Previous ಹರಳಯ್ಯ ಮತ್ತು ಕಲ್ಯಾಣಮ್ಮ ವೇಮನ ಮಹಾಕವಿ Next

ಶರಣ ನನ್ನಯ್ಯ

*

ದರೋಡೆಕೋರ ಮಾತಂಗ; ಶರಣ ನನ್ನಯ್ಯನವರಾದದ್ದು

ಬಸವಣ್ಣನವರ ಪ್ರಭಾವದಿಂದ ಕಲ್ಯಾಣಕ್ಕೆ ಬಂದು ಇಷ್ಟಲಿಂಗವ ಧರಿಸಿಕೊಂಡು ಸಾವಿರಾರು ಜನರು ಲಿಂಗವಂತರಾದರು. ತಮ್ಮ ಮೂಲ ಜಾತಿ, ಕುಲಗಳನ್ನು ಕಿತ್ತೊಗೆದು ಸರ್ವರೂ ಸಮಾನ(ಲಿಂಗಾಯತ)ರಾದರು. ಜಗತ್ತಿನಲ್ಲಿಯೇ ಯಾರೂ ಕಂಡು ಹಿಡಿಯದ, ವಿಜ್ಞಾನವೇ ಆಗಿರುವ ಇಷ್ಟಲಿಂಗವನ್ನು ವೈಜ್ಞಾನಿಕವಾಗಿ ಸಂಶೋಧನೆಯ ಮಾಡಿ ಬಸವಣ್ಣನ ಉದರದಲ್ಲಿ ಹುಟ್ಟಿತ್ತು ಲಿಂಗ ಎನ್ನುವ ಚೆನ್ನಬಸವಣ್ಣನವರ ನುಡಿಯಿಂದ ಜಗಜ್ಯೋತಿ ಬಸವಣ್ಣನವರೇ ಇಷ್ಟಲಿಂಗವ ಕಂಡು ಹಿಡಿದವರೆಂದು ಸ್ಪಷ್ಟವಾಗುತ್ತದೆ. ಬಸವಣ್ಣನವರು ನೀಡಿರುವ ಇಷ್ಟಲಿಂಗವು ಕಲ್ಲಿನಂತೆ ಬಿರುಸಾದ ಕಂಥೆಯನ್ನು ಹೊಂದಿದ್ದರೂ ಅದು ಕಲ್ಲಲ್ಲವೆಂದು ನಮಗೆಲ್ಲ ಗೊತ್ತು ಆದರೆ ನೆನಪಿಸುತ್ತಿರುವೆನಷ್ಟೆ. ತ್ರಾಟಕಯೋಗ ಸಾಧನೆಗೆ ಅನುಕೂಲವಾಗುವಂತೆ ಆವರಣವನ್ನು ಹೊಳಪುಳ್ಳ ಹಾಗೆ ತಯಾರಿಸಿದ್ದಾರೆ. ನಮ್ಮಲ್ಲಿ ಹಲವರು ಇಷ್ಟಲಿಂಗವೊಂದು ಕಲ್ಲೆಂದು ಭಾವಿಸಿರುವುದು ಅಜ್ಞಾನವೆನ್ನಬಹುದು. ಏಕೆಂದರೆ ಇಷ್ಟಲಿಂಗವನ್ನು; ಅರಗು, ರಾಳ, ಇಂಗಳೀಕ, ಶಿಲಾರಸ, ರುಮಾಮಸ್ತಕಿ, ಅಂಜನ(ಆಕ್ಸೈಡ್)ಗಳು, ತುಪ್ಪದ ಕಾಡಿಗೆ, ಗೇರು ಎಣ್ಣೆ ಇವುಗಳನ್ನು ಸೇರಿಸಿ ತಯಾರಿಸಲಾಗಿದೆ.

ಇಷ್ಟಲಿಂಗವ ಧರಿಸಿ ಪೂಜಿಸಿ(ಕೊಂಡರೆ)ದರೆ ಏನು ಪ್ರಯೋಜನವೆಂದು ಕೇಳಿದರೆ ಹೇಳಲಾಗದು, ಕಾರಣ ಜೇನುತುಪ್ಪದ ರುಚಿಯನ್ನು ನೋಡಿದರೆ ತಿಳಿಯದು, ಸವಿದರೆ ತಿಳಿಯುವುದು. ಹಾಗೂ ಇಷ್ಟಲಿಂಗವ ಧರಿಸಿದರೆ ನಮಗಾಗುವ ಅನುಭವವೇ ಬೇರೆ. ಅದರಲ್ಲಿ ವೈಜ್ಞಾನಿಕವಾದ ವಸ್ತುಗಳಿರುವುದರಿಂದ ಅವೆಲ್ಲವೂ ನಮ್ಮ ದೇಹಕ್ಕೂ ತುಂಬಾ ಅವಶ್ಯ(ಉಪಯುಕ್ತ)ವೆಂದು ಹೇಳಬಹುದು. ಇಷ್ಟಲಿಂಗ ಧರಿಸಿಕೊಂಡು, ಪೂಜಿಸಿಕೊಳ್ಳುತ್ತ ಹೋದಂತೆಲ್ಲ ನಮ್ಮಲ್ಲಿ ಶಾಂತಿ, ಸಮಾಧಾನ, ಸ್ಮರಣ ಶಕ್ತಿ ವೃದ್ಧಿಯಾಗುತ್ತದೆ. ಅಕ್ಷರಜ್ಞಾನವು ಹೆಚ್ಚಾಗುತ್ತದೆ. ಮನಸ್ಸು ಚಂಚಲಗೊಳ್ಳದಂತೆ ಅಂಕೆಯಲ್ಲಿಟ್ಟುಕೊಳ್ಳಲು ತುಂಬಾ ಸಹಕಾರಿಯಾಗುತ್ತದೆ. ಅರಿವಿನ ಕುರುಹಾದಿಷ್ಟಲಿಂಗವು ಸರ್ವ ಸಮಾನತೆಯ ಸಂಕೇತವಾಗಿ, ಇದನ್ನು ಧರಿಸಲು ಯಾವುದೇ ಜಾತಿ, ಕುಲದ ನಿರ್ಭಂದವಿಲ್ಲ. ಹೆಣ್ಣು-ಗಂಡೆಂಬ ಭೇದವಿಲ್ಲ, ಬಡವ-ಬಲ್ಲಿದನೆಂಬ ತಾರತಮ್ಯವಿಲ್ಲ, ಮತ್ತು ದೇವರನ್ನು ಹೊರಗೆ ಸ್ಥಾವರ ದೇವಾಲಯಗಳಲ್ಲಿ ಹುಡುಕಬೇಕಾಗಿಲ್ಲ. ದೇಹವನ್ನೇ ದೇವಾಲಯವನ್ನಾಗಿ ಮಾಡಿಕೊಳ್ಳಬಹುದು ಇದಕ್ಕೆ ಸಾಕ್ಷಿ ಬಸವಾದಿ ಪ್ರಮಥರು ಸಾಧಿಸಿ ತೋರಿಸಿದ್ದಾರೆ.

ಗುರು ಬಸವಣ್ಣನವರು ಕರುಣಿಸಿದವ ಇಂಥಹ ಘನವಾದ ವಸ್ತುವಿನ ಬಗ್ಗೆ ಹೆಚ್ಚು ಹೇಳಲಾಗದು, ಕಾರಣ; ಅಂಥಹ ದಿವ್ಯವಾದ ಮಾಣಿಕ್ಯವದು. ಇಷ್ಟಲಿಂಗವು ನಮ್ಮ ಅಂಗಕ್ಕೆ ಸೋಂಕಿದೊಡನೆ ರೋಮಾಂಚನವಾಗದೆ ಇರದು. ನಾವು ಪಾಪಿಗಳಾಗಿದ್ದರೆ ಪಾವನಗೊಳಿಸುತ್ತದೆ. ಧ್ವೇಷ ನಮ್ಮಲ್ಲಿದ್ದರೆ ಕೂಡಲಸಂಗಮದೇವನ ಕರುಣೆಯಿಂದ ನಮ್ಮ ಹೃದಯದಲ್ಲಿ ಪ್ರೇಮವು ಮೂಡುವುದು. ಇಂಥಹ ಇಷ್ಟಲಿಂಗವನ್ನು ಧರಿಸಿ ದರೋಡೆ ಮಾಡುತ್ತಿದ್ದ ಮಾತಂಗನೆಂಬ ಬೇಡ ಶರಣರಾದ ಪರಿಯನ್ನು ನೋಡೋಣ:

”ಒಂದು ಕಾಡಿನಲ್ಲಿ ಮಾತಂಗ ಎನ್ನುವ ದರೋಡೆಕೋರ, ಈತನು ತುಂಬಾ ಒರಟನಾಗಿದ್ದ. ಮನೆಯಲ್ಲಿ ಈತನ ಹೆಂಡತಿಯು ಹಾಗೋ ಹೀಗೋ ಜೀವನ ಸಾಗಿಸುತ್ತಿರುತ್ತಾಳೆ. ಈತ ದರೋಡೆ ಮಾಡುವುದನ್ನೇ ತನ್ನ ದಿನನಿತ್ಯದ ವೃತ್ತಿಯನ್ನಾಗಿ ಮಾಡಿಕೊಂಡಿರುತ್ತಾನೆ. ಹೀಗಿರುವಾಗ ಒಂದು ದಿನ ಓರಿಸ್ಸಾ ದೇಶದವರಾದ ಸುಜ್ಞಾನಿದೇವ ಎಂಬವರು ಕಾಡಿನ ಮುಖಾಂತರ ತಮ್ಮ ಶಿಷ್ಯರೊಂದಿಗೆ ಕಲ್ಯಾಣದೆಡೆಗೆ ಹೊರಟಿರುವಾಗ ಕಾಡಿನ ಮಧ್ಯದಲ್ಲಿ ದರೋಡೆಕೋರ ಮಾತಂಗನನ್ನು ಕಂಡು ಧೈರ್ಯದಿಂದ ನಿಂತಾಗ; ಮಾತಂಗ ಸುಜ್ಞಾನಿದೇವ'ರನ್ನು ಕುರಿತು ಯಾರು ನೀನು? ಎಲ್ಲಿಗೆ ಹೊರಟಿರುವೆ? ಎಂದು ಕೇಳಲು, ಅವರು ಕಲ್ಯಾಣಕ್ಕೆ ಎನ್ನುತ್ತಾರೆ. ಮತ್ತೆ ಆ ಜೋಳಿಗೆಯಲ್ಲಿರುವುದೇನು? ಎನ್ನಲು, ಇಷ್ಟಲಿಂಗಗಳೆನ್ನುವರು. ಹಾಗಾದರೆ ನನಗೆ ಕೊಡು ಆ ಲಿಂಗವನ್ನು ಎಂದಾಗ; ಮೊದಲು ನಿನ್ನ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬಾ ಅನಂತರ ಲಿಂಗ ಕೊಡುವೆ ಎನ್ನುವರು. ಮಾತಂಗ ಮನೆಗೆ ಹೋಗಿ ಹೆಂಡತಿಯನ್ನು ಹುಡುಕಾಡಲು ಆಕೆ ಸಿಗದಿದ್ದನ್ನು ಕಂಡು, ಕೊನೆಗೆ ಮುತ್ತಗನೆಂಬ ಇನ್ನೊಬ್ಬ ಬೇಡನ ಜೊತೆಗೆ ತನ್ನ ಹೆಂಡತಿ ಓಡಿ ಹೋಗಿದ್ದಾಳೆಂದು ಕನ್ನಗ ಎನ್ನುವ ಗೆಳೆಯ ಬಂದು ಹೇಳುತ್ತಾನೆ. ಈ ವಿಷಯ ತಿಳಿದು ಸುಜ್ಞಾನಿದೇವರ ಹತ್ತಿರಕ್ಕೆ ಬಂದು ಅವರಿಬ್ಬನ್ನೂ ಕತ್ತರಿಸಿ ಹಾಕುವೆನೆಂದು ಕೋಪಗೊಳ್ಳುತ್ತಾನೆ. ಆಗ ಸುಜ್ಞಾನಿದೇವ; ಹೋದವರು ಹೋದರು ಅವರ ಸುಖ ಅವರಿಗೆ ಇನ್ನು ನಿನ್ನ ಸುಖದ ಬಗ್ಗೆ ಯೋಚಿಸೆಂದು ಆತನ ಮನಃಪರಿವರ್ತನೆ ಆಗುವಂಥಹ ಹಲವಾರು ಕಥೆಗಳ ಉದಾಹರಣೆಗಳನ್ನು ಕೊಟ್ಟು ಬುದ್ಧಿ ಹೇಳಲು ಮುಂದಾಗುತ್ತಾರೆ. ಶರಣರ ನುಡಿ ಕೇಳಿ ಮಾತಂಗನ ಕೋಪ ಶಾಂತವಾಗುತ್ತದೆ‌.

ಸುಜ್ಞಾನಿದೇವ ಇವರ ಉದ್ದೇಶವು ಅಜ್ಞಾನಿಗಳಾಗಿದ್ದವರನ್ನು ಸುಜ್ಞಾನಿಗಳನ್ನಾಗಿಸುವುದಾಗಿತ್ತು. ದೋಷಗಳನ್ನು ಎಳೆದು ತಂದು ಸನ್ಮಾರ್ಗಕ್ಕೆ ತರುತ್ತಿದ್ದರು. ಹಲವಾರು ಜನರನ್ನು ಬದಲಿಸಿ ಶರಣಧರ್ಮದ ಕಡೆಗೆ ಕರೆತಂದಿದ್ದಾರೆ. ಅದರಲ್ಲಿ ಮಾತಂಗನೂ ಒಬ್ಬ. ಮಾತಂಗನಿಗೆ ಬಸವಣ್ಣನವರ ಎಲ್ಲ ಸುವಿಚಾರಗಳನ್ನು ತಿಳಿಸಿ, ಅನುಭವ ಮಂಟಪದ ಹಿರಿಮೆಯನ್ನು ಹೇಳಿ, ಇಷ್ಟಲಿಂಗದ ಮಹತ್ವವನ್ನು ವಿಸ್ತಾರವಾಗಿ ತಿಳಿಹೇಳಿ ಆತನಿಗೆ ಲಿಂಗಧಾರಣೆ ಮಾಡುತ್ತಾರೆ. ಮಾತಂಗನ ಅಂಗಕ್ಕೆ ಇಷ್ಟಲಿಂಗವು ತಾಕಿದೊಡನೆ ತನ್ನ ಮೈಯೆಲ್ಲಾ ರೋಮಾಂಚನವಾಗಿ ಮುನ್ನಿನ ಕೆಟ್ಟ ಗುಣಗಳೆಲ್ಲವೂ ಅಳಿದು ಹೋಗುತ್ತವೆ.

ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ ನಮೋ.
ಭವಬಂಧನವ ಬಿಡಿಸಿ ಪರಮಸುಖವ ತೋರಿದ ಗುರುವೆ ನಮೋ.
ಭವಿಯೆಂಬುದ ತೊಡೆದು ಭಕ್ತೆ ಎಂದೆನಿಸಿದ ಗುರುವೆ ನಮೋ.
ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕ್ಕೆ ಕೊಟ್ಟ ಗುರುವೆ, ನಮೋ ನಮೋ

ಎನ್ನುವ ಮಹಾದೇವಿ ಅಕ್ಕನ ವಚನದಂತೆ ಮಾತಂಗನು ನರನಂತಿದ್ದರೂ ಇಷ್ಟಲಿಂಗವ ಸೋಂಕಲೊಡನೆ ಹರಸ್ವರೂಪರಾಗುತ್ತಾರೆ. ದರೋಡೆಯನ್ನು ಮಾಡುತ್ತಿದ್ದ ಕೆಟ್ಟ ಕೆಲಸವನ್ನು ತೊರೆದು, ಸಾಮಾನ್ಯ ಭವಿಯಂತಿದ್ದವರು ಭಕ್ತರಾಗುತ್ತಾರೆ. ಇಷ್ಟಲಿಂಗವ ಧರಿಸಿದ ಮೇಲೆ ನಿಜವಾದ ಜನನವೆಂಬಂತೆ ಸುಜ್ಞಾನಿದೇವ ಮಾತಂಗ ಎನ್ನದೆ ನನ್ನ ಅಯ್ಯ ಎಂದು ಕರೆಯುತ್ತಾರೆ. ಇದೇ ಮುಂದೆ ನನ್ನಯ್ಯ ಎಂದಾಗಿರಬಹುದು. ಮೇಲೆ ಹೇಳಿದಂತೆ ಬಸವಗುರುವು ಕರುಣಿಸಿದ ಇಷ್ಟಲಿಂಗವನ್ನು ಧರಿಸಿದ ತಕ್ಷಣ ದರೋಡೆಕೋರ ಮಾತಂಗನೆಂಬ ಬೇಡ; ಶರಣ ನನ್ನಯ್ಯರಾಗಿಸುವ ಸಾಮರ್ಥ್ಯ ಆ ಇಷ್ಟಲಿಂಗಕ್ಕಿದೆ ಎಂದರೆ ಬಸವಣ್ಣನವರ ಕೊಡುಗೆ ಅಪಾರವಾದದ್ದು. ಅದರ ಮಹತ್ವ ಶರಣರ ಮಹಿಮೆ; ಅಕ್ಷರಗಳಲ್ಲೂ ಹೇಳಲು ಸಾಧ್ಯವಾಗದು, ಎಷ್ಟು ಮಾತನಾಡಿದರೂ ಇನ್ನೂ ಉಳಿಯುವಂಥಹ ಘನವೆಂದರೆ ತಪ್ಪಾಗದು. ಹೀಗೆ ವಿಭೂತಿಯಂತಾದ ಶರಣ ನನ್ನಯ್ಯನವರು ಸುಜ್ಞಾನಿದೇವರೊಡಗೂಡಿ ಕಲ್ಯಾಣದೆಡೆಗೆ ಪ್ರಯಾಣ ಬೆಳಸುತ್ತಾರೆ. ಇವರು ಜೊತೆಗೆ ಜ್ಞಾನಾನಂದ ಎಂಬವರೂ ಬರುತ್ತಾರೆ. ಮೂವರೂ ಅನುಭವ ಮಂಟಪವನ್ನು ಪ್ರವೇಶಿಸುತ್ತಾರೆ.

ಬಸವಣ್ಣನವರು ಈ ಮೂವರು ಶರಣರನ್ನು ಸಂತೋಷದಿಂದ ಅತೀ ಆದರದಿಂದ ಬರಮಾಡಿಕೊಂಡು ಜಂಗಮಸತ್ಕಾರವನ್ನು ಮಾಡುತ್ತಾರೆ. ಇವರ ಬಗ್ಗೆ ಪೂರ್ತಿಯಾಗಿ ತಿಳಿದು ಬಂದಿರುವುದಿಲ್ಲ, ಕಲ್ಯಾಣದಲ್ಲಿ ಕೆಲದಿನಗಳ ತರುವಾಯ ಲಿಂಗೈಕ್ಯರಾಗುತ್ತಾರೆ. ಶರಣ ನನ್ನಯ್ಯನವರು ಮೊದಲು ಬೇಡರಾಗಿರುವುದರಿಂದ ವಚನಗಳನ್ನು ರಚಿಸಿಲ್ಲವೆಂದು ಹೇಳಬಹುದು ಆದರೂ ಬಸವಣ್ಣನವರ ಪ್ರಭಾವದಿಂದ ಎಷ್ಟೋ ಶರಣ/ಶರಣೆಯರು ಅಕ್ಷರಜ್ಞಾನವಿಲ್ಲದಿದ್ದರೂ ವಚನಗಳನ್ನು ರಚಿಸಿದ್ದಾರೆ. ಅದೇ ರೀತಿ ನನ್ನಯ್ಯನವರು ಬರೆದಿದ್ದರೂ ಬರೆದಿರಬಹುದು, ಸಂಪ್ರದಾಯವಾದಿಗಳು ವಚನಗಳನ್ನು ಸುಟ್ಟಾಗ ಅದರಲ್ಲಿಯೇ ಹೋಗಿರಬಹುದು. ಹಾಗಂತ ಶರಣ ನನ್ನಯ್ಯವರು ವಚನ ರಚನೆ ಮಾಡಿದ್ದಾರೆಂದೂ ಹೇಳಲಾಗದು. ಏನೇ ಆಗಲಿ ಒಟ್ಟಿನಲ್ಲಿ ಮೊದಲು ಕಳ್ಳ, ದರೋಡಿಗಳಾಗಿದ್ದವರು, ವೇಶ್ಯಾವೃತ್ತಿ ಮಾಡುತ್ತಿದ್ದವರು ಹಲವಾರು ಜನರು ಮನಃಪರಿವರ್ತನೆಯಾಗಿ ಲಿಂಗಾಯತ ಧರ್ಮದಲ್ಲಿ ಶರಣ/ಶರಣೆಯರಾದರೆಂಬುದನ್ನು ಮರೆಯಬಾರದು.

ಜಗತ್ತಿನಲ್ಲಿಯೇ ವಿಶಿಷ್ಟವಾದ ಬಸವಧರ್ಮವು ಎಲ್ಲ ಜಾತಿ, ಪಂಗಡಗಳನ್ನೊಳಗೊಂಡ ಧರ್ಮವಾಗಿ ಸರ್ವದರಲ್ಲಿಯೂ ಸರ್ವರಿಗೂ ಸಮಪಾಲು ನೀಡಿದ ಲಿಂಗಾಯತ ಧರ್ಮವನ್ನು ಒಂದು ಜಾತಿಯೆಂದುಕೊಂಡರೆ ನಮ್ಮ ಅಜ್ಞಾನವೇ ಸರಿ. ಮೇಲೆ ಓದಿದಂತೆ ಇಷ್ಟಲಿಂಗವನ್ನು ಜಾತಿಯೆಂಬ ಭ್ರಮೆಯನ್ನು ಬಿಟ್ಟು ಬಂದು ಸರ್ವರೂ ಧರಿಸಿಕೊಂಡು ಲಿಂಗಾಯತರಾಗಿ ಸರ್ವ ಸಮಾನತೆಯನ್ನು ಸಾರಿದರು. ಕರ್ನಾಟಕದ ಮೊಟ್ಟಮೊದಲ ಧರ್ಮವೆಂದು ಹೇಳಲು ಕನ್ನಡಿಗರಾದ ನಮಗೆಲ್ಲ ಹೆಮ್ಮೆಯ ವಿಷಯವೇ ಸರಿ.‌ ಕೂಡಲಸಂಗನ ಶರಣರು ಸ್ವತಂತ್ರ ಧೀರರು ಎನ್ನುವಂತೆ ಲಿಂಗವಂತ ಧರ್ಮವು ಇದು ಸ್ವತಂತ್ರ ಧರ್ಮವಾಗಿದೆ. ಬಸವಣ್ಣನವರೇ ಧರ್ಮಗುರುವಾಗಿದ್ದಾರೆ. ಇಷ್ಟಲಿಂಗ ಮಾತ್ರ ಲಿಂಗವಂತರ ಪೂಜಾ (ಅರುಹಿನ ಕುರುಹು) ಸಾಧನವಾಗಿದೆ. ದರೋಡೆ ಮಾಡುತ್ತಿದ್ದವರನ್ನೇ ಬದಲಿಸಿ ಶರಣರನ್ನಾಗಿಸಿರುವ ಲಿಂಗಾಯತವನ್ನು ಧರ್ಮವೆಂದೇ ಕರೆಯಬೇಕು.

-ಶರಣಪ್ಪ ಗುರಪ್ಪ ಗೊಲ್ಲರ.
(ಇದು ಲೇಖಕರ ಅಭಿಪ್ರಾಯ)

[1] ಈ ತರಹದ ಸಂಖ್ಯೆಯ ವಿವರ: ಸವಸ-5/80 :- ಸಮಗ್ರ ವಚನ ಸಂಪುಟ -5, ವಚನ ಸಂಖ್ಯೆ-80 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previous ಹರಳಯ್ಯ ಮತ್ತು ಕಲ್ಯಾಣಮ್ಮ ವೇಮನ ಮಹಾಕವಿ Next
cheap jordans|wholesale air max|wholesale jordans|wholesale jewelry|wholesale jerseys