Previous ವಚನ ಸಾಹಿತ್ಯ ಬಿತ್ತಿ ಬಸವ ತತ್ವ ಬೆಳೆಯೋಣ (By Sowing Vachanas We Grow Lingayatism) ಧರ್ಮದ ಲಡಾಯಿ Next

ಇಲ್ಲದ ಧರ್ಮವೊಂದರ ಮೂಲ ಹುಡುಕುತ್ತಾ......

*

✍ಡಾ. ಜೆ ಎಸ್ ಪಾಟೀಲˌವಿಜಯಪುರ.

ನಾವೆಲ್ಲ ತಿಳಿದಿರುವಂತೆ ಧರ್ಮವೆನ್ನುವುದು ಮನುಷ್ಯನ ಒಳಿತಿಗಾಗಿ ಮಾಡಿಕೊಂಡ ಒಂದು ಜೀವನ ವ್ಯವಸ್ಥೆ. ಆದರೆ ಜಗತ್ತಿನಲ್ಲಿ ಧರ್ಮದ ಹೆಸರಿನಲ್ಲಿ ನಡೆದಷ್ಟು ಕೆಡಕುಗಳು ಬೇರಾವುದೆ ವಿಷಯದಲ್ಲಿ ನಡೆಯದೆಯಿರುವುದು ವಿಪರ್ಯಾಸದ ಸಂಗತಿ. ಆದರೂ ಧರ್ಮ ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿ ಆವರಿಸಿಬಿಟ್ಟಿದೆ. ಜಗತ್ತಿನಲ್ಲಿ ಕೇವಲ ಬೆರಳೆಣಿಕೆಯಷ್ಟು ಧರ್ಮಗಳು ಮಾತ್ರ ಅಧಿಕ್ರತವಾಗಿ ಅಸ್ಥಿತ್ವದಲ್ಲಿದ್ದು ಪ್ರತಿಯೊಂದು ಧರ್ಮವೂ ತನ್ನದೆಯಾದ ಕೆಲವು ವೈಶಿಷ್ಠ್ಯಗಳನ್ನು ಹೊಂದಿದೆ. ಆ ಎಲ್ಲ ಧರ್ಮಗಳ ಮೂಲ ರಚನಾ ವಿನ್ಯಾಸ ಮತ್ತು ಆಚರಣೆಗಳ ಹಿಂದಿರುವುದು ಮನುಷ್ಯ ಜೀವಿಯ ಒಳಿತಿನ ಆಶಯವೆನ್ನುವುದು ನಾವು ಗಮನಿಸಬೇಕಿದೆ. ಆದರೆ ಭಾರತದಲ್ಲಿ ಅಧಿಕ್ರತವಾಗಿರುವ ಹಿಂದೂ ಎಂದು ಗುರುತಿಸಲ್ಪಡುವ ಧರ್ಮದ ವಿಷಯವು ಜಗತ್ತಿನ ಉಳಿದೆಲ್ಲ ಅಧಿಕ್ರತ ಧರ್ಮಗಳಿಗಿಂತ ವಿಭಿನ್ನ ಮತ್ತು ವಿಚಿತ್ರವಾಗಿರುವುದು ಸೋಜಿಗವಾಗಿದೆ. ಪ್ರತಿಯೊಂದು ಧರ್ಮದ ಆಚರಣೆಗಳಲ್ಲಿ ಸ್ವಲ್ಪಮಟ್ಟಿಗಿನ ಬದಲಾವಣೆˌಅಥವ ಬೇರೆ ಧರ್ಮದ ಪ್ರಭಾವದಿಂದ ಸಂಕರಗೊಂಡ ಪದ್ಧತಿಗಳ ಒಳನುಸುಳುವಿಕೆ ಮುಂತಾದ ಸಂಗತಿಗಳು ತೀರ ಸರ್ವೇಸಾಮಾನ್ಯ. ಆದರೆ ಅಧಿಕ್ರತ ಧರ್ಮವೊಂದರ ಇಡೀ ಆಕಾರ ಅತ್ತು ಆಶಯಗಳೇ ವಿಚಿತ್ರ ಮತ್ತು ವೈರುದ್ಧಗಳಿಂದ ಕೂಡಿದ್ದರೆ ಅದು ಧರ್ಮ ಹೇಗಾದೀತು ಅನ್ನುವ ಪ್ರಶ್ನೆ ಧುತ್ತನೆ ಎದುರಾಗಿಬಿಡುತ್ತದೆ.

ಜಗತ್ತಿನಲ್ಲಿ ಈಗ ಅಧಿಕ್ರತವಾಗಿ ಹದಿನೇಳು ಧರ್ಮಗಳು ಅಸ್ಥಿತ್ವದಲ್ಲಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಕ್ರೈಸ್ತˌಇಸ್ಲಾಂˌಬೌದ್ಧ ಹಾಗೂ ಹಿಂದೂ. ಭಾರತದಲ್ಲಿ ನೆಲಮೂಲದ ಬೌದ್ಧˌಜೈನˌಸಿಖ್ಖ ಧರ್ಮಗಳ ಜೊತೆಗೆ ಇಸ್ಲಾಂˌಕ್ರೈಸ್ತ ಮುಂತಾದ ವಲಸೆ ಧರ್ಮಗಳು ನೆಲೆಸಿವೆ. ಈಗ ಜಗತ್ತಿನ ಹದಿನೆಂಟನೆ ಅಧಿಕ್ರತ ಧರ್ಮ ಮಾನ್ಯತೆಗಾಗಿ ಲಿಂಗಾಯತ ಎನ್ನುವ ಇನ್ನೊಂದು ಪುರಾತನ ಧರ್ಮ ಹೋರಾಟಕ್ಕಿಳಿದಿದೆ. ಕೆಲವೆ ವರ್ಷಗಳ ಹಿಂದೆ ಜೈನ ಧರ್ಮವು ಭಾರತದಲ್ಲಿ ಸಂವಿಧಾನಿಕ ಮಾನ್ಯತೆ ಪಡೆದುಕೊಂಡಿದೆ. ಆಗ ಈ ವಿಷಯವು ಯಾರಿಗೂ ಗೊತ್ತಾಗಲೇಯಿಲ್ಲ. ಈಗ ಭಾರತದ ಅತ್ಯಂತ ಪ್ರಗತಿಪರ ಲಿಂಗಾಯತ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆ ಬಯಸಿ ಆ ಧರ್ಮಿಯರು ಬ್ರಹತ್ ಹೋರಾಟ ಆರಂಭಿಸಿದ್ದಾರೆ. ಜೈನರು ಪ್ರತ್ಯೇಕ ಧರ್ಮ ಬಯಸಿ ಮನವಿ ಸಲ್ಲಿಸಿದಾಗ ತೋರದ ಗದ್ದಲˌವಿರೋಧˌಹುನ್ನಾರಗಳು ಲಿಂಗಾಯತರು ಕೇಳಿದಾಗ ಧಿಡೀರ ಅಂತ ಏಕೆ ಹುಟ್ಟಿಕೊಂಡವು ಎನ್ನುವುದಕ್ಕೆ ಆ ಧರ್ಮದ ಉದಾತ್ ಪ್ರಗತಿಪರ ತತ್ವಗಳು ಮತ್ತು ಕರ್ಮಠ ಮೌಢ್ಯಗಳ ನಿರಾಕರಣೆಗಳೇ ಕಾರಣವೆಂದು ಬೇರೆಯಾಗಿ ಹೇಳಬೇಕಿಲ್ಲ. ಲಿಂಗಾಯತ ಧರ್ಮದ ಸಂವಿಧಾನಿಕ ಮಾನ್ಯತೆಯನ್ನು ಮುಖ್ಯವಾಗಿ ವಿರೋಧಿಸುತ್ತಿರುವವರು ಅಂದು ಬಸವಣ್ಣನವರ ವೈಚಾರಿಕ ಚಳುವಳಿಯನ್ನು ಹತ್ತಿಕ್ಕಲು ಪ್ರಯತ್ನಿಸಿದ ವೈದಿಕ ಕರ್ಮಠ ಸಂತತಿ ಮತ್ತು ಆ ಕರ್ಮಠರಿಂದ ಪ್ರಚೋದನೆ ಹಾಗೂ ಪ್ರಲೋಭನೆಗೊಳಗಾದ ವೀರಶೈವ ಕರ್ಮಠರು.

ಬಸವಾನುಯಾಯಿ ಲಿಂಗಾಯತರು ತಮ್ಮದು ಅವೈದಿಕ ಸ್ವತಂತ್ರ ಧರ್ಮವು ಹೇಗೆಂದು ಸಾಕ್ಷˌಪುರಾವೆಗಳ ಸಮೇತ ವಾದಿಸಿದರೂ ಕೇಳಿಸಿಕೊಳ್ಳದೆ ಪೂರ್ವಾಗ್ರಹಗಳ ಮೇಲೆ ಅದನ್ನು ವಿರೋಧಿಸುವ ಜಡ್ಡುಗಟ್ಟಿದ ಮನಸ್ಸುಗಳಿಗೆ ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲಾಗದಿದ್ದಾಗ ಅದೇ ಬಸವಣ್ಣನವರ ಕೆಲ ವಚನಗಳಿಗೆ ಗಂಟುಬೀಳುವುದು ನಗೆತರಿಸುತ್ತದೆ. ಬಸವಣ್ಣನವರು ಲಿಂಗಾಯತವು ಧರ್ಮವೆಂದು ಎಲ್ಲೂ ಹೇಳಲಿಲ್ಲ ಎಂದು ವಿತಂಡವಾದಮಾಡುವವರಿಗೆ ಹಿಂದೂ ಧರ್ಮ ಯಾರು ಸ್ಥಾಪನೆ ಮಾಡಿದರು ಎನ್ನುವ ಪ್ರಶ್ನಿಸಿದರೆ ನಿರುತ್ತರರಾಗುತ್ತಾರೆ. ಬಸವಣ್ಣನವರು ಯಾರನ್ನೂ ವಿರೋಧಿಸಲಿಲ್ಲˌಎಲ್ಲರನ್ನೂ ನಮ್ಮರೆಂದರುˌ 'ಇವನಾರವ...ಇವನಾರವ... ' ಎಂದರು. ಆದರೆ ಬಸವಣ್ಣನವರ ಅನುಯಾಯಿಗಳು ತಾವು ಬೇರೆ ಧರ್ಮದವರು ಎನ್ನುತ್ತಾರೆ ಎಂದು ಆರೋಪ ಮಾಡುವ ಲಿಂಗಾಯತ ವಿರೋಧಿಗಳು
ಬಸವಣ್ಣನವರು ತಾರತಮ್ಯಪೂರಿತ ವೈದಿಕ ಆಚರಣೆಗಳನ್ನು ತೀರ್ವ ಕಠಿಣ ಶಬ್ಧಗಳಲ್ಲಿ ಖಂಡಿಸಿರುವ ಈ ಕೆಳಗಿನಂಥ ಅನೇಕ ವಚನಗಳು ಪ್ರಜ್ಞಾಪೂರ್ವಕವಾಗಿ ಮರೆಯುತ್ತಾರೆ.

"ಹೊಲೆಯೊಳಗೆ ಹುಟ್ಟಿ ಕುಲವನರಸುವೆ
ಎಲವೋ ಮಾತಂಗಿಯ ಮಗ ನೀನುˌ
ಸತ್ತ ದನಗಳನೆಳೆವನೆತ್ತಣ ಹೊಲೆಯ ?
ಹೊತ್ತು ತಂದು ನೀವು ಕೊಲುವಿರಿ !
ಶಾಸ್ತ್ರವೆಂಬುದು ಹೋತಿಂಗೆ ಮಾರಿˌ
ವೇದವೆಂಬುದು ನಿಮಗೆ ತಿಳಿಯದುˌ
ನಮ್ಮ ಕೂಡಲಸಂಗನ ಶರಣರು
ಕರ್ಮವಿರಹಿತರುˌ ಶರಣಸನ್ನಿಹಿತರುˌ ಅನುಪಮಚರಿತ್ರರುˌ
ಅವರಿಗೆ ತೋರಲು ಪ್ರತಿಯಿಲ್ಲವೋ !"


ಬಸವಣ್ಣ ಬೇರೆ ಧರ್ಮ ಸ್ಥಾಪಿಸಲಿಲ್ಲ ಎಂದು ವಾದಿಸುವ ಬಸವ ವಿರೋಧಿಗಳಿಗೆ ಬಸವಣ್ಣನವರು ಪ್ರತಿಪಾದಿಸಿದ ಪ್ರತಿಯೊಂದು ಅಂಶವೂ ವೈದಿಕ ವ್ಯವಸ್ಥೆಯನ್ನು ವಿಮರ್ಶೆಯ ವರೆಗೆ ಹಚ್ಚಿರುವುದು ಹೊಸ ಧರ್ಮವೊಂದರ ಕುರಿತ ಸುಳುಹುವೆಂಬುದು ಗೊತ್ತಿಲ್ಲದಿಲ್ಲ.

ಬಸವಾನುಯಾಯಿಗಳು ಲಿಂಗಾಯತ ಧರ್ಮಕ್ಕೆ ಸಂವಿಧಾನ ಮಾನ್ಯತೆ ಕೇಳುವುದನ್ನು ವಿರೋಧಿತ್ತಿರುವ ವೈದಿಕರಾಗಲಿˌವೈದಿಕ ವೀರಶೈವರಾಗಲಿ ತಾವು ಪ್ರತಿಪಾದಿಸುವ ಹಿಂದೂ ಎನ್ನುವ ಅಸ್ಥಿತ್ವದಲ್ಲಿರದ ಧರ್ಮದ ಸಾವಿರಾರು ನೂನ್ಯತೆಗಳ ಕುರಿತು ಬಾಯಿಬಿಡುವುದೇ ಇಲ್ಲ. ಜಗತ್ತಿನ ಪ್ರಗತಿಪರ ಧರ್ಮಗಳಾದ ಕ್ರೈಸ್ತˌಇಸ್ಲಾಂ ಮತ್ತು ಲಿಂಗಾಯತ ಧರ್ಮಗಳಿಗೆ ನಿರ್ಧಿಷ್ಠ ಧರ್ಮಗುರುˌಧರ್ಮಗ್ರಂಥˌಧರ್ಮಾಚರಣೆಗಳುಂಟು. ಈ ಮೇಲಿನ ಧರ್ಮಗಳಲ್ಲಿ ನೂರಕ್ಕೆ ನೂರರಷ್ಟು ಅನುಯಾಯಿಗಳಲ್ಲಿ ಸಮಾನ ಆಚರಣೆಗಳಿದ್ದು ಕೆಲವು ಪಂಗಡಗಳಲ್ಲಿ ಒಂದಷ್ಟು ಹೆಚ್ಚಿನ ಆಚರಣೆಗಳಿರಬಹುದು. ಆದರೆ ಈಗ ಹಿಂದೂ ಎಂದು ಗುರುತಿಸಲ್ಪಡುವ ಜನರಲ್ಲಿ ಸಂಪೂರ್ಣ ಸಮಾನ ಆಚರಣೆಗಳುˌಧಾರ್ಮಿಕ ಸಂಸ್ಕಾರಗಳು ಕಾಣಸಿಗದೆ ಭಾರತದಲ್ಲಿ ನೆಲೆಸಿರುವ ಹಿಂದೆಗಳೆಂದು ಗುರುತಿಸಲ್ಪಡುವ ಪ್ರತಿಯೊಂದು ಸಮುದಾಯವೂ ತನ್ನದೆಯಾದ ಸಂಪ್ರದಾಯಗಳನ್ನು ಹೊಂದಿರುವಾಗ ಹಿಂದೂ ಒಂದು ಧರ್ಮ ಎನ್ನುವ ಬದಲಿಗೆ ಅದೊಂದು ಜೀವನ ಪದ್ಧತಿ ಮಾತ್ರ ಎಂದು ನಿಸ್ಸಂಶಯವಾಗಿ ಹೇಳಬಹುದಾಗಿದೆ. ಈ ಮಾತು ಮಾಜೀ ಶಾಸಕ ಶ್ರೀ ನಿಲಗಂಗಯ್ಯಾ ಪೂಜಾರ್ ಅವರ ಕೆಳಗೆ ನೀಡಲಾದ ಅಭಿಪ್ರಾಯದ ಮೂಲಕ ಪುಷ್ಠಿಕರಿಸಬಹುದಾಗಿದೆ :

"ಹಿಂದೂ ಒಂದು ಧರ್ಮವೇ ಅನ್ನುವ ಜಿಜ್ಞಾಸೆ ಕತ್ತಲಲ್ಲಿ ಕೈಯಾಡಿಸಿದಂತೆ."

-ನೀಲಗಂಗಯ್ಯ ಪೂಜಾರˌಮಾಜೀ ಶಾಸಕರುˌ
("ಹಿಂದೂ ಎಂಬುದು ಪ್ರಾಚೀನ ಬ್ರಾಹ್ಮಣ ಧರ್ಮದ ಅಧುನಿಕ ಪರಿಭಾಷೆ " ಎಂಬ ಲೇಖನದಲ್ಲಿ).

ತಾವೆಲ್ಲ ಹಿಂದೂಗಂದು ಹೆಮ್ಮೆಯಿಂದ ಹೇಳಿಕೊಳ್ಳೂವವರ ಕುರಿತು ಬಸವಾನುಯಾಯಿ ಲಿಂಗಾಯತರಿಗೆ ಯಾವುದೇ ತಕರಾರಿಲ್ಲ. ಆದರೆ ಆ ಹಿಂದೂಗಳೆಂದು ಹೇಳಿಕೊಳ್ಳುವ ಜನ ಲಿಂಗಾಯತರ ಧರ್ಮ ಮಾನ್ಯತೆಯ ಬೇಡಿಕೆ ಪ್ರಶ್ನಿಸುತ್ತಿರುವುದರಿಂದ ಲಿಂಗಾಯತರು ಹಿಂದೂ ಧರ್ಮದ ವೈರುಧ್ಯಗಳ ಕುರಿತು ಸಂಶಯ ಹಾಗೂ ಸಾವಿರಾರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಅವುಗಳಲ್ಲಿ ಪ್ರಮುಖವಾದ ಹಲವು ಪ್ರಶ್ನೆಗಳು ಈ ಕೆಳಗಿನಂತಿವೆ. ಬಹುಶಃ ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಹಿಂದೂ ಎಂದು ಗುರುತಿಸಿಕೊಳ್ಳುವವರು ಕಂಡುಕೊಂಡರೆ ತಮಗೆ ತಾವು ನಂಬುವ ಧರ್ಮದ ಕುರಿತು ಒಂದಷ್ಟು ತಿಳುವಳಿಕೆ ಬರುತ್ತದೆ. ಇಲ್ಲವಾದರೆ ಬಸವಾನುಯಾಯಿಗಳ ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟವನ್ನು ವಿರೋಧಿಸುವ ಯಾವ ನೈತಿಕತೆಯೂ ಇರುವುದಿಲ್ಲ.

ಹಿಂದೂ ಎನ್ನು ಧರ್ಮದ ಕುರಿತು ಇರುವ ಅನುಮಾನಗಳು ಮತ್ತು ಏಳುವ ಪ್ರಶ್ನೆಗಳು :

1. ಹಿಂದೂ ಧರ್ಮದ ಸ್ಥಾಪಕ ಪುರುಷನಾರು ?

2. ವೇದಾಗಮˌಉಪನಿಷತ್ˌಪುರಾಣˌಮಹಾಕಾವ್ಯˌಹಾಗೂ ಭಗವದ್ಗೀತೆ ಮುಂತಾದ ಯಾವುದಾದರೂ ಗ್ರಂಥಗಳಲ್ಲಿ ಹಿಂದೂ ಶಬ್ಧ ಅಥವಾ ಹಿಂದೂ ಧರ್ಮದ ಕುರಿತು ಉಲ್ಲೇಖವಿದೆಯೆ.

3. ಹಿಂದೂ ಧರ್ಮ ನಿರ್ಧಿಷ್ಠವಾಗಿ ಯಾವ ಸ್ಥಳದಲ್ಲಿˌಯಾವ ಕಾಲಘಟ್ಟದಲ್ಲಿ ಸ್ಥಾಪಿಸಲಾಯಿತು ಹಾಗೂ ಅದನ್ನು ಸ್ಥಾಪಿಸಲು ಕಾರಣವಾದ ಹಿನ್ನೆಲೆಗಳೇನು ?

4. ಹಿಂದೂ ಧರ್ಮದ ನಿರ್ಧಿಷ್ಟ ಧರ್ಮಸನ್ಹಿತೆಗಳು ಯಾವುವು ?

5. ಹಿಂದೂ ಧರ್ಮದ ನಿರ್ದಿಷ್ಟ ಧರ್ಮಗ್ರಂಥ ಯಾವುದು ಹಾಗೂ ಅದರಲ್ಲಿ ಅಧ್ಯಾತ್ಮದ ವಿಷಯ ಹೊರತು ಪಡಿಸಿ ಹಿಂದೂ ಧರ್ಮ ಸ್ಥಾಪನೆಯಾದ ಬಗೆˌಧರ್ಮದ ಚೌಕಟ್ಟು ˌಧರ್ಮ ಧ್ವಜˌಧರ್ಮ ಸ್ಥಾಪಕರ ಹೆಸರುˌಧಾರ್ಮಿಕ ಚಿನ್ಹೆ ˌಕಟ್ಟಳೆˌನಿಯಮಗಳು ವಿವರಿಸಲಾಗಿದೆಯೆ ?

6. ಜಗತ್ತಿನ ಪ್ರಗತಿಪರ ಧರ್ಮಗ್ರಂಥಗಳಾದ ಬೈಬಲ್ ಮತ್ತು ಖುರಾನ್ ಮಾದರಿಯಲ್ಲಿ ಒಂದೇ ಧರ್ಮಗ್ರಂಥದಲ್ಲಿ ಐದನೇ ಪ್ರಶ್ನೆಯಲ್ಲಿ ಕೇಳಿದ ಒಂದೇ ಕಾಲಘಟ್ಟದಲ್ಲಿ ಬರೆಯಲ್ಪಟ್ಟ ಉತ್ತರಗಳು ಸಿಗುವವೇ ಅಥವಾ ಬೇರೆ ಬೇರೇ ಕಾಲಘಟ್ಟದಲ್ಲಿ ಬರೆದ ಬೇರೆ ಬೇರೆ ಗ್ರಂಥಗಳಿಂದ ಕ್ರೂಡಿಕರಿಸಿ ಹಿಂದೂ ಸಂಸ್ಕ್ರತಿಯ ಆಚರಣೆಗಳೆಂದು ಹೇಳಲಾಗುತ್ತಿದೆಯೆ ?

7. ಹಿಂದೂ ಧರ್ಮದವರನ್ನು ಗುರುತಿಸುವ ಸಮಾನವಾದ ಧಾರ್ಮಿಕ ವಿಧಿ ವಿಧಾನಗಳುˌಆಚರಣೆಗಳುˌಚಿನ್ಹೆಗಳು ಯಾವುವು ? ಉದಾಹರಣೆಗೆˌಲಿಂಗಾಯತರಲ್ಲಿ ಇಷ್ಟಲಿಂಗ ಮತ್ತು ವಿಭೂತಿ ಧಾರಣೆˌಲಿಂಗ ದೀಕ್ಷೆˌವೈದಿಕರಲ್ಲಿ ಜುಟ್ಟು ˌಜನಿವಾರˌಮುದ್ರೆ ನಾಮಧಾರಣೆˌಸಿಖ್ಖರಲ್ಲಿ ತಲೆಗೆ ರುಮಾಲು ಮತ್ತು ಗಡ್ಡ ಇತ್ಯಾದಿ.

8. ಹಿಂದೂ ಧರ್ಮದ ವಿಧಿ ವಿಧಾನˌಚಿನ್ಹೆಗಳು ಈಗ ಹಿಂದೂಗಳೆಂದು ಗುರುತಿಸಿಕೊಂಡಿರುವ ಎಲ್ಲರಿಗೂ ಸಮಾನವಾಗಿ ಅನ್ವಯವಾಗುವುದಿಲ್ಲವೇಕೆ ?

9. ಕ್ರೈಸ್ತˌಇಸ್ಲಾಂನಂತಹ ಪರಿಪೂರ್ಣ ಧರ್ಮಗಳಲ್ಲಿರುವಂತೆ ಎಲ್ಲ ಹಿಂದೂಗಳ ಅಂತ್ಯ ಸಂಸ್ಕಾರದ ಪದ್ಧತಿಗಳು ಒಂದೇ ಆಗಿರದೆ ಬೇರೆ ಬೇರೆ ಏಕೆ ?

10. ಹಿಂದೂ ಧರ್ಮದ ಏಕೈಕ ಸರ್ವೊತ್ತಮ ದೇವರು ಯಾರು ? ಹಿಂದೂ ಜೀವನ ಪದ್ಧತಿಯಲ್ಲಿರುವ ಜನಾಂಗೀಯ ತಾರತಮ್ಯಗಳಂತೆ ದೇವರಲ್ಲೂ ಮೇಲು ಕೀಳುಗಳೇಕೆ ? ತಿಮ್ಮಪ್ಪˌರಾಘವೇಂದ್ರ ಮುಂತಾದ ವೈದಿಕ ದೇವರುಗಳಿಗಿರುವ ಪ್ರಾಶಸ್ತ್ಯ ಶೂದ್ರರ ದೇವರುಗಳಾದ ಮಾರಮ್ಮˌದುರ್ಗಮ್ಮˌಪೋಚಯ್ಯಗಳಿಗೇಕಿಲ್ಲ ?

11. ಅಸ್ಪ್ರಷ್ಯˌಶೂದ್ರˌಮತ್ತು ಮಹಿಳೆಯರಿಗೆ ಧಾರ್ಮಿಕ ಸಂಸ್ಕಾರಗಳೇಕಿಲ್ಲ ? ಮೇಲ್ವರ್ಗದ ವೈದಿಕರಲ್ಲಿರುವ ಹಿಂದೂ ಎಂದು ಕರೆಯಲ್ಪಡುವ ಧರ್ಮದ ಸಂಸ್ಕಾರಗಳು ಶೂದ್ರ ಮತ್ತು ದಲಿತ ಹಿಂದೂಗಳಲ್ಲಿ ಏಕೆ ಕಾಣಸಿಗುವುದಿಲ್ಲ.

ಇಂಥ ಸಾವಿರಾರು ಸಂಶಯಗಳುˌವೈರುಧ್ಯಗಳುˌಪ್ರಶ್ನೆಗಳಿಗೆ ಹಿಂದೂ ಎಂದು ತಪ್ಪಾಗಿ ಕರೆಯಲ್ಪಡುವ ಧರ್ಮದಲ್ಲಿ ಖಂಡಿತ ಉತ್ತರಗಳಿಲ್ಲ. ಕೆಲವೊಂದು ಪ್ರಶ್ನೆಗಳಿಗೆ ಉತ್ತರವಿದ್ದರೂ ಅವು ಅನೈತಿಕ ಸಮರ್ಥಗಳೇ ಹೊರತು ಸಮರ್ಥ ಉತ್ತರಗಳಲ್ಲ. ಭಾರತದಲ್ಲಿ ಮೂಲದಲ್ಲಿದ್ದದ್ದು ದ್ರಾವಿಡ ಧರ್ಮ. ಆರ್ಯರ ಆಕ್ರಮಣದ ನಂತರ ಇಲ್ಲಿ ನೆಲೆಗೊಂಡದ್ದು ವೈದಿಕ ಪಂಥ. ಈ ವೈದಿಕ ಪಂಥದವರು ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಹಿಂದೂಸ್ಥಾನವೆಂದು ಭೌಗೋಳಿಕವಾಗಿ ಗುರುತಿಸಿಕೊಂಡಿದ್ದ ದೇಶದಲ್ಲಿ ನೆಲೆಸಿದ ಜನಾಂಗವನ್ನು ಹಿಂದೂ ಧರ್ಮಿಯರೆಂದು ಜೀವನ ಪದ್ಧತಿಯನ್ನು ಗುರುತಿಸುವ ಶಬ್ಧಕ್ಕೆ ಧಾರ್ಮಿಕ ತಳಕು ಹಾಕಿರುವುದು ಸ್ಪಷ್ಟವಾಗಿ ಕಾಣುತ್ತದೆ. ಹಿಂದೂ ಜೀವನ ಪದ್ಧತಿಯು ಧರ್ಮವೆಂದು ತಪ್ಪಾಗಿ ಗುರುತಿಸಿಕೊಂಡ ಕುರಿತು ನೀಲಗಂಗಯ್ಯನವರು ತಮ್ಮ ಲೇಖನದಲ್ಲಿ ಈ ರೀತಿ ಬರೆಯುತ್ತಾರೆ :

" ಪಾರಶಿಕರುˌಗ್ರೀಕರುˌಹೂಣರು ಈ ದೇಶದ ಮೇಲೆ ಅಭಿಯೋಗ ನಡೆಸಿದಾಗˌ ಆ 'ಮ್ಲೇಚ್ಛ ' ಜನರು ಈ ದೇಶವನ್ನು 'ಹಿಂದುಸ್ಥಾನ 'ವೆಂದು ಕರೆದರು. ಇಲ್ಲಿಯ ಜನರನ್ನು ' ಹಿಂದೂ' ಗಳೆಂದು ಹೀಯಾಳಿಸಿ ಕರೆದರು. ಆ ಬೈಗುಳವನ್ನೇ ತಮ್ಮದಾಗಿಸಿಕೊಂಡು ಅದನ್ನೇ ವೈದಿಕರು ಧರ್ಮವೆಂದು ಮುದ್ದಾಡಿದರು."

"ಯುಗಯುಗಗಳುದ್ದಕ್ಕೂ ಅವಹೇಳನಕ್ಕೆ ಗುರಿಯಾಗಿದ್ದುಕೊಂಡು ಬಂದಿದ್ದ ಬ್ರಾಹ್ಮಣ ಧರ್ಮವು ಪರಕೀಯ ಬುಡಕಟ್ಟಿನ ಬ್ಯಾಟ್ಕ್ರೀಯನ್ ಗ್ರೀಕ್ˌಶಕˌಪಹ್ಲವˌಕುಶಾಣರನ್ನು ಅವ್ಹಾನಿಸಿಕೊಂಡು ಮೌರ್ಯˌಗುಪ್ತ ಸಾಮಾಜ್ರ್ಯಗಳನ್ನು ಹುಡಿಗೂಡಿಸಿˌಧರ್ಮ ಸಂಸ್ಕ್ರತಿವಿಹೀನರಾಗಿದ್ದ ಆ ಪರಕೀಯರಿಗೆ ಜನಿವಾರ ತೊಡಿಸಿˌಅವರಿಂದ ಮಹಾಯಜ್ಞˌಸರ್ವಜಿದ್ಯಜ್ಞˌರಾಜಸೂಯಯಾಗˌಅಶ್ವಮೇಧಯಾಗಗಳನ್ನು ಮಾಡಿಸಿˌಅವರಿಗೆ ದೀಕ್ಷೆ ತೊಡಿಸಿˌಕ್ಷತ್ರಪˌಕ್ಷತ್ರೀಯˌರಾಜಪುತ್ರˌಇತ್ಯಾದಿ ಆರ್ಯಪರಿಭಾಷೆಯ ಕುಲಮೂಲಗಳ ಹೆಸರನ್ನಿರಿಸಿˌಚಾತುರ್ವಣ್ಯ ಧರ್ಮವನ್ನು ಅಸ್ತಿತ್ವಕ್ಕೆ ತಂದರು. ಈ ದೇಶದ ಮೂಲ ಬುಡಕಟ್ಟುಗಳು ಈ ಪ್ರಕ್ರೀಯೆಯಲ್ಲಿ ರಿಕ್ತರಾಗಿˌಹೊಂದಾಣಿಕೆಯಾಗದೆ ಉಳಿದಿದ್ದರಿಂದ ಅವರನ್ನು ಶೂದ್ರರನ್ನಾಗಿ ಮಾಡಿಬಿಟ್ಟರು. ಆ ನಂತರವೇ ರಾಮಾಯಣˌಮಹಾಭಾರತಗಳು ಕಥಾರೂಪ ತಾಳಿˌಕಾಲಕ್ರಮೇಣ ಮಹಾಕಾವ್ಯಗಳಾಗಿ ಬೆಳೆದು ಬಂದವು. ಪುರಾಣಗಳು ರಚಿಸಲ್ಪಟ್ಟವು. ವೇದಪ್ರಾಮಾಣ್ಯˌಬ್ರಾಹ್ಮಣಶ್ರೇಷ್ಠತೆˌಗ್ರಹಾಗ್ನಿ ಪಾಲನೆˌಸಂಧ್ಯಾವಂದನೆˌಅದಕ್ಕಾಗಿ ಜುಟ್ಟು-ಜನಿವಾರಗಳುˌಗಾಯತ್ರಿ ಮಂತ್ರ ಪಠಣˌಪಿತ್ರುತರ್ಪಣˌಶ್ರಾದ್ಧವಿಧಿˌಗೋತ್ರ ಪ್ರವರಗಳ ಪುರಶ್ಚರಣಗಳಂಥ ವಿಧಿಗಳನ್ನು ಆಚರಿಸಬಲ್ಲವನೇ ಹಿಂದೂ ಧರ್ಮಶಾಸ್ತ್ರಗಳನ್ವಯ ಹಿಂದೂ ಎನ್ನಿಸಿಕೊಳ್ಳುತ್ತಾನಲ್ಲದೆ ಈ ಸಂಘ-ಪರಿವಾರದವರು ಬೇರೆ ಹಿಂದೂವನ್ನು ಶ್ರಷ್ಠಿಸಲಾರರು."

-ನೀಲಗಂಗಯ್ಯ ಪೂಜಾರˌಮಾಜೀ ಶಾಸಕರುˌ
(ಹಿಂದೂ ಎಂಬುದು ಪ್ರಾಚೀನ ಬ್ರಾಹ್ಮಣ ಧರ್ಮದ ಅಧುನಿಕ ಪರಿಭಾಷೆ ಎಂಬ ಲೇಖನದಿಂದ ).

ನೀಲಗಂಗಯ್ಯನವರ ಲೇಖನದಲ್ಲಿರುವ ಅಭಿಪ್ರಾಯವು ಹಿಂದೂಗಳೆಂದರೆ ಯಾರು ಎಂದು ಗುರುತಿಸಲು ನಮಗೆ ಸ್ಪಷ್ಟ ಮಾರ್ಗದರ್ಶನ ನೀಡುತ್ತದೆ. ಲಿಂಗಾಯತ ಸ್ವತಂತ್ರ ಧರ್ಮವನ್ನು ವಿರೋಧಿಸುವ ಮಂದಗಾಮಿಗಳು ಇದನ್ನು ತಿಳಿದುಕೊಂಡರೆ ಒಳಿತು.

*
ಪರಿವಿಡಿ (index)
Previous ವಚನ ಸಾಹಿತ್ಯ ಬಿತ್ತಿ ಬಸವ ತತ್ವ ಬೆಳೆಯೋಣ (By Sowing Vachanas We Grow Lingayatism) ಧರ್ಮದ ಲಡಾಯಿ Next