ಲಿಂಗಾಯತ : ಕನ್ನಡಿಗರು ಸೃಷ್ಠಿಸಿದ ಕರ್ನಾಟಕದ ಮೊದಲ ಧರ್ಮ

--ಡಾ. ಎಂ. ಎಂ. ಕಲಬುರ್ಗಿ, ವಿಶ್ರಾಂತ ಕುಲಪತಿಗಳು,
'ಸೌಜನ್ಯ', ಕಲ್ಯಾಣನಗರ, ಧಾರವಾಡ - 580 007

*

ತೀರ ಪ್ರಾಚೀನ ಕರ್ನಾಟಕದಲ್ಲಿ ಬೇಡ, ಅಂಬಿಗ, ಕುರುಬ ಮೊದಲಾದ ವೃತ್ತಿಮೂಲ 'ಜಾತಿ'ಗಳು ಮಾತ್ರ ಅಸ್ತಿತ್ವದಲ್ಲಿದ್ದವು. ಆ ಸಂಧರ್ಭದಲ್ಲಿ ಇಲ್ಲಿಗೆ ಉತ್ತರ ಭಾರತದಿಂದ ಬೌದ್ಧ, ಜೈನ, ವೈದಿಕ, (ಆಗಮಿಕ) ಶೈವವೆಂಬ ನಾಲ್ಕು 'ಧರ್ಮ'ಗಳು ವಲಸೆ ಬಂದವು. ಇಮ ಇಲ್ಲಿ ತಮ್ಮ ಅಸ್ತಿತ್ವವನ್ನು ಸ್ತಾಪಿಸಿಕೊಳ್ಳಲು ನಡೆಸಿದ ಪರಸ್ಪರ ಸ್ಪರ್ಧೆಯಲ್ಲಿ ಕರ್ನಾಟಕ ಮೂಲದ ಈ ಜಾತಿಗಳು ಒಮ್ಮೆ ಅವರ, ಒಮ್ಮೆ ಇವರ ಪಕ್ಷ ವಹಿಸಿ ಹೋರಾಡಿ ದಣಿಯುತ್ತಿದ್ದವು. ಬಹಳಷ್ಟು ಸಲ ದಾಸ್ಯಭಾವದಿಂದ ಬಾಳುತ್ತಿದ್ದವು.

ಈ ಹೋರಾಟದಲ್ಲಿ ಆತ್ಮವಾದಿಯಾದ ಜೈನ, ವೈದಿಕ, (ಆಗಮಿಕ) ಶೈವಧರ್ಮಗಳು ಒಂದೂಗೂಡಿ, ಅನಾತ್ಮವಾದಿಯಾದ ಬೌಧ್ಧಧರ್ಮವನ್ನು ಮೊದಲು ನಾಶಪಡಿಸಿದವು. ಬಳಿಕ ಆತ್ಮ-ಪರಮಾತ್ಮವಾದಿಯಾದ ವೈದಿಕ,(ಆಗಮಿಕ) ಶೈವಧರ್ಮಗಳು ಒಂದೂಗೂಡಿ, ಕೇವಲ ಆತ್ಮವಾದಿಯಾದ ಜೈನ ಧರ್ಮವನ್ನು ದುರ್ಬಲಗೊಳಿಸಿದವು. ಆಮೇಲೆ ಪ್ರಬಲವಾಗಿ ಉಳಿದ ಎರಡರಲ್ಲಿ ವೈದಿಕ ಧರ್ಮವು ಕ್ರಮೇಣ(ಆಗಮಿಕ) ಶೈವದ ಮೆಲೆ ಪ್ರಭಾವ ಬೀರಿ ಅದನ್ನು ಅರೆವೈದಿಕಗೊಳಿಸಿತು. ಇದರ ಫಲವಾಗಿ ಈ ಶೈವದ ಆಗಮಪಠ್ಯಗಳಲ್ಲಿ ವೇದಪರ ಮತ್ತು ವೇದವಿರೋಧಿ ಎಂಬ ಕವಲು ಕಾಣಿಸಿಕೊಂಡಿತು. ಇವುಗಳಲ್ಲಿ ವೇದಪರವಾದುದು ಶುದ್ಧಶೈವವೆನಿಸಿತು.

ಈ ಮೂರೂ ವಲಸೆ ಧರ್ಮಗಳು (ವೈದಿಕ, ಶೈವ, ಜೈನ) ನಮ್ಮ ನೆಲದ ಮೇಲೆ ತಮ್ಮ ತಮ್ಮ ದೇವತೆಗಳ ದೇವಾಲಯ ಸ್ಥಾಪಿಸಿ, ತೀರ್ಥಂಕರರ ಬಸದಿ ನಿರ್ಮಿಸಿ, ಅವುಗಳ ಒಳಹೊರಗೆ ತಮ್ಮ ಮಹಾಭಾರತ - ರಾಮಾಯಣ - ಜೈನಪುರಾಣ - ಶೈವಪುರಾಣೋಕ್ತ ಘಟನೆಗಳ ಶಿಲ್ಪವನ್ನು ಕೆತ್ತಿದವು.

ಈ ಧರ್ಮಗಳ ವ್ಯಸನಕ್ಕೊಳಗಾದ ಸ್ಥಳೀಯ ಕನ್ನಡಿಗರು ದೇವಾಲಯ - ಬಸದಿಗಳ ನಿರ್ಮಾಣ, ನಿರ್ವಹಣೆಗಳಿಗಾಗಿ ಉದ್ದಕ್ಕೂ ದುಡಿದರು. ತಮ್ಮನ್ನು ಮುಟ್ಟಿಸಿಕೊಳ್ಳದಿದ್ದರೂ ಅವರ ಅರ್ಚಕರಿಗೆ ದಾನ, ಆಚಾರ್ಯರಿಗೆ ದಕ್ಷಿಣೆ ನೀಡಿ ಹುಸಿ ಧನ್ಯತಾಭಾವ ತಾಳಿದರು.

ಇದಕ್ಕಿಂತ ಮಿಗಿಲಾಗಿ, ಈ ಮೂರೂ ವಲಸೆ ಧರ್ಮಗಳು ನಿರ್ಮಿಸಿದ್ದ ವರ್ಣವ್ಯವಸ್ಥೆಯಿಂದಾಗಿ ಸ್ಥಳೀಯ ಕಾಯಕಜೀವಿಗಳು - ಶೂದ್ರವರ್ಗಗಳು ಶೋಷಣೆಗೆ ಗುರಿಯಾಗಿದ್ದವು.

ಮಹಿಳೆಯು ಧಾರ್ಮಿಕ ವಿಧಿ ವಿಧಾನಗಳಿಂದ, ಮೋಕ್ಷದಿಂದ ವಂಚಿತಳಾಗಿದ್ದಳು. ಈ ಪ್ರತಿಷ್ಠಿತ ಧರ್ಮಗಳ ಬೆನ್ನಿಗೆ ನಿಂತ ಪ್ರಭುವರ್ಗವು ಸೊಕ್ಕಿ - ಪ್ರಜಾವರ್ಗವು ಸೊರಗಿದ್ದಿತು.

ತಮ್ಮ ಸಂಸ್ಕೃತಿಯ ಪ್ರಸಾರಕ್ಕಾಗಿ ಈ ಧರ್ಮಗಳು ನಮ್ಮ ಭಾಷೆಯನ್ನು ಬಳಸಿಕೊಂಡು, ಉತ್ತರಭಾರತದ ಕೃತಿಗಳನ್ನು ( ರಾಮಾಯಣ, ಮಹಾಭಾರತ, ಜೈನಪುರಾಣ ಇತ್ಯಾದಿ) ಸೃಜನಶೀಲವಾಗಿ ಅನುವಾದಿಸಿದರು. ಇವರ ರಾಜಕೀಯ, ಧಾರ್ಮಿಕ, ಸಾಮಾಜಿಕ, ಸಾಹಿತ್ಯಿಕ ಚಟುವಟಿಕೆಗಳಿಂದ ದೇವರೆಂದರೆ ಉತ್ತರಭಾರತದವು, ಪುರಾಣಪುರುಷರೆಂದರೆ ಉತ್ತರಭಾರತದವರು, ಸಾಮಾಜಿಕ ನೀತಿ ಎಂದರೆ ಉತ್ತರಭಾರತೀಯರದು, ಸಾಹಿತ್ಯವೆಂದರೆ ಉತ್ತರಭಾರತದ್ದು ಎಂಬ ಭ್ರಮೆ ಕನ್ನಡಿಗರಲ್ಲಿ ಬೆಳೆಯುವಂತೆ ಮಾಡಿದರು.

ಈ ಧರ್ಮಗಳಿಂದಾಗಿ ನಮ್ಮ ಅರಿವು ವಿಸ್ತಾರವಾಗಿರಬಹುದಾದರೂ ಅಸ್ಮಿತೆ ನಾಶ ಮಾಡಿ ಬರುವ ಅರಿವು ಎಷ್ಟು ದೊಡ್ಡದಿದ್ದರೂ ಅದು ಸ್ವೀಕಾರಯೋಗ್ಯವಲ್ಲವೆಂದೇ ಹೇಳಬೇಕು.

ಈ ಸತ್ಯ ಗೊತ್ತಾಗದ ಕಾರಣ, ಕನ್ನಡಿಗರು ದಿನೇ ದಿನೇ ಬದುಕಿನ ಎಲ್ಲ ಕ್ಷೇತ್ರಗಳಲ್ಲಿಯೂ ಭೌತಿಕವಾಗಿ - ಮಾನಸಿಕವಾಗಿ ಉತ್ತರಭಾರತದ ಗುಲಾಮರಾಗುತ್ತ ಬಂದರು.

ಈ ರೀತಿ ವೈದಿಕ ಧರ್ಮವು ಮಿಕ್ಕ ಮೂರು ಧರ್ಮಗಳನ್ನು ಕ್ರಮವಾಗಿ ನಾಶಪಡಿಸುತ್ತ, ದುರ್ಬಲಗೊಳಿಸುತ್ತ ಮತ್ತು ತನ್ನ ಪ್ರಭಾವಕ್ಕೆ ಒಳಗುಮಾಡಿಕೊಳ್ಳುತ್ತ ಬಂದು, ಕರ್ನಾಟಕದಲ್ಲಿ ತನ್ನ ವರ್ಚಸ್ಸನ್ನು ಸ್ಥಾಪಿಸಿತು. ಇದರ ಜೊತೆಗೆ ರಾಜರಿಂದ ಗ್ರಾಮಗಳನ್ನು 'ಅಗ್ರಹಾರ'ವಾಗಿ ಪಡೆದು ಮಹಾಜನವೆಂಬ ಪೂಜ್ಯತೆ ಗಳಿಸಿತು. ತನಗಾಗಿ ಗ್ರಾಮದಲ್ಲಿ 'ಬ್ರಹ್ಮಪುರಿ' ಹೆಸರಿನ ಪ್ರತ್ಯೇಕ ಬಡಾವಣೆಯನ್ನು, 'ಘಟಕಾಸ್ತಾನ' ಹೆಸರಿನ ಪ್ರತ್ಯೇಕ ವಿದ್ಯಾಕೇಂದ್ರವನ್ನು ಸ್ತಾಪಿಸಿಕೊಂಡಿತು. ಸಾಲದುದಕ್ಕೆ ತನ್ನ ಶ್ರೇಷ್ಠತೆಗಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರವೆಂದು ಸಮಾಜವನ್ನು ವಿಭಾಗಿಸಿ, ತಾನು ಅಗ್ರಸ್ತಾನದಲ್ಲಿ ನಿರಾತಂಕವಾಗಿ ಮೆರೆಯತೊಡಗಿತು. ಉತ್ತರದ ಸಂಸ್ಕೃತ ಭಾಷೆ, ಉತ್ತರದ ರಾಮಾಯಣ-ಮಹಾಭಾರತ-ಪಂಚತಂತ್ರ ಮೊದಲಾದ ಸಾಹಿತ್ಯ, ಉತ್ತರದ ದೇವರು-ತತ್ವ-ಆಚರಣೆಗಳು ಮೂಲಕ ತನ್ನ ಪ್ರಭಾವ-ಪ್ರತಿಷ್ಠೆಗಳನ್ನು ಗಟ್ಟಿಗೊಳಿಸಿತು.

ಇದರ ಜೊತೆಗೆ ಆಗಮಿಕ ಶೈವವು ಪಾಶುಪತ ನಕುಲೀಶ ಕಪಾಲಿಕ ಶುದ್ಧಶೈವವೆಂದು ನಾಲ್ಕು ಕವಲುಗಳಲ್ಲಿ ಬೆಳೆದು ನಿಂತಿದ್ದಿತು. ಇವುಗಳಲ್ಲಿ ವೇದಪರ ಶುದ್ಧಶೈವವು ಬ್ರಾಹ್ಮಣೀಕರಣಗೊಂಡು ಗ್ರಾಮಗಳ್ಲಲಿ 'ಪುರ' ಹೆಸರಿನಿಂದ ಪ್ರತ್ಯೇಕ ಬಡಾವಣೆಯಲ್ಲಿ ವಾಸವಾಗಿ, 'ಮಠ' ಹೆಸರಿನ ಪ್ರತ್ಯೇಕ ವಿದ್ಯಾಕೇಂದ್ರದ ವ್ಯವಸ್ಥೆ ಮಾಡಿಕೊಂಡು, ದೇವಾಲಯಗಳನ್ನು ನಿರ್ಮಿಸಿಕೊಂಡು ತಕ್ಕಮಟ್ಟಿಗೆ ಬಲಿಷ್ಟವಾಗಿ ನೆಲೆಯೂರಿದ್ದಿತು.

ಇವುಗಳಂತೆ ಜೈನವು ಬಸದಿಗಳನ್ನು ನಿರ್ಮಿಸಿಕೊಂಡು, ಕನ್ನಡ ಭಾಷೆ-ಸಾಹಿತ್ಯಗಳ ಮೂಲಕ ತನ್ನ ಧರ್ಮಪ್ರಚಾರದಲ್ಲಿ ತೊಡಗಿದ್ದಿತು. ಕಾಲಕ್ರಮೇಣ ಇದು ವೈದಿಕ ಬ್ರಾಹ್ಮಣ ಆಗಮಿಕ ಬ್ರಾಹ್ಮಣ(ಶುದ್ಧಶೈವ)ಗಳ ದಬ್ಬಾಳಿಕೆಗೆ ತುತ್ತಾಗುತ್ತಾ ಕ್ರಮವಾಗಿತನ್ನ ಬಸದಿಗಳನ್ನು ಬ್ರಹ್ಮಜಿನಾಲಯ, ಎಕ್ಕೋಟಿ ಜಿನಾಲಯ(ಎಕ್ಕೋಟಿ= ಶೈವಸನ್ಯಾಸಿ) ವೆಂದು ಪುನರ್ನಾಮಗೊಳಿಸಿಕೊಂಡು, ಅಸಹಾಯಕ ಸ್ಥಿತಿಯಲ್ಲಿ ಬಾಳುತ್ತಲಿದ್ದಿತ್ತು.

ಹೀಗೆ ಔತ್ತರೇಯ ಈ ಮೂರು ವಲಸೆ ಧರ್ಮಗಳು (ಅದರಲ್ಲಿಯೂ ಹೆಚ್ಚು ಪ್ರಭಾವಶಾಲಿಯಾದ ವೈದಿಕ ಧರ್ಮವು) ಬೆಳೆದು, ಸ್ಥಳೀಯ ಕನ್ನಡಿಗರನ್ನು ಜಾತಿಗಳಾಗಿಯೇ ಉಳಿಸಿ, ತನ್ನ ಅನುಯಾಯಿಗಿಸಿಕೊಂಡಿದ್ದವು, ಕನ್ನಡಿಗರೂ ಆ ಧರ್ಮಗಳ, ಅದರಲ್ಲಿಯೂ ವೈದಿಕ ಧರ್ಮದ ಶ್ರ್ರೇಷ್ಠತೆಯ ವ್ಯಸನಕ್ಕೆ ಮರುಳಾಗಿ, ತಮ್ಮ ಆಸ್ಮಿತೆಯನ್ನು ನಾಶಮಾಡಿಕೊಂಡಿದ್ದರು. ಕನ್ನಡಿಗರ ಇಂಥ ಪರಾಧೀನ ಸಂಧರ್ಭದಲ್ಲಿ ಬಸವಣ್ಣ ಜನಿಸಿ, ಅವರನ್ನು ಒಗ್ಗೂಡಿಸಿ ಅವರ ಆಸ್ಮಿತೆಯನ್ನು ಜಾಗ್ರತಗೊಳಿಸಿದರು. ಅನ್ಯಪ್ರಾಂತೀಯ-ಪರಪ್ರಾಂತೀಯರಲ್ಲಿ ನಿರ್ಮಾಣವಾಗಿದ್ದ ಪ್ರಧಾನ-ಅಧೀನ ಜೀವನ ವೈವಸ್ಥೆಯನ್ನು ಪಲ್ಲಟಗೋಳಿಸಿದರು.

ಕೆಲವರು ಹೇಳುವಂತೆ ಬಸವಣ್ಣ ಶಂಕರನ ವೈದಿನ ಶೈವ(ಸ್ಮಾರ್ತ) ಬ್ರಾಹ್ಮಣನಲ್ಲ, ಮೇಲೆ ಹೇಳಿದ ಆಗಮಿಕ ಶುದ್ಧಶೈವ ಬ್ರಾಹ್ಮಣ, ಕವಿ ಹರಿಹರ ಬಸವಣ್ಣನನನ್ನು ಕುರಿತು ಹೇಳುವ 'ಶುದ್ಧಶೈವ ಸರೋನಿಧಿ ತರಂಗಮಾಲಾ ನಿಮಗ್ನಚಿತ್ತ'(ಸ್ಥಲ-12) ಎಂಬ ಮಾತೂ ಇದಕ್ಕೆ ಆಧಾರವಾಗಿದೆ. ಈ ಆಗಮಿಕ ಶುದ್ಧಶೈವ ಬ್ರಾಹ್ಮಣರು ಗ್ರಾಮದಲ್ಲಿ 'ಪುರ' ಹೆಸರಿನ ಪ್ರತ್ಯೇಕ ಬಡಾವಣೆಯಲ್ಲಿ ವಾಸಿಸುತ್ತಿದ್ದರು. ಬಸವಣ್ಣನ ತಂದೆ ಮಾದಿರಾಜ ಬಾಗೆವಾಡಿಯಲ್ಲಿ ಈ 'ಪುರ' ಬಡಾವಣೆಯ ಒಡೆಯನಾಗಿದ್ದನು. ಬಸವಣ್ಣನಿಗೆ ಸಂಭಂಧಿಸಿದ ಅರ್ಜುನವಾಡ ಶಾಸನ 'ಬಾಗವಾಡಿ ಪುರವರಾಧೀಶ್ವರ ಮಾದಿರಾಜ'ನೆಂದು ಕರೆದುದು ಈ ಕಾರಣಕ್ಕಾಗಿ. ಹರಿಹರನ ಪ್ರಕಾರ ಈ ಕುಟುಂಬದಲ್ಲಿ ಆಗಮಿಕಶೈವದ ಶಿವಭಕ್ತಿಯುಂ' ವೈದಿಕ(ಶೈವ)ದ 'ಕರ್ಮಮುಂ' ಒಂದಾಗಿ ಆಚರಣೆಯಲ್ಲಿದ್ದವು. ಬಸವಪುರಾಣ ಇದನ್ನು 'ಉಭಯ ಧರ್ಮಾಚಾರಮಾರ್ಗ' (ಬ.ಪು. 3-60) ವೆಂದು ಕರೆದುದನ್ನು ಇಲ್ಲಿ ಸ್ಮರಿಸಬಹುದು.

ಈ ಮಿಶ್ರರೂಪದ ಧರ್ಮಾಚರಣೆ ತನಗೆ ಸರಿಬರಲಿಲ್ಲವಾಗಿ ಬಸವಣ್ಣ 'ಕರ್ಮಲತೆಯಂತಿರ್ದ' ಜನ್ನಿವಾರನ್ನೂ. 'ಹೋತಿನ ಗಂಟಲಂ ಬಿಗಿವಂತಿರ್ದ' ಮೌಂಜಿಯನ್ನೂ, ಹರಿದುಹಾಕಿ ಮನೆಯಿಂದ ಹೊರಬಂದನು. ಹೀಗೆ ನೇಣಿಂಗೆ ಹೊರಗಾಗಿ, ಅವನು 'ಸಮಯಾಚಾರಕ್ಕೆ' ಒಳಗಾದನೆಂದು ಅವನ ವಚನ (ವಚನ448), ಆಗ ಅವನನ್ನು 'ಮಹಾಮನೆ'ಯವರು ಸ್ವಾಗತಿಸಿದರೆಂದು ಬಸವಪುರಾಣ(ಬ.ಪ.3-84) ಹೇಳುತ್ತವೆ. ಇದರಿಂದ ಸಮಯಚಾರವು ಒಂದು ಧಾಮಿಕ ಪಂಥದ ಹೆಸರೆಂದು, ಮಹಾಮನೆಯೆಂಬುದು ಅದರ ಪಾರಿಭಾಷಿಕ ಪದವೆಂದು ಸ್ಪಷವಾಗುತ್ತದೆ. ನಾಥಪಂಥೀಯನಾದ ಸಿದ್ದರಾಮ ಮಹಾಮನೆಯಲ್ಲಿ ವಾಶಿಸುತ್ತಿದ್ದನೆಂದು ಸಿದ್ದರಾಮ ಚಾರಿತ್ರ್ಯ ಹೇಳುವುದರಿಂದ, ಮಹಾಮನೆಯೆಂಬುದು ಮೂಲತಃ ನಾಥಪಂಂಥೀಯ ಪರಿಭಾಷೆಯೆನಿಸುತ್ತದೆ. ಇದು ಬಸವಣ್ಣನು ತನ್ನ ಬ್ರಾಹ್ಮಣ ಮನೆಯನ್ನು ಬಿಟ್ಟು ಮಹಾಮನೆಯ ನಾಥಪಂಥ ಸೇರಿದನೆಂದು ಸೂಚಿಸುತ್ತದೆ. ಕಲ್ಲೇದೇವರಪುರ ಶಾಸನವನ್ನಾಧರಿಸಿ ಕಪಟರಾಳ ಕೃಷ್ಣರಾಯರೂ ಬಸವಣ್ಣದು ನಾಥಪಂಥವೆಂದು ತಿಳಿಸಿದ್ದಾರೆ. ಕೂಡಲ ಸಂಗಮನಾಥನೂ ಮೂಲತಃ ನಾಥಪಂಥೀ ದ್ಯೈವತವೆಂದು ನಾನು ಬೇರೊಂದು ಲೇಖನದಲ್ಲಿ ಸಪಷ್ಟಪಡಿಸಿದ್ದೇನೆ. (ಮಾರ್ಗ-3, ಪು.278) ಈ ಕೂಡಲಸಂಗಮವೆಂಬ ನಾಥಕ್ಷೇತ್ರಕ್ಕೆ ಬಸವಣ್ಣ ಬರಲು ಅವನು ಈ ಮೊದಲು ಬಾಗೇವಾಡಿಯಲ್ಲಿ ನಾಥಪಂಥ ಸೇರಿದುದೇ ಕಾರಣವಾಗಿರಬೇಕು. ಇದರಿಂದ ಕೆಲವರು ಹೇಳುವಂತೆ ಬ್ರಾಹ್ಮಣ್ಯ ತ್ಯಜಿಸಿದ ಬಸವಣ್ಣ ಕೂಡಲಸಂಗಮದಲ್ಲಿ ಜಾತವೇದಿಯಿಂದಲೋ, ಬೇರೊಬ್ಬರಿಂದಲೋ ಮಾರ್ಗೀಯ ವೀರಶೈವದೀಕ್ಷೆ ಪಡೆದನೆಂಬ ವಾದ ಬಿದ್ದು ಹೋಗಿ, ಅವನು ದೇಶೀಯ ನಾಥಪಂಥದಿಂದ ಹೊಸವಿಚಾರ ಸಂಗ್ರಹಿಸಿದನೆಂಬ ವಾದ ತೆರೆದುಕೊಲ್ಳುತ್ತದೆ. ಈ ಕೆಳಗಿನ ಬದಲಾವಣೆಗಳ ಮೂಲಕ ತಾನು ಪ್ರವೇಶಿಸಿದ ನಾಥಪಂಥವನ್ನು ಬಸವಣ್ಣ ಲಿಂಗಾಯತವನ್ನಾಗಿಸಿದನು.

ಇಂಥ ಅನ್ಯಾಯ ಅತಿರೇಕ ಸಂದರ್ಭದಲ್ಲಿ ಸ್ಥಳೀಯ ದುಡಿಯುವ ವರ್ಗಗಳಾದ ಕುರುಬ - ಅಂಬಿಗ - ಸಮಗಾರ - ಮಾದಿಗ - ಡೋಹರ - ಪಾಂಚಾಳ - ಅಗಸ - ಒಕ್ಕಲಿಗ ಮೊದಲಾದ ಸಮುದಾಯದ ಗಂಡು - ಹೆಣ್ಣುಗಳಲ್ಲಿ ಅಸ್ಮಿತೆಯನ್ನು ಜಾಗ್ರತಗೊಳಿಸಿ, ಉತ್ತರಭಾರತದ ಧಾರ್ಮಿಕ ಯಜಮಾನ ಸಂಸ್ಕೃತಿಯ ವಿರುದ್ಧ (ಮುಖ್ಯವಾಗಿ ವೈದಿಕ, ಶೈವಗಳ ವಿರುದ್ಧ) ಬಸವಣ್ಣ 'ಶರಣ ಚಳುವಳಿ' ಹೂಡಿದನು.

ಇದರ ಪರಿಣಾಮವಾಗಿ

  • ದೇವತೆಗಳಿಲ್ಲ ದೇವರಿದ್ದಾನೆ.
  • ಜಾತಿಗಳಿಲ್ಲ ವೃತ್ತಿ (ಕಾಯಕ) ಗಳಿವೆ.
  • ಸ್ತ್ರೀಜಾತಿ ಪುರುಷಜಾತಿಗಳಿಲ್ಲ ಮನುಷ್ಯಜಾತಿ ಇದೆ.
  • ವ್ಯಕ್ತಿವಾದಿ ಸೋಹಂ ಪೂರ್ಣಧರ್ಮವಲ್ಲ ಸಮಾಜವಾದಿ ದಾಸೋಹಂ ಪೂರ್ಣಧರ್ಮ.

ಇವೇ ಮೊದಲಾದ ಪರ್ಯಾಯ ಸಿದ್ಧಾಂತಗಳು ಸಮಾಜದಲ್ಲಿ ಸೃಷ್ಟಿಯಾದವು. ಇದರ ಫಲವಾಗಿ 'ಲಿಂಗಾಯತ' ವೆಂಬ ಹೊಸ ಧರ್ಮ ಕನ್ನಡ ನಾಡಿನಲ್ಲಿ ಆಕಾರ ಪಡೆಯಿತು.

ಹೀಗಾಗಿ ಲಿಂಗಾಯತವೆನ್ನುವುದು ಉತ್ತರಭಾರತದ ವಲಸೆ ಧರ್ಮಗಳ ವಿರುದ್ಧ ಎಲ್ಲ ಪಂಗಡಗಳ ಕನ್ನಡಿಗರು ಸೇರಿ ಕರ್ನಾಟಕದಲ್ಲಿ ಸೃಷ್ಟಿಸಿದ ' ಮೊದಲ ಸ್ಥಳೀಯ ಧರ್ಮ' ವಾಗಿದೆ. ಇದು ಜಗತ್ತಿಗೆ ಕನ್ನಡಿಗರು ನೀಡಿದ ಕೊಡುಗೆಯಾಗಿದೆ.

1. ನಾಥಪಂಥವು ಕೇವಲ ವೃತ್ತಿ (ಕಾಯಕ)ಗಳು ಅಸ್ತಿತ್ವದಲ್ಲಿದ್ದ ಕಾಲಘಟ್ಟದಲ್ಲಿ ಹುಟ್ಟಿದ್ದು. ಅಲ್ಲಿ ಜಾತಿಭೇದ, ಲಿಂಗಭೇಧಗಳ ಪ್ರಶ್ನೆಯೇ ಇರಲಿಲ್ಲ. ಆಗ ಎಲ್ಲರೂ ಸೇರಿ ಊಟ ಮಾಡುತ್ತಿದ್ದರು, ಪರಸ್ಪರ ರಕ್ತಸಂಭಂಧ ಬೆಳೆಸುತ್ತಿದ್ದರು. ಮುಂದೆ ಈ ವೃತ್ತಿಗಳು ಜಾತಿಗಳಾಗಿ ಮಾರ್ಪಟ್ಟ ಕಾಲದಲ್ಲಿ ಈ ಪಂಥದಲ್ಲಿ ಎಲ್ಲರೂ ಸೇರಿ ಊಟ ಮಾಡುದುವು ಮಾತ್ರ ಮುಂದುವರಿದು, ಪರಸ್ಪರ ರಕ್ತ ಸಂಭಂಧ ನಿಂತುಬಿಟ್ಟಿತು. ಈ ಸಂಧರ್ಭದಲ್ಲಿ ಹುಟ್ಟಿಬಂದ ಬಸವಣ್ಣ ಮೊದಲಾದ ಶರಣರು 'ಉಂಬುದು ಊಡುವುದು ಶಿವಾಚಾರ, ಕೊಂಬುದು ಕೊಡುವುದು ಕುಲಾಚಾರವೆಂಬ ಅನಾಚಾರಿಯ ಮುಖವ ನೋಡಲಾಗದು'ಎಂದು ಸಾರುತ್ತ ಅಲ್ಲಿಯ ಜಾತಿಪ್ರಜ್ಞೆಯನ್ನು ನಿರಾಕರಿಸಿ, ಮೂಲದಲ್ಲಿದ್ದ ವೃತ್ತಿ(ಕಾಯಕ)ಪದ್ಧತಿ ಮತ್ತೆ ಅಸ್ತಿತ್ವಕ್ಕೆ ಬರಬೇಕೆಂದು ವಾದಿಸಿದರು. ಆಗ ಮತ್ತೆ ಎಲ್ಲರೂ ಸೇರಿ ಊಟ ಮಾಡುವುರೊಂದಿಗೆ ಪರಸ್ಪರ ರಕ್ತಸಂಭಂಧ ಬೆಳೆಸುವ ಸಿದ್ದಾಂತ ಜೀವ ಪಡೆಯಿತು. ಇಂಥ ಮುಕ್ತವಿಚಾರ ಮುಕ್ತಸಮಾಜ ತೆರೆದುಕೊಳ್ಳುತ್ತಲೇ ವಿಪ್ರ ಮೊದಲಾಗಿ ಅಂತ್ಯಜಕಡೆಯಾಗಿ ಕನ್ನಡನಾಡಿನ ಸ್ಥಳೀಯರು ಜಾತಿಬಂಧನ ಕಳಚಿಕೊಂಡು ವೃತ್ತಿ(ಕಾಯಕ)ನೆಲೆಗೆ ಹೊರಳತೊಡಗಿದರು. ಎಲ್ಲ ವೃತ್ತಿ(ಕಾಯಕ)ಗಳು ಸಮಾನವೆಂಬ ಇವರ ಸಿದ್ದಾಂತದಿಂದಾಗಿ ಜಾತಿಬಂಧನದಿಂದ ಮುಕ್ತರಾಗಿದ್ದ ಶರಣರು, ವೃತ್ತಿತಾರತಮ್ಯದಿಂದಲೂ ಮುಕ್ತರಾಗಿ ಸಮಸಮಾಜದ ಸದಸ್ಯರೆನಿಸಿದರು.

2. ಜಾತಿಭೇಧದಂತೆ ಸಮಾಜದಲ್ಲಿ ಶೋಷಣೆಗೆ ಮಾದ್ಯಮವಾದುದು ಲಿಂಗಭೇಧ. ಪುರುಷ ಪ್ರಧಾನ ಸಮಾಜ ನಿರ್ಮಾಣಕ್ಕೆ ಅನುಕೂಲವಾಗುವಂತೆ ಸ್ತ್ರೀ ಹಲವು ಸ್ತರಗಳಲ್ಲಿ ಶೋಷಣೆಗೆ ಗುರಿಯಾಗಿದ್ದಳು. ಶರಣರು ಅವಳಿಗೆ ಪಾರಮಾರ್ಥಿಕ, ಲೌಕಿಕ ಹಂತಗಳಲ್ಲಿ ಪುರುಷನ ಸಮಾನಸ್ಥಾನಮಾನ ಕಲ್ಪಿಸಿಕೊಟ್ಟರು.

3. ಜಾತಿಭೇಧ ಲಿಂಗಭೇಧಗಳಂತೆ ಶೋಷಣೆಗೆ ಅವಕಾಶ ಕಲ್ಪಿಸಿದುದು ವರ್ಗಭೇಧ. ಅರ್ಥ-ಅಧಿಕಾರ ಇತ್ಯಾದಿ ಕಾರಣಗಳಿಂದಾಗಿ ಭೇಧಸಂಸ್ಕೃತಿ ಏರ್ಪಟ್ಟು, ಮೇಲುವರ್ಗಗಳಿಂದ ಕೆಳವರ್ಗಗಳು ಶೋಷಣೆಗೆ ಒಳಗಾಗಿದ್ದವು. ಶರಣರ ಕಾಯಕ-ದಾಸೋಹ ತತ್ವಗಳ ಮೂಲಕ ವರ್ಗಸಮಾನತೆಯ ಪರಿಕಲ್ಪನೆ ಸಮಾಜದಲ್ಲಿ ಸಾಕಾರಗೊಂಡಿತು.

4. ಜಾತಿಯಂತೆ ಭಾರತವನ್ನು ನಾಶಪಡಿಸಿದ ಇನ್ನೊಂದು ಅಂಶವೆಂದರೆ ದೇವರು. ಬಸವಣ್ಣನ ಕಾಲದ ಒಬ್ಬನೇ ದೇವರು ಅನೇಕ ಶಿಷ್ಠದೇವತೆಗಳಾಗಿ, ಪರಿಶಿಷ್ಠದೇವತೆಗಳಾಗಿ ಬಿಚ್ಚಿಕೊಂಡಿದ್ದವು. ಈಗ ಶಿಷ್ಠದೇವತೆಗಳ ಸುತ್ತ ಹೋಮ ಹವನಗಳೆಂಬ ಡಂಭಾಚಾರಗಳು, ಪರಿಶಿಷ್ಠ ದೇವತೆಗಳ ಸುತ್ತ ಪ್ರಾಣಿಬಲಿ, ಉಗ್ರ ಆಚರಣೆ ಮೊದಲಾದ ವಾಮಾಚರಗಳು ಸೃಷ್ಟಿಯಾಗಿದ್ದವು. ಶಿಷ್ಟರು ಪಾಪ-ಪುಣ್ಯ, ಸ್ವರ್ಗ-ನರಕ, ಪೂರ್ವಜನ್ಮ-ಪುನರ್ಜನ್ಮ, ಸಂಚಿತಕರ್ಮ-ಪ್ರಾರಬ್ಧಕರ್ಮ-ಆಗಾಮಿಕರ್ಮ, ಸ್ವರ್ಗ-ಮತ್ರ್ಯ-ಪಾತಾಲ ಇತ್ಯಾದಿ ಕಲ್ಪನೆಗಳನ್ನು ಹುಟ್ಟಿಸಿ ಜನರ ಶೋಷಣೆ ನಡೆಸಿದ್ದರು. ಅರ್ಚಕರು-ಮಠಾಧೀಶರು-ಪುರೋಹಿತರು-ಜೋಯಿಸರು ಶೋಷಕರಾಗಿ ಬೆಳೆದ್ದಿದ್ದರು. ಈ ಎಲ್ಲ ವಿಪರ್ಯಾಶಗಳ ಸೃಷ್ಟಿಗೆ ಹೊರಗಿನ ದೇವರುಗಳನ್ನು ಒಪ್ಪಿಕೊಂಡುದೇ ಕಾರಣವಾಗಿತ್ತು. ಹೀಗಾಗಿ ಶರಣರು ಈ ಹೊರಗಿನ ದೇವರನ್ನು ನಿರಾಕರಿಸಿ, ಒಳಗಿನ ದೇವರ ಸಿದ್ದಾಂತವನ್ನು ಸ್ಥಾಪಿಸಿದರು. ಆಗ ಹೊರಗಿನ ದೇವರ ದೇವಾಲಯಗಳು ನಿರಾಕರಿಸಲ್ಪಟ್ಟು, ದೇಹದೇವಾಲಯ ತತ್ವ ಬೆಳೆಯಿತು. ಇದರಿಂದಾಗಿ 'ಲಿಂಗಾಯತರಲ್ಲಿ ದೇವತೆಗಳಿದ್ದಿಲ್ಲ; ದೇವರಿದ್ದಾನೆ' ಎಂಬ ತತ್ತ್ವ ಸ್ಥಾಪನೆಗೊಂಡಿತು.

5. ಕೊನೆಯದಾಗಿ ಮತ್ತು ಮುಖ್ಯವಾಗಿ ನಾಥಪಂಥ ಮತ್ತು ಭಾರತೀಯ ಇತರ ದರ್ಮಗಳು ಜೀವವನ್ನು ದೇವನನ್ನಾಗಿಸಿಕೋಳ್ಳುವವರೆಗೆ ಅಂದರೆ ಲಿಂಗಾಯತ 'ಭಕ್ತಸ್ಥಲ+ಮಾಹೇಶ್ವರಸ್ಥಲ=ಗುರು', ಪ್ರಸಾದಿಸ್ಥಲ+ಪ್ರಾಣಲಿಂಗಿಸ್ಥಲ=ಲಿಂಗ' ಹಂತದವರೆಗೆ ತಮ್ಮ ಚಿಂತನೆಯನ್ನು ಬೆಳೆಸಿದವು. ವಚನಕಾರರು ಹೀಗೆ ವೈಕ್ತಿತ್ವದ ದೈವೀಕರಣಕ್ಕೆ ಮಾತ್ರ ನಿಲ್ಲದೆ, ಅದನ್ನು ಸಾಮಾಜಿಕರಣ ಗೋಳಿಸುವ 'ಶರಣಸ್ಥಲ+ಐಕ್ಯಸ್ಥಲ=ಜಂಗಮ' ಹಂತದವರೆಗೆ ಈ ಚಿಂತನೆಯನ್ನು ಬೆಳೆಸಿದರು. ಇಲ್ಲಿ ಶರಣನಾಗುವುದೆಂದರೆ ದೇವರಿಗೆ ಶರಣನಾಗುವುದಲ್ಲ, ಸಮಾಜಕ್ಕೆ ಶರಣಾಗುವುದೆಂಬ ಅರ್ಥವಿದೆ. ಒಟ್ಟಾರೆ, 'ಶರಣಸ್ಥಲ+ಐಕ್ಯಸ್ಥಲ=ಜಂಗಮ'ವೆಂಬುದು ಪ್ರಪಂಚದ ಅರ್ಥವಿದೆ. ಒಟ್ಟಾರೆ, ಶರಣಸ್ಥಲ+ಐಕ್ಯಸ್ಥಲ=ಜಂಗಮ'ವೆಂಬುದು ಪ್ರಪಂಚದ ತತ್ತ್ವಶಾಸ್ತ್ರಕ್ಕೆ ಶರಣರು ನೀಡಿದ ಹೊಸ ಕೊಡುಗೆಯಾಗಿದೆ.

ಈ ತತ್ತ್ವಗಳ ಸಂವಾದಕ್ಕಾಗಿ ಅನುಭವಮಂಟಪವೆಂಬ ಸಂಸ್ಥೆಯ್ನನು ಶರಣರು ಹುಟ್ಟುಹಾಕಿದರು. ಜಾತಿಭೇಧ, ಲಿಂಗಭೇಧ, ವರ್ಗಭೇಧವಿಲ್ಲದೆ ಎಲ್ಲರಿಗೂ ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಲ್ಪಿಸಿಕೊಟ್ಟರು. ಹೀಗೆ ಮುಕ್ತ ಚರ್ಚೆಯಲ್ಲಿ ಅವರ ತತ್ತ್ವಗಳು ರೂಪುಗೊಳ್ಳುತ್ತಲಿದ್ದವು.

ಹೀಗೆ ಸಂವಾದಕ್ಕಾಗಿ ಅನುಭವಮಂಟಪವನ್ನು ಆಸ್ತಿತ್ವಕ್ಕೆ ತಂದ ಶರಣರು, ಸಂವಹನಕ್ಕಾಗಿ ಜನಭಾಷೆಯಲ್ಲಿ ವಚನಗಳನ್ನು ಬರೆದರು. ಈ ಮೊದಲು ಧಾರ್ಮಿಕ ಪಾವಿತ್ರ್ಯ ಹಾಳಾಗಬಾರದೆಂಬ ಭ್ರಮೆಯಿಂದ ವೈದಿಕ ಬ್ರಾಹ್ಮಣರು ಮತ್ತು ಆಗಮಿಕ ಬ್ರಾಹ್ಮಣರು ತಮ್ಮ ಧಾರ್ಮಿಕ ಕೃತಿಗಳನ್ನು ಸಂಸ್ಕೃತದಲ್ಲಿ, ಲೌಕಿಕ ಕೃತಿಗಳನ್ನು ಕನ್ನಡದಲ್ಲಿ ಬರೆಯುತ್ತಿದ್ದರು. ಇದಕ್ಕೆ ವಿರುದ್ದಧವೆಂಬಂತೆ ಜೈನರು ಧಾರ್ಮಿಕ-ಲೌಕಿಕ ಎರಡೂ ಸಾಹಿತ್ಯಗಳಿಗೆ ಕನ್ನಡವನ್ನು, ಅಂದರೆ ಮಾರ್ಗೀಯ ಕನ್ನಡವನ್ನು ಬಳಸಿದರು. ಈ ಜೈನರಿಗೆ ವಿರುದ್ದಧವೆಂಬಂತೆ ಶರಣರು ಮಾರ್ಗೀಯ ಕನ್ನಡಕ್ಕೆ ದೇಶಿಯ ಕನ್ನಡದಲ್ಲಿ ಸಾಹಿತ್ಯ ರಚಿಸಿದರು. ಇದಲ್ಲದೆ ಜೈನರು ಮತ್ತು ವೈದಿಕರು ಈವರೆಗೆ ಉತ್ತರಭಾರತದ ಪ್ರಾಕೃತ-ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಸೃಜನಶಿಲವಾಗಿ ಭಾಷಾಂತರಿಸಿದರೆ, ಇದಕ್ಕೆ ಪ್ರತಿಯಾಗಿ ಶರಣರು ನೇರವಾಗಿ ಕನ್ನಡದಲ್ಲಿಯೇ ಸ್ವತಂತ್ರ ಸಾಹಿತ್ಯ ರಚಿಸಿದರು. ಗಮನಿಸಬೆಕಾದ ಅಂಶವೆಂದರೆ, ಉತ್ತರಭಾರತದ ಕೃತಿಗಳನ್ನೇ ಆಧರಿಸಿದ ಕಾರಣ, ಪಂಪಯುಗದಲ್ಲಿ ಅನ್ಯಸಂಸ್ಕೃತಿಯ ರಾಮ, ಕೃಷ್ಣ, ತೀರ್ಥಂಕರರೇ ಕನ್ನಡ ಸಾಹಿತ್ಯದಲ್ಲಿ ಮುಖ್ಯವಾಗಿ ವಿಜೃಂಭಿಸಿದರು. ಶರಣ ಸಾಹಿತ್ಯದಲ್ಲಿ ಇವರೆಲ್ಲ ಮೂಲೆಗೆ ಸರಿದು 'ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ' ಎಂಬಂಥ ಮಾತುಗಳ ಮೂಲಕ ಸ್ಥಳೀಯ ಮಹಾತ್ಮರು ವಿಜೃಂಭಿಸಿದರು. ಗಮನಿಸಬೆಕಾದ ಇನ್ನ್ನೂ ಒಂದು ಅಂಶವೆಂದರೆ, ಅರಿಕೇಸರಿ, ಇರಿವಬೆಡಂಗರಂಥ ರಾಜರ ಸ್ತುತಿಗೆ ಮಾದ್ಯಮವಾಗುವ ಬದಲು 'ಆನೀ ಬಿಜ್ಜಳಂಗೆ ಅಂಜುವೆನೆ ಅಯ್ಯಾ' ಎಂಬಂಥ ಹೇಳಿಕೆಗಳಿಂದಾಗಿ ರಾಜತ್ವವನ್ನು ನಿರಾಕರಿಸುವ ದಿಟ್ಟ ದಾರಿಗಳು ಈ ಸಾಹಿತ್ಯದಲ್ಲಿ ತೆರೆದವು. ಅಂತೀಮದಲ್ಲಿ ಸ್ಥಳೀಯ ಅರಿಕೇಸರಿಯಂಥವರೂ ಸಾಹಿತ್ಯ ಸಿಂಹಾಸನದಿಂದ ಪದಚ್ಯುತಗೊಂಡು, ಅಲ್ಲಿ ಮಾದರ ಚೆನ್ನಯ್ಯ, ಅಕ್ಕಮಹಾದೇವಿಯಂಥ ಸ್ಥಳೀಯ ಶ್ರೀಸಾಮಾನ್ಯರು ಕಾಣಿಸಿಕೊಳ್ಳತೊಡಗಿದರು.

ಈ ಎಲ್ಲ ಹೊಸ ಧೋರಣೆ-ಸಾಧನೆ ಕಾರಣವಾಗಿ ಕರ್ನಾಟಕದಲ್ಲಿ ಪಂಪಯುಗಕ್ಕೆ ಪ್ರತಿಯಾಗಿ ಬಸವಯುಗವೊಂದು ತೆರೆದುಕೊಂಡಿತು. ಒಟ್ಟಾರೆ, ಪಂಪಯುಗವನ್ನು ಕನ್ನಡಿಗರ ಆಸ್ಮಿತೆಯ ವಿಸ್ಮೃತಿಯುಗವೆಂದೂ ಬಸವಯುಗವನ್ನು ಕನ್ನಡಿಗರ ಆಸ್ಮಿತೆಯ ಜಾಗೃತಯುಗವೆಂದೂ ಕರೆಯಬಹುದಾದ ಹೊಸ ಬೆಳಕು ಕಾಣಿಸಿಕೊಂಡಿತು.

ಮೇಲೆ ಹೇಳಿದಂತೆ ಬೌದ್ಧ, ಜೈನ, ವೈದಿಕ, ಶೈವಗಳು ಕರ್ನಾಟಕ್ಕಕೆ ಉತ್ತರ ಭಾರತದಿಂದ ಬಂದ ವಲಸೆ ಧರ್ಮಗಳಾದರೆ, ಮಿಕ್ಕವಗಳಲ್ಲಿ ಅದ್ವೈತಧರ್ಮವು ಕೇರಳದ ಶಂಕರನಿಂದ, ವಿಶಿಷ್ಟಾದ್ವೈತ ಧರ್ಮವು ತಮಿಳುನಾಡಿನ ರಾಮಾನುಜನಿಂದ ಕರ್ನಾಟಕ್ಕೆ ಬಂದ ವಲಸೆ ಧರ್ಮಗಳಾಗಿವೆ. ಮೇಲಾಗಿ ಇವೆರಡೂ ಉತ್ತರದ ವೈದಿಕ ಸಿದ್ಧಾಂತದ ಉತ್ಪತ್ತಿಗಳಾಗಿವೆ. ಇವುಗಳಿಗೆ ಪ್ರತಿಯಾಗಿ ಲಿಂಗಾಯತ ಮತ್ತು ಮಾಧ್ವಗಳು ಸ್ಥಳೀಯರು ಸ್ಥಾಪಿಸಿದ ಧರ್ಮಗಳಾಗಿದ್ದರೂ ಇವುಗಳಲ್ಲಿ ಮಾಧ್ವವು ಉತ್ತರ ಭಾರತದ ವೈದಿಕ ಸಿದ್ದಾಂತದ ಉತ್ಪತಿಯಾಗಿದೆ. ಇದಕ್ಕೆ ವಿರುದ್ಧವೆಂಬಂತೆ ಲಿಂಗಾಯತವು ಅವೈದಿಕವಾಗಿದ್ದು, ಬಸವಣ್ಣನ ನೇತೃತ್ವದಲ್ಲಿ ಸ್ಥಳೀಯ ಕನ್ನಡಿಗರಾದ ಜೇಡರ ದಾಸೀಮಯ್ಯ, ಮಡಿವಾಳ ಮಾಚಿದೇವ, ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಅಂಬಿಗರ ಚೌಡಯ್ಯ, ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ ಮೊದಲಾದವರು ಸೇರಿ ಸೃಷ್ಟಿಸಿದುದಾಗಿದೆ. ಇನ್ನೊಂದು ಅಂಶಂದರೆ, ಮಾಧ್ವವು 13ನೆಯ ಶತಮಾನದ ಧರ್ಮವಾದರೆ, ಲಿಂಗಾಯತವು 12ನೆಯ ಶತಮಾನದ ಧರ್ಮವಾಗಿದೆ. ಆದುದರಿಂದ, ಲಿಂಗಾಯತವು ಸ್ಥಳೀಯ ಕನ್ನಡಿಗರು ಕರ್ನಾಟಕದಲ್ಲಿ ಸೃಷ್ಟಿಸಿದ ಮೊದಲ ಧರ್ಮವೆಂದು ಖಚಿತವಾಗಿ ಹೇಳಬಹುದು.

ಸೌಜನ್ಯ/ಕೃಪೆ; ಬಸವಪಥ ಅಗಸ್ಟ್2013. ಪುಟ 39-45

ಪರಿವಿಡಿ (index)
*
Previousಕಲ್ಯಾಣ ಕ್ರಾಂತಿ Kalyana Revolotionಲಿಂಗಾಯತ ಪತ್ರಿಕೆಗಳುNext
*