂದರವಿಠಲ. - ಪುರಂದರದಾಸ.

ಈ ಮೇಲ್ಕಂಡ ಉದಾಹರಣೆಗಳನ್ನು ಗಮನಿಸಿದಾಗ ಹರಿದಾಸರ ಮೇಲೆ ಶರಣರ ವಚನಗಳ ಪ್ರಭಾವ ಗಾಢವಾಗಿಯೇ ಆಗಿದೆ ಎಂಬುದನ್ನು ನೋಡಬಹುದು.

ವಚನ ಸಾಹಿತ್ಯ ಮತ್ತು ಸ್ವರವಚನಗಳು ಹರಿದಾಸರ ರಚನೆಗಳ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಅದರಲ್ಲೂ ಪುರಂದರದಾಸರ ಮೇಲೆ ಮೋಡಿ ಮಾಡಿದೆ! ಎಷ್ಟರ ಮಟ್ಟಿಗೆ ಅವರು ಪ್ರಭಾವಿತರಾಗಿದ್ದಾರೆ ಎಂದರೆ, ಒಂದು ದೇವರನಾಮದಲ್ಲಿ ತಮ್ಮನ್ನು ಜಂಗಮರು, ಲಿಂಗವಂತರು ಎಂದು ಹೇಳುವ ಮೂಲಕ ಬಸವಣ್ಣನವರಿಗೆ ಪರೋಕ್ಷವಾಗಿ ತಮ್ಮ ಗೌರವವನ್ನು ಸೂಚಿಸಿದ್ದಾರೆ. ಆ ದೇವರನಾಮ ಹೀಗಿದೆ:

ಜಂಗಮರು ನಾವು ಜಗದೊಳು
ಜಂಗಮರು ನಾವು ಲಿಂಗಾಂಗಿಗಳು
ಮಂಗಳವಂತರು ಭವಿಗಳೆಂತೆಂಬಿರಿ
ಹರ ಗುರು ದೈವಕೇಶವ ನಮ್ಮ ಮನೆದೈವ
ವರದ ಮೋಹನ ಗುರುಶಾಂತೇಶ
ಹರಗುರು ದ್ರೋಹ ಮಾಡಿದ ಪರವಾದಿಯು
ರೌರವ ನರಕದಿ ಮುಳುಗುವುದೆ ಸಿದ್ಧ
ವಿಭೂತಿ ನಮಗುಂಟು ವಿಶ್ವೇಶ ನಮಗುಂಟು
ಶೋಭನನಾಮ ಮುದ್ರೆಗಳುಂಟು
ಶ್ರೀಭಾಗೀರಥಿಯಗಣಿತ ಮಜ್ಜನವುಂಟು
ಸೌಭಾಗ್ಯವೀವ ಮಹಂತನ ಮಠದವರು ನಾವು
ವಿರಕ್ತರು ನಾವು ಶೀಲವಂತರು ನಾವು
ವೀರಭದ್ರಪ್ರಿಯ ಭಕ್ತರು ನಾವು
ಕಾರಣಕರ್ತ ಶ್ರೀ ಪುರಂದರವಿಠಲನ
ಕಾರುಣ್ಯಕೆ ಮುಖ್ಯಪಾತ್ರರು ನಾವು.

ಕರ್ನಾಟಕ ಸಂಗೀತದ ಆದ್ಯ ಪ್ರವರ್ತಕರಾದ ಭಕ್ತಿಭಂಡಾರಿ ಬಸವೇಶ್ವರರನ್ನು ಈ ಸಂಗೀತ ಸಮ್ಮೇಳನದಲ್ಲಿಯೇ "ಕರ್ನಾಟಕ ಸಂಗೀತ ಪಿತಾಮಹ" ಎಂಬುದಾಗಿ ಘೋಷಿಸಬೇಕೆಂದು ತಮ್ಮಲ್ಲಿ ವಿನಯಪೂರ್ವಕವಾಗಿ ಸಭೆಯನ್ನು ಕೋರುತ್ತೇನೆ. ಬಸವೇಶ್ವರರ ಜಯಂತಿ ಸಂದರ್ಭದಲ್ಲಿ "ಶಿವಶರಣರ ಸಂಗೀತೋತ್ಸವ"ವನ್ನು ಏರ್ಪಡಿಸಿ, ಎಲ್ಲ ವಿದ್ವಾಂಸರುಗಳೂ ಶರಣರ ಸಂಗೀತ ಕೃತಿಗಳನ್ನು ಹಾಡುವುದಕ್ಕೆ ಅವಕಾಶ ಕಲ್ಪಿಸಿದರೆ, ಈ ಕನ್ನಡ ರಚನೆಗಳು ಜನಪ್ರಿಯವಾಗುವುದರಲ್ಲಿ ಸಂಶಯವಿಲ್ಲ ಎಂದು ತಿಳಿಸಿದರು.

ಮೈಸೂರಿನಲ್ಲಿ ಆರು ದಿನಗಳ ಕಾಲ ವಿಜೃಂಭಣೆಯಿಂದ ಸಂಗೀತ ಸಮ್ಮೇಳನ ಜರುಗಿತು. ಜೆ. ಎಸ್. ಎಸ್. ಸಂಗೀತ ಸಭಾ ಟ್ರಸ್ಟ್ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು ಸಮ್ಮೇಳನದ ಅಂಗವಾಗಿ ಪ್ರತಿದಿನ ಸಂಜೆ ಖ್ಯಾತ ಸಂಗೀತಗಾರರಿಂದ ಸಂಗೀತ ಕಛೇರಿಗಳು ಏರ್ಪಾಡಾಗಿದ್ದವು. ಜೊತೆಗೆ ಬೆಳಗಿನ ವಿದ್ವತ್ ಗೋಷ್ಠಿಗಳಲ್ಲಿ ಸಂಗೀತ ವಿದ್ವಾಂಸರು ಮತ್ತು ಶಾಸ್ತ್ರಜ್ಞರುಗಳು ಉಪನ್ಯಾಸ, ವಿಚಾರಗೋಷ್ಠಿ ಹಾಗೂ ಪ್ರಾತ್ಯಕ್ಷಿಕೆಗಳು ನಡೆದವು.

(ಸುತ್ತೂರು ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೆಂದ್ರ ಮಹಾಸ್ವಾಮಿಗಳವರ ಸಂಸ್ಮರಣ ೨೦ನೇ ಸಂಗೀತ ಸಮ್ಮೇಳನವು ೨೦೧೩ ಡಿಸೆಂಬರ್ ೧ ರಿಂದ ೬ರವರೆಗೆ ಮೈಸೂರಿನಲ್ಲಿ ನಡೆಯಿತು. ಇದರ ಸಮ್ಮೇಳಾನಾಧ್ಯಕ್ಷತೆ ವಹಿಸಿದ್ದ ಸುಪ್ರಸಿದ್ಧ ವಿದ್ವಾನ್ ಬಿ. ಎಸ್. ವಿಜಯರಾಘವನ್‌ರವರು ಮಾಡಿದ ಭಾಷಣದ ಭಾಗ).

ಕೃಪೆ: ಶಾಂತಿ ಕಿರಣ ಮೇ-ಜೂನ್‌-೨೦೧೪.

ಪರಿವಿಡಿ (index)
*
Previousಸಂಗೀತ ಕ್ಷೇತ್ರಕ್ಕೆ ಶರಣರ ಕೊಡುಗೆಕೂಡಲಸಂಗಮ ಸುಕ್ಷೆತ್ರದಲ್ಲಿ ೩೪ನೇ ಶರಣಮೇಳ ೨೦೨೧Next
*