Previous ಲಿಂಗಾಯತ ಸ್ವತಂತ್ರ ಧರ್ಮ ಅಸ್ಮಿತೆಗಳ ಹುಡುಕಾಟ; ರಾಜಕೀಯ ಲೆಕ್ಕಾಚಾರ: ‘ಸ್ವತಂತ್ರ ಲಿಂಗಾಯತ ಧರ್ಮ’ ಯಾಕೆ ಬೇಕು? Next

ವೀರಶೈವರು ಹಿಂದೂಗಳೇ ಆದರೆ ಲಿಂಗಾಯತರು ಹಿಂದೂಗಳಲ್ಲ

*

✍ಡಾ. ಜೆ ಎಸ್ ಪಾಟೀಲˌವಿಜಯಪುರ

ಧರ್ಮವು ಮನುಷ್ಯನ ಒಳಿತಿನ ಆಶಯಗಳಿಂದ ರೂಪುಗೊಂಡ ಒಂದು ವ್ಯವಸ್ಥೆ. ಆ ಒಳಿತಿನ ಆಶಯಗಳನ್ನು ಮೀರಿ ಅದು ಆತನ ಅಹಂ ಮತ್ತು ಆಸ್ಮಿತೆಯ ಮಾರ್ಗವಾಗಿ ಪರಿವರ್ತನೆಯಾಗುತ್ತಿರುವುದು ಸಮಕಾಲಿನ ದುರಂತ. ಮನುಷ್ಯನಿಂದಲೇ ನಿರ್ಮಾಣವಾದ ಧರ್ಮವು ಆತನ ನಿಯಂತ್ರಣ ಮೀರಿ ಮನುಷ್ಯ ಜನಾಂಗವನ್ನೇ ನಿಯಂತ್ರಿಸುತ್ತಿರುವುದು ವಿಪರ್ಯಾಸದ ವಿಷಯ. ಆದರೂ ನಾವೆಲ್ಲ ಒಂದಲ್ಲ ಒಂದು ಬಗೆಯಲ್ಲಿ ಧರ್ಮದ ಬಾಹುಗಳಲ್ಲಿ ಬಂಧಿತರಾದವರೆ. ಇತ್ತೀಚಿನ ದಿನಗಳಲ್ಲಿ ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಯ ಕುರಿತು ಬಹುವಿಧ ಚರ್ಚೆಗಳು ಕೇಳಿಬರುತ್ತಿವೆ. ಇಲ್ಲಿ ಕುತೂಹಲದ ವಿಷಯವೆಂದರೆ ಲಿಂಗಾಯತರ ಬೇಡಿಕೆಯು ನ್ಯಾಯಸಮ್ಮತವೇ ಅನ್ನುವುದರ ಬದಲಾಗಿ ಲಿಂಗಾಯತರಿಗೆ ಸ್ವತಂತ್ರ ಧರ್ಮ ಸಿಕ್ಕರೆ ತಮಗಾಗುವ ರಾಜಕೀಯ ಹಾನಿಯನ್ನು ನೆನೆದು ಆತಂಕದಿಂದ ಹುಯಿಲೆಬ್ಬಿಸುತ್ತಿರುವ ಕರ್ಮಠ ಹಿಂದೂ ಮನಸ್ಥಿತಿಗಳ ಮರುಗುವಿಕೆ.

ಕಳೆದ ಸಂಚಿಕೆಯಲ್ಲಿ ಹಿರಿಯ ಹಿಂದೂ ಸಂಶೋಧಕರಾದ ಡಾ. ಚಿದಾನಂದ ಮೂರ್ತಿಯವರು 'ವೀರಶೈವರು ಹಿಂದೂಗಳಲ್ಲ ಎಂಬುದು ಸರಿಯಲ್ಲ ' ಎಂದು ಲೇಖನ ಬರೆದಿರುವರು. ಅವರ ಲೇಖನದ ಶಿರ್ಷಿಕೆಯು ವಾಸ್ತವವನ್ನೇ ಹೇಳುತ್ತದೆ. ಏಕೆಂದರೆ ವೀರಶೈವರು ಹಿಂದೂಗಳಲ್ಲ ಅನ್ನುವುದು ನಮ್ಮ ವಾದ ಅಲ್ಲವೇ ಅಲ್ಲ. ಆದರೆ ಲಿಂಗಾಯತರು ಹಿಂದೂಗಳಲ್ಲವೆಂದು ನಾವೆಲ್ಲ ಬಸವಾನುಯಾಯಿಗಳು ಒಕ್ಕೂರಲಿನಿಂದ ಹೇಳುವುದು ನಿಶ್ಚಿತ. ವೀರಶೈವರು ಅಪ್ಪಟ ಕರ್ಮಠ ಹಿಂದೂಗಳೆಂದು ಬೇರೆ ಯಾರೂ ಸಾಬೀತು ಮಾಡುವ ಅಗತ್ಯವೇಯಿಲ್ಲ. ಏಕೆಂದರೆ ವೀರಶೈವ ಆಚಾರ-ವಿಚಾರಗಳೇ ಅದನ್ನು ಒತ್ತಿ ಹೇಳುತ್ತವೆ. ವೀರಶೈವರ ಅನುಯಾಯಿಗಳನ್ನು 'ಗುರು' ಮತ್ತು 'ಭಕ್ತ ' ವರ್ಗಗಳೆಂದು ವಿಭಜಿಸುವˌಮುಗ್ಧ ಭಕ್ತರ ಹೆಗಲೇರಿ ಅಡ್ಡಪಲ್ಲಕ್ಕಿಯಲ್ಲಿ ವಿಜ್ರಂಭಿಸುವˌಪಾದಪೂಜೆˌದಕ್ಷಿಣೆˌಮಡಿ-ಮೈಲಿಗೆˌಹೋಮ-ಹವನˌಪಂಚಾಂಗˌಮುಹೂರ್ತ ಮುಂತಾದ ವೈದಿಕ ಆಚರಣೆಗಳೇ ವೀರಶೈವವು ಹಿಂದೂ ಧರ್ಮದ ಒಂದು ಶೈವ ಶಾಖಾ ಪಂಥವೆನ್ನುವುದು ದ್ರಢೀಕರಿಸುತ್ತದೆ.

ಡಾ. ಚಿಮೂ ಅವರು ವೀರಶವ ಹಿಂದೂ ಧರ್ಮದ ಅನಧಿಕ್ರತ ವಕ್ತಾರರೆಂದು ನಾವು ಬೇರೆ ಹೇಳುವ ಅಗತ್ಯವಿಲ್ಲವಿಂದುಕೊಳ್ಳುತ್ತೇನೆ. ಮೂರ್ತಿಯವರು ಎತ್ತಿದ ಅನೇಕ ಪ್ರಶ್ನೆಗಳಿಗೆ ಅಸಂಖ್ಯಾತ ಹಿರಿಯ ಪ್ರಾಜ್ಞರು ವಿವಿಧ ವೇದಿಕೆ ಮತ್ತು ಮಾದ್ಯಮಗಳ ಮುಖಾಂತರ ಸ್ಪಷ್ಟವಾದ ಉತ್ತರಗಳನ್ನು ಕೊಟ್ಟಿದ್ದಾರೆ. ಆದರೆ ಅವರ ಹಿಂದೂ ಕರ್ಮಠ ಮನಸ್ಥಿತಿಯ ಪೂರ್ವಾಗ್ರಹಗಳು ಪಲ್ಲಟಗೊಳ್ಳುತ್ತವೆಂಬ ಹುಸಿ ಆಶಾವಾದಗಳು ನಮಗಿಲ್ಲ. ಅವರ ಪ್ರತಿವೊಂದು ಪ್ರಶ್ನೆಗಳಿಗೂ ಬಿಡದೆ ಉತ್ತರಿಸುವ ಅಗತ್ಯವೂ ಲಿಂಗಾಯತರಿಗಿಲ್ಲ. ಆದರೆ ಮುಗ್ಧ ಜನರನ್ನು ದಾರಿ ತಪ್ಪಿಸುವ ಅವರ ವಿತಂಡವಾದವನ್ನು ಸಮರ್ಥವಾಗಿ ಅಲ್ಲಗಳೆಯದಿರಲಾಗದು. ಮೂರ್ತಿಯವರ ಎಲ್ಲ ಅನುಮಾನಗಳಿಗೆ ಈಗಾಗಲೇ ಅನೇಕ ತಜ್ಞರು ಪ್ರತಿಪಾದಿಸಿರುವ ವಿಷಯಗಳನ್ನು ಈ ಕೆಳಗಿನಂತೆ ನೀಡಲಿಚ್ಛಿಸಿಸುತ್ತೇನೆ.

1. ಪಂಚಪೀಠಾಧಿಪತಿಗಳು ಮೂಲತಃ ಚತುರಾಚಾರ್ಯರು ಎಂಬುದಕ್ಕೆ 1698 ರಲ್ಲಿ ಪ್ರಕಟವಾದ ಸಂಪಾದನೆಯ ಪರ್ವತೇಶದ ಚತುರಾಚಾರ್ಯರ ಚರಿತ್ರೆಯು ಒಂದು ಆಕರ ಗ್ರಂಥ.*1

2. ರೇಣುಕˌಮರುಳಸಿದ್ಧˌಕೇದಾರ ಭೀಮಾಶಂಕರˌಶ್ರೀಶೈಲದ ಪಂಡಿತಾರಾಧ್ಯ ಈ ಚತುರಾಚಾರ್ಯರು 15ನೇ ಶತಮಾನದ ನಂತರ ಪ್ರವರ್ಧಮಾನಕ್ಕೆ ಬಂದುˌ 17ನೇ ಶತಮಾನದಲ್ಲಿ ಕಾಶಿಯ ಗೋಸಾಯಿˌನಾಥಪರಂಪರೆಯ ಪೀಠವನ್ನು ಅತಿಕ್ರಮಿಸಿ ಐದನೇ ಪೀಠವೊಂದನ್ನು ಸ್ಥಾಪನೆಮಾಡಿಕೊಂಡು ಪಂಚಾಚಾರ್ಯರೆಂದು ಸ್ವಯಂ ಘೋಷಿಸಿಕೊಂಡರು. *1

3. ಮೂಲತಃ ಆಂದ್ರಪ್ರದೇಶದ ಲಿಂಗೀ ಬ್ರಾಹ್ಮಣರಾದ ಇವರು ವಾಸ್ತವದಲ್ಲಿ ಶೈವಪಂಥದ ಆರಾಧಕರಾಗಿದ್ದು ಕ್ರಮೇಣ ಲಿಂಗಧಾರಿಗಳಾಗಿ ಲಿಂಗಾಯತರಿಗೆ ತಾವೇ ಗುರುಗಳೆಂದು ಪ್ರತಿಪಾದಿಸಿದವರು. *1

4. 14ನೇ ಶತಮಾನದ ನಂತರ ಸಂಸ್ಕ್ರತದಲ್ಲಿ ಶಿವಾಗಮ ಆಧರಿತ ಸಿದ್ಧಾಂತ ಶಿಖಾಮಣಿಯನ್ನು ಶ್ರಷ್ಠಿಸಿಕೊಂಡರು.*1

5. 20ನೇ ಶತಮಾನದಲ್ಲಿ ನಾಡಿನಾದ್ಯಂತ ಸ್ಥಾಪಿಲಾದ ಅನೇಕ ಸಂಘ-ಸಂಸ್ಥೆಗಳಿಗೆ ಎಲ್ಲೂ ವೀರಶೈವ ಎಂಬ ಶಬ್ಧ ಬಳಕೆಯಾಗಿರುವುದಿಲ್ಲ.
* 1867ರಲ್ಲಿ ಡೆಪ್ಯುಟಿ ಚೆನ್ನಬಸಪ್ಪನವರು ಸ್ಥಾಪಿಸಿದ ಲಿಂಗಾಯತ ಉಚಿತ ಪ್ರಸಾದ ನಿಲಯˌ
* 1855ರಲ್ಲಿ ಧಾರವಾಡದಲ್ಲಿ ಆರಂಭವಾದ ಲಿಂಗಾಯತ ವಿಧ್ಯಾಭಿವ್ರದ್ಧಿ ಸಂಸ್ಥೆˌ
* 1906ರಲ್ಲಿ ಬಾಗಲಕೋಟೆಯಲ್ಲಿ ಬೀಳೂರು ಗುರುಬಸವರು ಆರಂಭಿಸಿದ ಬಸವೇಶ್ವರ ವಿಧ್ಯಾವರ್ಧಕ ಸಂಘ (2004ರ ನಂತರ ಪಟ್ಟಭದ್ರರು ವೀರಶೈವ ಎಂಬ ಶಬ್ಧವನ್ನು ಸೇರಿಸಿದರು)ˌ
* 1910ರಲ್ಲಿ ಡಾ. ಫ ಗು ಹಳಕಟ್ಟಿಯವರು ವಿಜಾಪುರದಲ್ಲಿ ಸ್ಥಾಪಿಸಿದ ವಿಜಾಪುರ ಲಿಂಗಾಯತ ವಿಧ್ಯಾಭಿವ್ರದ್ಧಿ ಸಂಸ್ಥೆˌ
* 1916ರಲ್ಲಿ ಬೆಳಗಾವಿಯಲ್ಲಿ ಸ್ಥಾಪಿಸಲಾದ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆˌಹಾಗೂ
ಬೆಂಗಳೂರಲ್ಲಿ ಪುಟ್ಟಣ್ಣ ಶೆಟ್ಟರು ಆರಂಭಿಸಿದ ಲಿಂಗಾಯತ ಹೆಸರಿನ ಶಿಕ್ಷಣ ಸಂಸ್ಥೆಗಳು ಇದಕ್ಕೆ ನಿದರ್ಶನ.

ಇನ್ನು ಮೂರ್ತಿಯವರು ತಮ್ಮ ಲೇಖನದಲ್ಲಿ ಹಿಂದೂ ವಿವಾಹ ಕಾಯ್ದೆ ಮತ್ತು ಡಾ. ಎಸ್ ರಾಧಾಕ್ರಷ್ಣನ್ ಅವರ ಉಲ್ಲೇಖವನ್ನು ಲಿಂಗಾಯತರು ಹಿಂದೂಗಳೆಂದು ಸಾಧಿಸಲು ದುರುಪಯೋಗಪಡಿಸಿಕೊಂಡಿದ್ದಾರೆ. ಆದರೆ ನಿವ್ರತ್ತ ಐಎಎಸ್ ಅಧಿಕಾರಿ ಡಾ. ಶಿವಾನಂದ ಜಾಮದಾರರ ಪ್ರಕಾರ ಹಿಂದೂ ವಿವಾಹ ಕಾಯ್ದೆ ಮತ್ತು ಇತರ ಮೂರು ಹಿಂದೂ ಕೌಟುಂಬಿಕ ಕಾನೂನುಗಳಲ್ಲಿ 'ಹಿಂದೂ' ಶಬ್ಧದ ವ್ಯಾಖ್ಯಾನವಿದೆ. ಅದರಲ್ಲಿ ಲಿಂಗಾಯತˌಬೌದ್ಧˌಜೈನˌಸಿಖ್ ಧರ್ಮಗಳನ್ನು ವಿಶೇಷವಾಗಿ ಹೆಸರಿಸಿ ಹಿಂದೂ ಧರ್ಮದ ವ್ಯಾಖ್ಯಾನದಲ್ಲಿ ಸೇರಿಸಲಾಗಿದೆ ಮತ್ತು ಈ ನಾಲ್ಕೂ ಧರ್ಮಗಳು ಪ್ರತ್ಯೇಕ ಧರ್ಮಗಳೆಂದು ಆಗಿನ ಕಾನೂನು ತಜ್ಞರು ತಿಳಿದದ್ದು ಸ್ಪಷ್ಟವಾಗುತ್ತದೆನ್ನುತ್ತಾರೆ. ಡಾ. ರಾಧಾಕ್ರಷ್ಣನ್ ಅವರು ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಕ ಮತ್ತು ಈ ನಾಲ್ಕೂ ಧರ್ಮಗಳು ಹಿಂದೂ ಧರ್ಮದ ಪಂಥಗಳೆಂದು ಹಿಂದೂ ಜೀವನ ಪದ್ಧತಿಗೆ ಅನ್ವಿಯಿಸಿ ಹೇಳುತ್ತಾರೆಯೇ ಹೊರತು ಧರ್ಮದ ವಿಶ್ಲೇಷಣೆಯಿಂದಲ್ಲ ಅನ್ನುತ್ತಾರೆ ಡಾ. ಜಾಮದಾರ. ಮುಂದುವರೆದು ಅವರು ಡಾ. ಚಿಮೂ ಅವರ ದ್ವಂದ್ವವನ್ನು ಈ ರೀತಿಯಾಗಿ ಮಾರ್ಮಿಕವಾಗಿ ವಿಡಂಬಿಸುತ್ತಾರೆ : "ಸಿದ್ಧಾಂತ ಶಿಖಾಮಣಿಯು 14ನೇ ಶತಮಾನದ ಕ್ರತಿಯೆಂದು ಆಗ ಮೂರ್ತಿಯವರೇ ಸಂಶೋಧನಾತ್ಮಕವಾಗಿ ಬರೆದುˌಈಗ ಅದು ತಪ್ಪೆಂದು ವಾದಿಸುವುದು ಅವರ ಬುದ್ಧಿವಂತಿಕೆಯ ಲಕ್ಷಣ." *2

ಲಿಂಗಾಯತವು ಸ್ವತಂತ್ರಪೂರ್ವದಲ್ಲಿ ಆಂಗ್ಲ ಸರಕಾರದ ಜನಗಣತಿ ಮತ್ತು ರಾಜ್ಯಪತ್ರ (ಗೆಜೆಟ್ )ದಲ್ಲಿ ನಮೂದಾಗಿರುವುದು ಮಹಾರಾಷ್ಟ್ರದ ಉಸ್ಮಾನಾಬಾದ ಜಿಲ್ಲೆಯ ಉಮರಗಿ ತಾಲೂಕಿನ ಮುರುಮ್ ಗ್ರಾಮದ ಬಸವಾನುಯಾಯಿ ಶ್ರೀ ರಾಮಲಿಂಗ ಕಾಶಿನಾಥ ಪುರಾಣೆಯವರು ಕೇಂದ್ರ ಸರಕಾರದ ಗ್ರಹ ಇಲಾಖೆಯಿಂದ ಮಾಹಿತಿ ಹಕ್ಕುಗಳಡಿಯಲ್ಲಿ ಪಡೆದ ದಾಖಲೆಯೂ ಸ್ಪಷ್ಟವಾಗಿ 1891 ಮತ್ತು 1911ರ ಜನಗಣತಿಯು ಸ್ವತಂತ್ರ ಧರ್ಮವೆಂದು ಸಾರಿಹೇಳುತ್ತದೆ. ಇಷ್ಟೆಲ್ಲದರ ನಡುವೆ ಆರಾಧ್ಯರುˌಹಿರೇಮಠ ಮುಂತಾದ ಹೆಸರಿನಡಿಯಲ್ಲಿ ಗುರುತಿಸಿಕೊಳ್ಳುವ ಅಯ್ಯನವರು ಕಾಲಾನುಕ್ರಮದಲ್ಲಿ ಹಾನಗಲ್ ಕುಮಾರಸ್ವಾಮಿಗಳ ಮೂಲಕ ಲಿಂಗಾಯತಕ್ಕೆ ವೀರಶೈವವೆಂಬ ಪರ್ಯಾಯ ಪದಬಳಕೆ ಆರಂಭಿಸಿˌಮಠಗಳಲ್ಲಿ ಸಂಸ್ಕ್ರತಾಧ್ಯಯನ ಹಾಗೂ ವೈದಿಕ ಆಚರಣೆಗಳನ್ನು ವಿಸ್ತರಿಸುತ್ತಾ ಲಿಂಗಾಯತವನ್ನು ಕುಲಗೆಡಿಸುವ ಕಾರ್ಯಮಾಡಿದ್ದು ಸರ್ವವಿಧಿತ. ಡಾ. ಮೂರ್ತಿಯವರು ಇದೇ ಜಂಗಮ ಗುಂಪಿಗೆ ಸೇರೀದವರಾಗಿದ್ದು ಕರ್ಮಠ ವೀರಶೈವದ ಪರವಹಿಸಿ ಪ್ರಗತಿಪರ ಲಿಂಗಾಯತದ ವಿರುದ್ಧ ಹಲ್ಲುಮಸೆಯುವುದು ಸಹಜ ನಡವಳಿಕೆ ಎಂದೇ ಭಾವಿಸಬೇಕಾಗಿದೆ.

ಕೊನೆಯದಾಗಿ ಡಾ. ಮೂರ್ತಿಯವರಿಗೆ ವೀರಶೈವ ಆಚಾರ್ಯರು ಮತ್ತು ಬಸವ ಪ್ರಣೀತ ಶರಣ ಧರ್ಮಗಳ ನಡುವನ ಮೂಲಭೂತ ವ್ಯತ್ಯಾಸಗಳನ್ನು ಈ ಕೆಳಗಿನ ಅಂಶಗಳ ಮೂಲಕ ಹೇಳಲಿಚ್ಛಿಸುತ್ತೆನೆ :

1. ಆಚಾರ್ಯ ಸಂಸ್ಕ್ರತಿಗೆ ಮೌಢ್ಯˌಅಜ್ಞಾನ ಮತ್ತು ಕಾಲ್ಪನಿಕ ಪುರಾಣಗಳೂ ತಳಹದಿ....
ಶರಣ ಸಂಸ್ಕ್ರತಿಗೆ ವೈಚಾರಿಕತೆˌವಿಜ್ಞಾನ ಮತ್ತು ಇತಿಹಾಸವೇ ತಳಹದಿ....
2. ಆಚಾರ್ಯ ಸಂಸ್ಕ್ರತಿ ಕರ್ಮವನ್ನು ನಂಬುತ್ತದೆ....
ಶರಣ ಸಂಸ್ಕ್ರತಿ ಕಾಯಕವನ್ನು ಪುರಸ್ಕರಿಸುತ್ತದೆ.....
3. ಆಚಾರ್ಯ ಸಂಸ್ಕ್ರತಿ ಅಸಮಾನತೆˌತಾರತಮ್ಯ ಸ್ವೀಕರಿಸುತ್ತದೆ.....
ಶರಣ ಸಂಸ್ಕ್ರತಿ ಸಮಾನತೆ ಸಹೋದರತೆಯನ್ನು ಪುರಸ್ಕರಿಸುತ್ತದೆ.....
4. ಆಚಾರ್ಯ ಸಂಸ್ಕ್ರತಿ ಮುಗ್ಧ ಮಾನವರ ಹೆಗಲೇರಿದ ಪಲ್ಲಕ್ಕಿಯಲ್ಲಿ ಕುಳಿತು ಆಕಾಶದಲ್ಲಿ ಅಟ್ಟಹಾಸಗೈಯುತ್ತದೆ....
ಶರಣ ಸಂಸ್ಕ್ರತಿ ನೆಲದ ಮೇಲೆ ನಿಂತು ಎಲ್ಲರೊರಡೆ ವಿನಮ್ರವಾಗಿ ವ್ಯವಹರಿಸುತ್ತದೆ....
5. ಆಚಾರ್ಯ ಸಂಸ್ಕ್ರತಿ ವೈದಿಕರ ವರ್ಣಾಶ್ರಮ ಪದ್ಧತಿಯನ್ನು ಒಪ್ಪುತ್ತದೆ....
ಶರಣ ಸಂಸ್ಕ್ರತಿ ಅದನ್ನು ನಿರಾಕರಿಸುತ್ತದೆ.....
6. ಆಚಾರ್ಯ ಸಂಸ್ಕ್ರತಿ ವೈದಿಕರ ವೇದಾಗಮಗಳನ್ನು ಒಪ್ಪುತ್ತದೆ.....
ಶರಣ ಸಂಸ್ಕ್ರತಿ ಅವುಗಳನ್ನು ತಿರಸ್ಕರಿಸುತ್ತದೆ......
7. ಆಚಾರ್ಯ ಸಂಸ್ಕ್ರತಿ ಗುರುತನದ ಅಹಂನ್ನು ಸಾರುತ್ತದೆ....
ಶರಣ ಸಂಸ್ಕ್ರತಿ ಶರಣ ತತ್ವದ ಹಿರಿಮೆಯನ್ನು ಬೀರುತ್ತದೆ....
8. ಆಚಾರ್ಯ ಸಂಸ್ಕ್ರತಿ ಮಾಲಿಕತ್ವˌಶೋಷನೆಯನ್ನು ಬೆಂಬಲಿಸುತ್ತದೆ...
ಶರಣ ಸಂಸ್ಕ್ರತಿ ಶ್ರಮ ಮತ್ತು ದುಡಿಮೆಯನ್ನು ಉತ್ತೇಜಿಸುತ್ತದೆ....
9. ಆಚಾರ್ಯ ಸಂಸ್ಕ್ರತಿ ಬಹುದೇವೊಪಾಸನೆ ಪ್ರತಿನಿಧಿಸುತ್ತದೆ....
ಶರಣ ಸಂಸ್ಕ್ರತಿ ಏಕದೇವೋಪಾಸನೆಯನ್ನು ಸಾರುತ್ತದೆ....
10. ಆಚಾರ್ಯ ಸಂಸ್ಕ್ರತಿ ಕರ್ನಾಟಕ ಸೇರಿದಂತೆ ಎಲ್ಲಿಯೂ ಬೇರೆಯವರನ್ನು ಆಕರ್ಶಿಸಿಲ್ಲ.....
ಶರಣ ಸಂಸ್ಕ್ರತಿ ವಿಶ್ವದಾದ್ಯಂತ ತನ್ನ ಉದಾತ್ ವಿಚಾರಗಳಿಂದ ಜನರನ್ನು ಆಕರ್ಶಿಸಿದೆ....
11. ಆಚಾರ್ಯ ಸಂಸ್ಕ್ರತಿ ಸಮಾಜಕ್ಕೆ ಏನನ್ನೂ ನೀಡಲಿಲ್ಲ....
ಶರಣ ಸಂಸ್ಕ್ರತಿಯ ಸಂಸ್ಥೆಗಳ ಸಾಮಾಜಿಕ ಕಾರ್ಯಗಳು ಅನನ್ಯ.....
12. ಆಚಾರ್ಯ ಸಂಸ್ಕ್ರತಿ ಜನರನ್ನು ವಿಭಜಿಸುತ್ತದೆ....
ಶರಣ ಸಂಸ್ಕ್ರತಿ ಜನರನ್ನು ಬೆಸೆಯುತ್ತದೆ....
13. ಆಚಾರ್ಯ ಸಂಸ್ಕ್ರತಿ ಹೋಮ-ಹವನಗಳನ್ನು ಆಚರಿಸುತ್ತದೆˌಮಡಿ-ಮೈಲಿಗೆಗಳನ್ನು ಪಾಲಿಸುತ್ತದೆ....
ಶರಣ ಸಂಸ್ಕ್ರತಿಗೆ ಮಡಿ-ಮೈಲಿಗೆˌಹೋಮ-ಹವನಗಳ ಹಂಗಿಲ್ಲ.....
14. ಆಚಾರ್ಯ ಸಂಸ್ಕ್ರತಿ ಸಂಸ್ಕ್ರತ ಮೂಲದ ಶಿವಾಗಮ ಆಧಾರಿತ ಸಿದ್ಧಾಂತ ಶಿಖಾಮಣಿ ಬಿಟ್ಟು ಸ್ಥಳೀಯ ಭಾಷೆಯಲ್ಲಿ ಯಾವುದೇ ಗ್ರಂಥಾಧಾರಗಳನ್ನು ಹೊಂದಿಲ್ಲ....
ಶರಣ ಸಂಸ್ಕ್ರತಿಗೆ ಭವ್ಯವಾದ ವಚನ ಸಾಹಿತ್ಯದ ಹಿನ್ನೆಲೆಯಿದೆ....
15. ಆಚಾರ್ಯ ಸಂಸ್ಕ್ರತಿ ತೆಲಗು ಮೂಲದ ಲಿಂಗಿ ಬ್ರಾಹ್ಮಣ ಹಿನ್ನೆಲೆಯುಳ್ಳದ್ದು...
ಶರಣ ಸಂಸ್ಕ್ರತಿ ಕನ್ನಡ ಮಣ್ಣಿನ ಶ್ರಮ ಸಂಸ್ಕ್ರತಿಯ ವಾರಸುದಾರರ ಹಿನ್ಮೆಲೆಯುಳ್ಳದ್ದು....

ಒಟ್ಟಾರೆ ಆಚಾರ್ಯ ಸಂಸ್ಕ್ರತಿಯವರು ವೀರಶೈವರೇ ಹೊರತು ಲಿಂಗಾಯತರಲ್ಲˌಶರಣ ಸಂಸ್ಕ್ರತಿಯವರು ಅಪ್ಪಟ ಲಿಂಗಾಯತರೇ ಹೊರತು ವೀರಶೈವರಲ್ಲ.

*
Previous ಲಿಂಗಾಯತ ಸ್ವತಂತ್ರ ಧರ್ಮ ಅಸ್ಮಿತೆಗಳ ಹುಡುಕಾಟ; ರಾಜಕೀಯ ಲೆಕ್ಕಾಚಾರ: ‘ಸ್ವತಂತ್ರ ಲಿಂಗಾಯತ ಧರ್ಮ’ ಯಾಕೆ ಬೇಕು? Next