Previous ಮೂಢನಂಬಿಕೆಗಳಿಲ್ಲದ ಬಸವಧರ್ಮ ಪಂಚಾಚಾರ‍್ಯರು ಜಗದ್ಗುರುಗಳಲ್ಲ, ಜಗದಾಚಾರರು Next

ಬಸವೋತ್ತರ ಯುಗ

*

ಬಸವೋತ್ತರ ಯುಗ : ಮೂರು ಕವಲುಗಳು

✍ ಡಾ. ಎಂ. ಎಂ. ಕಲಬುರ್ಗಿ.
ಧಾರವಾಡ

12ನೆಯ ಶತಮಾನ, ಶಿವಪರ ಧರ್ಮಗಳ ಸ್ಥಿತ್ಯಂತರ ಕಾಲ. ಸಿದ್ದರಾಮನ ಅವಧೂತಧರ್ಮ, ಪಂಡಿತಾರಾಧ್ಯನ ಆಚಾರಧರ್ಮ, ಬಸವಣ್ಣನ ಅನುಭಾವ ಧರ್ಮಗಳು ವಿಜೃಂಭಿಸುತ್ತಿದ್ದ ಸಂದರ್ಭ. ಮೂಲತಃ ಈ ಮೂರೂ ಶಿವೋಪಾಸಕ ಧರ್ಮಗಳೇ ಆಗಿದ್ದರೂ ಇವುಗಳ ದಾರಿ, ಗುರಿ ಭಿನ್ನವಾಗಿದ್ದವು. ಹೀಗಿದ್ದೂ ಬಸವಣ್ಣನ ಅನುಭಾವ ಧರ್ಮದಲ್ಲಿ ಸಿದ್ಧರಾಮನ ಅವಧೂತಧರ್ಮ (ನಾಥಪಂಥ) ವಿಲೀನಗೊಂಡಿತು. ಇದೇ ರೀತಿ ತನ್ನ ಆಚಾರಧರ್ಮವನ್ನು ವಿಲೀನಗೊಳಿಸಲು ಆಂಧ್ರದಿಂದ ಕಲ್ಯಾಣದತ್ತ ಹೊರಟಿದ್ದ ಪಂಡಿತಾರಾಧ್ಯನು ಬಸವಣ್ಣ ಎಂಟುದಿನಗಳ ಹಿಂದೆಯೇ ಲಿಂಗೈಕ್ಯನಾದ ಸುದ್ದಿ ಕೇಳಿ, ದುಃಖಿಸುತ್ತ ಅರ್ಧದಾರಿಯಿಂದಲೇ ಆಂಧ್ರಕ್ಕೆ ಮರಳಿದ. ಇದರಿಂದಾಗಿ ಈತ ಮಾನಸಿಕವಾಗಿ ಬಸವಮಯವಾಗಿದ್ದರೂ ಇವನ ಆಚಾರ್ಯಧರ್ಮವು ಅಧಿಕೃತವಾಗಿ ವಿಲೀನಗೊಳ್ಳುವುದು ತಪ್ಪಿಹೋಯಿತು. ಹೀಗಾಗಿ ಮುಂದಿನ ದಿನಗಳಲ್ಲಿ ಪಂಡಿತಾರಾಧ್ಯ ಪರಂಪರೆಯ ಜನ್ನಿವಾರ, ಬಸವಪರಂಪರೆಯ ಇಷ್ಟಲಿಂಗ ಎರಡನ್ನೂ ಕಟ್ಟಿಕೊಳ್ಳುವ ಹೊಸ ಸಂಪ್ರದಾಯವೊಂದು ಆಂಧ್ರದಲ್ಲಿ, ಆಂಧ್ರಕರ್ನಾಟಕ ಸೀಮೆಯಲ್ಲಿ ಅಸ್ತಿತ್ವಕ್ಕೆ ಬಂದಿತು. ಈ ಸಂಪ್ರದಾಯದವರು ಆ ಕಡೆ ಶ್ರೋತ್ರೀಯಬ್ರಹ್ಮಿಗಳೂ ಈ ಕಡೆ ಷಟ್ಸ್ಥಲಬ್ರಹ್ಮಿಗಳೂ ಆಗಿ ಅರ್ಧಲಿಂಗಾಯತ, ಅರ್ಧವೈದಿಕ ಅರ್ಥದ 'ಆರಾಧ್ಯ' ಹೆಸರಿನಿಂದ ಆಕಾರ ಪಡೆದರು. ಮತ್ತು ಕರ್ನಾಟಕದಲ್ಲಿ ಅನಿವಾರ‍್ಯ ಸಂದರ್ಭ ಕಾರಣವಾಗಿ, ಬಸವಣ್ಣನ ಅನುಭಾವಧರ್ಮದ ಭಾಗವೆಂಬಂತೆ ಕ್ರಮೇಣ ಬದಲಾಗುತ್ತ ಬಂದರು.

ಬಸವಣ್ಣನ ಅನುಭಾವಧರ್ಮದಲ್ಲಿ ಹೀಗೆ ಅವಧೂತ ಮತ್ತು ಆಚಾರ್ಯ ಧರ್ಮಗಳು ವಿಲೀನಗೊಂಡ ಕಾರಣ, 12ನೆಯ ಶತಮಾನವನ್ನು ಲಿಂಗಾಯತ ದೃಷ್ಟಿಯಿಂದ 'ಸಂಘಟನಯುಗ' ವೆಂದು ಕರೆಯಬಹುದು. ಹೀಗೆ ಒಳಗೆ ಬಂದಿದ್ದ ಆಚಾರ‍್ಯರು ಕ್ರಮೇಣ ತಮ್ಮ ಅಸ್ತಿತ್ವ-ಪ್ರತಿಷ್ಠೆ ಭದ್ರಪಡಿಸಿಕೊಳ್ಳುತ್ತ ಬೆಳೆದ ಕಾರಣ, ಒಂದಾಗಿದ್ದ ಧರ್ಮಗಳು 15-16ನೆಯ ಶತಮಾನಗಳ ಸಂಧಿಕಾಲದಲ್ಲಿ ಮತ್ತೆ ಮೂರು ಕವಲಾದ ಇತಿಹಾಸ ಹೀಗಿದೆ :

ಕವಲು : ಒಂದು

ಯಾವುದೇ ಧರ್ಮ ತನ್ನ ಬೆಳವಣಿಗೆಗಾಗಿ ರಾಜಧಾನಿ ಪರಿಸರವನ್ನು ಅಪೇಕ್ಷಿಸುತ್ತದೆ. 12ನೆಯ ಶತಮಾನದಿಂದಲೂ ನಮ್ಮಲ್ಲಿ ಒಂದರ ವಾರಸು ಇನ್ನೊಂದು ಎಂಬಂತೆ ಬೆಳೆದು ಬಂದ ರಾಜಧಾನಿಗಳೆಂದರೆ ಕಲಚೂರಿಗಳ ಕಲ್ಯಾಣ, ಹೊಯ್ಸಳರ ಹಳೇಬೀಡು, ವಿಜಯನಗರದವರ ಹಂಪಿ, ಕೆಳದಿ ಅರಸರ ಕೆಳದಿ, 12ನೆಯ ಶತಮಾನದ ಲಿಂಗಾಯತವು ರಾಜಧಾನಿ ಕಲ್ಯಾಣವನ್ನು ಕೇಂದ್ರವಾಗಿಟ್ಟುಕೊಂಡರೂ ತನ್ನ ಪ್ರಜಾಧರ್ಮಪ್ರಜ್ಞೆ ಕಾರಣವಾಗಿ ರಾಜರನ್ನು ನಿರಾಕರಿಸಿ. ಬೆಳೆಯಿತು. ಬಳಿಕ ಹಳೆಬೀಡಿನಲ್ಲಿ ರಾಜಾಶ್ರಯ ಮನೋಧರ್ಮ ಬೆಳೆಸಿಕೊಂಡು, ಹಂಪಿಯಲ್ಲಿ ಮತ್ತೂ ಬೆಳೆಸಿಕೊಂಡು, ಕೆಳದಿಯಲ್ಲಿ ನೇರವಾಗಿ ಆಸ್ಥಾನವನ್ನು ಆಶ್ರಯಿಸಿತು. ರಾಜಸತ್ತೆ ಪುರೋಹಿತಸತ್ತೆಗಳು ಪರಸ್ಪರ ಪೂರಕವೆಂಬಂತೆ ವರ್ತಿಸುವುದರಿಂದ, ರಾಜಾಶ್ರಯ ವರ್ಧಿಸುತ್ತ ನಡೆದಂತೆ, ವಿಲೀನವಾಗಿದ್ದ ಶೈವ ಆಚಾರರಲ್ಲಿ ಪುರೋಹಿತಪ್ರಜ್ಞೆ ಹಂತ ಹಂತವಾಗಿ ಸಹಜವಾಗಿಯೇ ವರ್ಧಿಸುತ್ತ ಬಂದಿತು. ಈ ಹಂತಗಳ ವಿವರ ಹೀಗಿದೆ :

12ನೆಯ ಶತಮಾನದ ಹೊತ್ತಿಗೆ ಕರ್ನಾಟಕದಲ್ಲಿ ಪ್ರಚಲಿತವಿದ್ದ ನಕುಲೀಶ (ಕಾಳಾಮುಖ), ಪಾಶುಪತ, ಮಹಾವ್ರತ, ಸಿದ್ದಾಂತ (ಮಾಹೇಶ್ವರ, ಪ್ರೋತ್ರೀಯ, ಶುದ್ಧ) ಹೆಸರಿನ ನಾಲ್ಕು ಶೈವಗಳಿದ್ದವು. ಇವೆಲ್ಲ ಶರಣ ಚಳುವಳಿಯಲ್ಲಿ ಕರಗಿಹೋದರೂ ಕೊನೆಯ ಸಿದ್ದಾಂತಶೈವ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಆರಾಧ್ಯ ಹೆಸರಿನಲ್ಲಿ ಜೀವ ಹಿಡಿದಿದ್ದಿತು. ಬಸವಣ್ಣನ ತರುವಾಯ, 12ನೆಯ ಶತಮಾನದಲ್ಲಿ ಅವನಂತೆ ಮಂತ್ರಿಯೂ ಧಾರ್ಮಿಕ ಧುರೀಣರೂ ಆಗಿ ಬೆಳೆದ ಈ ಆರಾಧ್ಯ ಸಂಪ್ರದಾಯದ ಕೆರೆಯ ಪದ್ಮರಸನಿದ್ದುದು, ಹೊಯ್ಸಳರ ರಾಜಧಾನಿ ಹಳೆಬೀಡಿನಲ್ಲಿ ವಚನಕಾರ ಸಕಲೇಶ ಮಾದರಸ ಶರಣಪಂಥದಲ್ಲಿ ಲೀನನಾಗಿ ಹೋಗಿದ್ದರೂ, ಇವನ ಮೊಮ್ಮಗನಾದ ಕೆರೆಯ ಪದ್ಮರಸ ಆಚಾರಸಂಪ್ರದಾಯ ಮತ್ತು ಅನುಭಾವ ಸಂಪ್ರದಾಯಗಳ ಮಿಶ್ರಣವೆಂಬಂತೆ ಕಂಡುಬರುತ್ತಾನೆ. ಪದ್ಮರಾಜ ಪುರಾಣದಲ್ಲಿ ಇವನು ಜನ್ನಿವಾರ ಮತ್ತು ಇಷ್ಟಲಿಂಗಧಾರಣೆಯ ಆರಾಧ್ಯ, ಅದರಲ್ಲಿಯೂ ಆಚಾರ್ ಕುಟುಂಬದವನಂತೆ ಚಿತ್ರಿತನಾಗಿದ್ದಾನೆ. ಈ ಕಾರಣಕ್ಕಾಗಿಯೇ ಶ್ರೀ ವೈಷ್ಣವ ತ್ರಿಭುವನತಾತನಿಗೆ ದೀಕ್ಷೆನೀಡುತ್ತಾನೆ. ಈ ಸಂದರ್ಭದ ಧಾರ್ಮಿಕ ಪಠ್ಯವೆಂಬಂತೆ ಈತ "ದೀಕ್ಷಾಬೋಧೆ" ಹೆಸರಿನ ಗ್ರಂಥ ರಚಿಸಿದ್ದು, ಇದು ಶರಣರ ಷಟ್ಸ್ಥಲ ಕ್ರಿಯಾಚರಣೆ ಮತ್ತು ಶೈವದ ಕರ್ಮಾಚರಣೆಗಳ ಮಿಶ್ರಣವೆಂಬಂತೆ ರೂಪಗೊಂಡಿದೆ. ರಾಜಾಸ್ಥಾನದಲ್ಲಿ ಈತನು ನಡೆಸಿದ ವಾದದಲ್ಲಿ ನೆರವಾಗಲು 'ಶಿವಜ್ಞಾನ ಸಮುಚ್ಚಯ'ದ ಕರ್ತೃ ಜಗದಾರಾಧ್ಯ ನಾಗಿದೇವ, ''ವೀರಮಾಹೇಶ್ವರಾಚಾರ ಸಂಗ್ರಹ'ದ ಕರ್ತೃ ನೀಲಕಂಠ ನಾಗನಾಥಾಚಾರ್, ಹುಲಿಗೆರೆಯ ಮಾಯಿದೇವ ಪುರಾಣಭಟ್ಟ ಮೊದಲಾದವರು ಹೋಗಿದ್ದರೆಂಬುದನ್ನು ಗಮನಿಸಿದರೆ, ಇವರೆಲ್ಲ ಪದ್ಮರಸನ ಪಂಥದವರೆಂಬುದು ಸ್ಪಷ್ಟವಾಗುತ್ತದೆ. ಇವರಲ್ಲಿ ನೀಲಕಂಠ ನಾಗನಾಥಾಚಾರನು ತನ್ನ 'ವೀರಮಾಹೇಶ್ವರಾಚಾರ ಸಂಗ್ರಹ'ದ ಆರಂಭದಲ್ಲಿ ದೇವತಾಸ್ತುತಿ ಮುಗಿಯುತ್ತಲೇ ''ನಮೋ ಬಸವರಾಜಾಯ' 'ನಮಃ ಶ್ರೀ ಚೆನ್ನಬಸವೇಶಾಯ...' “ನಮಃ ತಸ್ಮೈ ಪ್ರಭವೇ”. “ವಂದೇ ಸಿದ್ದರಾಮಾಯ....” “ನಮಃ ಶ್ರೀ ಪಂಡಿತಾರಾಧ್ಯ ಗುರುವೇ'' ಎಂದು ಧಾರ್ಮಿಕ ಧುರೀಣರನ್ನು ಸ್ತುತಿಸುವುದನ್ನು ನೋಡಿದರೆ, ಈ ಕಾಲದ ವರೆಗೆ ಕೆರೆಯ ಪದ್ಮರಸನ ಪರಿವಾರಕ್ಕೆ ಬಸವಾದಿ ಶರಣರು ಮತ್ತು ಪಂಡಿತಾರಾಧ್ಯರು ಮಾತ್ರ ಪೂಜ್ಯರೆನಿಸಿದ್ದರೆಂದು (ರೇವಣಾರಾಧ್ಯ, ಮರುಳಾರಾಧ್ಯ, ಏಕೋರಾಮಾರಾಧ್ಯ ಕಲ್ಪನೆ ಇನ್ನೂ ಹುಟ್ಟಿರಲ್ಲಿಲವೆಂದು) ಸ್ಪಷ್ಟವಾಗುತ್ತದೆ.

ಹೀಗೆ ಎರಡು ಸಿದ್ಧಾಂತಗಳನ್ನು ಮಿಶ್ರಣಗೊಳಿಸಿದ ಈ ಆರಾಧ್ಯರು ಆರಂಭಿಸಿದ ಇನ್ನೊಂದು ಕಾರ್ಯವೆಂದರೆ, ವಚನಸಿದ್ಧಾಂತಕ್ಕೆ ಪ್ರಾಚೀನತೆಯನ್ನು ಕಲ್ಪಿಸುವ ಸಲುವಾಗಿ, ಅದನ್ನು ಸಂಸ್ಕೃತಕ್ಕೆ ಅನುವಾದಿಸಿ ಆಗಮಗಳ ಉತ್ತರಭಾಗವನ್ನು ಸೃಷ್ಟಿಸಿದುದು. ''ರಥೋದ್ಧರಣೆಯ ವಾಚ್ಯ' ಕೃತಿಯ ಸಂಗನಬಸವಣ್ಣನ (1600)ನ್ನು ಕುರಿತ ಕವಿಚರಿತೆಕಾರರ “ಇವನು ವೀರಶೈವಕವಿ. ತನಗೆ ಹಿಂದೆ ಈ ಆಗಮಗಳನ್ನು ಜಕ್ಕಣಾರ್ ಮಾಯಿದೇವಪ್ರಭು ಕೆರೆಯ ಪದ್ಮರಸ ಗುಬ್ಬಿಯ ಮಲ್ಲಣಾರ್ ಪಾಲ್ಕುರಿಕೆ ಸೋಮ ಸೋಮಶಂಭು ಮೊದಲಾದವರು ಸಂಗ್ರಹಿಸಿದರು ಎಂದು ಹೇಳುತ್ತಾನೆ'' ಎಂಬ ಹೇಳಿಕೆ, ಆಗಮಗಳ ಉತ್ತರ ಭಾಗದ ರಚನೆ ಇವರಿಂದ ಜರುಗಿರಬಹುದೆಂಬ ಸೂಚನೆ ನೀಡುತ್ತದೆ. ಕರ್ನಾಟಕದಲ್ಲಿ ಸಿಗುವ ಆಗಮದ ಉತ್ತರ ಭಾಗಗಳು ತಮಿಳುನಾಡಿನ ಹಸ್ತಪ್ರತಿಗಳಲ್ಲಿ ಕಂಡುಬರುವುದಿಲ್ಲವೆಂಬುದನ್ನು ಇಲ್ಲಿ ಸ್ಮರಿಸಬಹುದು.

ಹೀಗೆ ಆಗಮಗಳಂತೆ ಇವರು ವಚನಗಳಲ್ಲಿಯೂ ಪ್ರಕ್ಷಿಪ್ತತೆಯನ್ನುಂಟು ಮಾಡಿದರು. ಆದುದರಿಂದ ನಾವು ಲಿಂಗಾಯತಸಿದ್ದಾಂತದ ಪ್ರಾಚೀನತೆಯನ್ನು ಅರ್ಥಮಾಡಿಕೊಳ್ಳುವ ಸಂದರ್ಭದಲ್ಲಿ, ಪ್ರಕ್ಷಿಪ್ತತೆಗೆ ಗುರಿಯಾದ ಈ ಆಗಮ- ವಚನಗಳನ್ನು ಬಿಟ್ಟು, ಪ್ರಕ್ಷಿಪ್ತತೆಗೆ ಗುರಿಯಾಗದ ಬಸವಪೂರ್ವದ 'ಸೋಮಶಂಭು ಪದ್ಧತಿ' ಮೊದಲಾದ ಶಾಸ್ತ್ರಕೃತಿಗಳನ್ನು ಅವಲಂಬಿಸುವುದು ವಿಹಿತ. ಹೀಗೆ ಅವಲಂಬಿಸಿದಲ್ಲಿ ವಚನಗಳು ಈ ಶಾಸ್ತ್ರಗಳಿಂದಲೂ ಏನೂ ಪ್ರೇರಣೆ ಪಡೆದಿಲ್ಲವೆನಿಸುತ್ತದೆ.

ಇನ್ನು 12ನೆಯ ಶತಮಾನದ ದೀಕ್ಷಾಬೋಧೆಯಲ್ಲಿ ಲಿಂಗಾಯತ ಶಬ್ದವಿದೆಯೇ ಹೊರತು ವೀರಶೈವ ಶಬ್ದವಿಲ್ಲ. 13ನೆಯ ಶತಮಾನದ ಕೊನೆಯ ತೆಲುಗು ಬಸವಪುರಾಣದಲ್ಲಿ ಕಂಡುಬರದ ಈ ಶಬ್ದ, ಇದರ ಅನುವಾದವಾಗಿರುವ 14ನೆಯ ಶತಮಾನದ ಕನ್ನಡ ಬಸವಪುರಾಣದಲ್ಲಿ ಮೊದಲ ಸಲ ಗೋಚರಿಸುತ್ತದೆ. ಇದೆಲ್ಲವನ್ನು ನೋಡಿದರೆ 13 ಮತ್ತು 14ನೆಯ ಶತಮಾನಗಳ ಮಧ್ಯದಲ್ಲಿ ಆಂಧ್ರದವರು 'ವೀರಶೈವ' ಪದ ಸೃಷ್ಟಿಸಿದರೆಂದೂ, ಇದರಿಂದಾಗಿ ಲಿಂಗಾಯತ ಪದ ಮೂಲೆಗುಂಪಾಗ ಲಾರಂಭಿಸಿತೆಂದೂ, ಆಚಾರರಿಗೂ ಪ್ರತ್ಯೇಕತೆ ಸಾಧಿಸಲು ಅನುಕೂಲವಾಯಿತೆಂದೂ ಹೇಳಬಹುದು.

ಹಳೇಬೀಡಿನ ತರುವಾಯದ ರಾಜಧಾನಿ ಹಂಪಿ. ಇದು ಆಂಧ್ರಕ್ಕೆ ಹತ್ತಿರವಿದ್ದದು ಆರಾಧ್ಯರಿಗೆ ಇನ್ನೂ ಅನುಕೂಲವೆನಿಸಿತು. 14ನೆಯ ಶತಮಾನದ ಹೊತ್ತಿಗೆ ಇಲ್ಲಿ ಮತ್ತೆ ಆಚಾರರಾದ ಮಗ್ಗೆಯ ಮಾಯಿದೇವ, ಮಹಾಲಿಂಗದೇವ, ಜಕ್ಕಣಾರ್ ಮೊದಲಾದವರು ಬೆಳಗಿದರು. ಈಗ ಶರಣಸಿದ್ಧಾಂತಕ್ಕೆ ಸಂಬಂಧಪಟ್ಟಂತೆ ಷಟ್ಸ್ಥಲ, ಏಕೋತ್ತರ ಶತಸ್ಥಲವೆಂಬ ಎರಡು ಬಗೆಯ ಕೃತಿರಚನೆ ಆರಂಭವಾಯಿತು. ಮಾಯಿದೇವನು ಶಿವಾನುಭವಸೂತ್ರವೆಂಬ ಷಟ್ಸ್ಥಲಕೃತಿಯನ್ನು ಸಂಸ್ಕೃತದಲ್ಲಿ ಏಕೋತ್ತರ ಶತಸ್ಥಲವೆಂಬ ನೂರೊಂದು ಸ್ಥಲದ ಷಟ್ಪದಿ ಕೃತಿಯನ್ನು ಕನ್ನಡದಲ್ಲಿ ಬರೆದನು. ಇದೇ ರೀತಿ ಮಹಾಲಿಂಗದೇವನು ಪ್ರಭುದೇವರ 'ಷಟ್ಸ್ಥಲವಚನ' ಹೆಸರಿನ ವಚನಸಂಕಲನವನ್ನು, 'ಏಕೋತ್ತರ ಶತಸ್ಥಲ' ವೆಂಬ ವಚನಸಂಕಲನವನ್ನು ರೂಪಿಸಿದನು. ಹೀಗೆ ಶಾಸ್ತ್ರಸಾಹಿತ್ಯದಲ್ಲಿ ಎರಡು ಬಗೆಗಳು ಕಾಣಿಸಿಕೊಂಡರೂ ಷಟ್ಸ್ಥಲಸಿದ್ದಾಂತದಂತೆ ಏಕೋತ್ತರ ಶತಸ್ಥಲಸಿದ್ದಾಂತವನ್ನೂ ಬಸವಾದಿಪ್ರಮಥರು ಸ್ಥಾಪಿಸಿದರೆಂದು ಇವರೆಲ್ಲ ಹೇಳುವುದು (ಜಕ್ಕಣಾರ್ಯನ ಏಕೋತ್ತರ ಶತಸ್ಥಲೀ ನೋಡಿರಿ), ತಮ್ಮ ಸಾಹಿತ್ಯದಲ್ಲಿ 'ಪಂಚಾಚಾರ' ಪದವನ್ನಾಗಲೀ, ಇವರಲ್ಲಿ ಪಂಡಿತಾರಾಧ್ಯ ಹೊರತುಪಡಿಸಿ ಬೇರೆಯವರ ಹೆಸರನ್ನಾಗಲೀ ತಪ್ಪಿಯೂ ಪ್ರಸ್ತಾಪಿಸದಿರುವುದು, ಗಮನಿಸಬೇಕಾದ ಸಂಗತಿಯಾಗಿದೆ. ಹೀಗೆ ಶರಣರನ್ನು, ಅವರ ವಚನಗಳನ್ನು ಅವರ ತತ್ವಗಳನ್ನು 15ನೆಯ ಶತಮಾನದ ವರೆಗೆ ಮಗ್ಗೆಯ ಮಾಯಿದೇವಾದಿ ಆಚಾರರು ಭಕ್ತಿಯಿಂದ ಗೌರವಿಸುತ್ತಲೇ ತಮ್ಮ ಸಂಪ್ರದಾಯವನ್ನು ಭದ್ರಪಡಿಸಿಕೊಳ್ಳುತ್ತ ಬಂದರು. ಇದಕ್ಕೆ ಪ್ರೌಢದೇವರಾಯನ ಆಶ್ರಯವೂ ಕಾರಣವಾಯಿತು. ಈ ರಾಜಾಶ್ರಯದಿಂದಾಗಿ ತಮ್ಮ ನೆಲೆ ಗಟ್ಟಿಯಾಗುತ್ತಲೇ ಕಳೆದುಹೋಗಿದ್ದ ತಮ್ಮ ನಾಲ್ಕು ಶೈವಧರ್ಮಗಳ ಸ್ಮರಣೆಯೆಂಬಂತೆ ಸಿದ್ದಾಂತಶೈವದ ಆರಾಧ್ಯರು ಯಜಮಾನತ್ವ ವಹಿಸಿ, ಬಹುಶಃ ಶಿವಗಂಗೆಯಲ್ಲಿ ಚತುರಾಚಾರ ಪೀಠ ಒಕ್ಕೂಟವನ್ನು 16ನೆಯ ಶತಮಾನದಲ್ಲಿ ರಚಿಸಿದರು. ಇದರ ಪ್ರಸಾರಕ್ಕಾಗಿ ಚತುರಾಚಾರ್ ಪುರಾಣವೂ (1698) ಹುಟ್ಟಿಕೊಂಡಿತು.

ಬಳಿಕ, ಇಷ್ಟರಲ್ಲಿ ತಲೆಯೆತ್ತಿದ್ದ ಲಿಂಗಾಯತ ಕೆಳದಿ ರಾಜ್ಯದ ಬಾಳೆಹಳ್ಳಿಗೆ ಸಾಗಿ, ಇನ್ನೂ ಪ್ರಬಲರಾಗಿ ಬೆಳೆದ ಇವರು, ಆಚಾರ ಪ್ರಜ್ಞೆಗೆ ಅನುಗುಣವಾಗಿ ಮೇಲು-ಕೀಳು, ಮಡಿ-ಮೈಲಿಗೆ ಬೆಳೆಸಿಕೊಂಡು, ಹಿಂದೆ ಹೇಳಿದಂತೆ ಈಗಾಗಲೇ ಬೆಳೆದು ಬಂದಿದ್ದ ಏಕೋತ್ತರಶತಸ್ಥಲ ಸಿದ್ದಾಂತವನ್ನು ಆಧರಿಸಿ, ಶಿವಯೋಗಿ ಶಿವಾಚಾಯ್ಯನೆಂಬ ಕೃತಕ ವ್ಯಕ್ತಿಯ ಹೆಸರಿನಲ್ಲಿ ಸಂಸ್ಕೃತ ಧರ್ಮಗ್ರಂಥವನ್ನು ರಚಿಸಿದರು. ಈ ಚತುರಾಚಾಠ್ಯಪೀಠ ಸ್ಥಾಪನೆಗೆ ಚಾಲನೆ ನೀಡಿದವರೇ ಸಿದ್ದಾಂತಶೈವರಾದುದರಿಂದ ಇದಕ್ಕೆ 'ಸಿದ್ಧಾಂತ ಶಿಖಾಮಣಿ' ಎಂದು ಹೆಸರಿಟ್ಟರು. ಬಳಿಕ ಕಾಶಿಪೀಠವನ್ನೂ ಜೋಡಿಸಿಕೊಂಡು ಪಂಚಾಚಾರ ಒಕ್ಕೂಟವನ್ನು ಅಸ್ತಿತ್ವಕ್ಕೆ ತಂದರು. ಹೀಗೆ ಆಚಾರಪೀಠ ಮತ್ತು ಸಿದ್ದಾಂತಗ್ರಂಥ ಸಿದ್ದವಾಗುತ್ತಲೇ ಇವರು ಈ ವರೆಗೆ ಬಳಸುತ್ತಿದ್ದ ಶ್ರೀ ಗುರು ಬಸವಲಿಂಗಾಯ ನಮಃ' ಎಂಬುದನ್ನು ಕೈಬಿಟ್ಟು, ಇಲ್ಲಿಂದ “ಪಂಚಗುರುಬ್ಬೋನಮಃ'' ಎಂಬುದನ್ನು ಬಳಸತೊಡಗಿದರು. ಇನ್ನೂ ಇತ್ತೀಚೆಗೆ ಅಂದರೆ 20ನೆಯ ಶತಮಾನದಲ್ಲಿ ಪ್ರಾಸವನ್ನು ಮುಂದುಮಾಡಿಕೊಂಡು ಪಂಚಾಚಾರ ಮತ್ತು ಪಂಚಮಸಾಲಿ ಸಮಾಜಗಳಿಗೆ ನೇರಸಂಬಂಧವಿದೆಯೆಂದು ಸುಳ್ಳು ಪ್ರಚಾರ ಮಾಡುತ್ತ ಬಂದರು.

ಕವಲು : ಎರಡು

ಹೀಗೆ ಲಿಂಗಾಯತ ಹೆಸರಿಗೆ ಬದಲು ವೀರಶೈವ ಹೆಸರನ್ನು ರೂಢಿಸಿಕೊಂಡು, ತಮ್ಮದೇ ಆದ ಪೀಠಗಳನ್ನು ಅಸ್ತಿತ್ವಕ್ಕೆ ತಂದ ಈ ಆಚಾರ‍್ಯದಿಂದಾಗಿ, ಮಡಿ-ಮೈಲಿಗೆ ಸ್ಪೃಶ್ಯ-ಅಸ್ಪೃಶ್ಯ ವಿಚಾರಗಳು ಈ ಧರ್ಮದಲ್ಲಿ ಬೆಳೆದವು. ಸಾಲದುದಕ್ಕೆ ಶೂದ್ರಭಾಷೆಯಾದ ಕನ್ನಡದಲ್ಲಿ ಬರೆಯಲ್ಪಟ್ಟ ವಚನಸಾಹಿತ್ಯವನ್ನು ತಿರಸ್ಕರಿಸಿ ಸಂಸ್ಕೃತದಲ್ಲಿ ಸಿದ್ದಾಂತಶಿಖಾಮಣಿ ಸೃಷ್ಟಿಯಾಯಿತು. ಇದರಿಂದ ಬೇಸರ-ಭಯಪಟ್ಟು, ಬಸವಸಂಸ್ಕೃತಿಯೇ ತಮ್ಮ ಪ್ರಾಣವೆಂದು ಒಳಗೆ ಬಂದಿದ್ದ ಕೆಲವು ಲಿಂಗಾಯತ ಸಮುದಾಯಗಳು ಪ್ರೌಢದೇವರಾಯನ ಕಾಲದಲ್ಲಿಯೇ 'ನೂರೊಂದು ವಿರಕ್ತರೆಂಬ ಹೆಸರಿನಲ್ಲಿ ಪ್ರತ್ಯೇಕಗೊಳ್ಳತೊಡಗಿದರು. ಈ ಪ್ರತ್ಯೇಕತೆಯ ಮುಖ್ಯಫಲ ಕೊಡೇಕಲ್ಲ ಬಸವಣ್ಣ ಇವನ ನೇತೃತ್ವದಲ್ಲಿ ಇತ್ತ ಲಿಂಗಾಯತರೂ ಅಲ್ಲದ, ಅತ್ತ ನಾಥಪಂಥೀಯರೂ ಅಲ್ಲದ ಧರ್ಮವನ್ನು ಇವರು ರೂಪಿಸಿಕೊಂಡರು. ಇವರಲ್ಲಿಯೇ ದಲಿತಮೂಲದಿಂದ ಬಂದಿದ್ದವರು ಇನ್ನೂ ನೊಂದುಕೊಂಡು, ತಮ್ಮ ತಮ್ಮ ಮೂಲಜಾತಿಗಳಿಗೆ ಹೋಗಿ, ಕೊಡೇಕಲ್ಲು ಬಸವಣ್ಣನ ದಲಿತ ಶಿಷ್ಯ ಮಂಟೇಸ್ವಾಮಿಯ ಆರಾಧಕರಾಗಿ ಪ್ರತ್ಯೇಕಗೊಂಡರು. ಈ ಉಭಯ (ಕೊಡೇಕಲ್ಲ ಬಸವಣ್ಣ ಮಂಟೇಸ್ವಾಮಿ) ಸಂಪ್ರದಾಯದವರು ಶರಣಸಂಸ್ಕೃತಿಯಲ್ಲಿ ಬಂಡಾಯದ ದನಿಯೆತ್ತಿ ಹೊರಗೆ ಹೋದಂತೆ ತೋರುತ್ತಿದ್ದು, ತಮ್ಮ ಲಿಖಿತ ಮತ್ತು ಮೌಖಿಕ ಸಾಹಿತ್ಯದಲ್ಲಿ ಕಲ್ಯಾಣ ಶರಣರ ಪಂಥದಿಂದ ಅಗಲಿದ ನೋವು, ಆಗಲಿಸಿದ ಸಿಟ್ಟುಗಳನ್ನು ಆಳವಾಗಿ ತೋಡಿಕೊಂಡಿದ್ದಾರೆ. ತಾಯಿಯನ್ನು ಕಳೆದುಕೊಂಡ ಕೂಸಿನಂತೆ ಹಲಬುತ್ತಲಿರುವುದಂತೂ ಮಂಟೇಸ್ವಾಮಿ ಪರಂಪರೆಯಲ್ಲಿ ತುಂಬಿ ನಿಂತಿದೆ.

ಈ ಮಂಟೇಸ್ವಾಮಿ ಪರಂಪರೆಯವರ ಮೌಖಿಕ ಹಾಡುಗಳಲ್ಲಿ ಕಲ್ಯಾಣ ಬಸವಣ್ಣನನ್ನು "ಗುರು ಮುಟ್ಟದ ಗುಡ್ಡ" ಎಂದು ಪ್ರಶಂಸಿಸುವ ಮೂಲಕ, ಅವನು ಬುದ್ಧನಂತೆ ಯಾರಿಂದಲೂ ದೀಕ್ಷಿತರನಾಗಿರಲಿಲ್ಲವೆಂದು ಸೂಚಿಸಿದುದು ಮಹತ್ವದ ಸಂಗತಿಯಾಗಿದೆ. ಇಂಥವರಿಗೆ ಶಂಭುವೇ ದೀಕ್ಷೆ ನೀಡಿರುತ್ತಾನೆಂದೂ, ಇದು ಶಾಂಭವದೀಕ್ಷೆಯೆಂದೂ ಶಾಸ್ತ್ರಗಳು ಹೇಳುತ್ತವೆ. ಬಸವಣ್ಣನ ದೀಕ್ಷಾಗುರು ಜಾತವೇದಿಯೆಂಬ ಕೃತಕವಾದಗಳ ನಿರಾಕರಣೆಗೆ ಇದು ಮಹತ್ವದ ಆಧಾರವಾಗಿದೆ.

ಬಸವಣ್ಣನ ಲಿಂಗಾಯತವನ್ನು ಶೋಷಣೆಯ ಮಾಧ್ಯಮ ಮಾಡಿಕೊಂಡ ಆಚಾರರ ಬಗ್ಗೆ ಕೊರಳಲ್ಲಿ ಲಿಂಗವಿದ್ದೂ ತತ್ವವಿಮುಖರಾಗಿ ಬದುಕುವ ಭಕ್ತರ ಬಗ್ಗೆ ಈ ಕೊಡೇಕಲ್ಲ ಬಸವಣ್ಣ ಮಂಟೇಸ್ವಾಮಿ ಸಾಹಿತ್ಯದಲ್ಲಿ ದೊಡ್ಡ ತಿರಸ್ಕಾರವಿದೆ. 'ಹಂಗುಹರಿ ಲಿಂಗದ'' ಎನ್ನುತ್ತಾನೆ, ಕೊಡೇಕಲ್ಲು ಬಸವಣ್ಣ, ಮಂಟೇಸ್ವಾಮಿಯು ಅಂದಿನ ಭ್ರಷ್ಟ ಅಚಾರ‍್ಯ ರನ್ನೂ ಭಕ್ತರನ್ನೂ ಕಂಡು ಹೇಸಿ

ಕುರುಬರ ಬೀರಯ್ಯ, ಲಿಂಗ.
ಮಡಿವಾಳ ಮಾಚಯ್ಯ ಲಿಂಗ,
ಹೊಲ್ಯಾರ ಹೊನ್ನಯ್ಯ ಲಿಂಗ
ಹಡಪದ ಅಪ್ಪಣ್ಣ ಲಿಂಗ.
ಕುಂಬಾರ ಗುಂಡಯ್ಯ ಲಿಂಗ
ಮಾದರ ಚೆನ್ನಯ್ಯ ಲಿಂಗ
ದೇವಾಂಗ ದಾಸಯ್ಯ ಲಿಂಗ
ಮೇಲುಸಕ್ಕರಿ ಶೆಟ್ಟಿ ಲಿಂಗ
ಗಂಗಡಿಕಾರ ಗೌಡ ಲಿಂಗ
ಜಗತ್ತಿನಲ್ಲಿ ಒಂಬತ್ತೇ ಲಿಂಗ
ಮಿಕ್ಕಾದ ಲಿಂಗವಂತರಲ್ಲ ಕಲ್ಲುವಡ್ಡರಾಗಿರಿ

ಎಂದು ಶಾಪಕೊಟ್ಟನೆಂಬ ಮಾತು ಇವರ ಹಾಡಿನಲ್ಲಿ ಬರುತ್ತದೆ, ಅಂದರೆ ಕುರುಬ, ಮಡಿವಾಳ, ಹೊಲೆಯ ಇತ್ಯಾದಿ ಒಂಬತ್ತು ಕೆಳವರ್ಗದ ಸಮಾಜಗಳ ಜನ ಮಾತ್ರ ನಿಜಲಿಂಗ, ಮಿಕ್ಕ ಆಚಾರರು-ಆಚಾರವಿಹೀನ ಭಕ್ತರು ಲಿಂಗವಂತರೇ ಅಲ್ಲ ಎಂದು ಮಂಟೇಸ್ವಾಮಿ ಶಾಪ ನೀಡಬೇಕಾದರೆ, ಅವನ ಕಾಲವಾದ 15ನೆಯ ಶತಮಾನದ ಹೊತ್ತಿಗೆ ಲಿಂಗಾಯತದ ಅಂತರಂಗ ಮಲಿನವಾಗಿದ್ದತೆಂದು ಸ್ಪಷ್ಟವಾಗುತ್ತದೆ. ಹೀಗೆ ಲಿಂಗಾಯತದಿಂದ, ಅದರ 'ಪ್ರಾಣ'ವಾದ ಈ ದಲಿತ ಸಮುದಾಯ ಹೊರಗೆ ಹೋಯಿತು; ಆಲಂಕಾರಿಕ 'ದೇಹ'ವೆಂಬಂತೆ ಆಚಾರಪೀಠ ಒಳಗೆ ಉಳಿಯಿತು. ಬಸವಣ್ಣ ಸಂಘಟಿಸಿದ್ದ ಧರ್ಮ ಎರಡು ಭಾಗವಾಯಿತು.

ಕವಲು : ಮೂರು

ಈ ರೀತಿ ಲಿಂಗಾಯತದ 'ದೇಹ' ಒಂದು ಕಡೆ, 'ಪ್ರಾಣ' ಒಂದು ಕಡೆಯಾಗುತ್ತಲೇ ಅದರ 'ಆತ್ಮ' ಅನಾಥವಾಯಿತು. ಈಗ ಅದು ಅನಾಥವಾಗದಂತೆ ನೋಡಿಕೊಳ್ಳಲು ಮುಂದೆ ಬಂದವರು, ತೋಂಟದ ಸಿದ್ದಲಿಂಗಯತಿಗಳು ಮತ್ತು ಇವರ ವಿರಕ್ತ ಪರಂಪರೆಯವರು. ಇದರಿಂದಾಗಿ ಆಚಾರ್ ಪರಂಪರೆಯವರು ಒಂದು ಕವಲು, ಕೊಡೇಕಲ್ಲ ಬಸವಣ್ಣ - ಮಂಟೆಸ್ವಾಮಿ ಪರಂಪರೆಯವರು ಇನ್ನೊಂದು ಕವಲು, ತೋಂಟದಾರ‍್ಯ ಪರಂಪರೆಯವರು ಮತ್ತೊಂದು ಕವಲು, ಹೀಗೆ ಲಿಂಗಾಯತದಲ್ಲಿ 15-16ನೆಯ ಶತಮಾನಗಳ ಮಧ್ಯದಲ್ಲಿ ಮೂರು ಕವಲುಗಳು ಕಾಣಿಸಿಕೊಂಡವು.

ಲಿಂಗಾಯತದ ಆತ್ಮವೆಂದರೆ ಅನುಭಾವ, ಇದರ ನೆಲೆ ಅನುಭವ ಮಂಟಪ, 12ನೆಯ ಶತಮಾನದ ತರುವಾಯ ಮತ್ತೆ ದೇವಾಲಯಸಂಸ್ಕೃತಿ, ಮಠಸಂಸ್ಕೃತಿಗಳನ್ನು ಆಚಾರ‍್ಯರು ಕ್ರಮೇಣ ಬೆಳೆಸಿಕೊಂಡು ಬರುವಲ್ಲಿ ಶರಣರ ಅನುಭವಮಂಟಪ ಸಂಸ್ಕೃತಿ ಮೂಲೆಗುಂಪಾಗಿದ್ದಿತು. ತೋಂಟದಾರ‍್ಯರ ಕಾಣಿಕೆಯೆಂದರೆ ಅಲ್ಲಮಪ್ರಭುವೇರಿದ್ದ ಈ ಅನುಭವಮಂಟಪ ಸಂಸ್ಕೃತಿಯನ್ನು ಪುನರುಜೀವನಗೊಳಿಸಿದುದು. ಈ ಕಾರಣಕ್ಕಾಗಿಯೇ ನಮ್ಮ ಕಾವ್ಯಗಳು ಅವನನ್ನು ದ್ವಿತೀಯ ಅಲ್ಲಮ, ತೋಂಟದ ಅಲ್ಲಮನೆಂದು ಕರೆದಿವೆ. ಹರದನಹಳ್ಳಿಯಲ್ಲಿ ಸಿದ್ಧನಾಗಿ, ಕಗ್ಗೆರೆಯಲ್ಲಿ ಲಿಂಗನಾಗಿ, ಎಡೆಯೂರಲ್ಲಿ ಶಿವಯೋಗಿಯಾಗಿ ಬೆಳೆದ ಸಿದ್ದಲಿಂಗಶಿವಯೋಗಿಗಳು ಅನುಭವ ಮಂಟಪದ ಮರುಹುಟ್ಟನ್ನು ಹೀಗೆ ಮೂರು ರೀತಿಗಳಲ್ಲಿ ಬೆಳೆಸಿದರು :

12ನೆಯ ಶತಮಾನದಲ್ಲಿ ಅನುಭವ ಮಂಟಪವು ಪ್ರಧಾನವಾಗಿ ಕಲ್ಯಾಣಕ್ಕೆ ಸೀಮಿತವಾಗಿದ್ದಿತು. ತೋಂಟದಾರ‍್ಯರು ಮಹಾಬಳೇಶ್ವರ, ಕಗ್ಗೆರೆ, ಚಿತ್ರಕಾಯಪುರ, ಹೆಬ್ಬೂರು, ತುಮಕೂರು, ದೇವರಾಯನ ಪಟ್ಟಣ, ಹೊಳಲಗುಂದ, ಎಡೆಯೂರು ಕುಂಬಳೇಶ್ವರ, ಉಳವಿ, ತ್ರೈಂಬಕೇಶ್ವರ, ಹೆರೂರು, ಶಿವಗಂಗೆ, ಮೋದೂರು, ಹೊನ್ನುಡಿಕೆ, ಚೆನ್ನಪಟ್ಟಣ, ಕಲುಕುಣಿಕಿ, ಹಟ್ಟಿ, ಲಿಂಗಪುರ, ವೃಷಭಪುರ, ಮಂಗವಾಡ, ಕೇತಶರಧಿ, ಕೋಡಿಹಳ್ಳಿ, ಬೆಳ್ಳರೆ, ಕಡ, ವೇಪರಾಳಿ, ಉರುವಕೊಂಡೆ, ಬಿದಿರೆ, ಮಂಗಳೂರು, ಮಲೆಯಾಳ, ಪರಶುರಾಮ ಕ್ಷೇತ್ರ, ಕಾಶಿ, ಹಂಪೆ, ಕಲ್ಯಾಣ, ಹುಲಿಯೂರದುರ್ಗ ಈ ಗ್ರಾಮಗಳಲ್ಲಿ ಅನುಭವ ಮಂಟಪಗೋಷ್ಠಿ ನಡೆಸಿದರು. ಒಂದರ್ಥದಲ್ಲಿ ಕಲ್ಯಾಣಕೇಂದ್ರಿತಕ್ಕೆ ಬದಲು, ಸಂಚಾರಿ ಅನುಭವಮಂಟಪ ಪ್ರಕ್ರಿಯೆಯನ್ನು ರೂಢಿಗೆ ತಂದರು.

ಎರಡನೆಯದಾಗಿ, ಅಲ್ಲಮಪ್ರಭು ಮಾತ್ರ ಅಧ್ಯಕ್ಷನೆನಿಸಿ ಏಕವ್ಯಕ್ತಿಕೇಂದ್ರಿತ ಅನುಭವ ಮಂಟಪ ಕಲ್ಯಾಣದಲ್ಲಿ ಅಸ್ತಿತ್ವಕ್ಕೆ ಬಂದಿದ್ದಿತು. ತೋಂಟದಾರ‍್ಯರು ಬೋಳಬಸವ, ಸಪ್ಪೇದೇವರು, ಉಪ್ಪಿನಹಳ್ಳಿಸ್ವಾಮಿ, ಗುಮ್ಮಳಾಪುರದ ಸಿದ್ದಲಿಂಗ, ಪಟ್ಟಣದ ದೇವರು, ಶೀಲವಂತದೇವರು, ಘನಲಿಂಗಿ, ಸುತ್ತೂರು ಸಿದ್ದಮಲ್ಲೇಶ, ಬತ್ತಲೆಯದೇಶಿಕ, ಹುಚ್ಚ ಪರ್ವತೇಶ, ಕಂಕಣದ ದೇವರು, ರಾಚವೀಟಿಯ ದೇವರು, ಚಂದ್ರಶೇಖರ, ದೊಡ್ಡಸಿದ್ದೇಶ, ಸಿದ್ದಲಿಂಗೇಶ, ಮಳೆಯದೇವ, ಕೊಡಗಿಹಳ್ಳಿ ಆಚಾರ್, ಕಂಬಳಾದೇವ, ಸಿದ್ಧನಂಜೇಶ್ವರ, ಚೆನ್ನದೇವ, ಲಂಬಕರ್ಣದದೇವ, ಎಡತೊರೆಪುರದ ಗುರುಸಿದ್ದ ವೀರಣ್ಣೋಡೆಯ, ಚಿಕ್ಕಮಲ್ಲೇಶ, ಮರುಳಸಿದ್ದೇಶ ಸುರಗಿಯಾರ್ಯ, ಶಾಂತಮಲ್ಲಿಕಾರ್ಜುನ, ಜಿಗುನಿಯ ಮರುಳದೇವ, ಜೋಲಿಯ ಬಸವೇಶ್ವರ, ರಾಚವಟ್ಟಿ, ಕೋರಿಯ ಸಿದ್ದಬಸವೇಶ್ವರ, ಹಿರಣ್ಣಾರ್ಯ, ಚೆನ್ನಮಲ್ಲೇಶ್ವರ, ನಂಜದೇಶಿಕೇಂದ್ರ, ಗಟ್ಟಿಸಿದ್ದಯ್ಯ, ರೇವಣ್ಣಸಿದ್ಧದೇವರು
ಮೊದಲಾದ 700 ಶಿಷ್ಯರಿಗೆ, ವಿರಕ್ತದೀಕ್ಷೆ ನೀಡಿ, ಸಂಚಾರಕ್ಕೆ ಕಳಿಸಿದರು. ಈ 700 ವಿರಕ್ತರು 700 ಸಂಚಾರಿ ಅನುಭವಮಂಟಪಗಳಂತೆ, ಅಂದರೆ 700ಜನ ಅಲ್ಲಮಪ್ರಭುಗಳಂತೆ ಕೆಲಸ ಮಾಡಿದರು.

ಈ ಪ್ರಯತ್ನ ಇಷ್ಟಕ್ಕೆ ನಿಲ್ಲದೆ 3ನೆಯದಾದ ಇನ್ನೊಂದು ಆಯಾಮ ಪಡೆಯಿತು. ಅದು, ಅನುಭವ ಮಂಟಪದ ಗ್ರಂಥರೂಪವೆನಿಸಿದ ಶೂನ್ಯಸಂಪಾದನೆಗಳ ರಚನೆ. ಕೊನೆಯ ಮೂರು, ಬಹುಶಃ ಮೊದಲನೆಯದೂ-ಹೀಗೆ ನಾಲ್ಕು ಶೂನ್ಯಸಂಪಾದನೆಗಳು ತೋಂಟದಾರ‍್ಯರ ಪ್ರತ್ಯಕ್ಷ-ಪರೋಕ್ಷ ಪ್ರೇರಣೆಯಿಂದ ಹುಟ್ಟಿಕೊಂಡವು. ಇದರಿಂದಾಗಿ ಯಾವುದೇ ಊರಿಗೆ ಸಿದ್ಧಲಿಂಗೇಶ್ವರರು ಇಲ್ಲವೆ 700 ಶಿಷ್ಯವಿರಕ್ತರಲ್ಲಿ ಯಾರಾದರೂ ಒಬ್ಬರು ಹೋಗುವುದು ಸಾಧ್ಯವಾಗದಿದ್ದರೆ, ಗ್ರಂಥರೂಪದ ಅನುಭವಮಂಟಪವಾದ ಶೂನ್ಯಸಂಪಾದನೆ ಗ್ರಂಥವು ಆ ಕಾರ್ಯವನ್ನು ಪೂರೈಸುವುದು ಆರಂಭವಾಗಿ, ಅನುಭವ ಮಂಟಪದ ಪರಿಚಲನೆಗೆ ಹೊಸ ಆಯಾಮ ಪ್ರಾಪ್ತವಾಯಿತು. ಹೀಗೆ ಗ್ರಂಥ ಒಯ್ದು ಇಲ್ಲವೆ ನಕಲು ಮಾಡಿಕೊಂಡು ಪ್ರವಚನಮಾಡಿದ ಮಠಗಳೇ ಶೂನ್ಯಸಂಪಾದನೆ ಮಠಗಳು. ಗೋಕಾಕ ಮೊದಲಾದ ಊರುಗಳಲ್ಲಿ ಇಂಥ ಮಠಗಳು ಅಸ್ತಿತ್ವಕ್ಕೆ ಬಂದವು.

ಒಟ್ಟಾರೆ, ತೋಂಟದಾರ‍್ಯರ ಜೀವನದ ಮುಖ್ಯ ಉದ್ದೇಶವೆಂದರೆ ಅನಾಥವಾಗಲಿದ್ದ, ಲಿಂಗಾಯತಧರ್ಮದ ಆತ್ಮವಾಗಿರುವ ಅನುಭಾವಸಂಸ್ಕೃತಿ ನಾಶವಾಗದಂತೆ ನೋಡಿಕೊಂಡುದು. ಅನುಭವಮಂಟಪ ಪರಂಪರೆಯನ್ನು ಪುನರುಜ್ಜೀವನಗೊಳಿಸಿದುದು.

ಹೀಗೆ 12ನೆಯ ಶತಮಾನದಲ್ಲಿ ಮೂರು ಧರ್ಮಗಳ (ಅವಧೂತ, ಆಚಾರ, ಅನುಭಾವಿ) ಸಂಘಟನೆ ಜರುಗಿದರೆ, ಆಮೇಲೆ ಕ್ರಮೇಣ (ಪಂಚ) ಆಚಾರ‍್ಯರು ಆಕಾರಗೊಳ್ಳುವಲ್ಲಿ ಆ ಸಂಘಟನೆ ಎರಡು, ಬಳಿಕ ಮೂರು ಕವಲಾಗಿ ವಿಘಟನೆಗೊಂಡಿತು. ಈಗ ಸಹಜವಾಗಿಯೇ ಆಚಾರರು ಮಡಿವಂತಿಕೆ ಧೋರಣೆಯಿಂದ ಪ್ರತಿಷ್ಠಿತ ಸಂಸ್ಕೃತದಲ್ಲಿ, ಅನುಭಾವಿಗಳು ಮುಕ್ತಧೋರಣೆಯಿಂದ ಲಿಖಿತ ಕನ್ನಡದಲ್ಲಿ, ಅವಧೂತರು ಇನ್ನೂ ಮುಕ್ತಧೋರಣೆಯಿಂದ ಮೌಖಿಕ ಕನ್ನಡದಲ್ಲಿ ತಮ್ಮ ಸಾಹಿತ್ಯವನ್ನು ಸೃಷ್ಟಿಸಿದರು. ಇದೆಲ್ಲದರ ಪರಿಣಾಮವಾಗಿ ಅವಧೂತರು ಎಲ್ಲ ಜಾತಿಯ ಮರಗಳ 'ಕಾಡು' ಎನಿಸಿದರೆ, ಆಚಾರ್ಯರು ಒಂದೇ ಜಾತಿಯ ಮರಗಳ ತೋಪು' ಎನಿಸಿದರು, ಅನುಭಾವಿಗಳು ಎಲ್ಲ ಜಾತಿಯ ಮರಗಳ ತೋಟ' ಎನಿಸಿದರು.

*
ಪರಿವಿಡಿ (index)
Previous ಮೂಢನಂಬಿಕೆಗಳಿಲ್ಲದ ಬಸವಧರ್ಮ ಪಂಚಾಚಾರ‍್ಯರು ಜಗದ್ಗುರುಗಳಲ್ಲ, ಜಗದಾಚಾರರು Next