Previous ಕಲ್ಲನಾಗರಕ್ಕೆ , ಹಾವಿನ ಹುತ್ತಕ್ಕೆ, ಹಾಲನೆರೆದು ವ್ಯರ್ಥ ಮಾಡಬೇಡಿ ವೀರಶೈವವೋ? ಲಿಂಗಾಯತವೋ? Next

ಮಹಾಗುರು ಬಸವಣ್ಣ ಸಂಸ್ಥಾಪಿಸಿದ ಲಿಂಗಾಯತ ಧರ್ಮ

*

- ಡಾ. ಮರಿಬಸಪ್ಪ ದನದಮನಿ

'ಲಿ' ಕಾರವೇ ಶೂನ್ಯ, 'ಬಿಂದುವೇ' ಲೀಲೆ, 'ಗ'ಕಾರವೇ ಚಿತ್
ಈ ತ್ರಿವಿಧದೊಳಗೆ 'ಲಿಂಗ' ವೆಂಬ ಸಕೀಲ
ಇದರ ಸಂಚಯ ಬಲ್ಲಾತನೇ ಲಿಂಗಸಂಗಿ
ಕೂಡಲಚೆನ್ನಸಂಗಮದೇವ
ಲಿಂಗಾನುಭವಿಗಳ ಶ್ರೀಚರಣಕ್ಕೆ ನಮೋ ನಮೋ ಎಂಬೆ - ಲಿಂಗ ಜ್ಞಾನಿ ಚೆನ್ನಬಸವಣ್ಣವರು

ಈ 'ವಿಶ್ವ' ಅಂತರಂಗ-ಬಹಿರಂಗ ಸ್ವರೂಪಗಳಿಂದ ಕೂಡಿದೆ.ಅಂತರಂಗ ಬಯಲು ಅಗೋಚರವಾಗಿದೆ.ಇದೇ ಶೂನ್ಯ-ಬಯಲು. ಶೂನ್ಯದಿಂದ ಹೊರಹೊಮ್ಮಿದ ಮಹಾಕುಂಡಲಿನಿಯೇ ಚೈತನ್ಯಮಯ ಚಿತ್ ಶಕ್ತಿ ಲಿಂಗ! ಲಿಂಗದ ಬೆಳಗು-'ಅಗೋಚರಬೆಳಗು’!

ಅಮೂಲ್ಯನು ಅಪ್ರಮಾಣನು ಅಗೋಚರ ಲಿಂಗವು,
ಆದಿ ಮಧ್ಯಾವಸನಗಳಿಲ್ಲದ ಸ್ವತಂತ್ರ ಲಿಂಗವು ನಿತ್ಯ ನಿರ್ಮಳ ಲಿಂಗವು!
ಅಯೋನಿ ಸಂಭವನಯ್ಯಾ ನಮ್ಮ ಕೂಡಲಸಂಗಮದೇವರು
-ವಿಶ್ವಗುರು ಬಸವಣ್ಣನವರು.

ಮಹಾಕುಂಡಲಿನಿಯೇ ಅನಂತಕಾಲ ರೂಪಾಂತರ ಹೊಂದಿ ಈ ವಿಶ್ವ-ಸೃಷ್ಟಿ ರೂಪತಾಳಿದೆ. ಜೀವ ಜಗತ್ತು ಹುಟ್ಟಿ ಬಂದಿದೆ, ಮತ್ತು ವಿಕಾಸ ಹೊಂದಿದೆ. ಇದು ಸೃಷ್ಟಿಕರ್ತನ ಶಕ್ತಿ! ಇದು ಗೋಚರವಾದ ಬಯಲು-ಸೃಷ್ಟಿ! ಕಾರಣ! ಎಲ್ಲ ಭೌತಿಕ ವಸ್ತುಗಳಲ್ಲಿ ಶಕ್ತಿ ಅಡಗಿದೆ. ಇದೇ ಲಿಂಗದೇವನ ಲೀಲೆ-ಸೃಷ್ಟಿಯ ರಹಸ್ಯ!

ಕೀಟಕ ಸೂತ್ರದ ನೂಲಗೂಡಮಾಡಿ ಸುತ್ತಿರ್ಪಂತೆ ಸೂತ್ರಕ್ಕೆ ನೂಲನೆಲ್ಲಿಂದ ತಂದಿತ್ತಯ್ಯಾ?
ರಾಟಿಯಿಲ್ಲ, ಅದಕ್ಕೆ ಹಂಜಿ ಮುನ್ನವೆಯಿಲ್ಲ ನೂತವರಾರೋ?
ತನ್ನೊಡಲ ನೂಲ ತೆಗೆದು ಪಸರಿಸಿ
ಅದರೊಳು ಪ್ರೀತಿಯಿಂದೊಲಿದಾಡಿ
ತುದಿಯಲ್ಲಿ ತನ್ನೊಳಗದ ಮಡಗಿಕೊಂಡಿಪ್ಪಂತೆ
ತನ್ನಿಂದಾದ ಜಗವ ತನ್ನೊಳಗೈದಿಸಿಕೊಳ್ಳಬಲ್ಲ
ನಮ್ಮ ಕೂಡಲಸಂಗಮದೇವರು -ವಿಶ್ವಗುರು ಬಸವಣ್ಣನವರು.

ಶೂನ್ಯದಿಂದ ಹೊರಹೊಮ್ಮಿದ ಶಕ್ತಿ ಲಿಂಗಬೆಳಗು ಅಗೋಚರ ಬೆಳಗು ಲಿಂಗವು ಮಹಾ ಕುಂಡಲಿನೀ. ಇದೇ ದ್ವಿವಿಧವಾದ 'ಶಿವ-ಶಕ್ತಿ' ಪರಿಕಲ್ಪನೆ. ಮಹಾಕುಂಡಲಿನಿಯೇ ಈ ವಿಶ್ವ-ಸೃಷ್ಟಿಯ ಕಾರಣ ಮತ್ತು ಶೂನ್ಯವೇ ಮಹಾಕಾರಣವೆನಿಸಿದೆ.ಈ ಮಹಾಕುಂಡಲಿನಿಯು ಈ ಸೃಷ್ಟಿಯ ಹಿಂದೆ ಅಡಗಿದೆ ಮತ್ತು ಮಾನವನ ಆಧಾರದಲ್ಲಿ ಸುಪ್ತವಾಗಿದೆ (ಅಡಗಿದೆ) ಆದ್ದರಿಂದ ಮಾನವ ಹಾಗೂ ಈ ವಿಶ್ವದ ಅಂತರಂಗ ಒಂದೆಯಾಗಿದೆ. ಬ್ರಹ್ಮಾಂಡದಲ್ಲಿರುವುದು ಮಾನವನ ಶರೀರದಲ್ಲಿರುವುದೂ ದಿಟವಾಗಿದೆ. ಇದು ಅನುಭವಿಕರ ಸತ್ಯ-ಪರಮಸತ್ಯ.

ಅರಿವಿನ ಅಪ್ಯಾಯನಕ್ಕೆ ಅನುಭಾವವೆ ತೃಪ್ತಿ
ಅರಿವು ನೆರೆಕೂಡಿ ಆಕಾಶವೆ ಪ್ರಾಣವಾಗಿ ವಿಶ್ರಮಿಸಿದ ಬಳಿಕ
ಶ್ರೀಗುರು ಕೃಪೆಯ ಮಾಡಿದ ಪ್ರಾಣಲಿಂಗ ಘನವೆಂತೆಂದೆಡೆ,
ಮತ್ಸನುಂಗಿದ ಮಾಣಿಕ್ಯದಂತೆ,
ಕಣ್ಣಾಲಿ ನುಂಗಿದ ನೋಟದಂತೆ,
ಬಯಲನೊಳಕೊಂಡ ಬ್ರಹ್ಮಾಂಡದೊಳಗಿಪ್ಪ
ಸ್ವಯಾನುಭವಿಗಳ ಅನುಭಾವದಿತೋರಿ ಬದುಕಿಸಾ
ಕೂಡಲಸಂಗಮದೇವಾ -ವಿಶ್ವಗುರು ಬಸವಣ್ಣನವರು.

ವಿಶ್ವದ ಮತ್ತು ಮಾನವನ ಆಂತರಿಕ(ಅಂತರಂಗ) ಸ್ವರೂಪವು ವಿಸ್ಮಯವಾಗಿದೆ ಹಾಗು ವಿರಾಟಸ್ವರೂದ್ದಾಗಿದೆ. ಈ ಆಂತರಿಕ ಸ್ವರೂಪವೇ ಮಾನವ ಜೀವನ ಬದುಕಿನ ವೈಶಿಷ್ಠ್ಯವಾಗಿದೆ. ಇದೆ ಮಾನವಧರ್ಮದ ಮೂಲ ಅವಶ್ಯಕತೆ. ಇದು ಗಹನವಾದುದು ಹಾಗೂ ಗೂಢವಾದ ವಿಷಯ ಸಂಗತಿ. ಇದು ಮಹಾಗುರು ಬಸವಣ್ಣನವರು ಭೇದಿಸಿದ ಸತ್ಯ-ಪರಮಸತ್ಯ-ಲಿಂಗತತ್ವ ಏಕದೇವೂಪಾಸನೆಯ ಆಚರಣೆ.

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ,
ಬ್ರಹ್ಮಾಂಡದಿಂತ್ತತ್ತ ನಿಮ್ಮ ಶ್ರೀ ಮಕುಟ,
ಅಗಮ್ಯ ಅಗೋಚರ ಅಪ್ರಮಾಣ ಲಿಂಗವೇ!
ನಿವೆನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ
ಕೂಡಲಸಂಗಮದೇವಯ್ಯಾ
-ವಿಶ್ವಗುರು ಬಸವಣ್ಣನವರು.

ವಿಶ್ವದ ಏಕೈಕ ದೇವರು ಶೂನ್ಯ-ಲಿಂಗ (ಪರಮಾತ್ಮ-ಸೃಷ್ಟಿಕರ್ತನ) ಕುರುಹಾಗಿ, ಮಹಾಗುರು ಬಸವಣ್ಣನವರು ನಮ್ಮ ಕರಸ್ಥಲಕ್ಕೆ ಇಷ್ಟಲಿಂಗ ಕೊಟ್ಟರು. 'ಇಷ್ಟಲಿಂಗ'ವೇ ಲಿಂಗಾಯತ ಧರ್ಮ ಲಾಂಛನ ಮತ್ತು ಸಮಾನತೆಯ ಸಂಕೇತ ಹಾಗು ಸಿದ್ದಾಂತ, ಸಾಧನೆಯ ಸರ್ವ ಶ್ರೇಷ್ಠ ಸಾಧನವು.

ಲಿಂಗದ ಉಂಡಿಗೆಯ ಪಶುವಾನಯ್ಯಾ
ವೇಷಧಾರಿಯಾನು, ಉದರ ಪೋಷಕ ನಾನಯ್ಯ,
ಕೂಡಲಸಂಗಮನ ಶರಣರ
ಮನೆಯ ಧರ್ಮದ ಕವಿತಿಯಾನಯ್ಯ -ವಿಶ್ವಗುರು ಬಸವಣ್ಣನವರು.

ಭಕ್ತಿಯೆಂಬ ಪೃಥ್ವಿಯ ಮೆಲೆ
ಗುರುವೆಂಬ ಬೀಜವಂಕುರಿಸಿ,
ಲಿಂಗವೆಂಬ ಎಲೆಯಾಯಿತ್ತು,
ಲಿಂಗವೆಂಬ ಎಲೆಯ ಮೆಲೆ
ವಿಚಾರವೆಂಬ ಹೂವಾಯಿತ್ತು,
ಆಚಾರವೆಂಬ ಕಾಯಾಯಿತ್ತು
ನಿಷ್ಪತ್ತಿಯೆಂಬ ಹಣ್ಣಾಯಿತ್ತು,
ನಿಷ್ಪತ್ತಿ ಎಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ -ವಿಶ್ವಗುರು ಬಸವಣ್ಣನವರು.

ಈ ವಚನವು ಮಹಾಗುರು ಬಸವಣ್ಣರು ಲಿಂಗತತ್ವ ಷಟ್ಸ್ಥಲ ಸಿದ್ದಾಂತದ ವ್ಯಾಖ್ಯಾನವಾಗಿದೆ.ಇದು ಮಾನವ ಜೀವನದ ಬದುಕಿನ ಧ್ಯೇಯವನ್ನು ತೋರಿಸುತ್ತದೆ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ! ಹುಟ್ಟು ಸಾವುಗಳ ಮಧ್ಯ ಮಾನವನ ಜೀವನ ಶಕ್ತಿಯುತವಾಗಿ ಇರಬೇಕು. ಬದುಕು ಸುಂದರ ಗಂಭೀರ ಮತ್ತು ಮಧುರ ಭಕ್ತಿಯಿಂದ ಕೂಡಿರಬೇಕು. ಕಾರಣ ಪರಮಾತ್ಮನ ಕಾರುಣ್ಯವೇ ಬದುಕಿನ ಜೀವಾಳ. ಭಕ್ತಿ ಹುಟ್ಟಬೇಕು, ಸರ್ವರಲ್ಲಿ ಅರಿವು ಮೂಡಿ, ಅರಿವು ಆಚರಣೆಯಾಗಬೇಕು, ಜೀವನವೇ ಯೋಗಸಾಧನೆಯಾಗಬೇಕು.

ಜಗವ ಸುತ್ತಿಪ್ಪುದು ನಿನ್ನ ಮಾಯೆಯಯ್ಯಾ,
ನಿನ್ನ ಸುತ್ತಿಪ್ಪುದು ಎನ್ನ ಮನ ನೋಡಾ,
ನೀನು ಜಗಕ್ಕೆ ಬಲ್ಲಿದನು, ಆನು ನಿನಗೆ ಬಲ್ಲಿದನು, ಕಂಡಯ್ಯಾ
ಕರಿಯು ಕನ್ನಡಿಯೊಳಡಗಿದಂತಯ್ಯಾ
ಎನ್ನೊಳಗೆ ನೀನಡಗಿದೆ ಕೂಡಲಸಂಗಮದೇವ -ವಿಶ್ವಗುರು ಬಸವಣ್ಣನವರು.

ಮಾನವ ಜೀವನ ಶ್ರೇಷ್ಠವಾಗಿದೆ, ಪರಮಾತ್ಮನ ಪ್ರಸಾದವಾಗಿದೆ, ಈ ಸೃಷ್ಟಿಯಲ್ಲಿ ನಡೆಯುವುದೆಲ್ಲವೂ ಲಿಂಗದೇವನ ಲೀಲೆ. ಅಂಗ-ಲಿಂಗ (ಶಿವ-ಜೀವರ) ಸಂಬಂಧ ಭೇದಿಸುವುದೇ ಶಿವಯೋಗ ರಹಸ್ಯ. ಇದೇ ಬಸವ ಯೋಗ ಸಾಧನೆ-ಅನುಭಾವದ ತಿರುಳು.
ಮಹಾಗುರು ಬಸವಣ್ಣನವರು ಜಗತ್ತು ಕಂಡ ಶ್ರೇಷ್ಠ ಅನುಭವಿ ಮತ್ತು ಸ್ವತಂತ್ರ ವಿಚಾರವಾದಿಗಳು, ಅವರು ವೈದಿಕ ಕರ್ಮಕಾಂಡ ಖಂಡಿಸಿದರು ಮತ್ತು ಶೈವರ ಮೂಢಭಕ್ತಿಯನ್ನು ತಿರಸ್ಕರಿಸಿದರು.

ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ,
ತರ್ಕದ ಬೆನ್ನ ಬಾರನೆತ್ತುವೆ,
ಆಗಮದ ಮೂಗ ಕೊಯ್ಯುವೆ ನೊಡಯ್ಯಾ
ಮಹಾದಾನಿ ಕೂಡಲಸಂಗಮದೇವಾ
ಮಾದಾರ ಚೆನ್ನಯ್ಯನ ಮನೆಯ ಮಗನಾನಯ್ಯ


ಉಳ್ಳವರು ಶಿವಾಲಯ ಮಾಡುವರು,
ನಾನೇನು ಮಾಡುವೆ ಬಡವನಯ್ಯಾ,
ಎನ್ನ ಕಾಲೇ ಕಂಭ, ದೇಹವೆ ದೇಗುಲ,
ಶಿರವೇ ಹೊನ್ನ ಕಳಸವಯ್ಯ
ಕೂಡಲಸಂಗಮದೇವ ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ. -ವಿಶ್ವಗುರು ಬಸವಣ್ಣನವರು.

ಮಹಾಗುರು ಬಸವಣ್ಣನವರು ಮಾನವ ದೇಹವನ್ನೆ ದೇವಾಲಯವನ್ನಾಗಿಸಿದರು. ಪುರೋಹಿತರನ್ನು ದೂರವಾಗಿಸಿ ದೇವಾಲಯ ಸಂಸ್ಕೃತಿಯನ್ನು ಅಳಿಸಿದರು. ಅವರು ಸಮಸ್ತರಿಗೂ ಕರಸ್ಥಲಕ್ಕೆ ಇಷ್ಟಲಿಂಗ ಕೊಟ್ಟು-ಲಿಂಗ ದೀಕ್ಷೆಯನ್ನಿತ್ತು ಕಷ್ಟಕುಲದ ಶೋಷಿತರನ್ನು ಧರ್ಮವಂತರನ್ನಾಗಿಸಿದರು.

ಕಷ್ಟಕುಲದಲ್ಲಿ ಹುಟ್ಟುವ ಕರ್ಮವ ಕಳೆದು
ಮುಟ್ಟಿ ಪಾವನವ ಮಾಡಿ, ಕೊಟ್ಟನಯ್ಯಾ ಎನ್ನ
ಕರಸ್ಥಲಕ್ಕೆ ಲಿಂಗವ
ಆ ಲಿಂಗ ಬಂದು ಸೊಂಕಲೊಡನೆ,
ಎನ್ನ ಸರ್ವಾಂಗದ ಅವಲೋಹವಳಿಯಿತ್ತಯ್ಯಾ
ಎನ್ನ ತನುವಿನಲ್ಲಿ ಗುರುವ ನೆಲೆಗೊಳಿಸಿದ,
ಎನ್ನ ಅರಿವಿನಲ್ಲಿ ಪ್ರಸಾದವ ನೆಲೆಗೊಳಿಸಿದ,
ಇಂತೀ ತ್ರಿವಿಧ ಸ್ಥಾನದ ಶುದ್ಧವ ಮಾಡಿದ
ಬಸವಣ್ಣನ ಕರುಣದಿಂದ ಪ್ರಭುವಿನ ಶ್ರೀಪಾದವ
ಕಂಡು ಬದುಕಿದೆನು ಕಾಣಾ ಅಭಿವ ಮಲ್ಲಿಕಾರ್ಜುನಾ -ಶರಣ ತಂದೆ ಕಕ್ಕಯ್ಯಾ

ಶತಶತಮಾನಗಳಿಂದ ಶೋಷಿತ-ತುಳಿಯಲ್ಪಟ್ಟವರನ್ನು ಜಾಗೃತಗೊಳಿಸಿ ಅವರಿಗೆ ಏಕದೇವೋಪಾಸನೆಯ 'ಲಿಂಗ ತತ್ವ'ವನ್ನರುಹಿ ಅಜ್ಞಾನವನ್ನು ದೂರವಾಗಿಸಿದರು. ಅವರ ಆತ್ಮಸ್ಥೈರ್ಯವನ್ನು ಹೆಚ್ಚಿಸಿದರು ಮತ್ತು ಅವರಿಗೆ ಪೌರುಷಯುಕ್ತ ಹೊಸ ಬದುಕನ್ನು ಕಟ್ಟಿಕೊಟ್ಟರು.

ಎಲವೋ, ಎಲವೋ ಪಾಪಕರ್ಮವ ಮಾಡಿದವನೇ,
ಎಲವೋ, ಎಲವೋ ಬ್ರಹ್ಮಹತ್ಯೆಯ ಮಾಡಿದವನೇ,
ಒಮ್ಮೆ ಶರಣೆನ್ನೆಲ್ಲವೋ!
ಒಮ್ಮೆ ಶರಣೆಂದಡೆ ಪಾಪ ಕರ್ಮ ಓಡುವವು.
ಸರ್ವ ಪ್ರಾಯಶ್ಚಿತ್ತಕ್ಕೆ ಹೊನ್ನ ಪರ್ವತಗಳೈದವು.
ಒಬ್ಬಂಗೆ ಶರಣೆನ್ನು ನಮ್ಮ ಕೂಡಲಸಂಗಮದೇವಂಗೆ -ವಿಶ್ವಗುರು ಬಸವಣ್ಣನವರು.

ಮಹಾಗುರು ಬಸವಣ್ಣನವರು ಜನಸಾಮನ್ಯರ ಮಧ್ಯದಲ್ಲಿದ್ದು ಮನಪ್ರೇರಕ ಶಕ್ತಿಯಾಗಿ ಅವರ ಸ್ವಾಭಿಮಾನ ಜಾಗ್ರತಗೊಳಿಸಿದರು. 'ಲಿಂಗತತ್ವ' ಮನವರಿಕೆ ಮಾಡಿಕೊಟ್ಟರು ಮತ್ತು ಧರ್ಮ ಸಂಪಾದನೆ-ಆಚರಣೆಗೆ ತೊಡಗಿಸಿದರು. ಇದು ಶೈಕ್ಷಣಿಕ ಧಾಟಿಯೆ ಆಗಿದೆ ಹಾಗೂ ಧರ್ಮಪುರುಷರ ಸನ್ಮಾರ್ಗವೇ ಆಗಿದೆ.

ಮರ್ತ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು,
ಕರ್ತನಟ್ಟಿದನಯ್ಯಾ ಒಬ್ಬ ಶರಣನ,
ಆ ಶರಣ ಬಂದು ಕಲ್ಯಾಣವೆಂಬ ಶಿವಪುರವ ಕೈಲಾಸವ ಮಾಡಿ,
ರುದ್ರಗಣ ಪ್ರಮಥಗಣಂಗಳೆಲ್ಲರ ಹಿಡಿತಂದು,
ಅಸಂಖ್ಯಾತರೆಂಬ ಹೆಸರಿಟ್ಟು, ಕರೆದು,
ಭಕ್ತಿಯ ಕುಳಸ್ಥಳವ ಶೃತದೃಷ್ಟ ಪವಾಡದಿಂದ ಮೆರೆದು ತೋರಿ,
ಜಗವರಿಯಲು ಶಿವಾಚಾರದ ಧ್ವಜವನ್ನೇತ್ತಿಸಿ,
ಮರ್ತ್ಯಲೋಕ ದೇವಲೋಕವೆರಡಕ್ಕೆ ನಿಚ್ಚಣಿಕೆಯಾದನು,
ಆ ಶಿವಶರಣನ ಮನೆಯೊಳಗಿಪ್ಪ ಶಿವಗಣಂಗಳ ತಿಂಥಿಣಿಯ ಕಂಡು,
ಎನ್ನ ಮನ ಉಬ್ಬಿ ಕೊಬ್ಬ ಓಲಾಡುತ್ತಿದ್ದೇನಯ್ಯಾ
ನಮ್ಮ ಗುಹೇಶ್ವರನ ಶರಣ ಸಂಗನ ಬಸವಣ್ಣನ
ದಾಸೋಹದ ಘನವನೇನೆಂದೆನಬಹುದು ನೋಡಾ -ಸಿದ್ದರಾಮಯ್ಯ!

ಮಹಾಗುರು ಬಸವನಣ್ಣನವರು ಒಬ್ಬ ಧರ್ಮಪುರುಷರು ಶ್ರೇಷ್ಠಪ್ರವಾದಿ, ಯುಗಪುರುಷರು! ಮನುಷ್ಯ ಸಹಜವಾಗಿ ಪ್ರಕೃತಿಗಳಿಂದಾಗಿ ಬಹಿರ್ಮುಖಿಯಾಗಿ ಜೀವಿಸುತ್ತಾನೆ. ಕಾರಣ ಮನೋಕುಂಡಲೀನೀ ಎಂಬ ಮಾಯೆ ಅವನನ್ನು ಆವರಿಸುತ್ತದೆ-ನುಂಗಿಹಾಕುತ್ತದೆ ಅದು ಯಾರನ್ನು ಬಿಡುವುದಿಲ್ಲ.

ಹಲಬರ ನುಂಗಿದ ಹಾವಿಗೆ ತಲೆಬಾಲವಿಲ್ಲ, ನೋಡಾ
ಕೊಲುವುದು ತ್ರೈಜಗವ, ತನಗೆ ಬೇರೆ ಪ್ರಳಯವಿಲ್ಲ,
ನಾಕಡಿಯನ್ಯದುವುದು, ಲೋಕದ ಕಡೆಯನೆ ಕಾಣ್ಬುದು,
ಸೂಕ್ಷ್ಮಫಥದಲ್ಲಿ ನಡೆವುದು, ತನಗೆ ಬೇರೆ ವಡಲಿಲ್ಲ;
ಅರುಹೆಂಬ ಗಾರುಡಿಗನ ನುಂಗಿತ್ತು,
ಕೂಡಲಸಂಗನ ಶರಣರಲ್ಲಿದುಳಿದವರನ್ನು.-ವಿಶ್ವಗುರು ಬಸವಣ್ಣನವರು.

ಮನದ ಮುಂದಣ ಮಾಯೆಯೂ ಪೃಕೃತಿ ಗುಣವಾಗಿದೆ ಅದು ಮನೋಕುಂಡಲಿನೀಯ ಸ್ವರೂಪಾಗಿದೆ. ಪರಮಾತ್ಮನ ಅರಿವಿಲ್ಲದ ನಂಬಿಕೆ ಹಾಗೂ ಭಕ್ತಿಯಲ್ಲದ ಭವಿಗಳನ್ನು ಮರೆವೆಂಬ ಕತ್ತಲೆ ಆವರಿಸುತ್ತದೆ, ಅವರು ಅಜ್ಞಾನದಿಂದ ಬಳಲುತ್ತಾರೆ, ಕಷ್ಟಕಾರ್ಪಣ್ಯಗಳು ಅವರನ್ನು ಕಾಡಿಸುತ್ತವೆ, ಅವರ ಸಂಸಾರ ದುಃಖದ ಪಂಜರವಾಗುತ್ತದೆ.

ಹೊತ್ತಾರೆ ಎದ್ದು ಲಿಂಗದೇವನ
ದೃಷ್ಠಯಾರೆ ನೋಡದವನ ಸಂಸಾರವೇನವನ?
ಬಾಳುವೇಣನ ಬೀಳುವೆಣನ ಸಂಸಾರವೇನವನ?
ನಡೆವೆಣನ ನುಡಿವೆಣನ ಸಂಸಾರವೆನವನ?
ಕರ್ತೃ ಕೂಡಲಸಂಗಮದೇವ
ನಿಮ್ಮ ತೊತ್ತು ಕೆಲಸ ಮಾಡದವನ ಸಂಸಾರವೇನವನ -ವಿಶ್ವಗುರು ಬಸವಣ್ಣನವರು.

ಇಂದಿನ ವೈಜ್ಞಾನಿಕ ಯುಗದಲ್ಲೂ (ಇಂದು) ನಾವು ಮಹಾಗುರು ಬಸವಣ್ಣನವರ ಷಟ್ಸ್ಥಲ ವಚನಗಳಲ್ಲಿ ಅನುಭವಿಕ ಸತ್ಯವನ್ನು ಕಾಣುತ್ತೇವೆ. ಪರಮಾತ್ಮನಲ್ಲಿ ನಂಬಿಕೆ ಇಟ್ಟು ಶರಣಾದವಂಗೆ ಪರಮಾತ್ಮ ಅವರನ್ನು ರಕ್ಷಿಸುತ್ತಾನೆ-ಕಷ್ಟಕಾರ್ಪಣ್ಯಗಳನ್ನು ದೂರಮಾಡುತ್ತಾನೆ.

ಸುಪ್ರಭಾತ ಸಮಯದಲ್ಲಿ ಅರ್ತಿಯಲ್ಲಿ ಲಿಂಗವ ನೆನದಡೆ,
ತಪ್ಪುವವು ಅಪಮೃತ್ಯು ಕಾಲಕರ್ಮಂಗಳಯ್ಯಾ,
ದೇವಪೂಜೆಯ ಮಾಟ, ದುರಿತ ಬಂಧನದೋಟ,
ಶಂಭು ನಿಮ್ಮಯ ನೋಟ ಹೆರೆ ಹಿಂಗದ ಕಣ್ಬೇಟ!
ಸದಾಸನ್ನಿಹಿತನಾಗಿ ಶರಣೆಂಬುದು ನಂಬುವುದು,
ಜಂಗಮಾರ್ಚನೆಯ ಮಾಟ ಕೂಡಲಸಂಗನ ಕೂಟ. -ವಿಶ್ವಗುರು ಬಸವಣ್ಣನವರು.

ಮಾನವನ ದುಃಖನಿವಾರಣೆಗೆ ಪರಮಾತ್ಮನ ಅರಿವು ಪ್ರಾಮುಖ್ಯವಾಗಿದೆ ಅವಶ್ಯಕವೂ ಆಗಿದೆ. ಪರಮಾತ್ಮನ ಕರುಣೆಯೆ ದಿವ್ಯ ಔಷಧಿ! ಪರಮಾತ್ಮನ ನಿರಂತರ ಸ್ಮರಣೆಯಲ್ಲಿ, ಇಷ್ಟಲಿಂಗ ಪೂಜೆ 'ಓಂ ಲಿಂಗ ದೇವಾಯ' ತಾರಕ ದೇವ ಮಂತ್ರ ಜಪ ಹಾಗೂ ಲಿಂಗಧ್ಯಾನ(ತ್ರಾಟಕ)ವು ಬಸವಯೋಗ ಸಾಧನೆಯಾಗಿದೆ.

ಎತ್ತೆತ್ತ ನೋಡಿದಡತ್ತತ್ತ ಬಸವನೆಂಬ ಬಳ್ಳಿ
ಎತ್ತಿ ನೊಡಿದಡೆ ಲಿಂಗವೆಂಬ ಗೊಂಚಲು,
ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯಾ,
ಆಯತವೂ, ಸ್ವಾಯತವೂ, ಸನ್ನಿಹಿತವೂ ಬಸವಣ್ಣನಿಂದ,
ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ
ಇವೆಲ್ಲವು ಬಸವಣ್ಣನಿಂದ!
ಅತ್ತಬಲ್ಲರೇ ನೀವು ಹೇಳಿರೇ! ಇತ್ತಬಲ್ಲರೇ ನೀವು ಕೇಳಿರೆ
ಬಸವಾ ಬಸವಾ ಬಸವಾ ಎಂದು ಮಜ್ಜನಕ್ಕೆರೆಯದನ ಭಕ್ತಿ
ಶೂನ್ಯಕಾಣಾ ಕಲಿದೇವರೇವ -ಮಾಚಿದೇವರು

ಬಸವನ ಯೋಗ ಸಮಾಜ ಮುಖಿಯಾಗಿದೆ ಗುರು ಲಿಂಗ ಜಂಗಮ ಉಪಾಸನೆ-ಸಾಧನೆ-ಸಂಪಾದನೆ ವ್ಯಕ್ತಿಯನ್ನು ಸಮಾಜ ಮುಖಿಯನ್ನಾಗಿಸುತ್ತೆ.

ನಾನು ಆರಂಭವ ಮಾಡುವೆನಯ್ಯಾ ಗುರು ಪೂಜೆಗೆಂದು,
ನಾನು ಬೆವಹಾರವ ಮಾಡುವೆನಯ್ಯಾ ಲಿಂಗಾರ್ಚನೆಗೆಂದು,
ನಾನು ಪರಸೇವೆಯ ಮಾಡುವೆನೆಯ್ಯಾ ಜಂಗಮಾರ್ಚನೆಗೆಂದು,
ನಾನಾವ ಕರ್ಮಂಗಳ ಮಾಡಿದೊಡೆಯು
ಆ ಕರ್ಮ ಫಲಭೋಗವ ನೀ ಕೊಡುವೆ ಎಂಬುದ ನಾ ಬಲ್ಲೆನು.
ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದ ಕ್ರಿಯೆ ಮಾಡೆನು
ನಿಮ್ಮ ಸೊಮ್ಮಿಂಗೆ ಸವೆಸುವೆನು, ನಿಮ್ಮಾಣೆ
ಕೂಡಲಸಂಗಮದೇವ.-ವಿಶ್ವಗುರು ಬಸವಣ್ಣನವರು.

ಬಸವನಯೋಗ ವ್ಯಕ್ತಿಯ ಸರ್ವಾಂಗೀಣ ವಿಕಾಸಕ್ಕೆ ಸನ್ಮಾರ್ಗವಾಗಿದೆ ಸಾಧನೆಯ ಪರಿಣಾಮಕಾರಿಯಾಗಿದೆ. ಲಿಂಗತತ್ವ, ಗುರು ಲಿಂಗ ಜಂಗಮ ಉಪಾಸನೆಯ ಪ್ರಭಾವ ಪರಿಣಾಮವೇ ಪಾದೋದಕ ಪ್ರಸಾದವಾಗಿದೆ. ಹೀಗೆ ಬಸವಯೋಗ ಪರಿಣಾಮಕಾರಿಯಾಗಿ ಫಲದಾಯಕವಾಗಿದೆ. ಇದೇ ಕಲ್ಯಾಣ ರಾಜ್ಯ ಭಕ್ತಿಸಾಮ್ರಾಜ್ಯದ ವೈಭವ, ಅನುಭಾವದ ಘನ!

ಕಪಿಲಸಿದ್ದ ಮಲ್ಲಿಕಾಜುನಾ
ನಿಮ್ಮ ಸಂಗನಬಸವಣ್ಣ ಬಂದು
ಮರ್ತ್ಯದಲ್ಲಿ ಮನೆಯ ಕಟ್ಟಿದಡೆ
ಮರ್ತ್ಯಲೋಕವೆಲ್ಲವೂ ಭಕ್ತಿ ಸಾಮ್ರಾಜ್ಯವಾಯಿತ್ತು.
ಆ ಮನೆಗೆ ತಲೆಬಾಗಿ ಹೊಕ್ಕವರೆಲ್ಲರೂ
ನಿಜಲಿಂಗ ಫಲವ ಪಡೆದರು- ಸಿದ್ದರಾಮೇಶ್ವರರು

ಮಹಾಗುರು ಬಸವಣ್ಣನವರು ಸಮಸ್ತರಿಗೂ ಕರಸ್ಥಲಕ್ಕೆ 'ಇಷ್ಟಲಿಂಗ’ ಕೊಟ್ಟು ಯೋಗಸಾಧನೆ ಕಲಿಸಿದರು. ಕಾಯಕ-ದಾಸೋಹ ಕಲಿಸಿ ಶೋಷಿತರ ಬದುಕನ್ನು ಶ್ರೇಷ್ಠವಾಗಿಸಿದರು.

ಕರುಣಿ ಬಸವಾ, ಕಾಲಹರ ಬಸವಾ, ಕರ್ಮಹರ ಬಸವಾ
ನಿರ್ಮಳ ಬಸವಾ, ಶಿವಜ್ಞಾನಿ ಬಸವಾ,
ನಿಮ್ಮ ಧರ್ಮವಯ್ಯಾ, ಈ ಭಕ್ತಿಯ ಪಥವು
ಕರುಣೆ ಕಪಿಲಸಿದ್ದ ಮಲ್ಲಿನಾಥಯ್ಯಾ
ನಿಮಗೂ ಎನಗೂ ಬಸವಣ್ಣನ ಧರ್ಮವಯ್ಯಾ -ಸಿದ್ದರಾಮೇಶ್ವರರು

ಹೀಗೆ ಹನ್ನೆರಡನೇಯ ಶತಮಾನದಲ್ಲಿ ಮಹಾಗುರು ಬಸವಣ್ಣವರು ಲಿಂಗಾಯತ ಧರ್ಮ ಸಂಸ್ಥಾಪಿಸಿದರು. ಇದು 770 ಅಮರಗಣಂಗಳ ಅನುಭವ-'ಲಿಂಗವಂತ'ಧರ್ಮ. ಆಯತ, ಸ್ವಾಯತ, ಸನ್ನಿಹಿತ ಇಷ್ಟಲಿಂಗ ಆಯತ -'ಲಿಂಗಾಯತ', ಪ್ರಾಣಲಿಂಗಾಯತ, 'ಪ್ರಾಣಲಿಂಗಿ', ಭಾವಲಿಂಗಸನ್ನಿಹಿತ-ಭಾವಲಿಂಗಿ(ಲಿಂಗವಂತ!): ಲಿಂಗಾಂಗ ಸಾಮರಸ್ಯದನುಭವಿ. ಧರ್ಮ ಮಾನವನ ಅಂತರಂಗ-ಬಹಿರಂಗಕ್ಕೆ ಸಂಬಂಧಿಸಿದ ವಿಷಯ-ಸಂಗತಿ. ಅನುಭವ ಮಾನವನ ಆಂತರಿಕ ಸ್ವರೂಪವನ್ನು ಸೂಚಿಸುವ ಲಿಂಗಾಯತ ದರ್ಮದ ತಿರುಳು ಲಿಂಗಾಯತ ಅಂಗ-ಲಿಂಗದ ಅವಿರಳ ಅವಿನಾಭಾವ ಸಂಬಂಧ ತೋರುವ 'ಲಿಂಗಾಂಗ ಸಾಮರಸ್ಯ' ತಿಳಿಯಪಡಿಸುವ ವಿಶಿಷ್ಠ ಸಾಧನೆಯ ಕ್ರಮವಾಗಿದೆ. ಇದೇ ಬಸವಯೋಗ, ಲಿಂಗವಿಡಿದು ಅಂಗಸಿದ್ಧಿ.

ಆಚಾರಲಿಂಗವಿಡಿದು ಅನುಭಾವಲಿಂಗಿಸಿದ್ದಿ,
ಅನುಭಾವಲಿಂಗವಿಡಿದು ಮಾರ್ಗಕ್ರಿಯಾ ಲಿಂಗಸಿದ್ದಿ,
ಮಾರ್ಗಕ್ರಿಯಾ ಲಿಂಗವಿಡಿದು ಮಿರಿದ ಕ್ರಿಯಾ ಲಿಂಗಸಿದ್ದಿ
ಇದು ಕಾರಣ ಕುಡಲಸಂಗಮದೇವ ಲಿಂಗವಿಡಿದು ಅಂಗಸಿದ್ದಿ! -ವಿಶ್ವಗುರು ಬಸವಣ್ಣನವರು.

'ಅನುಭಾವ' ಅಂತರಂಗದ ದಿವ್ಯ ಬೆಳಗು ಎಂದೇ ಮಾನವ ಧರ್ಮದ ಘನ! ಇದೇ ವಿಶ್ವದ ಶಾಂತಿಧಾಮ ಕೈಲಾಸ! ವಿಶ್ವಮಾನ್ಯ, ಏಕೈಕ ತತ್ವ-'ಅನುಭವ'-ಸಿದ್ದಾಂತ. ಇದು ಲಿಂಗಾಯತ ಧರ್ಮದ ಏಕದೇವೋಪಾಸನೆಯ; ಲಿಂಗತತ್ವ ಮತ್ತು ಸಾಧನೆಯ ಧರ್ಮಸಿದ್ಧಾಂತ ಲಿಂಗತತ್ವ- ಬಸವಸಿದ್ದಾಂತ.

ಕಾಯದ ಕಳವಳದಲ್ಲಿ ಹುಟ್ಟಿ ಲಿಂಗವನರಿಯದಂತವರಿಂದಲಿ
ಷಡುಶಾಸ್ತ್ರಾಧಮ ಪುರಾಣದರ್ತವ ನೋಡಿ
ಲಿಂಗವುಂಟು, ಇಲ್ಲೆಂಬ ಅಜ್ಞಾನಿಗಳಂತಿರಲಿ,
ಷಡುಶೈವರು ಹಂಚಾಗಿ ಹೋದರು,
ಎಂತು ಲಿಂಗವಂತಂಗೆ ಸರಿಯೆಂಬೆ?
ಅದ್ವೈತಿಗಳೆಲ್ಲಾ ಲಿಂಗಾರಾಧನೆ ಹುಸಿಯೆಂದು
ಬುದ್ದಿ-ತಪ್ಪಿ ಕ್ರಮಗೆಟ್ಟು ಹೊದರು.
ಬ್ರಹ್ಮನಾನೆಂದು ಶಿರವ ಹೊಗಲಾಡಿಸಿಕೊಂಡನು
ಬ್ರಹ್ಮಾದಿ ದೇವತೆಗಳು ಮಹಾಲಿಂಗಕ್ಕೆ ದೂರವಾಗಿ ಹೋದರು,
ಹಮ್ಮಿಲ್ಲದ ಕಾರಣ ಕೂಡಲಸಂಗಮದೇವನ ಶರಣರು
ಜಗವಂದ್ಯರಾದರು -ವಿಶ್ವಗುರು ಬಸವಣ್ಣನವರು.

ಅನುಭವ ಇದು ಕೇವಲ ಮಾತಿನ ಮಥನವಲ್ಲ. ನಿಜ ಸಂಗತಿ. ಇದು ಇಂದ್ರಿಯಾತೀತ-ಅಂತರಂಗ ಅನುಭವ. ಸಾಧನೆಯ ಕಷ್ಟಸಾಧ್ಯ
ಶರಣರಸಂಗವೂ ಪುರಕವಾಗಿದೆ ಬಸವಯೋಗ ಸಾಧನೆಯು ಹೌದು, ಸಾಧ್ಯವೂ ಹೌದು.

ಬೆಳಗಿನೊಳಗಣ ಬೆಳಗು ಮಹಾಬೆಳಗು!
ಶಿವಾ-ಶಿವಾ. ಪರಮಾಶ್ರಯವು ತಾನು
ಶತಪತ್ರ ಕಮಲಕರಣಿಕಾ ಮಧ್ಯದಲ್ಲಿ
ಸ್ವತಃಸಿದ್ಧನಾಗಿಪ್ಪ ನಮ್ಮ ಕೂಡಲಸಂಗಮದೇವ -ವಿಶ್ವಗುರು ಬಸವಣ್ಣನವರು.

ಬೆಳಗಿನೊಳಗಣ ಬೆಳಗು ಮಹಾ ಬೆಳಗು! ಕೂಡಲಸಂಗಮದೇವ ಇದೇ ಲಿಂಗಾಂಗ ಸಾಮರಸ್ಯದ ಅನುಭಾವ, ಲಿಂಗಾನುಭಾವ. ಅಖಂಡ ಲಿಂಗಸ್ಥಲದ ಷಟ್ಸ್ಥಲ ಆಚಾರಲಿಂಗ, ಗುರುಲಿಂಗ, ಶಿವಲಿಂಗ ಜಂಗಮಲಿಂಗ ಪ್ರಸಾದ ಲಿಂಗ ಮತ್ತು ಮಹಾಲಿಂಗ (ಜ್ಯೋತಿರ್ಲಿಂಗ) ಆತ್ಮಸಾಕ್ಷಾತ್ಕಾರ ದರ್ಶನವನ್ನು ಮೀರಿದ ನಿರವಯಸ್ಥಲದ ಲಿಂಗಾಂಗ ಸಾಮರಸ್ಯದ ಅನುಭಾವ -'ಅಮೃತಲಿಂಗ'! (ತೃಪ್ತಿಲಿಂಗ)

ಘನಗಂಭಿರ ಮಹಾಘನದೊಳಗೆ
ಘನಕ್ಕೆ ಘನವಾಗಿದ್ದೆನಯ್ಯ
ಕೂಡಲಸಂಗಮದೆಯ್ಯನೆಂಬ
ಮಹಾಬೆಳಗಿನ ಬೆಳಗಿನೊಳಗಿದ್ದೆನೆಂಬ ಶಬ್ದ
ಮುಗ್ದವಾದುದ ನೇನೆಂಬೆನಯ್ಯಾ--ವಿಶ್ವಗುರು ಬಸವಣ್ಣನವರು.

ಲಿಂಗಾಂಗ ಸಾಮರಸ್ಯ ಆದ್ಯಾತ್ಮಿಕ 7ನೇ ಯ ಹಂತ-ಸಹಸ್ರಾರ ಚಕ್ರದ ಅನುಭವ- ಅದ್ವೈತಸಿದ್ದಿ, ಸಹಸ್ರ ಕೇಂದ್ರದ ಅನುಭವದ ಸಾಮರ್ಥ್ಯವೇ ವಿಶ್ವಪ್ರಜ್ಞೆ ಹಾಗು ಸ್ಫುರಣ ಜ್ಞಾನ.

ಕೆರೆ ಹಳ್ಳ ಭಾವಿಗಳು ಮೈದೆಗೆದರೆ
ಗುಳ್ಳೆ ಗೊರಚೆ ಚಿಪ್ಪುಗಳ ಕಾಣಬಹುದು
ವಾರಿದಿ ಮೈದೆಗೆದರೆ ಮುತ್ತು ರತ್ನಂಗಳ ಕಾಣಬಹುದು.
ನಮ್ಮ ಕೂಡಲಸಂಗನ ಶರಣರು ಮನದೆರೆದು ಮಾತನಾಡಿದರೆ
ಲಿಂಗವ ಕಾಣಬಹುದು. -ವಿಶ್ವಗುರು ಬಸವಣ್ಣನವರು.

ತೆರಹಿಲ್ಲದ ನಡೆ, ತೆರಹಿಲ್ಲದ ನುಡಿ,
ತೆರಹಿಲ್ಲದ ಸಂಭಾಷಣೆಯ ಸುಖವು
ತೆರೆಹಿಲ್ಲದನಂಬಿಗೆ, ಸ್ವಾನುಭಾವದ ಸುಖವು,
ತೆರಹಿಲ್ಲದ ಮಹಿಮೆ, ತೆರಹಿಲ್ಲದ ವಿಚಾರ,
ಕೂಡಲಸಂಗಮದೇವಾ, ನಿಮ್ಮ ಶರಣಂಗೆ -ವಿಶ್ವಗುರು ಬಸವಣ್ಣನವರು.

ಶರಣರು ಸ್ವಭಾವತಃ ಅಂರ್ತಮುಖಿಗಳು- ಅನುಭಾವಿಗಳು ಅವರ ನಡೆ ನುಡಿ ಒಂದಾಗಿದ್ದವರು, ಸತ್ಯಸಂಧರು ಮತ್ತು ಪ್ರಾಮಾಣೀಕರು 'ಶರಣರು ನಿಷ್ಠುರವಾದಿಗಳು'!

ಲಿಂಗವಶದಿಂದ ಬಂದನಡೆಗಳು,
ಲಿಂಗವಶದಿಂದ ಬಂದ ನುಡಿಗಳು
ಲಿಂಗವಂತರು ತಾವು ಅಂಜಲೇಕೆ?
ಲಿಂಗವಿರಿಸಿದಂತಿರ್ಪುದಲ್ಲದೆ?
ಕೂಡಲಸಂಗಮದೇವ ಭಕ್ತರಭಿಮಾನ ತನ್ನದೆಂಬನಾಗಿ -ವಿಶ್ವಗುರು ಬಸವಣ್ಣನವರು.

ಪರಮಾತ್ಮ-ಸೃಷ್ಠಿಕರ್ತನ ಕರುಣೆಯ ಹೊತ್ತು ಲಿಂಗಾನುಭಾವಿ 'ಲಿಂಗಾಂಗ ಸಾಮರಸ್ಯ ಅಮೃತಲಿಂಗದ ಹಂತನ್ನು ಮೀರಿ ಶಿಖಾಚಕ್ರದಲ್ಲಿ ನಿಃಶೂನ್ಯಲಿಂಗ, ಪಶ್ಚಿಮ ಚಕ್ರದ ನಿರಂಜನ ಲಿಂಗದ(8ನೆ ಹಾಗೂ 9ನೆ)ಹಂತಗಳ್ನು ದಾಟಿ, ಅಣುಚಕ್ರದ ಶೂನ್ಯಸಂಪಾದನೆ-ನಿರ್ವಾಣ ಪದವಿಯನ್ನು (10ನೆ ಹಂತದ) ಹೊಂದುತ್ತಾನೆ. ಹಾಗೆಯೇ, ಮುಂದುವರೆದು ಉಯ್ಯಾಲೆಯನ್ನು (11ನೇ ಹಂತದ) ಸಹಸ್ರಾರ ಚಕ್ರದಿಂದ ಶಿಖಾ, ಪಶ್ಚಿಮ ಮತ್ತು ಅಣುಚಕ್ರದ ಅನುಭಾವದಿಂದ, ಅಣುಚಕ್ರದಿಂದ ಪಶ್ಚಿಮ ಚಕ್ರ, ಶಿಖಾಚಕ್ರ ಮತ್ತು ಸಹಸ್ರಾರ ಚಕ್ರದ ಲಿಂಗಬೆಳಗಿನ ಉಯ್ಯಾಲೆಯನ್ನಾಡುತ್ತಾನೆ. ಸಾಧನೆ ತೀವ್ರ, ತೀಕ್ಷಣವಾಗಿ, ಆಗ ಸಹಸ್ರಾರ ಚಕ್ರ (ನೆತ್ತಿಯ ಮೇಲೆ)ಮೊದಲು ಎಡದಿಕ್ಕಿಗೆ ತಿರುಗಲು ಪ್ರಾರಂಭಿಸುತ್ತದೆ. ಲಿಂಗಬೆಳಗು, ಅನುಭಾವ ಸಹಸ್ರಾರಕ್ಕೆ ಸೀಮಿತಿವಾಗಿ ಇರುತ್ತದೆ. ಆಗ ನಾದ ಸ್ವರಗಳ ಮೇಳವೂ ಕೇಳಿಬರುತ್ತದೆ. ಸುಮಾರು ಎರಡು ವರ್ಷಗಳ ಕಾಲಗತಿಸಿದನಂತರ, ಸಹಸ್ರಾರದ ತಿರುಗುವಿಕೆಯು ಎಡದಿಕ್ಕನ್ನು ಬದಲಿಸಿ ಅದು ಬಲದಿಕ್ಕಿಗೆ ತಿರುಗಲು ಪ್ರಾರಂಭಿಸುತ್ತದೆ. ನಾದ ಸ್ವರಗಳು ನಿಂತು ಹೋಗುತ್ತವೆ. ಲಿಂಗಬೆಳಗಿನ ಪ್ರಶಾಂತತೆಯೇ ಅನುಭಾವದ ಪರಿಯಾಗುತ್ತದೆ. ಅದು ಪ್ರಶಾಂತತೆಯ ಅನುಭಾವವಾಗುತ್ತದೆ. ಹೀಗೆ ಸಹಸ್ರಾರದ ಲಿಂಗಬೆಳಗಿನ ಉನ್ಮನಿಯ ರಭಸ ಎರಡು ಹಂತ (12 ಹಾಗೂ 13 ನೆಯ)ಗಳದ್ದಾಗಿ ಅನುಭವಕ್ಕೆ ಕಾಣಬರುತ್ತದೆ. ಶಿವಯೋಗಿ ಸಿದ್ದರಾಮೇಶ್ವರರು ಹೇಳಿದಂತೆ ಅನುಭಾವ ಲಿಂಗಾನುಭಾವ 14ನೇಯ ಹಂತ (ಸಹಸ್ರಾರ ತಿರುಗುವಿಕೆ ನಿಂತು) ಸರ್ವಜ್ಞ ಪದವಿಯನ್ನು ಅನುಭಾವಿ-ಲಿಂಗಾಂಗಯೋಗಿ ಸಾಧಿಸುತ್ತಾನೆ. ಆಗ ಕ್ರಿಯಾರಹಿತವಾದ ಮೆದುಳು, ಕ್ರಿಯಾ ಸಂಪನ್ನವಾಗುತ್ತದೆ. ಹಾಗೂ ಪಿನಿಯಲ್ ಗ್ರಂಥಿಯು ಪೂರ್ಣ ಅರಳಿ ಅಮೃತವನ್ನು ಸುರಿಸುತ್ತದೆ. ಹೀಗೆ ಇಷ್ಟಲಿಂಗ ಪಡೆದು ಸಾಧನೆಗೈದ ವ್ಯಕ್ತಿ ಸರ್ವಜ್ಞಮೂರ್ತಿ ಶರಣನಾಗುತ್ತಾನೆ-ಶ್ರೇಷ್ಠ ಅನುಭವಿಯಾಗುತ್ತಾನೆ.

ತನುಮಧ್ಯ ವಿದಳಾಚಲದೊಳಗೆ
ಭಾಸ್ಕರಭವನ ಬೆಳಗುತಿಪ್ಪುದು
ಲೋಕ ಹದಿನಾಲ್ಕರಲ್ಲಿ ಅಜಲೋಕದೊಳಗೆ
ಆತ ಬೆಳಗುವ ಪ್ರಜ್ವಲದ ಪ್ರಭೆಯ ಮಂಟಪವು
ತಾನೆರಡಾಗುತ ದಿವ ರಾತ್ರೆ ಒಡಗೂಡಿ ಭರಿತ ಪರಿಮಳವಾಗೆ
ವಳಯ ಹದಿನಾಲ್ಕರೊಳು ಬೆರೆಸಿಪ್ಪ ಜ್ಯೋತಿಯನು,
ತಿಳಿದು ನೋಡಿದಡತ್ಯಧಿಕ ಸರ್ವಜ್ಞನೆನಿಪ
ಲೋಕಾಲೋಕವ ಏಕವ ಮಾಡಲಿಕಾತ
ಆಕಾರ ಚುತುಷ್ಟಯವ ಮೀರಿದಾತ,
ವರ್ಣಾಶ್ರಮವ ಕಳೆದು ನಿರ್ಮಳಾನಂದದೊಳು
ಸೊಮ್ಮುಗೆಟ್ಟಾತ ಪರಶಿವ ಕಪಿಲಸಿದ್ಧ ಮಲ್ಲಿಕಾರ್ಜುನ -ಸಿದ್ದರಾಮೇಶ್ವರರು

ದಿವ = ಹಗಲು, ಭರಿತ = ತುಂಬಿದ

ಮಹಾಗುರು ಬಸವಣ್ಣನವರು ಸಂಸ್ಥಾಪಿಸಿದ ಲಿಂಗಾಯತ ಧರ್ಮ ಏಕದೇವೋಪಾಸನೆ ಸಾಧನೆಯು 'ಲಿಂಗತತ್ವ' 'ಗುರು ಲಿಂಗ ಜಂಗಮ' ಉಪಾಸನೆ ಮತ್ತು ಸಾಧನೆ 14 ಹಂತಗಳ (ಲೋಕಗಳ) ಅನುಭಾವ ಸಂಪಾದನೆಯ ವೈಶಿಷ್ಠ್ಯದಿಂದ ಕೂಡಿದೆ. ಹೀಗೆ ಬಸವಯೋಗ ಆಚಾರಲಿಂಗವಿಡಿದು ಅನುಭಾವ ಲಿಂಗಸಿದ್ಧಿಯ ಪ್ರತೀಕವಾಗಿದೆ. ಇದು ಶರಣರ ಅನುಭಾವ 'ಲಿಂಗವಂತ'ಧರ್ಮವಾಗಿದೆ. ಇದೇ ಮಹಾಗುರು ಬಸವಣ್ಣನವರು ಸಂಸ್ಥಾಪಿಸಿದ ಸ್ವತಂತ್ರ ಧರ್ಮ ಲಿಂಗಾಯತ ಧರ್ಮ- ಶರಣರ ಅನುಭಾವ ಲಿಂಗಾಯತ ಧರ್ಮ'!

ನೋಟದ ಭಕ್ತಿ ಬಸವಣ್ಣನಿಂದಾಯಿತ್ತು,
ಕೂಟದ ಜ್ಞಾನ ಬಸವಣ್ಣನಿಂದಾಯಿತ್ತು,
ಎಲ್ಲಿಯ ಶಿವಜ್ಞಾನ, ಎಲ್ಲಿಯ ಮಾಟಕೂಟ ಬಸವಣ್ಣನಲ್ಲದೇ!
ಮಹಾಜ್ಞಾನ ಮಹಾಪ್ರಕಾಶ ಬಸವಣ್ಣನ ಧರ್ಮವಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನಯ್ಯಾ - ಸಿದ್ದರಾಮೇಶ್ವರರು.

ಟಿಪ್ಪಣಿ: ಈ ಲೇಖನವನ್ನು ಬೀದರನಲ್ಲಿ ನಡೆದ "Universalization of Lingayat Religion" (ಲಿಂಗಾಯತ ಧರ್ಮದ ಜಾಗತೀಕರಣ) ವಿಚಾರ ಸಂಕಿರಣದಲ್ಲಿ ಸಲ್ಲಿಸಲಾಗಿತ್ತು.

ಪರಿವಿಡಿ (index)
*
Previous ಕಲ್ಲನಾಗರಕ್ಕೆ , ಹಾವಿನ ಹುತ್ತಕ್ಕೆ, ಹಾಲನೆರೆದು ವ್ಯರ್ಥ ಮಾಡಬೇಡಿ ವೀರಶೈವವೋ? ಲಿಂಗಾಯತವೋ? Next