Previous ನುಲಿಯ ಚಂದಯ್ಯ ಪುರದ ನಾಗಣ್ಣ Next

ಪರಂಜ್ಯೋತಿ

*
ಅಂಕಿತ: ವರನಾಗನ ಗುರು ವೀರನೆ ಪರಂಜ್ಯೋತಿಯ ಮಹಾವಿರಕ್ತಿ

೧೨೬೦
ಬಹಳ ಬಹಳ ಕಂಡೆನೆಂದು ನುಡಿವ,
ಬಿಸಿಲು ಮಧ್ಯಾಹ್ನದಲ್ಲಿ ಚಂದ್ರಬಿಂಬ ಉದಯವಾದ
ಪ್ರತ್ಯಕ್ಷವಾಯಿತ್ತೆಂದು ಹೊರಗೆ ಕಂಡು
ಒಳಗೆ ಕಂಡನಲ್ಲದೆ ಏನು ಅಪ್ಪುದು ಕಾಣಾ.
ಎರಡೂ ಒಂದೇ.
ಮುಂದೆ ಮೀರಿ ಮನಸಮಾಧಿ ಮಾಡಿದಡೆ
ಮುಕ್ತಿಯೆಂದು ಹೇಳುವರು.
ಮನ ಮುಳುಗಿದುದೆ ಲಿಂಗವೆಂದೆಂಬರು.
ಆ ಲಿಂಗ ಮುಳುಗುವುದು ಸಮಾಧಿ ಕಾಣಾ,
ತಾನಳಿದ ಮೇಲೆ ಮುಕ್ತಿ ಯಾರಿಗೆ ಹೇಳಾ ?
ಲಿಂಗಕ್ಕೆ ಅಳಿವು ಬೆಳವುಂಟೆ ಕಾಣಾ ?
ಚಿಂತಿಸಿ ಮುಳುಗಿದವರೆಲ್ಲ
ಕಡೆಯಿಲ್ಲ ಮೊದಲಿಲ್ಲ ನೋಡಾ.
ಇನ್ನು ಉಳಿದದ್ದು ಘನವು.
ಉಳಿಯೆ ಹೇಳಾ ನಿಜಕೆಲ್ಲ.
ಲಯವಿಲ್ಲ ಭಯವಿಲ್ಲದಾಡಿದ ವಿದೇಹ ತಾನಾದ
ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.

೧೭ನೇಯ ಶತಮಾನದ ಸುಮಾರಿನಲ್ಲಿ ಇದ್ದಿರಬಹುದಾದ ಈತನ ಬಗೆಗೆ ವಿವರಗಳಿಲ್ಲ. 'ಪರಂಜ್ಯೋತಿಯರ ವಚನಗಳು' ಎಂಬ ತಲೆ ಬರಹದಡಿಯಲ್ಲಿ ವಚನಗಳು ದೊರಕುವುದರಿಂದ 'ಪರಂಜ್ಯೋತಿ' ಎಂಬುದು ಈತನ ಹೆಸರಾಗಿರಬೇಕೆಂದು ಊಹಿಸಲಾಗಿದೆ. 'ವರ ನಾಗನ ಗುರು ವೀರನೆ ಪರಂಜ್ಯೋತಿ ಮಹಾವಿರಕ್ತಿ' ಎಂಬ ಅಂಕಿತದಲ್ಲಿ ೧೩ ವಚನಗಳು ದೊರೆತಿವೆ. ತನ್ನ ತಾನರಿಯದೆ, ತನ್ನೊಳಗಿನ ಪರಮಾತ್ಮನ ಸ್ವರೂಪವನ್ನು ಗುರುತಿಸದೆ ಇತರರನ್ನು ಹಾದಿ ತಪ್ಪಿಸುವ ವೇಷಡಂಭಕರನ್ನು ವಿಡಂಬಿಸುವುದು ಇವುಗಳ ಮುಖ್ಯ ಉದ್ದೇಶವಾಗಿದೆ.

೧೨೬೮
ಅಂಗದೊಳಗಿದ್ದ ಲಿಂಗವ ಕಾಣದೆ ಆಡುವ ಮಾನವನೆ
ನನ್ನ ತತ್ಸಂಗಲೀಯವಾಗಿರೆ ನಾನಾ ಲಕ್ಷಗಳಿಂದ
ನೀನು ಸುಖಿಸುವ ಸಕೀಲವರಿವನಲ್ಲಾ.
ನಮ್ಮ ಗುರುವೆ ಅರುವೆಂಬ ಮರ್ಯಾದೆ
ಆದಿಯಲ್ಲಿ ನಡೆದು ನಂಬಿದಕ್ಕೆ ಮುಂದೆ ನಾನು
ಬೇಡಿದ ಪದಾರ್ಥಂಗಳ ಕೊಟ್ಟರೆ
ನಿನ್ನಲ್ಲಿ ಇದ್ದದ್ದನ್ನೆಲ್ಲಾ ತೋರಿಕೊಡುವೆನೆಂದು ನುಡಿಯಲಾಗಿ,
ಶಿಷ್ಯ ನಂಬುಗೆಯಿಂದ ನಿನ್ನ ಆಜ್ಞೆಗೆ ನಿಲ್ಲುವೆನೆಂದು
ವಂದನೆಯ ಮಾಡಿ ವಂದಿಸಲು
ಮನನಿರೂಪದಿಂದ ಅಂತರಂಗದೊಳಗಿದ್ದ
ಮನಪ್ರಕಾಶವನು ತೋರಿ,
ಥಳಥಳ ಮಾಯಾರೂಪಗಳನು ತೋರಿ
ನಿಜವೆಂದು ಭಾವಿಸಿ ನಿರ್ಣಯಿಸಿಕೊಳ್ಳೆಂದು
ಶಿಷ್ಯನ ಸತಿಯಂ ಕಂಡು ಕಾಮುಕನಾಗಿ
ಗುರುಸೇವೆಯ ಮಾಡಿದರೆ ಮುಕ್ತರಾದೆವೆಂದು ನುಡಿದು
ಮೆಚ್ಚಿಸಿಕೊಂಡು ಉಚ್ಚನರಕದೊಳು
ಮುಳುಗುವ ಹುಚ್ಚರಿಗೆ ಬೆಚ್ಚುವುದೆ ಮಹಾನುಭಾವ ?
ಅನ್ಯಭಾವದಿ ಬಳಸುವ ಅನಾಚಾರಿಗೆ
ತನ್ನ ಭಾವ ದೊರಕುವುದೋ? ದೊರಕದಯ್ಯಾ.
ಚಿತ್ತೇ ತಾನಾದ
ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.

ಅನುಭಾವವನ್ನು ನಿರೂಪಿಸುವ ಪ್ರಯತ್ನ ಪರಂಜ್ಯೋತಿಯ ವಚನಗಳಲ್ಲಿ ಕಂಡುಬರುತ್ತದೆ. ತರ್ಕಬದ್ಧವಾದ ಅವನ ವಾದವು ವಿಚಾರದ ಸ್ಫುರಣಿಯನ್ನುಂಟುಮಾಡುತ್ತದೆ. ಉದಾಹರಣೆಗೆ "ಕಾಯವಿಡಿದು ಮಾಯೆ ಬಿಡಬೇಕೆಂಬ ಹೆಡ್ಡರಿಗೆ ಮಾಯೆ ಬಿಡುವುದು ಹೇಗಯ್ಯ? ದೇಹವಿಡಿದುನೋಡಿ ಕಂಡು ಆ ಅಮೃತ ಉಂಡೆನೆಂದು ನುಡಿವರು. ಆ ಅಮೃತ ಉಂಡ ಬಳಿಕ ಹಸಿವುಂಟೆ ಹೇಳಾ. ಪ್ರಳಯ ವಿದ್ಯೆ ವಾತ ಪಿತ್ಥ ಶ್ಲೇಷ್ಮಂಗಳ ಕುಡಿದು ಆ ಅಮೃತವ ಉಂಡೆಂದು ನುಡಿವವರಿಗೆ ಎಂದೆಂದಿಗೂ ದೊರಕದು ಕಾಣಾ, ಇಂಥಾ ಭ್ರಾಂತ ಭ್ರಮಿತರು ಕೆಟ್ಟ ಕೇಡಿಂಗೆ ಕಡೆಯಿಲ್ಲ ಮೊದಲಿಲ್ಲ. ಬಿತ್ತೇ ತಾನಾದ ಮಹಾತ್ಮಗೆ ಲಯವಿಲ್ಲ, ಭಯವಿಲ್ಲ, ಅನುವಿಲ್ಲ, ದೇಹದಿನೋಡುವ ಕಪಿಚೇಷ್ಟೆಗಳಿಗೆ ಎಂದೆಂದಿಗೂ ಇಲ್ಲ" ಎನ್ನುವ ಪರಂಜ್ಯೋತಿಯ ವಚನವನ್ನು ಗಮನಿಸಬೇಕು. ಭ್ರಾಂತಿನ ಯೋಗಿಗಳ ವಿಚಾರಲಹರಿಯನ್ನು ಇವನು ತೀವ್ರವಾಗಿ ವಿಡಂಬಿಸಿರುವದನ್ನೇ ನೋಡಬಹುದು. ಇಲ್ಲೆಲ್ಲ ಇವನ ವಿಚಾರದ ಪ್ರಭೆ ಸತ್ಯದ ಕಡೆ ಮುಖಮಾಡುತ್ತದೆ.

೧೨೬೩
ಕಾಯವಿಡಿದು ಮಾಯೆ ಬಿಡಬೇಕೆಂಬ ಹೆಡ್ಡರಿಗೆ
ಮಾಯೆ ಬಿಡುವುದು ಹೇಂಗಯ್ಯ ?
ದೇಹವಿಡಿದು ನೋಡಿ ಕಂಡು ಆ ಅಮೃತ ಉಂಡೆನೆಂದು ನುಡಿವರು.
ಆ ಅಮೃತ ಉಂಡ ಬಳಿಕ ಹಸಿವುಂಟೆ ಹೇಳಾ.
ಪ್ರಳಯವಿದ್ಯೆ ವಾತ ಪಿತ್ಥ ಶ್ಲೇಷ್ಮಂಗಳ ಕುಡಿದು
ಆ ಅಮೃತವ ಉಂಡೆನೆಂದು ನುಡಿವವರಿಗೆ
ಎಂದೆಂದಿಗೂ ದೊರಕದು ಕಾಣಾ.
ಇಂಥ ಭ್ರಾಂತಭ್ರಮಿತರು ಕೆಟ್ಟ ಕೇಡಿಂಗೆ ಕಡೆಯಿಲ್ಲ ಮೊದಲಿಲ್ಲ.
ಚಿತ್ತೇ ತಾನಾದ ಮಹಾತ್ಮಂಗೆ ಲಯವಿಲ್ಲ ಭಯವಿಲ್ಲ ಅನುವಿಲ್ಲ.
ದೇಹದಿ ನೋಡುವ ಕಪಿಚೇಷ್ಟೆಗಳಿಗೆ ಎಂದೆಂದಿಗೂ ಇಲ್ಲ.
ಮಹತೋತ್ತಮನಾದ ವರನಾಗನ
ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.


*
Previous ನುಲಿಯ ಚಂದಯ್ಯ ಪುರದ ನಾಗಣ್ಣ Next
cheap jordans|wholesale air max|wholesale jordans|wholesale jewelry|wholesale jerseys