ಧರ್ಮ ಕ್ರಾಂತಿಯ ಧೀರಯೋಗಿ, ಪ್ರವಚನ ಪಿತಾಮಹ

ಪೂಜ್ಯ ಶ್ರೀಮನ್ ನಿರಂಜನ ಮಹಾಜಗದ್ಗುರು ಲಿಂಗಾನಂದ ಸ್ವಾಮಿಗಳು.

*
His Holiness Lingananda Swamy, ಪೂಜ್ಯ ಶ್ರೀಮನ್ ನಿರಂಜನ ಮಹಾಜಗದ್ಗುರು ಲಿಂಗಾನಂದ ಸ್ವಾಮಿಗಳು

ಪೂಜ್ಯ ಶ್ರೀ ಲಿಂಗಾನಂದರು ವಿಶ್ವಗುರು ಬಸವಣ್ಣನವರ ಜನಿಸಿದ ಬಿಜಾಪುರ ಜಿಲ್ಲೆಯ ಬಾಗೇವಾಡಿ ತಾಲ್ಲೋಕಿನ ಮನಗೂಳಿಯಲ್ಲಿ ಗಣೇಶ ಚೌತಿಯ ೧೫ ಸೆಪ್ಟೆಂಬರ ೧೯೩೧ರಂದು ಜನಿಸಿ, ಬಿ. ಎ. ಆನರ್ಸ್ ಪದವೀಧದರರಾಗಿ, ೨೫ನೆ ಏಪ್ರಿಲ ೧೯೫೫ರಂದು ಅಧ್ಯಾತ್ಮಿಕ ಮಾನಸಾಂತರ ಹೊಂದಿ, ೧೯ ನವೆಂಬರ್ ೧೯೫೬ರಂದು ಜ್ಞಾನ ಸನ್ಯಾಸವನ್ನು ಸ್ವೀಕರಿಸಿ, ತಮ್ಮ ಕೊನೆಯುಸಿರಿರುವವರೆಗೂ ಒಂದು ದಿನವು ಬಿಡದೆ ಜ್ಞಾನದಾಸೋಹ ಮಾಡಿದ ಪಾವನ ಚೇತನ. ಪೂಜ್ಯ ಸ್ವಾಮೀಜಿಯವರ ಬರುವು ಮತ್ತು ಬದುಕು ಬಸವ ತತ್ವಕ್ಕೆ ಜೀವಾಳವಾಯಿತು ಬಸವ ಯುಗದ ಪುನರುತ್ಥಾನಕ್ಕೆ ನಾಂದಿ ಹಾಡಿದ ಚೇತನಶಕ್ತಿ ಪೂಜ್ಯರು ಎಂದರೆ ಉತ್ಪ್ರೇಕ್ಷೆಯಾಗದು.

ಶ್ರೀಗಳು ಚಲಿಸುವ ಜ್ಞಾನದೇಗುಲವಾಗಿ ಅಸಂಖ್ಯಾತ ಚೇತನಗಳಿಗೆ ಅರಿವಿನ ಬೆಳಕನಿತ್ತು ಹರಿವ ಜ್ಞಾನಗಂಗೆಯಾಗಿ, ಅಪರಿಮಿತ ಕ್ಷೇತ್ರದಲ್ಲಿ ಸಂಚರಿಸಿ ಪಾರಮಾರ್ಥಿಕ ನಂದನವನ್ನು ನಿರ್ಮಿಸಿದ ದಿವ್ಯ ಚೇತನ ಪೂಜ್ಯ ಶ್ರೀ ಮಹಾ ಜಗದ್ಗುರು ಲಿಂಗಾನಂದ ಸ್ವಾಮಿಗಳು. ತಮ್ಮದೇ ಆದ ವಾಗ್ಮಿತ್ವದಿಂದ ಎಲ್ಲರನ್ನು ಎಚ್ಚರಿಸುತ್ತ ದೀಮಂತ ವ್ಯಕ್ತತ್ವದಿಂದ ಆಕರ್ಷಿಸುತ್ತ ಜನರಲ್ಲಿ ಧರ್ಮವನ್ನು ಕುರಿತು ಶ್ರದ್ಧೆ, ಆಸಕ್ತಿ ಅಭೀಪ್ಸೆ ಹುಟ್ಟಿಸಿದ ಪ್ರತಿಭಾವಂತ ಪ್ರವಚನಕಾರರು.

ಶ್ರೀಗಳು ೧೩ನೇ ಜನವರಿ ೧೯೯೨ರ ಸೋಮವಾರದಂದು ವಿಶ್ವಗುರು ಬಸವಣ್ಣನವರ ವಿದ್ಯಾಭೂಮಿ, ತಪೋಸ್ಥಾನ, ಐಕ್ಯಕ್ಷೇತ್ರ ಕೂಡಲ ಸಂಗಮದಲ್ಲಿ ಬಸವ ಧರ್ಮದ ಮಹಾಜಗದ್ಗುರು ಪೀಠವನ್ನು ಸ್ಥಾಪಿಸಿ ಪ್ರಥಮ ಪೀಠಾಧೀಶರಾಗಿ ಆರೋಹಿಸಿ ಅಸಂಖ್ಯಾತ ಬಸವ ಭಕ್ತರಿಗೆ ಆನಂದವನ್ನು ಉಂಟು ಮಾಡಿ, ವಿಶ್ವಗುರು ಬಸವಣ್ಣನವರ ಹೆಸರಿನಲ್ಲಿ ಧರ್ಮ ಪೀಠವೊಂದು ಇರದಿರುವ ಕೊರತೆಯನ್ನು ತುಂಬಿದರು.

  • ಜ್ಞಾನ ಸನ್ಯಾಸವನ್ನು ಸ್ವೀಕರಿಸಿ ಅಂದಿನಿಂದ ಕೊನೆಯವರೆಗೂ ಒಂದು ದಿನವೂ ಬಿಡದಂತೆ ಪ್ರವಚನದ ಮೂಲಕ ಜ್ಞಾನ ದಾಸೋಹ ಮಾಡುತ್ತ "ಪ್ರವಚನ ಪಿತಾಮಹ" ಎಂಬ ಬಿರುದು ಪಡೆದರು.
  • ವಿಶ್ವಗುರು ಬಸವಣ್ಣನವರು ಬೋಧಿಸಿದ ವಿಶ್ವಧರ್ಮದ ಸಾರವನ್ನು ಪ್ರವಚನ, ಸಾಹಿತ್ಯ ಕೃತಿಗಳ ಮೂಲಕ ಪ್ರಚಾರ ಮಾಡಿದ್ದರು.
  • ಪ್ರಪ್ರಥಮ ಮಹಿಳಾ ಜಗದ್ಗುರು ಪೀಠವನ್ನು ಧಾರವಾಡದಲ್ಲಿ ಜಗನ್ಮಾತಾ ಅಕ್ಕಮಹಾದೇವಿ ಅನುಭಾವ ಪೀಠ ಎಂಬ ಹೆಸರಿನಿಂದ ಸ್ಥಾಪಿಸಿ, ತಮ್ಮ ಕರಕಮಲ ಸಂಜಾತೆ ಪೂಜ್ಯ ಶ್ರೀ ಡಾ|| ಜಗದ್ಗುರು ಮಾತೆ ಮಹಾದೇವಿಯವರನ್ನು ಪ್ರಥಮ ಅಧಿಕಾರಿಯನ್ನಾಗಿ ಮಾಡಿ, ಸ್ತ್ರೀ ಸಮಾನತಾ ತತ್ವವನ್ನು ಎತ್ತಿಹಿಡಿದ ಕ್ರಾಂತಿಕಾರಿಗಳು.
  • ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ವಿಶ್ವಕಲ್ಯಾಣ ಮಿಷನ್ ಸಂಸ್ಥೆಯನ್ನು ಸ್ಥಾಪಿಸಿ, ಬಸವ ಮಂಟಪವನ್ನು ಕಟ್ಟಿಸಿದರು.
  • ಕೂಡಲಸಂಗಮ ಕ್ಷೇತ್ರವನ್ನು ಸರ್ವಾಂಗ ಸುಂದರವಾಗಿ ಕಟ್ಟಲೋಸುಗ ಬಸವ ಧರ್ಮ ಪೀಠ ಟ್ರಸ್ಟನ್ನು ರಚಿಸಿ, ಬೃಹತ್ ಯೋಜನೆಗಳನ್ನು ಪ್ರಾರಂಭಿಸಿರುವ ಅವಿಶ್ರಾಂತ ಕ್ರಿಯಾಮೂರ್ತಿ.
  • ನಾಡಿನಾದ್ಯಂತ ಸಂಚರಿಸಿ, ಜನಮನದಲ್ಲಿ ಬಸವ ತತ್ವದ ಬೀಜಗಳನ್ನು ಬಿತ್ತಿ; ಎತ್ತೆತ್ತ ನೋಡಿದಡತ್ತತ್ತ ಬಸವನೆಂಬ ಬಳ್ಳಿ, ಎತ್ತಿ ನೋಡಿದರೆ ಲಿಂಗವೆಂಬ ಗೊಂಚಲು, ಒತ್ತಿ ಹಿಂಡಿದರೆ ಭಕ್ತಿ ಎಂಬ ರಸ' ಎಂಬ ವಾತವರಣವನ್ನು ನಿರ್ಮಾಣ ಮಾಡಿ, ಬಸವ ಯುಗಕ್ಕೆ ನಾಂದಿ ಹಾಡಿದ ಜಂಗಮ ಜ್ಯೋತಿ.

ಇಂತಹ ಮಹಾನ್ ಪೂಜ್ಯ ಶ್ರೀಗಳು ಜೂನ್ ೩೦ ೧೯೯೫ರಂದು ಹಿರಿಯೂರಿನಲ್ಲಿ ಪ್ರವಚನ ಕಾಯಕ ಸಾಗಿಸುವಾಗಲೇ ಲಿಂಗೈಕ್ಯರಾಗಿ ಕ್ರಿಯಾವಿಶ್ರಾಂತಿಯನೈದಿದರು.

ಪರಿವಿಡಿ (index)
*
Previousಲಿಂಗಾಯತ ಪತ್ರಿಕೆಗಳು21ನೇ ಶತಮಾನಕ್ಕೆ ಲಿಂಗಾಯತ ಧರ್ಮNext
*