*
ಬಸವಣ್ಣನವರ ಜನನದ ಉದ್ದೇಶ
✍ ಡಾ. ಎಂ. ಎಂ. ಕಲಬುರ್ಗಿ.
ಧಾರವಾಡ
ಮಹಾಪುರುಷರ ಬದುಕಿನ ಕೇಂದ್ರ ಉದ್ದೇಶದ ಸುತ್ತ ಅನೇಕ ಗೌಣ ಉದ್ದೇಶಗಳೂ ಹೆಣೆದುಕೊಂಡಿರುತ್ತವೆ. ಇವರನ್ನು ಕುರಿತು ಬರೆಯುವುದು ಆ ಕೇಂದ್ರ ಉದ್ದೇಶವನ್ನು ಶೋಧ ಮಾಡಬೇಕಾಗುತ್ತದೆ. ಆದರೆ ಕೆಲವರು ಅಮುಖ್ಯ ಉದ್ದೇಶವನ್ನೇ ಮುಖ್ಯವೆಂದು ನಂಬಿ, ಇನ್ನೂ ಕೆಲವರು ಮುಖ್ಯ ಉದ್ದೇಶಗಳನ್ನು ಕೈಗೆ ಬಂದಂತೆ ಮಿಶ್ರಗೊಳಿಸಿ ಚರಿತ್ರೆ ಬರೆಯುತ್ತಾರೆ. ಸಮರ್ಥ ಲೇಖಕನಾದವನು ಮಾತ್ರ ಅವರ ಜೀವನದ ಎಲ್ಲ ಚಟುವಟಿಕೆಗಳನ್ನು ಸಮಗ್ರವಾಗಿ ಅಭ್ಯಸಿಸಿ, ಕೇಂದ್ರ ಉದ್ದೇಶವನ್ನು ಕಂಡುವಿಡಿದು, ಅದರ ತಳಹದಿಯ ಮೇಲೆ ಕೃತಿ ಕಟ್ಟಡವನ್ನು ಬೆಳೆಸುತ್ತಾನೆ. ಆ ಕೃತಿಯ ಪ್ರತಿಯೊಂದು ಘಟನೆ ಆ ಕೇಂದ್ರ ಉದ್ದೇಶದ ನಿಯಂತ್ರಣಕ್ಕೆ ಒಳಪಡುತ್ತವೆ.
ಈ ಕೇಂದ್ರ ಉದ್ದೇಶವನ್ನು ಕೃತಿಯ ಪ್ರಾರಂಭದಲ್ಲಿಯೇ ಅವತಾರ ರೂಪದ ಒಂದು ಕಥೆಯ ಮೂಲಕ ಸಂಕೇತಿಸುವುದು ಭಾರತೀಯ ಬರವಣಿಗೆಯ ಪದ್ಧತಿಯಾಗಿದೆ. ಇದು ಒಂದು ತಂತ್ರವೆಂಬಂತೆ ನಮ್ಮಲ್ಲಿ ಬೆಳೆದುಬಂದಿದೆ. ಈ ಮೇರೆಗೆ ಬಸವಣ್ಣನವರ ಜನನದ ಹಿಂದೆ ಯಾವ ಉದ್ದೇಶವನ್ನು ನಮ್ಮ ಕವಿಗಳು ಗುರುತಿಸಿದ್ದಾರೆ? ಸರಿಯಾದುದನ್ನು ಯಾರು ಗುರುತಿಸಿದ್ದಾರೆ? ಹಾಗೆ ಗುರುತಿಸಿ ಕಲ್ಪಿಸಿದ ಕಥೆ ಕೃತಿಯ ಉದ್ದಕ್ಕೂ ಕಾರಣ-ಕಾರ್ಯಸಂಬಂಧವನ್ನು ಸಾಧಿಸಿದೆಯೇ? ಇತ್ಯಾದಿಗಳ ವಿವೇಚನೆ ಈ ಲೇಖನದ ವಿಷಯ.
ಬಸವಣ್ಣನವರ ಜನನೋದ್ದೇಶವನ್ನು ಒಬ್ಬೊಬ್ಬರು ಒಂದೊಂದು ಬಗೆಯಾಗಿ ಹೇಳಿದ್ದಾರೆ:
೧. ಖಿಲವಾದ ಶಿವಮತವನ್ನು ಉದ್ಧರಿಸಬೇಕೆಂಬ ನಾರದನ ಬಿನ್ನಹದ ಮೇರೆಗೆ ಶಿವನು ನಂದಿನಾಥನನ್ನು ಬಸವಣ್ಣನಾಗಿ ಕಳಿಸಿದನೆಂದು ಬಸವಪುರಾಣ ಹೇಳುತ್ತದೆ.
೨. ವಸುದೀಪ್ಯ (ಅನಿಮಿಷ)ನಿಗೆ ತನ್ನ ಇಷ್ಟಲಿಂಗವನ್ನು ಕೊಟ್ಟು, ನಂದಿ ಕೈಲಾಸಕ್ಕೆ ಹೋಗುತ್ತಾನೆ. ಈ ಲಿಂಗವಿರವಿತನೆಂಬ ನಿಂದೆಯನ್ನು ನೀಗಿಸಿಕೊಂಡು ಬರಲು ಶಿವನ ಆಜ್ಞೆಯಂತೆ ಆತನು ಭೂಲೋಕದಲ್ಲಿ ಬಸವಣ್ಣನಾಗಿ ಜನಿಸಿದನೆಂದು ಸಿಂಗಿರಾಜ ಪುರಾಣ ಹೇಳುತ್ತದೆ.
೩. ಕೈಲಾಸದಲ್ಲಿ ಎಲ್ಲ ಗಣಗಳಿಗೂ ಪುಷ್ಪ ಪ್ರಸಾದವನ್ನು ಹಂಚುವಾಗ ವೃಷಭಮುಖನು ಷಣ್ಮುಖನನ್ನು ಮರೆಯುತ್ತಾನೆ. ಈ ಪ್ರಸಾದ ವಿತರಣೆಯ ವಿಷಯವಾಗಿ ಮಾಡಿದ ತಪ್ಪನ್ನು ತಿದ್ದಿಕೊಂಡು ಬರಲು ಶಿವನು ಆತನನ್ನು ಭೂಲೋಕಕ್ಕೆ ಕಳಿಸಿದನೆಂದು ಬಸವರಾಜದೇವರ ರಗಳೆ ಹೇಳುತ್ತದೆ.
ಇವುಗಳಲ್ಲಿ ಬಸವಪುರಾಣ ಹೇಳುವುದು ಎಲ್ಲ ಮಹಾಪುರುಷರ ಅವತಾರಕ್ಕೂ ಹೇಳುವ ಮಾಮೂಲಿ ಕಾರಣವಾಗಿದೆ. ಕೈಲಾಸಕ್ಕೆ ನಾರದ ಬರುವುದು, ಶಿವನಿಗೆ ಬಿನ್ನವಿಸಿಕೊಳ್ಳುವುದು-ಇತ್ಯಾದಿಗಳೆಲ್ಲ ಹಿಂದೂ ಪುರಾಣಗಳ ಅನುಕರಣಗಳೆ ಸರಿ. ಹೀಗಾಗಿ ಬಸವಪುರಾಣ ಜನನದ ನಿರ್ದಿಷ್ಟ ಉದ್ದೇಶವನ್ನು ಗುರುತಿಸುವ ಗೋಜಿಗೆ ಹೋಗಿಲ್ಲವೆಂದು ಸ್ಪಷ್ಟವಾಗುತ್ತದೆ. ಅಲ್ಲದೆ ಸಹಜವಾಗಿಯೇ ಇದಕ್ಕೆ ನಿರ್ದಿಷ್ಟ ತಳಹದಿ ಇಲ್ಲ. ಒಟ್ಟು ೬೦ ಸಂಧಿಗಳಲ್ಲಿ ೧೦ ಸಂಧಿಗಳು ಮಾತ್ರ ಬಸವಣ್ಣನನ್ನು ಕುರಿತವು; ಮಿಕ್ಕವು ಅನ್ಯರನ್ನು ಕುರಿತವು. ಈ ಪುರಾಣ ಪ್ರಾರಂಭದಲ್ಲಿ ಬಸವಣ್ಣನವರ ಕಥೆಯಾಗಿ ಬಿಚ್ಚಿಕೊಂಡು, ಮುಂದೆ ಅನೇಕ ಕಥೆಗಳು ಕಲಾತ್ಮಕವಲ್ಲದ ಕವಲುಗಳಾಗಿ ಬೆಳೆದಿವೆ. ಹೀಗಾಗಿ ಬಸವಪುರಾಣ ಏಕಮುಖ ಅಲ್ಲದ ಒಂದು ಸೃಜನಶೀಲ ಪ್ರಯತ್ನವೆನಿಸಿದೆ.
ಭೀಮಕವಿಯನ್ನು ಬಿಟ್ಟರೆ ಮೇಲೆ ಹೇಳಿದಂತೆ ಸಿಂಗಿರಾಜ 'ಲಿಂಗತತ್ವದ ಮೇಲೆ ಒತ್ತು ಕೊಟ್ಟರೆ ಹರಿಹರ 'ಪ್ರಸಾದತತ್ವ'ದ ಮೇಲೆ ಒತ್ತು ಕೊಡುತ್ತಾನೆ. 'ಲಿಂಗಧಾರಣ' ಸೂಚನೆಯ ಮೂಲಕ ಸಿಂಗಿರಾಜಪುರಾಣ 'ವೈಯಕ್ತಿಕ ಉದ್ದಾರಕ್ಕೆ ಮುಖ್ಯತೆಯನ್ನು ಕೊಟ್ಟರೆ, 'ಪ್ರಸಾದ ವಿತರಣೆ' ಸೂಚನೆಯ ಮೂಲಕ ಬಸವರಾಜ ದೇವರ ರಗಳೆ 'ಸಾಮೂಹಿಕ ಉದ್ದಾರಕ್ಕೆ ಮುಖ್ಯತೆಯನ್ನು ಕೊಡುತ್ತದೆ. ಅಂದರೆ ಬಸವಣ್ಣನಿಗೆ ಸಂಬಂಧಪಟ್ಟಂತೆ ಒಂದರಲ್ಲಿ 'ಲಿಂಗವ್ಯಸನ'ದ, ಇನ್ನೊಂದರಲ್ಲಿ 'ಜಂಗಮಪ್ರೇಮ'ದ ಸೂಚನೆಯಿದೆ. ಸಿಂಗಿರಾಜನೇನೋ ಲಿಂಗವಿರಹಿತನೆಂಬ ಅಪವಾದವನ್ನು ನೀಗಿಸಿಕೊಂಡು ಬರಲು ಬಸವಣ್ಣ ಹುಟ್ಟಿದ ಎಂಬ ಅಂಶವನ್ನು ಪ್ರಾರಂಭದಲ್ಲಿ ಹೇಳಿದ್ದರೂ, ಮುಂದೆ ಅವನ ಕೃತಿ ಈ ಅಂಶವನ್ನು ಗುರಿಯಿಟ್ಟು ನಡೆಯುವುದೇ ಇಲ್ಲ. ಜನನ ಕಾರಣಕ್ಕೂ ಜೀವನ ಘಟನೆಗಳಿಗೂ ಸಂಬಂಧವಿಲ್ಲದಂತೆ ಈ ಕೃತಿಯ ತುಂಬ ಯಾವು ಯಾವುದೋ ೬೪ ಪವಾಡಗಳನ್ನು ತುಂಬಿದ್ದಾನೆ. ಹೀಗಾಗಿ ಬಸವಪುರಾಣದಂತೆ ಸಿಂಗಿರಾಜ ಪುರಾಣವೂ 'ಕಥೆ'ಯಾಗಿದೆಯೇ ಹೊರತು 'ಕೃತಿ'ಯಾಗಿಲ್ಲ.
ಹರಿಹರನ ದೃಷ್ಟಿ ಇವರಿಬ್ಬರಿಗಿಂತ ಭಿನ್ನ. ಕಾಲದೃಷ್ಟಿಯಿಂದ, ಸ್ಥಳದೃಷ್ಟಿಯಿಂದ ಅತ್ಯುಕ್ತಿಗಳೂ ಒಂದೊಂದಾಗಿ ಹುಟ್ಟುತ್ತ ಸೇರಿಕೊಳ್ಳುತ್ತ ಹೋಗುತ್ತವೆ. ಹರಿಹರನ ಸಮಯವನ್ನು ಶರಣರ ಸುತ್ತ ಪವಾಡಗಳು ಬಸವಣ್ಣನವರಿಗೆ ಎಲ್ಲರಿಗಿಂತ ಸಮೀಪದಲ್ಲಿದ್ದವನು. ಭೌಗೋಲಿಕ ವಾಗಿ ಐತಿಹಾಸಿಕವಾಗಿ ಕಥಾನಾಯಕ ದೂರನಾದಷ್ಟೂ ಅವನ ಸುತ್ತ ಪವಾಡಗಳು ಇನ್ನೂ ಅಷ್ಟಾಗಿ ಬೆಳೆದಿರಲಿಲ್ಲ. ಅಲ್ಲಿ ಚರಿತ್ರೆಯ ಅಂಶಗಳು ಇನ್ನೂ ಢಾಳವಾಗಿ ಉಳಿದಿದ್ದವು. ಹೀಗಾಗಿ ಎಷ್ಟೇ ಪವಾಡಗಳನ್ನೊಳಗೊಂಡಿದ್ದರೂ ಹರಿಹರ-ರಾಘವಾಂಕರ ಕೃತಿಗಳು ಇತಿಹಾಸ ಪ್ರಧಾನ ಚರಿತ್ರೆಗಳು; ಮುಂದಿನವು ಮಾತ್ರ ಚರಿತ್ರೆಯನ್ನು ಗೌಣವಾಗಿರಿಸಿಕೊಂಡ, ಪವಾಡಗಳನ್ನು ಪ್ರಧಾನವಾಗಿರಿಸಿಕೊಂಡ 'ಪುರಾಣ'ಗಳು, ರಾಘವಾಂಕನು ತನ್ನ ಕೃತಿಗಳಿಗೆ ಸಿದ್ದರಾಮ ಚಾರಿತ್ರ' ಇತ್ಯಾದಿ ಹೆಸರಿಟ್ಟುದ್ದು ವಿರೂಪಾಕ್ಷ ಪಂಡಿತ ಮೊದಲಾದವರು ತಮ್ಮ ಕೃತಿಗಳಿಗೆ 'ಚೆನ್ನಬಸವ ಪುರಾಣ' ಇತ್ಯಾದಿ ಹೆಸರಿಟ್ಟುದೂ ಅವರ ಧೋರಣೆಗಳನ್ನು ಸ್ಪಷ್ಟಪಡಿಸುತ್ತವೆ. ಅಂದರೆ ಪುರಾಣಗಳಿಗಿಂತ ಚರಿತ್ರೆಗಳಲ್ಲಿ ನೈಜತೆ ದಟ್ಟವಾಗಿರುತ್ತದೆ; ಕಾರ್ಯ-ಕಾರಣ ಸಂಬಂಧ ಸಷ್ಟವಾಗಿರುತ್ತದೆ. ಇದಕ್ಕೆ ಅನುಗುಣವಾಗಿ ಚರಿತ್ರೆ ನಿರ್ಮಾಣ ಯುಗದ ಕವಿಯಾದ ಹರಿಹರನು ಬಸವಣ್ಣನವರ ಜನನಕ್ಕೋಸುಗ ಕಲ್ಪಿಸಿಕೊಂಡ ಕಥೆಯಲ್ಲಿ ಮಿಡಿಯುವ ಕಾರಣ ಮತ್ತು ಇದನ್ನು ಸಮರ್ಥಿಸಲು ನಿರೂಪಿಸಿದ ಘಟನೆಗಳಲ್ಲಿ ಕಾರ್ಯ-ಕಾರಣ ಸಂಬಂಧ ಎದ್ದು ಕಾಣುತ್ತದೆ. ಹೀಗಾಗಿ ಇಡೀ ಬಸವರಾಜದೇವರ ರಗಳೆ ಬಸವಣ್ಣನವರ ಜನನ ಕಾರಣಕ್ಕೆ ಬರೆದ ಸಾಹಿತ್ಯಕ ವ್ಯಾಖ್ಯಾನದಂತೆ ಬೆಳೆದು ನಿಂತಿದೆಯೆಂದು ಹೇಳಬಹುದು.
ಕೈಲಾಸದಲ್ಲಿ ಶಿವನೆ ಸಭೆ, ಮಾಲೆಗಾರನೊಬ್ಬ ಹೂಗಳನ್ನು ತಂದು ಶಿವನಿಗೆ ಕೊಟ್ಟು, ಇವುಗಳನ್ನು ಗಣಸಭೆಗೆ ಹಂಚಲು ವೃಷಭಮುಖನೆಂಬ ಶಿವನ ಮಗನಾದ ಷಣ್ಮುಖನಿಗೇ ಹೂ ಕೊಡುವದನ್ನು ಮರೆತ. ಆಗ ಶಿವ,
ಇಲ್ಲಿ ಪ್ರಸಾದಮಂ ಕುಡುದಿರ್ಪ ಬಳಿವಿಡಿದು
ಅಲ್ಲಿ ಪ್ರಸಾದಮಂ ಎಂದಿನಿಂದ ಪಡೆದು
ಗಣ ಸಮಕ್ಷದ ಮುಸಿಗೆ ಶರಣರ್ಗೆ ಮಾಡುತ್ತೆ
ಮನ್ನಣೆಯೊಳಿಲ್ಲಿಗೆಯುಷ್ಟುದಿದು ನಿರ್ಮಿತಂ
ಎಂದು ಆದೇಶ ನೀಡಿ ಭೂಲೋಕಕ್ಕೆ ಕಳಿಸಿದ. ಇದು ಹರಿಹರ ತಾನು ಇಟ್ಟುಕೊಂಡ ಗುರಿಯ ಸಮರ್ಥನೆಗೆ ಕಟ್ಟಿಕೊಂಡ ಹಿನ್ನೆಲೆಯಾಗಿದೆ. ಬಸವಣ್ಣ ಭೂಲೋಕದಲ್ಲಿ ಪ್ರಸಾದತತ್ವದ ಅನುಷ್ಠಾನಕ್ಕಾಗಿ, ಅದರ ಪ್ರಸಾದಕ್ಕಾಗಿ ಹುಟ್ಟಿದನೆಂಬುದನ್ನು ಕಾವ್ಯದ ಮೂಲಕ ಸ್ಪಷ್ಟಪಡಿಸಿರುವುದರ ಸಲುವಾಗಿ ಆತನು ಕಲ್ಪಿಸಿಕೊಂಡ ಕಥಾ ಬೀಜವಿದು. ಈ ಕಾರಣ ಬೀಜವೇ ಮುಂದೆ ಕಾವ್ಯಭೂಜವಾಗಿ ಬಿಚ್ಚಿಕೊಂಡಿದೆ.
ಹರಿಹರನ ಪ್ರಕಾರ ಬಸವಣ್ಣ ಹುಟ್ಟುವುದು ಪ್ರಸಾದ ತತ್ವದ ಸಿದ್ದಿಗಾಗಿ, ಪ್ರಸಿದ್ದಿಗಾಗಿ, ಅಂದರೆ ಬಸವಣ್ಣ ಹುಟ್ಟುವ ಮೊದಲು ಅವನ ಪರಿಸರ ಪದಾರ್ಥ ಮಯವಾಗಿದ್ದಿತು. ಅದನ್ನು ಪ್ರಸಾದಮಯ ಮಾಡುವುದು ಆತನ ಜನನದ ಉದ್ದೇಶ, ಪದಾರ್ಥ ಜೀವನವೆಂದರೆ ಸ್ಥಗಿತ ಬದುಕು; ಪ್ರಸಾದ ಜೀವನವೆಂದರೆ ಚಲನಶೀಲ ಬದುಕು. ಒಂದು ಸ್ಥಾವರ, ಇನ್ನೊಂದು ಜಂಗಮ. ಒಂದಕ್ಕೆ ಅಳಿವುಂಟು, ಇನ್ನೊಂದಕ್ಕೆ ಅಳಿವಿಲ್ಲ. ಬಸವರಾಜದೇವರ ರಗಳೆಯಲ್ಲಿ ಸ್ಥಾವರವಾಗಿದ್ದ ಎರಡು ಸಾಮಾಜಿಕ ಅಂಶಗಳನ್ನು ಜಂಗಮಗೊಳಿಸುವ ಉದ್ದೇಶ ಪ್ರಧಾನವಾಗಿ ಕಾಣುತ್ತದೆ. ಅವು :
೧. ರಾಜ-ಪ್ರಜೆ (=ಜಂಗಮ) ಎಂದು ಸಮಾಜವನ್ನು ಒಡೆದು ಶೋಷಣೆ ನಡೆಸಿದ್ದ ರಾಜನ ಅಧಿಕಾರವನ್ನು ಅಲ್ಲಗಳೆದು ಪ್ರಜೆಗೂ (=ಜಂಗಮ) ರಾಜನಷ್ಟೇ ಅಧಿಕಾರವಿದೆಯೆಂದು ಸಾರುವುದು.
೨. ಕುಲಜ-ಅಂತ್ಯಜ ಎಂದು ಸಮಾಜವನ್ನು ಒಡೆದು ಶೋಷಣೆ ನಡೆಸಿದ್ದ ಕುಲಜನ ಶ್ರೇಷ್ಠತೆಯನ್ನು ಅಲ್ಲಗಳೆದು ಅಂತ್ಯಜನಿಗೂ ಕುಲಜನಷ್ಟೇ ಗೌರವವಿದೆಯೆಂದು ಸಾರುವುದು. ಈ ಎರಡು ಉದ್ದೇಶಗಳು ಈ ರಗಳೆಯ ತುಂಬ ಡಂಗುರ ಹೊಡೆದಂತೆ ಕೇಳಿಸುತ್ತವೆ. ಇದರಲ್ಲಿ ಕಂಡುಬರುವ ಎಲ್ಲ ಘಟನೆಗಳನ್ನು ಈ ಎರಡು ಉದ್ದೇಶಗಳಲ್ಲಿ ಹಂಚಿ ಹಾಕಬಹುದಾಗಿದೆ. ಒಮ್ಮೆ ಬಸವಣ್ಣನು ಜಂಗಮರ (=ಪ್ರಸಾದವಾದಿ ಪ್ರಜೆ) ಪ್ರತಿನಿಧಿಯಾಗಿ ನಿಂತು ಸಂಪತ್ತಿನ ಅಧಿಕಾರ ಯಾರದು?-ಎಂಬ ಪ್ರಶ್ನೆಯೆತ್ತಿಕೊಂಡು ಬಿಜ್ಜಳನೊಂದಿಗೆ ಸಂಘರ್ಷಕ್ಕೆ ಇಳಿಯುವುದು, ಇನ್ನೊಮ್ಮೆ ಬಿಜ್ಜಳನು ಬ್ರಾಹ್ಮಣರ ಪರವಾಗಿ ನಿಂತು ಸ್ಪಶ್ಯಾಸ್ಪಶ್ಯತೆಯ ಪ್ರಶ್ನೆಯೆತ್ತಿಕೊಂಡು ಬಸವಣ್ಣನೊಂದಿಗೆ ಸಂಘರ್ಷಕ್ಕೆ ನಿಲ್ಲುವುದು ಇಲ್ಲಿ ಉದ್ದಕ್ಕೂ ನಡೆದಿದೆ. ಇವುಗಳಲ್ಲಿ ಒಂದು ಸಂಪತ್ತಿನ ಮೂಲವಾದ ವರ್ಗಸಂಘರ್ಷ ವೆನಿಸಿದರೆ, ಇನ್ನೊಂದು ಜಾತಿಮೂಲವಾದ ವರ್ಣಸಂಘರ್ಷವೆನಿಸಿದೆ. ರಗಳೆಯಲ್ಲಿ ಈ ಎರಡನ್ನೂ ಕುರಿತ ಪ್ರತಿಪಾದನೆ ಹೀಗಿದೆ :
೧ ರಾಜ್ಯ ಭಂಡಾರದ ಮೇಲ್ವಿಚಾರಣೆ ಹೊತ್ತ ಬಸವಣ್ಣ
ಚಿಂತಿಸಿದನಾ ವಸ್ತುಗಳ ನಡುವೆ ಕುಳ್ಳಿರ್ದು
ಅಯ್ಯಲಾ ಇಂತಪ್ಪನರ್ಥ್ಯಮಂ ಭಕ್ತರ್ಗೆ
ಕೈಯಾರೆ ಕೊಡಲಿಲ್ಲ
ಲೋಕಾಯತರ್ಗೆ ಸಾರುತಿರ್ದಪದಕಟ
ಎಂದು ನುಡಿದು ಆಮೇಲೆ ಕಾವ್ಯದುದ್ದಕ್ಕೂ ಇದನ್ನು ನಡೆಸಿಕೊಡುತ್ತಾನೆ. ಇಲ್ಲಿ 'ಲೋಕಾಯತರ್ಗೆ' ಅಂದರೆ ಪದಾರ್ಥವಾದಿ ಪ್ರಜೆ (=ಭವಿ)ಗಳಿಗೆ ವ್ಯಯವಾಗುತ್ತಲಿದ್ದ ರಾಜ್ಯಸಂಪತ್ತು 'ಲಿಂಗಾಯತರ್ಗೆ' ಅಂದರೆ ಪ್ರಸಾದವಾದಿ ಪ್ರಜೆ (=ಭಕ)ಗಳಿಗೆ ಬಳಕೆಯಾಗಬೇಕೆಂಬುದು ಬಸವಣ್ಣನ ಸಿದ್ದಾಂತ, ಇವುಗಳಲ್ಲಿ ಲೋಕಾಯತ ಸಂವಿಧಾನ ಬಿಜ್ಜಳನದು; ಲಿಂಗಾಯತ ಸಂವಿಧಾನ ಬಸವಣ್ಣನದು. ಹೀಗಾಗಿ ಬಸವಣ್ಣನ ಅಪದಾರ್ಥ ಭಾವದಿಂದ ಉಪಭೋಗಿಸುವವರನ್ನು ಕಡೆಗಣಿಸಿ, ಪ್ರಸಾದಭಾವದಿಂದ ಉಪಭೋಗಿಸುವವರಿಗೆ ರಾಜ್ಯ ಭಂಡಾರವನ್ನು ಆಗಾಗ ವಿನಿಯೋಗಿಸುತ್ತಾನೆ. ಇದರ ಸಮರ್ಥನೆಗಾಗಿ 'ತಮ್ಮೊಡವೆಯಂ ತಾವೆ ಕೊಂಡರ್'೧ ಎಂದು ಆಗಾಗ ಬಿಜ್ಜಳನೊಂದಿಗೆ ವಾದಕ್ಕೆ ಇಳಿಯುತ್ತಾನೆ. ಈ ಎರಡು ಬಗೆಯ ಘಟನೆಗಳೇ ( ಅರ್ಥವನ್ನು ವಿನಿಯೋಗಿಸುವುದು ಮತ್ತು ವಿನಿಯೋಗದ ಸಮರ್ಥನೆಗಾಗಿ ವಾದಿಸುವುದು) ಇಲ್ಲಿ ಕಂಡುಬರುತ್ತಿದ್ದು, ಇವು ಇಸವಣ್ಣನ ಜನನದ ಉದ್ದೇಶವನ್ನು ಸಾಕಾರಗೊಳಿಸಲು ಸೃಷ್ಟಿಸಿಕೊಂಡುವೆಂದು ಕಷ್ಟವಾಗುತ್ತವೆ. ಕೊನೆಗೆ ಜಂಗಮರೇ ಪ್ರಸಾದವಾದಿ ಪ್ರಜೆಗಳೇ ಬಸವಣ್ಣನವರ ಪ್ರಾಣವೆಂದು ನಿದ್ರಾ ಪವಾಡದ ಮೂಲಕ ಧ್ವನಿಸುತ್ತಾನೆ.
೨. ಇದೇ ರೀತಿ ಸ್ಪೃಶ್ಯಾ ಸ್ಪೃಶ್ಯತೆಯಿಂದಾಗಿ ನಿರ್ಮಾಣವಾಗಿದ್ದ ಪದಾರ್ಥ ವ್ಯವಸ್ಥೆಯನ್ನು ಮುರಿದು ಪ್ರಸಾದ ವ್ಯವಸ್ಥೆಯನ್ನು ರೂಢಿಗೆ ತರಲು ಬಸವಣ್ಣ ನಡೆಸಿದ ಪ್ರಯತ್ನವನ್ನು ಈ ಕಾವ್ಯದಲ್ಲಿ ಕಾಣಬಹುದು. ಇದಕ್ಕೆ ಸಂಬೋಳಿ ನಾಗಿದೇವನ ಪ್ರಸಂಗ ಕೇತಕಿ ಪ್ರಸಂಗ ಉಳ್ಳಿ ಪ್ರಸಂಗಗಳು ನಿದರ್ಶನವಾಗಿವೆ. ಇವುಗಳಲ್ಲಿ ಈ ಕೇತಕಿ ಪುಷ್ಪ ಪೂಜೆಗೆ ತ್ಯಾಜ್ಯ, ಉಳ್ಳಿ ಊಟಕ್ಕೆ ವರ್ಜ್ಯವೆಂಬ ವಿಚಾರಗಳ ಖಂಡನೆಯು ವ್ಯಕ್ತಿಗಳಂತೆ ಹೂವು ಸೊಪ್ಪುಗಳಲ್ಲಿಯೂ ಕಲ್ಪಿಸಲಾಗಿದ್ದ ಸ್ಪೃಶ್ಯಾಸ್ಪೃಶ್ಯದ ಭೇದವನ್ನು ಪ್ರತಿಭಟಿಸುವುದಾಗಿದೆ. ಇದು ಸ್ಪೃಶ್ಯಾ ಸ್ಪೃಶ್ಯ ಭೇಧ ನಿವಾರಣೆಗಾಗಿ ಬಸವಣ್ಣ ನಡೆಸಿದ ಆನೇಕ ಸ್ತರಗಳ ಹೋರಾಟವನ್ನು ಸೂಚಿಸುತ್ತದೆ. ತನ್ನ ಈ ಧೋರಣೆಯನ್ನು ಕಾರ್ಯಗೊಳಿಸುವುದಲ್ಲದೆ ಅದರ ಸಮರ್ಥನೆಗಾಗಿ ಅರಸನೊಂದಿಗೆ ವಾದಕ್ಕೆ ಇಳಿಯುತ್ತಾನೆ. ಸಂಬೋಳಿ ನಾಗಿದೇವನ ಪ್ರಸಂಗದಲ್ಲಿ ಬ್ರಾಹ್ಮಣರನ್ನು ಬೆನ್ನು ಕಟ್ಟಿಕೊಂಡು ನಿಂತ ಅರಸು ಬಿಜ್ಜಳನೊಂದಿಗೆ ಶೂದ್ರರನ್ನು ಬೆನ್ನು ಕಟ್ಟಿಕೊಂಡು ಬಸವಣ್ಣ ವಾದ ನಡೆಸಿದುದು ಇದಕ್ಕೆ ಉದಾಹರಣೆಯಾಗಿದೆ.
೧. ತನ್ನ ಹೆಂಡತಿಯ ಕಿವಿಯೋಲೆಗಳನ್ನು ಕಳಚಿ ಕೊಡಿಸುವುದೂ ಪ್ರಸಾದತತ್ವವನ್ನೇ ಸೂಚಿಸುತ್ತದೆ.
ಹೀಗೆ ಪ್ರಭು ಮತ್ತು ಪುರೋಹಿತ ವರ್ಗದವರ ಶ್ರೇಷ್ಠತೆಯನ್ನು ಅಲ್ಲಗಳೆಯುವ. ಪ್ರಜೆ ಮತ್ತು ಶೂದ್ರವರ್ಗದವರ ಕನಿಷ್ಠತೆಯನ್ನು ಅಲ್ಲಗಳೆಯುವ ಕ್ರಿಯೆ ಒಮ್ಮೆ ಮಾತಿನ ಮೂಲಕ, ಇನ್ನೊಮ್ಮೆ ಕೃತಿಯ ಮೂಲಕ ವ್ಯಕ್ತವಾಗುತ್ತ ನಡೆದಿದೆ, ಈ ಕಾವ್ಯದಲ್ಲಿ.
ಪದಾರ್ಥವಾದಿ ಸಮಾಜದಲ್ಲಿ ಪ್ರಸಾರವಾದವನ್ನು ಅನುಷ್ಠಾನಗೊಳಿಸುವುದು ಸುಲಭದ ಕೆಲಸವಲ್ಲ. ಉದ್ದಕ್ಕೂ ಹೋರಾಟ ನಡೆಸಬೇಕಾಗುವುದೆಂಬುದನ್ನು ಸೂಚಿಸುವಂತೆ ಈ ಕೃತಿಯು ಎಲ್ಲ ಘಟನೆಗಳಲ್ಲಿಯೂ ಸಂಘರ್ಷ ಕೇಳಿಬರುತ್ತದೆ. ಆದುದರಿಂದ ಬಸವರಾಜದೇವರ ರಗಳೆ ಕನ್ನಡದ ಪ್ರಥಮ ಸಾಮಾಜಿಕ ಸಂಘರ್ಷ ಕಾವ್ಯವಾಗಿದೆ. ಒಟ್ಟು ಕಾವ್ಯ ತನ್ನ ಕೇಂದ್ರ ಉದ್ದೇಶವಾದ "ಪ್ರಸಾದತತ್ವ"ದ ಸುತ್ತ ಬಿಚ್ಚಿಕೊಳ್ಳುತ್ತ ನಡೆದಿದ್ದು ಇದು ಬಸವಣ್ಣನವರ ಜೀವನೋದ್ದೇಶವನ್ನು ಅರ್ಥ ಮಾಡಿಕೊಂಡ ಕನ್ನಡ ಕಾವ್ಯಗಳಲ್ಲಿಯೇ ಅರ್ಥಪೂರ್ಣ ಕೃತಿಯಾಗಿದೆ.
*