ಮಾನವೀಯತೆ | ಬಸವ ಧರ್ಮ /ಲಿಂಗಾಯತ ಧರ್ಮ |
ಲಿಂಗಾಯತ ಧರ್ಮ ಪ್ರಶ್ನೋತ್ತರ (Lingayat-FAQ) |
ಪ್ರಶ್ನೆ: ಲಿಂಗಾಯತ ಧರ್ಮದಲ್ಲಿ ನಿತ್ಯ ಮಾಡುವ ಯೋಗ ಯಾವುದು?
ಉತ್ತರ: ಲಿಂಗಾಯತ ಧರ್ಮಗುರು ಬಸವಣ್ಣನವರು ಕಂಡುಹಿಡಿದು ಕೊಟ್ಟ ಯೋಗವೇ ಲಿಂಗಾಂಗಯೋಗ ಇದನ್ನು ಇಷ್ಟಲಿಂಗ ಯೋಗ, ದೃಷ್ಟಿ ಯೋಗ (ಶಿವ) ದೇವಯೋಗ ಎಂಬ ಬೇರೆ ಬೇರೆ ನಾಮಗಳಿಂದ ಕರೆಯುತ್ತಾರೆ.
ಪ್ರಶ್ನೆ: ಈ ಯೋಗವನ್ನು ಪ್ರತಿದಿನ ಎಷ್ಟು ಸಲ ಮಾಡಬಹುದೆ?.
ಉತ್ತರ: ಈ ಯೋಗವನ್ನು ತಪ್ಪದೆ ಒಂದು ಸಲ ಮಾಡುವುದು ಕಡ್ಡಾಯ, ಸಾಧಕರು ಎರಡು ಅಥವಾ ಮೂರ ಸಲ ಮಾಡಬೇಕು. ಸಮಯವಿದ್ದರೆ ಎಷ್ಟು ಬೇಕಾದರೂ ಮಾಡಬಹುದು ನಿಮಗೆ ಆನಂದ ವೆನಿಸಿದಷ್ಟು ಸಲ ಮಾಡಬಹುದು.
ಪ್ರಶ್ನೆ: ಈ ಯೋಗವನ್ನು ಯಾರು ಮಾಡಬಹುದು?
ಉತ್ತರ: ಲಿಂಗಾಂಗಯೋಗ ವನ್ನು ಯಾವುದೇ ಭೇದವಿಲ್ಲದೆ ಮಾಡಬಹುದು,
ಹೆಣ್ಣು ಗಂಡು ಎಂಬ ಲಿಂಗ ಭೇದವಿಲ್ಲ
ಸಂಸಾರಿ - ಸನ್ಯಾಸಿ ಎಂಬ
ಆಶ್ರಮ ಭೇದವಿಲ್ಲ
ಮಕ್ಕಳು- ವಯಸ್ಕ- ವೃದ್ಧ ಎಂಬ ವಯಸ್ಸಿನ ಭೇದವಿಲ್ಲ.
ಪ್ರಶ್ನೆ: ಈ ಯೋಗವನ್ನು ಹೇಗೆ ಮಾಡಬೇಕು?
ಉತ್ತರ: ಇಷ್ಟಲಿಂಗ ಪೂಜೆಯನ್ನು ಹೇಗೆ ಮಾಡಬೇಕು ಎಂಬುದನ್ನು ದೀಕ್ಷಾ ಗುರುಗಳು ಇಷ್ಟಲಿಂಗ ದೀಕ್ಷೆ ನೀಡುವಾಗ ವಿವರಿಸುತ್ತಾರೆ. ಇಷ್ಟಲಿಂಗ ದೀಕ್ಷಾ ಪರಿಕಲ್ಪನೆಯು ಇಷ್ಟಲಿಂಗ ಪೂಜೆಯನ್ನು ಹೇಗೆ ಮಾಡಬೇಕೆಂಬುದನ್ನು ಒದಗಿಸುವುದು (ಬೋಧನೆ) ಹೊರತು ಬೇರೇನೂ ಅಲ್ಲ. ಇಷ್ಟಲಿಂಗ ದೀಕ್ಷೆಯನ್ನು ಪಡೆದ ನಂತರ ನೀವು ಇಷ್ಟಲಿಂಗ ಪೂಜೆಯನ್ನು ಹೇಗೆ ಮಾಡಬೇಕೆಂದು ತಿಳಿಯುವಿರಿ. ಇಷ್ಟಲಿಂಗ ಪೂಜೆ ಮಾಡಲು ಕೆಲವು ಗುರುಗಳು ಬೇರೆ ಬೇರೆ ತರಹ ಹೇಳಿದರು ಭಕ್ತಿಯಂದ ಮಾಡಿದರೆ ಸರಿ. ಇಲ್ಲಿ ಭಕ್ತಿ ಧ್ಯಾನ ಮುಖ್ಯವೇ ಹೊರತು ಹಂತಗಳಲ್ಲ!.
ಇಷ್ಟಲಿಂಗ ಪೂಜಾ ವಿಧಾನ
ಪ್ರಶ್ನೆ: ಒಂದು ದಿನ ಇಷ್ಟಲಿಂಗ ಪೂಜೆ ತಪ್ಪಿದರೆ?
ಉತ್ತರ: ದೀಕ್ಷೆ ನಂತರ ಪ್ರತಿದಿನ ಇಷ್ಟಲಿಂಗ ಪೂಜೆಯನ್ನು ಮಾಡಬೇಕು. ಕೇಲವು ತುರ್ತು/ಅಸಾಧಾರಣ ಸಂದರ್ಭಗಳಲ್ಲಿ ನೀವು ಪೂಜೆಯನ್ನು ತಪ್ಪಿಸಿಕೊಂಡರೆ ಅದು ದೊಡ್ಡ ತಪ್ಪಲ್ಲ, ಆದರೆ ನೀವು ಒಮ್ಮೆ ತಪ್ಪಿಸಿಕೊಂಡರೆ ಅದು ಪೂಜೆಯನ್ನು ತಪ್ಪಿಸುವ ಅಭ್ಯಾಸವಾಗಬಾರದು. ಕೆಲವು ಪರಿಸ್ಥಿತಿಯಲ್ಲಿ (ಅನಾರೋಗ್ಯದ ಕಾರಣ, ಪ್ರಯಾಣ ಇತ್ಯಾದಿ...) ನೀವು ತಪ್ಪಿಸಿಕೊಂಡರೆ ಸರಿ.
ಪ್ರಶ್ನೆ: ಇಷ್ಟಲಿಂಗವನ್ನು ಎಲ್ಲಿ ಧರಿಸಬೇಕು?
ಉತ್ತರ: ಇಷ್ಟಲಿಂಗವನ್ನು ಯಾವಾಗಲೂ ದೇಹದ ಮೇಲೆ ಹೃದಯಕ್ಕೆ ಹತ್ತಿರದಲ್ಲಿ ಧರಿಸಬೇಕು (ಕತ್ತಿನಿಂದ ಹೊಟ್ಟೆಯ ಮೇಲಿನ ಪ್ರದೇಶ, ಹೊಟ್ಟೆ ಮೇಲಲ್ಲ!) [ಹಾರದಂತೆಯೇ]. ಆದರೆ ದೈಹಿಕ ಕೆಲಸ/ಚಟುವಟಿಕೆಗಳಲ್ಲಿ ಅಥವಾ ಯೋಗ ಮಾಡುವಾಗ ನೀವು ಅದನ್ನು ಬಲಗೈ ಭುಜಕ್ಕೆ ಧರಿಸಬಹುದು.
ಪ್ರಶ್ನೆ: ಇಷ್ಟಲಿಂಗ ಪೂಜೆ ಯಾವಾಗ ಮಾಡಬೇಕು?
ಉತ್ತರ: ಇಷ್ಟಲಿಂಗ ಪೂಜೆಗೆ ಸೂಕ್ತ ಸಮಯವೆಂದರೆ ಮುಂಜಾನೆ ನಸುಕಿನ 3.00 ರಿಂದ 5.00 ರವರೆಗೆ. ದಿನನಿತ್ಯದ ಜೀವನದಲ್ಲಿ ಅದು ಕಷ್ಟಕರವಾಗಿದ್ದರೆ ಅಥವಾ ಸಾಧ್ಯವಾಗದಿದ್ದರೆ ನೀವು ಬೆಳಿಗ್ಗೆ ಎದ್ದ ಕೂಡಲೆ ನೀವು ಮಾಡಬಹುದು. ಇಷ್ಟಲಿಂಗ ಪೂಜೆಯನ್ನು ಕಾಫಿ/ಟೀ/ ಉಪಹಾರದ ಮೊದಲು ಮಾಡಬೇಕು. ನೀವು ದಿನಕ್ಕೆ ಎದ್ದ ನಂತರ ಮೊದಲು ಮಾಡಬೇಕಾದದ್ದು ಇಷ್ಟಲಿಂಗ ಪೂಜೆ!
- ✍ ವಿನಯ್ ಆದಿಹಳ್ಳಿ.
೧. ಲಿಂಗಾಯತ ಎಂಬುದು ಜಾತಿಯೇ ಅಥವಾ ಧರ್ಮವೇ?
: ಧರ್ಮ
೨. ಲಿಂಗಾಯತದೊಳಗೆ ಇರುವ ಪಂಗಡಗಳು ಜಾತಿಗಳೇ ಅಥವಾ ಕಸುಬಗಳೇ?
ಉತ್ತರ : ಕಸುಬುಗಳು/ಕೆಲಸಗಳು
೩. ಲಿಂಗಾಯತ ಧರ್ಮ/ ವೀರಶೈವ ಧರ್ಮ/ ವೀರಶೈವ ಲಿಂಗಾಯತ ಧರ್ಮ, ಯಾವುದು ಸರಿ?
ಉತ್ತರ : ಲಿಂಗಾಯತ ಧರ್ಮ.
೪. ಲಿಂಗಾಯತ ಧರ್ಮ ಉದಯವಾದ ಕಾರಣ?
ಉತ್ತರ : ಸಮಾನತೆಗಾಗಿ, ವೈಚಾರಿಕತೆಗಾಗಿ, ಮಾನವೀಯತೆಗಾಗಿ, ನಿರ್ಬಂಧವಿಲ್ಲದ ಬದುಕಿಗಾಗಿ, ವ್ಯಕ್ತಿ ಸ್ವಾತಂತ್ರ್ಯಕ್ಕಾಗಿ.
೫. ಲಿಂಗಾಯತ ಧರ್ಮದಲ್ಲಿ ನಿಷೇಧಿಸಲ್ಪಟ್ಟ ಸಾಮಾಜಿಕ ಪಿಡುಗುಗಳು ಯಾವುವು?
ಉತ್ತರ : ಶೋಷಣೆ, ಜಾತಿ ಪದ್ದತಿ, ದೇವರು ಭಕ್ತನ ನಡುವಿನ ವ್ಯವಹಾರಿಕ ಪುರೋಹಿತ್ಯ, ಪುರುಷ ಪ್ರಧಾನ ಅವ್ಯವಸ್ಥೆ, ಮೌಢ್ಯಚಾರಣೆಗಳು.
೬. ಮಹಿಳೆಯರಿಗೆ ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿ ಸ್ವಾತಂತ್ರ್ಯ ಕೊಟ್ಟ ಧರ್ಮ ಯಾವುದು?
ಉತ್ತರ : ಲಿಂಗಾಯತ ಧರ್ಮ.
೭. ೧೨ನೇ ಶತಮಾನದಲ್ಲಿ ಜರುಗಿದ ಕಲ್ಯಾಣ ಕ್ರಾಂತಿಗೆ ಕಾರಣ?
ಉತ್ತರ : ವೈದಿಕ ಯತಸ್ಥಿತವಾದಿಗಳ ಮೂಲಭೂತವಾದಿಗಳ ದೃಷ್ಟಿಯಲ್ಲಿ ಕೆಳ ಜಾತಿಯ ವರ ಮೇಲು ಜಾತಿಯ ವಧವನ್ನು ವರಿಸಿದ್ದು.
೮. ಶರಣರ ದೃಷ್ಟಿಯಲ್ಲಿ ಅದು ವರ್ಣಾಂತರ ವಿವಾಹ ಅಲ್ಲವೇ?
ಉತ್ತರ : ಲಿಂಗವನ್ನು ಆಯತ ಮಾಡಿಕೊಂಡು ಇಬ್ಬರು ಶರಣರಾಗಿದ್ದರು ಸಮಾನರಾಗಿದ್ದರು, ವರ್ಣಾಂತರ ವಾದವೇ ತಪ್ಪು.
೯. ವೀರಶೈವರು ಲಿಂಗಾಯತರಲ್ಲವೇ?
ಉತ್ತರ : ೯೯ ಪಂಗಡಗಳ ಹಾಗೆ ಅವರು ಕೊಡ ಲಿಂಗಾಯತರೇ.
೧೦. ವೀರಶೈವರು ಲಿಂಗಾಯತರಾಗಿ ಮಾಡಿದ ತಪ್ಪು ಯಾವುದು?
ಉತ್ತರ : ಲಿಂಗಾಯತರಾದ ಮೇಲೆ ಬಸವಾದಿ ಶರಣರ ಆಶಯಗಳಿಗೆ ವಿರುದ್ಧವಾದ ತಮ್ಮ ಮೂಲ ವೈದಿಕ ಪದ್ದತಿಯನ್ನೆ ಅನುಸರಿಸಿ ಒತ್ತು ಕೊಟ್ಟು ಮಾನವರ ಮೇಲೆ ಉತ್ಸವ ಮಾಡಿಕೊಂಡಿದ್ದು.
೧೧. ವೀರಶೈವರು ಲಿಂಗಾಯತರಾಗಿದ್ದು ಬಸವಾದಿ ಶರಣರ ಕಾಲದಲ್ಲಿಯೋ? ಪೂರ್ವದಲ್ಲಿಯೋ? ನಂತರದಲ್ಲಿಯೋ?
ಉತ್ತರ : ಬಸವಾದಿ ಶರಣರ ಕಾಲ ೧೨ನೇ ಶತಮಾನ. ವೀರಶೈವರು ಲಿಂಗಾಯತರಾಗಿದ್ದು ನಂತರದಲ್ಲಿ. ವೀರಶೈವರು ಲಿಂಗಾಯತರಾದ ಕಾಲ ೧೫ನೇ ಶತಮಾನದ ನಂತರ.
೧೨. ಅನುಭವ ಮಂಟಪದ ಉದ್ದೇಶ?
ಉತ್ತರ : ಸಾಮಾಜಿಕ ಪಿಡುಗುಗಳನ್ನು ಧಿಕ್ಕರಿಸಿ ಸಮಾನತೆಯ ಅರಿವಿನ ಮಾನವೀಯತೆ ನೆಲೆಗಟ್ಟಿನಲ್ಲಿ ಎಲ್ಲಾ ಶರಣರು ಚರ್ಚಿಸಿ ಮನುಷ್ಯತ್ವದ ವೈಚಾರಿಕತೆಯ ಸಮಾಜ ನಿರ್ಮಿಸುವುದಾಗಿತ್ತು.
೧೩. ಜಗತ್ತಿನ ಮೊದಲ ಸಂಸತ್ತು ಯಾವುದು?
ಉತ್ತರ : ಅನುಭವ ಮಂಟಪ.
೧೪. ಇಷ್ಟ ಲಿಂಗದ ಉದ್ದೇಶ?
ಉತ್ತರ : ೧) ಗುಡಿಗುಂಡಾರಗಳಲ್ಲಿ ನಿಷೇಧಿಸಲ್ಪಟ್ಟವರಿಗೆ ಅಂಗೈಯಲ್ಲಿ ದೇವರನ್ನು ಕೊಟ್ಟಿದ್ದು. ೨) ಏಕದೇವೊಪಾಸನೆ. ೩) ಸರ್ವ ಸಮಾನತೆಯ ಲಾಂಛನ, ೪) ಲಿಂಗಾಂಗಯೋಗದ ಮೂಲಕ ಸ್ವಯಂ ಅರಿವು ಕಂಡುಕೊಳ್ಳುವುದು (ಸತ್ಯದ ಅನ್ವೇಷಣೆ).
೧೫. ಬಸವಣ್ಣನಿಗೆ ಗಡಿ ಪಾರು ಮಾಡಿದವರಾರು?
ಉತ್ತರ : ಅಸಹಾಯಕ ಬಿಜ್ಜಳ ಹಾಗೂ ಅವನ ಕುತಂತ್ರಿ ಕರ್ಮಠ ಮಂತ್ರಿಗಳು.
೧೬. ಲಿಂಗಾಯತ ಧರ್ಮದ ಸಿದ್ಧಾಂತಗಳು?
ಉತ್ತರ : ಕಾಯಕ ಮತ್ತು ದಾಸೋಹ.
೧೭. ಲಿಂಗಾಯತ ಧರ್ಮದ ಹೊರನೋಟ?
ಉತ್ತರ : ಮಾನವೀಯತೆ, ವೈಜ್ಞಾನಿಕತೆ, ಪರಿಸರವಾದ, ಆರ್ಥಿಕವಾದ, ಮೂಢ ನಂಬಿಕೆಗಳನ್ನು ಧಿಕ್ಕರಿಸಿಸುವುದು.
೧೮. ಲಿಂಗಾಯತ ಧರ್ಮದ ದೇವರು/ ಶಿವ?
ಉತ್ತರ : ಲಿಂಗಾಯತ ದೇವರಿಗೆ ಹುಟ್ಟು,ಸಾವು,ಕೇಡು,ರೂಹು (ರೂಪ), ವೇಷ ಭೂಷಣ, ಸೀಮೆ ಇಲ್ಲ, ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ, ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ ದೇವರು. ಅವನನ್ನು ಶರಣರು ಬೇರೆ ಬೇರೆ ಹೆಸರಿನಿಂದ ಕರೆದರು. ಅವೆಲ್ಲ ದೇವರ ಹೆಸರು ಮಾತ್ರ. ಅವು ಪೌರಾಣಿಕ ದೇವತೆಗಳು ಹೆಸರಿದ್ದರು ಕೂಡಾ ಅವು ಸೂಚಿಸುವುದು ಅಗಮ್ಯ ಅಗೋಚರವಾದ ದೇವರನ್ನು.
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.
೧೯. ಬಸವ ಜಯಂತಿ ಎತ್ತುಗಳ ಹಬ್ಬದ ಆಚರಣೆಯ?
ಉತ್ತರ: ಇಲ್ಲ ಮಹಾ ಮಾನವತವಾದಿ ೧೨ನೇ ಶತಮಾನದಲ್ಲಿ ನಮಗಾಗಿ ಹೋರಾಡಿದ ಸಮಾಜ ವಿಜ್ಞಾನಿ ಬಸವಣ್ಣನ ಜನ್ಮ ದಿನ.
೨೦: ಲಿಂಗಾಯತೇತರು ಲಿಂಗಾಯತರಾಗಬಹುದೇ?
ಉತ್ತರ: ಮನುಷ್ಯರಾದವರು ಲಿಂಗಾಯತರಾಗಬಹುದು.
- ✍ ಡಾ. ಪಂಚಾಕ್ಷರಿ ಹಳೇಬೀಡು.
ಪ್ರ ೧. ಲಿಂಗಾಯತ ಒಂದು ಧರ್ಮವೇ?
ಉ: ಹೌದು ಲಿಂಗಾಯತ ಒಂದು ಪರಿಪೂರ್ಣ ಸ್ವತಂತ್ರ ಧರ್ಮ.
ಪ್ರ೨: ಲಿಂಗಾಯತ ಹಿಂದೂ ಧರ್ಮದ ಒಳಗೆ ಒಂದು ಜಾತಿಯಲ್ಲವೇ?
ಉ: ಅಲ್ಲ, ಖಂಡಿತಾ ತಪ್ಪು. ಲಿಂಗಾಯತರು ದೇಹದ ಮೇಲೆ ಧರಿಸಿದ ಲಿಂಗವನ್ನು ಬಿಟ್ಟು ಮತ್ಯಾವುದೇ ದೇವತೆಗಳನ್ನು ಪೂಜಿಸುವುದಿಲ್ಲ,
ಪ್ರ೩: ಲಿಂಗಾಯತರೂ ಹಲವಾರು ದೇವರುಗಳನ್ನು ಪೂಜಿಸುತ್ತಾರಲ್ಲಾ?
ಉ: ಅದು ಅವರಿಗೆ ತಿಳಿಯದೆ ಮಾಡುತ್ತಿರುವ ತಪ್ಪು. ಲಿಂಗಾಯತರು ಇಷ್ಟಲಿಂಗವೊಂದನ್ನು ಮಾತ್ರ ನಿಷ್ಠೆಯಿಂದ ಪೂಜಿಸಬೇಕು.
ಪ್ರ೪: ಲಿಂಗಾಯತರು ಹಲವು ದೇವರುಗಳನ್ನು ಪೂಜಿಸಿದರೆ ತಪ್ಪೇನು?
ಉ: ಒಬ್ಬಳು ಸತಿಗೆ ಒಬ್ಬನೇ ಗಂಡನಿರುವಂತೆ, ಭಕ್ತನಿಗೆ ಒಂದೇ ದೇವರು. ಹಲವು ದೇವತೆಗಳನ್ನು ಪೂಜಿಸುವುದು ವ್ಯಭಿಚಾರ ಮಾಡಿದ್ದಕ್ಕೆ ಸಮ ಎಂದು ಧರ್ಮಗುರು ಬಸವಣ್ಣನವರೇ ಹೇಳಿದ್ದಾರೆ.
ಪ್ರ೫: ಇದುವರೆಗೂ ನಾವು ಪೂಜಿಸಿಕೊಂಡು ಬಂದ ಹಲವಾರು ದೇವತಾ ಪೂಜೆಗಳನ್ನು ಈಗ ನಿಲ್ಲಿಸಿದರೆ ಅವು ಕೋಪಗೊಳ್ಳುವುದಿಲ್ಲವೇ? ನಮಗೆ ಕೆಡುಕು ಮಾಡುವುದಿಲ್ಲವೇ?
ಉ: ಆ ದೇವತೆಗಳೆಲ್ಲಾ ನಾವು ಕಲ್ಪಿಸಿಕೊಂಡಿರುವುದು ಅಷ್ಟೇ. ಅದ್ಯಾವುದೂ ಸತ್ಯವಲ್ಲ. ಆ ದೇವತೆಗಳನ್ನು ಪೂಜಿಸಿದರೂ, ಪೂಜಿಸದಿದ್ದರೂ ಯಾವುದೇ ಪ್ರಯೋಜನವಾಗದು. ಅವು ಕೇವಲ ಕಲ್ಪಿತ ಮೂರ್ತಿಗಳಾದ್ದರಿಂದ ಅವು ನಮಗೆ ಏನೂ ಮಾಡಲು ಸಾಧ್ಯವಿಲ್ಲ.
ಪ್ರ೬: ಲಿಂಗಾಯತ ಇದುವರೆಗೂ ಜಾತಿಯಾಗಿತ್ತು, ಈಗ ಏಕೆ ಇದ್ದಕ್ಕಿದ್ದಂತೆ ಧರ್ಮ ಎನ್ನುತ್ತಿರುವರು?
ಉ: ಬಸವಣ್ಣನವರಿಂದ ರೂಪುಗೊಂಡ ಲಿಂಗಾಯತ ಧರ್ಮ ೧೨ನೇ ಶತಮಾನದಿಂದಲೇ ಸ್ವತಂತ್ರಧರ್ಮವಾಗಿದೆ. ಆದರೆ ಕೇವಲ ನೂರು ವರ್ಷಗಳ ಹಿಂದೆ ಕೆಲವು ಪಟ್ಟಭದ್ರರು ಲಿಂಗಾಯತವನ್ನು ಜಾತಿಯಾಗಿಸಿದರು. ಸುಮಾರು ನಲವತ್ತು ವರ್ಷಗಳಿಂದಲೂ ಸ್ವತಂತ್ರ ಧರ್ಮಕ್ಕಾಗಿ ಬೇಡಿಕೆ ನಿರಂತರವಾಗಿ ಇದ್ದೇ ಇದೆ.
ಪ್ರ೭: ಲಿಂಗಾಯತ ಧರ್ಮ ಪ್ರತ್ಯೇಕತೆಯಿಂದ ಹಿಂದೂ ಧರ್ಮ ಒಡೆದಂತಾಗುವುದಿಲ್ಲವೇ?
ಉ: ಲಿಂಗಾಯತ ಮತ್ತು ಹಿಂದೂ ಎರಡೂ ಎಲ್ಲಾ ಆಚರಣೆಗಳಲ್ಲೂ ಸಂಪೂರ್ಣ ಭಿನ್ನತೆ ಹೊಂದಿವೆ. ಅವು ಎಂದೂ ಒಂದೇ ಆಗಿರಲೇ ಇಲ್ಲ.
ಪ್ರ೮: ಲಿಂಗಾಯತ ಧರ್ಮ ಪ್ರತ್ಯೇಕಗೊಳ್ಳುವುದರಿಂದ ವೀರಶೈವ ಧರ್ಮ ಒಡೆದಂತಾಗುವುದಿಲ್ಲವೇ?
ಉ: ಇಲ್ಲ, ಮೊದಲಿನಿಂದಲೂ ಕೂಡ ವೀರಶೈವ ಹಿಂದೂ ಧರ್ಮದ ಒಂದು ಪಂಗಡ, ಹಿಂದೂಗಳ ಎಲ್ಲಾ ಆಚರಣೆಗಳೂ ವೀರಶೈವರಲ್ಲಿವೆ ಹಾಗಾಗಿ ಬಸವಣ್ಣನವರಿಂದ ಸ್ಥಾಪಿತವಾದ ಲಿಂಗಾಯತ, ಮೊದಲಿನಿಂದಲೂ ಪ್ರತ್ಯೇಕವೇ ಆಗಿದೆ. ವೀರಶೈವರನ್ನು ಒಡೆಯುವ ಮಾತೇ ಇಲ್ಲ.
ಪ್ರ೯: ಸರ್ಕಾರ ಧರ್ಮದ ವಿಚಾರದಲ್ಲಿ ಮೂಗು ತೂರಿಸಿದ್ದೇಕೆ?
ಉ: ಈ ವಿಚಾರದಲ್ಲಿ ಖಂಡಿತಾ ಸರ್ಕಾರ ಮೂಗು ತೂರಿಸಿಲ್ಲ. ಸಂಘ ಸಂಸ್ಥೆಗಳು, ಮಠಮಾನ್ಯಗಳು, ಅಥವಾ ವಯಕ್ತಿಕವಾಗಿ ಯಾರಾದರೂ ಮನವಿ ಸಲ್ಲಿಸಿದರೆ ಅದಕ್ಕೆ ಸ್ಪಂದಿಸಬೇಕಾದದ್ದು ಯಾವುದೇ ಸರ್ಕಾರದ ಆದ್ಯ ಕರ್ತವ್ಯವಾಗಿರುತ್ತದೆ. ಅದರಂತೆಯೇ ಸರ್ಕಾರ ನಡೆದುಕೊಂಡಿದೆ.
ಪ್ರ೧೦: ಚುನಾವಣಾ ಸಮಯದಲ್ಲಿ ಆತುರದ ಕ್ರಮದ ಆವಷ್ಯಕತೆ ಏನಿತ್ತು? ಇದು ರಾಜಕೀಯ ಲಾಭದ ಪಿತೂರಿಯಲ್ಲವೇ?
ಉ: ಹಲವಾರು ಸಂಘ ಸಂಸ್ಥೆಗಳು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ, ಸಮಿತಿ ರಚಿಸಿ, ವರದಿ ಪಡೆದು ಕ್ರಮಕೈಗೊಳ್ಳಲು ದೀರ್ಘ ಸಮಯ ಬೇಕಾಯಿತು. ಅಷ್ಟರಲ್ಲಿ ಚುನಾವಣೆ ಬಂದಿತು, ತಮ್ಮ ಅಧಿಕಾರಾವಧಿಯಲ್ಲಿ ಆಗಬೇಕಾಗಿದ್ದ ಕಾರ್ಯವನ್ನು ಅವರು ಸಮರ್ಥವಾಗಿ ಪೂರ್ಣಗೊಳಿಸಿದರು ಅಷ್ಟೇ. ಇದರಲ್ಲಿ ರಾಜಕೀಯ ಲಾಭ ನಷ್ಟದ ಮಾತೇ ಬರುವುದಿಲ್ಲ.
ಪ್ರ೧೧:ವೀರಶೈವರಿಗೆ ಲಿಂಗಾಯತ ಧರ್ಮದಲ್ಲಿ ಅವಕಾಶವಿಲ್ಲವೇ?
ಉ: ಲಿಂಗಾಯತ ಧರ್ಮವು ವೀರಶೈವರಷ್ಟೇ ಅಲ್ಲ ಆಸಕ್ತಿ ಇರುವ ಯಾರೇ ಆಗಲಿ ಮುಕ್ತ ಮನಸ್ಸಿನಿಂದ ಬಸವಣ್ಣನವರೇ ಧರ್ಮಗುರು, ವಚನಗಳೇ ಪವಿತ್ರಗ್ರಂಥ ಎಂದು ಒಪ್ಪಿ ಬರುವ ಎಲ್ಲಾ ಮಾನವರನ್ನೂ ಪ್ರೀತಿಯಿಂದ ಮುಕ್ತವಾಗಿ ಸ್ವಾಗತಿಸುತ್ತದೆ.
ಪ್ರ೧೨: ಸರ್ಕಾರವೇ ಇಬ್ಬರು ಪ್ರಭಾವೀ ಮಂತ್ರಿಗಳನ್ನು ಈ ಹೋರಾಟಕ್ಕೆ ಕಳಿಸಿ ಪ್ರೋತ್ಸಾಹಿಸಿತಲ್ಲಾ ಸರ್ಕಾರದ ಈ ನಡೆ ಸರಿಯೇ?
ಉ: ಅವರ್ಯಾರೂ ಮಂತ್ರಿಗಳಾಗಿ ಈ ಹೋರಾಟದಲ್ಲಿ ಭಾಗವಹಿಸಲಿಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಧರ್ಮದ ಆಚರಣೆ, ಸಮುದಾಯ ರಕ್ಷಣೆಯಲ್ಲಿ ಪಾಲ್ಗೊಳ್ಳುವ ಹಕ್ಕಿದೆ, ಅದರಂತೆ ಅವರು ವಯಕ್ತಿಕವಾಗಿ ಬಸವ ತತ್ವ ಮರುಪ್ರತಿಷ್ಠಾಪನೆಗಾಗಿ ಈ ಹೋರಾಟದಲ್ಲಿ ಧುಮುಕಿದರು. ಸರ್ಕಾರದ ಪ್ರತಿನಿಧಿಯಾಗಿ ಅಲ್ಲ.
ಪ್ರ೧೩: ಲಿಂಗಾಯತ ಧರ್ಮಕ್ಕೆ ಸರ್ಕಾರದ ಮಾನ್ಯತೆ ಏಕೆ ಬೇಕು?
ಉ: ಲಿಂಗಾಯತ ಧರ್ಮವು ವೈಜ್ಞಾನಿಕವಾಗಿಯೂ, ಎಲ್ಲರಿಗೂ ಆಚರಿಸಲು ಯೋಗ್ಯವಾಗಿಯೂ ಇದ್ದು ಇದರಲ್ಲಿ ಪೂಜಾರಿಯ ಮಧ್ಯಸ್ಥಿಕೆಯಿಲ್ಲ, ಮೂಢ ನಂಬಿಕೆಗಳಿಲ್ಲದ ಜಗತ್ತಿನ ಸರ್ವಶ್ರೇಷ್ಠ ಧರ್ಮ. ಇಂಥಾ ಧರ್ಮವು ಹಿಂದೂ ಧರ್ಮದ ಒಳಗೆ ಒಂದು ಜಾತಿಯಾಗಿ ಉಳಿದರೆ ಕ್ರಮೇಣ ತನ್ನ ಅಸ್ಥಿತ್ವವನ್ನೇ ಕಳೆದುಕೊಳ್ಳುವುದು. ಇದು ಬಸವಣ್ಣನವರಿಗೆ ಮಾಡುವ ದ್ರೋಹ, ಜೊತೆಗೆ ಮತ್ತೆ ಈ ಭೂಮಿಯ ಮೇಲೆ ವೈಚಾರಿಕತೆಗೆ ಜಾಗವೇ ಇಲ್ಲದಂತೆ ಮೂಢನಂಬಿಕೆಗಳು ಕಂದಾಚಾರಗಳು ತುಂಬಿ ನರಕ ಸದೃಷವಾಗುವುದು. ಬಸವಣ್ಣನವರು ಕೊಟ್ಟ ಲಿಂಗಾಯತ ಧರ್ಮ ಜಗತ್ತಿಗೆ ಒಂದು ಆಶಾಕಿರಣವಾಗಬೇಕಾದರೆ ಹಿಂದೂ ಕಕ್ಷೆಯಿಂದ ಹೊರಬಂದು ಸ್ವತಂತ್ರವಾಗಬೇಕು, ಹಾಗಾಗಿ ಸರ್ಕಾರದ ಮಾನ್ಯತೆ ಬೇಕು.
ಪ್ರ೧೪: ಬಸವ ಭಕ್ತರು ಅಲ್ಪಸಂಖ್ಯಾತ ಮೀಸಲಾತಿ ಕೇಳುವುದು ಎಷ್ಟುಸರಿ?
ಉ: ನಮಗೆ ಮೀಸಲಾತಿ ಪ್ರಮುಖ ವಿಷಯವೇ ಅಲ್ಲ. ಸ್ವತಂತ್ರ ಧರ್ಮದ ಮಾನ್ಯತೆ ನಮ್ಮ ಆದ್ಯತೆ.
ಪ್ರ೧೫: ತುಳಿತಕ್ಕೊಳಗಾದವರು, ದಲಿತರು, ಅನ್ಯಧರ್ಮೀಯರು ಲಿಂಗಾಯತ ಧರ್ಮ ಪ್ರವೇಶ ಮಾಡುವ ವಿಧಾನ ಯಾವುದು?
ಉ: ಲಿಂಗಾಯತ ಧರ್ಮ ಪ್ರವೇಶದ ಹೆಬ್ಬಾಗಿಲು ಇಷ್ಟಲಿಂಗ ದೀಕ್ಷೆ. ಯಾವುದೇ ವ್ಯಕ್ತಿ ಸ್ವ-ಇಚ್ಛೆಯಿಂದ ಬಸವಣ್ಣನವರ ಗುರುತ್ವವನ್ನು ಒಪ್ಪಿ, ವಚನ ಸಾಹಿತ್ಯವನ್ನು ಧರ್ಮಗ್ರಂಥವೆಂದು ನಂಬಿ, ಇಷ್ಟಲಿಂಗ ದೀಕ್ಷಾಸಂಸ್ಕಾರದೊಂದಿಗೆ ಲಿಂಗಾಯತ ಧರ್ಮೀಯನಾಗಬಹುದು.
ಮಾನವೀಯತೆ | ಬಸವ ಧರ್ಮ /ಲಿಂಗಾಯತ ಧರ್ಮ |