ಇತಿಹಾಸದಲ್ಲಿ ಲಿಂಗದ ಕಲ್ಪನೆ

✍ ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು
ಮತ್ತು, ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿ

*

ಇತಿಹಾಸದಲ್ಲಿ ಲಿಂಗದ ಕಲ್ಪನೆ

ಪೌರಾಣಿಕ ದೃಷ್ಟಿಯಿಂದ ಲಿಂಗದ ಕಲ್ಪನೆ ಮತ್ತು ಲಿಂಗಪೂಜೆಯು ಸೃಷ್ಟಿಯ ಪ್ರಾರಂಭದಿಂದಲೇ ಇದ್ದಿತೆಂದು ಹೇಳಬಹುದಾಗಿದೆ. ಬ್ರಹ್ಮ ವಿಷ್ಣು ಉಭಯತರು ತಮ್ಮ ತಮ್ಮಲ್ಲಿ ನಾ ಹೆಚ್ಚು ತಾ ಹೆಚ್ಚು ಎಂದು ವಾದ ರಂಗಕ್ಕಿಳಿದಾಗ ಜ್ಯೋತಿರ್ಲಿಂಗವು ಉದ್ಭವಿಸಿತೆಂದೂ ಮತ್ತು ಅದರ ಪಾದ ಮಸ್ತಕಗಳನ್ನು ಕಂಡುಹಿಡಿಯಲು ಹರಿಹ್ಮರಿಗೂ ಸಾಧ್ಯವಾಗಲಿಲ್ಲವೆಂದೂ ಪುರಾಣಗಳು ಪ್ರತಿಪಾದಿಸುತ್ತವೆ. ಅಲ್ಲದೆ ದೇವ-ದಾನವ ಮಾನವರುಗಳು ಎಂದಿನಿಂದಲೂ ಈ ಜ್ಯೋತಿರ್ಲಿಂಗಗಳನ್ನು ಅರ್ಚಿಸುತ್ತ ಬಂದಿದ್ದಾರೆಂದೂ ಐತಿಹ್ಯವಿದೆ. ಈ ಕಲ್ಪನೆಯನ್ನು ಪುಷ್ಟಿಕರಿಸುವ ಶಿವಪುರಾಣದ ಒಂದು ಪ್ರತಿಪಾದನೆಯನ್ನು ನಾವು ನೋಡಬಹುದು. ಅದರಲ್ಲಿ ಬ್ರಹ್ಮನು ನಾರದನಿಗೆ ಜ್ಯೋತಿರ್ಲಿಂಗದ ಹುಟ್ಟಿನ ಬಗ್ಗೆ ಹೇಳಿದ ಸಂಗತಿ ಇಂತಿದೆ;

"ಮಹಾಪ್ರಳಯದ ನಂತರ ಒಂದು ದಿವ್ಯತೇಜವು ಪ್ರಕಟವಾಯಿತು. ಆ ತೇಜದಿಂದ ಪ್ರಕೃತಿಯೆಂಬ ಇಚ್ಛಾಶಕ್ತಿಯುಂಟಾಯಿತು. ಆಮೇಲೆ ನನ್ನ [ಬ್ರಹ್ಮನು] ಹಾಗೂ ವಿಷ್ಣುವಿನ ಮಧ್ಯದಲ್ಲಿ ಆಶ್ಚರ್ಯಕರ ಜ್ಯೋತಿರ್ಲಿಂಗವು ಉದಯಿಸಿತು. ಅದಕ್ಕೆ ಆದಿ ಮಧ್ಯ ಅಂತ್ಯಗಳೇ ಇರಲಿಲ್ಲ. ಅದನ್ನು ವರ್ಣಿಸಲು ಸಾಧ್ಯವಿಲ್ಲ."

ಹೀಗೆ ಪ್ರಾಗೈತಿಹಾಸಿಕ ಕಾಲದಲ್ಲಿ ಲಿಂಗಪೂಜೆ ಪ್ರಚಲಿತವಿದ್ದಂತೆ ಐತಿಹಾಸಿಕ ದೃಷ್ಟಿಯಿಂದ ನಾವು ಅವಲೋಕಿಸಿದರೂ ಸಹ ಲಿಂಗಪೂಜೆಯು ಬಹು ಪುರಾತನವಾದುದು. ಇದು ಅತಿ ಪುರಾತನ ಸಂಸ್ಕೃತಿಯೆಂದು ಇಂದು ಸಾಮಾನ್ಯವಾಗಿ ಎಲ್ಲ ಪಂಡಿತರೂ ಒಪ್ಪಿರುವರು. ಹರಪ್ಪಾ ಮೊಹೆಂಜೋದಾರೋ ಸಂಸ್ಕೃತಿಯಲ್ಲಿ ಲಿಂಗ ಪೂಜೆ ಇತ್ತೆಂದು ಅದರ ಅವಶೇಷಗಳನ್ನು ಅಗೆದು ತೆಗೆದ ಸಂಶೋಧಕರು ಹೇಳುತ್ತಾರೆ. ಹರಪ್ಪಾ ಸಂಸ್ಕೃತಿಯ ಕಾಲವನ್ನು ಖಚಿತವಾಗಿ ಹೇಳಲಿಕ್ಕೆ ಬಾರದಿದ್ದರೂ ಅದು ಕ್ರಿ. ಪೂ. ನಾಲೈದು ಸಾವಿರ ವರುಷಗಳ ಹಿಂದಿನ ಸಂಸ್ಕೃತಿಯೆಂದು ಬಹಳಷ್ಟು ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಲಿಂಗಸಂಸ್ಕೃತಿಯು ಶೈವ ಸಂಸ್ಕೃತಿಯೆಂದೂ, ಅದು ದ್ರಾವಿಡ ಸಂಸ್ಕೃತಿಯೆಂದೂ, ದ್ರಾವಿಡ ಸಂಸ್ಕೃತಿಯು ಆರ್ಯರು ಭಾರತಕ್ಕೆ ಬರುವ ಪೂರ್ವದಲ್ಲಿ ಇದ್ದ ಶ್ರೇಷ್ಠವಾದ ನಾಗರಿಕ ಸಂಸ್ಕೃತಿಯಾಗಿತ್ತೆಂದೂ ಫಾದರ್ ಹೆರಾಸರಂಥ ಸಂಶೋಧಕ ಪಂಡಿತರು ನಿಸ್ಸಂಶಯವಾಗಿ ಹೇಳಿದ್ದಾರೆ. ನಿಸರ್ಗದ ಪೂಜಕರಾದ ಆರ್ಯರು ದ್ರಾವಿಡರಿಂದ ಗುಡಿಗುಂಡಾರದಲ್ಲಿಟ್ಟು ದೇವರನ್ನು ಪೂಜಿಸುವ ಆಚರಣಿಯನ್ನು ಕಲಿತರೆಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

"ಲಿಂಗಪೂಜೆಯು ಕೇವಲ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದ ಅನೇಕ ಭಾಗಗಳಲ್ಲಿ ಒಂದಾನೊಂದು ಕಾಲದಲ್ಲಿ ಬಳಕೆಯಲ್ಲಿದ್ದಿರಬಹುದೆಂದು ನಂಬಲರ್ಹವಾದ ದಾಖಲೆಗಳು ಇಂದಿಗೂ ಕಾಣಸಿಗುತ್ತವೆ' ಎಂದು ಖಚಿತವಾಗಿ ಹೇಳುವ ಕಾಶಿಯ ಶ್ರೀ ಬಾಬು ಶಿವಪ್ರಸಾದರು "ಪೃಥ್ವಿ ಪ್ರದಕ್ಷಿಣಿ" ಎಂಬ ತಮ್ಮ ಗ್ರಂಥದಲ್ಲಿ ಲಿಂಗಪೂಜೆಯ ವ್ಯಾಪಕತೆಯ ದಾಖಲೆಯನ್ನು ಹೀಗೆ ಕೊಡುತ್ತಾರೆ :

ಮಿಸ್ರ (ಮಿಸರ) ದೇಶದಲ್ಲಿ "ಅಸಿರಿಸ್" ಮತ್ತು "ಆಯಿಸಿಸ್" ಎಂಬ ಲಿಂಗಗಳೂ, ಗ್ರೀಸ್ ದೇಶದಲ್ಲಿ ಬೇಸಕ್" ಮತ್ತು ಪಿಯಸಸ್ ಎಂಬ ಲಿಂಗಗಳು ಇವೆ. ಸ್ಮಾಟಲಂಡದ ಗ್ಲಾಸಗೋ ಪಟ್ಟಣದಲ್ಲಿ ಸುವರ್ಣ ವಿಶಿಷ್ಟ ಲಿಂಗವೂ, ಆಸ್ಟ್ರಿಯಾ ಹಂಗೇರಿಯಲ್ಲಿ “ತಂತಿಸ್ವಕ" ಎಂಬ ಲಿಂಗವೂ ಅಸೀರಿಯಾ ದೇಶದ ಬಿಲಸ ನಗರದಲ್ಲಿ ಮುನ್ನೂರು ಘನಹಸ್ತ ಪ್ರಮಾಣವುಳ್ಳ ಮಹಾಲಿಂಗವೂ, ಅರಬಸ್ತಾನದಲ್ಲಿ "ಸಂಗೆ ಅಸವಡ್" ಅಂದರೆ ಮಕ್ಕೇಶ್ವರಲಿಂಗವೂ, (ಇದಕ್ಕೆ ಮುಸಲ್ಮಾನರು ಶ್ರದ್ಧಾಪೂರ್ವಕಚುಂಬನ ಕೊಡುತ್ತಾರೆ.) ಇರಾಣದಲ್ಲಿ ಜ್ವಾಲಾಮಯ ಲಿಂಗವೂ, ಪೆರುದೇಶದಲ್ಲಿ "ಪಾರ್ಥಿವೇಶ್ವರ ಲಿಂಗವೂ, ಅಮೇರಿಕೆಯ ಪೆಂಬುಕೋ ಪಟ್ಟಣದಲ್ಲಿ "ದ್ವಿಮುಖ" ಲಿಂಗವೂ ಅಮೇರಿಕೆಯ ಟೆ ಪಟ್ಟಣದಲ್ಲಿ ಘನಲಿಂಗವು, ಇಂದಿಗೂ ಪ್ರಮುಖ ದಾಖಲೆಗಳಾಗಿವೆ.

ಈ ಎಲ್ಲ ಕುರುಹುಗಳು ಲಿಂಗಪೂಜೆಯು ಅತಿ ಪುರಾತನವೂ ಮತ್ತು ವಿಶ್ವವ್ಯಾಪಕವೂ ಆಗಿ ಹಬ್ಬಿತ್ತೆಂಬುದನ್ನು ಖಚಿತಪಡಿಸುತ್ತವೆ. ಭಾರತ, ಬಾ, ಶ್ರೀಲಂಕಾ ದೇಶಗಳಲ್ಲಂತೂ ಸ್ಥಾವರ ಲಿಂಗೋಪಾಸನೆ ಇಂದಿಗೂ ಅಷ್ಟೇ ಜೀವಂತವಾಗಿದೆ. ಇತ್ತೀಚೆಗೆ ರಷಿಯಾ-ಚೀನಗಳಲ್ಲಿ ಲಿಂಗಗಳು ಸಿಕ್ಕಿವೆ.

ನಮ್ಮ ಕಾಲಮಾನದಲ್ಲಿ ನಾಲ್ಕು ಯುಗಗಳನ್ನು ಗುರುತಿಸಲಾಗಿದೆ. ಸತ್ಯಯುಗ ಅಥವಾ ಕೃತಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗಗಳೇ ಆ ನಾಲ್ಕು, ಕೃತಯುಗದಲ್ಲಿ ಅತ್ಯಂತ ಕೀರ್ತಿಶಾಲಿಯಾಗಿದ್ದ ಹರಿಶ್ಚಂದ್ರ ಸ್ಥಾವರಲಿಂಗ ಪೂಜಕ; ಪ್ರೇತಾಯುಗದಲ್ಲಿ ರಾಮನು ರಾಮೇಶ್ವರದಲ್ಲಿ ಲಿಂಗ ಪ್ರತಿಷ್ಠಾಪನೆ ಮಾಡಿ ಲಂಕೆಯ ಮೇಲೆ ಯುದ್ಧ ಸಾರಲು ಹೊರಡುತ್ತಾನೆ. (ಮಹಾಶಿವಭಕ್ತ ರಾವಣನನ್ನು ಕೊಂದ ಪರಿಹಾರಾರ್ಥವಾಗಿ ರಾಮನು ಸೀತೆಯಾಡಗೂಡಿ ಲಿಂಗಪ್ರತಿಷ್ಠಾಪನೆ ಮಾಡಿದ ಎಂಬ ಕಥೆಯೂ ಇದೆ.) ದ್ವಾಪರಯುಗದ ಪ್ರಮುಖ ಐತಿಹಾಸಿಕ ವ್ಯಕ್ತಿಯಾದ ಶ್ರೀಕೃಷ್ಣ, ಪಂಚಪಾಂಡವರು ಲಿಂಗಪೂಜೆ ಮಾಡಿದುದು ಸುಪ್ರಸಿದ್ದ. ಅರ್ಜುನ ತಪಸ್ಸು ಮಾಡಿ ಪಾಶುಪತಾಸ್ತ್ರವನ್ನು ಪಡೆದು ಬರುವನು. ಇನ್ನು ಕಲಿಯುಗ ಎಂದು ಕರೆಯಲ್ಪಡುವ ಈ ಕಾಲದಲ್ಲಿ ಕಾಶಿಯಿಂದ ರಾಮೇಶ್ವರದ ವರೆಗೆ ಹನ್ನೆರಡು ಜ್ಯೋತಿರ್ಲಿಂಗಗಳೂ, ಮತ್ತೆ ಊರೂರಿಗೆ ಶಿವಾಲಯಗಳು ಇದ್ದು ಎಲ್ಲೆಡೆ ಲಿಂಗಪೂಜೆ ಇರುವುದು ಸುಸ್ಪಷ್ಟ.

ಸೌರಾಷ್ಟೇ ಸೋಮನಾಥಂ ಚ | ಶ್ರೀ ಶೈಲೇ ಮಲ್ಲಿಕಾರ್ಜುನಂ
ಉಜ್ಜಯಿನ್ಯಾಂ ಮಹಾಕಾಲ | ಮೋಂಕಾರ ಮಲ್ಲೇಶ್ವರಂ ||೧||
ಪರಳ್ಯಾಂ ವೈಜನಾಥಂಚ 1 ಡಾಕಿನ್ಯಾಂ ಭೀಮಶಂಕರಂ
ಸೇತು ಬಂಧೇತು ರಾಮೇಶಂ | ನಾಗೇಶಂ ದಾರುಕಾವನೆ || ೨ ||
ವಾರಣಾಸ್ಯಂತಃ ವಿಶ್ವೇಶಂ | ತಂಬಕಂ ಗೌತಮೀತವೇ |
ಹಿಮಾಲಯೇತು ಕೇದಾರಂ | ಫೈಸಣೀಶಂ ಶಿವಾಲಯೇ ||೩||
ಏತಾನಿ ಜ್ಯೋತಿರ್ಲಿಂಗಾನಿ | ಸಾಯಂಪಾತಃ ಪಠೇನ್ನರಃ |
ಸಪ್ತಜನ್ಮ ಕೃತಂ ಪಾಪಂ | ಸ್ಮರಣೀನ ವಿನಶ್ಯತಿ ||೪||

ನಮ್ಮ ದೇಶದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳೆಂದು ಪ್ರಸಿದ್ದವಿರುವ ಈ ಹನ್ನೆರಡು ಲಿಂಗಗಳೇ ಮೊದಲು ಇದ್ದುವೆಂಬ ಪ್ರತೀತಿ ಇರುವುದರಿಂದ ಈ ಲಿಂಗಗಳಿಗೆ ಹೆಚ್ಚಿನ ಪ್ರಾಶಸ್ಯ ಅಂದಿನಿಂದ ಇಂದಿನವರೆಗೆ ದೊರೆಯುತ್ತ ಬಂದಿದೆ. ಕಾಲಾನಂತರದಲ್ಲಿ, ಅವುಗಳ ದರ್ಶನ, ಪೂಜೆಗಳು ಎಲ್ಲರಿಗೂ ಸಾಧ್ಯವಿಲ್ಲವೆಂದು ತಿಳಿದು ಅನೇಕ ತೀರ್ಥಕ್ಷೇತ್ರಗಳಲ್ಲಿ ಸ್ಥಾವರ ಲಿಂಗಗಳನ್ನು ಸ್ಥಾಪಿಸಿ, ಅವುಗಳನ್ನು ಪೂಜಿಸುತ್ತ ಬಂದಿದ್ದಾರೆ. ಶಿವಾಲಯವಿಲ್ಲದ ಊರು ಹಾಳೂರೆಂದು ಭಾವಿಸಿ, ಪ್ರತಿ ಊರಿಗೆ ಶಿವಾಲಯ ರಚಿಸಲಾಗಿದೆ. ಹೀಗೆ ಭಾರತದ ಎಲ್ಲ ಗ್ರಾಮಗಳಲ್ಲಿಯೂ ಶಿವಾಲಯಗಳನ್ನು ಕಟ್ಟಿ, ಸ್ಥಾವರ ಲಿಂಗಗಳನ್ನು ಪ್ರತಿಷ್ಠಾಪಿಸಿ, ಪೂಜಿಸಿದ್ದಾರೆ, ಪೂಜಿಸುತ್ತಾರೆ ಎಂಬುದನ್ನು ನಾವು ಕಾಣುತ್ತೇವೆ. ಗ್ರಾಮದ ಶಿವಲಿಂಗವೂ ಸಹ ಗ್ರಾಮಸ್ಥರೆಲ್ಲರಿಗೂ ಪೂಜೆಗೆ ಸದಾಕಾಲವೂ ಲಭ್ಯವಾಗದ ಕಾರಣ, ಕಾಲಾನಂತರದಲ್ಲಿ ಮನೆಗಳಲ್ಲಿ ಲಿಂಗಗಳನ್ನಿಟ್ಟು ಪೂಜೆ ಮಾಡುವ ಪರಿಪಾಠ ಬಳಕೆಯಲ್ಲಿ ಬಂದಿರಬೇಕು.

ಮುಂದೆ, ಪ್ರವಾಸಕಾಲದಲ್ಲಿ ಪೂಜೆಗೆ ಅನುಕೂಲವಾಗಲೆಂದು, ಲಿಂಗ ದರ್ಶನವಿಲ್ಲದೆ ಏನನ್ನೂ ತಿನ್ನುಣ್ಣುವುದಿಲ್ಲವೆಂಬ ನೇಮಸ್ಥರ ಸಲುವಾಗಿ ಚರಲಿಂಗಗಳ ಆವಶ್ಯಕತೆ ಒದಗಿಬಂದಿದೆ. ಎತ್ತುಗಳ ಮೇಲೆ ಹಸಬಿ (ಬುಟ್ಟಿ)ಗಳಲ್ಲಿ ಇಟ್ಟು ಕೊಂಡು, ಚೀಲಗಳಲ್ಲಿಟ್ಟು ಕೊಂಡು ಸ್ಥಾವರಲಿಂಗಗಳ ಪ್ರತಿರೂಪವಾಗಿ ಚರಲಿಂಗಗಳನ್ನು (ಗುಡಿಗಳಲ್ಲಿ ಪ್ರತಿಷ್ಠಾಪಿಸಲ್ಪಟ್ಟುದನ್ನು ಸ್ಥಾವರಲಿಂಗವೆಂದು, ಅದರ ಪ್ರತಿರೂಪವಾಗಿ ಹೊತ್ತು ತಿರುಗುತ್ತಿದ್ದುದನ್ನು ಚರಲಿಂಗವೆಂದು. ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ರೂಪಿಸಿಕೊಟ್ಟ ಗೋಳಾಕಾರದ ವಸ್ತುವನ್ನು ಇಷ್ಟಲಿಂಗವೆಂದು ಬಳಸುತ್ತ ಹೋಗುವೆವು.) ಜನರು ಒಯ್ಯತೊಡಗಿರಬೇಕು. ಕೆಲವು ಜಟಾಧಾರಿಗಳು, ತಮ್ಮ ಜಟೆಯಲ್ಲಿಟ್ಟು ಕಟ್ಟಿಕೊಂಡು ಸಂಚರಿಸುತ್ತಿದ್ದರು; ಪೂಜಾಕಾಲದಲ್ಲಿ ಜಟೆ ಬಿಚ್ಚಿ : ಚರಲಿಂಗವನ್ನು ತೆಗೆದು ಹೊರಗಿಟ್ಟು ಪೂಜಿಸುತ್ತಿದ್ದರು. ಪೂಜಾನಂತರ ಪುನಃ ಜಟೆಯಲ್ಲಿಟ್ಟು ಕಟ್ಟಿಕೊಳ್ಳುತ್ತಿದ್ದರು.

ಪ್ರಭುದೇವರು ಸೊನ್ನಲಾಪುರಕ್ಕೆ ಬಂದಾಗ ಅವರೊಡನೆ ವಾದಕ್ಕೆ ಇಳಿದ ಸಿದ್ದರಾಮೇಶ್ವರರ ಜಟೆಯಲ್ಲಿ ಅಂಥ ಲಿಂಗವಿತ್ತೆಂಬುದಾಗಿ ತಿಳಿದು ಬರುತ್ತದೆ. ಕೆಲವು ದೇವಾಲಯಗಳಲ್ಲಿರುವ ವಿಗ್ರಹಗಳ ಮಸ್ತಕದ ಮೇಲೆ ಇಲ್ಲವೆ ಹಸ್ತದಲ್ಲಿ ಸ್ಥಾವರಲಿಂಗದ ಸಣ್ಣ ಪ್ರತೀಕಗಳು ಇರುವುದನ್ನು ಕಾಣಬಹುದು. ಪಂಢರಾಪುರದ ಪ್ರಸಿದ್ದ ವಿಠೋಬನ ಮಸ್ತಕದ ಮೇಲೆ ಲಿಂಗವಿರುವುದನ್ನು ಕುರಿತು ಅನೇಕರು ಹೇಳುತ್ತಾರೆ. ಈ ಸಂಗತಿಯನ್ನು ಜ್ಞಾನೇಶ್ವರ, ರಾಮದಾಸರೇ ಪ್ರತಿಪಾದಿಸಿದ್ದಾರೆ. ಬಾರ್ಸಿಯ ಭಗವಂತ, ಅನಂತಶಯನದಲ್ಲಿರುವ ಅನಂತ ಪದ್ಮನಾಭ ಎಂಬ ಈ ಪುರುಷ ವಿಗ್ರಹಗಳ ಶಿರ ಮತ್ತು ಕರಗಳಲ್ಲಿ ಲಿಂಗವಿರುವುದನ್ನು ಹೇಳಲಾಗುತ್ತಿದೆ. ತುಳಜಾಪುರದ ಭವಾನಿ, ಕೊಲ್ಲಾಪುರದ ಲಕ್ಷ್ಮೀ, ಕಂಚಿ ಕಾಮಾಕ್ಷಿ, ಕಾಶೀ ವಿಶಾಲಾಕ್ಷಿ, ಇತ್ಯಾದಿ ಹೆಣ್ಣು ದೇವತಾ ವಿಗ್ರಹಗಳ ಶಿರದ ಮೇಲೆ ಲಿಂಗಗಳಿರುವುದನ್ನು ಕಾಣಬಹುದಾಗಿದೆ. ಈ ಹೆಸರಿನ ಮೂಲ ವ್ಯಕ್ತಿಗಳು ಜೀವಿಸಿದ್ದಾಗ ಚರ ಲಿಂಗಧಾರಿಗಳಾಗಿರಬೇಕು. ಮೈಸೂರಿನಲ್ಲಿರುವ ಸುಪ್ರಸಿದ್ದ ಚಾಮುಂಡೀ ಬೆಟ್ಟದ ಮೇಲಿರುವ "ಬಯಲ ಬಸವನ ಬೃಹತ್ ಶಿಲಾ ವಿಗ್ರಹದ ಕೊರಳಲ್ಲಿ ಇಂಥದೊಂದು ಚರಲಿಂಗವಿದೆ. ಮನಗೂಳಿಯಲ್ಲಿರುವ ಪುರಾತನ ರಾಮೇಶ್ವರ ದೇವಾಲಯದಲ್ಲಿರುವ ಪಾರ್ವತಿದೇವಿ ವಿಗ್ರಹದ ಹಸ್ತದಲ್ಲಿ ಚರಲಿಂಗವಿದೆ. ಹೀಗೆ ಸ್ಥಾವರಲಿಂಗಗಳ ಆರಾಧನೆ ಪ್ರಾಗೈತಿಹಾಸಿಕ ಕಾಲದಿಂದಲೂ ಬೆಳೆದು ಬಂದು, ಐತಿಹಾಸಿಕ ಕಾಲದ ಸಾಕಷ್ಟು ದಾಖಲೆಗಳಿಂದ ದೃಢೀಕೃತವಾಗಿದೆ. ಅದೇ ಸ್ಥಾವರಲಿಂಗಗಳ ಸಣ್ಣ ಪ್ರತೀಕಗಳಾದ ಚರಲಿಂಗಗಳ ಧಾರಣಿ ಈ ವರೆಗೂ ಹೇಳಿದ ವಿಗ್ರಹಗಳಿಂದಾಗಿ ಮತ್ತು ಇಂದಿಗೂ ಅಲ್ಲಲ್ಲೇ ಪಳೆಯುಳಿಕೆಗಳಂತೆ ಇರುವ ತಮಿಳುನಾಡು-ಆಂಧ್ರಪ್ರದೇಶದ ವೀರಶೈವ ಜನಾಂಗದಿಂದಾಗಿ ದೃಢೀಕೃತವಾಗುತ್ತದೆ.

ಇಷ್ಟಲಿಂಗದ ಉಗಮ

ಗ್ರಂಥ ಋಣ:
೧) ಚುಳುಕಾದ ಚೇತನ, ಲೇಖಕರು: ಪೂಜ್ಯ ಶ್ರೀ ಲಿಂಗಾನಂದ ಸ್ವಾಮಿಗಳು ಮತ್ತು, ಪೂಜ್ಯ ಶ್ರೀ ಮಾತೆ ಮಹಾದೇವಿಯವರು,ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ಕಾರ್ಡ್ ರೋಡ್, ಎರಡನೆಯ ಬ್ಲಾಕು, ರಾಜಾಜಿನಗರ, ಬೆಂಗಳೂರು - ೫೬೦ ೦೧೦.

ಪರಿವಿಡಿ (index)
Previousಇಷ್ಟಲಿಂಗದ ಉಗಮಉಪಾಸನೆ ಬೆಳೆದು ಬಂದ ಬಗೆNext
*