ಲಿಂಗಾಯತವೇ ಸತ್ಯ | ಮಾನವೀಯತೆ |
ಕೃಷಿ ಕಾಯಕ ಶರಣರು |
- ಶ್ರೀ ಸಂಗಮೇಶ ಎನ್. ಜವಾದಿ,
snjawadi2009@gmail.com
ಓಂ ಶ್ರೀಗುರು ಬಸವಲಿಂಗಾಯ ನಮಃ
ಭಾರತ ದೇಶದಲ್ಲಿ ಕೃಷಿ ನಡೆದು ಬಂದ ಮಾರ್ಗವನ್ನು 3 ಹಂತಗಳಲ್ಲಿ ಗುರುತಿಸಬಹುದು, 2000 ವರ್ಷಗಳ ಹಿಂದಿನ ವೇದಗಳ ಕಾಲದ ಪ್ರಾಚೀನ ಕೃಷಿ, ಮಧ್ಯಯುಗೀನ ಕೃಷಿ ಹಾಗು 200 ವರ್ಷಗಳಿಂದ ಚಾಲ್ತಿಯಲ್ಲಿರುವ ಹೊಸ (ಆಧುನಿಕ) ಕೃಷಿ.
ನಮ್ಮ ಹನ್ನೇರೆಡನೆ ಶತಮಾನದ ಶರಣರು ಕಾಯಕವೇ ಕೈಲಾಸವೆಂದು, ಕಾಯಕದಲ್ಲಿಯೇ ಅವರ ಜೀವನ ಹಾಗು ವಿಶೇಷವಾಗಿ ಕೃಷಿ ಕಾಯಕದಲ್ಲಿ ಅನೇಕ ಶರಣರು ತಮ್ಮ ಬದುಕನ್ನು ಸಾಗಿಸಿ, ಬೇರೊಬ್ಬರಿಗೆ ಆದರ್ಶಮಯವಾಗಿ ಚಿರಋಣಿಯಾಗಿ ಉಳಿದಿದ್ದಾರೆ. ವಿವಿಧ ವರ್ಗ ಜಾತಿ ಪ್ರದೇಶ ವೃತ್ತಿ ಕಾಯಕಗಳ ಶರಣರೆಲ್ಲರೂ ಸೇರಿ ಸಮಾನತೆಯ ಸಮಾಜವನ್ನು ಕಟ್ಟಲು ಹುಟ್ಟುಹಾಕಿದ ಆಂದೋಲನದಲ್ಲಿ ಭಾಗಿಯಾದವರು ಅನೇಕ ಕೃಷಿ ಕಾಯಕದ ಶರಣರು
ಅಂದಿನ ರಾಜ್ಯ ಸುಂಕದ ಹೆಚ್ಚಿನ ತೆರಿಗೆಯನ್ನು ಕೇಳಿದಾಗ, ಅದನ್ನು ಬಹಿಷ್ಕರಿಸಿ ಪ್ರತಿಭಟನೆಯನ್ನು ಸಾರಿದ ಶರಣರು, ರೈತ ಚಳುವಳಿಯ ಶ್ರೇಷ್ಠ ಆದ್ಯ ಪ್ರವರ್ತಕರೆಂದು ಕರೆದರೆ ತಪ್ಪಾಗಲಾರದು, ಹಣ, ಅಂತಸ್ತು, ಆಸ್ತಿ, ಐಶ್ವರ್ಯ, ಸಂಗ್ರಹಣೆ ಶರಣರ ಆದರ್ಶ ಗುರಿಯಲ್ಲದಿದ್ದರೂ, ಕೃಷಿ ಅಥವಾ ಅನ್ಯ ಕಾಯಕದಿಂದ ಬಂದ ಸಂಪತ್ತನ್ನು ಆ ದಿನ ಬೇಕಾದಷ್ಟೆ ಉಪಯೋಗಿಸಿ ಉಳಿದದ್ದನ್ನು ದಾಸೋಹಕ್ಕೆ ನೀಡುವುದು ಅವರ ಮೌಲ್ಯಯುತ ಸಿದ್ದಾಂತಕ್ಕೆ ಸಾಕ್ಷಿ. ಶರಣರು, ಅರಸೋತ್ತಿಗೆಯ ದಬ್ಬಾಳಿಕೆಯನ್ನು ಒಪ್ಪಿ ಸಹಿಸಿಕೊಳ್ಳುವುದಿಲ್ಲ ಈ ಆತ್ಮ ಗೌರವವೇ ಅವರ ಪ್ರಗತಿಪರ ನಿಲುವಿನ ಹೆಗ್ಗುರುತುಗಳು, ಕೃಷಿ ಕಾಯಕದಲ್ಲಿ ಕಷ್ಟ - ಸುಖಗಳಿಗೆ ಸಮನಾಗಿ ಜೀವನವನ್ನು ಸಾಗಿಸಿದರು, ‘ಭಕ್ತಿಯೆಂಬ ಪ್ರಥ್ವಿಯಲ್ಲಿ ಗುರೂಪದೇಶ ವೆಂಬ ನೇಗಿಲು ಹಿಡಿದು’ ಎಂಬ ವಚನ ಅತ್ಯಂತ ದೊಡ್ಡದಾದ ಮೌಲ್ಯಯುತ ವಚನವಾಗಿದೆ (ರಚನೆಯಾಗಿದೆ) ಇದರಲ್ಲಿ ಅತ್ಯಂತ ಮಾರ್ಮಿಕವಾಗಿ ಕೃಷಿಕಾಯಕ ಶ್ರೇಷ್ಠತೆಯ ಬಗೆ ಸುಂದರವಾಗಿ ಮನಸ್ಸಿಗೆ ಮುಟ್ಟುವಂತೆ ತಿಳಿಸಿದಾರೆ, ಶರಣರು ಈ ಸಾಂದ್ರವಾದ ವಚನ ರಚನೆಯಲ್ಲಿ ಬಾಹ್ಯದ ಬೇಸಾಯದೊಂದಿಗೆ ಅಂತರಂಗದ ಕೃಷಿಯು ಹಾಸುಹೊಕ್ಕಗಿದೆ ಹಾಗೂ ಇನ್ನೊಂದು ಶರಣರ ವಚನ ಹೀಗಿದೆ
“ ಅಂಗವೆ ಭೂಮಿಯಾಗಿ, ಲಿಂಗವೆ ಬೆಳೆಯಾಗಿ
ವಿಶ್ವಾಸವೆಂಬ ಬತ್ತ ಬಲಿದು ಉಂಡು
ಸುಖಿಯಾಗಿರಬೇಕೆಂದ ಕಾಮ ಭೀಮ ಜೀವಧನದೊಡೆಯ.”
ಹೀಗೆ ಸರಳವಾಗಿ ಕಾಣುವ ಈ ಸುಂದರ ವಚನಗಳ ಸಾಲುಗಳು ಬೇರೆಯದೆ ಅಂತರರಾಳದ ಒಳಾರ್ಥವನ್ನು ಹೊಂದಿದೆ ಸ್ವತ ಕೃಷಿ ಕಾಯಕ ಶರಣರಾದ ಒಕ್ಕಲಿಗ ಮುದ್ದಣ್ಣ. ಅಂಗವೆ ಭೂಮಿಯಾಗಿ, ಲಿಂಗವೆ ಬೆಳೆಯಾಗಿ ಎಂದು ಹೇಳುವಲ್ಲಿ ಅನುಭವ ಜನ್ಯವಾದ ಶರಣಪ್ರಜ್ಞೆ ಎದ್ದು ಕಾಣುತ್ತಿದೆ. ಅಂಗ-ಭೂಮಿ, ಲಿಂಗ-ಬೆಳೆಗಳು, ಐಹಿಕ ಲೋಕದ ಸಂಗತಿಗಳು, ಪ್ರಾಪಂಚಿಕ ಬದುಕಿನಲ್ಲಿ ಅವು ದ್ರವ್ಯ ಮಾತ್ರ ಆದರೆ ಇಲ್ಲಿ ಅಂಗ-ಭೂಮಿ, ಲಿಂಗ - ಬೆಳೆ, ಎಂಬ ಕೃಷಿ ಕಾಯಕದ ಸಹಚರ್ಯದ ನುಡಿಗಟ್ಟುಗಳಾಗಿ ಬಂದಾಗ ಪ್ರಾಪ್ತವಾಗುವ ಅರ್ಥ ಸಿರಿವಂತಿಕೆ ಮನಸ್ಸಿನಲ್ಲಿ ನಾಟಿ ನಿಲ್ಲುತ್ತದೆ. ಶರಣರು ಹೇಳುವ ಕೃಷಿ ಕಾಯಕದ ಲಿಂಗಾಂಗಸಾಮರಸ್ಯದ ದ್ವನಿ ಇಲ್ಲಿ ಮನನೀಯವಾಗಿದೆ ಎಂದರೆ ತಪ್ಪಾಗಾಲಾರದು, ಅವರ ಜೀವನ ಮುಡಿಪಾಗಿಟ್ಟಿದೇ ಈ ಕಾಯಕ ನೀತಿಯ ಮೌಲ್ಯದ ಮೇಲೆ.
ಶರಣರು ಮನುಷ್ಯನ ಕೃಷಿ ಕಾಯಕದ ವಿಶೇಷ ಗುಣವಾದ ವಿಶ್ವಾಸವನ್ನು ಬೆಳೆದು ತಂದ ಭತ್ತದ ಫಸಲಿಗೆ ಹೋಲಿಸಿದಾರೆ, ಉತ್ತಿಬಿತ್ತಿ ಬೆಳೆದ ಕೃಷಿ ಧಾನ್ಯವನ್ನು ಮನೆಗೆ ತರುವಲ್ಲಿನ ಶ್ರಮ ಹಾಗು ಸಂತೋಷ ಅವರ್ಣನೀಯ, ಹಾಗೆ ಬೆಳೆದು ಒಲಿದು ಬಂದು, ಫಸಲು ತೃಪ್ತಿ ನೀಡಬೇಕಾದ, ಕೃಷಿಕಾಯಕ ಫಲದ ಸಂಕೇತವಾದ ಧಾನ್ಯವು ಅವರ ಪಾಲಿಗೆ ಶ್ರೇಷ್ಠ, ಶೃದ್ಧೆಯ ಕಾಯಕವಾಗಿದೆ, ವಿಶ್ವಾಸ - ನಂಬುಗೆಗೆ ಸರಿ ಸಮಾನವಾಗಿದೆ ಎಂದು ತಿಳಿದು ಕೊಳ ಬೇಕಾಗಿದೆ, ಹೇಗೆ ಇನ್ನೊಂದು ವಚನದಲ್ಲಿ ಹೇಳಲಾಗಿದೆ.
“ಕತ್ತಲೆಯಲ್ಲಿ ಹಾಲಕೊಂಡಡೆ ಸಹಿ ತಪ್ಪುವುದೆ ?
ತ್ರಿವಿಧಕ್ಕೆ ಗರ್ಭಗೆಚ್ಚು ಖಂಡಿತವಾಯಿತು
ಅರಿದಡೆ ತಾನೆಂಬ ಮರೆದಡೆ ಜಗವೆಂಬ
ನೀ ಕೊಟ್ಟ ಭೂಮಿಗೆ ಮುಂದೆ ಕರಲು, ಹಿಂದೆ ಇಗ್ಗರಲು
ಬಿತ್ತ ವಟ್ಟಕ್ಕೆ ದಿಕ್ಕಿಲ್ಲ.
ಪೈರಿಗೆ ನೀರು ಬೇಕೆಂಬಲ್ಲಿ ಉಚಿತವನರಿದು ಬಿಡಬೇಕು
ತಾಪತ್ರಯದ ಮೆಟ್ಟ ನೇರಿ, ಪಾಪದ ಹೊಟ್ಟ ತೊರಿ
ಗುತ್ತಿಗೆಕಾರಂಗೆ ಮತ್ತೆ ಕುಳುವುಂಟೆ ?
ಉಳುವ ಬಕ್ಕಲಮಯಗನ ತಪ್ಪ ನೋಡದೆ ಒಪ್ಪಗೊಳ್ಳಯ್ಯಾ.
ಎಂಬ ಶರಣ ಒಕ್ಕಲಿಗ ಮುದ್ದಣ್ಣನ ವಚನದಲ್ಲಿ ಕೃಷಿ ಕಾಯಕದ ವಿಚಾರಗಳು ಹಾಗು ಆಚರಣೆ ಮತ್ತು ನಡೆ - ನುಡಿಯ ಮಾತುಗಳು, ಶಾಬ್ದಿಕ ಮಾಂತ್ರಿಕತೆ, ಅರ್ಥ ಸಿರಿವಂತಿಕೆಯಿಂದ ಕೊಡಿದೆ ಎನ್ನಬಹ್ರದು, ಕೃಷಿ ಕಾಯಕದಲ್ಲಿ ಕಾಣವ ತೃಪ್ತಿ ಹಾಗು ಸಕಲ ಜೀವಿಗಳಿಗೆ ಆಶ್ರಯ ನೀಡುವ ಕಾಯಕದ ಬಗ್ಗೆ ಅತ್ಯಂತ ಗೌರವ ದಿಂದ ಹಾಗ ವಿಶ್ವಾದಿಂದ ಶರಣರು ತಮ್ಮ ಜೀವನದಲ್ಲಿ ಆಳವಡಿಸಿ ಕೊಂಡು ಬಾಳಿದಾರೆ.
ಬಸವ – ಅಲ್ಲಮರ ಸಮಕಾಲೀನ ಶರಣರು ಬೇಸಾಯ ಮಾಡಿ ಯೊಗ್ಯ ತೆರಿಗೆಯನ್ನು ಕಟ್ಟುವುದು ಕರ್ತವ್ಯ ವೆಂದು ಮತ್ತು ಹೆಚ್ಚಾಗಿ ತೆರಿಗೆ ಕಟ್ಟ ಬೇಕೆಂದು ರಾಜ್ಯಾಜ್ಞೆಯನ್ನು ತಿಳಿಸಿದಾಗ ಪ್ರತಿಭಟನೆ ಮಾಡಿದ ಕೀರ್ತಿ ಶರಣರಿಗೆ ಸಲುತ್ತದೆ. ಮುದ್ದಣ ಅನುಭವ ಮಂಟಪದಲ್ಲಿ ಕೃಷಿಕಾಯಕದ ಪ್ರತಿ ನಿಧಿಯಾಗಿ, ಕೃಷಿ ಕಾಯಕದ ಮಹಿಮೆಯನ್ನು ಉಳಿದ ಶರಣರಿಗೆ ತಿಳಿಸುವ ಕೆಲಸ ಸಹ ಆಗಿತ್ತು ಎನ್ನಬಹುದಾಗಿದೆ. ಅಲ್ಲದೆ ಇನ್ನು ಕೃಷಿ ಕಾಯಕದಲ್ಲಿ ಶರಣರಾದ ಏಲೇಶ ಕೇತಯ್ಯಾ, ಇಳಿಹಾಳ ಬೊಮ್ಮಯ್ಯಾ, ಕೀಲಾರದ ಭೀಮಣ್ಣ, ಒಕ್ಕಲಿಗ ಮುದ್ದಣ್ಣ, ಇತ್ಯಾದಿ ಶರಣರು ಕೃಷಿಯೇ ಜೀವವೆಂದು ಭಾವಿಸಿ ಬದಕಿ ಬಾಳಿ ತೋರಿಸಿದಾರೆ. ಮತ್ತೊಂದು ಶರಣರ ವಚನ ಹೀಗಿದೆ.
ಮೂರಡಿ ಮಣ್ಣಿಗೆ ಆರು ಹೊನ್ನ ತೆತ್ತು,
ಮೀರಿ ಹದಿಕೆಯ ಬೇಡೆನೆಂದು, ಈ ಗ್ರಾಮದವರ ಮುಂದಿಟ್ಟು
ಮೀರಲಿಲ್ಲಾಯೆಂದು ಪಟ್ಟೆಯ ಕೊಟ್ಟು,
ಮತ್ತೂರು ಗೂಡಿ ಹದಿಕೆಯ ಬೇಡಿದಡೆ, ನಾ ಕೊಡಲಿಲ್ಲ.
ನೀ ಕೊಟ್ಟ ಪಟ್ಟೆ
ನಮ್ಮ ನಟ್ಟನಡುಮನೆಯ ಐದುಕಾಲ ನೆಲಹಿನಲ್ಲಿ ಕಟ್ಟಿಯದೆ ಕೋ !
ನೀ ತಪ್ಪಿದಡೆ ನಿನಗೆ ಹೇಳುವ ಒಡೆಯರುಂಟೆ?
ನಾನೊಕ್ಕಲು ನೀನೊಡೆಯ.
ಮೀರಿ ಕೊಂಡಿಹೆನೆಂದಡೆ
ಮುನ್ನವೇ ಸಿದ್ಧಾಯ ಸೆರೆಗೆ ನಾನೊಳಗು.
ಗುತ್ತಿಗೆಕಾರಂಗೆ ಮತ್ತೆ ಕುಳವುಂಟೆ?
ಇನ್ನು ಕೊಟ್ಟೆನಾದೊಡೆ
ಎನ್ನ ಹಟ್ಟಿಕೊಟ್ಟಿಗೆಯೊಡೆಯ ಕಾಮಭೀಮ ಜೀವಧನದಾಣೆ.
ಎಂಬ ಒಕ್ಕಲಿಗ ಮುದ್ದಣ್ಣ ಶರಣರ ಕೃಷಿ ಕಾಯಕದಲ್ಲಿ ಇಟ್ಟ ಭಕ್ತಿ ಹಾಗು ಕೃಷಿಯಲ್ಲಿ ಬೆಳೆಯುವ ಧಾನ್ಯಗಳ ಬಗೆ, ತೆರೆಗೆ ಕಟ್ಟುವ ಕುರಿತು ಹಾಗು ದಾಸೋಹ ಸೇವೆ ಬಗೆ ವಿವರವಾಗಿ ವಿವರಿಸಿದಾರೆ.
ಶರಣರು ಆಧ್ಯಾತ್ಮ ಸಾಧನೆಗಾಗಿ ಧರ್ಮಾಶ್ರಯಕ್ಕಿಂತಲೂ ಸರಳವಾದ ಕೃಷಿ ಕಾಯಕದ ಭಕ್ತಿ ಮಾರ್ಗವನ್ನು ಮುಂಚೂಣಿಯಲ್ಲಿ ಅದಾಗಲೇ ಹಾಕಿ ಕೊಟ್ಟಿದ್ದರು, ಅವರು ಕೃಷಿ ಕಾಯಕದ ಜ್ಞಾನವನ್ನು (ಹಸಿವನ್ನು) ಇಂಗಿಸಿಕೊಳ್ಳಲು ಒಕ್ಕಲಿಗ ಮುದ್ದಣ್ಣ ಶರಣ ಮಹಾಮನೆ- ಅನುಭವ ಮಂಟಪದ ಭಾಗವಾಗಿ ಸಾಧಕನಾದ, ಅತಿ ಹೆಚ್ಚು ತೆರಿಗೆ ಕಟ್ಟಲು ರಾಜ್ಯದ ಪ್ರತಿನಿಧಿಗಳು ಸೂಚಿಸಿದಾಗ, ಅದಕ್ಕೆ ಪ್ರತಿಭಟನೆ ಸೂಚಿಸಿ, ರಾಜನ ಮನ ಒಲಿಕೆಯ ಮೂಲಕ, ಸಮಸ್ತ ಕೃಷಿ ಕಾಯಕದ ಶರಣರ ರಕ್ಷಣೆಗೆ ಒಕ್ಕಲಿಗ ಮುದ್ದಣ್ಣ ನಿಲ್ಲುತ್ತಾನೆ, ಇದು ರಾಜಾಡಳಿತದ ಕಾಲದಲ್ಲಿ ಕೂಡ ನಡೆದ ಪ್ರಜಾಪ್ರಭುತ್ವ ಮಾದರಿ ಹೋರಾಟ. ಇದರ ಪರಿಣಾಮವೇನಾಯಿತು ಎಂಬುದು ಮುಖ್ಯವಲ್ಲ, ಮುದ್ದಣ್ಣ ಶರಣ ರೈತ ಮುಖಂಡನಾಗಿ, ಸಮಸ್ತ ಶರಣ ಸಂಕಲವನ್ನು ಒಂದುಗೂಡಿಸಿ, ಅವರ ಅಭಿಪ್ರಾಯ ಒಟ್ಟುಗೂಡಿಸುವದಲ್ಲಿ ಯಶಸ್ವಿಯಾದರೆಂಬುವುದು ಗಮನಿಸಬೇಕಾದ ಸಂಗತಿಯಾಗಿದೆ. ಶರಣರ ಕಾಯಕದ ವಿನಯವಂತಿಕೆ ಮತ್ತು ಹೋರಾಟದ ಕೆಚ್ಚುಗಳಿರಡೂ ಮೇಳೈಸಿದ ಕೃಷಿ ಪಂಡಿತರಾಗಿದ್ದಾರೆ ಹಾಗಾಗಿ ಈ ವಚನದಲ್ಲಿ ನೀ ತಪ್ಪಿದಡೆ ನಿನಗೆ ಹೇಳುವ ಮಾತು ಸಾಂಧರ್ಬಿಕವಾಗಿದೆ. ಎಲ್ಲಾ ಶರಣರು ಕೃಷಿ ಕಾಯಕದ ಹಿನ್ನಲೆಯಲ್ಲಿಯೇ ಜೀವನ ಧರ್ಶನ ಕಾಣಲು ಪ್ರಯತ್ನಿಸಿದಂತೆ ಕಾಣುತ್ತದೆ.
ಕೃಷಿ ಕಾಯಕದ ಮೂಲಕ ಜಗತ್ತಿಗೆ ಮಾದರಿಯಾಗಿ ಹಾಗು ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆದರೆ ಕೃಷಿ ಇಂದು ಪ್ರಧಾನ ಮತ್ತು ಆಶಾವಾದ ಕೃಷಿ ರಂಗವಾಗಿ ಮಿಂಚುತ್ತದೆ ಹಾಗು ಕೃಷಿಯೇ ಜೀವನವೆಂಬ ಧ್ಯೇಯದೊಂದಿಗೆ ಮುನ್ನುಗ್ಗಿದರೆ ಯಶಸ್ಸು ಖಂಡಿತ, ಭಾರತದ ಕೀರ್ತಿ ಪತಾಕೆ ಹಾರಿಸುವುದು ರೈತನೇ ಎಂಬುವುದು ನಾವೆಲ್ಲರು ಮರೆಯಬಾರದು, ಕೃಷಿ ಕಾಯಕವೇ ವಿಶ್ವ ಶ್ರೇಷ್ಠ ಹಾಗು ಸಂಪೂರ್ಣ ತೃಪ್ತಿ ನೀಡುವ ಕಾಯಕವಾಗಿದೆ.
ಸಂಗಮೇಶ ಎನ್. ಜವಾದಿ
ಅಧ್ಯಕ್ಷರು, ಕಲ್ಯಾಣ ಕಾಯಕ ಪ್ರತಿಷ್ಠಾನ
ಕೂಡಂಬಲ. ತಾ: ಹುಮನಾಬಾದ. ಜಿ: ಬೀದರ.
ಇಮೇಲ್ : snjawadi2009@gmail.com
ಲಿಂಗಾಯತವೇ ಸತ್ಯ | ಮಾನವೀಯತೆ |