Previous ಮಳುಬಾವಿಯ ಸೋಮಣ್ಣ ಮಾರೇಶ್ವರೊಡೆಯ Next

ಮಾದಾರ ಧೂಳಯ್ಯ

*
ಅಂಕಿತ: ಕಾಮಧೂಮ ಧೂಳೇಶ್ವರ
ಕಾಯಕ: ಚರ್ಮದ ಕಾಯಕ

ಎನ್ನ ತನುವ ನಿರ್ಮಲ ಮಾಡಿದನಯ್ಯಾ,
ಬಸವಣ್ಣನು.
ಎನ್ನ ಮನವ ನಿರ್ಮಲ ಮಾಡಿದನಯ್ಯಾ,
ಚೆನ್ನಬಸವಣ್ಣನು.
ಎನ್ನ ಪ್ರಾಣವ ನಿರ್ಮಲ ಮಾಡಿದನಯ್ಯಾ,
ಪ್ರಭುದೇವರು.
ಇಂತೆನ್ನ ತನುಮನಪ್ರಾಣವ ನಿರ್ಮಲ ಮಾಡಿ,
ತಮ್ಮೊಳಿಂಬಿಟ್ಟುಕೊಂಡ ಕಾರಣ,
ಕಾಮಧೂಮ ಧೂಳೇಶ್ವರಾ ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು. /೧೧೯೬ [1]

ಪಾದರಕ್ಷೆ ಸಿದ್ಧಪಡಿಸುವ ಕಾಯಕವನ್ನು ಕ್ಯಕೊಂಡಿದ್ದ ಈತನ ತಂದೆ- ಕಕ್ಕಯ್ಯ, ತಾಯಿ-ನುಲಿದೇವಿ, ಹೆಂಡತಿ-ದಾರುಕಿ, ಕಾಲ-೧೧೬೦. ಬ್ರಾಹ್ಮಣನೊಬ್ಬನ ಕುಷ್ಠರೋಗವನ್ನು ನಿವಾರಿಸಿದನೆಂಬ ಸಂಗತಿ ಈತನ ಚರಿತ್ರೆಯಿಂದ ತಿಳಿದುಬರುತ್ತದೆ. ಕಾಯಕದಲ್ಲಿಯೇ ಶಿವನನ್ನು ಸಾಕ್ಷಾತ್ಕರಿಸಿಕೊಂಡ ನಿಷ್ಠಾವಂತ ಭಕ್ತನೀತ. 'ಕಾಮಧೂಮ ಧೂಳೇಶ್ವರ' ಅಂಕಿತದಲ್ಲಿ ೧೦೬ ವಚನಗಳನ್ನು ರಚಿಸಿದ್ದಾನೆ. ಕಾಯಕದ ಮಹತ್ವ, ಜ್ಞಾನ-ಮೋಕ್ಷಗಳ ಸ್ವರೂಪ, ಭಕ್ತಿಯ ಶ್ರೇಷ್ಠತೆಯನ್ನು ಅವು ತಿಳಿಸುತ್ತವೆ. ವೃತ್ತಿ ಪರಿಭಾಷೆ, ಬೆಡಗಿನ ಭಾಷೆ, ಅಲಂಕಾರಿಕ ಶೈಲಿ ಇವುಗಳ ವಿಶೇಷತೆ ಎನಿಸಿದೆ.

ಧೀರೆಯಾದ ಮಾಸ್ತಿಗೆ ವೀರತ್ವವಲ್ಲದೆ,
ಧಾರುಣಿಯ ಜನರೆಲ್ಲರೂ ಹೇಡಿ ಮಾಸ್ತಿ ಎಂದ ಬಳಿಕ,
ವೀರತ್ವ ಎಲ್ಲಿಯದೋ ?
ಧೀರೆಯಾದ ಮಾಸ್ತಿಯ ವೀರರಾಗಿದ್ದವರು
ಮುಡಿಯಲರ, ಹಿಡಿದ ನಿಂಬೆಯ ಹಣ್ಣ ಬೇಡಿದಂತೆ ಕೊಡುವಳು.
ದೃಢವುಳ್ಳ ವೀರರು ತರುವರು, ದೃಷ್ಟವ ನೋಡಿರಣ್ಣಾ.
ಕೊಡುವಾಕೆ ದಹನವಾದಳು, ಕೊಂಬಾತ ರೂಪಾದ.
ಈತ ಬೇಡಿದ ಇಷ್ಟವ ಕೊಟ್ಟಾ ತನು
ಯಾತವೋ, ಆತ್ಮನೋ ? ಬಲ್ಲಡೆ ನೀವು ಹೇಳಿರಣ್ಣಾ.
ನಿಮ್ಮ ಜ್ಞಾನದ ಮುಸುಕ ತೆರೆದು.
ನಿಮ್ಮ ಬಲ್ಲಂತಿಕೆಯ ಕಾಣಬಹುದು.
ಕಾಮಧೂಮ ಧೂಳೇಶ್ವರಲಿಂಗವನರಿವುದಕ್ಕೆ
ಇದೇ ದೃಷ್ಟ. /೧೨೨೨ [1]

ಈತ ಸಂಸ್ಕ್ರತವನ್ನು ಆಧಾರವಾಗಿ ಕೊಟ್ಟು ತನ್ನ ಚಿಂತನೆಗಳನ್ನು ವಿವರಿಸಬಲ್ಲ ವಿದ್ವಾಂಸ-ವಾಸ್ತವವಾದಿ. ಕಾಯಕದಲ್ಲಿ ನಿರತನಾದ ತನಗೆ ಕೈಲಾಸದ ಅಗತ್ಯವಿಲ್ಲವೆನ್ನುವ ಧ್ಯೇಯವಾದಿ ಈತ. ಅರಿವು-ಮರವೆಯ ಬಗೆಗಿನ ಇವನ ಆಲೋಚನೆಗಳು ಚಿಂತನಾರ್ಹವಾಗಿವೆ. ಎನ್ನ ತನುವ ಮನವ, ಪ್ರಾಣವ ನಿರ್ಮಲ ಮಾಡಿದವರು ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವರು ಎನ್ನುವಲ್ಲಿ ಅವರ ಬಗೆಗಿನ ಗೌರವ ತನಗೆ ತಾನೇ ಪ್ರಕಟಗೊಳ್ಳುತ್ತದೆ. ತನ್ನ ಕಾಯಕವನ್ನು ಹೇಳುತ್ತಲೇ ಅದನ್ನು ಬೇರೊಂದು ಅರ್ಥವಲಯಕ್ಕೆ ತೆಕ್ಕೆ ಹಾಕುವ ಗುಣವಿಶೇಷ ಇವನಲ್ಲಿ ಕಂಡುಬರುತ್ತದೆ

ಬಸವಣ್ಣನ ಡಿಂಗರಿಗನಯ್ಯಾ,
ಚೆನ್ನಬಸವಣ್ಣನ ಹಳೆಯನಯ್ಯಾ,
ಪ್ರಭುದೇವರ ಬಂಟನಯ್ಯಾ,
ಮಡಿವಾಳಯ್ಯನ ಲೆಂಕನಯ್ಯಾ,
ಸಿದ್ಧರಾಮಯ್ಯನ ಭೃತ್ಯನಯ್ಯಾ.
ಇಂತೀ ಐವರ ಒಕ್ಕು ಮಿಕ್ಕ ಶೇಷಪ್ರಸಾದವನುಂಡು,
ಬದುಕಿದೆನಯ್ಯಾ.
ಕಾಮಧೂಮ ಧೂಳೇಶ್ವರಾ.
ನಿಮ್ಮ ಶರಣರೆನ್ನ ಪಾವನವ ಮಾಡಿದ ಪರಿಣಾಮವ,
ಅಂತಿಂತೆನಲಮ್ಮದೆ ನಮೋ ನಮೋ ಎನುತಿರ್ದೆನು. /೧೨೪೨ [1]

೧೨೫೮
ವೇದಕ್ಕೆ ಉತ್ತರದವನಲ್ಲ, ಶಾಸ್ತ್ರಕ್ಕೆ ಸಂತೆಯವನಲ್ಲ.
ಪುಣ್ಯಕ್ಕೆ ಪುಣ್ಯವಂತನಲ್ಲ, ವಚನದ ರಚನೆಗೆ ನಿಲ್ಲ.
ವಾಙ್ಮನ ಅಗೋಚರಕ್ಕೆ ಸಲ್ಲ, ಪ್ರಮಾಣು ಅಪ್ರಮಾಣುವೆಂಬುದಕ್ಕೆ ನಿಲ್ಲ.
ಇಂತೀ ಭೇದ ಅಭೇದ್ಯಂಗಳಲ್ಲಿ ವೇದ್ಯವಿಲ್ಲ,
ಕಾಮಧೂಮ ಧೂಳೇಶ್ವರನು.

ಸತ್ಯಶುದ್ಧಕಾಯಕವ ಮಾಡಿ ತಂದು,
ವಂಚನೆಯಿಲ್ಲದೆ ಪ್ರಪಂಚಳಿದು,
ನಿಚ್ಚಜಂಗಮಕ್ಕೆ ದಾಸೋಹವ ಮಾಡುವ
ಸದ್ಭಕ್ತನ ಹೃದಯದೊಳಗೆ ಅಚ್ಚೊತ್ತಿದಂತಿಪ್ಪ,
ಕಾಮಧೂಮ ಧೂಳೇಶ್ವರ. /೧೨೬೬ [1]

[1] ಈ ತರಹದ ಸಂಖ್ಯೆಯ ವಿವರ: ಸವಸ-5/80 :- ಸಮಗ್ರ ವಚನ ಸಂಪುಟ -5, ವಚನ ಸಂಖ್ಯೆ-80 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previous ಮಳುಬಾವಿಯ ಸೋಮಣ್ಣ ಮಾರೇಶ್ವರೊಡೆಯ Next
cheap jordans|wholesale air max|wholesale jordans|wholesale jewelry|wholesale jerseys