ವಚನಕಾರರ ದೃಷ್ಟಿಯಲ್ಲಿ ಶಿವರಾತ್ರಿ.

- ಶರಣ ಪ್ರಕಾಶ ಪಾಟೀಲ್. ಗಾಣಗಾಪುರ್.

ಮುಕ್ತಾಯಕ್ಕನವರ ವಚನ

ಸುಮ್ಮನೇಕೆ ದಿನಕಳೆವಿರಿ,
ಸುಮ್ಮನೇಕೆ ಹೊತ್ತುಗಳೆವಿರಿ?
ಸುಮ್ಮನೇಕೆ ಹೊತ್ತಗಳೆವಿರಿ ಸ್ವಾಮಿಗಳಿರಾ?
ಮಾಡ ಬನ್ನಿ ದಿನ ಶಿವರಾತ್ರಿಯ,
ಕೇಳ ಬನ್ನಿ ಶಿವಾನುಭವವ,
ನೋಡ ಬನ್ನಿ ಅಜಗಣ್ಣನಿರವ ಬಸವಣ್ಣತಂದೆ. / ಸಮಗ್ರ ವಚನ ಸಂಪುಟ: 5

ವಿವರಣೆ:- ನಿರಾಕಾರ ಶಿವನನ್ನು ಪೂಜಿಸಲು ಯಾವುದೇ ಶುಭ ಘಳಿಗೆ ಬೇಕೇ ಆಗಿಲ್ಲ ಎನ್ನುತ್ತಾರೆ ಬಸವಾದಿ ಪ್ರಮಥರೂ. ಆ ನಿರಂಜನನು (ನಿರಾಕಾರ) ನಮಗೆ ಕೊಟ್ಟ ಪ್ರತಿ ದಿನ, ಪ್ರತಿ ಕ್ಷಣವೂ ಅಮೃತ ಘಳಿಗೆಯೆ ಶುಭ ಅಶುಭ ಎನ್ನುವ ದಿನ, ಘಳಿಗೆಗಳು ಇಲ್ಲ ಅನ್ನೋದು ಮುಕ್ತಾಯಕ್ಕನವರ ಈ ವಚನದಲ್ಲಿ ಹೇಳುತ್ತಾರೆ ಮತ್ತು ಎಲ್ಲ ವಚನಕಾರರ ಅಭಿಮತವು ಇದೆ ಆಗಿದೆ.

ಧರ್ಮಗುರು ಬಸವಣ್ಣನವರ ವಚನ

ಅಚ್ಚಿಗವೇಕಯ್ಯಾ ಸಂಸಾರದೊಡನೆ?
ನಿಚ್ಚನಿಚ್ಚ ಶಿವರಾತ್ರಿಯ ಮಾಡುವುದು,
ಬೇಗ ಬೇಗ ಅರ್ಚನೆ-ಪೂಜನೆಯ ಮಾಡುವುದು,
ಕೂಡಲಸಂಗನ ಕೂಡುವುದು. /173 ಸಮಗ್ರ ವಚನ ಸಂಪುಟ: 1

ಬಸವಣ್ಣನವರು ಕೂಡ ಅದೇ ಮಾತನ್ನ ಅನುಮೋದಿಸ್ತಾರೆ , ನಿರಾಕಾರ ದೆವನನ್ನ ಪೂಜಿಸಲು ಯಾವುದೇ ಶುಭ ಘಳಿಗೆಯು ಇಲ್ಲ. ಪ್ರತಿ ಕ್ಷಣವೂ ಶಿವರಾತ್ರಿಯೆ.

ಹೃದಯ ಕತ್ತರಿ, ತುದಿನಾಲಗೆ ಬೆಲ್ಲೇಂ ಭೋ !
ಆಡಿಹೆನು ಏಂ ಭೋ, ಹಾಡಿಹೆನು ಏಂ ಭೋ !
ನಿಚ್ಚ ನಿಚ್ಚ ಶಿವರಾತ್ರಿಯ ಮಾಡಿಹೆನು ಏಂ ಭೋ !
ಆನು ಎನ್ನಂತೆ, ಮನ ಮನದಂತೆ,
ಕೂಡಲಸಂಗಮದೇವ ತಾನು ತನ್ನಂತೆ./280 ಸಮಗ್ರ ವಚನ ಸಂಪುಟ: 1

ಶರಣ ನಿದ್ರೆಗೈದಡೆ ಜಪ ಕಾಣಿರೊ,
ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ,
ಶರಣ ನಡೆದುದೆ ಪಾವನ ಕಾಣಿರೊ,
ಶರಣ ನುಡಿದುದೆ ಶಿವತತ್ವ ಕಾಣಿರೊ,
ಕೂಡಲಸಂಗನ ಶರಣನ ಕಾಯವೆ ಕೈಲಾಸ ಕಾಣಿರೊ.

ವಿವರಣೆ:- ಬಸವಣ್ಣನವರು ಹೇಳುತ್ತಾರೆ ನಾನು ನಿತ್ಯ ಶಿವರಾತ್ರಿ ಮಾಡ್ತೇನೆ, ಆ ನಿರಾಕಾರ ದೇವನನ್ನು ಪೂಜಿಸಲು ಯಾವುದೇ ಅರ್ಥವಾಗದ ಸಂಸ್ಕೃತ ಮಂತ್ರ ಬೇಕಾಗಿಲ್ಲ, ಏಂ ಭೋ ! ಅಂದರು ಸರಿ, ಆನು ಎನ್ನಂತೆ, ಮನ ಮನದಂತೆ, ಕೂಡಲಸಂಗಮದೇವ ತಾನು ತನ್ನಂತೆ, ಆ ದೇವನೇ ಈ ದೇಹದಲ್ಲಿ, ಈ ಕಾಯದಲ್ಲಿ ಇದ್ದಾನೆ ಎನ್ನುತ್ತಾರೆ.

ನಿಜ ಶರಣನು ನಿದ್ರೆ ಮಾಡಿದರೆ ಅದೇ ಜಪ, ಎದ್ದು ಕುಳಿತರೆ ಅದೇ ಶಿವರಾತ್ರಿ, ನಿಜ ಶರಣ ನಡೆದರೆ ಪಾವನ, ನುಡಿದದ್ದೆ ಶಿವತತ್ವ, ಶರಣನ ದೇಹವೇ ದೇಗುಲ ಎನ್ನುತ್ತಾರೆ ಬಸವಣ್ಣನವರು.

*

ಚೆನ್ನಬಸವಣ್ಣನವರ ವಚನ

ಸೋಮವಾರ ಮಂಗಳವಾರ ಹುಣ್ಣಿಮೆ ಸಂಕ್ರಾಂತಿ ಶಿವರಾತ್ರಿ
ಮೊದಲಾದ ತಿಥಿವಾರಂಗಳಲ್ಲಿ ಏಕಭುಕ್ತೋಪವಾಸಿಯಾಗಿ
ಆ ಕ್ಷುದ್ರ ತಿಥಿಗಳಲ್ಲಿ, ಮಾಡಿದ ನೀಚೋಚ್ಛಿಷ್ಟವಂ ತಂದು
ತನ್ನ ಕರಸ್ಥಲದ ಇಷ್ಟಲಿಂಗಕ್ಕೆ ಕೊಟ್ಟು ಕೊಂಡು ಭಕ್ತನೆನಿಸಿಕೊಂಡೆನೆಂಬ
ಅನಾಚಾರಿಯ ಮುಖವ ನೋಡಲಾಗದು ನೋಡಲಾಗದು.
ಅದೇನು ಕಾರಣವೆಂದಡೆ:
ದಿನ ಶ್ರೇಷ್ಠವೊ? ಲಿಂಗ ಶ್ರೇಷ್ಠವೊ? ದಿನ ಶ್ರೇಷ್ಠವೆಂದು ಮಾಡುವ
ದುರಾಚಾರಿಯ ಮುಖವ ನೋಡಲಾಗದು, ನೋಡಲಾಗದು, ಅದೆಂತೆಂದಡೆ:
ಆವ ದಿನ ಶ್ರೇಷ್ಠವೆಂದು ದಿನವೆ ದೈವವೆಂದು ಮಾಡುವನಾಗಿ,
ಅವನು ದಿನದ ಭಕ್ತನು.
ಅವನಂತಲ್ಲ ಕೇಳಿರಣ್ಣ ಸದ್ಭಕ್ತನು_ಲಿಂಗವೆ ಘನವೆಂದು ಜಂಗಮವೆ
ಶ್ರೇಷ್ಠವೆಂದು
ಆ ಲಿಂಗಜಂಗಮವೆ ಶ್ರೇಷ್ಠವೆಂದು ಆ ಲಿಂಗಜಂಗಮವೆ ದೈವವೆಂದು
ಮಾಡುವನಾಗಿ
ಆತ ಲಿಂಗಭಕ್ತನು. ಈ ಲಿಂಗಭಕ್ತಂಗೆ ದಿನದ ಭಕ್ತನ ತಂದು
ಸರಿಯೆಂದು ಹೋಲಿಸಿ ನುಡಿವಂಗೆ,
ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲ,
ಅವ ಭಕ್ತನಲ್ಲ, ಅವಂಗೆ ಅಘೋರನರಕ.
ಭವಿದಿನ_ತಿಥಿ_ವಾರಂಗಳಲ್ಲಿ ಕೂರ್ತುಮಾಡುವಾತ
ಭಕ್ತನಲ್ಲ. ಅಲ್ಲಿ ಹೊಕ್ಕು ಲಿಂಗಾರ್ಚನೆಯ ಮಾಡುವಾತ ಜಂಗಮವಲ್ಲ.
ಈ ಉಭಯರನು ಕೂಡಲಚೆನ್ನಸಂಗಯ್ಯ ಕುಂಭೀಪಾತಕ ನಾಯಕನರಕದಲ್ಲಿಕ್ಕುವನು /ಸಮಗ್ರ ವಚನ ಸಂಪುಟ: 3

ಈ ವಚನಕ್ಕೆ ವಿವರಣೆ ಬೇಕಾಗಿಲ್ಲ ಓದುತ್ತ ಹೋದಂತೆ ಅರ್ಥ ಆಗಿಬಿಡುತ್ತೆ. ದಿನ ಶ್ರೇಷ್ಠವೊ? ಲಿಂಗ ಶ್ರೇಷ್ಠವೊ? ದಿನ ಶ್ರೇಷ್ಠವೆಂದು ಮಾಡುವ ದುರಾಚಾರಿಯ ಮುಖವ ನೋಡಲಾಗದು ಅನ್ನುತ್ತಾರೆ ಚೆನ್ನಬಸವಣ್ಣ ನವರು, ಯಾಕೆ ಅನ್ನುವದಕ್ಕೆ ಮುಂದಿನ ಸಾಲಿನಲ್ಲಿ ಉತ್ತರ ಕೊಡ್ತಾರೆ. ನೋಡಲಾಗದು, ಅದೆಂತೆಂದಡೆ: ಆವ ದಿನ ಶ್ರೇಷ್ಠವೆಂದು ದಿನವೆ ದೈವವೆಂದು ಮಾಡುವನಾಗಿ, ಅವನು ದಿನದ ಭಕ್ತನು. ಆತ ಕೇವಲ ಆ ದಿನಕ್ಕೆ ಭಕ್ತನಾದ ಹೊರತು ಆ ನಿರಾಕಾರ ದೇವನ ಭಕ್ತ ಆಗಲ್ಲ ಅನ್ನುತ್ತಾರೆ ಚೆನ್ನಬಸವಣ್ಣ ನವರು.

ಇನ್ನು ಸದ್ಭಕ್ತ ಯಾರು ಎನ್ನುವದನ್ನು ಹೀಗೆ ಹೇಳ್ತಾರೆ.

'ಅವನಂತಲ್ಲ ಕೇಳಿರಣ್ಣ ಸದ್ಭಕ್ತನು_ಲಿಂಗವೆ ಘನವೆಂದು ಜಂಗಮವೆ ಶ್ರೇಷ್ಠವೆಂದು
ಆ ಲಿಂಗಜಂಗಮವೆ ಶ್ರೇಷ್ಠವೆಂದು ಆ ಲಿಂಗಜಂಗಮವೆ ದೈವವೆಂದು ಮಾಡುವನಾಗಿ ಆತ ಲಿಂಗಭಕ್ತನು'

ಕೈಯಲ್ಲಿರುವ ಲಿಂಗವೇ ಘನ, ಜಂಗಮ (ಜಂಗಮ = ಚಲನಶೀಲ) ಸಮಾಜವೇ ಶ್ರೇಷ್ಠ ಅನ್ನುವವನೆ ಸದ್ಭಕ್ತ ಅಥವಾ ಲಿಂಗಭಕ್ತ .

ಕಾಡಸಿದ್ಧೇಶ್ವರರ ವಚನ

ದ್ವಾದಶಮಾಸ, ಚತುದರ್ಶಿ, ದ್ವಾದಶಿ, ಅಮವಾಸಿಯೊಳಗೆ
ಮಾಘಮಾಸದ ಚತುರ್ದಶಿ,
ಶಿವರಾತ್ರಿ ಅಮವಾಸ್ಯೆ ಫಲಪುಣ್ಯ ಮಹಾದೊಡ್ಡದು ಎಂದು
ಸ್ಕಂದಪುರಾಣ ಬ್ರಹ್ಮೋತ್ತರಕಾಂಡ, ಶ್ರುತಿವಾಕ್ಯಗಳಿಂದ ಕೇಳಿ,
ಅಂತಪ್ಪ ಮಾಘಮಾಸದ ಚತುರ್ದಶಿ ದಿವಸ
ಒಂದೊತ್ತು ಉಪವಾಸವ ಮಾಡಿ,
ಪತ್ರಿ, ಪುಷ್ಪ. ಕಡ್ಡಿ, ಬತ್ತಿಯ ತಂದು
ಸಾಯಂಕಾಲಕ್ಕೆ ಸ್ನಾನವ ಮಾಡಿ,
ಜಂಗಮವ ಕರತಂದು ಅರ್ಚಿಸಿ,
ಲಿಂಗವ ಪತ್ರಿ, ಪುಷ್ಪ, ಅಭೀಷೇಕ, ಕಡ್ಡಿ, ಬತ್ತಿ,
ಏಕಾರತಿ ಪಂಚಾರತಿಗಳಿಂದ ಪೂಜಿಸಿ,
ಪಾದೋದಕವ ಸೇವಿಸಿ,
ಆ ಮೇಲೆ ತಮ್ಮ ಗೃಹದಲ್ಲಿ ಮಾಡಿದ ಉತ್ತಮವಾದ ಫಲಹಾರ ಜೀನಸುಗಳು
ಅಂಜೂರ, ದ್ರಾಕ್ಷಿ, ಹಲಸು, ತೆಂಗು, ಕಾರಿಕ, ಬಾಳೇಹಣ್ಣು
ಮೊದಲಾದ ಫಲಹಾರ
ಮತ್ತಂ, ಬೆಂಡು, ಬೆತ್ತಾಸ, ಖರ್ಜೂರ, ದೂದುಪೇಡೆ,
ಬುಂದೆ, ಲಡ್ಡು ಮೊದಲಾದ ಫಲಹಾರ.
ಇಂತಪ್ಪ ಫಲಹಾರ ಜೀನಸು ಎಡೆಮಾಡಿ ಪ್ರಸಾದವೆಂದು ಕೈಕೊಂಡು,
ಲಿಂಗಕ್ಕೆ ತೋರಿ ತೋರಿ ತಮ್ಮ ಮನಬಂದ ಪದಾರ್ಥವ
ಅಂಗಕ್ಕೆ ಗಡಣಿಸಿಕೊಂಡು,
ನಾವು ಇಂದಿನ ದಿವಸ ಉದಯದಿಂ ಸಾಯಂಕಾಲದ ಪರಿಯಂತರವಾಗಿ,
ಒಂದೊತ್ತು ಉಪವಾಸ ಮಾಡಿ ಶಿವಯೋಗ ಮಾಡಿದೆವೆಂದು
ಮೂಢ ಮಂದಮತಿ ಅಧಮರ ಮುಂದೆ ತಮ್ಮ ಬಿಂಕವ ಪೇಳಿ,
ರಾತ್ರಿಯಲ್ಲಿ ಜಾಗರಣಿ ಮಾಡಬೇಕೆಂದು
ತಮ್ಮ ಅಂಗದ ಮೇಲಣ ಲಿಂಗವ ಬಿಗಿಬಿಗಿದು ಕಟ್ಟಿಕೊಂಡು
ಸ್ಥಾವರಲಿಂಗದ ಗುಡಿಗೆ ಹೋಗಿ ಆ ಲಿಂಗದ ಪೂಜೆಯಿಂದ ಬೆಳಗ ಕಳೆದು
ಉದಯಕ್ಕೆ ಶಿವರಾತ್ರಿ ಅಮವಾಸೆ ದೊಡ್ಡದೆಂದು
ಹಳ್ಳ ಹೊಳೆಗೆ ಹೋಗಿ,
ಛಳಿಯಲ್ಲಿ ತಣ್ಣೀರೊಳಗೆ ಮುಳುಗಿ,
ಸ್ನಾನವ ಮಾಡಿ ಬಂದು ಜಂಗಮವ ಕರಿಸಿ,
ಮೃಷ್ಟಾನ್ನವ ಹೊಟ್ಟೆತುಂಬ ಘಟ್ಟಿಸಿ,
ಶಿವರಾತ್ರಿ ಶಿವಯೋಗದ ಪಾರಣೆಯಾಯಿತೆಂದು
ಮಹಾ ಉಲ್ಲಾಸದಿಂ ತಮ್ಮೊಳಗೆ ತಾವೇ ಇಪ್ಪರಯ್ಯಾ.
ಇಂತಪ್ಪ ಅವಿಚಾರಿಗಳಾದ ಅಜ್ಞಾನ ಜೀವಾತ್ಮರಿಗೆ
ವೀರಮಾಹೇಶ್ವರರೆಂದಡೆ ಪರಶಿವಯೋಗಿಗಳಾದ ಶಿವಶರಣರು ನಗುವರಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ./ಸಮಗ್ರ ವಚನ ಸಂಪುಟ: 10

ವಿವರಣೆ:-
'ಒಂದೊತ್ತು ಉಪವಾಸ ಮಾಡಿ ಶಿವಯೋಗ ಮಾಡಿದೆವೆಂದು
ಮೂಢ ಮಂದಮತಿ ಅಧಮರ ಮುಂದೆ ತಮ್ಮ ಬಿಂಕವ ಪೇಳಿ,

ವಚನಕಾರ ಕಾಡಸಿದ್ಧೆಶ್ವರರು ಕೂಡ ದಿನ (ಶಿವರಾತ್ರಿ ದಿನ) ಶ್ರೇಷ್ಠ ಅನ್ನವವರನ್ನು ಅಧಮ ಅನ್ನುತ್ತಿದ್ದಾರೆ. ಪ್ರತಿ ದಿನ, ಪ್ರತಿ ಕ್ಷಣವೂ ಶ್ರೇಷ್ಠ ಅನ್ನುವದು ಎಲ್ಲ ಬಸವಾದಿ ಪ್ರಮಥರ ಭಾವ.
-ಶರಣು ಶರಣಾರ್ಥಿಗಳು

*
Previousಇಷ್ಟಲಿಂಗ ದೀಕ್ಷಾ ಯಾರು ...ಕಲ್ಲೊಳಗಣ ಕಿಚ್ಚು ಉರಿಯಬಲ್ಲುದೆ?Next
*