Previous ತೋಂಟದ ಸಿದ್ಧಲಿಂಗ ಮಹಾಸ್ವಾಮಿ ಮೊಟ್ಟೆ ಮಾಂಸಹಾರ, ಹಾಲು ಸಸ್ಯಾಹಾರ Next

ಅಕ್ಕ ನಾಗಲಾಂಬಿಕೆಯವರ ವಚನದಿಂದ ಕಾಲ್ಪನಿಕ ರೇಣುಕಾಚಾರ್ಯರ ಲಿಂಗೋದ್ಭವ ಕಲ್ಪನೆ

*

✍ ಶರಣಪ್ಪ ಮ. ಸಜ್ಜನ.

ಅಕ್ಕ ನಾಗಲಾಂಬಿಕೆಯವರ ವಚನದಿಂದ ಕಾಲ್ಪನಿಕ ರೇಣುಕಾಚಾರ್ಯರ ಲಿಂಗೋದ್ಭವ ಕಲ್ಪನೆ:

|| ಓ೦ ಶ್ರೀಗುರು ಬಸವಲಿಂಗಾಯ ನಮಃ ||

ಅಂಗದಿಂದುದಯವಾದಾತ ಮಡಿವಾಳಯ್ಯ,
ಲಿಂಗದಿಂದುದಯವಾದಾತ ರೇವಣಸಿದ್ಧಯ್ಯ,
ಭಸ್ಮದಿಂದುದಯವಾದಾತ ಸಿದ್ಧರಾಮಯ್ಯ,
ಪಾದೋದಕದಿಂದ ಉದಯವಾದವಳು ಅಕ್ಕ ಮಹಾದೇವಿ.
ಮಂತ್ರದಿಂದುದಯವಾದಾತ ನಿಮ್ಮ ಸೋದರಮಾವ ಬಸವಯ್ಯ.
ಪ್ರಸಾದದಿಂದುದಯವಾದಾತ ನೀನಲ್ಲವೆ ಚೆನ್ನಬಸವಯ್ಯಾ,
ಬಸವಣ್ಣಪ್ರಿಯ ಚೆನ್ನಸಂಗಯ್ಯ. -ಸ. ವ. ಸಂ (೫ - ೭೮೭)

ಲಿಂಗದಿಂದ ಉದಯವಾದ ಅಮರಗಣ ರೇವಣಸಿದ್ಧಯ್ಯ ಮಹಾಶರಣರು ಅನುಭವ ಮಂಟಪದ ಸದಸ್ಯರು. ಇಲ್ಲಿ ಅಕ್ಕ ನಾಗಲಾಂಬಿಕೆಯವರು ದಾಖಲಿಸುವಂತೆ ಎಲ್ಲ ಶರಣರು ಇಷ್ಟಲಿಂಗ ದೀಕ್ಷೆ ಪಡೆದು ಆ ಲಿಂಗದಲ್ಲಿ ಉದಯವಾಗುವುದೆಂದರೆ, ಪೂರ್ವಾಶ್ರಮದ ಜನ್ಮವನ್ನು ಮರೆತು 'ಅರಿವೇ ಗುರು!' ಎಂಬ ಜಾಗೃತಿಯನ್ನು ಹೊಂದುವುದೇ ಲಿಂಗವಂತನ ಜನನ ಅಥವಾ ಉದಯ ಎಂಬುದರ ಅರ್ಥ.

ರೇವಣಸಿದ್ಧಯ್ಯ ಶರಣರು 'ಲಿಂಗದಲ್ಲುದಯವಾದಾತ' ಎಂದರೆ ಅರಿವಿನಲ್ಲಿ ಅಥವಾ ಲಿಂಗಬೆಳಗಿನಲ್ಲಿ ಜನಿಸಿದರು ಎಂದರ್ಥ.

ವಚನ ಸಾಹಿತ್ಯವನ್ನು ಮರೆಮಾಚಿ, ಜಗಜ್ಜ್ಯೋತಿ ಬಸವಣ್ಣನವರನ್ನು ಲಿಂಗಾಯತರ ಮನಸ್ಸಿನಿಂದ ಮರೆಮಾಡಲು ವೀರಶೈವರಿಗೆ ಒಂದು ಸಂಸ್ಕೃತ ಧರ್ಮಗ್ರಂಥ ರಚಿಸಬೇಕಾಯಿತು. ಅದಕ್ಕೊಂದು ಹೆಸರು, ಒಬ್ಬ ಧರ್ಮಗುರುವಿನ ಹೆಸರು ಬೇಕಲ್ಲ?!

ವೇದ ಆಗಮ ಪುರಾಣ ಬಸವಾದಿ ಶರಣರ ವಚನಗಳಿಂದ ಕೆಲವು ವಿಷಯಗಳನ್ನು ಆಯ್ದುಕೊಂಡು 'ಸಿದ್ಧಾಂತ ಶಿಖಾಮಣಿ' ರಚನೆಯಾಯಿತು. ಈ ಗ್ರಂಥವನ್ನು ಬರೆದವರ ಹೆಸರು ಮರೆಮಾಚಿ ಕಾಲ್ಪನಿಕ ಹೆಸರನ್ನು ಅಂಟಿಸಲಾಯಿತು. ಆ ಕಾಲ್ಪನಿಕ ಹೆಸರೇ ಶಿವಯೋಗಿ ಶಿವಾಚಾರ್ಯ.

ಮತ್ತೆ, ಧರ್ಮಗುರುವಿನ ಹೆಸರು?

ಮೇಲಿನ ವಚನದಲ್ಲಿ ಉಲ್ಲೇಖವಾದ ರೇವಣಸಿದ್ಧಯ್ಯ ಶರಣರ ಹೆಸರನ್ನೇ ತಿರುಚಿ ರೇಣುಕಾಚಾರ್ಯ ಎಂದು ಧರ್ಮಗುರುವಿಗೆ ನಾಮಕರಣ ಮಾಡಲಾಗಿದೆ. ಕಾಲ್ಪನಿಕ ರೇಣುಕಾಚಾರ್ಯರ ತಂದೆ ತಾಯಿಗಳ ಹೆಸರು ಗೊತ್ತೇ ಇಲ್ಲದ ಕಾರಣ, ಕಾಲ್ಪನಿಕ ರೇಣುಕಾಚಾರ್ಯರನ್ನು ಆಂಧ್ರದ ಕೊಲ್ಲಿಪಾಕಿಯ ಸೋಮೇಶ್ವರ ಗುಡಿಯ ಸ್ಥಾವರಲಿಂಗದಲ್ಲಿ ಹುಟ್ಟಿಸಲಾಯಿತು. ವೀರಶೈವರು ತಮ್ಮ ಜಗದ್ಗುರು ರೇಣುಕಾಚಾರ್ಯರು ಕೊಲ್ಲಿಪಾಕಿಯ ಸೋಮೇಶ್ವರ ಗುಡಿಯಲ್ಲಿ ಸ್ಥಾವರಲಿಂಗೋದ್ಭವವಾದರೆಂದು ಪುರಾಣ ಕಥೆಯಲ್ಲಿ ಬರೆದುಕೊಂಡರು.

ಲಿಂಗಾಯತ ಧರ್ಮಗುರು ಬಸವಣ್ಣನವರು ಆವಿಷ್ಕರಿಸಿದ ಇಷ್ಟಲಿಂಗಧಾರಿಯಲ್ಲದ ವೀರಶೈವರ ಕಾಲ್ಪನಿಕ ರೇಣುಕಾಚಾರ್ಯರ ಹಣೆಯ ಮೇಲೆ ಗುಡಿಯ ಸ್ಥಾವರಲಿಂಗವನ್ನು ಚಿತ್ರಿಸಲಾಗಿದೆ. ಆದರೆ, ವೀರಶೈವರ ಕಾಲ್ಪನಿಕ ಸಿದ್ಧಾಂತ ಶಿಖಾಮಣಿ ಗ್ರಂಥವು ಇಷ್ಟಲಿಂಗದ ಬಗ್ಗೆ ಉಲ್ಲೇಖಿಸುತ್ತದೆ. ಈ ಆಭಾಸವನ್ನು ವೀರಶೈವರು ತಿಳಿಯದೇ ರೇಣುಕಾಚಾರ್ಯ ಭಗವತ್ಪಾದರ ಗುಣಗಾನ ಮಾಡುತ್ತ, ಬಸವಣ್ಣನವರು ಕೊಟ್ಟ ಇಷ್ಟಲಿಂಗವನ್ನು ಧರಿಸಿಕೊಂಡು ಬಸವ ಜಯಂತಿಯ ವಿರುದ್ಧವಾಗಿ ರೇಣುಕಾಚಾರ್ಯ ಜಯಂತಿಯನ್ನು ಆಚರಿಸುತ್ತಿದ್ದಾರೆ. ದೇವರು ಇವರಿಗೆ ಸದ್ಬುದ್ಧಿ ಕರುಣಿಸಲಿ.

ಜೈ ಬಸವೇಶ್ವರ!

*
ಪರಿವಿಡಿ (index)
Previous ತೋಂಟದ ಸಿದ್ಧಲಿಂಗ ಮಹಾಸ್ವಾಮಿ ಮೊಟ್ಟೆ ಮಾಂಸಹಾರ, ಹಾಲು ಸಸ್ಯಾಹಾರ Next