ಲಿಂಗಾಯತ ಯಾರು?

*

ಲಿಂಗಾಯತ ಯಾರು? ಲಿಂಗಾಯತ ಹೇಗಿರಬೇಕು?

ಲಿಂಗಾಯತ ಯಾರು? ಲಿಂಗಾಯತ ಹೇಗಿರಬೇಕು? ಮತ್ತು ಲಿಂಗಾಯತ ಅಂತ ಯಾರನ್ನು ಕರೆಯಬೇಕು ಎನ್ನುವ ಪ್ರಶ್ನೆಗಳಿಗೆ ಉತ್ತರ ಲಿಂಗಾಯತ ಧರ್ಮಗ್ರಂಥವಾದ ವಚನಸಾಹಿತ್ಯದಲ್ಲಿ ಈ ಕೆಳಗಿನಂತೆ ಶರಣರು ವಿವರಿಸಿದ್ದಾರೆ.

ಅನ್ಯದೈವವ ಬಿಟ್ಟುದಕ್ಕೆ ಆವುದು ಕ್ರಮವೆಂದರೆ:
ಅನ್ಯದೈವವ ಮನದಲ್ಲಿ ನೆನೆಯಲಾಗದು, ಅನ್ಯದೈವವ ಮಾತನಾಡಲಾಗದು.
ಅನ್ಯದೈವದ ಪೂಜೆಯ ಮಾಡಲಾಗದು.
ಸ್ಥಾವರಲಿಂಗಕ್ಕೆರಗಲಾಗದು.
ಆ ಲಿಂಗ ಪ್ರಸಾದವ ಕೊಳಲೆಂತೂ ಬಾರದು.
ಇಷ್ಟು ನಾಸ್ತಿಯಾದರೆ ಆತ ಅನ್ಯದೈವವ ಬಿಟ್ಟು ಲಿಂಗವಂತನೆನಿಸಿಕೊಂಬನು.
ಇವರೊಳಗೆ ಅನುಸರಣೆಯ ಮಾಡಿಕೊಂಡು
ನಡೆದನಾದೊಡೆ ಅವಂಗೆ ಕುಂಬಿಪಾತಕ
ನಾಯಕನರಕ ತಪ್ಪದು ಕಾಣಾ ಕೂಡಲಚೆನ್ನಸಂಗಯ್ಯ. -೩/೯೦೩ [1]

ಅರ್ಪಿತ ಆನರ್ಪಿತವೆಂಬ ಉಭಯಕುಳದ ಶಂಕೆವುಳ್ಳನ್ನಕ್ಕ ಅಚ್ಚಸಂಸಾರಿಯೆಂಬೆ.
ಅರ್ಪಿತ ಅನರ್ಪಿತವೆಂಬೆರಡ ಕಳೆದು ನಿಂದಾತನ ಅಚ್ಚ ಲಿಂಗವಂತನೆಂಬೆ.
ಅರ್ಪಿತ ಅನರ್ಪಿತವನರ್ಪಿಸಿ ಪ್ರಸಾದ ಸ್ವೀಕರಿಸಬಲ್ಲಡಾತನ
ವಾಙ್ಮನಾತೀತನೆಂಬೆ.
ಅರ್ಪಿತವಿಲ್ಲ, ಅನರ್ಪಿತವಿಲ್ಲ, ಅಕಲ್ಪಿತವಯ್ಯಾ, ಕೂಡಲಚೆನ್ನಸಂಗಮದೇವಾ. -೩/೬೦೫ [1]

ಶೀಲವಂತರು ಶೀಲವಂತರೆಂದೆಂಬರು,
ಶೀಲ ಸಂಬಂಧದ ಹೊಲಬನರಿಯದ ಭ್ರಮಿತ ಪ್ರಾಣಿಗಳು ನೀವು ಕೇಳಿ ಭೋ
ಕಾಮವೆಂಬುದೊಂದು ಪಾಪಿ, ಮದವೆಂಬುದೊಂದು ದ್ರೋಹಿ,
ಮತ್ಸರವೆಂಬುದೊಂದು ಹೊಲೆಯ,
ಕ್ರೋಧವೆಂಬುದೊಂದು ಕೈಸೂನೆಗಾರ,
ಮನವ್ಯಾಪಕಂಗಳು ಭವಿ.
ಇಂತಿವನರಿದು ಮರೆದು ಹರವಸಂಬೋಗಿ ಹೊಯಿ ಹಡೆದಂತಿದ್ದರೆ
ಕೂಡಲಚೆನ್ನಸಂಗನಲ್ಲಿ ಅವರ ಲಿಂಗವಂತರೆಂಬೆ. -೩/೫೮೫ [1]

ಕರಸ್ಥಲದಲ್ಲಿ ಲಿಂಗವ ಧರಿಸಿ
ಅನ್ಯದೈವಕ್ಕೆ ತಲೆವಾಗದಾತನ ಲಿಂಗವಂತನೆಂಬೆನಯ್ಯಾ.
ಕರಸ್ಥಲದಲ್ಲಿ ಲಿಂಗವ ಧರಿಸಿ ಭವಿಸಂಗವ ಮಾಡದಾತನ ಲಿಂಗವಂತನೆಂಬೆನಯ್ಯಾ.
ಕರಸ್ಥಲದಲ್ಲಿ ಲಿಂಗವ ಧರಿಸಿದಾತ ಜಡಶೈವರ ಹೊದ್ದಲಾಗದು,
ಶೈವರು ಹೇಳಿದ ಶಾಸ್ತ್ರವ ಓದಲಾಗದು,
ಅನ್ಯಮಂತ್ರ ಅನ್ಯಜಪಮಾಲಿಕೆಯ ಮಾಡಲಾಗದು,
ಲಿಂಗಬಾಹ್ಯ ಸತಿಸುತರ ಸೋಂಕಲಾಗದು.
ಕರಸ್ಥಲದಲ್ಲಿ ಲಿಂಗವ ಧರಿಸಿದಾತ ಉದಯಾಸ್ತಮಾನವೆನ್ನದೆ
ಶಿವಪೂಜೆ ಶಿವಮಂತ್ರ ಶಿವಾರ್ಪಣ ಶಿವಶಾಸ್ತ್ರ
ಶಿವಯೋಗದಲ್ಲಿರುವಾತನೆ ಲಿಂಗವಂತನೆಂಬೆನಯ್ಯಾ.
ಇದಮೀರಿ; ಕರಸ್ಥಲದಲ್ಲಿ ಲಿಂಗವ ಧರಿಸಿ
ತನ್ನ ಮನೆಯಲ್ಲಿ ಅನ್ಯದೈವ ಭವಿಮಿಶ್ರ ಅನ್ಯಬೋಧೆ
ಭವಿಶಾಸ್ತ್ರವುಳ್ಳಾತನ ಶುದ್ಧಭವಿಯೆಂಬೆನಯ್ಯಾ.
ಗುರುವಾಕ್ಯವ ಮೀರಿ ನಡೆವ ಮಹಾಪಾತಕರ ಮುಖವ ತೋರದಿರಾ,
ಸೆರೆಗೊಡ್ಡಿ ಬೇಡಿಕೊಂಬೆ, ದಯದಿಂದ ನೋಡಿ ರಕ್ಷಿಸು
ಕೂಡಲಚೆನ್ನಸಂಗಮದೇವಾ. -೩/೧೦೯೩ [1]

ಒಡಲಡಗ ಮಚ್ಚಿದಾತನ ಅಚ್ಚಶರಣನೆಂಬೆ.
ಮಡಿಲಡಗ ಮಚ್ಚಿದಾತನ ಅಚ್ಚಲಿಂಗವಂತನೆಂಬೆ.
ಈ ಒಡಲಡಗು ಮಡಿಲಡಗಿನೊಳಗೆ ಒಂದ ಮಚ್ಚದಿದ್ದರೆ ?
ಉತ್ಪತ್ತಿ ಪ್ರಳಯ ತಪ್ಪದು.
ಶ್ರೀಗುರು ಮಹಾಲಿಂಗದಲ್ಲಿ ಒಡಲಡಗ ಮಚ್ಚಿ
ಅಚ್ಚಭವಿಯಾದ ಶರಣನೊಬ್ಬನೆ-ಗುಹೇಶ್ವರ. -೨/೧೦೨೧ [1]

ಜಂಗಮವ ಕರತಂದು ಮನೆಯಲ್ಲಿ ಕುಳ್ಳಿರಿಸಿ,
ಅಂಗದ ಮೇಲಣ ಜಪವನೆಣಿಸುವ ಭಕ್ತನ ಜಪದ ಬಾಯಲ್ಲಿ ಕೆರಹನಿಕ್ಕಲಿ!
ಅವನ ಲಿಂಗಾರ್ಚನೆಯ ಬಾಯಲ್ಲಿ ಹುಡಿಯ ಹೊಯ್ಯಲಿ!
ಜಂಗಮದ ತೃಪ್ತಿಯನರಿಯದೆ ಲಿಂಗವಂತನೆಂತಾದನೊ ? ಮರುಳೆ!
ಅವ ಪಿಸುಣ, ಹೊಲೆಯನೆಂದಾತನಂಬಿಗರ ಚೌಡಯ್ಯ. -೬/೧೪೩[1]

"ಪೂಜ್ಯ ಮಾತಾಜಿಯವರು ವಿವರಿಸಿದಂತೆ" ಈ ಕೆಳಗೆ ವಿವರಿಸಿದ ನಿಯಮಗಳನ್ನು ಪಾಲಿಸುವವನೆ ನಿಜವಾದ ಲಿಂಗಾಯತ.

1) ಸಮತಾವಾದಿ, ಮನುಕುಲೋದ್ಧಾರಿ, ವಿಶ್ವಗುರು ಬಸವಣ್ಣವನರನ್ನು ಲಿಂಗಾಯತ ಧರ್ಮದ ಆದಿ ಗುರುವೆಂದು, ಮುಂತ್ರಪುರುಷನೆಂದು ತಿಳಿದು ಧರ್ಮಪಿತ ಬಸವಣ್ಣ ನವರೇ ತನ್ನ ರಕ್ಷಕ, ಮೋಕ್ಷದಾಯಕ ಗುರು ಎಂದು ನಂಬಿ ಅವರ ಶ್ರೀ ಚರಣಕ್ಕೆ ಶರಣಾಗತನಾಗುವವನೇ ಲಿಂಗಾಯತನು.

2) ಜಗದ್ಗುರು ಬಸವಣ್ಣನವರೇ ಆದಿ ಪ್ರಮಥರಾಗಿ ಬಸವ ಯುಗದ ಮತ್ತು ಬಸವ ಯುಗದ ಮತ್ತು ಬಸವ ಪಥದ ಶರಣರು ಕೊಟ್ಟ ವಚನ ಸಾಹಿತ್ಯವನ್ನೇ ತನ್ನ ಧರ್ಮ ಸಂಹಿತೆ (ಧಾರ್ಮಿಕ ಸಂವಿಧಾನ) ಎಂದು ನಂಬಿ ವಚನ ಶಾಸ್ತ್ರದ ಅಧ್ಯಯನ, ಪಾರಾಯಣ, ಅನುಷ್ಟಾನ ಮಾಡುವವನೇ ಲಿಂಗಾಯತನು.

3) ಚೇತನಾತ್ಮಕವಾದ ವಿಶ್ವದ ಸೃಷ್ಟಿ-ಸ್ಥಿತಿ ಲಯಗಳಿಗೆ ಕಾರಣ ಕರ್ತವಾಗಿರುವ ಪರಮಾತ್ಮನ ಅಸ್ತಿತ್ವದಲ್ಲಿ ನಂಬುಗೆ ಇರಿಸಿ, ಆ ದೇವನನ್ನು ಗೋಲಕಾರದಲ್ಲಿ ಚುಳುಕಿಸಿ ಕೊಟ್ಟ ಬಸವಣ್ಣ ನವರ ಕೊಡುಗೆಯಾದ ಇಷ್ಟಲಿಂಗದಲ್ಲಿ ಶ್ರದ್ಧೆ ಇರಿಸಿ ದೇಹದ ಮೇಲೆ ಧರಿಸಿಕೊಂಡು ಪೂಜಿಸುವವನು ಲಿಂಗಾಯತನು.

4) ದೇವಮಂತ್ರವೆಂದು "ಓಂ ಲಿಂಗಾಯ ನಮ:" ಎಂಬ ಷಡಕ್ಷರಿ ಮಂತ್ರವನ್ನು, ಗುರು ಮಂತ್ರವೆಂದು "ಓಂ ಶ್ರೀ ಗುರು ಬಸವ ಲಿಂಗಾಯ ನಮಃ" ಎಂಬ ದ್ವಾದಶಾಕ್ಷರ ಮಂತ್ರವನ್ನು ಶ್ರದ್ಧೆಯಿಂದ ಮನ್ನಿಸಿ, ಪಠಿಸುವವನು ಲಿಂಗಾಯತನು.

5) "ಬಸವನ ಮೂರ್ತಿಯೇ ಧ್ಯಾನಕ್ಕೆ ಮೂಲ" ಎಂಬ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ವಾಣಿಯಂತೆ ಮನೆಯಲ್ಲಿ, ಸಭೆ-ಸಮಾರಂಭಗಳಲ್ಲಿ, ಮಠ ಮಾನ್ಯಗಳಲ್ಲಿ ಬಸವ ಗುರುವಿನ ಭಾವಚಿತ್ರವನ್ನು, ಬಸವಗುರು ಮೂರ್ತಿಯನ್ನು ಪೂಜಿಸಿ, ಅವರ ತತ್ವಗಳನ್ನು ಪಾಲಿಸುವ ಏಕ ಗುರು ನಿಷ್ಟೆಯುಳ್ಳವನ್ನಾಗಿ, ಬಸವ ಜಯಂತಿ ಮತ್ತು ಬಸವಲಿಂಗೈಕ್ಯ ದಿನಾಚರಣೆ (ಶ್ರಾವಣ ಶುದ್ಧ ಪಂಚಮಿಂಯೆಂದು) ಗಳನ್ನು ತಪ್ಪದೇ ಮಾಡುವವನು ಲಿಂಗಾಯತನು.

6) ವಿಶೇಶ ಧಾರ್ಮಿಕ ಉತ್ಸವಗಳಂದು, ಶರಣರ ಜಯಂತಿಗಳಂದು ಷಟಷ್ಥಲ ಧ್ವಜವನ್ನು ಹಾರಿಸುವುದೇ ಅಲ್ಲದೆ, ತಮ್ಮ ಮನೆ-ಮಠಗಳ ಮೇಲೆ ಷಟಷ್ಥಲ ಲಾಂಛನ ಹಾಕಿ, ಮನೆಗಳಲ್ಲಿ ಬಸವಾದಿ ಶರಣರ ಹೆಸರುಗಳನ್ನಿಡುವವನೇ ಲಿಂಗಾಯತನು.

7) ಹುಟ್ಟಿದಾಗ ಲಿಂಗಧಾರಣೆ, ತಾರುಣ್ಯದ (14-20) ವಯಸ್ಸಿನಲ್ಲಿ ಹೆಣ್ಣು-ಗಂಡೆಂಬ ಭೇದವೆನಿಸದೆ ಲಿಂಗ ದೀಕ್ಷಾ ಸಂಸ್ಕಾರವನ್ನು ಸದ್ಗುರುವಿನಿಂದ, ಮಕ್ಕಳಿಗೆ ಕೊಡಿಸುವವನೇ (ತಾನೂ ಮಾಡಿಸುಕೊಂಡಿರುವವನೇ) ಲಿಂಗಾಯತನು ಚಿಕ್ಕ ಮಕ್ಕಳ ದೇಹದ ಮೇಲೆ ಇಷ್ಟಲಿಂಗವನ್ನಾಗಲೀ ಬಸವ ಗುರುವಿನ ಪದಕವನ್ನಾಗಲಿ (ಮಕ್ಕಳಿಗೆ) ತಪ್ಪದೇ ಧರಿಸುವವನೇ ಲಿಂಗಾಯತನು.

8) ಲಿಂಗಾಗಿಗಳನ್ನು ಧರ್ಮಬಂಧುಗಳೆಂದು ಭಾವಿಸಿ, ಅವರಲ್ಲಿ ಜಾತಿಭೇದ ಎಣಿಸದೆ, ಊಟ ಮತ್ತು ವಿವಾಹ ಸಂಬಂಧಗಳನ್ನು ನಿಃಸಂಶಯಪೂರ್ವಕವಾಗಿ ಮಾಡುವವನೇ ಲಿಂಗಾಯತನು. ಭಕ್ತತ್ವ, ಗುರುತ್ವ, ಜಂಗಮತ್ವಗಳು ಜನದಿಂದ ಬರುವ ಜಾತಿಸೂತಕ ಪದಗಳಲ್ಲ ಕ್ರಮವಾಗಿ ಸದಾಚಾರ, ಸುಜ್ಞಾನ ಮತ್ತು ಸ್ವಾನುಭಾವಗಳಿಂದ ಗಳಿಸಿಕೊಂಡ ಅರ್ಹತೆಗಳೆಂದು ನಂಬುವವನೇ ಲಿಂಗಾಯತನು.

9) ಅಷ್ಟಾವರಣಗಳಾದ ಗುರು-ಲಿಂಗ-ಜಂಗಮ (ಪೂಜ್ಯ ವಸ್ತುಗಳು) ವಿಭೂತಿ-ರುದ್ರಾಕ್ಷಿ-ಮಂತ್ರ (ಪೂಜಾ ಸಾಧನಗಳು) ಪಾದೋದಕ ಪ್ರಸಾದ (ಪೂಜಾಫಲಗಳು) ಎಂಬವು ಲಿಂಗಾಯತ ಧರ್ಮಪುರುಷನ ಅಂಗವೆಂದು, ಪಂಚ ಆಚಾರಗಳಾದ ಲಿಂಗಾಚಾರ-ಸದಾಚಾರ-ಶಿವಾಚಾರ-ಗಣಾಚಾರ-ಭೃತ್ಯಾಚಾರಗಳು ಧರ್ಮಪುರುಷನ ಪಂಚ ಪ್ರಾಣಗಳೆಂದು; ಷಟಸ್ಥಲದ ವಿವಿಧ ಹಂತಗಳಾದ ಭಕ್ತ-ಮಹೇಶ-ಪ್ರಸಾದಿ-ಪ್ರಾಣಲಿಂಗಿ-ಶರಣ-ಐಕ್ಯ ಎಂಬವು ಧರ್ಮ ಪುರುಷನ ಆತ್ಮವೆಂದು ಅರಿತು ಆಚರಿಸುವವನೇ ಲಿಂಗಾಯತ.

10) ಬಹುದೇವತೋಪಾಸನೆ ಕಾರಣವಾಗುವ ಗುಡಿ-ಗುಂಡಾರಗಳನ್ನು ನಿರ್ಮಿಸದೆ ದೇಹವನ್ನೇ ದೇವಾಲಯ ಮಾಡಿಕೊಳ್ಳುವ ಸದಾಚಾರವನ್ನು ಅಳವಡಿಸಿಕೊಂಡು ಧರ್ಮದ ಆದ್ಯನಾದ ಬಸವಗುರುವನ್ನು, ಚೈತನ್ಯಸ್ವರೂಪಿಗಳಾದ ಗುರು-ಜಂಗಮರನ್ನು (ಅರ್ಥಾತ ಜ್ಞಾನಿಗಳನ್ನು) ಗೌರವಿಸಿ ಬಸವಣ್ಣನವರು ಸೂತ್ರ ರೂಪವಾಗಿ ನಿರ್ಮಿಸಿ ತೋರಿಸಿದ ಅನುಭವ ಮಂಟಪದ ಮಾದರಿಯಲ್ಲಿ ಆಧ್ಯಾತ್ಮಿಕ ಕೇಂದ್ರಗಳನ್ನು ನಗರ,ಊರು,ಹಳ್ಳಿಗಳಲ್ಲಿ ನಿರ್ಮಿಸಿ, ಅವುಗಳಿಗೆ ಬಸವ ಮಂಟಪಗಳೆಂದು ಹೆಸರಿಟ್ಟು ಅವುಗಳ ಮೂಲಕ ಸಾಮೂಹಿಕ ಪ್ರಾರ್ಥನೆ, ಧರ್ಮಬೋದೆ, ವಚನ ಶಾಸ್ತ್ರ ಅಧ್ಯಯನ ಪ್ರವಚನ ನಡೆಸುವವನು, ಭಾಗಿಯಾಗುವವನು ಲಿಂಗಾಯತನು.

11) ಯಜ್ಞ-ಯಾಗ, ಹೋಮ-ಹವನಾದಿಗಳನ್ನು ಮಾಡದೆ, ಪಂಚಸೂತಕಗಳಾದ ಜನನ ಸೂತಕ-ಮರಣಸೂತಕ-ಜಾತಿಸೂತಕ-ಉಚ್ಛಷ್ಟಸೂತಕ-ರಜಸೂತಕಗಳನ್ನು ಆಚರಿಸದೆ ಚತುರ್ವರ್ಣಾತ್ಮಕ ವ್ಯವಸ್ಥೆಯು ದೇವ ನಿರ್ಮಿತವಲ್ಲ, ಮಾನವ ಕಲ್ಪಿತ ಎಂದು ತಿಳಿದು ಜಾತಿಭೇದ ಪದ್ದತಿಗಳನ್ನು ನಿರಾಕರಿಸಿ, ಸಮಾಜದ ಪ್ರತಿಯೊಬ್ಬನ ಬೆಳವಣಿಗೆಗೆ ಸಮಾನ ಅವಕಾಶ ನೀಡುವ ಸಮತಾವಾದಿಯೂ, ವಿಚಾರಶಿಲನೂ ಆಗಿ ಮಾಂಸಾಹಾರಿಯಾಗದೆ ಶುದ್ದ ಸಸ್ಯಾಹಾರಿಯಾಗಿ ಜೀವನ ನಡೆಸುವ ಅಹಿಂಸಾವಾದಿಯೇ ಲಿಂಗಾಯತನು.

12) "ನಿರಾಕಾರ ದೇವನ ಮುಖ ಸಮಾಜ" "ದಯವೇ ಧರ್ಮದ ಮೂಲ" ಎಂದು ತಿಳಿದು ಅಪಾರವಾದ ಮಾನವೀಯತೆ, ಪ್ರೀತಿಯಿಂದ ದೀನ-ದುಃಖಿತರನ್ನು, ಪಾಪಿ ಪತಿತರನ್ನು ಕಂಡು, ಮರುಕದಿಂದ ಅವರ ಏಳಿಗೆಗೆ ಶ್ರಮಿಸಿ, ಸಕಲ ಜೀವಾತ್ಮರಿಗೆ ಲೀಸನ್ನೇ ಬಯಸುವ ಮಾನವತಾವಾದಿ, ವಿಶ್ವ ಧರ್ಮಿಯೇ ಲಿಂಗಾಯತನು.

[1] ಈ ತರಹದ ಸಂಖ್ಯೆಯ ವಿವರ: ಸವಸ-1/653 :- ಸಮಗ್ರ ವಚನ ಸಂಪುಟ -1, ವಚನ ಸಂಖ್ಯೆ-1653 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previousಇಷ್ಟಲಿಂಗ ಜನಕ ಗುರು ಬಸವಣ್ಣಪೂಜ್ಯ ಶ್ರೀ ಮಹಾಜಗದ್ಗುರು ಮಾತೆ ಮಹಾದೇವಿNext
*