Previous ಜಾತಿಗಣತಿಯ ಕುರಿತು ಸ್ಪಷ್ಟೀಕರಣ ಪಂಚಪೀಠಗಳ ಪ್ರತಿಪಾದನೆ ನಿಜವೆಷ್ಟು? Next

ಪಂಚ ಪೀಠ - ಕಟ್ಟು ಕಥೆ ತುಂಬಿದ ಅಸಂಗತ ವಾದ.

*

-ಸಿದ್ಧಲಿಂಗ ದೇಸಾಯಿ, ಧಾರವಾಡ.

ಕೃಪೆ: ಪ್ರಜಾವಾಣಿ » ಸಂಗತ, ಮಂಗಳವಾರ , ಮೇ 4, 2010

ಸ್ಥಾವರಲಿಂಗ ಸ್ಥಾಪಿಸಿದ ಕಥೆಯನ್ನು ಹೆಣೆಯುತ್ತಾರೆ. ಪಂಚಾಚಾರ್ಯರನ್ನು ವೈಭವೀಕರಿಸಿ ಕಥೆ ಹೆಣೆಯುವುದೇ ಡಾ. ಸವದತ್ತಿಮಠರಂಥವರ ಕಾಯಕವಾಗಿದೆ. ‘ಭಾರತಾದ್ಯಂತ ವೀರಶೈವ ಬೇರೆ ಬೇರೆ ರೂಪದಲ್ಲಿ ಅಸ್ತಿತ್ವದಲ್ಲಿತ್ತು’ ಪಂಚಾಚಾರ್ಯರ ವಿಚಾರಕ್ಕೆ ಚಂದಾದಾರರಾಗಿರುವ ಡಾ. ಸಂಗಮೇಶ ಸವದತ್ತಿಮಠರು ಏಪ್ರಿಲ್ 27 ರಂದು ಇದೇ ಪತ್ರಿಕೆಯ ‘ಸಂಗತ’ ಎನ್ನುವ ಅಂಕಣದಲ್ಲಿ ‘ಪಂಚಪೀಠಗಳು ಮತ್ತು ನೈಜ ಸಂಗತಿಗಳು’ ಎನ್ನುವ ಒಂದು ಅಸಂಗತ ಲೇಖನವನ್ನು ಬರೆದಿದ್ದಾರೆ. ಇದಕ್ಕೆ ಪ್ರೇರಣೆ: ಈಗ ಕೆಲವು ದಿನಗಳ ಹಿಂದೆ. ಬಿ.ಎಸ್. ಷಣ್ಮುಖಪ್ಪ ಅವರು ಇದೇ ಅಂಕಣದಲ್ಲಿ ಬರೆದ ‘ಪಂಚಪೀಠಗಳ ಪ್ರತಿಪಾದನೆ ನಿಜವೆಷ್ಟು?’ ಎಂಬ ಲೇಖನ. ಅದರಲ್ಲಿ ಬಿ.ಎಸ್. ಷಣ್ಮುಖಪ್ಪ ಅವರು ‘ಲಿಂಗಾಯತ ಧರ್ಮವನ್ನು ಹೈಜಾಕ್ ಮಾಡುತ್ತಲೇ ಬಂದ’ ಪಂಚಮಪೀಠಾಧೀಶರ ಹೂರಣವನ್ನು ಬಯಲಿಗೆಳೆದಿದ್ದಾರಲ್ಲದೆ, ಮೊದಲು ಕೇವಲ ಚತುರಾಚಾರ್ಯರಾಗಿದ್ದ ಇವರು ಇತ್ತೀಚೆಗೆ ಪಂಚಾಚಾರ್ಯರಾಗಿ ಲಿಂಗಾಯತ ಧರ್ಮವನ್ನು ಪ್ರವೇಶಿಸಿ ಅದೆಂಥ ಅನಾಹುತ ಮಾಡುತ್ತಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಅದಕ್ಕೆ ಡಾ. ಸಂಗಮೇಶ ಸವದತ್ತಿಮಠರು ಮನನೊಂದು ‘ಪಂಚಪೀಠಗಳು ಮತ್ತು ನೈಜ ಸಂಗತಿಗಳು’ ಎಂಬ ಲೇಖನ ಬರೆದಿದ್ದಾರೆ. ಅದಕ್ಕೆ ಪ್ರತ್ಯುತ್ತರವಾಗಿ ಈ ನನ್ನ ಲೇಖನ.

‘ಹುಸಿಯ ನುಡಿಯಲು ಬೇಡ ಎಂಬುದು ಬಸವಣ್ಣನವರ ಆದೇಶ’ ಎಂದು ಆರಂಭ ಮಾಡುವ ಸವದತ್ತಿಮಠರು ಇಡೀ ಲೇಖನದ ತುಂಬ ಹುಸಿಯನ್ನೇ ತುಂಬಿದ್ದಾರೆ. ಪಂಚಾಚಾರ್ಯರ ಬಗೆಗಿದ್ದ ಆಕರಗಳೆಂದರೆ ಪುರಾಣಗಳು ಹಾಗೂ ಅವರನ್ನು ಪ್ರತಿಪಾದಿಸುವವರ ಭ್ರಮೆಗಳು. ಅವಕ್ಕೆ ಬುದ್ಧಿ ಇದ್ದವರು ಪಕ್ಕಾಗಬೇಕು ಹಾಗೂ ಅವುಗಳನ್ನು ಒಪ್ಪಿ ಮನ್ನಿಸಬೇಕು ಎಂದು ಅವರು ಬಯಸುವುದು ವಿಚಿತ್ರ. ಪಂಚಾಚಾರ್ಯರ ಲಿಂಗೋದ್ಭವ ಕಥೆಯನ್ನು ಯಾವ ವ್ಯಕ್ತಿಯೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇತಿಹಾಸದ ಪೂರ್ವಕಾಲದಿಂದ ಬಿಜ್ಜಳನವರೆಗೆ ಅವರ ಅಸ್ತಿತ್ವದ ಕಥೆಯನ್ನು ಹೇಳುತ್ತಾರೆ. ಇಷ್ಟಲಿಂಗದ ಬೋಧಕರಾದ ಈ ಪಂಚಾಚಾರ್ಯರು ಸ್ಥಾವರಲಿಂಗದಿಂದ ಜನಿಸಿದರೆಂದು ಬರೆಯುತ್ತಾರೆ.

Panchacharya was introduced later; document evidence
Panchacharya was introduced later; document evidence

ಸ್ಥಾವರಲಿಂಗ ಸ್ಥಾಪಿಸಿದ ಕಥೆಯನ್ನು ಹೆಣೆಯುತ್ತಾರೆ. ಪಂಚಾಚಾರ್ಯರನ್ನು ವೈಭವೀಕರಿಸಿ ಕಥೆ ಹೆಣೆಯುವುದೇ ಡಾ. ಸವದತ್ತಿಮಠರಂಥವರ ಕಾಯಕವಾಗಿದೆ. ‘ಭಾರತಾದ್ಯಂತ ವೀರಶೈವ ಬೇರೆ ಬೇರೆ ರೂಪದಲ್ಲಿ ಅಸ್ತಿತ್ವದಲ್ಲಿತ್ತು’ ಎಂದು ಬರೆಯುವ ಸವದತ್ತಿಮಠರು ಜಗತ್ತು ಸೃಷ್ಟಿಯಾಗುವ ಮೊದಲೇ ಈ ವೀರಶೈವ ಧರ್ಮ ಅಸ್ತಿತ್ವದಲ್ಲಿತ್ತೆಂದು ಕಟ್ಟುಕಥೆ ಹೇಳುತ್ತಾರೆ. ಹಾಗಾದರೆ ವೀರಶೈವ ಧರ್ಮವು ಇಷ್ಟೊತ್ತಿಗಾಗಲೇ ವಿಶ್ವವನ್ನೇ ವ್ಯಾಪಿಸಬೇಕಾಗಿತ್ತು. ಆದರೆ ಇವರು ಪ್ರತಿಪಾದಿಸುವ ವೀರಶೈವ ಧರ್ಮ ಕೇವಲ ಕರ್ನಾಟಕದಲ್ಲಿ ಹಾಗೂ ಕರ್ನಾಟಕದ ಗಡಿ ಭಾಗದ ಇತರ ರಾಜ್ಯಗಳಲ್ಲಷ್ಟೇ ಏಕಿದೆ?

ವಾಸ್ತವವಾಗಿ ಬಸವಾದಿ ಶರಣರು ಬೋಧಿಸಿದ ಧರ್ಮವೆಂದರೆ ‘ಲಿಂಗಾಯತ ಧರ್ಮವೆ’ ಆದರೆ ಆರಾಧ್ಯರ ಧಾರ್ಮಿಕ ಸಂಪ್ರದಾಯದ ಈ ಪಂಚಪೀಠಗಳವರು ಆಗ ಅಸ್ತಿತ್ವದಲ್ಲಿದ್ದ ವೀರವೈಷ್ಣವರ ವಿರುದ್ಧ ಈ ವೀರಶೈವ ಧರ್ಮವನ್ನು ಹುಟ್ಟು ಹಾಕಿ ‘ವೀರಶೈವ’ವನ್ನು ಪ್ರಚಲಿತಕ್ಕೆ ತಂದರೇ ವಿನಃ ಅದು ಬಸವಾದಿ ಶರಣರು ಬೋಧಿಸಿದ ಲಿಂಗಾಯತ ಧರ್ಮವಲ್ಲ. ಅದು ಹೇಗೆ? ಯಾವಾಗ ಈ ‘ವೀರಶೈವ’ ಶಬ್ದ ಪ್ರಚಲಿತಕ್ಕೆ ಬಂದಿತೆಂಬ ಸ್ವಾರಸ್ಯಕರ ಸಂಗತಿ ಮೈಸೂರು ವಿಶ್ವವಿದ್ಯಾಲಯ 1935 ರಲ್ಲಿ ಪ್ರಕಟಿಸಿದ ‘ದಿ ಮೈಸೂರ್ ಟ್ರೈಬ್ಸ್ ಅಂಡ್ ಕಾಸ್ಟ್ಸ್’ ಎಂಬ ಗ್ರಂಥದ ಮೊದಲ ಸಂಪುಟದ 153 ಹಾಗೂ 154ನೇ ಪುಟಗಳಲ್ಲಿ ಸ್ಪಷ್ಟವಾಗಿ ನಮೋದ ಆಗಿದೆ.

‘ಬಹುಕಾಲದಿಂದ ಪ್ರಚಲಿತವಿದ್ದ ತಮ್ಮ ಜಾತಿಗಳ ಹೆಸರಿನ ಬದಲಾಗಿ ಬೇರೊಂದು ಹೊಸ ಹೆಸರಿನಿಂದ ಸಂಭೋದಿಸಬೇಕೆನ್ನುವ ಬೇಡಿಕೆ ಹಲವಾರು ಸಮಾಜಗಳ ಇತ್ತೀಚಿನ ಪ್ರವೃತ್ತಿಯಾಗಿದೆ. ಇದಕ್ಕೆ ಬಹುಶಃ ಆ ಸಮಾಜದ ಸಾಂಪತ್ತಿಕ ಸ್ಥಿತಿಗತಿಯ ಸುಧಾರಣೆ ಹಾಗೂ ಶ್ರೇಷ್ಠತೆಯ ಕಲ್ಪನೆ ಮತ್ತು ಇನ್ನುಳಿದ ಹಲವಾರು ಸಂಗತಿಗಳು ಈ ರೀತಿಯ ಬೇಡಿಕೆಗೆ ಕಾರಣಗಳಾಗಿರಬಹುದು. ಉದಾಹರಣೆಗೆ: ವೈಷ್ಣವ ದೇವಾಲಯಗಳಲ್ಲಿ ಸೇವೆ ಮಾಡುವ ಬ್ರಾಹ್ಮಣ ಸಾತನಿಗಳು ತಮ್ಮನ್ನು ‘ವೆಂಕಟಪುರ ಬ್ರಾಹ್ಮಣರು’ ‘ವಿಷ್ಣು ಬ್ರಾಹ್ಮಣರು’ ಅಥವಾ ‘ಪ್ರಪನ್ನ ವೈಷ್ಣವ ಬ್ರಾಹ್ಮಣರು’ ಎಂದು ಕರೆಯಬೇಕೆಂದು ಅಪೇಕ್ಷಿಸುತ್ತಾರೆ. ಅದರಂತೆ ನಾಯಿಂದರು (ಕ್ಷೌರಿಕರು) ತಮ್ಮನ್ನು ‘ನಾಯಿಂದ ಬ್ರಾಹ್ಮಣರು’ ಎಂದು ಸಂಭೋದಿಸಬೇಕೆಂದು ಅಪೇಕ್ಷಿಸುತ್ತಾರೆ. ಅದರಂತೆ ತಮ್ಮ ಸಮಾಜವನ್ನು ನೇಗಿಯವರು ಎಂದು ಕರೆಯದೆ ‘ದೇವಾಂಗ ಬ್ರಾಹ್ಮಣ’ ರೆಂದು ದಾಖಲಿಸಬೇಕೆಂದು ‘ದೇವಾಂಗ ಧರ್ಮ ಪ್ರಕಾಶಿಕಾ’ ಸಂಸ್ಥೆ ಬೇಡಿಕೆಯನ್ನಿಟ್ಟಿದೆ. ಪಾಂಚಾಳರು ತಮ್ಮನ್ನು ‘ವಿಶ್ವಕರ್ಮ ಬ್ರಾಹ್ಮಣ’ರೆಂದು ಕರೆಯಬೇಕೆಂದು ಬಹಳ ಗಟ್ಟಿಯಾಗಿ ಹೋರಾಡುತ್ತಿದ್ದಾರೆ. ನಾಗಮಂಗಲ ತಾಲ್ಲೂಕಿನಲ್ಲಿರುವ ಬಹುಕಾಲದಿಂದ ‘ತಿರುಕುಲದವರು’ ಎಂದು ಕರೆಯಲ್ಪಡುತ್ತಿದ್ದ ಸಮಾಜದವರು ತಮ್ಮನ್ನು ‘ಕಣಿಕನ್ನಾ’ ಎಂದು ಕರೆಯಬೇಕೆಂದು ಬಯಸುತ್ತಾರೆ. ಕೃಷ್ಣರಾಜಪೇಟೆಯ ಹಾಗೂ ಇನ್ನಿತೆರೆಡೆಯ ಲಿಂಗಾಯತರು ತಮ್ಮನ್ನೂ ‘ವೀರಶೈವ’ರೆಂದು ಕರೆಯಬೇಕೆಂದು ಬಯಸುತ್ತಾರೆ. ಕುರುಬ ಸಮಾಜದ ಒಬ್ಬರ ಕುರುಬರನ್ನು ಇನ್ನುಮೇಲಿಂದ ‘ಆರ್ಯಕ್ಷತ್ರಿಯ’ರೆಂದು ಕರೆಯಬೇಕೆಂದು ಸೂಚಿಸುತ್ತಾರೆ.

ಹೀಗೆ ಲಿಂಗಾಯತರು ತಮ್ಮ ಕೀಳರಿಮೆಯಿಂದ ಹೊರಬರಲು ಹೇರಿಕೊಂಡದ್ದೇ ‘ವೀರಶೈವ’. ‘ವೀರಶೈವ’ ಮತ್ತು ‘ಲಿಂಗಾಯತ’ ಶಬ್ದಗಳ ಬಗ್ಗೆ ಚರ್ಚೆ ನಡೆದು, ‘ವೀರಶೈವ’ ಶಬ್ದ 12ನೇ ಶತಮಾನದ ತರುವಾಯ ಬಳಕೆಯಲ್ಲಿ ಬಂದಿದೆ ಎಂಬ ವಾಸ್ತವವನ್ನು ನಾನೂ ಸೇರಿದಂತೆ ಡಾ. ಎಂ.ಎಂ. ಕಲಬುರ್ಗಿಯಾದಿಯಾಗಿ ಅನೇಕರು ಪ್ರತಿಪಾದಿಸಿ ಸತ್ಯವನ್ನು ಸ್ಥಾಪಿಸಲಾಗಿದೆ.

ಬರಿ ಜಾತಿ ಜಂಗಮರೇ ‘ಪಂಚಾಚಾರ್ಯರ’ ಹಾಗೂ ‘ವೀರಶೈವ’ ಪರ ವಕಾಲತ್ತು ವಹಿಸುತ್ತಲಿರುವುದು, ಇದನ್ನು ವಿರೋಧಿಸುತ್ತಿರುವವರಲ್ಲಿ ಸುಜ್ಞಾನಿ ಜಂಗಮರನ್ನೊಳಗೊಂಡು ಇತರ ಲಿಂಗಾಯತರಿರುವುದು ಏನನ್ನು ಸೂಚಿಸುತ್ತದೆ? ‘ವೀರಶೈವವೂ ಒಂದು ಪ್ರಾಚೀನ ಧರ್ಮವಾದ್ದರಿಂದ ಅದರ ಬೇರುಗಳು ಸಂಸ್ಕೃತ ಕೃತಿಗಳಲ್ಲಿರುವದು ಸ್ಪಷ್ಟವಾಗಿದೆ’ ಎಂದು ಡಾ. ಸವದತ್ತಿಮಠರು ಬರೆಯುತ್ತಾರೆ. ‘ವಚನಗಳೇ ಲಿಂಗಾಯತ ಧರ್ಮದ ಶಾಸ್ತ್ರ ಸಾಹಿತ್ಯವೆಂದು ನನ್ನ ಸ್ಪಷ್ಟವಾದ ಅಭಿಪ್ರಾಯ’ವೆಂದು ‘ಹಿಸ್ಟರಿ ಅಂಡ್ ಫಿಲಾಸಫಿ ಆಫ್ ಲಿಂಗಾಯತ್ ರಿಲಿಜನ್’ ಎಂಬ ಗ್ರಂಥದಲ್ಲಿ ಪ್ರೊ. ಎಂ.ಆರ್. ಸಾಖರೆಯವರು ತಿಳಿಸಿದ್ದಾರೆ. ಡಾ. ಸವದತ್ತಿಮಠರು ತಿಳಿಸಿರುವಂತೆ ‘ಶ್ರೀಕರಭಾಷ್ಯ’ ಹಾಗೂ ‘ಸಿದ್ಧಾಂತ ಶಿಖಾಮಣಿ’ ಗ್ರಂಥಗಳು ಸನಾತನವೂ ಅಲ್ಲ, ಪುರಾತನವೂ ಅಲ್ಲ. ‘ಹದಿಮೂರು ಹದಿನಾಲ್ಕನೇ ಶತಮಾನ’ದವುಗಳೆಂದು ಡಾ. ಎಂ. ಚಿದಾನಂದಮೂರ್ತಿಯವರು ತಮ್ಮ ಒಂದು ಲೇಖನದಲ್ಲಿ ಸ್ಪಷ್ಟಪಡಿಸಿದ್ದಾರೆ.

‘12ನೇ ಶತಮಾನದ ಶಿವಶರಣರು ತಮ್ಮ ವಚನಗಳಲ್ಲಿ ವೇದಾಗಮಗಳಲ್ಲಿರುವ ವೀರಶೈವ ತತ್ವಗಳನ್ನೇ ಹೇಳುತ್ತಿರುವುದಾಗಿ” ಎಂದು ಡಾ. ಸವದತ್ತಿಮಠರು ಹೇಳುತ್ತಾರೆ.

‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳನಿಕ್ಕುವೆ
ತರ್ಕದ ಬೆನ್ನ ಭಾರವನೆತ್ತುವೆ
ಆಗಮದ ಮೂಗ ಕೊಯ್ಯುವೆ ನೋಡಯ್ಯಾ
ಮಹಾದಾನಿ ಕೂಡಲ ಸಂಗಮದೇವಾ
ಮಾದಾರ ಚನ್ನಯ್ಯನ ಮನೆಯ ಮಗ ನಾನಯ್ಯ’

ಹೀಗೆ ವೇದ, ಆಗಮ, ಉಪನಿಷತ್ತು, ತತ್ವಶಾಸ್ತ್ರಗಳನ್ನು ಟೀಕಿಸಿದ ಹಾಗೂ ಅಪಹಾಸ್ಯ ಮಾಡಿದ ಅನೇಕ ವಚನಗಳು ಶರಣರ ವಚನಗಳಲ್ಲಿ ಬರುತ್ತವೆ. ಇವೂ ವೇದಗಳಲ್ಲಿ ಬಂದಿದ್ದರೆ ಸಂತೋಷ!

ಅಂತೂ ‘ಸಂಗತ’ ಅಂಕಣದಲ್ಲಿ ತಮ್ಮ ಅಸಂಗತ ವಿಚಾರವನ್ನು ಹರಿಬಿಟ್ಟ ಡಾ. ಸವದತ್ತಿಮಠರು ತಮ ನಿಜ ಬಣ್ಣವನ್ನು ಹೊರಗೆಡವಿದ್ದಾರೆ.

ಪಂಚಾಚಾರ್ಯ ಪರಂಪರೆಯಲ್ಲಿ ಕಾಣಿಸುವ ಗೊಂದಲಗಳು ಪಂಚಾಚಾರ್ಯರ ಕೃತಕ ಪರಂಪರೆಯನ್ನು ಸೃಷ್ಟಿಸಿದ ವೀರಶೈವರ ಪ್ರಯತ್ನಗಳಲ್ಲಿ ಅನೇಕ ಗೊಂದಲಗಳಿವೆ. ಅವರ ಹೆಸರು, ಊರು, ಕಾಲ, ಚರಿತ್ರೆ ಯಾವುದರಲ್ಲೂ ಒಮ್ಮತವಿಲ್ಲ.

ಪಂಡಿತಾರಾಧ್ಯರು, ರೇವಣ ಸಿದ್ದರು ಬದುಕಿದ್ದು ೧೨ನೇ ಶತಮಾನದಲ್ಲಿ. ಆದರೆ ಮರುಳಸಿದ್ದರ ಮತ್ತು ಏಕೋರಾಮರ ಕಾಲ-ಚರಿತ್ರೆ ಅಸ್ಪ್ರಷ್ಠವಾಗಿದೆ. ವಿಶ್ವರಾಧ್ಯರ ಕಲ್ಪನೆ ಇನ್ನೂ ಗೊಂದಲಮಯ.

೧೨ನೇ ಶತಮಾನದ ಪ್ರಸಾದಿ ಭೋಗಣ್ಣನ ಎರಡು ವಚನಗಳು ಇವರ ಪ್ರಾಚೀನತೆಗೆ ಸಾಕ್ಷಿ ಎಂಬ ವಾದವಿದೆ. ಆದರೆ ಅವುಗಳಲ್ಲಿ ಮರುಳ ಸಿದ್ದ, ರೇವಣ ಸಿದ್ದರ ಹೆಸರುಗಳೇ ಇಲ್ಲ.

ಈ ಪರಂಪರೆಯ ಮುಂಚೂಣಿಯಲ್ಲಿ ಇದ್ದವರು ಆರಾಧ್ಯರು. ಆದರೆ ಚತುರಾಚಾರ್ಯ ಪುರಾಣದಲ್ಲಿ (ಕ್ರಿ ಶ 1498) ಅವರ ಗುರು ಪಂಡಿತಾರಾಧ್ಯರ ಬದಲು ಶಿವಲಂಕ ಮಂಚಣ್ಣರ ಹೆಸರಿದೆ.

ಪಂಚಾಚಾರ್ಯರು ಸ್ಥಾವರಲಿಂಗಗಳಿಂದ ಉದ್ಬವಿಸಿದರು ಎನ್ನುವುದು ಈ ಪರಂಪರೆಯ ಮುಖ್ಯ ನಂಬಿಕೆ. ಆದರೆ ಬೇರೆ ಬೇರೆ ಕೃತಿಗಳಲ್ಲಿ ಆಚಾರ್ಯರು ಬೇರೆ ಬೇರೆ ಲಿಂಗಗಳಿಂದ ಉದ್ಬವಿಸುತ್ತಾರೆ.

ಆಚಾರ್ಯರು ದೀಕ್ಷಾವಿಧಿಯಲ್ಲಿ ಬಳಸುವ ೫ ಕಳಸಗಳ ಪ್ರತಿನಿಧಿಗಳು. ಆದರೆ ಹರಿಹರ, ಪದ್ಮರಸ, ಲಕ್ಕಣ್ಣ ದಂಡೇಶ ಮುಂತಾದವರ ಕೃತಿಗಳಲ್ಲಿ ಈ ಕಳಸಗಳ ಹೆಸರು, ಕಾರ್ಯಾರ್ಥ, ಸಂಖ್ಯೆ ಕೂಡ ಬದಲಾಗುತ್ತವೆ.-(‘ಚತುರಾಚಾರ್ಯ ಪರಿಕಲ್ಪನೆಯ ಮೂಲ: ಸಾಧ್ಯತೆಗಳು’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ - ಮಾರ್ಗ ೪)

ಸಂದರ್ಭ ಸೂಚಿ, ಆಧಾರ

ಪ್ರಜಾವಾಣಿ » ಸಂಗತ: http://46.5c.344a.static.theplanet.com/Content/May42010/sangata.asp

ಪರಿವಿಡಿ (index)
Previous ಜಾತಿಗಣತಿಯ ಕುರಿತು ಸ್ಪಷ್ಟೀಕರಣ ಪಂಚಪೀಠಗಳ ಪ್ರತಿಪಾದನೆ ನಿಜವೆಷ್ಟು? Next