*
ಅಂಕಿತ:
|
ನಿಸ್ಸಂಗ ನಿರಾಳ ನಿಜಲಿಂಗ ಪ್ರಭುವೆ
|
೧೨೪೪
ಪಂಚಾಂಗ ಪಂಚಾಂಗವೆಂದು ಕಳವಳಗೊಂಡು
ಜೋಯಿಸನ ಕರೆಯಿಸಿ,
ಕೈಮುಗಿದು ಕಾಣಿಕೆಯನಿಕ್ಕಿ ಎಲೆ ಅಡಿಕೆಯಂ ಕೊಟ್ಟು,
ಜೋಯಿಸನ ವಾಕ್ಯವು ಸಕಲ ಕಾರ್ಯಕ್ಕೆ ಸಿದ್ಧಿಯೆಂದು,
ಅವನ ಬಾಯ ತೊಂಬುಲವ ತಿಂಬ ಹಂದಿಗಳಿರಾ
ಎತ್ತ ಬಲ್ಲಿರಯ್ಯಾ ಶಿವಾಚಾರದ ಪದ್ಧತಿಯನು ?
ಪಂಚಾಂಗವೆಂಬ ಶಬ್ದಕ್ಕೆ ಅರ್ಥವ ಹೇಳಲರಿಯದೆ
ಜೋಯಿಸರು ಕೆಟ್ಟರು ;
ಕೇಳಲರಿಯದೆ ಅನಂತ ಹಿರಿಯರು ನರಕಕ್ಕೆ ಇಳಿದರು.
ಪಂಚಾಂಗವೆಂದರೆ ಹೇಳಿಹೆ ಕೇಳಿರಣ್ಣಾ.
ಪಂಚ ಅಂದರೆ ಐದು ; ಅಂಗವೆಂದರೆ ದೇಹ,
ಪೃಥ್ವಿ ಅಪ್ಪು ತೇಜ ವಾಯು ಆಕಾಶ-
ಈ ಐದು ಕೂಡಿ ದೇಹವಾಯಿತ್ತು.
ಆ ದೇಹದೊಳಗೆ ಕಾಮ ಕ್ರೋಧ ಲೋಭ
ಮೋಹ ಮದ ಮತ್ಸರದಚ್ಚು ಮುರಿಯುವುದೇ ಪಂಚಾಂಗ.
ಸತ್ವ ರಜ ತಮವೆಂಬ ಅಹಂಕಾರವ ತುಳಿವುದೆ ಪಂಚಾಂಗ.
ಆಣವಮಲ ಮಾಯಾಮಲ ಕಾರ್ಮಿಕಮಲವ
ಮುಟ್ಟದಿರುವುದೇ ಪಂಚಾಂಗ.
ತನ್ನ ಸತಿಯ ಸಂಗವಲ್ಲದೆ
ಪರಸತಿಯರ ಮುಟ್ಟದಿರುವುದೇ ಪಂಚಾಂಗ.
ತನ್ನ ಇಷ್ಟಲಿಂಗ ವಲ್ಲದೆ ಭೂಮಿಯ ಮೇಲೆ ಇಟ್ಟು
ಪೂಜೆಯ ಮಾಡುವ ದೇವರಿಗೆ ಕೈಮುಗಿಯದಿರುವುದೆ ಪಂಚಾಂಗ.
ಜಾತಿಸೂತಕ ಜನನಸೂತಕ ಉಚ್ಫಿಷ್ಟಸೂತಕ
ಮೃತ್ಯುಸೂತಕ ರಜಸ್ಸೂತಕ - ಈ ಪಂಚಸೂತಕವ
ಶರಣರು ಕಳೆವರಾಗಿ, ನಮ್ಮ ಶಿವಭಕ್ತರಿಗೆ ಸಲ್ಲದೆಂಬುದೆ ಪಂಚಾಂಗ.
ಸೂತಕ ನಾಸ್ತಿಯಾದುದೆ ಪಂಚಾಂಗ.
ಗುರು ಲಿಂಗ ಜಂಗಮ ಪಾದೋದಕ ಪ್ರಸಾದವೆ ಪಂಚಾಂಗ.
ಲಿಂಗಾಚಾರ ಸರ್ವಾಚಾರ ಭೃತ್ಯಾಚಾರ
ಶಿವಾಚಾರ ಗಣಾಚಾರವೆ ಪಂಚಾಂಗ.
ಗುರುಪ್ರಸಾದ, ಲಿಂಗಪ್ರಸಾದ, ಜಂಗಮಪ್ರಸಾದ,
ಗಣಪ್ರಸಾದ, ಮಹಾಪ್ರಸಾದವ ಕೊಂಬುವುದೆ ಪಂಚಾಂಗ.
ಇಂತೀ ಪಂಚಾಂಗದ ನಿಲವನರಿಯದೆ
ಪಂಚಸೂತಕದೊಳಗೆ ಹೊಡೆದಾಡುವ ಪಂಚಮಹಾಪಾತಕರ
ಎನಗೊಮ್ಮೆ ತೋರದಿರಯ್ಯ
ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
'ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ' ಎಂಬ ಅಂಕಿತದಲ್ಲಿ ೧೪ ವಚನಗಳನ್ನು ಬಿಟ್ಟರೆ ಈತನ ಬಗೆಗೆ ಮತ್ತಾವ
ಸಂಗತಿಗಳೂ ದೊರೆಯುವುದಿಲ್ಲ. 'ಶಿವಭಕ್ತಿ ಪಂಚಾಂಗ ವಚನ' ಎಂದು ಕರೆಯಲಾದ ಈ ವಚನಗಳಲ್ಲಿ ಶಿವಾಚಾರ ಪಥವನರಿಯದೆ
ಪಂಚಾಂಗ ಕೇಳುವವರನ್ನು ಇತರ ಕಂದಾಚಾರಗಳನ್ನು ಕಟುವಾಗಿ ಟೀಕಿಸಲಾಗಿದೆ.
೧೨೪೫
ಪಂಚಾಂಗವೆಂಬ ಶಬ್ದಕ್ಕೆ ಅರ್ಥ :
ಪಂಚವೆಂದರೆ ಐದು ; ಅಂಗವೆಂದರೆ ದೇಹ.
ಈ ಉಭಯ ಕೂಡಿದರೆ ದೇಹವಾಯಿತ್ತು.
ಈ ದೇಹವೆ ಪಂಚಾಂಗವೆನಿಸಿತ್ತು.
ಅದು ಹೇಗೆಂದಡೆ :
ನಕಾರ ಮಕಾರ ಶಿಕಾರ ವಕಾರ ಯಕಾರದ
ನಿಕ್ಷೇಪವನರಿವುದೇ ಪಂಚಾಂಗ.
ಕ್ರಿಯಾ ಜ್ಞಾನ ಇಚ್ಫಾ ಆದಿ ಪರಾ ಚಿಚ್ಫಕ್ತಿಯ
ಎಚ್ಚರನರಿವುದೆ ಪಂಚಾಂಗ.
ಇಚ್ಫೆಯೊಳಗಿರುವುದೆ ಪಂಚಾಂಗವಯ್ಯ.
ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
ಇವನ ವಚನಗಳನ್ನು ಶಿವಭಕ್ತಿಪಂಚಾಂಗದ ವಚನಗಳೆಂದು ಕರೆಯಲಾಗಿದೆ. ಶಿವಭಕ್ತರಾದವರು ಶುಭಾಶುಭಗಳಿಗೆ ಪಂಚಾಂಗ
ಕೇಳುವುದನ್ನು ಕಟುವಾಗಿ ಟೀಕಿಸುವ ಇವನು "ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ ಈ ಐದು ಕೂಡಿ ದೇಹವಾಯಿತ್ತು.
ಆ ದೇಹದೊಳಗೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರದಚ್ಚು, ಮುರಿಯುವುದೆ ಪಂಚಾಂಗ" ಎನ್ನುವನು, ವೈದಿಕರೆ
ಹೇಳುವ ಪಂಚಾಂಗವನ್ನು ತಿರಸ್ಕರಿಸುವ ಇವನು ತನ್ನ ವಚನಗಳಲ್ಲಿ ಶಿವಭಕ್ತಿ ಪಂಚಾಂಗದ ಅರ್ಥವೇ ಬೇರೆಯಾಗಿರುವುದನ್ನು
ವಿವರಿಸುವನು.
೧೨೫೧
ಶ್ರೀಗುರುಸ್ವಾಮಿ ಕರುಣಿಸಿ ಕೊಟ್ಟ ಇಷ್ಟಲಿಂಗ ವ
ಕರ ಮನ ಭಾವದೊಳಗಿಟ್ಟು ಪೂಜೆಮಾಡಲರಿಯದೆ
ಭ್ರಷ್ಟ ವಿಪ್ರನ ಮಾತು ಕೇಳಿ ನಷ್ಟಕ್ಕೊಳಗಾಗುವ,
ಕಂಚು ತಾಮ್ರ ಮೊದಲಾದ ಅನಂತದೇವರ ಭಜನೆಯ ಮಾಡುವ
ಮಡ್ಡ ಜಡಮಾದಿಗರ ಎನಗೊಮ್ಮೆ ತೋರದಿರಯ್ಯ
ನಿಸ್ಸಿಂಗ ನಿರಾಳ ನಿಜಲಿಂಗಪ್ರಭುವೆ.
೧೨೪೮
ಶ್ರೀಗುರುಸ್ವಾಮಿ ಕರುಣಿಸಿ ಕೊಟ್ಟ
ಇಷ್ಟಲಿಂಗ ಪ್ರಸಾದವ ಚೆಲ್ಲದಿರುವುದೆ ಪಂಚಾಂಗ.
ತನ್ನ ಲಿಂಗವಲ್ಲದೆ ಭೂದೇವರ ಅಲ್ಲಗಳೆವುದೆ ಪಂಚಾಂಗ.
ಎಲ್ಲ ಕಾಲ ವೇಳೆಯಲ್ಲಿ ನಿಲ್ಲದೆ ನೆನೆವುದೆ
ಶುಭದಿನ ಶುಭಲಗ್ನ ಶುಭಮುಹೂರ್ತ
ಗುರುಬಲ ಚಂದ್ರಬಲ ಸೂರ್ಯಬಲವೆನಿಸುವುದಯ್ಯ
ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
*