ಮಾನವೀಯತೆ

*

- ಶ್ರೀ ಸಂಗಮೇಶ ಎನ್. ಜವಾದಿ,
snjawadi2009@gmail.com

ಓಂ ಶ್ರೀಗುರು ಬಸವಲಿಂಗಾಯ ನಮಃ

“ದಯವಿಲ್ಲದ ಧರ್ಮವದಾವುದಯ್ಯ
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ
ದಯವೇ ಧರ್ಮದ ಮೂಲವಯ್ಯಾ
ಕೊಡಲಸಂಗಯ್ಯ ನಂತಲ್ಲದೊಲ್ಲನಯ್ಯ” - ಗುರು ಬಸವಣ್ಣನವರು

ಮಾನವೀಯತೆ, ಸತ್ಯ ಮತ್ತು ದಯೆ ಜಗತ್ತನ್ನು ನೋಡುತ್ತಿರುವ ಕಣ್ಣುಗಳು ಅದರಲ್ಲೂ ಮಾನವೀಯತೆ ಮೌಲ್ಯಗಳಿಗೆಲ್ಲ ಕಿರೀಟವಿದ್ದಂತೆ ಪ್ರಾಣಿಗಳಲ್ಲಿ ದಯೆ, ಮಾನವೀಯತೆ ಮುಂತಾದ ಮಾನವೀಯ ಗುಣಗಳಿಲ್ಲದಿರುವುದರಿಂದ ಒಂದು ಪ್ರಾಣಿ ಮಾತ್ತೊಂದು ಪ್ರಾಣಿಯನ್ನು ಕೊಂದು ಉಪಜೀವಿಸುವುದನ್ನು ಕಾಣಬಹುದು ಮಾನವನಲ್ಲಿ ಈ ತೆರನಾದ ಕೃತ್ಯಗಳು ಸಂಭವಿಸಬಾರದೆಂದು ದೇವರು ಮಾನವನಲ್ಲಿ ಮಾನವೀಯತೆ, ದಯೆ, ವಿವೇಕ ಮುಂತಾದ ಗುಣಗಳನ್ನು ನೀಡಿದ್ದಾನೆ.

*

ಮಾನವೀಯ ಮೌಲ್ಯಗಳು, ಹಾಗು ಪ್ರೀತಿ, ವಿಶ್ವಾಸ, ಅನುಕಂಪ ಇಲ್ಲದವರು ರಾಕ್ಷಸ ಶಕ್ತಿಗಳ ಪ್ರತೀಕವೇ ಹೊರತು, ಮಾನವರಲ್ಲವೆಂಬ ಮಾತನ್ನು ಹೇಳಬಹುದು ಆದ್ದರಿಂದ ಪರಸ್ಪರಲ್ಲಿ ಇಂತಹ ಮಾನವೀಯ ಮೌಲ್ಯಗಳನ್ನು ಬಿತ್ತುವ ಕೆಲಸ ಬಹಳವಾಗಿ ಆಗಬೇಕಾಗಿದೆ.

ಈ ಜಗತ್ತಿನ ಜೀವನ ನಂದನವನವಾಗ ಬೇಕಾದರೆ, ಪ್ರತಿಯೊಬ್ಬರಲ್ಲಿ ಧಾರ್ಮಿಕ ಮೌಲ್ಯಗಳು ಚಿಗುರೊಡೆಯಬೇಕು, ಆ ವಸಂತದ ಗಾಳಿ ಸುಯ್ಯೆಂದು ಸುಳಿಯುತ್ತಲೇ, ವಾತಾವರಣದಲ್ಲಿ ಏನೋ ಒಂದು ಚೈತನ್ಯ, ಸರ್ವ ಹೃದಯಗಳೆಲ್ಲವೂ ಚೈತನ್ಯ ರೂಪಗಳಾಗಿ ಸಿಂಚನಗೈಯ್ಯಬೇಕು. ಸಂಸ್ಕಾರ, ಮಾನವೀಯ ಗುಣಗಳು ಎಲ್ಲರಲ್ಲಿ ಮೂಡಬೇಕು ಸರ್ವರಲ್ಲಿ ಸಖ್ಯ ಸಾಧಿಸುವ ಧರ್ಮದ ಅವಶ್ಯಕತೆಯಿದೆ, ಇಂದು ಮಾನವೀಯತೆಯ ಮೂಲವಾದ ದಯೆ ಇಡೀ ಜನಾಂಗವನ್ನು ಒಂದು ಗೊಡಿಸುವುದು, ದಯೇ ಇಲ್ಲದಿರುವದನ್ನು ಧರ್ಮವೆಂದು ಒಪ್ಪಿಕೊಳ್ಳುವುದಾದರು ಹೇಗೆ ? ದಯವೇ ಧರ್ಮದ ಪ್ರಾಣ, ಪ್ರಾಣವಿಲ್ಲದ ವಸ್ತು ಜಡ. ಅಂತೆಯೇ ಮಾನವೀಯ ದಯವಿಲ್ಲದ ಧರ್ಮವೂ ಜಡ, ಧರ್ಮದಲ್ಲಿ ದಯೇ ಬೆರೆತಿರುವುದರಿಂದಲೇ ಧರ್ಮಕ್ಕೆ ಮುಲ್ಯವಿದೆ, ಮನ್ನಣೆಯಿದೆ, ಅಂತಹ ಧರ್ಮ ಜಡವಲ್ಲ , ಅದು ನಿರಂತರ ಚಲನ ಶೀಲ, ಸೃಜನಶೀಲ, ಅಂತೆಯೇ “ಪ್ರಾಚೀನ ಋಷಿ ಪುಂಗವರು ಸತ್ಯಂವದ ಧರ್ಮಂಚರ” ಎಂದಿರುವುದು ತುಂಬಾ ಅರ್ಥಪೂರ್ಣ ಅದರಂತೆ ನ್ಯಾಯ, ನೀತಿಗಳು ನಮ್ಮ ನಡೆ ಆಗಬೇಕು, ಮಾನವೀಯ ಧರ್ಮ ನಮ್ಮ ಜೀವನ ಪದ್ದತಿಯಾಗಬೇಕು, ಹೀಗೆ ಸತ್ಯ, ನ್ಯಾಯ, ನೀತಿ ಅನುಕಂಪ, ವಿಶ್ವಾಸ, ಪ್ರೀತಿ ಮುಂತಾದ ಮಾನವೀಯ ಗುಣಗಳನ್ನು ಆಳವಡಿಸಿಕೊಂಡವರು ಸಮಾಜದಲ್ಲಿ ಆದರ್ಶ ವ್ಯಕ್ತಿಯೆಂತಲು ದಾರ್ಶನಿಕನೆಂತಲೂ ಎನಿಸಿ, ಸಾಮಾನ್ಯ ವ್ಯಕ್ತಿಗಿಂತ ಮೇಲಾಗಿ ಬದುಕುತ್ತಾರೆ.

ಮಾನವೀಯತೆ ಧರ್ಮ ಗ್ರಂಥಸ್ಥವಾಗಿದ್ದರೆ ಸಾಲದು, ಹೃದಯಸ್ಥವಾಗಬೇಕು ಅಂತಹ ಮಾನವೀಯ ಧರ್ಮಕ್ಕೆ “ಕ್ರಿಯಾಶೀಲ ಧರ್ಮ” ಎಂದು ಕರೆಯಬಹುದು ಪ್ರಸ್ತುತ ಮಾನವಕೋಟಿಯನ್ನು ಉದ್ಧರಿಸುವ ಒಗ್ಗೊಡಿಸುವ ಕಾರ್ಯವೂ ಕ್ರಿಯಾಶೀಲ ಧರ್ಮದಿಂದ ಮಾತ್ರ ಸಾಧ್ಯ ಅದು ವೇದಿಕೆಯನ್ನು ಬಿಟ್ಟು ಜನರ ಅಂತರಗಂಗವನ್ನು ಪ್ರವೇಶಿಸಬೇಕು, ಪ್ರಕಾಶಿಸಬೇಕು, ಮಾನವೀತೆಯ ಧರ್ಮ ಆತ್ಮದ ಆತ್ಮೀಯ ಕಷ್ಟ ಸುಖಗಳಿಗೆ ಸ್ವಂದಿಸಬೇಕು ಅದುವೇ ವಿಶ್ವಧರ್ಮ/ಶರಣ ಧರ್ಮ, ಮಾನವೀಯ ಧರ್ಮ ಕ್ರಿಯಾಶೀಲಧರ್ಮ.

ಶತಮಾನಗಳಿಂದ ಕಂದಾಚಾರಗಳನ್ನೇ ಮಾನವಿಯತೆಯ ಧರ್ಮವೆಂದು ಒಪ್ಪಿಕೊಂಡು ಆಚರಿಸಿಕೊಂಡು ಬಂದ ನಮಗೆ ಕ್ರಿಯಾಶೀಲ ಧರ್ಮವನ್ನು ಅರ್ಥೈಸಿಕೊಳ್ಳುವುದು ಸ್ವಲ್ಪ ಕಷ್ಟವಾಗಬಹುದು ಒಂದು ಕಾಲದಲ್ಲಿ ರೂಪಿಸಿದ ನಿಯಮಗಳು ಮತ್ತೊಂದು ಕಾಲದಲ್ಲಿ ಕಂದಾಚಾರವಾಗುವ ಸಾಧ್ಯತೆಯಿದೆ ಅಂತಹ ಸಂದರ್ಭದಲ್ಲಿ ಇಡೀ ವ್ಯವಸ್ಥೆಯನ್ನೆ ಬದಲಾಯಿಸಬೇಕೆಂಬ ಸ್ವಾಮಿ ವಿವೇಕಾನಂದರು ಕೊಡುವ ಎಚ್ಚರ ಒಂದಾದರೆ ಬಡವ, ದೀನ ದಲಿತ ರೋಗಿಗಳಲ್ಲಿ ದೇವರನ್ನು ಕಾಣುವ ದೃಷ್ಟಿ ಮತ್ತೊಂದು ಅದು ಮಾನವತೆಗೆ ಕೊಂಡೊಯ್ಯುವ ಹಾದಿಯೆಂಬುದನ್ನು ಮರೆಯಬಾರದಷ್ಟೆ ದೇವರನ್ನು, ದೇವಮಾನವನನ್ನು ಗೌರವಿಸಬೇಕು, ಅದರಂತೆ ದೀನರ/ದಲಿತರ, ಬಡವರ/ರೈತರ, ಸೇವೆಯನ್ನು ಮಾಡಬೇಕು, ಈ ಸಂದರ್ಭದಲ್ಲಿ ಹೇಳಬೇಕಾದರೆ 12ನೇ ಶತಮಾನದ ಶರಣರು ನಡೆದು ತೋರಿಸಿದ ಮಾರ್ಗ ನಮ್ಮಗೆ ಮೇಲ್ಪಂಕ್ತಿಯಾಗಬೇಕು ಜಾತಿ – ಕುಲ, ಮೇಲು – ಕೀಳು, ಈ ಮುಂತಾದ ತಾರತಮ್ಯಭಾವ ಇಲ್ಲವಾಗಿ ಸಂತೋಷವಾಗುವಂತಹ ಬಾಳನ್ನು/ಜೀವನವನ್ನು ನಡೆಸಬೇಕು, ಸರ್ವರ ಲೇಸನ್ನು ಹಾರೈಸಬೇಕೆಂಬುದೇ ಅವರ ಪ್ರಮುಖ ಆಸೆಯಾಗಿರುತ್ತದೆ.

*

“ ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸುವ ನಮ್ಮ ಕೊಡಲ ಸಂಗನ ಶರಣರೇ ಕುಲಜರು” ಎಂಬ ಬಸವಣ್ಣನವರ ಮಾತಿನಲ್ಲಿ ಕುಲವೆಂಬುದಕ್ಕೆ ಹೊಸ ಅರ್ಥವನ್ನೆ ಕೊಟ್ಟಿದ್ದಾರೆ ವಿಶ್ವವಿಶಾಲ ಪ್ರೀತಿಯೇ ಕುಲ ಎನ್ನುವುದನ್ನು ಅವರು ಪ್ರತಿಪಾಧಿಸಿದ್ದಾರೆ ಇಂತಹ ಪ್ರೀತಿಯ – ಕುಲ ನಮಗೆ ಮೆಲ್ಪಂಕ್ತಿಯಾಗಬೇಕು ಗುರು ಬಸವಣ್ಣನವರ ಮಾನವೀಯ ಗುಣದ ಮತ್ತೊಂದು ವಚನ ಹೀಗಿದೆ

“ಇವನಾರವ ಇವನಾರವ, ಇವನಾರವ ಎಂದೆನಿಸದಿರಯ್ಯಾ
ಇವನಮ್ಮವ ಇವನಮ್ಮವ, ಇವನಮ್ಮವ ಎಂದೆನಿಸಯ್ಯಾ
ಕೂಡಲ ಸಂಗಮದೇವಾ ನಿಮ್ಮ ಮನೆಯ ಮಗನೆಂದನಿಸಯ್ಯಾ"

ಎಂದು ಹೇಳಿರುವುದು ಮಾನವೀಯತೆಯ ಮೌಲ್ಯಗಳನ್ನು ಸಾರುವ ಅರ್ಥಗರ್ಭೀತವಾದ ವಚನ ಎನ್ನಬಹುದು. ಪುಣ್ಯ ಭೂಮಿಯೆಂದು ಕರೆಯಲಾದ ನಮ್ಮ ಭಾರತದೇಶ ಇಂದು ಸಮಸ್ಯೆಗಳ ಭೂಮಿಯಾಗಿದೆ ಅಧಿಕವಾಗಿ ಬೆಳೆಯುತ್ತಿರುವ ಜನಸಂಖ್ಯೆ, ಬಡತನ, ನೀರುದ್ಯೋಗ, ಭ್ರಷ್ಟಾಚಾರ, ಹಿಂಸಾಚಾರ ಇವುಗಳ ನಿವಾರಣೆ ಹೇಗೆ? ಎಲ್ಲರಿಗೂ ಆರೋಗ್ಯ ಸೌಕರ್ಯ, ಶಿಕ್ಷಣ, ಸ್ವಾವಲಂಬನೆ, ರಾಷ್ಟ್ರದ ಭದ್ರತೆ ಇವುಗಳು ಬೇಕಾಗಿವೆ. ಬೇರೆ-ಬೇರೆ ಭಾಷೆ, ಪ್ರಾಂತಗಳು ಇರುವ ಭಾರತೀಯರಾದ ನಾವೆಲ್ಲಾ ಮಾನವೀಯತೆಯ ದೃಷ್ಟಿಯನ್ನು ಗಮನದಲ್ಲಿ ಇಟ್ಟಿಕೊಂಡು, ಸಮಗ್ರತೆಯ ಭಾವನೆಯನ್ನು ಸಂಸ್ಕ್ರತಿಯನ್ನು ನಮ್ಮಲ್ಲಿ ಬೆಳೆಸಿಕೊಳ್ಳಬೇಕಾಗಿದೆ.

“ದೌರ್ಜನ್ಯ ರಹಿತ, ಸೌಜನ್ಯ ಸಹಿತ”, ನೀತಿ ಆಧಾರಿತ ಸಮಾಜ ನಿರ್ಮಾಣವೇ ಬಸವಾದಿ ಶರಣರ ಗುರಿ ಹಾಗು ಎಲ್ಲಾ ವಿಶ್ವದ ಆದರ್ಶ ಪುರುಷರ ಆಶಯವಾಗಿದೆ” ಅವರ ಆಶಯಕ್ಕೆ ಒತ್ತು ಕೊಡಬೇಕಾದುದು ಎಲ್ಲರ ಕರ್ತವ್ಯವಾಗಿದೆ. ಹಾಗೆ ಆದಾಗಲೇ ಮಾಹಾತ್ಮರ ಜಯಂತಿ, ಪುಣ್ಯದಿನ ಆಚರಣೆಗೆ ಒಂದು ಅರ್ಥ ಬರುತ್ತದೆ ಪುಣ್ಯ ಪುರುಷರಿಗೆ ಸಲ್ಲಿಸುವ ನಿಜವಾದ ಗೌರವ ಇದುವೇ ಆಗಿದೆ.

ಮಾನವ ಇಂದು ಚಂದ್ರಲೋಕಕ್ಕೆ ಹೋಗಿ ಬಂದಿದ್ದಾನೆ ಇನ್ನೇನು ಮಂಗಳದಲ್ಲಿ ಓಡಾಡಿ ಬರುವವನಿದ್ದಾನೆ ಸೋಜಿಗವೆಂದರೆ ತನ್ನ ಅಕ್ಕ ಪಕ್ಕದವರನ್ನು ಅರಿಯಲು ಮರೆತಿದ್ದಾನೆ. ನೆರೆ ಹೊರೆಯವರ ನೋವಿಗೆ ಅವನು ಸ್ಪಂದಿಸದೆ ತಟಸ್ಥನಾಗಿದ್ದಾನೆ, ನಿಜವಾಗಿಯು ಇದು ಮಾನವೀಯತೆಯ ಕೊರತೆಯಾಗಿದೆ. ಮಾನವನ ಬದಕಿನ ಬಹುದೊಡ್ಡದಾದ ಈ ದುರಂತವನ್ನು ಮರೆತು ಬೇಗನೆ ಅರಿತರೆ ಮುಂದೆ ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸಬಹುದೇನೊ ಎಂಬ ಅಭಿಪ್ರಾಯ ನಮ್ಮದಾಗಿದೆ. ಇದೇ ಮಾನವೀತೆಯ ನೆಲಗಟ್ಟಾಗಿದೆ. ಇಂದು ನಾವು ವಿಶ್ವಕ್ಕೆ ಕೊಡಬಹುದಾದ ಶರಣರ ಮಾನವೀಯತೆಯ ಮೌಲ್ಯಗಳನ್ನು ಸಕಲ ಜೀವಾತ್ಮರಲ್ಲಿ ಕಾಣುವಂತೆ ಮಾಡಬೇಕಾಗಿದೆ ಅಲ್ಲವೇ.

ಸಂಗಮೇಶ ಎನ್. ಜವಾದಿ
ಅಧ್ಯಕ್ಷರು, ಕಲ್ಯಾಣ ಕಾಯಕ ಪ್ರತಿಷ್ಠಾನ
ಕೂಡಂಬಲ. ತಾ: ಹುಮನಾಬಾದ. ಜಿ: ಬೀದರ.
ಇಮೇಲ್ : snjawadi2009@gmail.com

*
ಪರಿವಿಡಿ (index)
Previousಕೃಷಿ ಕಾಯಕ ಶರಣರುಲಿಂಗಾಯತ ಧರ್ಮ ಪ್ರಶ್ನೋತ್ತರ Next
*