Previous ಭೃತ್ಯಾಚಾರ ಕಾಯಕ ಮತ್ತು ದಾಸೋಹ Next

ಗಣಾಚಾರ

*

ಶರಣಸಮಾಜದ ಕ್ಷೇಮದ ಬಗೆಗೆ ಕಾಳಜಿ ತೋರಿಸುವುದೇ ಗಣಾಚಾರ

ಗಣವೆಂದರೆ ಶರಣರ ಗುಂಪು. ಶರಣಸಮಾಜದ ಕ್ಷೇಮದ ಬಗೆಗೆ ಕಾಳಜಿ ತೋರಿಸುವುದೇ ಗಣಾಚಾರ, ಶಿವನ, ಶಿವಭಕ್ತರ, ಶಿವಧರ್ಮದ ಆಚಾರಗಳ, ಶಿವಧರ್ಮದ ಸಿದ್ಧಾಂತಗಳ ಅವಹೇಳನ ಮಾಡುವವರನ್ನು ಕೊಲ್ಲಬೇಕು; ಅದೂ ಸಾಧ್ಯವಾಗದಿದ್ದರೆ ಆ ಅವಹೇಳನ ಕೇಳುವುದರ ಬದಲು ಆತ್ಮಹತ್ಯೆ ಮಾಡಿಕೊಳ್ಳಬೇಕು. ಅಥವಾ ಅವಹೇಳನ ಮಾಡುವವರು ಇರುವ ಸ್ಥಳದಲ್ಲಿ ನಿಲ್ಲದೆ, ಶಿವಭಕ್ತರು ಗಣಸಮೇತ ಮತ್ತೊಂದು ಕಡೆಗೆ ಹೋಗಬೇಕು.

ಇವೆಲ್ಲವನ್ನೂ ಚೆನ್ನಬಸವಣ್ಣ ಸಂಕ್ಷಿಪ್ತವಾಗಿ ಒಂದೇ ವಚನದಲ್ಲಿ ಹೇಳಿದ್ದಾನೆ.

ಲಿಂಗಾಚಾರ ಸದಾಚಾರ ಶಿವಾಚಾರ ಗಣಾಚಾರ ಭೃತ್ಯಾಚಾರವೆಂಬ
ಪಂಚಾಚಾರದ ಆಚರಣೆಯೆಂತೆಂದಡೆ:
ಲಿಂಗವಲ್ಲದೆ ಅನ್ಯವನರಿಯದಿಹುದೆ ಲಿಂಗಾಚಾರ.
ಸಜ್ಜನ ಕಾಯಕದಲ್ಲಿ ತಂದು ಗುರು-ಲಿಂಗ-ಜಂಗಮಕ್ಕೆ ನೀಡಿ
ಸತ್ಯಶುದ್ಧನಾಗಿಹುದೆ ಸದಾಚಾರ,
ಶಿವಭಕ್ತರಲ್ಲಿ ಕುಲ ಗೋತ್ರ ಜಾತಿ ವರ್ಣಾಶ್ರಮವನರಸದೆ
ಅವರೊಕ್ಕುದ ಕೊಂಬುದೆ ಶಿವಾಚಾರ.
ಶಿವಾಚಾರದ ನಿಂದೆಯ ಕೇಳದಿಹುದೆ ಗಣಾಚಾರ.
ಶಿವಶರಣರ ಹಿರಿಯರಾಗಿ ತಾನೆ ಕಿರಿಯನಾಗಿ
ಭಯಭಕ್ತಿಯಿಂದ ಆಚರಿಸುವುದೆ ಭೃತ್ಯಾಚಾರ
ಇಂತೀ ಪಂಚಾಚಾರವುಳ್ಳ ಪರಮಸದ್ದಕ್ತರ ಒಕ್ಕುದನಿಕ್ಕಿ ಸಲಹಯ್ಯಾ
ಪ್ರಭುವೆ, ಕೂಡಲಚೆನ್ನಸಂಗಮದೇವಾ. (೩: ೧೫೪೪)

ಜೋಳವಾಳಿಯಾನಲ್ಲ, ವೇಳೆ ವಾಳಿಯವ ನಾನಯ್ಯ
ಹಾಳುಗೆಟ್ಟೋಡುವ ಆಳು ನಾನಲ್ಲಯ್ಯಾ ;
ಕೇಳು ಕೂಡಲ ಸಂಗಮದೇವಾ, ಮರಣವೇ ಮಹಾನವಮಿ.
--ಬಸವಣ್ಣನವರು

ಜೋಳಕ್ಕಾಗಿ ಕೂಲಿಯಾಳಾದವ ನಾನಲ್ಲ ; ಸಮಯಕ್ಕೆ ಒದಗಲೆಂದು ಆಳಾದ ನಿಷ್ಠಾವಂತ ನಾನು. ಪ್ರಸಂಗ ಬಂದಾಗ ಎದೆಗುಂದಿ ಓಡುವವ ನಾನಲ್ಲ. ಪರಮಾತ್ಮಾ, ಮರಣವು ಒಂದು ಮಹಾ ಉತ್ಸವ ಎಂದು ಉತ್ಸಾಹದಿಂದ ಅದನ್ನು ಇದಿರ್ಗೊಳ್ಳುವವನು ನಾನು.

ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ
ನಡೆಯೊಳಗೆ ನುಡಿಯ ಪೂರೈಸುವೆ
ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ
ಒಂದು ಜವೆ ಕೊರತೆಯಾದರೆ
ಎನ್ನನದ್ದಿ ನಿನೆದ್ದು ಹೋಗು, ಕೂಡಲ ಸಂಗಮದೇವಾ.
--ಬಸವಣ್ಣನವರು

ನಿಷ್ಠೆ, ಶರಣಾಗತಿ, ಪ್ರಾಮಾಣಿಕತೆ ಮುಂತಾದ ಮಾತುಗಳನ್ನು ಆಡುತ್ತೇನೆ ಆಡಿದಂತೆ ನಡೆಯುತ್ತೇನೆ. ನನ್ನ ನಿಷ್ಠೆಯನ್ನು ಪರೀಕ್ಷಿಸಲು ತೂಗುವ ತಕ್ಕಡಿಯ ಹಿಡಿ ನಿನ್ನ ಕೈಲಿದೆ. ನಡೆ-ನುಡಿ ಎಂಬ ಎರಡು ಪರಡಿಗಳು ಸಮವಾಗಿದರೆ ಒಂದು ಜವೆಯಷ್ಟು ಕೊರತೆಯಾದರು ಪರಮಾತ್ಮಾ, ನನ್ನನ್ನು ನಿರ್ದಾಕ್ಷಿಣ್ಯವಾಗಿ ಕುಕ್ಕಿ(ನನ್ನನ್ನು ಶಿಕ್ಷಿಸಿ) ನೀನು ಹೊರಟುಹೋಗು.

ಜಂಬೂದ್ವೀಪ ನವಖಂಡ ಪೃಥ್ವಿಯೊಳಗೆ
ಕೇಳಿರಯ್ಯಾ. ಎರಡಾಳಿನ ಭಾಷೆಯ
ಕೊಲುವೆನೆಂಬ ಭಾಷೆ ದೇವನದಾದರೆ
ಗೆಲುವೆನೆಂಬ ಭಾಷೆ ಭಕ್ತನದು !
ಸತ್ಯವೆಂಬ ಕೂರಲಗನೆ ತಳೆದುಕೊಂಡು
ಸದ್ಭಕ್ತರು ಗೆದ್ದರು ಕಾಣಾ, ಕೂಡಲಸಂಗಮದೇವಾ.
--ಬಸವಣ್ಣನವರು

ಜಂಬೂದ್ವೀಪ ಸಹಿತವಾಗಿ ನವಖಂಡದ ಪೃಥ್ವಿಯ ಜನರಲ್ಲ ಗಮನವಿಟ್ಟು ಕೇಳಿರಿ. ಇಬ್ಬರ ಮಧ್ಯದ ಹೋರಾಟವನ್ನು ಭಕ್ತನನ್ನು ಕೊಲ್ಲುವೆ, ಹುಮ್ಮೆಟ್ಟಿಸುವೆ ಎಂಬ ಛಲ ಭಕ್ತನದು. ಅಂತಿಮವಾಗಿ ಗೆಲ್ಲುವರಾರು ಗೊತ್ತೆ? ಸದ್ಭಕ್ತರೆ! ಏಕೆಂದರೆ ಪರಮಾತ್ಮನು ನಿರಾಯುಧನು! ಭಕ್ತನ ಕೈಯಲ್ಲೊ ಸತ್ಯ ಎಂಬ ಕೂರಲಗು ಇದೆ.

ಅಡಿಗಡಿಗೆ ದೇವರಾಣೆ, ಅಡಿಗಡಿಗೆ ಭಕ್ತರಾಣೆ
ಅಡಿಗಡಿಗೆ ಗುರುವಿನಾಣೆ, ಎಂಬ ವಚನವೆ ಹೊಲ್ಲ!
ಅವರು ಶಿವಫಥಕ್ಕೆ ಸಲ್ಲರು
ಆದಿಯಿಂದ ಬಂದ ವಚನವೆಂದು ಶರಣರ ಕೂಡೆ ಸರಸವಾಡಿದರೆ
ನಗುತಲಿರಿದುಕೊಂಡರೆ ಅಲಗು ನೆಡದಿಹುದೆ ಕೂಡಲ ಸಂಗಮದೇವಾ.
--ಬಸವಣ್ಣನವರು

ಕೆಲವರು ಮೋಜಿಗಾಗಿ ಆಣೆ ಇಡುವರು. ದೇವರಾಣೆಯಾಗೂ ನಾನು ಎತ್ತಿಟ್ಟಿಲ್ಲ, ಭಕ್ತರಾಣೆ, ಗುರುವಿನಾಣೆಯಾಗೂ ನನಗೆ ಗೊತ್ತಿಲ್ಲ ಎಂದು ಶರಣರೊಡನೆ, ಹಿರಿಯರೊಡನೆ ಹುಡುಗಾಟ ಮಾಡುವರು. ಇಂಥವರು ಶಿವಪಥಕ್ಕೆ ಯೋಗ್ಯರಲ್ಲ. ನಗುನಗುತ್ತ ಇರಿದುಕೊಂಡರೂ ಹೇಗೆ ಕತ್ತಿಯು ನೆಡುವುದೋ ಹಾಗೆ ನಗುನಗುತ್ತಾ ದೇವರಾಣೆ ಇಟ್ಟು ಹೇಳಿದರೂ ಪಾಪ ಬರುವುದು.

[1] ಸಮಗ್ರ ವಚನ ಸಾಹಿತ್ಯ ಸಂಪುಟ - ೧, ವಚನ ಸಂಖ್ಯೆ: ೫೧೦, ಸಂಪುಟ ಸಂಪಾದಕರು: ಡಾ|| ಎಂ.ಎಂ. ಕಲಬುರ್ಗಿ, ಪ್ರಕಾಶಕರರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು.
(ಸೂಚನೆ: ವಚನಗಳ ಕೊನೆಯಲ್ಲಿ ಬರುವ ಸಂಖ್ಯೆ ಕನ್ನಡ ಪ್ರಾಧಿಕಾರ, ಬೆಂಗಳೂರು, ೨೦೦೧ರಲ್ಲಿ ಪ್ರಕಟಿಸಿದ ಸಮಗ್ರ ವಚನ ಸಂಪುಟದಲ್ಲಿರುವ ಸಂಖ್ಯೆಗೆ ಅನುಗುಣವಾಗಿವೆ [ಸಂಪುಟ ಸಂಖ್ಯೆ: ವಚನ ಸಂಖ್ಯೆ])
ಪರಿವಿಡಿ (index)
*
Previous ಭೃತ್ಯಾಚಾರ ಕಾಯಕ ಮತ್ತು ದಾಸೋಹ Next