ಲಿಂಗಾಯತ ಸ್ವತಂತ್ರ ಧರ್ಮವಲ್ಲವೆಂಬ ಡಾ.ಚಿದಾನಂದ ಮೂರ್ತಿಯವರ ವಾದಕ್ಕೆ ಉತ್ತರ

*

ಡಾ. ಎಸ್.ಎಂ. ಜಾಮದಾರ ಐ.ಎ.ಎಸ್ (ನಿವೃತ್ತ) ಬೆಂಗಳೂರು

ಕೃಪೆ: ಬಸವಪಥ ಮಾಸಪತ್ರಿಕೆ

ಜುಲೈ ೧, ೨೦೧೭ರಂದು ಪ್ರಜಾವಾಣಿ ದಿನ ಪತ್ರಿಕೆಯ ಸಂಪಾದಕೀಯ ಪುಟದಲ್ಲಿ "ಲಿಂಗಾಯತ ಪ್ರತ್ಯೇಕ ಸ್ವತಂತ್ರ ಧರ್ಮವೇ?" ಎಂಬ ನನ್ನ ಲೇಖನ ಪ್ರಕಟವಾಗಿತ್ತು.
ಅದಕ್ಕೆ ಪ್ರತಿಕ್ರಿಯೆ ಎನ್ನುವಂತೆ ಡಾ.ಚಿದಾನಂದ ಮೂರ್ತಿಯವರು ೧೩ ಪುಟಗಳ ಒಂದು ಲೇಖನವನ್ನು ನನಗೆ ಕಳುಹಿಸಿದ್ದಾರೆ. ಅದು ೨೧ ಜೂನ್ ೨೦೧೭ ರಂದು ಮುಖ್ಯಮಂತ್ರಿಗಳ ಹೇಳಿಕೆಯನ್ನು ಖಂಡಿಸಿ ಅವರು ನಡೆಸಿದ ಪತ್ರಿಕಾ ಗೋಷ್ಟಿಯ ಲಿಖಿತ ಪ್ರತಿಯಾಗಿದೆ.
ನನ್ನ ಲೇಖನಕ್ಕಿಂತ ಮೊದಲೇ ಅದರ ಅಂಶಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಅದರ ತಲೆಬರಹ 'ವೀರಶೈವರು ಹಿಂದೂಗಳಲ್ಲ ಎಂಬುದು ಅವಿವೇಕವಾದ' ಎಂದಿದೆ. ಅದರಲ್ಲಿನ 'ಅವಿವೇಕದಂತ' ಪದಪ್ರಯೋಗವು ಡಾ.ಚಿದಾನಂದ ಮೂರ್ತಿಯವರಂಥ ಎತ್ತರದ ವ್ಯಕ್ತಿಗೆ ಶೋಭೆ ತರುವಂಥದಲ್ಲ. ಹಿಂದೊಮ್ಮೆ ವಿಧಾನಸೌಧದಲ್ಲಿ ಸರ್ಕಾರದಿಂದ ದೇವರ ದಾಸಿಮಯ್ಯನವರ ಜಯಂತಿಯನ್ನು ಆಚರಿಸುತ್ತಿದ್ದಾಗ ಅದನ್ನು ವಿರೋಧಿಸಿ ತುಂಬಿದ ಸಭೆಯಲ್ಲಿ ಮೂರ್ತಿಗಳು ಹುಚ್ಚರಂತೆ ಘೋಷಣೆ ಕೂಗಿದ್ದನ್ನು ಸಾರ್ವಜನಿಕರು ಮರೆತಿಲ್ಲ.

ಚಿದಾನಂದ ಮೂರ್ತಿಯವರು ಪಂಚಪೀಠಗಳ ಮುಖವಾನಿಯಂತೆ ವರ್ತಿಸುತ್ತಿದ್ದಾರೆ. ಲಿಂಗಾಯತ ಮತ್ತು ವೀರಶೈವದ ನಡುವಿನ ತಿಕ್ಕಾಟಕ್ಕೆ ಸಂಬಂಧಿಸಿ ೧೯೯೮ರಲ್ಲಿ 'ವಚನಶೋಧ' ಎಂಬ ತಮ್ಮ ಗ್ರಂಥದಲ್ಲಿ ಸಿದ್ಧಾಂತ ಸಿಖಾಮಣಿಯ ಕಾಲಮಾನದ ಬಗ್ಗೆ ಬರೆಯುತ್ತಾ 'ಸಿದ್ಧಾಂತ ಶಿಖಾಮಣಿಯ ಕಾಲ ಕ್ರಿ.ಶ. ೧೧೬೦-೮೦ಕ್ಕಿಂತ ನಿಶ್ಚಿತವಾಗಿಯೂ ಹಿಂದೆಯಲ್ಲ, ಬಹುಶಃ ೧೩-೧೪ನೇ ಶತಮಾನದ ಕೃತಿ ಎಂದು ಬರೆದಿದ್ದರು. ಮರುವರ್ಷ ೧೯೯೯ರಲ್ಲಿ ಗುರುಗಳೂ, ಪಂಚಪೀಠಗಳಲ್ಲಿ ಒಂದಾದ ಕಾಶೀ ಪೀಠದ ಪೂಜ್ಯಶ್ರೀ ಚಂದ್ರಶೇಖರ ಸ್ವಾಮಿಯವರು "ಸಿದ್ಧಾಂತ ಶಿಖಾಮಣಿ ಸಮೀಕ್ಷಾ" ಎಂಬ ತಮ್ಮ ಪಿ.ಎಚ್.ಡಿ ಪ್ರಬಂಧವನ್ನು ಪ್ರಕಟಿಸಿ ಸಿದ್ಧಾಂತ ಶಿಖಾಮಣಿಯು ರಾಮಾಯಣಕ್ಕಿಂತ ಹಳೆಯ ಗ್ರಂಥ ಎಂಬ ಅಭಿಪ್ರಾಯವನ್ನು ತೇಲಿಬಿಟ್ಟರು. ಆಗ ಪೇಚಿಗೆ ಸಿಲುಕಿದ ಚಿದಾನಂದ ಮೂರ್ತಿಯವರು ೨೦೦೦ದಲ್ಲಿ "ವೀರಶೈವಧರ್ಮ:ಭಾರತೀಯ ಸಂಸ್ಕೃತಿ" ಎಂಬ ಇನ್ನೊಂದು ಗ್ರಂಥವನ್ನು ಬರೆದರು. ಅದರಲ್ಲಿ ಅವರ ಅಭಿಪ್ರಾಯ ಹೀಗಿದೆ: 'ನಾನೇನೋ ಸಿದ್ಧಾಂತ ಶಿಖಾಮಣಿ ಕರ್ತೃ ಬಸವನ ಹಿರಿಯ ಸಮಕಾಲೀನನೆಂದು, ಅದು ಬಸವನ ಕಾಲದಲ್ಲೇ ರಚಿತವಾಗಿದ್ದು, ಬಸವನ ಅಧ್ಯಯನಕ್ಕೆ ಲಭ್ಯವಾಗಿತ್ತೆಂದು ಸಾಧಾರವಾಗಿ ತರ್ಕಿಸಿದ್ದೇನೆ' ಹೀಗಿದೆ ಅವರ ಬೌದ್ಧಿಕ ಪ್ರಾಮಾಣಿಕತೆ!
ಉಪಜಾತಿಯ ಅಭಿಮಾನ ಮತ್ತು ಗುರುಸೇವಾ ಬಾವನೆಗಳು ಅವರು ಉಲ್ಟಾ ಹೊಡೆಯಲು ಕಾರಣವಾಗಿರಬಹುದು! ೨೦೦೩ರಲ್ಲಿ ಕಾಶೀ ಶ್ರೀಗಳ ಮತ್ತು ಚಿದಾನಂದ ಮೂರ್ತಿಯವರ ಬದಲಾದ ಅಭಿಪ್ರಾಯವು ಸಂಪೂರ್ಣವಾಗಿ ಸತ್ಯಕ್ಕೆ ದೂರವೆಂದು ಕುಂದೂರಿನ ಇಮ್ಮಡಿ ಶಿವಬಸವ ಶ್ರೀಗಳು ತಮ್ಮ 'ಸಿದ್ಧಾಂತ ಶಿಖಾಮಣಿ ಹಾಗೂ ಶ್ರೀಕರಭಾಷ್ಯ ನಿಜದ ನಿಲುವು' ಎಂಬ ಗ್ರಂಥದಲ್ಲಿ ಸಿದ್ಧಪಡಿಸಿದ್ದಾರೆ.

ಡಾ.ಚಿದಾನಂದ ಮೂರ್ತಿಯವರ ವಾದಗಳಿಗೆ ಉತ್ತರಿಸದಿದ್ದರೆ ಅವನ್ನು ನಾನು ಒಪ್ಪಿದ್ದೇನೆಂದು ಅರ್ಥೈಸುವ ಸಾಧ್ಯತೆಯಿದೆ. ಅವರು ಕನ್ನಡ ಸಾಹಿತ್ಯದ ಮಹಾನ್ ಸಂಶೋಧಕರು. ಆದ್ದರಿಂದ ಸಾರ್ವಜನಿಕರು ಅವರ ವಾದವು ಸತ್ಯವೆಂದು ತುಳಿಯುವ ಸಾಧ್ಯತೆಯೂ ಇದೆ. ತದ್ವಿರುದ್ಧವಾಗಿ, ಅವರ ವಾದದ ಪ್ರತಿಯೊಂದು ಬಿಂದುವೂ ಸತ್ಯಕ್ಕೆ ಮಾಡುತ್ತಿರುವ ಘೋರ ಅನ್ಯಾಯವಾಗಿದೆ. ೨೦೦೦ದಿಂದ ಬಸವಣ್ಣನ ಬಗ್ಗೆ ಅವರು ಅದೇ ತರಹದ ವಾದಗಳನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಸುಳ್ಳೊಂದನ್ನು ಪದೇ ಪದೇ ನೂರಾರು ಸಲ ಹೇಳಿದರೆ ಅದನ್ನು ಜನರು ಸತ್ಯವೆಂದು ನಂಬುತ್ತಾರೆ ಎಂದು ಅವರು ನಂಬಿದಂತಿದೆ.

ಡಾ.ಚಿದಾನಂದ ಮೂರ್ತಿಯವರು ನನಗೆ ಕಳಿಸಿದ ಪತ್ರದಲ್ಲಿ ಅವರ ಸ್ವತಂತ್ರವಾದ ವಾದಗಳೇ ಇಲ್ಲ! ಬದಲಿಗೆ ಅದರ ಎರಡು ಮೂರಾಂಶ ಭಾಗವು ಮಠಾಧಿಪತಿಗಳ ಮತ್ತು ಕೆಲವು ಪ್ರಸಿದ್ಧ ವ್ಯಕ್ತಿಗಳ ಅಭಿಪ್ರಾಯಗಳನ್ನು ಹೊಂದಿದೆ. ಪ್ರಮುಖ ಮಠಾಧಿಪತಿಗಳಲ್ಲಿ ರಂಭಾಪುರಿ ಪೀಠದ ಪೂಜ್ಯ ಪ್ರಸನ್ನ ರೇಣುಕರ ಹೇಳಿಕೆ, ಕೇದಾರ ಪೀಠದ ಪೂಜ್ಯ ರಾವಳ್ ಭೀಮಾಶಂಕರ ಸ್ವಾಮಿಗಳ ಹೇಳಿಕೆ,ಕಾಶೀ ಪೀಠದ ಪೂಜ್ಯ ಚಂದ್ರಶೇಖರ ಶಿವಾಚಾರ್ಯರ ಹೇಳಿಕೆ, ಶ್ರೀಶೈಲ ಪೀಠದ ಪೂಜ್ಯ ಉಮಾಪತಿ ಪಂಡಿತಾರಾಧ್ಯರ ಹೇಳಿಕೆ, ದಾವಣಗೆರೆ ಪೂಜ್ಯ ಸದ್ಯೋಜಾತ ಸ್ವಾಮಿಗಳ ಹೇಳಿಕೆ,ಪೂಜ್ಯ ಲಿಂಗೈಕ್ಯ ಹಾನಗಲ್ ಕುಮಾರಸ್ವಾಮಿಗಳ ಹೇಲಕಿಕೆ, ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿಗಳ ಹೇಳಿಕೆ,ದಿವಂಗತ ಸಿದ್ದಯ್ಯ ಪುರಾಣಿಕರ ಹೇಳಿಕೆಗಳಿವೆ. ಇವರೆಲ್ಲರೂ ಪಂಚಪೀಠಗಳಿಗೆ ಸಂಬಂದಿಸಿದವರೆಂದು ಬೇರೆ ಹೇಳಬೇಕಿಲ್ಲ. ಅವರೇ ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎಂದು ಹೇಳುವವರು. ಪಂಚಾಚಾರ್ಯರೇ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರೆಂದೂ, ಲಿಂಗಾಯತವು ಹಿಂದೂ ಧರ್ಮದ ಒಂದು ಭಾಗವೆಂದೂ, ಲಿಂಗಾಯತರು ವೇದ,ಆಗಮ,ಉಪನಿಷತ್ತು,ಬ್ರಾಹ್ಮಣಕ, ಅರಣ್ಯಕಗಳನ್ನು ಒಪ್ಪುತ್ತಾರೆಂದೂ ವಾದಿಸುವವರು ಮತ್ತು ಉಪಜಾತಿಯಿಂದ ಜಂಗಮರು. ಡಾ.ಚಿದಾನಂದ ಮೂರ್ತಿಗಳು ಅದೇ ಗುಂಪಿನವರೆಂಬುದು ಬಹುತೇಕರಿಗೆ ಗೊತ್ತಿದೆ. ಇದು ಓತಿಕಾಟದ ಜಗಳದಲ್ಲಿ ಬೇಲಿಯೇ ಓತಿಕಾಟಿಗೆ ಸಾಕ್ಷಿಯೆಂಬಂತೆ ಭಾಸವಾಗುತ್ತಿದೆ!.

ವೀರಶೈವ / ಲಿಂಗಾಯತರಲ್ಲದ ಕೆಲವು ಗಣ್ಯರ ಹೇಳಿಕೆಗಳನ್ನೂ ಮೂರ್ತಿಯವರು ನೀಡಿದ್ದಾರೆ. ಬಹಳ ವಿಚಿತ್ರವೆಂದರೆ ಸ್ವಾಮಿ ವಿವೇಕಾನಂದರ ಹೇಳಿಕೆ,ಗಾಂದೀಜಿಯವರ ಹೇಳಿಕೆ,ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರ ಹೇಳಿಕೆ, ಪೂಜ್ಯ ಶ್ರೀ ಬಾಲಗಂಗಾದರನಾಥ ಸ್ವಾಮಿಗಳ ಹೇಳಿಕೆ, ಪೂಜ್ಯ ಶ್ರೀ ಪೇಜಾವರ ಸ್ವಾಮಿಗಳ ಹೇಳಿಕೆ, ಶ್ರೀ ಶಿವರಾಮ ಕಾರಂತರ ಹೇಳಿಕೆ, ಶ್ರೀ ಆಲೂರು ವೆಂಕಟರಾವ್ ಅವರ ಹೇಳಿಕೆ, ರಾಮಕೃಷ್ಣ ಆಶ್ರಮದ ಸ್ವಾಮಿ ಹರ್ಷಾನಂದ ಅವರ ಹೇಳಿಕೆಗಳು ಯಾವುದೇ ರೀತಿಯಲ್ಲಿ ಲಿಂಗಾಯತಕ್ಕೆ ಅಥವಾ ವೀರಶೈವಕ್ಕೆ ಅಥವಾ ಹಿಂದೂ ಧರ್ಮ ಮತ್ತು ಲಿಂಗಾಯತ ಧರ್ಮದ ನಡುವಿನ ಸಂಬಂಧಕ್ಕೆ ಸಂಬಂದಿಸಿದೆಯೇ ಇಲ್ಲ. ಅವರೆಲ್ಲ ಕೇವಲ ಹಿಂದೂ ಧರ್ಮದ ವಿಶೇಷತೆಗಳನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಹಾಡಿಹೊಗಳಿದ್ದಾರೆಯೇ ಹೊರತು ಲಿಂಗಾಯತ / ವೀರಶೈವ ಧರ್ಮ ಮತ್ತು ಹಿಂದೂ ಧರ್ಮಗಳನ್ನು ಕುರಿತು ತುಲನಾತ್ಮಕವಾಗಿ ಅವರ್ಯಾರೂ ಚಕಾರ ಶಬ್ದವನ್ನೂ ಎತ್ತಿದ್ದು ಆ ಉದ್ಧರಣಗಳಲ್ಲಿ ಇಲ್ಲವೇ ಇಲ್ಲ! ಆದ್ದರಿಂದ ಅವುಗಳ ವಿಶ್ಲೇಷಣೆ ಅನಗತ್ಯ.

ಆದರೆ ಮುಖ್ಯ ಪ್ರಶ್ನೆಗಳಿಗೆ ಸಂಬಂಧವೇ ಇಲ್ಲದ ಇಂತಹ ಉದ್ಧರಣಗಳನ್ನು ಡಾ.ಚಿದಾನಂದ ಮೂರ್ತಿಯವರು ಏಕೆ ನೀಡಿದ್ದಾರೆ? ಉತ್ತರ ಜಹಳ ಸರಳ ತಮ್ಮ ಅಪಾರವಾದ ಓದಿನ ಪ್ರದರ್ಶನ ಮತ್ತು ಅಮಾಯಕರನ್ನು ದಾರಿ ತಪ್ಪಿಸುವ ಉದ್ದೇಶ ಅವರಲ್ಲಿದೆ ಎನ್ನದೇ ಗತಿಯಿಲ್ಲ. ಲ್ಯಾಟಿನ್ ಭಾಷೆಯಲ್ಲಿ ಇಂಥ, ವಾದಕ್ಕೆ 'ಆರ್ಗ್ಯುಮೆಂಟಮ್ ಎಡ್ ಹಾಮಿನಲ್' ಎನ್ನುತ್ತಾರೆ. ಅಭಿಪ್ರಾಯವನ್ನು ವಿಶ್ಲೇಷಿಸಿ ಅರ್ಥೈಸಿ ಒಪ್ಪಬೇಕೇ ಹೊರತು ಯಾರ ಅಭಿಪ್ರಾಯವಿದು ಎಂಬುದನ್ನು ನೋಡಿ ಒಪ್ಪುವುದು ಅಥವಾ ತಿರಸ್ಕರಿಸುವುದು ಬುದ್ದಿವಂತರ ಲಕ್ಷಣವಲ್ಲ.

ವೀರಶೈವರು ಪಂಚಾಚಾರ್ಯರು ಹೇಳುವಂತೆ ಹಿಂದೂ ಧರ್ಮದ ಭಾಗವಾಗಿದ್ದರೆ ಅದು ಎಂದು ಲಿಂಗಾಯತವಾಗದು. ಲಿಂಗಾಯತ-ವೀರಶೈವ ದ್ವಂದ್ವದ ಸಮಸ್ಯೆ ಇಂದು ನಿನ್ನೆಯದಲ್ಲ: ಅದು ಆರು ಶತಮಾನಗಳಿಂದ ಅಂತ್ಯ ಕಾಣದ ಸಮಸ್ಯೆ. ಆ ಸಮಸ್ಯೆಯನ್ನು ಸೃಷ್ಟಿಸಿದವರು ವಿವಿದ ಪ್ರಕಾರದ ಹಿಂದೂ ಶೈವ ಪಂಥಗಳಿಂದ ಬಂದು ಬಸವಣ್ಣನ *ಲಿಂಗಾಯತ*ವನ್ನು ಸೇರಿದ ಜನರು. ಅವರಲ್ಲಿ ಕಾಳಾಮುಖಿಗಳು,ಪಾಶುಪತ್ಯರು,ಕಾಪಾಲಿಕರು,ಲಕುಲೀಶರು,ಕೆಲವು ನಾಥಪಂಥಿಗಳು, ಮತ್ತು ಆಂದ್ರದ ಆರಾಧ್ಯ ಶೈವ ಬ್ರಾಹ್ಮಣರು ಪ್ರಮುಖರು. ಆದರೆ ೧೫ನೇ ಶತಮಾನದ ಅಂತ್ಯದ ಸುಮಾರಿಗೆ ಮೇಲೆ ತಿಳಿಸಿದ ಮೊದಲನೆಯ ಐದು ಪಂಥಿಕರು ಜಹುತೇಕ ಬಸವಣ್ಣನವರನ್ನು ಸಂಪೂರ್ಣ ಒಪ್ಪಿಕೊಂಡು ತಮ್ಮ ಮೂಲ ರೂಪವನ್ನು ಕಳೆದುಕೊಂಡು ಲಿಂಗಾಯತದ ಇಂದಿನ *ವಿರಕ್ತ ಮಠ*ಗಳಾಗಿ ಪರಿವರ್ತನೆಗೊಂಡರು. ಆದ್ದರಿಂದಲೇ ವಿರಕ್ತ ಮಠಗಳು ಹೆಚ್ಚಾಗಿ ಬಸವಣ್ಣನವರ ತತ್ವಗಳನ್ನು ಪಾಲಿಸುತ್ತಿವೆ ಮತ್ತು ವೀರಶೈವರ ಪಂಚಾಚಾರವನ್ನು ಆದಷ್ಟು ಮಟ್ಟಿಗೆ ಬದಿಗಿಡಲು ಪ್ರಯತ್ನಿಸುತ್ತವೆ. ಆದ್ದರಿಂದಲೇ ಉದ್ಭವವಾಗಿದ್ದು ಗುರು-ವಿರಕ್ತರ ಸಮಸ್ಯೆ!.

ಆದರೆ ಆಂಧ್ರದ ಆರಾಧ್ಯ ಬ್ರಾಹ್ಮಣರು ತಮ್ಮ ಮೂಲ ಬ್ರಾಹ್ಮಣ್ಯವನ್ನೂ ಬಿಡದೇ, ಬಸವಣ್ಣ ಮತ್ತು ಶರಣರು ಸ್ಥಾಪಿಸಿದ *ಲಿಂಗಾಯತ*ವನ್ನೂ ಪರಿಪೂರ್ಣವಾಗಿ ಪಾಲಿಸದೇ ಎರಡನ್ನೂ ಸೇರಿಸಿ ಬಸವ ಧರ್ಮವನ್ನು ಹದಗೆಡಿಸಿಬಿಟ್ಟರು. ತಮ್ಮ ಪ್ರಾಬಲ್ಯವನ್ನು ಸಾಧಿಸಲು ಯಾವುದೇ ಐತಿಹಾಸಿಕ ಆಧಾರವಿಲ್ಲದ, ಕಟ್ಟುಕತೆಗಳನ್ನು ಆಧರಿಸಿದ ಪಂಚಪೀಠಗಳನ್ನು ಸೃಷ್ಠಿಸಿದರು. ವೀರಶೈವ ವೆಂಬ ಹೊಸ ವಾದವನ್ನು ನಿರ್ಮಿಸಿ ಕ್ಲಿಷ್ಟ ಸಮಸ್ಯೆಗಳ್ನು ಸೃಷ್ಟಿಸಿದ್ದಾರೆ. ವಿರಕ್ತ ಮಠಗಳ ಯತಿಗಳನ್ನೂ ದಾರಿ ತಪ್ಪಿಸುವ ಕಾರ್ಯಗಳನ್ನು ಇಪ್ಪತ್ತನೆಯ ಶತಮಾನದ ಆದಿಯಿಂದ ಪಂಚಪೀಠದ ಪ್ರವರ್ತಕರು ಪ್ರಾರಂಭಿಸಿದ್ದಾರೆ. ಅದು ಹೇಗೆ ಎಂಬುದನ್ನು ಮುಂದೆ ವಿಶ್ಲೇಷಿಸಲಾಗಿದೆ. ಅವರು ನಿರ್ಮಿಸಿದ ಅಧ್ವಾನಗಳು ಹೇಗಿವೆ ನೋಡಿ:

(೧) *ವೇದಕ್ಕೆ ಒರೆಯ ಕಟ್ಟುವೆ,ಶಾಸ್ತ್ರಕ್ಕೆ ನಿಗಳನಿಕ್ಕುವೆ,ಆಗಮದ ಮೂಗ ಕೊಯ್ಯುವೆ* ಎಂದವರು ಬಸವಣ್ಣನವರು. ಮುಂದುವರಿದು *ವೇದವೆಂಬುದು ಓದಿನ ಮಾತು, ಪುರಾಣವೆಂಬುದು ಪುಂಡರ ಗೋಷ್ಠಿ* ಎಂದವರೂ ಶರಣರೇ. *ಸ್ಮೃತಿಗಳು ಸಮುದ್ರದ ಪಾಲಾಗಲಿ, ಶ್ರುತಿಗಳು ವೈಕುಂಟವ ಸೇರಲಿ, ಆಗಮಗಳು ವಾಯುವ ಹೊಂದಲಿ, ಎಮ್ಮ ನುಡಿ ಮಹಾಲಿಂಗದ ಗ್ರಂಥಿಯಾಗಲಿ* ಎಂದಿದ್ದ ಸಿದ್ದರಾಮಯ್ಯನವರ ಧರ್ಮದಲ್ಲಿ ವೇದ,ಆಗಮ,ಶಾಸ್ತ್ರ,ಪುರಾಣ,ಉಪನಿಷತ್ತುಗಳನ್ನು ಪಂಚಪೀಠಗಳು ಸೇರಿಸಿಬಿಟ್ಟವು. ಆದ್ದರಿಂದಲೇ ವೇದ ಮತ್ತು ಶೈವಾಗಮಗಳನ್ನು ಆಧರಿಸಿದ ಸಿದ್ದಾಂತ ಶಿಖಾಮಣಿಯನ್ನು ತಮ್ಮ ಮೂಲ ಗ್ರಂಥವೆಂದು ಅವರು ವಾದಿಸುತ್ತಾರೆ. ಅದು ೧೪ನೇ ಶತಮಾನದಲ್ಲಿ ಬರೆದ ಗ್ರಂಥವೆಂಬುದಕ್ಕೆ ಆ ಗ್ರಂಥದಲ್ಲಿ ಅದರ ಲೇಖಕರು ನೀಡಿದ ಆಧಾರಗಳೇ ಸಾಕು!.

(೨) *ವರ್ಣಾಶ್ರಮ* ಸಿದ್ಧಾಂತವನ್ನು ಆಧರಿಸಿದ *ಜಾತಿ* ಪದ್ಧತಿಯನ್ನೂ, ಜಾತಿಯನ್ನು ಆಧರಿಸಿದ ಕರ್ಮ ಸಿದ್ಧಾಂತವನ್ನೂ, ಕರ್ಮ ಸಿದ್ಧಾಂತವನ್ನು ಆಧರಿಸಿದ *ಪಾಪ* ಮತ್ತು *ಪುಣ್ಯ*ಗಳನ್ನೂ, ಪಾಪ ಪುಣ್ಯಗಳನ್ನು ಆಧರಿಸಿದ *ಸ್ವರ್ಗ* ಮತ್ತು *ನರಕ*ಗಳನ್ನೂ, ಸ್ವರ್ಗ-ನರಕಗಳನ್ನು ಆಧರಿಸಿದ *ಜನ್ಮ-ಪುನರ್ಜನ್ಮ*ಗಳನ್ನೂ ಲಿಂಗಾಯತವು ಸಂಪೂರ್ಣವಾಗಿ ತಿರಸ್ಕರಿಸುತ್ತದೆ. ಇವುಗಳಿಗೆ ಸಂಬ ಂದಿಸಿದ ಭಾಷೆ ಹೇಗಿದೆ ನೋಡಿ: *ಮರ್ಮವನ್ನು ಅರಿದವಂಗೆ ಕರ್ಮವಿಲ್ಲ* ಎಂದವರು ಚೆನ್ನಬಸವಣ್ಣನವರು. *ಮನದೊಳಗೆ ಘನ ವೇದ್ಯವಾದ ಬಳಿಕ ಪುಣ್ಯವಿಲ್ಲ ಪಾಪವಿಲ್ಲ* ಅಲ್ಲಮಪ್ರಭುದೇವರ ಊವಾಚ. ಬಸವಣ್ಣನವರು ಹೇಳಿದ್ದು *ಇಹಲೋಕ ಪರಲೋಕ ಬೇರಿಲ್ಲ ಕಾಣಿರೋ, ಸತ್ಯವ ನುಡಿವುದೇ ಸ್ವರ್ಗಲೋಕ, ಮಿತ್ಯವ ನುಡಿವುದೇ ನರಕಲೋಕ*. *ಇಹಲೋಕವೆಂದೇನು ಪರಲೋಕವೆಂದೇನು..... ನಾನು ನೀನಾದ ಬಳಿಕ* ಎಂಬುದು ಸಿದ್ದರಾಮೇಶ್ವರರ ನಂಬಿಕೆ. *ಇಹಲೋಕ ಪರಲೋಕ ತಾನಿರ್ದಲ್ಲಿ* ಎಂಬುದು ಮತ್ತೆ ಅಲ್ಲಮಪ್ರಭುದೇವರ ಮಾತು. *ಹುಟ್ಡುವಾತ ನಾನಲ್ಲವಯ್ಯಾ, ಹೊಂದುವಾತ ನಾನಲ್ಲವಯ್ಯಾ, ನಿಜನರಿದ ಬಳಿಕ ಮತ್ತೆ ಹುಟ್ಟಲುಂಟೆ?.* ಎಂಬುದು ಆದಯ್ಯನವರ ವಾದ. ಹೀಗೆ ಶರಣರು ಹಿಂದೂ ಧರ್ಮದ ಮೂಲ ತತ್ವಗಳನ್ನೇ ತಿರಸ್ಕರಿಸಿದವರು. ಅವರೇ *ಲಿಂಗಾಯತ*ದ ಸಂಸ್ಥಾಪಕರು.

ಆದರೆ ವೇದ ಪ್ರಣೀತ ವರ್ಣಾಶ್ರಮ ಧರ್ಮದಿಂದ ಹುಟ್ಟಿದ ಕರ್ಮಸಿದ್ಧಾಂತವನ್ನು, ಅದರಿಂದ ಹುಟ್ಟಿದ ಜಾತಿ ಪದ್ಧತಿಯನ್ನು, ಕರ್ಮ ಸಿದ್ಧಾಂತದಿಂದ ಹುಟ್ಟಿದ ಪಾಪ ಪುಣ್ಯಗಳನ್ನು, ಪಾಪ-ಪುಣ್ಯಗಳಿಂದ ಹುಟ್ಟಿದ ಸ್ವರ್ಗ ನರಕಗಳನ್ನು, ಸ್ವರ್ಗ-ನರಕಗಳಿಂದ ಹುಟ್ಟಿದ ಜನ್ಮ-ಪುನರ್ಜನ್ಮಗಳನ್ನು ನಂಬುವ ಹಿಂದೂ ಧರ್ಮವು ಮತ್ತು ಅವೆಲ್ಲವುಗಳಿಗೆ ಆಧಾರವಾದ ವೇದ ಆಗಮಗಳು ವೀರಶೈವರಿಗೆ ಸರ್ವಸಾಮಾನ್ಯವಾಗಿವೆ ಎಂದು ನಮ್ಮ ಘನ ವಿದ್ವಾಂಸರಾದ ಡಾ.ಚಿದಾನಂದ ಮೂರ್ತಿಯವರು ಮತ್ತು ಅವರ ಪಂಚಪೀಠಾಧ್ಯಕ್ಷರುಗಳೂ ಬಹಳ ಭಾವುಕರಾಗಿ ವಾದಿಸುತ್ತಾರೆ. ಹಾಗಾದರೆ ಲಿಂಗಾಯತ ಮತ್ತು ವೀರಶೈವ ಎರಡೂ ಒಂದೇ ಎಂಬುದು ಹೇಗೆ ಸಾಧ್ಯ?! ಇದು ಪೂರ್ವ-ಪಶ್ಚಿಮಗಳನ್ನು ಒಂದುಗೂಡಿಸುವಂತೆ ಕಾಣುತ್ತದೆ! ಈ ಹಿನ್ನೆಲೆಯಲ್ಲಿ ಬಸವಣ್ಣನವರ ಶುದ್ಧ *ಲಿಂಗಾಯತ*ವನ್ನು ಅಶುದ್ಧಗೊಳಿಸಿದವರು ಯಾರು? ಆ ಮೂಲಕ ಈಗಿನ ಆಂತರಿಕ ವೈರುಧ್ಯಗಳಿಗೆ ಗೊಂದಲಗಳಿಗೆ ಕಾರಣರಾದವರು ಯಾರು ಎಂಬುದು ಸ್ಪಷ್ಟವಾಗಬಹುದಲ್ಲವೇ?.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚಿದಾನಂದ ಮೂರ್ತಿಯವರು *೧೯೦೪ರಷದಟು ಹಿಂದೆಯೇ ವೀರಶೈವ ಮಹಾಸಭೆಯು 'ವೀರಶೈವರು ಹಿಂದೂಗಳು' ಎಂಬ ನಿರ್ಣಯ ತೆಗೆದುಕೊಂಡಿತ್ತು..... ಆದರೆ ೧೯೪೦ರಲ್ಲಿ ಅದೇ ಮಹಾಸಭೆಯು ಉಲ್ಟಾಹೊಡೆದು ವೀರಶೈವರು ಹಿಂದೂಗಳಲ್ಲವೆಂದು ನಿರ್ಣಯ ಕೈಗೊಂಡಿತು* ಎಂದು ಬರೆದಿದ್ದಾರೆ. ಹೌದು, ೧೯೦೪ರ ನಿರ್ಣಯಕ್ಕೆ ಯಾರು ಕಾರಣರು ಮತ್ತು ಯಾಕೆ ಎಂಬುದನ್ನು ಐತಿಹಾಸಿಕ ಸಂದರ್ಭಗಳ ಮಾಹಿತಿಯೊಂದಿಗೆ ಮುಂದೆ ವಿವರ ನೀಡಿದ್ದೇನೆ.

ಮುಂದುವರಿದು, ಚಿದಾನಂದ ಮೂರ್ತಿಯವರು ಹಡಪದ ಸಮಾಜದವರು, ಶಿವಾಚಾರದ ನಗರ್ತರು, ತಲಕಾಡಿನ ವೆಲ್ಲಾಳ ಗೌಡರು, ವಾಲ್ಮೀಕಿ ಸಮಾಜದ ಹಿರಿಯರು, ೨೦೦೫ರ ಜಾತಿ ಜನಗಣತಿಯಲ್ಲಿ ತಮ್ಮನ್ನು ಹಿಂದೂ ಎಂದು ಬರೆಸಲು ಒತ್ತಾಯಿಸಿದ್ದರು. ವೀರಶೈವರ ಕಾಶೀಪೀಠದ ಶ್ರೀಗಳು ಮತ್ತು ಜಂಗಮರೂ ಅದೇ ಬೇಡಿಕೆಯನ್ನು ಬೆಂಬಲಿಸಿದ್ದರು ಎಂದು ಬರೆದಿದ್ದಾರೆ. ಹೌದು, ಆದರೆ ಅಂಥ ಕೆಳಜಾತಿಯವರನ್ನು ವೀರಶೈವರು ಹೇಗೆ ನಡೆಸಿಕೊಂಡರು ಮತ್ತು ಯಾಕೆ ಎಂಬುದನ್ನೂ ಮುಂದೆ ವಿವರಿಸಿದ್ದೇನೆ.

ಇವಲ್ಲದೆ ಜಾತಿ ಜನಗಣತಿಯ ಬಗ್ಗೆ ನಾನು ಪ್ರಜಾವಾಣಿ ೧೯-೨-೨೦೧೫ರಂದು ಮತ್ತು ೧೬-೦೩-೨೦೧೫ರಂದು ಹಾಗೂ ೨೦-೦೫-೨೦೧೬(ಕೊಪ್ಪಳ) ಬರೆದ ಲೇಖನಗಳಲ್ಲಿ ಜಾತಿ ಜನಗಣತಿಗೆ ಲಿಂಗಾಯತರು ಯಾಕೆ ವಿರೋದಿಸುತ್ತಾರೆ ಎಂಬ ಬಗ್ಗೆ ಇನ್ನಷ್ಟು ಕಾರಣಗಳನ್ನು ನೀಡಿದ್ದನ್ನು ನೋಡಬಹುದು.

(೩) ೧೪ನೇ ಶತಮಾನದಿಂದ ಮೇಲೆ ವಿವರಿಸಿದ ಗೊಂದಲಗಳನ್ನು ಸೃಷ್ಟಿಸಿದವರು ಪಂಚಾಚಾರ್ಯರು. ಲಿಂಗಾಯತದಲ್ಲಿ ಲಿಂಗಧಾರಣವನ್ನು "ಸೂತ್ರಗಳ" ಮಟ್ಟಕ್ಕೆ ಮುಟ್ಟಿಸಿ ಅದಕ್ಕೆ ಪುರೋಹಿತಶಾಹಿಯನ್ನು ಸೃಷ್ಟಿಸಿದವರು ("ಲಿಂಗಧಾರಣ ಚಂದ್ರಿಕೆ"ಯಂತಹ ಗ್ರಂಥಗಳ ಮೂಲಕ) ಆರಾಧ್ಯ ಬ್ರಾಹ್ಮಣರು. ಬಸವಣ್ಣ ಯಾರಿಗೂ ಲಿಂಗ ಕಟ್ಟಲಿಲ್ಲ(ಒಬ್ಬನನ್ನು ಬಿಟ್ಟು). ಕಟ್ಟಿಕೊಳ್ಳಲು ಯಾರಿಗೂ ಒತ್ತಾಯ ಮಾಡಲಿಲ್ಲ. ತೋಳೊನ ಬಲದಿಂದ *ಲಿಂಗಾಯತ ಧರ್ಮ*ವು ಹುಟ್ಟಲಿಲ್ಲ. ಆದರೆ ತೋಳ್ಬಲದಿಂದ ಅದನ್ನು ನಿರ್ಣಾಮ ಮಾಡುವ ಪ್ರಯತ್ನಗಳು ನಡೆದವು.

ಬಸವಣ್ಣನವರು ಯಾವುದೇ ಮಠಗಳನ್ನು ಸ್ಥಾಪಿಸಲಿಲ್ಲ. ಯಾವ ಮಠದ ಮುಖ್ಯಸ್ಥರೂ ಅವರಲ್ಲ. ಅನುಭವಮಂಟಪಕ್ಕೆ ಅಲ್ಲಮರನ್ನು ಅಧ್ಯಕ್ಷರನ್ನಾಗಿ ಮಾಡಿದ ಬಸವಣ್ಣನವರ ಮನೋಭೂಮಿಕೆಯನ್ನು ಗಮನಿಸಬೇಕು. ೧೫ನೇ ಶರಮಾನದ 'ಶೂನ್ಯ ಸಂಪಾದನೆ'ಯಲ್ಲಿ ಬರುವ ಮಠಗಳೆಲ್ಲವೂ ಬಸವಣ್ಣನವರ ನಂತರ ಲಿಂಗಾಯತವನ್ನು ಸೇರಿದವರ ಮಠಗಳು.

ಬಸವಣ್ಣನವರ 'ಜಂಗಮ'ವನ್ನು ಜಾತಿಯ ರೂಪಕ್ಕೆ ತಿರುಗಿಸಿ, ಆ ಜಾತಿಯವರಿಗೆ ಪುರೋಹಿತಶಾಹಿಯ ಅಧಿಕಾರವನ್ನು ನೀಡಿದವರು ಪಂಚಾಚಾರ್ಯರು. ಬಸವಣ್ಣನವರು ಪುರೋಹಿತಶಾಹಿಯನ್ನು ಬಗ್ಗುಬಡಿದರೆ, ಪಂಚಪೀಠಗಳು ತಮ್ಮದೇ ಆದ ಪುರೋಹಿತಶಾಹಿಯನ್ನು ಸೃಷ್ಟಿಸಿ ಅವರಿಗೆ 'ಪಟ್ಟದ ದೇವರು' 'ಶಾಖಾ ಮಠಗಳು' ಇತ್ಯಾದಿ ಹೆಸರಿಟ್ಟರು. ಅವರ ಅನುಯಾಯಿಗಳಿಗೆ 'ಪೂಜ್ಯವಾನ' ಆದವರು ಪಂಚಪೀಠಗಳಿಗೆ ವಿಧೇಯರಾದ ಇಂದಿನ ಹಿರೇಮಠ, ಚಿಕ್ಕಮಠದ ಸ್ವಾಮಿಗಳು!.

(೪) ವಿಜಯನಗರದ ಅರಸರ ಕಾಲದಿಂದ (೧೪ನೇ ಶತಮಾನ) ಸುಮಾರು ೧೯೪೦ರವರೆಗೆ ಐದು ಶತಮಾನಗಳಲ್ಲಿ ಪಂಚಾಚಾರ್ಯರು *ಲಿಂಗಾಯತ ಧರ್ಮೀಯರನ್ನು* ಎಂಥ ಅಂದಕಾರಕ್ಕೆ ತಳ್ಳಿದರೆಂದರೆ ತಾವೆಲ್ಲಾ ಹಿಂದೂ ಧರ್ಮದ ಅನುಯಾಯಿಗಳೇ ಎಂದು ನಂಬಿದ್ದರು ಮತ್ತು ಆ ಧರ್ಮದ ಎಲ್ಲಾ ಅನಾಚಾರಗಳನ್ನು ಆಚರಿಸುತ್ತಿದ್ದರು. ಸುಮಹೂರ್ತ, ಹಿಂದೂಹಬ್ಬಹುಣ್ಣಿಮೆಗಳು, ಮಡಿ-ಮೈಲಿಗೆಗಳನ್ನು ನಂಬುತ್ತಿದ್ದರು. ೧೮೮೦ರ ಸುಮಾರಿಗೆ ಮೈಸೂರಿನ *ಲಿಂಗಾಯತರು* ತಾವೂ ಬ್ರಾಹ್ಮಣರೆಂದು ವಾದಿಸತೊಡಗಿದರು. *ಆದರೆ ಅದನ್ನು ಬ್ರಾಹ್ಮಣರು ಒಪ್ಪುತ್ತಿರಲಿಲ್ಲ*. ಕ್ಷೌರಿಕರು,ಮಾದಿಗರು,ಸಮಗಾರರು ಲಿಂಗಾಯತರಾಗಿರುವಾಗ ನೀವೆಂಥ ಬ್ರಾಹ್ಮಣರೆಂದು ಅಂದಿನ ಶುಭೋದಯ ಪತ್ರಿಕೆಯಲ್ಲಿ *ಲಿಂಗಾಯತರನ್ನು* ಹೀಗಳೆಯುತ್ತಿದ್ದರು. ಆದ್ದರಿಂದ ಅಂದಿನ ಲಿಂಗಾಯತ ಮುಖಂಡರುಗಳಾದ ಎನ್.ಆರ್ ಕರಿಬಸವಶಾಸ್ತ್ರಿಗಳು, ಪಿ.ಆರ್ ಕರಿಬಸವಶಾಸ್ತ್ರಿಗಳು, ಯಜಮಾನ ವೀರಸಂಗಪ್ಪ ನವರಂಥವರು ಕೆಳವರ್ಗದ ಲಿಂಗಾಯತರು ಲಿಂಗಾಯತರಲ್ಲವೆಂದು ವಾದಿಸಿದ್ದರು ಎಂಬುದನ್ನು ಸ್ಟಾರ್ ಆಫ್ ಮೈಸೂರು ಪತ್ರಿಕೆ ದಾಖಲಿಸಿದೆ.

ವೀರಶೈವರಲ್ಲಿ ಕೆಳಜಾತಿಯ ಲಿಂಗಾಯತರು ವೀರಶೈವರಲ್ಲವೆಂಬ ಮೈಸೂರಿನ ಆರಾಧ್ಯರ ವಾದದ ಪರಿಣಾಮ ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದ ಬಹುಕಡೆ ವಿಸ್ತಾರವಾಯಿತು. ಇದು ಪಂಚಾಚಾರ್ಯರ ಮಹಿಮೆ. ಅದು ಮುಂದುವರೆಯಿತು, ಆದ್ದರಿಂದಲೇ ಹಡಪದ,ನಾಯಕ,ಮಡಿವಾಳ, ಗಾಣಿಗರಂಥ ಕೆಳಜಾತಿಯ ಲಿಂಗಾಯತರು ಹಿಂದೂ ಎಂದು ಜನಗಣತಿಯಲ್ಲಿ ಬರೆಸಲು ಮುಂದಾಗಿದ್ದರೆ ಅದಕ್ಕೆ ಕಾರಣ ಹಿಂದೂ ಧರ್ಮದ ಜಾತಿ ಪದ್ಧತಿಯನ್ನು ಲಿಂಗಾಯತರು ಮುಂದುವರೆಸಿ ಮೇಲೆ-ಕೆಳಗೆ ಎಂಬ ಬೇದಭಾವವನ್ನು ಅನುಸರಿಸುತ್ತಿರುವ ಚಿದಾನಂದ ಮೂರ್ತಿಯಂತವರು ಮತ್ತು ಅವರ ಪಂಚಪೀಠದ ಗುರುಗಳು! ಆದಾಗ್ಯೂ ಚಿದಾನಂದ ಮೂರ್ತಿಗಳು ಲಿಂಗಾಯತರು 'ಒಡೆದು ಆಳುವ' ನೀತಿಯನ್ನು ಅನುಸರಿಸುತ್ತಾರೆಂದು ಬರೆಯುವುದು ಒಂದು ವಿಪರ್ಯಾಸದ ವ್ಯಂಗ್ಯವಲ್ಲವೇ?


ಮೇಲೆ ತಿಳಿಸಿದ ಐತಿಹಾಸಿಕ ಕಾರಣಗಳಲ್ಲದೆ ದೇಶದ ಇಂದಿನ ವಿಚಿತ್ರ ಸನ್ನಿವೇಶದಲ್ಲಿ ತಮ್ಮನ್ನು ಹಿಂದೂ ಎಂದು ಬರೆಯಿಸಿ ಸರ್ಕಾರದಿಂದ ರಿಸರ್ವೇಶನ್ ಸೌಲಭ್ಯ ಪಡೆಯುವುದು ಕೆಳವರ್ಗದ ಲಿಂಗಾಯತರ ಮತ್ತು ಮೇಲ್ವರ್ಗದ ಜಂಗಮರ ಉದ್ದೇಶವಾಗಿತ್ತು.
ಆದರ ಜಂಗಮರು *ಬೇಡ ಜಂಗಮ*ರೆಂದು ರಿಜರ್ವೇಶನ್ ಉಳಿಸಲು ಹಂಬಲಿಸಿದರೆ *ಲಿಂಗಾಯತ ಧರ್ಮಕ್ಕೆ* ಏಕೆ ಅಂಟಿಕೊಂಡಿದ್ದಾರೆ? *ಕಾಶೀ ಶ್ರೀಗಳಿಗೆ *ಲಿಂಗಾಯತರು* *ಹಿಂದೂಗಳಾಗಿ ಉಳಿದರೆ ಮಾತ್ರ ಅವರ ಅಸ್ತಿತ್ವಕ್ಕೆ ಧಕ್ಕೆಯಿಲ್ಲ. ಲಿಂಗಾಯತರು ಲಿಂಗಾಯತರಾದರೆ ವೀರಶೈವಕ್ಕೆ ಮೂರು ಕವಡೆ ಬೆಲೆ ಇರುವುದಿಲ್ಲ. ಅಂತೂ ಸರ್ಕಾರದ 'ಒಡೆದು ಆಳುವ' ನೀತಿಗೆ ಕೈಗೂಡಿಸಿದವರು ಚಿದಾನಂದ ಮೂರ್ತಿಗಳು ಮತ್ತು ಅವರ ಪಂಚಪೀಠದ ಗುರುಗಳು!*

(೫) *ಲಿಂಗಾಯತರೂ ಬ್ರಾಹ್ಮಣರೆಂಬ ಹತ್ತೊಂಬತ್ತನೆಯ ಶತಮಾನದ ಕೊನೆಯ ಬಾಗದಿಂದ ಇಪ್ಪತ್ತನೆಯ ಶತಮಾನದ ಮಧ್ಯದ (೧೯೪೦) ವರೆಗಿನ ಹಿನ್ನೆಲೆಯಲ್ಲಿ ಎದ್ದು ಬಂದವರು ದಕ್ಷಿಣ ಮತ್ತು ಮಧ್ಯ ಕರ್ನಾಟಕದಲ್ಲಿ ಪೂಜ್ಯ ಶ್ರೀ ಹಾನಗಲ್ಲ ಕುಮಾರಸ್ವಾಮಿಗಳು ಮತ್ತು ಉತ್ತರಕರ್ನಾಟಕದಲ್ಲಿ ಕಾಶೀನಾಥ ಶಾಸ್ತ್ರಿಗಳು. ಅವರಿಬ್ಬರ ಉದ್ದೇಶವೆಂದರೆ ವೀರಶೈವ ಸಮಾಜವನ್ನು ಸಂಘಟಿಸುವುದು ಮತ್ತು ಪಂಚಾಚಾರ್ಯರ ತತ್ವಗಳನ್ನು ಸುಸಂಘಟಿತವಾಗಿ ಪ್ರಚಾರ ಮಾಡುವುದು. ಅದಕ್ಕಾಗಿ ಧಾರವಾಡ ಜಿಲ್ಲೆಯ ನಾಗನೂರಿನವರಾದ ಕಾಶೀನಾಥಶಾಸ್ತ್ರಿಗಳು ತಮ್ಮ ಉದ್ದೇಶಕ್ಕೆ ಹೆಚ್ಚು ಅವಕಾಶವಿರುವ ಮೈಸೂರಿನಲ್ಲಿ "ಪಂಚಾಚಾರ್ಯ ಎಲೆಕ್ಟ್ರಿಕ್ ಪ್ರೆಸ್" ಸ್ಥಾಪಿಸಿದರು. "ಪಂಚಾಚಾರ್ಯ ಪ್ರಭಾ" ಎಂಬ ನಿಯತಕಾಲಿಕವನ್ನು ಮತ್ತು ಕಾಶೀನಾಥ ಗ್ರಂಥಮಾಲಾ ಮಾಲಿಕೆಯನ್ನು ಪ್ರಾರಂಭಿಸಿದರು. ಅವುಗಳ ಮುಖ್ಯ ಉದ್ದೇಶವೆಂದರೆ ವಿರಕ್ತ ಮಠಗಳ ವಿರುದ್ದ ಇಲ್ಲಸಲ್ಲದ ಅನಾಗರಿಕ ಲೇಖನಗಳನ್ನು, ಗ್ರಂಥಗಳನ್ನು ಪ್ರಕಟಿಸುವುದು ಮತ್ತು ಪಂಚಾಚಾರ್ಯರನ್ನು ಪ್ರಸಿದ್ಧಗೊಳಿಸುವುದೇ ಆಗಿತ್ತು. ಇವರೇ ಸಿದ್ದಾಂತ ಶಿಖಾಮಣಿಯನ್ನು ತಮ್ಮ ಉದ್ದೇಶಕ್ಕೆ ತಕ್ಕಂತೆ ತಿದ್ದಿ ಬರೆದು ಪ್ರಚಾರ ಮಾಡಿದರು.*

*ಕಾಶೀನಾಥಶಾಸ್ತ್ರಿಗಳ ಪ್ರಚೋದನೆಯಿಂದ ಶಾಂತಪ್ಪ ಕುಬಸದ ಅವರು ಬರೆದ "ಬಸವಾದಿ ನಿಜತತ್ವ ಧರ್ಪಣವು" ಎಂಬ ಗ್ರಂಥದಲ್ಲಿ ಬಸವಣ್ಣನವರ ಮತ್ತು ಇತರ ಶರಣರ ವಿರುದ್ದ ೨೦೦ ಉದ್ಧಟ ಪ್ರಶ್ನೆಗಳನ್ನು ಕೇಳಲಾಗಿತ್ತು. ಆ ಅವಮಾನಕರ ಪುಸ್ತಕವನ್ನು ನಿರ್ಬಂದಿಸಲು ಧಾರವಾಡದ ಸಿದ್ದರಾಮಪ್ಪ ಪಾವಟೆಯವರು ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ದಾವೆ ಹೂಡಿ ಗೆದ್ದರು. ಆಗ ಗ್ರಂಥ ಕರ್ತರು ಕ್ಷಮೆಯಾಚಿಸಬೇಕಾಯಿತು. ಈ ದುಷ್ಟನ ನಿಜಜೀವನ ಚರಿತ್ರೆಯನ್ನು ಪಂಚಾಚಾರ್ಯ ಪ್ರೆಸ್ ನಲ್ಲಿ ಮ್ಯಾನೇಜರ್ ಆಗಿದ್ದ ಎನ್.ಗುಂಡಾಶಾಸ್ತ್ರಿ ಎಂಬವರು ಬರೆದಿದ್ದಾರೆ. ಇವೆಲ್ಲವೂ ಪಂಚಾಚಾರ್ಯರ ಆಶೀರ್ವಾದದಿಂದ ನಡೆದ ಕೃತ್ಯಗಳು!.*

(೬) *ಇನ್ನು ಪೂಜ್ಯ ಶ್ರೀ ಹಾನಗಲ್ ಕುಮಾರಸ್ವಾಮಿಗಳ ಬಗ್ಗೆ ಒಂದಿಷ್ಟು ಮಾಹಿತಿಗಳು ಅಗತ್ಯ. ಹೈದರಾಭಾದ್ ನಿಝಾಮನ ಆಡಳಿತಕ್ಕೊಳಪಟ್ಟ ಪರಳಿ ವೈಜನಾಥ ದೇವಸ್ಥಾನದಲ್ಲಿ (ಈಗ ಮಹಾರಾಷ್ಟ್ರದ ಬೀಡ ಜಿಲ್ಲೆಯಲ್ಲಿದೆ) ಪೂಜೆ ಮಾಡುತ್ತಿದ್ದ ಬ್ರಾಹ್ಮಣರ ಸ್ಥಾನಗಳಲ್ಲಿ ಲಿಂಗಾಯತರನ್ನು ನೇಮಿಸಬೇಕೆಂಬ ವಿವಾದ ನಿಝಾಮನ ಹೈಕೋರ್ಟ್ ಮಟ್ಟ ತಲುಪಿತ್ತು. ಆ ವ್ಯಾಜ್ಯದಲ್ಲಿ ಮುಖ್ಯ ವಾದವೆಂದರೆ ಲಿಂಗಾಯತರು "ಲಿಂಗೀ ಬ್ರಾಹ್ಮಣರು", ಆದ್ದರಿಂದ ವೈಜ್ಯನಾಥನ ಪೂಜೆ ಮಾಡುವ ಅಧಿಕಾರವನ್ನು ಲಿಂಗಾಯತರಿಗೆ ಕೊಡಬೇಕು ಎಂಬುದಾಗಿತ್ತು. ಇದು ಮೈಸೂರಿನ ಲಿಂಗಾಯತರಿಂದ ಪಡೆದ ಪ್ರೇರಣೆಯಿಂದ ಉದ್ಭವಿಸಿದ ವ್ಯಾಜ್ಯವಾಗಿತ್ತು. ಆ ವ್ಯಾಝ್ಯದ ಹಿನ್ನೆಲೆಯ ನಾಯಕರಲ್ಲಿ ಪೂಜ್ಯ ಹಾನಗಲ್ ಕುಮಾರಸ್ವಾಮಿಗಳೂ ಒಬ್ಬರು!. ಇಂದೋರಿನಲ್ಲಿ ಸಂಸ್ಕೃತ ಶಾಲೆಯ ಪ್ರಾಚಾರ್ಯರಾಗಿದ್ದ ಧಾರವಾಡ ಜಿಲ್ಲೆಯ ವಿರೂಪಾಕ್ಷ ಒಡೆಯರ ಅವರು ಕುಮಾರಸ್ವಾಮಿಗಳ ಕೋರಿಕೆಯಂತೆ (ಎಕ್ಸ್ ಪರ್ಟ್) ವಕಾಲತ್ತು ವಹಿಸಿದರು. ಲಿಂಗಾಯತರು "ಲಿಂಗೀ ಬ್ರಾಹ್ಮಣ"ರೆಂದು ನ್ಯಾಯಾಲಯಕ್ಕೆ (ಟ್ರಿಬ್ಯುನಲ್ಗೆ) ಮನವರಿಕೆ ಮಾಡಿಕೊಟ್ಟರು ವೈಜನಾಥನ ಪೂಜಾರಿಕೆ ಲಿಂಗಾಯತರಿಗೆ ದೊರೆಯಿತು. ನೋಡಿ ಹೇಗಿದೆ ಪಂಚಾಚಾರ್ಯರ ಪ್ರಭಾವ: ಎಲ್ಲಿಯ ಬಸವಣ್ಣ ಎಲ್ಲಿಯ ಲಿಂಗೀ ಬ್ರಾಹ್ಮಣರು!.*

(೭) *ಮಹಾಮೇದಾವಿಯಾಗಿದ್ದ ಪೂಜ್ಯ ಹಾನಗಲ್ ಕುಮಾರಸ್ವಾಮಿಗಳ ಮಾರ್ಗದರ್ಶನದಲ್ಲಿ ೧೯೦೪ರಲ್ಲಿ "ಅಖಿಲ ಭಾರತ ವೀರಶೈವ ಮಹಾಸಭೆ"ಯನ್ನು ಸ್ಥಾಪಿಸಲಾಯಿತು. ಇತ್ತೀಚೆಗೆ ಸುಮಾರು ಹತ್ತು ವರ್ಷಗಳ ಹಿಂದೆ ಅದನ್ನು "ವೀರಶೈವ-ಲಿಂಗಾಯತ" ಮಹಾಸಭೆ"ಯೆಂದು ಬದಲಿಸಲಾಗಿದೆ. ಪೂಜ್ಯ ಹಾನಗಲ್ ಕುಮಾರಸ್ವಾಮಿಗಳ ಮಾರ್ಗದರ್ಶನದಲ್ಲಿ ೧೯೦೪ರಲ್ಲಿ ನಡೆದ ಮಹಾಸಭೆಯ ಮೊದಲ ಅಧಿವೇಶನದಲ್ಲಿಯೇ "ವೀರಶೈವರು ವೇದ ಉಪನಿಷತ್ತುಗಳನ್ನು, ಶಾಸ್ತ್ರ ಪುರಾಣಗಳನ್ನು, ಆಗಮಗಳನ್ನು ಒಪ್ಪುತ್ತಾರೆ. "ವೀರಶೈವರು ಹಿಂದೂಗಳು ", "ಲಿಂಗಾಯತ ಮಠಗಳಿಗೆ ಜಂಗಮ ಜಾತಿಯವರನ್ನೇ ಸ್ವಾಮಿಗಳಾಗಿ ನೇಮಿಸಬೇಕು" ಎಂಬೆಲ್ಲ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಹಾಗಾದರೆ ಮಹಾಸಭೆಯು ಅಂಥ ನಿರ್ಣಯಗಳನ್ನು ತೆಗೆದುಕೊಳ್ಳಲು ಮಾರ್ಗದರ್ಶನ ನೀಡಿದವರು ಯಾರು? ಎಂಬುದನ್ನು ಚಿದಾನಮದ ಮೂರ್ತಿಯವರು ಹೇಳಿದ್ದರೆ ಒಳ್ಳೆಯದಿತ್ತು!.*

ಈ ಅಂಶಗಳನ್ನು ೩೬ ವರ್ಷಗಳ ಬಳಿಕ ೧೯೪೦ರಲ್ಲಿ ನಡೆದ ಮಹಾಸಭೆಯ ಅಧಿವೇಶನದಲ್ಲಿ ರದ್ದುಗೊಳಿಸಲಾಯಿತು! ಇದನ್ನೇ ಡಾ.ಚಿದಾನಂದ ಮೂರ್ತಿಯವರು ಬಹುದೊಡ್ಡ ತಪ್ಪು ಎನ್ನುವಂತೆ ನನಗೆ ಕಳಿಸಿದ ಪತ್ರದಲ್ಲಿ ಬಿಂಬಿಸಿದ್ದಾರೆ.ಹಾಗಾದರೆ ಪ್ರಕಾಂಡ ಪಂಡಿತರನ್ನು ಹೊಂದಿದ 'ಅಖಿಲ ಭಾರತ ವೀರಶೈವ ಮಹಾಸಭೆ'ಯು ಆ ನಿರ್ಣಯಗಳನ್ನು ಏಕೆ ಬದಲಿಸಿತು ಎನ್ನುವುದನ್ನೂ ಚಿದಾನಂದ ಮೂರ್ತಿಗಳು ಹೇಳುವುದಿಲ್ಲ. ಅದನ್ನು ಹೇಳಿದರೆ ಅವರ ಹೂರಣವೇ ಹಳಸಿಬಿಡುತ್ತದೆ!.

(೮) ವೀರಶೈವ ಧರ್ಮದ ಪ್ರಚಾರವನ್ನು ಸುಸಜ್ಜಿತವಾಗಿ ಮಾಡಲು ಪೂಜ್ಯ ಹಾನಗಲ್ ಕುಮಾರಸ್ವಾಮಿಗಳು ೧೯೧೯ ರಲ್ಲಿ ಪಂಚಪೀಠಗಳ ಶಾಖೆಗಳ ಮುಖ್ಯಸ್ಥರಾಗಿದ್ದ ಎಲ್ಲ ಪಟ್ಟಚರಾಧಿಕಾರಿಗಳ ಸಮ್ಮೇಳನವನ್ನು ನಡೆಸಿದರು ಮತ್ತು "ಅಖಿಲ ಭಾರತೀಯ ಗುರುವರ್ಗೋತ್ತೇಜಕ ಸಂಘ"ವನ್ನೂ ಸ್ಥಾಪಿಸಿದರು. ಆ ಮೂಲಕ ವೀರಶೈವ ಪಂಥದ ಗುರುವರ್ಗಕ್ಕೆ ಸುಸಜ್ಜಿತ ಪ್ರಚಾರಕ್ಕೆ ಅವಕಾಶವಾಯಿತು. ಎಂಥ ಮುಂಧೋರಣೆ!.

(೯) ಬಸವಣ್ಣನಿಗೆ ಮತ್ತು ಶರಣರಿಗೆ ಹಾಗೂ ಶರಣ ಸಾಹಿತ್ಯಕ್ಕೆ ವಿರಕ್ತ ಮಠಗಳ ಸ್ವಾಮಿಗಳು ಒತ್ತು ನೀಡುತ್ತಾರೆ. ಸಿದ್ಧಾಂತಶಿಖಾಮಣಿಗೆ ಅವರು ಅಷ್ಟೊಂದು ಮಹತ್ವ ಕೊಡುವುದಿಲ್ಲ. ಹಿಂದೂ ಶೈವಧರ್ಮವನ್ನು ಅವರು ಒಪ್ಪುವುದಿಲ್ಲ. ಅದನ್ನು ಕಡಿಮೆ ಮಾಡಿ ಸಿದ್ದಾಂತ ಶಿಖಾಮಣಿ, ವೇದ ಉಪನಿಷತ್ತು, ಆಗಮಗಳನ್ನು ವಿರಕ್ತರು ಒಪ್ಪಿಕೊಳ್ಳುವಂತೆ ಮಾಡುವ ಅಗತ್ಯತೆಯನ್ನು ಕುಮಾರಸ್ವಾಮಿಗಳು ಮನಗಂಡರು. ಆಗ ಅವರಿಗೆ ಹೊಳೆದ ಬಹು ಮುಂಧೋರಣೆಯ ಉಪಾಯವೆಂದರೆ ಎಲ್ಲ ವೀರಶೈವ -ಲಿಂಗಾಯತ ವಟುಗಳಿಗೆ ಒಂದೇ ರೀತಿಯ ತರಬೇತಿಯನ್ನು ನೀಡಿದರೆ ಆ ವ್ಯತ್ಯಾಸಗಳೆಲ್ಳವೂ ತಾವಾಗಿಯೇ ಹೊರಟು ಹೋಗುತ್ತವೆ ಎಂಬ ವಿಚಾರ. ಅದಕ್ಕಾಗಿ ಅವರು ಬಾದಾಮಿಗೆ ಸಮೀಪದ "ಶಿವಯೋಗ ಮಂದಿರ"ದಲ್ಲಿ ವಟುಗಳ ತರಬೇತಿ ಕೇಂದ್ರವನ್ನು ೧೯೧೦ ಸ್ಥಾಪಿಸಿದರು. ಅದು ಈಗ ಇನ್ನೂ ಚೆನ್ನಾಗಿ ಬೆಳೆದಿದೆ.

ಶಿವಯೋಗ ಮಂದಿರದಲ್ಲಿ ಎಲ್ಲಾ ವೀರಶೈವ - ಲಿಂಗಾಯತ ವಟುಗಳಿಗೆ ಪ್ರಮುಖವಾಗಿ ವೀರಶೈವರ ಸಿದ್ಧಾಂತ ಶಿಖಾಮಣಿ, ಶಕ್ತಿವಿಶಿಷ್ಟಾದ್ವೈತ, ವೇದ, ಉಪನಿಷತ್ತು, ಆಗಮ, ಲಿಂಗಧಾರಣ ಪದ್ಧತಿ, ದೀಕ್ಷೆ, ಅಯ್ಯಾಚಾರ, ಇತ್ಯಾದಿಗಳನ್ನು ಕಲಿಸಲಾಗುತ್ತದೆ. ಶಿವಯೋಗ ಮಂದಿರದಲ್ಲಿ ತರಬೇತಿ ಪಡೆದ ಸ್ವಾಮಿಗಳಿಗೆ ಈಗ ಹೆಚ್ಚಿನ ಮನ್ನಣೆ ಇದೆ. ಬಸವಣ್ಣನವರ ವಿಶ್ವಮಾನವೀಯ, ಸಮಾನತೆಯ ಯಾವುದೇ ಅಂಶಗಳಿಗೆ ಆ ತರಬೇತಿಯಲ್ಲಿ ಮಹತ್ವವಿರಲಿಲ್ಲ. ಇತ್ತೀಚೆಗೆ ಹತ್ತು ವರ್ಷಗಳ ಹಿಂದೆ ಕೆಲವು ಬದಲಾವಣೆಗಳನ್ನು ಮಾಡಲಾಗಿದೆಯೆಂದು ಓರ್ವ ಸ್ವಾಮಿಗಳು ನನಗೆ ತಿಳಿಸಿದ್ದಾರೆ. ಏನು ಬದಲಾವಣೆಯಾಗಿದೆ ಎಂಬುದು ಗೊತ್ತಿಲ್ಲ. ಚಿದಾನಂದ ಮೂರ್ತಿಯವರು ತಮ್ಮ ಪತ್ರದಲ್ಲಿ ಶಿವಯೋಗ ಮಂದಿರ ಸ್ಥಾಪನೆಯ ಅಂಶವನ್ನೂ ಪ್ರಸ್ಥಾಪಿಸಿದ್ದಾರೆ. ಹೇಗಿದೆ ನೋಡಿ ಲಿಂಗಾಯತರನ್ನು ದಿಕ್ಕುತಪ್ಪಿಸುವ ಪ್ರಯತ್ನಗಳು!

ಕಳೆದ ೧೦೭ ವರ್ಷಗಳಲ್ಲಿ ಶಿವಯೋಗ ಮಂದಿರದಲ್ಲಿ ತರಬೇತಿ ಪಡೆದ ಸುಮಾರು ಎಂಟುನೂರು ಗುರು-ವಿರಕ್ತ ಮಠಗಳ ಬಹುತೇಕ ಲಿಂಗಾಯತ ಸ್ವಾಮಿಗಳು ಈಗ ನಿಜವಾಗಿಯೂ ಅಂತರಾತ್ಮದಲ್ಲಿ ತಾವು ಅಲ್ಲಿ ಪಡೆದ ತರಬೇತಿಯ ಅಂಶಗಳನ್ನು ಆಚರಿಸುತ್ತಾರೆ.

*ಇವೆಲ್ಲವುಗಳ ಹೊರತಾಗಿಯೂ ಅನೇಕ ವಿರಕ್ತ ಮಠಗಳ ಸ್ವಾಮಿಗಳು ಬಹು ನಿಷ್ಟಯಿಂದ ಶರಣ ತತ್ವಗಳನ್ನು ಪಾಲಿಸುತ್ತಾರೆ ಮತ್ತು ಅವುಗಳ ಪ್ರಚಾರಕ್ಕೆ ತಮ್ಮ ಜೀವಮಾನವನ್ನೇ ಮುಡಿಪಾಗಿಟ್ಟಿದ್ದಾರೆ. ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಶ್ರೀಗಳು,ಚಿತ್ರದುರ್ಗ,ದಾರವಾಡ, ಅಥಣಿ,ಹುಬ್ಬಳ್ಳಿಯ ಮುರುಘಾಮಠಾಧೀಶರು,ಸಿರಿಗೆರೆಯ ತರಳಬಾಳು ಮಠಾಧೀಶರು,ಗದುಗಿನ ತೋಂಟದಾರ್ಯರು,ಇಳಕಲ್ಲ ಮಹಾಂತ ಸ್ವಾಮಿಗಳು,ಮೈಸೂರಿನ ಸುತ್ತೂರು ಶ್ರೀಗಳು, ಶಿವಮೊಗ್ಗ ಮತ್ತು ಸಾಗರದ ಬೆಕ್ಕಿನಕಲ್ಮಠದ ಸ್ವಾಮಿಗಳು,ಬಾಕ್ಕಿಯ ಪಟ್ಟದ್ದೇವರು, ಕಲ್ಬುರ್ಗಿಯ ಶರಣಬಸವೇಶ್ವರ ಮಠದ ಜೊತೆಗೆ ಇನ್ನೂ ನೂರಾರು ವಿರಕ್ತ ಮಠಗಳು ಶರಣತತ್ವಗಳ ಪರಿಪಾಲನೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇಲ್ಲದಿದ್ದರೆ ಇಂದು ಬಸವತತ್ವ ನಿರ್ಣಾಮವಾಗಬಹುದಿತ್ತು.*

ಪಂಚಾಚಾರ್ಯರ ಬಗ್ಗೆ ಒಂದಿಷ್ಟು ಮಾಹಿತಿ ಅಗತ್ಯವೆನಿಸುತ್ತದೆ. ಸಿದ್ದಾಂತ ಶಿಖಾಮಣಿಯ ಆಂತರಿಕ ವಿರೋಧಾಬಾಷಗಳನ್ನು ಗಮನಿಸಿದರೆ ಐವರು ಪಂಚಾಚಾರ್ಯರಲ್ಲಿ ಈರ್ವರ ಅಸ್ತಿತ್ವಕ್ಕೆ (ಕಾಶೀ ಮತ್ತು ಕೇದಾರ ಪೀಠಗಳಿಗೆ) ಯಾವುದೇ ಐತಿಹಾಸಿಕ, ಪೌರಾಣಿಕ ಆಧಾರವೇ ಇಲ್ಲ. ಈ ಐವರನ್ನು 'ಆಚಾರ್ಯ'ರನ್ನಾಗಿ ಮಾಡಿಸವರು ಯಾರು? ಯಾವಾಗ? ಎಂಬುದಕ್ಕೆ ಸೂಕ್ತ ತೃಪ್ತಿಕರ ಆಧಾಎಗಳೇ ಇಲ್ಲ. ಕೃತಾಯುಗ,ತ್ರೇತಾಯುಗ,ದ್ವಾಪರಯುಗಗಳಲ್ಲಿ ಧರ್ಮ ಪ್ರಚಾರ ಮಾಡಿದ್ದೇವೆಂದೂ, ರಾಮಾಯಣದ ವಿಭೀಷಣನಿಗೆ ಸಲಹೆ ನೀಡಿದ್ದೇವೆಂದೂ, ಅಗಸ್ತ್ಯನಿಗೆ ಶಿವನ ಮಹಿಮೆಯನ್ನು ವಿವರಿಸಿದ್ದೇವೆಂದೂ, ಶಂಕರಾಚಾರ್ಯರಿಗೆ ಚಂದ್ರಮೌಳೀಶ್ವರಲಿಂಗವನ್ನು ನೀಡಿದ್ದೇವೆಂದೂ ಸಿದ್ಧಾಂತ ಶಿಝಾಮಣಿಯ ಲೇಖಕರು ಹೇಳುತ್ತಾರೆ.

ಇಮತೆಲ್ಲ ಚಮತ್ಕಾರಿ ಕಾರ್ಯಗಳನ್ನು ಮಾಡಿದ ಪಂಚಪೀಠಗಳ ಬಗ್ಗೆ ಯಾವುದೇ ವೇದ,ಆಗಮ,ಉಪನಿಷತ್ತು,ಬ್ರಾಹ್ಮಣಕ,ಅರಣ್ಯಕ ಅಥವಾ ಶಂಕರಟಚಾರ್ಯರಿಗೆ ಸಂಬಂದಿಸಿದ ಗ್ರಂಥಗಳಲ್ಲೂ, ರಾಮಾಯಣದಲ್ಲೂ, ಅಥವಾ ಭಾರತದ ಸುದೀರ್ಘ ಇತಿಹಾಸಕ್ಕೆ ಸಂಬಂಧಿಸಿದ ಯಾವುದೇ ಹಳೆಯ ಗ್ರಂಥಗಳಲ್ಲಿಯೂ ಪಂಚಾಚಾರ್ಯರ ಬಗ್ಗೆ ಒಂದು ಚಕಾರ ಶಬ್ದವೂ ಇಲ್ಲ. ಹಾಗಾದರೆ, ಇವರ ಇತಿಹಾಸವೆಲ್ಲ ಸ್ವಯಂ ನಿರ್ಮಿತ ಕಟ್ಟುಕತೆಗಳೆ? ಅವನ್ನೆಲ್ಲ ಸೃಷ್ಟಿಸಿದವರು ಯಾರು,ಏಕೆ,ಹೇಗೆ ಯಾವಾಗ?

ಹೌದು ವಿಜಯನಗರದ ದೊರೆಗಳಲ್ಲಿ ಸಂಗಮ ವಂಶದ ರಾಜರು ೧೪-೧೫ನೇ ಶತಮಾನಗಳಲ್ಲಿ ಅವರಿಗೆ ರಾಜಾಶ್ರಯ ನೀಡಿ ವಚನಸಾಹಿತ್ಯದ ಬೆಳವಣಿಗೆಯನ್ನು ಪ್ರೋತ್ಸಾಹಿಸಿದರು. ಪುಂಗನೂರು, ಕೆಳದಿ ಮತ್ತು ಕೊಡಗಿನ ಅರಸರು ಲಿಂಗಾಯತರಾಗಿದ್ದರು. ಮೈಸೂರಿನ ಒಡೆಯರರೂ ೧೭ನೇ ಶತಮಾನದ ವರೆಗೆ ಲಿಂಗಾಯತರಾಗಿದ್ದರು. ಆದರೆ ಅವರ್ಯಾರು ಪಂಚಪೀಠಗಳನ್ನು ಸ್ಥಾಪಿಸಲಿಲ್ಲ.

ಈ ಎಲ್ಲ ಅಂಶಗಳನ್ನು ಆಧಾರವಾಗಿ ಬಳಸಿಕೊಂಡು *ಲಿಂಗಾಯತವು ಸ್ವತಂತ್ರ ಧರ್ಮವೆಂದೂ, ಪಂಚಪೀಠಗಳು ನಂತರದ ಅಧ್ವಾನಗಳೆಂದೂ ಸಿದ್ಧಪಡಿಸಲು ಅಪಾರವಾದ ಐತಿಹಾಸಿಕ ಸಾಮಗ್ರಿ ಈಗ ಲಭ್ಯವಿದೆ. ಅದು ಆಧುನಿಕ ಯುಗದಲ್ಲಿ ನಡೆದ ವಚನಶಾಸ್ತ್ರ ಸಾಹಿತ್ಯದ ಆವಿಷ್ಕಾರಗಳು ನಿರ್ಮಿಸಿದ ಗಂಭೀರ ಬೆಳವಣಿಗೆ, ಇಂದು ಲಿಂಗಾಯತ ಸಮುದಾಯವು ಅತ್ಯಂತ ಕಠಿಣ ಆಮತರಿಕ ವೈರುದ್ಯಗಳಿಂದ,ತಿಕ್ಕಾಟಗಳಿಂದ,ವಿವಿದ ಪಾಂತಿಕ ಸಮಸ್ಯೆಗಳಿಂದ ತತ್ತರಿಸಿ ಹೋಗಿದೆ. ಈಗ ನಮಗೆ ಬೇಕಿರುವುದು ಇಂದಿನ ವೈಜ್ಞಾನಿಕ ಯುಗಮಾನದ ಮನೋಭಾವಕ್ಕೆ ಸಂಪೂರ್ಣವಾಗಿ ಸರಿ ಹೊಂದುವ ೧೨ನೇ ಶತಮಾನದ ಬಸವಣ್ಣನವರ *ಲಿಂಗಾಯತ ಧರ್ಮ*ವೇ ಹೊರತು ಪಂಚಾಚಾರ್ಯರು ಅಶುದ್ಧಗೊಳಿಸಿರುವ, ನೂರೆಂಟು ಆಂತರಿಕ ವೈರುಧ್ಯಗಳಿಂದ ಕೂಡಿದ ವೀರಶೈವವಲ್ಲ.

*೧೨ ನೇ ಶತಮಾನದ ಬಸವಣ್ಣನವರು ಹಾಗೂ ಶರಣರು ಸ್ಥಾಪಿಸಿದ ಲಿಂಗಾಯತದ ಮರುಆವಿಷ್ಕಾರವು ೨೦ನೆಯ ಶತಮಾನದ ಅವಿಸ್ಮರಣೀಯ ಸೋಜಿಗಗಳಲ್ಲಿ ಒಂದಾಗಿದೆ. ಶಾಸ್ವತ ಸತ್ಯವನ್ನು ಬಹುಕಾಲ ಮುಚ್ಚಿಡಲು ಸಾಧ್ಯವಿಲ್ಲ. ಅದಕ್ಕೆ ಮೂಲ ಆಧಾರವೆಂದರೆ ಹತ್ತಾರು ಸಾವಿರ ವಚನಗಳನ್ನು ಪತ್ತೆ ಹಚ್ಚಿ,ಪರಿಷ್ಕರಿಸಿ ಪ್ರಕಟಿಸಿದ್ದು. ಅದರ ಹಿಂದೆ ಫ.ಗು ಹಳಕಟ್ಟಿ, ಎಂ.ಎಂ ಕಲ್ಬುರ್ಗಿ, ವೀರಣ್ಣ ರಾಜೂರು,ಟಿ.ಆರ್.ಚಂದ್ರಶೇಖರ ಅರಂತಹ ನೂರಾರು ವೈಜ್ಞಾನಿಕ ಮನೋಭಾವ ಸಂಶೋಧಕರ ಕಠಿಣ ಪರಿಶ್ರಮ ಅಡಗಿದೆ.*

ಎಲ್ಲೆಲ್ಲೋ, ಏಕೋ,ಹೇಗೋ ಮುಚ್ಚಿಡಲಾಗಿದ್ದ, ತಿರಸ್ಕರಿತ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲ್ಪಟ್ಟಿದ್ದ ೨೨ಸಾವಿರಕ್ಕೂ ಹೆಚ್ಚು ವಚನಗಳ ಸಂಗ್ರಹಣೆ, ಸಾವಿರಾರು ಶರಣರ ಚರಿತ್ರೆಗಳ ಬರವಣಿಗೆ, ಹತ್ತಾರು ಶಿಳಾಶಾಸನಗಳ ಶೋಧನೆ,ವಚನಗಳ ಬಹುಮುಖಿ ಅಧ್ಯಯನಗಳು,ವಚನಗಳ ಅರ್ಥೈಸುವಿಕೆ, ವಿವಿಧ ಭಾಷೆಗಳಲ್ಲಿ ವಚನಗಳ ಭಾಷಾಂತರಗಳು ಅಸಾಮಾನ್ಯ ಕೆಲಸಗಳೇ ಸರಿ. ಅವುಗಳನ್ನು ೧೫ ಸಂಪುಟಗಳಲ್ಲಿ ಕರ್ನಾಟಕ ಸರ್ಕಾರವೇ ಎರಡು ಬಾರಿ ಪ್ರಕಟಿಸಿದೆ.

*ಅದಕ್ಕೂ ಹೆಚ್ಚಾಗಿ ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ವಿರಕ್ತ ಮಠಗಳು ಬಸವಣ್ಣನವರ ತತ್ವಗಳನ್ನು ಹೇಗೆ ಎಲ್ಲ ಅಡೆತಡೆಗಳ, ವಿರೋಧಗಳ ನಡುವೆಯೂ ಉಳಿಸಿಕೊಂಡು ಬಂದವು,ಬೆಳೆಸಿದವು ಮತ್ತು ಬಸವ ತತ್ವಗಳನ್ನು ಒಂಬೈನೂರು ವರ್ಷ ಪರಿಪಾಲಿಸಿದವು ಎನ್ನುವುದಂತೂ ಅತ್ಯಂತ ಸೋಜಿಗದ ಸಂಗತಿ.*

*ಸುಮಾರು ೧೮೮೦ರಿಂದ ಬೆಳದುಬಂದ ಶರಣ ಧರ್ಮ ಸಂಬಂದೀ ಪತ್ರಿಕೆಗಳೂ ಮಹತ್ವದ ಪಾತ್ರ ವಹಿಸಿವೆ. "ಸ್ಟಾರ್ ಆಫ್ ಮೈಸೂರು", "ಶಿವಾನುಭವ","ಮಹಾಮನೆ","ಬಸವಬೆಳಗು", "ಬಸವ ಜರ್ನಲ್", "ಬಸವಪಥ", "ಬಸವ ದರ್ಶನ" ಮಹಾರಾಷ್ಟ್ರದ "ಸಂಗಮ", ಆಂಧ್ರ ಪ್ರದೇಶದ "ಬಸವಪ್ರಭ" ಇತ್ಯಾದಿ ನಿಯತಕಾಲಿಕ ಪತ್ರಿಕೆಗಳು ಲಿಂಗಾಯತದ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ.*

ಜೊತೆಜೊತೆಗೆ ಸಿದ್ದಾಂತ ಶಿಖಾಮಣಿಯನ್ನು ವೈಜ್ಞಾನಿಕವಾಗಿ, ಐತಿಹಾಸಿಕವಾಗಿ ವಿಶ್ಲೇಷಿಸಿ ಅದರ ಸತ್ಯಾಸತ್ಯತೆಯನ್ನು *೧೯೪೨ರಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಬರೆದು ಬಿಚ್ಚಿಟ್ಟ ಎಂ.ಆರ್ ಸಾಖರೆಯವರ "ಲಿಂಗಾಯತ ಧರ್ಮ ಇತಿಹಾಸ ದರ್ಶನ" ಎಂಬ ಗ್ರಂಥವಾಗಲಿ, ಕ್ರಶ್ಚಿಯನ್ ಧರ್ಮದ ಉತ್ತಂಗಿ ಚೆನ್ನಪ್ಪರವರಿಂದ ೧೯೪೦ ರ ದಶಕದಲ್ಲಿ ಬರೆಯಲ್ಪಟ್ಟ "ಅನುಭವ ಮಂಟಪ"ದ ಐತಿಹಾಸಿಕ ಅಧ್ಯಯನ ಮಹತ್ವದ ಸಾಧನೆಗಳು, ಮಾಸ್ತಿ ವೆಂಕಟೇಶ್ ಅಯ್ಯಂಗಾರರ "ಸೇಯಿಂಗ್ಸ್ ಆಫ್ ಬಸವಣ್ಣ ", ಆರ್.ಆರ್ ದಿವಾಕರ ಅವರ "ವಚನಶಾಸ್ತ್ರ", ಎಂ.ಆರ್. ಶ್ರೀನಿವಾಸಮೂರ್ತಿಯವರ "ವಚನಶಾಸ್ತ್ರ ಸಾರ", ಜೊತೆಗೆ ಹತ್ತೊಂಬತ್ತನೆಯ ಶತಮಾನದಲ್ಲಿ ಲಿಂಗಾಯತ ಧರ್ಮವನ್ನು ಕುರಿತು ಪಾಶ್ಚಾತ್ಯ ಲೇಖಕರಾದ ಸಿ.ಪಿ.ಬ್ರೌನ್, ಉರ್ತ, ವಿಲ್ಸನ್, ಕಿಟೆಲ್, ಮೋಗ್ಲಿಂಗ್, ಜೆಂಕಿನ್ಸ, ಎಂಥೋವೆನ್, ಎಡ್ಗರ ಥರ್ಸ್ಟನ್, ಅಬೆ ದುಬೈ, ಆರ್ಥರ್ ಮೈಲ್ಸ್, ಫ್ರಾನ್ಸಿಸ್ ಬುಕಾನನ್, ಮತ್ತು ಇಪ್ಪತ್ತನೆಯ ಶತಮಾನದಲ್ಲಿ ಎಚ್.ಜೆ.ಸ್ಟ್ರೋಕ್ಸ್, ಎ.ಪಿ.ರೈಸ್, ಬಿ.ಎಲ್.ರೈಸ್, ಜೇಮ್ಸ್ ಕ್ಯಾಂಬಲ್,ವಿಲಿಯಮ್ ಮೆಕಾರ್ಮಿಕ್, ಜೆ.ಎನ್. ಫರಕೈರ್, ಮೈಕೆಲ್ ಬ್ಲೇಕ್, ಜಾನ್ ಪೀಟರ್ ಶೌಟನ್ ಅವರ ಗ್ರಂಥಗಳು ಲಿಂಗಾಯತ ಧರ್ಮವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವಲ್ಲಿ ಬಹಳಷ್ಟು ಪ್ರಮುಖ ಪಾತ್ರ ವಹಿಸಿವೆ.*

*ಇತ್ತೀಚೆಗೆ ೨೦೦೩ರಲ್ಲಿ ಮೈಸೂರು ಜಿಲ್ಲೆ ಕುಂದೂರಿನ ಡಾ.ಇಮ್ಮಡಿ ಶಿವಬಸವಸ್ವಾಮಿಗಳು ಆಧಾರವಾಗಿ ಬರೆದ "ಸಿದ್ದಾಂತ ಶಿಖಾಮಣಿ ಹಾಗೂ ಶ್ರೀಕರಭಾಷ್ಯ ನಿಜನಿಲುವು" ಎಂಬ ಗ್ರಂಥವು ಮತ್ತು ೨೦೧೧ರಲ್ಲಿ ಹಂಪಿ ವಿಶ್ವವಿಧ್ಯಾನಿಲಯವು ಪ್ರಕಟಿಸಿದ ತರುಣ ಲೇಖಕ ಬೋರಟ್ಟಿ ವಿಜಯಕುಮಾರ್ ಅವರ "ಹಿರಿಯರ ಹಿರಿತನ ಹಿಂದೇನಾಯಿತು" ಎಂಬ ಗ್ರಂಥ ಹಾಗೂ ೨೦೧೫ರಲ್ಲಿ ಬ್ರಾಹ್ಮಣ ವಿದ್ವಾಂಸರಾದ ಬಸರೂರು ಸುಬ್ಬರಾವ್ ಅವರ "ಲಿಂಗಾಯತ ಫಿಲಾಸಫಿ" ಗ್ರಂಥವು ಲಿಂಗಾಯತ ಧರ್ಮದ ಅತ್ಯಂತ ಮಹತ್ವದ ಅಂಶಗಳ ಮೇಲೆ ಅಸಾಧಾರಣ ಬೆಳಕು ಚೆಲ್ಲಿವೆ.*

ಈ ಎಲ್ಲವುಗಳ ಹಿನ್ನೆಲೆಯಲ್ಲಿ ಮೂಡಿಬರುವ ನಿರ್ಣಯವೆಂದರೆ ಎಲ್ಲಾ ಜನರನ್ನು ಎಲ್ಲ ಕಾಲಕ್ಕೂ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ವೈಜ್ಞಾನಿಕ ಯುಗದಲ್ಲಿ ಕಟ್ಟುಕತೆಗಳು, ಮೂಡನಂಬಿಕೆಗಳು, ಬಹಳ ದಿನ ಬದುಕಲಾರವು. ಈ ಅಂಶಗಳನ್ನು ವಯೋವೃದ್ದರಾದ ಪೂಜ್ಯ ಡಾ.ಚಿದಾನಮದ ಮೂರ್ತಿಯವರು ಬೇಗ ತಿಳಿದುಕೊಂಡಷ್ಟು ಅವರಿಗೇ ಕ್ಷೇಮ. ತಮ್ಮ ಸ್ವಾರ್ಥವನ್ನು ಬದಿಗಿಟ್ಟು, ಸತ್ಯವನ್ನು ಒಪ್ಪಿಕೊಂಡರೆ ಎಲ್ಲರಿಗೂ ಒಳ್ಳೆಯದು. ಅವರಲ್ಲಿ ಪಂಚಾಚಾರ್ಯರೂ ಸೇರುತ್ತಾರೆ!.

ಗುರುಸೇವೆಯ ಮಾಡುವಲ್ಲಿ ಇಹದಲ್ಲಿ ಸುಖ;
ಲಿಂಗಸೇವೆಯ ಮಾಡುವಲ್ಲಿ ಪರದಲ್ಲಿ ಸುಖ;
ಜಂಗಮಸೇವೆಯ ಮಾಡುವಲ್ಲಿ
ಇಹ-ಪರವೆಂಬ ಉಭಯವು ನಾಸ್ತಿ,
ಚಂದೇಶ್ವರಲಿಂಗವ ಹಿಂಗದ ಭಾವ.
- ನುಲಿಯ ಚಂದಯ್ಯನ ವರು

ನೀವು ವೀರಶೈವ ಅಥವಾ ಲಿಂಗಾಯತ ಅಥವಾ ವೀರಶೈವ/ಲಿಂಗಾಯತ ಎರಡು ಒಂದೇ ಎಂಬ ಬಗ್ಗೆ ತಿಳಿದುಕೊಳ್ಳೋಣ. ಕೆಲವರು ವೀರಶೈವ ಹಾಗೂ ಲಿಂಗಾಯತ ಒಂದೇ ಇದ್ದು ವೀರಶೈವ ಸಾಹಿತ್ಯಿಕ ಭಾಷೆಯಾದರೆ ಲಿಂಗಾಯತ ಹಳ್ಳಿಯ ಜನರ (ಜಾನಪದ) ಭಾಷೆಯಾಗಿದ್ದು ವೀರಶೈವ ಧರ್ಮ ಪುರಾತನಕಾಲದಿಂದಲೂ ಇದ್ದು ಅರ್ಥಾತ್ ನಾಲ್ಕು ಯುಗಗಳಿಂದಲೂ ಇದ್ದು ಅದರ ಧರ್ಮಗುರು ಜಗದ್ಗುರು ಪಂಚಾಚಾರ್ಯರಾಗಿದ್ದು ಮಹಾತ್ಮಾ ಬಸವಣ್ಣನವರು ಅದರ ಧರ್ಮ ಪ್ರಸಾರಕರು, ಧರ್ಮಗುರುಗಳಲ್ಲ ಎಂದು ಪ್ರಚಾರ ಮಾಡುತ್ತ ಧರ್ಮದ ಹೆಸರು ವೀರಶೈವ ಬರೆಯಿಸಿರಿ ಎಂದು ಹೇಳುತ್ತ ಬರಬಹುದು. ಈ ಹೇಳಿಕೆಯಲ್ಲಿ ಎಷ್ಟು ಸತ್ಯಾಂಶವಿದೆ. ಎಂಬುದು ತಿಳಿದುಕೊಳ್ಳುವುದಕ್ಕಾಗಿ ಕೆಲವೊಂದು ಸಂಶಯಾತ್ಮಕ ಪ್ರಶ್ನೆಗಳನ್ನು ತಮ್ಮ ಮುಂದೆ ಇಡುತ್ತೇವೆ. ಈ ಪ್ರಶ್ನೆಗಳನ್ನು ವೀರಶೈವವೆಂದು ಬರೆಯಿಸಿರಿ ಎಂದು ಹೇಳುವವರ ಮುಂದೆ ಇಡಿರಿ ಅವರಿಂದ ಸಮರ್ಪಕವಾದ ಉತ್ತರ ತಮಗೆ ದೊರೆತರೆ ತಾವು ಅವಶ್ಯವಾಗಿ ತಮ್ಮ ಧರ್ಮದ ಹೆಸರು ವೀರಶೈವವೆಂದು ಬರೆಯಿರಿ. ಇಲ್ಲವಾದರೆ ಬರೆಯಬೇಡಿರಿ. ಕಾರಣ ಸತ್ಯ ಬೇರೆಯೇ ಇರುತ್ತದೆಂಬುದು ಸಿದ್ಧವಾಗುತ್ತದೆ. ದಯಮಾಡಿ ಇಲ್ಲಿಯೇ ಸ್ವಲ್ಪ ಎಚ್ಚರವಹಿಸಿರಿ. ನಮ್ಮ ಸಂಶಯಾತ್ಮಕ ಪ್ರಶ್ನೆ ಎನ್ನುವುದಕ್ಕಿಂತ ನಿಮ್ಮ ಸಂಶಯಾತ್ಮಕ ಪ್ರಶ್ನೆಗಳು ಇಂತಿವೆ.

1) ಒಂದು ವೇಳೆ ನಾಲ್ಕು ಯುಗಗಳಿಂದ ಅಂದರೆ ವೇದ, ಆಗಮ, ಪುರಾಣ, ಶಾಸ್ತ್ರಗಳ ಮಾನ್ಯತೆ ಇರುವಂತಹ ವೀರಶೈವ ಧರ್ಮವನ್ನು ಪಂಚಾಚಾರ್ಯರು ಸ್ಥಾಪನೆ ಮಾಡಿದ್ದರೆ, ವಿಶ್ವವಿಭೂತಿ ಬಸವಣ್ಣನವರು ಪ್ರಸಾರ ಮಾಡಿದ್ದರೆ, ಬಸವಣ್ಣನವರು ವೇದ, ಆಗಮ, ಪುರಾಣ, ಶಾಸ್ತ್ರ ಮಾನ್ಯತಾ ವೀರಶೈವ ಧರ್ಮದ ಪ್ರಮಾಣ ಗ್ರಂಥಗಳನ್ನು ಸಮರ್ಥಿಸುವ ಬದಲು ಅವುಗಳ ಮೇಲೆ ಟೀಕೆ ಮಾಡಲು ಕಾರಣವೇನು? ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವೆ ಆಗಮದ ಮೂಗ ಕೊಯ್ಯುವೆ, ಪುರಾಣವೆಂಬುದು ಪುಂಢರ ಗೋಷ್ಠಿ ಇತ್ಯಾದಿ ಪ್ರಕಾರ ಟೀಕೆ ಮಾಡಿದ್ದಾರೆಂದ ಬಳಿಕ ಬಸವಪೂರ್ವಯುಗದ ವೀರಶೈವಮತ ಹಾಗೂ ಬಸವಾದಿ ಶರಣರ ಲಿಂಗಾಯತ ಧರ್ಮ ಒಂದೇ ಹೇಗೆ? 2) ಪಂಚಾಚಾರ್ಯರು ಸ್ಥಾಪನೆ ಮಾಡಿದಂತಹ ಜಾತಿ, ವರ್ಗ, ವರ್ಣ ರಹಿತ ಸಮಾನತೆಯ ತತ್ವ ಆಧಾರಿತ ವೀರಶೈವಮತ ಬಸವಪೂರ್ವಯುಗದಲ್ಲಿ ಆಸ್ತಿತ್ವದಲ್ಲಿ ಇದ್ದರೆ ಕಲ್ಯಾಣ ಕ್ರಾಂತಿಯಾಗಲು ಕಾರಣವೇನು? ಹಾಗೂ ಕಲ್ಯಾಣ ಕ್ರಾಂತಿಯ ಕಾಲದಲ್ಲಿ ಇವರು ಎಲ್ಲಿ ಇದ್ದರು? ಮತ್ತು ಏನು ಮಾಡುತ್ತಿದ್ದರು?

3) ಒಂದು ವೇಳೆ ಬಸವಣ್ಣನವರು ಧರ್ಮಗುರುಗಳಲ್ಲ, ಧರ್ಮ ಪ್ರಸಾರಕರು ಎಂದು ಮಾನ್ಯ ಮಾಡಲಾಗಿ ಧರ್ಮ ಪ್ರಸಾರಕರು ತಮ್ಮ ಧರ್ಮ ಪ್ರಮಾಣ ಗ್ರಂಥಗಳನ್ನು ಪವಿತ್ರ ಗ್ರಂಥಗಳೆಂದು ಮನ್ನಿಸಿ ಅವುಗಳಲ್ಲಿರುವ ತತ್ವಗಳನ್ನು ಪ್ರಸಾರ ಮಾಡಲು ಪ್ರಯತ್ನಿಸುತ್ತಾರೆ ಹೊರತು ಅವುಗಳ ಮೇಲೆ ಟೀಕೆ ಮಾಡುವುದಿಲ್ಲ. ಒಂದು ವೇಳೆ ಪ್ರಮಾಣ ಗ್ರಂಥಗಲ್ಲಿ ದೋಷಗಳಿದ್ದರೂ ಕೂಡ ಅವುಗಳನ್ನು ತೋರಿಸದೆ ತಮ್ಮ ಧರ್ಮ ಪ್ರಚಾರ ಕಾರ್ಯ ಮಾಡುತ್ತಾರೆ ಆದರೆ ಹಾಗೆ ಮಾಡದೆ ಅವುಗಳನ್ನು ತಿರಸ್ಕರಿಸಿ ಅವುಗಳ ಮೇಲೆ ಟೀಕೆ ಟಿಪ್ಪಣಿ ಮಾಡುತ್ತಿದ್ದರೆ ಅವರನ್ನು ಆ ಧರ್ಮದಿಂದ ಬಹಿಷ್ಕಾರ ಮಾಡಿ ನಾಸ್ತಿಕರೆಂದು ಹೊರಗೆ ಹಾಕುತ್ತಾರೆ. ಉದಾ: ವೇದಗಳನ್ನು ತಿರಸ್ಕರಿಸಿದ ಬೌದ್ಧ, ಜೈನ, ಚಾರ್ವಾಕರನ್ನು ನಾಸ್ತಿಕರೆಂದು ತಿಳಿದು ಹಿಂದು ಧರ್ಮದಿಂದ ಹೊರಗೆ ತಳ್ಳಲಾಗಿದೆ. ಬೈಬಲ್ ಖಂಡಿಸಿದ ಯೋರೋಪ ವಿಜ್ಞಾನಿಗೆ ಕಠಿಣ ಶಿಕ್ಷೆ ಕೊಟ್ಟಿದ್ದಾರೆ. ಕುರಾನದಲ್ಲಿಯ ಕೆಲವೊಂದು ಘಟನೆಗಳನ್ನು ವಿರೋಧಿಸಿದ ಕಾರಣ ಅಪರಾಧವೆಂದು ತಿಳಿದು ಪರ್ಸಿಯಾ ದೇಶದಲ್ಲಿಯ ಮುಸ್ಲಿಂ ಸಂತನ ತಲೆಯನ್ನು ಕತ್ತರಿಸಿ ಹಾಕಲಾಗಿದೆ. ಇದರೆಂತೆಯೇ ಬಸವಾದಿ ವಚನಕಾರರು ಬಸವಪೂರ್ವ ಯುಗದ ಧರ್ಮಗ್ರಂಥಗಳ ಮೇಲೆ ಖಂಡನೆ ಮಾಡಿದ್ದರಿಂದ ಅವರು ಬಸವಪೂರ್ವ ಯುಗದ ಧರ್ಮದ ವಿರೋಧಿಗಳೇ ಹೊರತು ಧರ್ಮ ಪ್ರಸಾರಕರು ಹೇಗೆ ಆಗುತ್ತಾರೆ? ಆದ್ದರಿಂದ ಬಸವಪೂರ್ವಯುಗದ ವೀರಶೈವ ಧರ್ಮ ಮತ್ತು ಬಸವಾದಿ ಶರಣರ ಲಿಂಗಾಯತ ಧರ್ಮ ಒಂದೇ ಹೇಗೇ? ಮತ್ತು ಬಸವಾದಿ ವಚನಕಾರರು ವೀರಶೈವ ಧರ್ಮದ ಪ್ರಸಾರಕರು ಹೇಗೇ?

4) ವೇದದಲ್ಲಿ ಕರ್ಮಕಾಂಡ ಹಾಗೂ ಜ್ಞಾನಕಾಂಡ ಎಂದು ಎರಡು ಭಾಗಗಳಿದ್ದು ಬಸವಾದಿ ವಚನಕಾರರು ಕರ್ಮಕಾಂಡದ ಖಂಡನೆ ಮಾಡಿದ್ದಾರೆ. ಜ್ಞಾನಕಾಂಡವನ್ನು ಮಾನ್ಯ ಮಾಡಿದ್ದಾರೆ. ಜೈನ, ಬೌದ್ಧ, ಹಾಗೂ ಸಿಖ್ಖರು ಕೂಡ ಕರ್ಮಕಾಂಡವನ್ನು ಖಂಡನೆ ಮಾಡಿದ್ದಾರೆ. ಜ್ಞಾನಕಾಂಡ ಮಾನ್ಯ ಮಾಡಿದ್ದಾರೆ. ಆದ್ದರಿಂದ ಕರ್ಮಕಾಂಡವನ್ನು ವಿರೋಧಿಸಿದ ಬೌದ್ಧ, ಜೈನ, ಸಿಖ್ಖ ಧರ್ಮಗಳು ಅವೈದಿಕ (ಹಿಂದು ಧರ್ಮಗಳಲ್ಲ)ವೆಂದು ಮಾನ್ಯವಾಗಿರುವಾಗ ವೈದಿಕ ಧರ್ಮಗ್ರಂಥಗಳನ್ನು ಖಂಡಿಸಿದ ಬಸವಾದಿ ವಚನಕಾರರ ಲಿಂಗಾಯತ ಧರ್ಮ, ಹಾಗೂ ವೈದಿಕ ಹಿಂದೂ ವೀರಶೈವ ಧರ್ಮ ಒಂದೇ ಹೇಗೆ? 5) ಯಾವುದೇ ಆಗಮ ಗ್ರಂಥದ ಅಭ್ಯಾಸ ಮಾಡಿನೋಡಲಾಗಿ ಅದರಲ್ಲಿಯ ಪರಶಿವನ (ಸೃಷ್ಠಿಕರ್ತ ಪರಮಾತ್ಮನ) ಕಲ್ಪನೆ ಪೌರಾಣಿಕವಾಗಿಯೇ ಹಾಗೂ ಅವೈಚಾರಿಕ ತರ್ಕದಿಂದ ಆಗಿರುತ್ತದೆ ಎಂದು ಕಂಡು ಬರುವುದು. ಉದಾ: ಸೂಕ್ಷ್ಮಾಗಮ ಕ್ರಿಯಾಸಾರದಲ್ಲಿ ಪರಶಿವನೂ ಕೂಡ ಕೈಲಾಸದಲ್ಲಿಯೇ ವಾಸಿಸುತ್ತಾನೆ. ಅವನ ಸುತ್ತಮುತ್ತಲು ನಂದಿ, ಸನಕ, ಬೃಂಗಿ, ಸಿದ್ಧ, ಚರಣ, ಗಂಧರ್ವ ಇತ್ಯಾದಿ ಗಣಗಳಿದ್ದು ಅವರಿಂದ ಪೂಜೆ ಮಾಡಿಸಿಕೊಳ್ಳುತ್ತಿರುತ್ತಾನೆ. ಪಾರಮೇಶ್ವರಾಗಮದಲ್ಲಿ ಪರಶಿವನಿಗೆ ಐದು (ಪಂಚ) ಮುಖಗಳಿದ್ದು ಗಜಚರ್ಮಧಾರಿ, ಸರ್ಪ, ಚಂದ್ರ ತ್ರಿಶೂಲಧಾರಿಯಾಗಿದ್ದು ಕೊರಳಲ್ಲಿ ರುಂಡಗಳ ಮಾಲೆ ಧರಿಸಿರುತ್ತಾನೆ ಹಾಗೂ ಯಜ್ಞೋಪವಿತ (ಜನಿವಾರ) ಧಾರಣೆ ಮಾಡಿ ಕೊಂಡಿದ್ದಾನೆ. ಆಗಮಕಾರರ ಶಕ್ತಿಯ ಕಲ್ಪನೆಯೂ ಕೂಡ ಪರಶಿವನ ಪತ್ನಿ ಪಾರ್ವತಿಯೇ ಶಕ್ತಿಯು. ಆದರೆ ಬಸವಾದಿ ಶರಣರ ದೃಷ್ಟಿಯಲ್ಲಿ ಪರಶಿವನ/ಸೃಷ್ಟಿಕರ್ತನ ಕಲ್ಪನೆ ಸಾಕಾರವಾಗಿರದೇ ನಿರಾಕಾರದಲ್ಲಿರುತ್ತದೆ. ಅಂದರೆ ಶೂನ್ಯ, ನೀಶೂನ್ಯ, ಸರ್ವಶೂನ್ಯ ನೀರಾಲಂಭಶೂನ್ಯ, ಬಯಲು ಹೀಗೆ ಇದ್ದು ಅವನು ರುಂಡಮಾಲಾ, ಗಜಚರ್ಮಧಾರಿ ಅಲ್ಲ ಅವನು ಸ್ತ್ರೀ, ಪುರುಷ ಕೂಡ ಅಲ್ಲ ನಪುಂಸಕನೂ ಅಲ್ಲ. ವಚನಕಾರರ ದೃಷ್ಟಿಯಲ್ಲಿ ಶಕ್ತಿ ಎಂದರೆ ಶಿವನ ಪತ್ನಿ ಪಾರ್ವತಿ ಅಲ್ಲ. ಜಗತ್ತಿನ ಉತ್ಪತ್ತಿಗೆ ಉಪಾದಾನ ಕಾರಣ. ಆದ್ದರಿಂದ ಬಸವಪೂರ್ವದ ವೀರಶೈವ ಮತ ಹಾಗೂ ಬಸವಾದಿ ಶರಣರ ಲಿಂಗಾಯತ ಧರ್ಮ ಒಂದೇ ಹೇಗೆ?

6) ಆಗಮಕಾರರ ಆರ್ಥಾತ ಬಸವ ಪೂರ್ವ ಯುಗದ ವೀರಶೈವರ ಪವಿತ್ರ ಸ್ಥಾನವಾದಂತಹ ಕೈಲಾಸದ ವರ್ಣನೆ ಬಹಳಷ್ಟು ಸಲ ಆಗಮ ಗ್ರಂಥಗಲ್ಲಿ ದೊರಿಯುತ್ತದೆ. ಹಾಗೆ ನೋಡಲಾಗಿ ಪ್ರತಿಯೊಂದು ಆಗಮ ಗ್ರಂಥದ ಪ್ರಾರಂಭ ಕೈಲಾಸದಿಂದಲೇ ಪ್ರಾರಂಭವಾಗುತ್ತದೆ. ಇಂತಹ ಕೈಲಾಸದ ಬಗ್ಗೆ ಬಸವಾದಿ ವಚನಕಾರರು ಟೀಕೆ ಮಾಡಿದ್ದಾರೆ. ಉದಾ: ಕೈಲಾಸವೆಂಬುದು ಭೂಮಿಯ ಮೇಲಿನ ಹಾಳು ಬೆಟ್ಟ. ಅಂದ ಬಳಿಕ ವೀರಶೈವರ ಪವಿತ್ರ ಸ್ಥಳ ಕೈಲಾಸ ಬಸವಾದಿ ವಚನಕಾರರಿಗೆ ಮಾನ್ಯವಿಲ್ಲ. ಆದ್ದರಿಂದ ಬಸವಪೂರ್ವ ಯುಗದ ವೀರಶೈವಮತ ಹಾಗೂ ಬಸವಾದಿ ಶರಣರ ಲಿಂಗಾಯತ ಧರ್ಮ ಒಂದೇ ಹೇಗೆ?

7) ಬಸವ ಪೂರ್ವ ಯುಗದ ಆಗಮಕಾರರ ಸಿದ್ಧಾಂತದ ಪ್ರಕಾರ ಮುಕ್ತ ಆತ್ಮನು ಪರಮಾತ್ಮನು ಇರುವ ಲೋಕದಲ್ಲಿ ಅರ್ಥಾತ ಕೈಲಾಸಕ್ಕೆ ಅಥವಾ ವೈಕುಂಠಕ್ಕೆ ಹೋಗುತ್ತಾನೆ. ಇದಕ್ಕೆ ಸಾಲೋಕ್ಷ ಮೋಕ್ಷವೆನ್ನುತ್ತಾರೆ. ಅನಂತರ ಪರಮಾತ್ಮನ ಹತ್ತಿರ ಹೋಗುತ್ತಾನೆ. ಇದಕ್ಕೆ ಸಾಮಿಪ್ಯ ಮೋಕ್ಷವೆನ್ನುತ್ತಾರೆ. ಅವನಂತೆಯೇ ಶುದ್ಧನಾಗುತ್ತಾನೆ. (ಸಾರೂಪ್ಯ ಮೋಕ್ಷ) ಮತ್ತು ಕೊನೆಗೆ ಅವನಲ್ಲಿ ಒಂದಾಗುತ್ತಾನೆ (ಸಾಯುಜ್ಯ ಮೋಕ್ಷ). ಇಲ್ಲಿ ಸಾಯುಜ್ಯ ಮೋಕ್ಷವೆಂದರೆ ಪರಮಾತ್ಮನ ಜೊತೆಗೆ ಏಕರೂಪವಾಗುವದಲ್ಲ ಅಥವಾ ಐಕ್ಯವಲ್ಲ. ಅವನ ಲೋಕದಲ್ಲಿದ್ದುಕೊಂಡು ಸೇವೆಯನ್ನು ಮಾಡುತ್ತ ಅವನ ಹತ್ತಿರವೇ ನಿಲ್ಲುವುದು. ಉದಾ: ನಂದಿ, ಬೃಂಗ, ಗಣಗಳಂತೆ. ಆದರೆ ಬಸವಾದಿ ಶರಣರ ದೃಷ್ಟಿಯಲ್ಲಿ ಮೋಕ್ಷವೆಂದರೆ ನದಿಯು ಸಮುದ್ರವನ್ನು ಸೇರಿದಂತೆ ತನ್ನ ಮೂಲ ಆಸ್ತಿತ್ವವನ್ನು ಇಲ್ಲದಂತೆ ಮಾಡಿಕೊಳ್ಳುವುದು, ಜೀವ ಶಿವನಲ್ಲಿ ಬೆರೆತು ಒಂದಾಗುವುದು. ಅದರಂತೆ ಆಗಮಕಾರರ ಚಾತುಷ್ಯಪದ ಮೋಕ್ಷ ಕೈಲಾಸವಾಸಿಯಾದ ನಂತರ ದೊರೆಯುತ್ತದೆ. ಆದರೆ ಬಸವಾದಿ ವಚನಕಾರರ ಮೋಕ್ಷ ಜೀವಂತವಿರುವಾಗಲೇ ಜೀವನ ಮುಕ್ತ ಸ್ಥಿತಿ ಪ್ರಾಪ್ತಮಾಡಿಕೊಂಡಾಗ ದೊರೆಯುವುದು. ಆದ್ದರಿಂದ ಬಸವ ಪೂರ್ವ ಯುಗದ ವೀರಶೈವಮತ ಹಾಗೂ ಬಸವಾದಿ ವಚನಕಾರರ ಲಿಂಗವಂತ ಧರ್ಮ ಒಂದೇ ಹೇಗೆ?

8) ಆಗಮಕಾರರ ಪ್ರಕಾರ ವೀರಶೈವರು ದೀಕ್ಷಾ ತೆಗೆದುಕೊಂಡಮೇಲೆ ತಲೆಯ ಮೇಲೆ ಯಾವುದೇ ಪ್ರಕಾರದ ಒಜ್ಜೆಯನ್ನು ಒಯ್ಯಬಾರದು, ಹೊಲ ಗದ್ದೆಗಳಲ್ಲಿ ಕೆಲಸ ಮಾಡಬಾರದು, ಗಿಡ-ಮರಗಳನ್ನು(ಕಟ್ಟಿಗೆಗಳನ್ನು) ಕಡಿಯಬಾರದು, ನೇಗಿಲ ಹೊಡೆಯಬಾರದು/ಉಳಬಾರದು, ಇತ್ಯಾದಿ ಶ್ರಮಿಕ ಕಾರ್ಯ ಮಾಡದವರೇ ವೀರಶೈವರು. ತದ್ ವಿರುದ್ಧ ಕಾರ್ಯ ಮಾಡವವರು ವೀರಶೈವರಲ್ಲ, ಎಂದು ತಿಳಿಸಿದ್ದಾರೆಂದ ಬಳಿಕ ಬಸವಾದಿ ಶರಣರು ಶ್ರಮಜೀವಿಗಳು, ಕಾಯಕಜೀವಿಗಳು, ಕೃಷಿ ಜೀವಿಗಳು ಇವರೆಲ್ಲರು ವೀರಶೈವರು ಹೇಗೆ ಆಗುತ್ತಾರೆ? ಆಗಮ ಗ್ರಂಥಗಳ ಪ್ರಕಾರ ವೇದಾಗಮನಗಳ ಅಭ್ಯಾಸ ಮಾಡುವಂತಹ ಹಾಗೂ ಪೂಜೆ/ಅರ್ಚನೆಯನ್ನು ಮಾಡುವ ಬ್ರಾಹ್ಮಣ ವರ್ಗದವರಷ್ಟೇ ವೀರಶೈವರಾಗುತ್ತರೆಂದ ಬಳಿಕ ಇಂತಹ ವೇದಾಗಮಗಳನ್ನು ನಮ್ಮ ಧರ್ಮ ಗ್ರಂಥಗಳೆಂದು ಹೇಳಿಕೊಂಡಿರುವಂತಹ ಪಂಚಾಚಾರ್ಯರು ಹಾಗೂ ಅವರ ಅನುಯಾಯಿಗಳು ಲಿಂಗಾಯತರು ಹೇಗೆ ಆಗುತ್ತಾರೆ? ಹಾಗೂ ಲಿಂಗಾಯತ ಧರ್ಮ ಸಂಸ್ಥಾಪಕರು/ಪ್ರಸಾರಕರು ಹೇಗೆ ಆಗುತ್ತಾರೆ? ಮೇಲಾಗಿ ಇಲ್ಲಿ ವೀರಶೈವವೆಂದರೆ ಒಂದು ಜಾತಿಯಾಗುತ್ತದೆ. ಅದು ಧರ್ಮ ಹೇಗೆ ಆಗುತ್ತದೆ? ಇದನ್ನು ಶಿವಯೋಗ ಮಂದಿರ ಹಾಗೂ ಅಖಿಲಭಾರತ ವೀರಶೈವ ಮಹಾಸಭೆ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಗದುಗಿನ ಶ್ರೀಗಳ ಸತ್ಯ ಹೇಳಿಕೆಗೆ ಗುರು ವಿರಕ್ತರ ಪ್ರತಿಕ್ರಿಯೆಯಿಂದ ಸಿದ್ಧ ಮಾಡಿ ತೋರಿಸಿದ್ದಾರೆ. 9) ಜಗದ್ಗುರು ರೇಣುಕಾದಿ ಪಂಚಾಚಾರ್ಯರು ನಾಲ್ಕು ಯುಗಗಳಲ್ಲಿ ಲಿಂಗೋದ್ಭವಿಗಳಾಗಿ ಜನಿಸಿ ಗೋಲಾಕಾರ ಇಷ್ಟಲಿಂಗ ಧಾರಿಯುಕ್ತ ವೀರಶೈವ/ಲಿಂಗಾಯತ ಧರ್ಮ ಪ್ರಚಾರ ಮಾಡಿದ್ದರೆ, ಅವರ ಪ್ರಮುಖ ಕ್ಷೇತ್ರಗಳಾದ ಕಾಶೀ, ಕೇದಾರ, ಉಜ್ಜಯನಿ(ಮಧ್ಯಪ್ರದೇಶ), ಶ್ರೀಶೈಲ, ಕೊಲ್ಲಿಪಾಕಿ(ರಂಭಾಪುರಿ) ಇತ್ಯಾದಿ ಕ್ಷೇತ್ರದ ಸುತ್ತಮುತ್ತಲು ಗೋಲಾಕಾರ ಇಷ್ಟಲಿಂಗ ಧಾರಿಯುಕ್ತ ಸಮಾಜ ಬಾಂಧವ ಬಹುಸಂಖ್ಯೆಯ ದೃಷ್ಟಿಯಿಂದ ಇರಬೇಕಾಗಿತ್ತು. ಆದರೆ ಪ್ರತ್ಯಕ್ಷ ಈ ಕ್ಷೇತ್ರಗಳಲ್ಲಿ ಗೋಲಾಕಾರದ ಇಷ್ಟಲಿಂಗಧಾರಿಯುಕ್ತ ಸಮಾಜವಿಲ್ಲವೆಂದ ಮೇಲೆ ಈ ಆಚಾರ್ಯರು ಸ್ಥಾಪಿಸಿದ ಹಾಗೂ ಪ್ರಚಾರ ಮಾಡಿದ ಧರ್ಮ ಯಾವುದು? ಮತ್ತು ಕರ್ನಾಟಕ ಹಾಗೂ ಅದರ ಸುತ್ತ ಮುತ್ತ ಇರುವಂತಹ ಮಹಾರಾಷ್ಟ್ರ ಹಾಗೂ ಆಂಧ್ರ ಬಿಟ್ಟು ಉಳಿದ ರಾಜ್ಯಗಳಲ್ಲಿ ಲಿಂಗಾಯತ ಸಮಾಜ ಇರುವುದಿಲ್ಲ, ಮತ್ತು ಈ ಆಚಾರ್ಯರು ಕೂಡ ಗೋಲಾಕಾರಯುಕ್ತ ಇಷ್ಟಲಿಂಗಗಳನ್ನೇ ಧಾರಣೇ ಮಾಡಿರುವುದರಿಂದ ಇವರು ಬಸವಪೂರ್ವಯುಗದ ವೀರಶೈವರು ಹೇಗೆ ಆಗುತ್ತಾರೆ? ಹಾಗೂ ವೀರಶೈವರೇ ಅಲ್ಲವೆಂದ ಮೇಲೆ ವೀರಶೈವ ಧರ್ಮಗುರುಗಳು ಕೂಡಾ ಹೇಗೆ ಆಗುತ್ತಾರೆ?

10) ಒಂದು ವೇಳೆ ಬಸವಣ್ಣನವರು ಧರ್ಮಗುರುಗಳಲ್ಲವೆಂದು ಗ್ರಾಹ್ಯಮಾಡಿದರೆ, ಬಸವಣ್ಣನವರ ಸಮಕಾಲೀನ ಹಾಗೂ ಬಸವೋತ್ತರ ಯುಗದ ಅಸಂಖ್ಯಾತ ಶರಣರ ವಚನಗಳು, ಇತಿಹಾಸ, ಸಾಹಿತ್ಯ ಸಂಶೋಧನೆ, ಸರಕಾರಿ ದಾಖಲೆಗಳಲ್ಲಿ (ಧಫ್ತರದಲ್ಲಿಯ) ಬಸವಣ್ಣನವರನ್ನು ಕುರಿತು ಬಳಸಿರುವ/ನುಡಿದಿರುವ/ಬರೆದಿರುವ ಶಬ್ಧಗಳಾದ ಗುರು, ಸದ್ಗುರು, ವರಗುರು, ಗುರುವಿನಗುರು, ಪರಮಗುರು, ಪೂರ್ವಾಚಾರ್ಯ, ಪ್ರಥಮಾಚಾರ್ಯ, ಪರಮಾರಾಧ್ಯ, ಪ್ರಥಮಗುರು, ದೇವಾ ಬಸವಣ್ಣ ನಿಮಗೆಯೂ ಗುರು, ನನಗೆಯೂ ಗುರು, ಲೋಕಕ್ಕೆಲ್ಲಾ ಗುರುವೆಂದು ಬರೆದಿರುವಂತಹ ವಚನಗಳ ಶಬ್ಧಗಳ ಅರ್ಥವೇನು? ಮತ್ತು ಈ ವಚನಗಳು/ಶಬ್ಧಗಳು/ಅಭಿಪ್ರಾಯಗಳು ಎಲ್ಲವೂ ಪ್ರಕ್ಷೀಪ್ತ/ಕೃತ್ರೀಮಗಳೇನು? ಅಥವಾ ಕಾಲ್ಪನಿಕವೇನು?

11) ಸಂಸಾರವು ಹೇಯ, ಹೆಣ್ಣು ಮಾಯೆಯ ಪಾರಮಾರ್ಥ ಸಾಧನೆಗೆ ಯೋಗ್ಯಳಲ್ಲ. ಇಂದ್ರಿಯಗಳನ್ನು ನಿಗ್ರಹಿಸದೇ ಪಾರಮಾರ್ಥ/ಶಿವಪಥ ಅರಿಯಲು ಸಾಧ್ಯವಿಲ್ಲ. ಜೀವ ಹಾಗೂ ಶಿವ ಬೇರೆಬೇರೆಯೇ. ಅವರಲ್ಲಿ ಯಾವುದೇ ಸಂಬಂಧ ಇಲ್ಲವೆಂದು ಶಿವಾದ್ವೈತ ಸಂಸ್ಕೃತಿಯನ್ನು ಭೋಧಿಸುವ ಬಸವ ಪೂರ್ವ ಯುಗದ ಧರ್ಮ (ವೀರಶೈವಮತ/ಪಂಥ), ಹಾಗೂ ಸಂಸಾರವು ಹೇಯವಲ್ಲ, ಅದು ಕರ್ತಾರನ ಕಮ್ಮಟ, ಹೆಣ್ಣು ಮಾಯೆಯಲ್ಲ ಪ್ರತ್ಯಕ್ಷ ಕಪಿಲಸಿದ್ಧಮಲ್ಲಿನಾಥನೆಂದು, ಇಂದ್ರಿಯಗಳನ್ನು ನಿಗ್ರಹಿಸದೆ ಉದಾತ್ತಿಕರಣಗೊಳಿಸಬೇಕೆಂದು, ಜೀವನು ಪರಶಿವನ (ಲಿಂಗದೇವರ) ಒಂದು ಅಂಶವಾದುದರಿಂದಲೇ ಜೀವ ಶಿವನಲ್ಲಿ ಒಂದಾಗಲು ಹಂಬಲಿಸುತ್ತಿರವನೆಂದು ಶೂನ್ಯ ಸಿದ್ಧಾಂತವನ್ನು ಪ್ರತಿಪಾದಿಸುವ ಬಸವ ಧರ್ಮ ಅರ್ಥಾತ ಲಿಂಗಾಯತ ಧರ್ಮ ಹಾಗೂ ಬಸವ ಪೂರ್ವ ಯುಗದ ವೀರಶೈವ ಧರ್ಮ ಒಂದೇ ಹೇಗೆ?

12) ವಚನಕಾರರು ಬಸವಪೂರ್ವದಲ್ಲಿ ಆಗಿ ಹೋದಂತಹ ಎಲ್ಲಾ ಪೂಜ್ಯ ಋಷಿಮುನಿಗಳನ್ನು ದೇವತೆಗಳನ್ನು ತಮಿಳುನಾಡಿನ ಪುರಾತನ ಶಿವಶರಣರನ್ನು ಸ್ಮರಿಸಿದ್ದಾರೆ. ಆದರೆ ಎಲ್ಲಿಯೂ ಪಂಚಾಚಾರ್ಯ ಶಿವಾಚಾರ್ಯರನ್ನು ಸ್ಮರಿಸಿಲ್ಲ. ಮೇಲಾಗಿ ಶೈವ/ವೀರಶೈವ/ಲಿಂಗಾಯತರ ಮಕ್ಕಳಿಗೆ ನಾಮಕರಣ ಮಾಡುವಾಗ ನಾಮಕ್ಕೆ ಲಿಂಗ ಪದ ಜೋಡಿಸಿ ಅಥವಾ ಶಿವಶರಣರ/ಬಸವಾದಿ ಪ್ರಮಥರ ನಾಮಗಳನ್ನು ಇಡುವ ಪದ್ದತಿಯುಂಟು. ಈ ದೃಷ್ಟಿಯಿಂದ ನೋಡಲಾಗಿ ಈ ಪಂಚಾಚಾರ್ಯರ ಹೆಸರುಗಳಾದ ರೇಣುಕ, ದಾರುಕ, ಏಕೋರಾಮ, ವಿಶ್ವಾರಾದ್ಯ ಇತ್ಯಾದಿ ಹೆಸರುಗಳು ಶೈವ/ವೀರಶೈವ/ಲಿಂಗಾಯತರಲ್ಲಿ ಕಂಡುಬರುವುದಿಲ್ಲವೆಂದ ಬಳಿಕ, ಈ ಆಚಾರ್ಯರು ಶೈವ/ವೀರಶೈವ/ಲಿಂಗಾಯತರ ಪೂಜ್ಯ ವ್ಯಕ್ತಿಗಳು ಅಲ್ಲವೇ ಅಲ್ಲ ಹಾಗೂ ಐತಿಹಾಸಿಕ ವ್ಯಕ್ತಿಗಳೂ ಕೂಡ ಅಲ್ಲವೆಂದು ಸಿದ್ಧವಾಗುವುದಿಲ್ಲವೇನು? ಹಾಗೂ ಈ ಆಚಾರ್ಯರು ಕಾಲ್ಪನಿಕ ವ್ಯಕ್ತಿಗಳೆಂದು ಸಿದ್ಧವಾಗುವದರಿಂದ ಅವರು ಸ್ಥಾಪಿಸಿದ ವೀರಶೈವ ಧರ್ಮವೂ ಕೂಡ ಕಾಲ್ಪನಿಕವಲ್ಲವೇನು?

13) ಧರ್ಮವು ಮಾನವ ನಿರ್ಮಿತ, ದೇವ ನಿರ್ಮಿತವಲ್ಲ, ಧರ್ಮವು ದೇವ ನಿರ್ಮಿತವಾಗಿದ್ದರೆ, ದೇವರು ಒಬ್ಬನೇ ಇರುವುದರಿಂದ ಧರ್ಮ-ಧರ್ಮಗಳಲ್ಲಿ ಭೇದಗಳಿರುತ್ತಿರಲಿಲ್ಲ. ಈ ಸಾರ್ವತ್ರೀಕ ಸತ್ಯವನ್ನು ಗ್ರಾಹ್ಯದಲ್ಲಿಟ್ಟುಕೊಂಡು ಜಾಗತಿಕ ಧರ್ಮಗಳ ಇತಿಹಾಸ ನೋಡಲಾಗಿ, ಬಸವಣ್ಣನವರೇ ಲಿಂಗಾಯತ ಧರ್ಮದ ಧರ್ಮಗುರುಗಳಾಗುತ್ತಾರೆ. ಹೊರತು ಧರ್ಮ ಪ್ರಸಾರಕರಲ್ಲ. ಹೇಗೆಂದರೆ ವೈದಿಕ ಹಿಂದು ಧರ್ಮದ ಧರ್ಮಗುರು ಆದ್ಯ ಶಂಕರಾಚಾರ್ಯರು, ಶಂಕರಾಚಾರ್ಯರಿಗಿಂತಲೂ ಪೂರ್ವದಲ್ಲಿ ವೈದಿಕ ಧರ್ಮವಿದ್ದಿಲ್ಲವೆನ್ನಲು ಬರುವುದಿಲ್ಲ. ಕಾರಣ ಹಿಂದುಗಳ ಪವಿತ್ರ ಗ್ರಂಥವಾದ ಗೀತೆಯನ್ನು ಭಗವಾನ ಕೃಷ್ಣನು ಶಂಕರಾಚಾರ್ಯರ ಕಾಲದ ಪೂರ್ವಯುಗದಲ್ಲಿಯೇ ಹೇಳಿದ್ದಾನೆ. ಆದರೂ ಕೂಡ ವೈದಿಕ ಧರ್ಮಗುರುವಿನ ಸ್ಥಾನ ಶಂಕರಾಚಾರ್ಯರಿಗೆ ಸಲ್ಲುತ್ತದೆ. (ಕಾರಣ ಶಂಕರಾಚಾರ್ಯರು ವೈದಿಕ ಮಹಾ ಸಂಪ್ರದಾಯದಲ್ಲಿಯ ಲೋಪದೋಷಗಳನ್ನು ತಿದ್ದಿ ಅದಕ್ಕೆ ಒಂದು ಸ್ವರೂಪವನ್ನು ಕೊಟ್ಟಿರುವದರಿಂದ). ಜೈನ ಧರ್ಮದ ಧರ್ಮಗುರು ಪಟ್ಟ 24ನೇ ತೀರ್ಥಂಕರ ಮಹಾವೀರನಿಗೆ ಸಲ್ಲುತ್ತದೆ. ಅದರಂತೆಯೇ ಬಸವ ಪೂರ್ವಯುಗದಲ್ಲಿಯ ಶೈವ/ವೀರಶೈವ/ಲಲಿತ/ಕಾಪಾಲಿಕ ಇತ್ಯಾದಿ ಮತ ಪಂಥಗಳಲ್ಲಿ ಲೋಪದೋಷಗಳನ್ನು ತಿದ್ದಿ ಜಗತ್ತಿನಲ್ಲಿಯ ಪ್ರಚಲಿತ ಎಲ್ಲಾ ಧರ್ಮಗಳಲ್ಲಿಯ ಸಾರ್ವತ್ರಿಕ ಸತ್ಯ ತತ್ವಗಳನ್ನು ಗುರುತಿಸಿ ಅಳವಡಿಸಿಕೊಂಡು ಒಂದು ವಿಶ್ವಮಾನ್ಯವಾದ ಲಿಂಗಾಯತ ಧರ್ಮವನ್ನು ಕೊಟ್ಟಂತಹ ಧರ್ಮಗುರುವಿನ ಸ್ಥಾನ ಬಸವಣ್ಣನವರಿಗೆ ಸಲ್ಲುತ್ತದೆ. ಆದ್ದರಿಂದ ಲಿಂಗಾಯತ ಧರ್ಮದ ಧರ್ಮಗುರು ಬಸವಣ್ಣನವರು ಮಾತ್ರ. ಮತ್ತು ಲಿಂಗಾಯತ ಧರ್ಮವು ಒಂದು ಸ್ವತಂತ್ರ ಧರ್ಮವು.

ಈ ಧರ್ಮದಲ್ಲಿ ಒಂದು ಪರಿಪೂರ್ಣ ಧರ್ಮದ ಎಲ್ಲಾ ಲಕ್ಷಣಗಳು ಇರುವಾಗ ವಿಶ್ವಧರ್ಮವಾದಂತಹ ಲಿಂಗಾಯತ ಧರ್ಮಕ್ಕೆ ಬಸವಪೂರ್ವಯುಗಕ್ಕೆ ಒಯ್ದು ಲಿಂಗಾಯತ ಧರ್ಮಕ್ಕೆ ಬಸವಪೂರ್ವಯುಗದ ಒಂದು ಮತ-ಪಂಥದಲ್ಲಿಯೇ ತಳ್ಳುವಂತಹ ಸಾಹಸ ಮಾಡುವಂತಹ ಧರ್ಮದ್ರೋಹಿಗಳು, ಧರ್ಮ ಪ್ರಸಾರಕರು ಧರ್ಮಗುರುಗಳು ಹೇಗೆ ಆಗುತ್ತಾರೆ. ಈ ಬಗ್ಗೆ ಆತ್ಮ ಚಿಂತನೆ ಮಾಡುವ ಅವಶ್ಯಕತೆ ಸಮಾಜ ಪ್ರಮುಖರಲ್ಲಿ ಇಲ್ಲವೇನು? ಸುಮಾರು 200-300 ವರ್ಷಗಳ ಹಿಂದೆ ಕೆಲವೊಂದು ಕಾರಣದಿಂದ ಈ ಆಚಾರ್ಯರನ್ನು ನಾಟಕದಲ್ಲಿಯ ರಾಜರಂತೆ ಪಾರ್ಟ ಮಾಡಲು ಸಮಾಜದಿಂದಲೇ ಅನುಮತಿ ಕೊಡಲಾಗಿತ್ತು. ಈಗ ರಾಜರ ಕಾಲಮಾನವಿಲ್ಲ ಪ್ರಜಾರಾಜ್ಯದ ಕಾಲಮಾನ. ರಾಜನ ಪಾರ್ಟ ಅನವಶ್ಯಕ ಆದ್ದರಿಂದ ಈ ಕಾಲಮಾನದಲ್ಲಿಯೂ ಕೂಡ ರಾಜನ ಪಾರ್ಟ ಕಳಚದೆ ನಾವು ಹಾಗೆಯೇ ರಾಜರಂತೆ ಇರುತ್ತೇವೆ/ನಡೆಯುತ್ತೇವೆ ಎಂದವರಿಗೆ ಸಮಾಜವು ಅವರ ರಾಜನ ವೇಶ ಇಳಿಸುವ ಕರ್ತವ್ಯದ ಬದಲು ಈ ನಾಟಕದ ಪಾರ್ಟಿನ ರಾಜರನ್ನೇ ನಿಜವಾದ ರಾಜರೆಂದು ತಿಳಿದು ರಾಜರಂತೆ ಮೆರೆಸುವವರಿಗೆ ಏನೆನ್ನಬೇಕು? ಈ ಕೃತ್ಯ ಸಮಾಜಕ್ಕೆ ಗೌರವವೇ? ಇಂತಹ ಕೃತ್ಯ ಮಾಡುವುದರಿಂದಲೇ ಸಮಾಜ ಪ್ರಗತಿ ಪಥಕ್ಕೆ ಹೋಗುವುದೇ? ಅಥವಾ ಧರ್ಮತತ್ವ ಪ್ರಸಾರ ಮಾಡಿದಂತಾಗುವುದೇ? ಎಂಬ ಆತ್ಮ ಚಿಂತನೆ ಪೂಜ್ಯರು ಸಮಾಜಹಿತ ಚಿಂತನ ಮಾಡುವುದು ಅವಶ್ಯಕ ಅಲ್ಲವೇನು??

ಇನ್ನೊಂದು ಸತ್ಯ ಸಂಗತಿ ಎಂದರೆ ಬ್ರಿಟಿಷ್ ರಾಜ್ಯದ ಕೊನೆಯ ಕಾಲದಲ್ಲಿ (ಸ್ವಾತಂತ್ಯ್ರಪೂರ್ವದಲ್ಲಿ) ಧರ್ಮದ ಆದಾರದ ಮೇಲೆ ಜನಗಣತಿ ಮಾಡುವ ಪೂರ್ವದಲ್ಲಿ ಬ್ರಿಟಿಷರು ಈ ಪಂಚಾಚಾರ್ಯ ಜಗದ್ಗುರುಗಳನ್ನು ಕರೆಯಿಸಿ ನಿಮಗೆ ಧರ್ಮದ ಕಾಯಂ/ಮಾನ್ಯತಾ ಬೇಕಾಗಿದ್ದರೆ ತಿಳಿಸಿರಿ ಎಂದಾಗ ವೀರಶೈವರೆಂದು ತಿಳಿಸಿದರು. ವೀರಶೈವ ಧರ್ಮಕ್ಕೆ ಒಬ್ಬ ಧರ್ಮಗುರುವಿನ ಹೆಸರನ್ನು ಕೇಳಲು ಒಬ್ಬ ಗುರುವಿನ ಹೆಸರು ಹೇಳದ ಮೂಲಕ ವೀರಶೈವ ಧರ್ಮಕ್ಕೆ ಮಾನ್ಯತೆ ಕೊಡಲು ಬರುವುದಿಲ್ಲ ಎಂತಲೂ, ಅಲ್ಲದೆ ಬಸವಣ್ಣನವರ ಅಧಿಕಾರದಲ್ಲಿ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಬೇಕಾದರೆ ಕೊಡುತ್ತೇವೆ ಎಂದಾಗ ನಮಗೆ ಸ್ವತಂತ್ರ ಧರ್ಮದ ಮಾನ್ಯತೆ ಬೇಡ ನಾವು ಹಿಂದು ಧರ್ಮದಲ್ಲಿಯೇ ಹಿಂದು ಶೂದ್ರ ಸಮಾಜವೆಂದು ಇರುತ್ತೇವೆ ಎಂದಿದ್ದಾರೆ?? ಇವರೇ ಪಂಚಾಚಾರ್ಯ ಜಗದ್ಗುರುಗಳು ಇನ್ನೊಂದು ಸಂದರ್ಭದಲ್ಲಿ ಅಂದರೆ ಪರಳಿ ವೈಜಿನಾಥ ಪೂಜಾ ಮಾಡುವ ಆಧಿಕಾರ ಗಿಟ್ಟಿಸಲು ಕೋರ್ಟ ಪ್ರಕರಣದಲ್ಲಿ ಲಿಂಗಾಯತರು ಶೂದ್ರರಲ್ಲ ಹಾಗೂ ಅವರ ಗುರುಗಳಾದಂತಹ ಜಂಗಮರು ಕೂಡ ಶೂದ್ರರಲ್ಲ ಅವರು ಲಿಂಗಿ ಬ್ರಾಹ್ಮಣರು ಎಂದು ಕೋರ್ಟನ ಮುಂದೆ ಸಾಕ್ಷಿ ಹೇಳಿದ್ದಾರೆ?? ತದನಂತರ ಅಂದರೆ ಭಾರತೀಯ ಜನತಾಪಾರ್ಟಿಯ ಶ್ರೀ ವಾಜಪೇಯಿ ಪ್ರಧಾನಮಂತ್ರಿಗಳಾಗಿದ್ದಾಗ ಕೇಂದ್ರ ಸರಕಾರಕ್ಕೆ ಲಿಂಗವಂತ ಜಂಗಮರನ್ನು ಬೇಡಾ/ಮಾಲಾ/ಶೂದ್ರ ಜಾತಿಯಲ್ಲಿ ಪರಿಗಣಿಸಬೇಕು ಎಂದು ವಿನಂತಿಪತ್ರ(ಶಿಫಾರಸು) ಜಗದ್ಗುರು ಪಂಚಾಚಾರ್ಯರು ಕೊಟ್ಟಿದ್ದಾರೆ??

ಎಲ್ಲಾ ಮೇಲಿನ ವಿವರಣೆಯಿಂದ ಈ ಜಗದ್ಗುರು ಪಂಚಾಚಾರ್ಯರು ಹಾಗೂ ಅವರ ಅನುಯಾಯಿಗಳು ಒಂದನ್ನೆ ಸತ್ಯ ಎಂದು ಹೇಳದೆ ಯಾವುದೋ ಆಮಿಷಕ್ಕೆ ಬಲಿಬಿದ್ದು ಏನನ್ನೊ ಹೇಳಿಕೊಳ್ಳುತ್ತಲಿರುವ ಇವರು ಸಮಾಜದಲ್ಲಿ ಗುರುವರ್ಗದವರೆಂದು ಹೇಳಿಕೊಳ್ಳತ್ತಲಿರುವಂತಹ ಈ ಪೌರೋಹಿತಶಾಹಿ ಮುಖಂಡರಿಗೆ ಧರ್ಮದ ಸಂಘಟನೆಯಾಗುವುದು ಬೇಡವಾಗಿದೆ ಎಂದು ಸಿದ್ಧವಾಗುವುದಿಲ್ಲವೇನು?? ಅದಕ್ಕಾಗಿಯೇ ಲಿಂಗವಂತ ಧರ್ಮ ಸಂಘಟನೆ ಸ್ಥಾಪಿಸುವ ಬದಲು ವೀರಶೈವ ಜಾತಿ/ಪಂಥಗಳ ಹೆಸರಿನ ಸಂಘಟನೆ ಸ್ಥಾಪಿಸಿದ್ದಾರೆ ಎಂದು ಸಿದ್ಧವಾಗುವುದಿಲ್ಲವೇನು??

ಮೇಲೆ ವಿವರಿಸಿದಂತಹ ಪ್ರಶ್ನೆಗಳ ಬಗ್ಗೆ ತಾವು ಕೂಡ ವಿಚಾರ ಮಾಡಿ ನೋಡಲಾಗಿ ತಮ್ಮ ಗಮನಕ್ಕೆ ಸಹಜವಾಗಿ ಬರಬಹುದು ತಾವು ಯಾರು ಎಂದು, ಅಂದರೆ ಲಿಂಗಾಯತರೋ ಅಥವಾ ವೀರಶೈವರೋ ಅಂತಾ?? ಈ ಸತ್ಯ ತಿಳಿದುಕೊಂಡ ಮೇಲೆ. ಯಾರಾದರೂ ತಮಗೆ ತಾವು ಯಾರು ಎಂದು ಕೇಳಿದರೆ ಲಿಂಗಾಯತವೆಂದು ಹೇಳಿರಿ.

*
Previousಲಿಂಗಾಯತ ಧರ್ಮ ಮಾನ್ಯತೆವೀರಶೈವರು ಹಿಂದೂಗಳೇ ಆದರೆ ಲಿಂಗಾಯತರು ಹಿಂದೂಗಳಲ್ಲNext
*