ನಿತ್ಯ ನಿರಂಜನ ಅಲ್ಲಮ ಪ್ರಭುದೇವರು | ಕರ್ನಾಟಕ ಸಂಗೀತ ಪಿತಾಮಹ: ಭಕ್ತಿಭಂಡಾರಿ ಬಸವೇಶ್ವರರು |
ಸಂಗೀತ ಕ್ಷೇತ್ರಕ್ಕೆ ಶರಣರ ಕೊಡುಗೆ |
ಡಾ. ಸರ್ವಮಂಗಳಾ ಶಂಕರ್
ಕುಲಪತಿಗಳು, ಸಂಗೀತ ವಿಶ್ವ ವಿದ್ಯಾಲಯ, ಮೈಸೂರು.
ಹೊಸ ಕ್ಷೇತ್ರವೊಂದನ್ನು ನಿರ್ಮಿಸುವುದೂ, ಪಾರಂಪರಿಕವಾಗಿ ನಡೆದು ಬಂದ ಕಲೆಯೊಂದನ್ನು ಉಳಿಸಿಕೊಂಡು ಪೋಷಿಸಿ ಬೆಳೆಸುವುದೂ, ಹಿಂದೆ ಇದ್ದ ಕಲೆಯೊಂದಕ್ಕೆ ಹೊಸ ಆಯಾಮ-ವರ್ಚಸ್ಸನ್ನು ಕೊಟ್ಟು ಬೆಳೆಸುವುದೂ, ಹೊಸದಾದ ಪದ್ಧತಿಯೊಂದಕ್ಕೆ ನಾಂದಿ ಹಾಡುವುದು ಇವೆಲ್ಲವೂ ಒಂದಲ್ಲಾ ಒಂದು ಬಗೆಯಲ್ಲಿ ಕೊಡುಗೆಗಳಾಗಿಯೇ ಪರಿಗಣಿತಗೊಳ್ಳುತ್ತವೆ. ಕೊಡುಗೆ ಎಂಬ ಪದದ ಅರ್ಥವ್ಯಾಪ್ತಿಯನ್ನು ವಿಶಾಲವಾಗಿ ಪರಿಗಣಿಸಬಹುದು. ಈ ದೃಷ್ಟಿಯಿಂದ ಸಂಗೀತ ಕ್ಷೇತ್ರಕ್ಕೆ ಶರಣರ ಕೊಡುಗೆ ಅಮೂಲ್ಯ.
೧೨ನೇಯ ಶತಮಾನದ ವಚನಕಾರರು ಹಾಗೂ ಅನಂತರದ ಶತಮಾನಗಳ ಶರಣರು ಸಂಗೀತ ಪ್ರೇಮಿಗಳಾಗಿದ್ದರು. ಸಂಗೀತ ಕಲೆಯನ್ನು ಪ್ರೋತ್ಸಾಹಿಸುತ್ತಿದ್ದರು. ಇದರಿಂದಾಗಿ ಸಾವಿರಾರು ಸಂಖ್ಯೆಯ ವಚನಗಳು ಹಾಗೂ ಸಾವಿರಾರು ಸಂಖ್ಯೆಯ ಸ್ವರವಚನಗಳು ರಚಿತಗೊಂಡವು. ವಚನಕಾರರ ಕಾಲದಲ್ಲೇ ವಚನಗಳು ಹಾಡುಗಳಂತಾಗಿ ಬಳಸಲ್ಪಡುತ್ತಿದ್ದವು ಎಂಬ ಬಗೆಗೆ ಉಲ್ಲೇಖಗಳಿಂದ ತಿಳಿದು ಬರುತ್ತದೆ. ವಚನಗಳಲ್ಲಿ ಸಂಗೀತದ ಬಗೆಗೆ ಅನೇಕ ವಿಷಯಗಳು ಪ್ರಸ್ತಾಪಿಸಲ್ಪಟ್ಟಿವೆ ಹಾಗೂ ಸಂಗೀತ ಪರಿಭಾಷೆ, ಸಂಗೀತ ಉಲ್ಲೇಖಗಳೂ ಲಭ್ಯವಿವೆ. ಹೀಗೆ ಸಂಗೀತ ವಿಚಾರಗಳನ್ನು ನೇರವಾಗಿಯೂ ಇಲ್ಲವೆ ಸನ್ನಿವೇಶಕ್ಕೆ ಒತ್ತುಕೊಟ್ಟೋ ಬಳಸಿಕೊಂಡು ಜನತೆಗೆ ಸಂಗೀತದ ಬಗೆಗೆ ಅರಿವುಂಟು ಮಾಡಿಸಿರುವುದು ವಚನಕಾರರು ಸಂಗೀತ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯೇ.
ವಚನಕಾರರು ಶಾಸ್ತ್ರೀಯವಾಗಿ ಸಂಗೀತ ಬಲ್ಲವರಾಗಿದ್ದರೇ ಅಥವಾ ಇಲ್ಲವೇ? ಎಂಬ ಬಗೆಗೆ ಖಚಿತ ಮಾಹಿತಿಗಳು ನಮಗೆ ಲಭ್ಯವಾಗಿಲ್ಲವಾದರೂ ವಚನಕಾರರಲ್ಲಿ ಕೆಲವರು ಕಲೆಯನ್ನು ತಮ್ಮ ಬದುಕಿನಲ್ಲಿ ಆತ್ಮೀಯವಾಗಿ ಸ್ವೀಕರಿಸಿದ್ಧ ಬಗೆಗೆ ತಿಳಿದು ಬರುತ್ತದೆ. ಸಕಲೇಶ ಮಾದರಸನು ವೀಣಾ ವಾದನದಲ್ಲಿ ಪಾರಂಗತನಾಗಿದ್ದ ಬಗೆಗೆ, ಅಲ್ಲಮನು ಮದ್ದಳೆ ವಾದನದಲ್ಲಿ ನಿಷ್ಣಾತನೆನಿಸಿದ್ದ ಬಗೆಗೆ, ಬಸವಣ್ಣನವರು ನಾನಾ ಶಾಸ್ತ್ರೀಯ ರಾಗಗಳಲ್ಲಿ ಹಾಡುತ್ತಿದ್ದ ಬಗೆಗೆ, ಕಿನ್ನರಿ ಬೊಮ್ಮಯ್ಯ, ಕಂಕರಿ ಕಕ್ಕಯ್ಯ, ಬಹುರೂಪಿ ಚೌಡಯ್ಯ, ಕುಂಬಾರ ಗುಂಡಯ್ಯ, ರಾಗದ ಸಂಕಣ್ಣ ಇವರುಗಳು ತಮ್ಮ ತಮ್ಮ ಕಲೆಯಲ್ಲಿ ಪರಿಣತಿ ಗಳಿಸಿದ್ದ ಬಗೆಗೆ ನಾನಾ ಮೂಲಗಳಿಂದ ತಿಳಿದು ಬರುತ್ತದೆ. ಗಾಯನ-ವಾದನಗಳಂತಹ ಹಲವಾರು ಪ್ರಸಂಗಗಳು ಶರಣರ ಜೀವನ ಚರಿತ್ರೆಯಲ್ಲಿ ಒಳಗೊಂಡಿವೆ. ಹೀಗೆ ಸಂಗೀತ ಕಲೆಯನ್ನು ತಮ್ಮ ಜೀವನದಲ್ಲಿ ಸ್ವೀಕರಿಸಿ ಬೆಳೆಸಿರುವುದೂ ಕೂಡ ಕೊಡುಗೆಯೇ.
ಸ್ವರವಚನಗಳು ಕನ್ನಡ ಭಾಷೆಯ ಗೇಯರಚನಾ ಪರಂಪರೆಯ ಮೂಲರಚನೆಗಳೂ. ಗೇಯರಚನಾ ಕ್ಷೇತ್ರದಲ್ಲಿ ಸ್ವರವಚನಗಳು ಬಹುಮುಖ್ಯ ಪಾತ್ರವಹಿಸುತ್ತವೆ. ರಚನೆಯೊಂದಕ್ಕೆ ರಾಗ-ತಾಳಗಳನ್ನು ಸೂಚಿಸಿ, ಕರ್ತೃವಿನ ಅಂಕಿತವನ್ನು ಹಾಗೂ ಪಲ್ಲವಿನುಡಿಗಳಂತಹ ಭಾಗಗಳನ್ನು ಗೇಯ ರಚನಗೆ ಹೊಂದಿಸುವ ಪರಂಪರೆಯು ಶರಣರ ಸ್ವರವಚನಗಳಿಂದ ಮೊಟ್ಟಮೊದಲ ಬಾರಿಗೆ ಆಗಿದೆ. ಮೃದು ಮಧುರ ಸಾಹಿತ್ಯ, ಲಯ, ಪ್ರಾಸ, ವಸ್ತು, ಸಿದ್ಧಾಂತ ಮುಂತಾದವುಗಳನ್ನು ತನ್ನಲ್ಲಿ ಮೈಗೂಡಿಸಿಕೊಂಡು ರಚಿತಗೊಂಡಿರುವ ಶರಣರ ಸ್ವರವಚನಗಳ ಈ ಹಿಂದೆ ಇಲ್ಲದಿದ್ದಂತಹ, ಪ್ರಪ್ರಥಮ ಬಾರಿಗೆ ಶರಣರಿಂದ ರೂಪುಗೊಂಡಂತಹ ವಿಶಿಷ್ಟ ರಚನೆಗಳು. ಈ ದಿಶೆಯನ್ನು ಶರಣರು ಗೇಯರಚನೆಗಳ ನಿರ್ದಿಷ್ಟ ರೂಪುರೇಷೆಗಳನ್ನು, ನಿರ್ದಿಷ್ಟ ಚೌಕಟ್ಟನ್ನು ರೂಪಿಸಿದ ನಿರ್ಮಾತೃಗಳು. ಗೇಯರಚನಾ ಇತಿಹಾಸದಲ್ಲಿ ಇದೊಂದು ಪ್ರಮುಖ ಮೈಲಿಗಲ್ಲು. ಇದು ಶರಣರ ಕೊಡುಗೆಯಾಗಿದೆ.
ಶರಣರ ಗೇಯರಚನಾ ಪರಂಪರೆಯು ೧೨ನೇ ಶತಮಾನದಿಂದ ೨೧ನೇಯ ಶತಮಾನದವರೆಗೂ ನಡೆದುಕೊಂಡು ಬಂದಿದೆ. ಇದು ಶರಣರ ಸಂಗೀತ ರಚನಾದೃಷ್ಟಿಯ ಸುಭಗತೆಯನ್ನು ತೋರುತ್ತದೆ. ೧೨ನೇಯ ಶತಮಾನದಲ್ಲಿ ಹೀಗೆ ರೂಪಗೊಂಡ ರಚನೆಗಳು ಮುಂದಿನ ಶತಮಾನಗಳ ಸಂಗೀತ ಪ್ರಪಂಚದ ಗೇಯರಚನೆಗಳಿಗೆ ಮಾದರಿಯೂ ಪ್ರಭಾವವೂ ಆಗಿ ಬಳಕೆಗೊಂಡಿರುವುದು ಸಂಗೀತ ಕ್ಷೇತ್ರಕ್ಕೆ ಶರಣರು ನೀಡಿದ ಕೊಡುಗೆಯೇ. ಶರಣರ ವಚನ-ಸ್ವರವಚನಗಳ ಪ್ರಭಾವದಿಂದಾಗಿ ಹರಿದಾಸರೂ ಉಗಾಭೋಗ ಕೀರ್ತನೆಗಳನ್ನು ರಚಿಸಿ ಅಮರರಾಗಿದ್ದಾರೆ, ಸ್ವರವಚನಕಾರರ ಸ್ವರವಚನಗಳಲ್ಲಿ ಲಿಂಗಾಯತ ಧರ್ಮದ ಗಾಢವಾದ ತತ್ವ ಸಿದ್ಧಾಂತಗಳೂ, ನೀತಿ, ಧರ್ಮ, ಮಾನವೀಯ ಮೌಲ್ಯ, ಉಪದೇಶ, ಸತ್ ಆಚರಣೆ ಮುಂತಾದ ಸನ್ಮಾರ್ಗವೂ ಅಡಗಿವೆ. ಅಲ್ಲದೆ ಚಂದಮಾಮ ಪದ, ಕಣಿಪದ, ಸುವ್ವಾಲೆ ಪದ, ಜೋಜೋ ಪದ, ಮಂಗಳಾರತಿ ಪದ, ತತ್ವ ಪದ, ಭಜನಾ ಪದಗಳಂತಹ ನಾನಾ ಮಾದರಿಗಳಲ್ಲಿ ವೈವಿಧ್ಯಮಯ ರೂಪದಲ್ಲಿ ಸ್ವರವಚನಗಳು ರಚಿತಗೊಂಡಿವೆ. ಈ ನಾನಾ ಬಗೆಯ ವಿಷಯ ವಸ್ತುಗಳನ್ನುಳ್ಳ ವೈವಿಧ್ಯಮಯ ಸ್ವರವಚನಗಳು ಸಂಗೀತ ಸಾಹಿತ್ಯ ಕ್ಷೇತ್ರಕ್ಕೆ ಶರಣರು ನೀಡಿರುವ ಅಮೂಲ್ಯ ಕೊಡುಗೆಯಾಗಿದೆ.
ಶರಣರು ಭಕ್ತಿಪ್ರಿಯರು. ಭಕ್ತಿಗೆ ಬಲು ಹತ್ತಿರದ ಮಾಧ್ಯಮ ಸಂಗೀತ. ಈ ಸಂಗೀತವನ್ನು ತಮ್ಮ ಸ್ವರವಚನಗಳಲ್ಲಿ ತುಂಬಿ, ಆತ್ಮೋದ್ಧಾರವನ್ನು ಮಾಡುವಂತಹ ಸಾಹಿತ್ಯವನ್ನು ಅದರಲ್ಲಡಗಿಸಿದರು ಶರಣರು. ಜನತೆಯ ಆತ್ಮೋದ್ಧಾರದಿಂದಾಗಿ ಲೋಕಕಲ್ಯಾಣವೂ ಸಂಗೀತದಂತಹ ಮಹಾನ್ ಕಲೆಯ ಪ್ರೋತ್ಸಾಹದಿಂದಾಗಿ ಸಾಂಸ್ಕೃತಿಕ ಬೆಳವಣಿಗೆಯೂ ಇದರಿಂದ ಸಾಧ್ಯವಾಗಿದೆ. ಇದೂ ಕೂಡ ಶರಣರ ಕೊಡುಗೆಯೇ. ಸ್ವರವಚನಗಳಲ್ಲಿ ಸೂಚಿತಗೊಂಡಿರುವ ರಾಗ-ತಾಳಗಳು ಸಂಗೀತದ ಇತಿಹಾಸದಲ್ಲಿ ಮಹತ್ತರ ಪಾತ್ರವಹಿಸುತ್ತವೆ. ಯಾವ ಯಾವ ರಾಗತಾಳಗಳು ಯಾವಯಾವ ಕಾಲದಲ್ಲಿ ಆಸ್ತಿತ್ವದಲ್ಲಿದ್ದವು. ಅವುಗಳ ರೂಪ-ಸ್ವರೂಪ-ಪರಂಪರೆಗಳೇನೇನು? ಅವು ಮುಂದೆ ಬೆಳೆದು ಬಂದ ಬಗೆ ಹೇಗೆ? ಎಂಬ ಬಗೆಗೆ ಸ್ಪಷ್ಟವಾದ ತಿಳುವಳಿಗೆಯು ಸ್ವರವಚನಗಳಲ್ಲಿನ ರಾಗ-ತಾಳ ಸೂಚನೆಗಳಿಂದ ಖಚಿತ ದಾಖಲಾತಿಯಾಗಿ ಉಳಿದು, ಸಂಗೀತ ಇತಿಹಾಸದ ತಿಳುವಳಿಕೆಗೆ ಸಹಾಯಕವಾಗುತ್ತದೆ. ರಾಗತಾಳಗಳ ನಿರ್ದೇಶನವೂ ಸಾಸ್ತ್ರೀಯ ಸಂಗೀತ ಪ್ರಸಕ್ತಿಗೆ ನಿಲುಕುವ ವಿಷಯ. ಶಾಸ್ತ್ರೀಯ ನೆಲೆಗಟ್ಟಿನಲ್ಲಿ ನಿರ್ದೇಶಿತಗೊಂಡಿರುವ ಸ್ವರವಚನಗಳಲ್ಲಿನ ರಾಗತಾಳಗಳು ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಶರಣರು ನೀಡಿರುವ ಅಪೂರ್ವ ಕೊಡುಗೆ.
ಸ್ವರವಚನಗಳು ಸ್ವರವಚನಕಾರನ ಕಾಲದ ಸಾಮಾಜಿ, ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ವಿಚಾರಗಳನ್ನು, ಆಗಿಹೋದಂತಹ ವಿಶೇಷ ಘಟನಾವಳಿಗಳನ್ನು, ಪ್ರಮುಖ ವ್ಯಕ್ತಿಗಳ ಹುಟ್ಟು-ಸಾವು-ಯುದ್ಧ ಇತ್ಯಾದಿಗಳನ್ನು ಉಲ್ಲೇಖಿಸಿವೆ. ಇದರಿಂದಾಗಿ ಸ್ವರವಚನಗಳು ಐತಿಹಾಸಿಕ ಮಾಹಿತಿಗಳನ್ನೊದಗಿಸುವ ನಿಟ್ಟಿನಲ್ಲೂ ಕಾಣಿಕೆ ನೀಡಿದೆ. ಸ್ವರವಚನಗಳಲ್ಲಿ ಗಾಯನ ವಾದನಗಳ ಉಲ್ಲೇಖವಿದೆ. ಸಪ್ತತಾಳಗಳ ಬಗೆಗೆ, ಶಾಸ್ತ್ರೀಯ ಸಂಗೀತ ವಾದ್ಯ, ಜಾನಪದರು ಬಳಸುವ ವಾದ್ಯಗಳು ಹೀಗೆ ಅನೇಕ ವಾದ್ಯಗಳ ಉಲ್ಲೇಖವಿದೆ. ಅಲ್ಲದೆ ನೃತ್ಯದ ಬಗೆಗೂ ಅನೇಕ ವಿಚಾರಗಳು ಹೇಳಲ್ಪಟ್ಟಿವೆ. ಕೆಲವು ಸ್ವರವಚನಕಾರರಾದರೋ ರಾಗವನ್ನು ರಚನೆಗೆ ಸೂಚಿಸಿ, ರಾಗ ಸಂಚಾರವನ್ನೂ ರಚನೆಯ ಸಾಹಿತ್ಯದಲ್ಲೇ ಸೇರಿಸಿ ತಿಳಿಸಿದ್ದಾರೆ. ಬಹುತೇಕ ಸ್ವರವಚನಕಾರರು ಗಾನವ, ಹಾಡಿರಿ, ಪಾಡಿರಿ, ಭಜಿಸಿರಿ ಮುಂತಾದ ಪದಗಳನ್ನು ಬಳಸಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಸ್ವರವಚನಕಾರರೆಲ್ಲರ ಸಂಗೀತ ಪ್ರೇಮವು ಸಾಬೀತುಗೊಳ್ಳುತ್ತದೆ. ಸಂಗೀತ ಕ್ಷೇತ್ರಕ್ಕೆ ಸ್ವರವಚನಕಾರರ ಕೊಡುಗೆ ವಿಶಿಷ್ಟವೆನಿಸುತ್ತದೆ.
ಕೃಪೆ: ಶಾಂತಿ ಕಿರಣ ಮೇ-ಜೂನ್-೨೦೧೪.
*ನಿತ್ಯ ನಿರಂಜನ ಅಲ್ಲಮ ಪ್ರಭುದೇವರು | ಕರ್ನಾಟಕ ಸಂಗೀತ ಪಿತಾಮಹ: ಭಕ್ತಿಭಂಡಾರಿ ಬಸವೇಶ್ವರರು |