ಶಿವಾಚಾರ-(ಸಾಮಾಜಿಕ ಸಮಾನತೆ)

*

ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ,
ಜಲ-ಬಿಂದುವಿನ ವ್ಯವಹಾರವೊಂದೆ
ಆಶೆಯಾಮಿಷ ರೋಷ ಹರುಷ ವಿಷಯಾದಿಗಳೆಲ್ಲ ಒಂದೇ,
ಏನನೋದಿ, ಏನಕೇಳಿ, ಏನುಫಲ ?
ಕುಲಜನೆಂಬುದಕ್ಕಾವುದು ದೃಷ್ಟ ?
ಸಪ್ತಧಾತು ಸಮಂ ಪಿಂಡಂ ಸಮಯೋನಿ ಸಮುಧ್ಬವಂ
ಆತ್ಮ ಜೀವ ಸಮಾಯಕ್ತಂ ವರ್ಣಾನಾಂ ಕಿಂ ಪ್ರಯೋಜನಂ ?
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ
ಕರ್ಣದಲ್ಲಿ ಜನಿಸಿದವರುಂಟೆ ಜಗದೋಳಗೆ ?
ಇದು ಕಾರಣ ಕೂಡಲ ಸಂಗಮದೇವಾ ಲಿಂಗಸ್ಥಲವನರಿದವನೆ ಕುಲಜನು !
--ಬಸವಣ್ಣನವರು

ಋತು ಕಾಣಿಸಿಕೊಂಡಲ್ಲದೆ, ಯಾವ ಜಾತಿಯವರೇ ಇರಲಿ, ಅಲ್ಲಿ ಪಿಂಡವು ನೆಲೆನಿಲ್ಲಲು ಅವಕಾಶವೇ ಇಲ್ಲ. ಹೀಗೆ ಸಮಸ್ತಮಾನವ ಕೋಟಿ ಹುಟ್ಟುವುದು ಹೊಲೆ (ಋತುಸ್ರಾವ) ತಡೆದಾಗಲೆ. ಎಲ್ಲರಲ್ಲಿಯೂ ಜಲ-ಬಿಂದುಗಳ ವ್ಯವಹಾರವೂ ಒಂದೇ ಬಗೆ. ಆಸೆ ಆಮಿಷ ರೋಷ ಹರುಷ ಮುಂತಾದ ಮಾನಸಿಕ ಚಟುವಟಿಕೆಗಳೂ ಒಂದೆ. ಶಾಸ್ತ್ರಗಳನ್ನು ಎಷ್ಟು ಓದಿ, ಕೇಳಿದರೂ ಏನು ಪ್ರಯೋಜನ? ಒಬ್ಬ ವ್ಯಕ್ತಿ ಶ್ರೇಷ್ಟ ಕುಲದವನು ಎನ್ನಲು ಏನು ಪುರಾವೆ? ಎಲ್ಲರ ದೇಹಗಳೂ ಸಪ್ತಧಾತುಗಳಿಂದಾಗಿವೆ. ಎಲ್ಲರೂ ಹುಟ್ಟುವುದು ಒಂದೇ ರೀತಿ. ಆತ್ಮ ಜೀವಗಳ ಬೆಸುಗೆ ಎಲ್ಲರಲ್ಲಿ ಇದೆ. ಕಾಸುವವ ಕಮ್ಮಾರ, ಬಟ್ಟೆ ತೊಳೆಯುವವ ಮಡಿವಾಳ, ನೇಯುವವ ನೇಕಾರ, ಶಾಸ್ತ್ರಜ್ಞಾನ ಪಡೆದವ ಬ್ರಾಹ್ಮಣ, ಯಾರಾದರೂ ಕಿವಿಯಲ್ಲಿ ಹುಟ್ಟುವರೇ? ಪರಮಾತ್ಮಾ, ನಿನ್ನನ್ನು ಅರತವನೇ ಕುಲ ಶ್ರೇಷ್ಠ.

ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ
ಜಲವೊಂದೆ ಶೌಚಾಚಮನಕ್ಕೆ
ಕುಲವೊಂದೆ ತನ್ನ ತಾನರಿದವಂಗೆ
ಫಲವೊಂದೆ ಷಡುದರುಶನ ಮುಕ್ತಿಗೆ
ನಿಲುವೊಂದೆ ಕೂಡಲ ಸಂಗಮದೇವಾ ನಿಮ್ಮನರಿದವಂಗೆ.
--ಬಸವಣ್ಣನವರು

ಹೊಲಗೇರಿಯನ್ನಾಗಲಿ, ಶಿವಾಲಯವನ್ನಾಗಲೀ ಕಟ್ಟುವುದು ಒಂದೇ ನೆಲದ ಮೇಲೆ, ಸ್ವಚ್ಚಮಾಡುವ ಕ್ರಿಯೆಯಾಗಲಿ ಪೂಜಾದಿ ಕ್ರಿಯೆಯಾಗಲಿ ಬಳಸುವುದು ಒಂದೇ ನಿರನ್ನೇ. ಅಲ್ಲಿ ನಡೆಯುವ ಚಟುವಟಿಕೆ, ನೀಡುವ ಸಂಸ್ಕಾರದಿಂದ ಹೋಲಗೇರಿ ಅಥವಾ ಶಿವಾಲಯ ನಿರ್ಮಾಣವಾಗುತ್ತದೆ. ಹಾಗೆಯೇ ಆತ್ಮಜ್ಞಾನ ಪಡೆದವರ ಕುಲವೆಲ್ಲ ಒಂದೆ. ಷಡುದರ್ಶನಗಳನ್ನು ಯಾರೇ ಅಳವಡಿಸಿಕೊಳ್ಳಲಿ ಅವರ ಫಲ ಒಂದೇ ಬಗೆಯದು ; ಪರಮಾತ್ಮನನ್ನು ಅರಿತವರ ನಿಲುವು ಒಂದೇ ಬಗೆಯದು.

ಹೆಣ್ಣು ಮಾಯೆಯೆಂಬರು, ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆಯೆಂಬರು, ಮಣ್ಣು ಮಾಯೆಯಲ್ಲ
ಹೊನ್ನು ಮಾಯೆಯೆಂಬರು, ಹೊನ್ನು ಮಾಯೆಯಲ್ಲ
ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರಾ.
--ಅಲ್ಲಮ ಪ್ರಭುದೇವರು

ಹೆಣ್ಣು ಮಾಯೆ, ಮಣ್ಣು ಮಾಯೆ, ಹೊನ್ನು ಮಾಯೆ ಎಂದು ಕೆಲವರು ಅವನ್ನು ದೂಷಿಸುವರು ; ಮಾಯೆಯು ಹೊರಗೆ ಎಲ್ಲಿಯೂ ಎಲ್ಲ ; ತನ್ನ ಮನದೊಳಗಣ ದೌರ್ಬಲ್ಯವೇ ಮಾಯೆ. ಅವುಗಳನ್ನು ಬಯಸುವ ತನ್ನ ಆಸೆಯೇ ಮಾಯೆಯಾಗಿ ಕಾಡುತ್ತದೆ.

ದೇವಸಹಿತ ಭಕ್ತ ಮನೆಗೆ ಬಂದರೆ
ಕಾಕವಾವುದೆಂದು ಬೆಸಗೊಂಡನಾದರೆ
ನಿಮ್ಮಾಣೆ! ನಿಮ್ಮ ಪುರಾತರಾಣೆ! ತೆಲದಂಡ! ತಲೆದಂಡ!
ಕೂಡಲ ಸಂಗಮದೇವಾ ಭಕ್ತರಲ್ಲಿ ಕುಲವನರಸಿದರೆ ಎನ್ನ ರಾಣಿವಾಸದಾಣೆ!
--ಬಸವಣ್ಣನವರು

ಪರಮಾತ್ಮನ ಕುರುಹಾದ ಇಷ್ಟಲಿಂಗವನ್ನು ಧರಿಸಿಕೊಂಡು ಯಾರಾದರೂ ಮನೆಗೆ ಬಂದರೆ, ನಿಮ್ಮ ಕಾಯಕ ಯಾವುದು ಎಂದು ಕೇಳುವುದಿಲ್ಲ. (ಕಾಯಕ ಯಾವುದೆಂದು ತಿಳಿದಾಗ ಸ್ವಾಭಾವಿಕವಾಗಿ ಕುಲ ಮತ್ತು ಅಂತಸ್ತು ತಿಳಿದು ಬರುವುವು. ಆಗ ಪಕ್ಷಪಾತದ ಭಾವವು ಹುಟ್ಟಬಹುದು. ಆದ್ದರಿಂದ ಕೇಳುವುದೇ ಇಲ್ಲ.)

ಉಂಬಲ್ಲಿ ಉಡುವಲ್ಲಿ ಕ್ರೀಯಳಿಯಿತ್ತೆಂಬರು ;
ಕೊಂಬಲ್ಲಿ ಕೊಡುವಲ್ಲಿ ಕುಲವನರಸುವರು ;
ಎಂತಯ್ಯಾ ಅವರ ಭಕ್ತರೆಂಬೆ? ಎಂತಯ್ಯಾ ಅವರು ಯಕ್ತರೆಂಬ?
ಕೂಡಲ ಸಂಗಮದೇವಾ ಕೇಳಯ್ಯಾ
ಹೊಲತಿ ಶುದ್ದನೀರು ಮಿಂದಂತಾಯಿತ್ತಯ್ಯ!
--ಬಸವಣ್ಣನವರು

ಲಿಂಗದೀಕ್ಷೆಯನ್ನು ವಿವಿಧ ಜಾತಿಗಳಿಂದ ಬಂದವರು ಪಡೆದ ನಂತರ ಅವರಲ್ಲಿ ಸಂಪೂರ್ಣ ಸಾಮರಸ್ಯ ಬರಬೇಕು. ಹಾಗಾಗದೆ, ಕೆಲವರು 'ಊಟ ಮಾಡುವಲ್ಲಿ, ಬಟ್ಟೆ-ಆಭರಣ ತೊಡುವಲ್ಲಿ ನಡೆಯುತ್ತದೆ. ಆದರೆ ಹೆಣ್ಣು-ಗಂಡುಗಳನ್ನು ಕೊಡುವುದು, ಕೊಂಬುವುದೂ ಸಾಧ್ಯವಾಗದು. ಎನ್ನುವರು. ಇವರು ಭಕ್ತರಲ್ಲ ನಿಜ-ಜ್ಞಾನಿಗಳೂ ಅಲ್ಲ. ಮುಟ್ಟಾದ ಮಹಿಳೆ ಎಷ್ಟು ಸ್ವಚ್ಛವಾದ ನೀರಿನಿಂದ ಸ್ನಾನ ಮಾಡಿಗರೂ ಪುನಃ ಋತುಸ್ರಾವದಿಂದ ಕೊಳೆಯಾಗುವಂತೆ, ಈ ಜಾತಿವಾದಿ ಜನ; ಶಾಸ್ತ್ರ ಭೋಧೆಯ ನೀರು ಇವರ ಬೌದ್ಧಿಕ ಮಾಲಿನ್ಯವನ್ನು ತೊಳೆಯಲು ಅಸಮರ್ಥವಾಗುತ್ತದೆ.

ಪರಿವಿಡಿ (index)
*
Previousಸದಾಚಾರ- ಕಾಯಕ-ದಾಸೋಹಭೃತ್ಯಾಚಾರNext
*