ಅಲ್ಪಸಂಖ್ಯಾತ ಧರ್ಮಗಳು, ರಾಷ್ಟ್ರೈಕ್ಯತೆ ಹಾಗೂ ಕಾನೂನುಗಳು

*

✍ ಎಸ್.ಎಂ. ಜಾಮದಾರ .

1885ರಲ್ಲಿ ಐ.ಸಿ.ಎಸ್ ಅಧಿಕಾರಿ ಹ್ಯೂಮರ್ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಾಪನೆಯಿಂದ ಸ್ವಾತಂತ್ರ್ಯ ಹೋರಾಟ ಸಂಘಟಿತ ರೂಪ ತಳೆಯಿತು. ಅದರ ಫಲವಾಗಿ 1909ರಲ್ಲಿ ಮೋರ್ಲೆಮಿಂಟೊ ಸುಧಾರಣೆಯಿಂದ ರಾಜಕೀಯದಲ್ಲಿ ಮುಸ್ಲಿಮರಿಗೆ ಧಾರ್ಮಿಕ "ಅಲ್ಪಸಂಖ್ಯಾತ" ರೆಂದು ಪರಿಗಣಿಸಿ ಮೀಸಲಾತಿ ನೀಡಲಾಯಿತು. ಆ ಮೂಲಕ "ಧಾರ್ಮಿಕ ಅಲ್ಪಸಂಖ್ಯಾತ" ಎಂಬ ಪರಿಕಲ್ಪನೆ ಭಾರತದಲ್ಲಿ ಮೊಟ್ಟಮೊದಲು ಹುಟ್ಟಿಕೊಂಡಿತು. ಅದನ್ನು ಬ್ರಿಟಿಷ್ ವಸಾಹತುಶಾಹಿಯ ಒಡೆದು ಆಳುವ ನೀತಿಯ ಸಾಕ್ಷಿಯೆಂದು ಕೆಲವರು ವಾದಿಸುತ್ತಾರೆ.

1919ರ ಮೊಂಟ್ಯಾಗೊ-ಚೆಲ್ಮ್ಸ್ ಫೋರ್ಡ್ ಸುಧಾರಣೆಗಳಲ್ಲಿ ಸಿಖ್‌ರು, ಯುರೋಪಿಯನ್ನರು ಮತ್ತು ಆಂಗ್ಲೊ-ಇಂಡಿಯನ್ನರು ಧಾರ್ಮಿಕ ಅಲ್ಪಸಂಖ್ಯಾತರೆಂದು ಮೀಸಲಾತಿ ಪಡೆದರು. 1932ರ ಗಾಂಧಿ-ಅಂಬೇಡ್ಕರ್ ಪ್ಯಾಕ್ಟ್ ನಿಂದ ದಲಿತರಿಗೆ ಮೀಸಲಾತಿ ದೊರೆಯಿತು. ಹೀಗೆ ಮುಸ್ಲಿಮ್, ಸಿಖ್, ದಲಿತ, ಯುರೋಪಿಯನ್, ಆಂಗ್ಲೊ-ಇಂಡಿಯನ್ ಸಮುದಾಯಗಳು "ಅಲ್ಪಸಂಖ್ಯಾತ" ಸಮುದಾಯಗಳೆಂದು ಪರಿಗಣಿಸಲ್ಪಟ್ಟವು. ಇದು ಎಲ್ಲರಿಗೂ ಗೊತ್ತಿದ್ದ ಇತಿಹಾಸ!

ಹೆಚ್ಚು ಜನರಿಗೆ ಗೊತ್ತಿಲ್ಲದ ಇನ್ನೊಂದು ಐತಿಹಾಸಿಕ ಘಟನೆಯನ್ನು ಇಲ್ಲಿ ಪ್ರಸ್ತಾಪಿಸಬೇಕಾಗಿದ್ದು ಅನಿವಾರ್ಯ. ಮೇಲೆ ವಿವರಿಸಿದ ಐತಿಹಾಸಿಕ ಬೆಳವಣಿಗೆಗಳನ್ನು ನೋಡುತ್ತಿದ್ದ ಲಿಂಗಾಯತರೂ ಸುಮ್ಮನೆ ಕುಳಿತುಕೊಳ್ಳಲಿಲ್ಲ. 1941ರಲ್ಲಿ ಮುಂಬೈ ಪ್ರಾಂತದ ಬಹುತೇಕ ಲಿಂಗಾಯತ ನಾಯಕರು ಸೇರಿಕೊಂಡು ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಸಂಪರ್ಕಿಸಿ ಎಲ್ಲ ಲಿಂಗಾಯತರಿಗೂ ಮೀಸಲಾತಿಗೆ ಬೇಡಿಕೆ ಇಟ್ಟು ಹೋರಾಟ ನಡೆಸುವಂತೆ ವಿನಂತಿಸಿದರು. ಆದರೆ ಆ ಮಹಾಸಭೆ ಅದನ್ನು ತಿರಸ್ಕರಿಸಿತು! ತಾನು ಕೇವಲ ಧಾರ್ಮಿಕ ಸಂಸ್ಥೆಯೆಂದು ಕೈಕಟ್ಟಿಕೊಂಡು ಕುಳಿತಾಗ ಆ ಪ್ರಭಾವಿ ನಾಯಕರು ತಮ್ಮದೇ ಆದ "ಲಿಂಗಾಯತ ಐಕ್ಯತಾ ಸಂಘ"ವನ್ನು ಸ್ಥಾಪಿಸಿಕೊಂಡು ಹೋರಾಟ ನಡೆಸಿದರು. ಲಭ್ಯವಿರುವ ದಾಖಲೆಗಳ ಪ್ರಕಾರ ಲಿಂಗಾಯತವು ಸ್ವತಂತ್ರ ಧರ್ಮವೆಂದು, ಲಿಂಗಾಯತರಿಗೂ ಸಿಖ್ ಮತ್ತು ಮುಸ್ಲಿಮರಂತೆ ಮೀಸಲಾತಿ ಕಲ್ಪಿಸಲು ಸರ್ಕಾರವನ್ನು ವಿನಂತಿಸಿಕೊಂಡರು.

1942ರಲ್ಲಿ ಬ್ರಿಟಿಷ್ ಸರ್ಕಾರದ ಪ್ರತಿನಿಧಿಯಾಗಿ ಎರಡನೆಯ ಮಹಾಯುದ್ಧಕ್ಕೆ ಭಾರತೀಯರ ಸಹಕಾರ ಕೋರಲು ಭಾರತಕ್ಕೆ ಬಂದಿದ್ದ ಲಾರ್ಡ್ ಸ್ಟ್ಯಾಫೋರ್ಡ್ ಕ್ರಿಪ್ಸ್ ಅವರನ್ನು ಅದೇ ಲಿಂಗಾಯತ ನಾಯಕರು ಭೇಟಿಯಾಗಿ ಎರಡನೆಯ ಮಹಾ ಯುದ್ಧದಲ್ಲಿ ಲಿಂಗಾಯತರಿಗಾಗಿ ಒಂದು ಪ್ರತ್ಯೇಕ "ಲಿಂಗಾಯತ ಬ್ರಿಗೇಡ್" ಸ್ಥಾಪಿಸಲು ವಿನಂತಿಸಿಕೊಂಡರು. ಅದಕ್ಕಾಗಿ ಹತ್ತಾರು ಸಾವಿರ ಸೈನಿಕರನ್ನು ಸೇನೆಗೆ ಭರ್ತಿಮಾಡಿಸಿದರು. ಅದು ಬ್ರಿಟಿಷರ ಪ್ರಸಂಶೆಗೆ ಪಾತ್ರವಾಯಿತು. ದೊರೆತ ದಾಖಲೆ ಪ್ರಕಾರ, ಆಗ ಲಿಂಗಾಯತ ನಾಯಕರುಗಳು ಬ್ರಿಟಿಷ್ ಸರ್ಕಾರಕ್ಕೆ ಮಾಡಿಕೊಂಡ ಮನವಿಯಲ್ಲಿ ಎತ್ತಿದ ನಾಲ್ಕು ಅಂಶಗಳು ಹೀಗಿವೆ:

(1) ಲಿಂಗಾಯತರು ಸ್ವತಂತ್ರ ಧಾರ್ಮಿಕ ಸಮುದಾಯವಾಗಿದ್ದು ಅವರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸಬೇಕು;
(2) ಲಿಂಗಾಯತರಿಗೆ ಶಾಸನ ಸಭೆಗಳಲ್ಲಿ ಪ್ರಾತಿನಿಧ್ಯ ಕಲ್ಪಿಸಬೇಕು;
(3) ಲಿಂಗಾಯತರಿಗೆ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ದೊರೆಯಬೇಕು; ಮತ್ತು
(4) ಸಂವಿಧಾನ ರಚನಾ ಸಭೆಗೆ ಲಿಂಗಾಯತ ಪ್ರತಿನಿಧಿಗಳನ್ನು ನಾಮಕರಣ ಮಾಡಬೇಕು. ಇವುಗಳಲ್ಲಿ ಮೂರು ಬೇಡಿಕೆಗಳಿಗೆ ಈಗಿನ ಲಿಂಗಾಯತರ ಹೋರಾಟವು ಮತ್ತೊಮ್ಮೆ ಧ್ವನಿ ನೀಡುತ್ತಿದೆ.

ವೈಸರಾಯ್ ಅವರ ಸಲಹೆಯಂತೆ ಮುಂಬೈ ಗವರ್ನರ್ ಅವರನ್ನು ಬ್ಯಾರಿಸ್ಟರ್ ಸರ್ದಾರ್, ಕಲೆಕ್ಟರ್ ಎಸ್.ಕೆ ಒಡೆಯರ್ ಇತ್ಯಾದಿ 56 ನಾಯಕರು 1945ರಲ್ಲಿ ಭೇಟಿ ಮಾಡಿ ಮೇಲಿನ ಮನವಿಗಳನ್ನು ಸಲ್ಲಿಸಿದರು. ಇಂದಿನ ಲಿಂಗಾಯತರ ಹೋರಾಟಕ್ಕೆ ಸುಮಾರು ಎಂಬತ್ತು ವರ್ಷಗಳ ಇತಿಹಾಸ ಇದೆ.

ಕ್ಯಾಬಿನೆಟ್ ಮಿಶನ್ ಪ್ಲ್ಯಾನ್ ಪ್ರಕಾರ 1946ರ ಡಿಸೆಂಬರ್ 9ರಂದು ರಚನೆಯಾದ ಸಂವಿಧಾನ ರಚನಾ ಸಭೆಯಲ್ಲಿ ಐದು ಜನ ಲಿಂಗಾಯತರು ಸದಸ್ಯರಾಗಿದ್ದರು. ಅವರುಗಳೆಂದರೆ ಎಸ್.ನಿಜಲಿಂಗಪ್ಪ (ಮುಂಬೈ) ಎಚ್. ಸಿದ್ದವೀರಪ್ಪ ಮತ್ತು ಟಿ. ಸಿದ್ಧಲಿಂಗಯ್ಯ (ಮೈಸೂರು), ಎಂ.ಬಿ.ಮುನವಳ್ಳಿ (ರಾಮದುರ್ಗ), ರತ್ನಪ್ಪ ಕುಂಬಾರ (ಕೊಲ್ಹಾಪುರ). ಲಿಂಗಾಯತರ ಪ್ರಶ್ನೆಯನ್ನು ಸಂವಿಧಾನ ಸಭೆಯಲ್ಲಿ 1948ರಲ್ಲಿ ಎತ್ತಲಾಗಿದೆ ಎಂಬುದನ್ನು ಅಲ್ಲಿ ನಡೆದ ಚರ್ಚೆಗಳ ಸಂಪುಟ 5 ಮತ್ತು 7ರಲ್ಲಿ ನೋಡಬಹುದು.

ತುಂಬ ಜಟಿಲವಾದ ಅಲ್ಪಸಂಖ್ಯಾತರ ಸಮಸ್ಯೆಯ ಬಗ್ಗೆ 1909ರಿಂದ 1947ರ ವರೆಗೆ ಕಾಂಗ್ರೆಸ್ ಪಕ್ಷವು ಮೃದು ಭಾವನೆ ಹೊಂದಿತ್ತು. ಅದರಿಂದ 1909ರಲ್ಲಿ ಮುಸ್ಲಿಮರಿಗೆ, 1919ರಲ್ಲಿ ಸಿಖ್‌ರಿಗೆ, 1932ರಲ್ಲಿ ದಲಿತರಿಗೆ ಧರ್ಮ ಮತ್ತು ಜಾತಿಗಳ ಆಧಾರದಲ್ಲಿ ಮೀಸಲಾತಿಗಳು ದೊರೆತವು. ಮುಖ್ಯವಾಗಿ ಆಗ ಸುಮಾರು 20 ಪ್ರತಿಶತ ಜನಸಂಖ್ಯೆಯ ಮುಸ್ಲಿಮರ ಭಾವನೆಗಳನ್ನು ನೋಯಿಸಲು ಆ ಪಕ್ಷ ಹಿಂಜರಿಯುತ್ತಿತ್ತು.

ಆದರೆ 1947ರಲ್ಲಿ ಅಖಂಡ ಭಾರತವು ಮೂರು ತುಂಡುಗಳಾಗಿ ಪಶ್ಚಿಮ ಮತ್ತು ಪೂರ್ವ ಪಾಕಿಸ್ತಾನಗಳು ಭಾರತದಿಂದ ಪ್ರತ್ಯೇಕವಾದ ನಂತರ ಅತ್ಯಂತ ನೋವು ಅನುಭವಿಸಿದ ಕಾಂಗ್ರೆಸ್ ನಾಯಕರು ಸಂವಿಧಾನ ರಚನೆಯಲ್ಲಿ ಅಲ್ಪ ಸಂಖ್ಯಾತರ ವಿಷಯದಲ್ಲಿ ಬಹು ಕಠಿಣ ಧೋರಣೆ ತಳೆದರು. ಸರ್ದಾರ್ ಪಟೇಲರು ಅಧ್ಯಕ್ಷರಾಗಿದ್ದ ಸಲಹಾ ಸಮಿತಿಯಲ್ಲಿ ಒಂದು ಉಪಸಮಿತಿಯನ್ನು ಅಲ್ಪಸಂಖ್ಯಾತರ ವಿಷಯಕ್ಕಾಗಿಯೇ ರಚಿಸಲಾಗಿತ್ತು. ದೇಶದ ವಿಭಜನೆಯ ನಂತರ ಪ್ರತಿಶತ 10ರಷ್ಟಿದ್ದ ಮುಸ್ಲಿಮ್, 1 ಪ್ರತಿಶತವಿದ್ದ ಕ್ರಿಶ್ಚಿಯನ್, ಅತಿಸಣ್ಣ ಸಂಖ್ಯೆಯ ಪಾರ್ಸಿ ಮತ್ತು ಯಹೂದಿಗಳನ್ನು ಸೇರಿಸಿ ಒಟ್ಟು ಸುಮಾರು 11 ಪ್ರತಿಶತ ಪರಕೀಯ ಧರ್ಮೀಯರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸಿದರು. ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗಳನ್ನು ಅಲ್ಪಸಂಖ್ಯಾತರೆಂದು ಪರಿಗಣಿಸುವ ಬದಲು ವಿಶೇಷ ಪ್ರಕರಣಗಳೆಂದು ತಿಳಿಯಲಾಯಿತು.

ಆದರೆ ಭಾರತದಲ್ಲಿ ಹುಟ್ಟಿದ ಜೈನ, ಬೌದ್ಧ, ಸಿಖ್, ಲಿಂಗಾಯತ ಧರ್ಮಗಳನ್ನು ಅಲ್ಪಸಂಖ್ಯಾತ ಧರ್ಮಗಳೆಂದು ಪರಿಗಣಿಸಲು ಸರ್ದಾರ್ ಪಟೇಲರು ಒಪ್ಪಲಿಲ್ಲ, ಅದೇ ರೀತಿ ಆರ್ಯ ಸಮಾಜ, ಬ್ರಹ್ಮೋಸಮಾಜ ಗಳನ್ನೂ ಕಡೆಗಣಿಸಿದರು. ಸಂವಿಧಾನ ರಚನಾ ಸಭೆಯ ನಡುವಳಿಕೆಗಳ ಸಂಪುಟ 5ರಲ್ಲಿ ದಾಖಲಿಸಿದಂತೆ ಆಗ ಸರ್ದಾರ್ ಪಟೇಲರು ಆಡಿದ ಮಾತುಗಳು ಹೀಗಿವೆ: "ಇಲ್ಲಿ ನಾವು ರಾಷ್ಟ್ರ ಒಂದನ್ನು ಕಟ್ಟುತ್ತಿದ್ದೇವೆ. ನಾವು ಒಂದು ರಾಷ್ಟ್ರದ ತಳಪಾಯ ಹಾಕುತ್ತಿದ್ದೇವೆ ಮತ್ತು ಯಾರು ಅದನ್ನು ಒಡೆಯುವ ಆಯ್ಕೆ ಮಾಡುತ್ತಾರೊ, ಒಡಕಿನ ಬೀಜಬಿತ್ತುತ್ತಾರೋ ಅವರಿಗೆ ಇಲ್ಲಿ ಸ್ಥಾನವಿಲ್ಲ, ವಿಭಾಗವಿಲ್ಲ. ಇದನ್ನು ನಾನು ಸರಳವಾಗಿಯೇ ಹೇಳುತ್ತೇನೆ". ಅವರು ಸಿಖ್ ಮತ್ತು ಇತರ ಅಲ್ಪಸಂಖ್ಯಾತ ನಾಯಕರ ಪ್ರಶ್ನೆಗಳಿಗೆ ಉತ್ತರಿಸುತ್ತ ಹೇಳಿದ ಮಾತುಗಳಿವು. ಆದ್ದರಿಂದ ಈ ಎಲ್ಲ ಧರ್ಮಗಳು ’ಹಿಂದೂ’ ಧರ್ಮದ ಭಾಗಗಳೆಂದು ಪರಿಗಣಿಸಲ್ಪಟ್ಟವು.

ಸ್ವಾತಂತ್ರ್ಯ ಪಡೆದ ಸಮಯದಲ್ಲಿ ಎಲ್ಲರೂ ರಾಷ್ಟ್ರ ಐಕ್ಯತೆಯೆಂಬ ಕಾರಣದಿಂದ ಸುಮ್ಮನಿದ್ದರು. ಆದರೆ ಮುಂದೆ ನಡೆದ ಬಹುಸಂಖ್ಯಾತರ ದಬ್ಬಾಳಿಕೆ, ಹೇರಿಕೆ, ಮತ್ತು ಒತ್ತಾಯದಿಂದ ಹಿಂದೂಯೇತರ ಭಾರತೀಯ ಧರ್ಮಗಳ ಅನುಯಾಯಿಗಳು ತಮ್ಮ ನಿಲುವುಗಳನ್ನು ಬದಲಿಸಿ ತಮ್ಮ ಧರ್ಮಗಳಿಗೆ ಪ್ರತ್ಯೇಕ ಸ್ಥಾನ ನೀಡಬೇಕೆಂಬ ಬೇಡಿಕೆ ಮುಂದಿಟ್ಟು ಹೋರಾಟಕ್ಕೆ ಇಳಿಯಬೇಕಾಯಿತು. ಆ ಹೋರಾಟಗಳಿಗೆ ಸಂವಿಧಾನದ ಪರಿಚ್ಛೇದಗಳು ಸಹಾಯಕವಾಗಿವೆ.

ಸಂವಿಧಾನದ ಮೂಲಭೂತ ಹಕ್ಕುಗಳಿಗೆ ಸಂಬಂದಿಸಿದ ಪರಿಚ್ಛೇದ 25ರಿಂದ 30ರ ವರೆಗಿನ ಆರು ಪರಿಚ್ಛೇದಗಳು ವೈಯಕ್ತಿಕ ಮಟ್ಟದಲ್ಲಿ ಎಲ್ಲರಿಗೂ ತಮ್ಮ ತಮ್ಮ ಧರ್ಮ ಮತ್ತು ಸಂಸ್ಕೃತಿಯನ್ನು ನಂಬಲು, ಆಚರಿಸಲು ಮತ್ತು ಬೆಳಸಲು ಅವಕಾಶ ನೀಡಿವೆ. ಪರಿಚ್ಛೇದ 29 ಮತ್ತು 30ರಂತೆ ಅಲ್ಪಸಂಖ್ಯಾತರು ತಮ್ಮ ಸಂಸ್ಕೃತಿಯನ್ನು ಕಾಪಾಡಿಕೊಳ್ಳಬಹುದು. ಆದರೆ ಅಲ್ಪಸಂಖ್ಯಾತರೆಂದರೆ ಯಾರು ಎಂಬುದನ್ನು ಸಂವಿಧಾನವು ವ್ಯಾಖ್ಯಾನಿಸಿಲ್ಲ.

1955ರಲ್ಲಿ ರಚಿತವಾದ ಹಿಂದೂ ವಿವಾಹ ಕಾಯ್ದೆ, 1956ರಲ್ಲಿ ರಚಿತವಾದ ಹಿಂದೂ ವಾರ್ಸಾ ಕಾಯ್ದೆ, ಹಿಂದೂ ದತ್ತಕ ಕಾಯ್ದೆ, ಹಿಂದೂ ಅಲ್ಪವಯಿ ಕಾಯ್ದೆಗಳಲ್ಲಿ ಮಾಡಲಾದ ಹಿಂದೂ ಧರ್ಮದ ವ್ಯಾಖ್ಯಾನದ ಅಡಿಯಲ್ಲಿ ಜೈನ, ಬೌದ್ಧ, ಸಿಖ್, ಲಿಂಗಾಯತ ಧರ್ಮಗಳನ್ನೂ ನಿರೀಕ್ಷಿಸಿದಂತೆ ಹಿಂದೂದ ಅಡಿಯಲ್ಲಿಯೇ ನೂಕಲಾಗಿದೆ. ಇದೆಲ್ಲವೂ ರಾಷ್ಟ್ರದ ಏಕತೆ ಮತ್ತು ಭಾವೈಕ್ಯತೆಯ ಹೆಸರಿನಲ್ಲಿಯೇ ಮಾಡಿದ ಪ್ರಯತ್ನವಾಗಿದೆ.

ಆದರೆ ಯಾವುದೆ ಕಾನೂನು ಇಲ್ಲದೆ 1963ರಲ್ಲಿ ಸಿಖ್ಖರಿಗೆ ಅಲ್ಪಸಂಖ್ಯಾತ ಸಮುದಾಯವೆಂಬ ಸ್ಥಾನ ನೀಡಲಾಯಿತು. 1992 ರಲ್ಲಿ "ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಕಾಯ್ದೆ"ಯನ್ನು ಸಂಸತ್ತು ಅಂಗೀಕರಿಸಿತು. ಅದರ ಅಡಿಯಲ್ಲಿ ಪ್ರಪ್ರಥಮವಾಗಿ ಬೌದ್ಧರಿಗೆ 1993ರಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಾನ್ಯತೆ ದೊರೆತಿದೆ. ಮೊನ್ನೆ ಮೊನ್ನೆ 2014ರಲ್ಲಿ ಜೈನರನ್ನು ಅಲ್ಪಸಂಖ್ಯಾತ ಸಮುದಾಯವೆಂದು ಮಾನ್ಯಮಾಡಲಾಗಿದೆ. ಆದ್ದರಿಂದಲೇ ಅದೇ ಯಾದಿಯಲ್ಲಿ ಉಳಿದಿರುವ ಲಿಂಗಾಯತರು ಈಗ ಹೋರಾಟ ಪ್ರಾರಂಭಿಸಿದ್ದಾರೆ.

ಜೈನ, ಬೌದ್ಧ, ಸಿಖ್‌ರಿಗೆ ಅಲ್ಪಸಂಖ್ಯಾತ ಸ್ಥಾನ ದೊರೆತ ನಂತರ ಆ ಧರ್ಮಗಳಿಂದ ದೇಶದ ಐಕ್ಯತೆ ಮತ್ತು ಭದ್ರತೆಗೆ ಯಾವುದೇ ತೊಂದರೆಯಾಗಿಲ್ಲ. ಲಿಂಗಾಯತರೂ ದೇಶದ ಐಕ್ಯತೆಗೆ, ಭದ್ರತೆಗೆ ಧಕ್ಕೆ ತಂದವರಲ್ಲ. ತದ್ವಿರುದ್ಧವಾಗಿ ದೇಶದ ಐಕ್ಯತೆ ಮತ್ತು ಸ್ವಾತಂತ್ರ್ಯಕ್ಕಾಗಿ ಅವರು ಹೋರಾಡಿದ್ದು ಇತಿಹಾಸ ಪ್ರಸಿದ್ಧವಾಗಿದೆ (ಕಿತ್ತೂರು ಚನ್ನಮ್ಮ, ಕೆಳದಿಯ ರಾಣಿ ಚನ್ನಮ್ಮ, ವಿಜಯನಗರದ ಸಂಗಮ ವಂಶದ ಕೊನೆಯ ಮೂವರು ರಾಜರು ಇತ್ಯಾದಿ).

ಜೈನ, ಬೌದ್ಧ, ಸಿಖ್‌ರಿಗೆ ಅಲ್ಪಸಂಖ್ಯಾತ ಸ್ಥಾನ ಸಿಕ್ಕಾಗ ಸುಮ್ಮನಿದ್ದ ಹಿಂದೂ ಧರ್ಮದ ಕೆಲವು ವಕ್ತಾರರು ಮತ್ತು ಸಂಘಟನೆಗಳು ವಿನಾಕಾರಣ ಲಿಂಗಾಯತರ ಹೋರಾಟಕ್ಕೆ ಅಡ್ಡಿಮಾಡುತ್ತಿದ್ದಾರೆ. ಹಿಂದೂ ಶೈವದ ಒಂದು ಶಾಖೆಯಾಗಿರುವ ಮತ್ತು ಲಿಂಗಾಯತಕ್ಕೆ ನೇರವಾಗಿ ಸೇರದೇ ಇರುವ ವೀರಶೈವದವರೂ ಸುಮ್ಮನೇ ವಿರೋಧಿಸುತ್ತಿದ್ದಾರೆ. ಅವು ವ್ಯರ್ಥ ಪ್ರಯತ್ನಗಳು ಮಾತ್ರ! ಲಿಂಗಾಯತರು ಹಿಂದೂಗಳ ಅಥವಾ ವೀರಶೈವರ ವೈರಿಗಳಲ್ಲ ಮತ್ತು ವಿರೋಧಿಗಳಲ್ಲ. ಅವರು ತಮ್ಮ ಧರ್ಮದ ಮಾನ್ಯತೆಗಾಗಿ ಮಾತ್ರ ಹೋರಾಡುತ್ತಿದ್ದಾರೆ ಎಂಬುದನ್ನು ಇತರರು ಅರಿಯಬೇಕು.

*
ಪರಿವಿಡಿ (index)
Previousಧರ್ಮದ ಲಡಾಯಿಜನಗಣತಿಗಳು ಸೃಷ್ಟಿಸಿದ ಆವಾಂತರNext
*