*
ಅಂಕಿತ: |
ಗುಹೇಶ್ವರ ಪ್ರಿಯ ನಿರಾಳಲಿಂಗ |
೮೦೩
ಅರುಹಿನ ಕುರುಹ ಕಾಣದೆ ಗಿರಿ ಕೋಡಗಲ್ಲ ಮೇಲೆ
ತಲೆಕೆಳಗೆ ಮಾಡಿ ತಪಸ್ಸವ ಮಾಡಿದಡಿಲ್ಲ,
ಕಾಲಕರ್ಮಂಗಳ ದಂಡಿಸಿದಡಿಲ್ಲ,
ಪೃಥ್ವಿ ತಿರುಗಿ, ತೀರ್ಥಂಗಳ ಮಿಂದು, ನಿತ್ಯನೇಮಂಗಳ ಮಾಡಿದಡಿಲ್ಲ.
ಜಲಸಮಾಧೀಯಲ್ಲಿ ಕುಳಿತಡಿಲ್ಲ,
ಇದಕ್ಕೆ ಶ್ಲೋಕ :
ಪೂಜಾಕೋಟಿಸಮಂ ಸ್ತೋತ್ರಂ ಸ್ತೋತ್ರಕೋಟಿಸಮಂ ಜಪಃ ||
ಜಪಕೋಟಿಸಮಂ ಧ್ಯಾನಂ ಧ್ಯಾನಕೋಟಿಮನೋಲಯಂ ||
ಇಂತೆಂದುಂದಾಗಿ, ಸುತ್ತಿಸುಳಿವ ಮನವನು ಚಿತ್ತದಲ್ಲಿರಿಸಿ
ನಿಶ್ಚಿಂತವಾದಡೆ ನಿತ್ಯಪ್ರಕಾಶ ಗುರು ಗುಹೇಶ್ವರಲಿಂಗವು
ಮತ್ತೆ ಅರಸಲುಂಟೇನಯ್ಯಾ?
ಮಠವ್ಯಾಕೊ, ಪರ್ವತವ್ಯಾಕೊ, ಜನವ್ಯಾಕೋ, ನಿರ್ಜನವ್ಯಾಕೊ
ಚಿತ್ತ ಸಮಾಧನವುಳ್ಳ ಪುರುಷಂಗೆ ?
ಹೊರಗಣ ಧ್ಯಾನ ಮೌನ ಜಪತಪ ನಿತ್ಯನೇಮಂಗಳ್ಯಾಕೊ
ತನ್ನ ತಾನರಿದ ಶರಣಂಗೆ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ?
ಈತನ ಬಗೆಗೆ ಏನೊಂದೂ ವಿಷಯವೂ ತಿಳಿದಿಲ್ಲ. ಹಸ್ತ ಪ್ರತಿಗಳಲ್ಲಿ ಉಲ್ಲೇಖವಾದ 'ಗುಹೇಶ್ವರಯ್ಯನ ವಚನಗಳು' ಎಂಬ ಶೀರ್ಷಿಕೆ ಕಾರಣಾವಾಗಿ 'ಗುಹೇಶ್ವರಯ್ಯ' ಎಂಬುದು ಈ ವಚನಕಾರನ ಹೆಸರಾಗಿರಬೇಕೆಂದು ಊಹಿಸಲಾಗಿದೆ.
೭೮೮
ಇಷ್ಟಲಿಂಗ ವೆಂಬ ಭ್ರಾಂತಿಗೇಡಿಗಳು ನೀವು ಕೇಳಿರೋ
ಇಷ್ಟಲಿಂಗ ದ ಪೂಜೆಯ ನಿಷ್ಠೆಯಲ್ಲಿ ಮಾಡಿದರೆ
ಅಷ್ಟೈಶ್ವರ್ಯ ದೊರಕೊಂಬುದೇನಯ್ಯ?
ಪ್ರಾಣಲಿಂಗದ ನೆಲೆಯನರಿತು ಪೂಜೆಯಂ ಮಾಡಲು
ಸಕಲ ಭವಬಂಧನಗಳು ಬಿಟ್ಟು ಚತುರ್ವಿಧ ಫಲಂಗಳು
ಆ ಶರಣನ ಬಟ್ಟೆಯ ಸೋಂಕಲೊಲ್ಲವು.
ಇದು ಕಾರಣ ಅಂಗಸಂಗವಾಗಿರ್ದ ಪ್ರಾಣ ಬಿಟ್ಟುಹೋಗುವಾಗ
ಅಂಗವೊಂದೆಸೆಯಾಗಿ ಪ್ರಾಣವೊಂದೆಸೆಯಾಗಿ ಬಿದ್ದು
ಹೋಗುವುದ ಕಂಡು ನಾಚಿತ್ತು ಎನ್ನ ಮನವು.
ಇದು ಕಾರಣ ಪ್ರಾಣಲಿಂಗದ ಸಂಬಂಧದ ಭೇದವ
ನಮ್ಮ ಪೂವಾಚಾರ್ಯ ಸಂಗನಬಸವಣ್ಣನ ಸಂತತಿಗಳಿಗಲ್ಲದೆ
ಉಳಿದಂಥ ತಾಮಸದೇಹಿಗಳಿಗೆ ಅರಿಯಬಾರದಯ್ಯ
ಗೊಹೇಶ್ವರಪ್ರಿಯ ನಿರಾಳಲಿಂಗಾ.
ಕಾಲ- ಸು ೧೬೦೦ 'ಗುಹೇಶ್ವರ ಪ್ರಿಯ ನಿರಾಳಲಿಂಗ' ಅಂಕಿತದಲ್ಲಿ ೪೩ ವಚನಗಳು ದೊರೆತಿವೆ. ಷಟ್ ಸ್ಥಲ ತತ್ವ ನಿರೂಪಣೆ ವ್ರತಾಚಾರಹೀನರ ಟೀಕೆ ಇವುಗಳ ಮುಖ್ಯ ಗುರಿಯಾಗಿದೆ. ಮಕರ ತರ್ಕ ಪ್ರಸ್ತಾವದ ವಚನ, ಜೋಗಿಯ ತರ್ಕದ ಪ್ರಸ್ತಾವದ ವಚನ, ಕವಿಗಳ ತರ್ಕದ ಪ್ರಸ್ತಾವದ ವಚನ - ಎಂದು ಮೊದಲಾದ ಸ್ಥಲಗಳ ಅಡಿಯಲ್ಲಿ ಅವುಗಳನ್ನು ಜೋಡಿಸಲಾಗಿದೆ.
೭೭೪
ಮನಹೀನ ಬಂಟನ ಕೈಯಲ್ಲಿ ಬತ್ತೀಸಾಯುಧವಿದ್ದರೇನಯ್ಯ?
ಜಾರಸ್ತ್ರೀ ಸರ್ವಾಭರಣವನಿಟ್ಟಿದ್ದರೇನಯ್ಯ?
ಕುರುಡನ ಕೈಯಲ್ಲಿ ದರ್ಪಣವಿದ್ದರೇನಯ್ಯ?
ಧರ್ಮವನರಿಯದವನ ಕೈಯಲ್ಲಿ ಹಣವಿದ್ದರೇನಯ್ಯ?
ಜ್ಞಾನಹೀನ ರೂಪಧರಿಸಿದ್ದರೇನಯ್ಯ?
ಪ್ರಾಣಲಿಂಗವನರಿಯದ ನರಗುರಿಗಳು ಅಂಗದ ಮೇಲೆ
ಲಿಂಗವ ಕಟ್ಟಿದ್ದರೇನಯ್ಯ?
ಇಂತೀ ಷಡ್ವಿಧ ಭೇದವನರಿಯದ ಭವಿಗಳು
ನಿಮ್ಮ ಹೊಲಬನವರೆತ್ತಬಲ್ಲರಯ್ಯ?
ಇಟ್ಟು ಪೂಜೆಯ ಮಾಡುವ ಆ ದ್ರೋಹಿಗಳಿಗೆ
ನಾನೇನೆಂಬೆನಯ್ಯ ಗೊಹೇಶ್ವರಪ್ರಿಯ ನಿರಾಳಲಿಂಗಾ.
*