ಲಿಂಗಾಯತ ಸ್ವತಂತ್ರ ಧರ್ಮ.

*

- ಡಾ|| ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ ಪಟ್ಟಾಧ್ಯಕ್ಷರು
ಶ್ರೀ ತರಳಬಾಳು ಜಗದ್ಗುರು ಶಾಖಾ ಮಠ.
23-10-2017.

ಲಿಂಗಾಯತ ಸ್ವತಂತ್ರ ಧರ್ಮ

Dr. Shree Panditaaradhya Shivacharay Swamy, ಡಾ|| ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ ಸಕಲ ಜೀವಾತ್ಮರಿಗೆ ಒಳಿತು ಬಯಸುವುದು, ದಯೆ ಧರ್ಮದ ಮೂಲವೆಂದು ಹಿಂಸೆಯನ್ನು ವಿರೋಧಿಸುವುದು, ಏಕದೇವ ನಿಷ್ಠೆಯನ್ನು ಬೆಳೆಸುವುದು, ಸ್ತ್ರೀ-ಪುರುಷರಲ್ಲಿ ಅಂತರ ಕಾಣದಿರುವುದು, ಜಾತ್ಯತೀತ ಮನೋಭಾವ ಬೆಳೆಸುವುದು, ಕಾಯಕ, ದಾಸೋಹ, ಇಷ್ಟಲಿಂಗ ನಿಷ್ಠೆಯನ್ನು ಪರಿಪಾಲಿಸುವುದು, ಅನ್ಯಾಯವನ್ನು ನೇರವಾಗಿ ಪ್ರತಿಭಟಿಸುವುದು, ಸತ್ಯಪಕ್ಷಪಾತಿಯಾಗಿರುವುದು, ನ್ಯಾಯ ನಿಷ್ಠುರಿಯಾಗಿ ದಾಕ್ಷಿಣ್ಯಪರರಾಗದಿರುವುದು ಇಂಥ ಹಲವು ಲಕ್ಷಣವುಳ್ಳುದು ಸ್ವತಂತ್ರ ಧರ್ಮ, ವಿಶ್ವಧರ್ಮ, ಈ ಎಲ್ಲ ಲಕ್ಷಣಗಳು ಬಸವಣ್ಣನವರು ಪ್ರತಿಪಾದಿಸಿದ ಲಿಂಗಾಯತ ಧರ್ಮದಲ್ಲಿವೆ. ಆದುದರಿಂದ ಯಾರು ಒಪ್ಪಲಿ, ಒಪ್ಪದಿರಲಿ; ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಮತ್ತು ವಿಶ್ವ ಧರ್ಮ,

ಲಿಂಗಾಯತ ಸ್ವತಂತ್ರ ಧರ್ಮ ಎನ್ನುವ ಮಾತನ್ನು ಕೇಳುತ್ತಲೇ ಹಲವರ ತಲೆಯಲ್ಲೇ ಬೆಂಕಿ ಬಿದ್ದಂತಾಗಿದೆ. ಹಾಗಾಗಿ ಅವರು ಏನೇನೋ ಬಡಬಡಿಸುತ್ತಿದ್ದಾರೆ. ಯಾರು ಏನೇ ಬಡಬಡಿಸಿದರೂ ಸತ್ಯವನ್ನು ಮುಚ್ಚಿಡಲಾಗುವುದಿಲ್ಲ. ಸತ್ಯ ಸತ್ಯವೇ. ಅದೆಂದೂ ಸುಳ್ಳಾಗದು. ಬಸವಾದಿ ಶಿವಶರಣರು ತಮ್ಮ ವಚನ ಸಾಹಿತ್ಯದಲ್ಲಿ ಲಿಂಗಾಯತ, ಲಿಂಗವಂತ ಪದಗಳನ್ನು ಬಳಸಿರುವುದು ಗಮನಾರ್ಹ. ಲಿಂಗಾಯತ ಧರ್ಮದ ಗುರು ಬಸವಣ್ಣನವರು ಎಂದು ಪ್ರಭುದೇವರು, ಅಕ್ಕಮಹಾದೇವಿ, ಸಿದ್ದರಾಮ, ಚೆನ್ನಬಸವಣ್ಣ ಮೊದಲಾದವರು ತಮ್ಮ ವಚನಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಬಸವಣ್ಣನವರೇ ತಮ್ಮ ವಚನದಲ್ಲಿ 'ಲಿಂಗವಂತನ ಸನ್ನಿಧಿಯಿಂದ ದುಸ್ಸಂಗವು ಕೆಡುವುದು' ಎಂದಿದ್ದಾರೆ, 'ಲಿಂಗವಂತನು ಲಿಂಗವಂತನಿಗೆ ಬುದ್ದಿಯ ಹೇಳುವಲ್ಲಿ ಅವಗುಣಕ್ಕೆ ಮುನಿವನಲ್ಲದೆ ಲಾಂಛನಕ್ಕೆ ಮುನಿಯ' ಎಂದು ವಾಸ್ತವ ಸತ್ಯವನ್ನು ತೆರೆದಿಟ್ಟಿದ್ದಾರೆ.

ಲಿಂಗವಂತರು ಯಾವುದಕ್ಕೂ ಅಂಜಬೇಕಾಗಿಲ್ಲ ಎಂದು ಧರ್ಮಗುರು ಬಸವಣ್ಣನವರು ಅಂದೇ ಹೇಳಿದ್ದಾರೆ. 'ಲಿಂಗವಶದಿಂದ ಬಂದ ನಡೆಗಳು, ಲಿಂಗವಶದಿಂದ ಬಂದ ನುಡಿಗಳು, ಲಿಂಗವಂತರು ತಾವು ಅಂಜಲದೇಕೆ? ಲಿಂಗವಿರಿಸಿದಂತಿಪ್ಪುದಲ್ಲದೆ, ಕೂಡಲಸಂಗಮದೇವ ಭಕ್ತರಭಿಮಾನ ತನ್ನದೆಂಬನಾಗಿ', ಇಲ್ಲಿಯ ಪ್ರತಿಯೊಂದು ನುಡಿಗಳನ್ನು ಲಿಂಗವಂತರು ಗಮನಿಸಬೇಕು. 'ಆಂಗಲಿಂಗಸುಖಸಾರಾಯದನುಭಾವ ಲಿಂವಂತಂಗಲ್ಲದೆ ಸಾಧ್ಯವಾಗದು', 'ಲಿಂಗವಂತನಾದ ಬಳಿಕ ತನ್ನಂಗಲಿಂಗ ಸಂಬಂಧಕವಾದ ಜಡಭೌತಿಕ ಪ್ರತಿಷ್ಠೆಯನುಳ್ಳ ಭವಿಶೈವ ದೈವಕ್ಷೇತ್ರತೀರ್ಥಂಗಳಾದಿಯಾದ ಹಲವು ಲಿಂಗಾರ್ಚನೆಯ ಮನದಲ್ಲಿ ನೆನೆಯಲಿಲ್ಲ, ಮಾಡಲೆಂತೂ ಬಾರದು...' ಎಂದು ಎಚ್ಚರಿಸಿ ಸ್ವತಂತ್ರ ಧರ್ಮದ ನಿಯಮಗಳನ್ನು ತಿಳಿಸಿದ್ದಾರೆ.

ವೇದ, ಶಾಸ್ತ್ರ, ಆಗಮ, ಪುರಾಣಗಳನ್ನು ಓದಿ ಲಿಂಗ ಉಂಟು, ಇಲ್ಲೆಂಬ ಆಜ್ಞಾನಿಗಳಾದರು. ಅವರಷ್ಟೇ ಅಲ್ಲ: 'ಷಡುಶೈವರನ್ನು ಎಂತು ನಿಜಲಿಂಗವಂತಂಗೆ ಸರಿಯೆಂಬೆ?' ಇದು ಬಸವಣ್ಣನವರ ಪ್ರಶ್ನೆ. ಲಿಂಗಾರಾಧನೆ ಹುಸಿ ಎಂದ ಅದ್ವೈತಿಗಳು ಬುದ್ದಿ ತಪ್ಪಿ ಕ್ರಮಗೆಟ್ಟು ಹೋದರು, ಕೂಡಲಸಂಗನ ಶರಣರು ಜಗವಂದ್ಯರಾದರು, 'ಲಿಂಗವಿದ್ದಲ್ಲಿ ನಿಂದೆಯರದು, ನಿಂದೆಯಿದ್ದಲ್ಲಿ ಲಿಂಗವಿರದು, ಅವರಂತಿದ್ದಡೇನು? ಹೇಗಿದ್ದಡೇನು? ಲಿಂಗವಂತರವರು, ಉಪಮಿಸಬಾರದ ಮಹಾಘನವು ಕೂಡಲಸಂಗನ ಶರಣರು' ಎಂದು ಲಿಂಗದ, ಲಿಂಗವಂತರ ಮಹತ್ವವನ್ನು ಪ್ರತಿಪಾದಿಸಿದ್ದಾರೆ. ವೇದ, ಶಾಸ್ತ್ರ, ಆಗಮ, ಪುರಾಣಗಳನ್ನು ಅವರು ಲೇವಡಿ ಮಾಡುವರು. ವೇದವನೋದಿದವರ ಮುಂದೆ ಅಳು ಕಂಡಾ ಎಂದು ಬಲಿಯಾಗಲಿರುವ ಹೋತಕ್ಕೆ ಹೇಳುವರು.

ಬಸವಣ್ಣನವರು ವೇದ ಶಾಸ್ತ್ರಗಳನ್ನು ಓದಿದವರನ್ನು ಹಿರಿಯರೆನ್ನುವುದಿಲ್ಲ. ವಿದ್ಯೆ ಗುಣ ಜ್ಞಾನ ಧರ್ಮ ಆಚಾರ ಶೀಲಂಗಳ, ನಮ್ಮ ಕೂಡಲಸಂಗನ ಶರಣರು ಸಾಧಿಸಿದ ಸಾಧನೆಯನೆ ಸಾಧಿಸುವುದು, ಹೀಗೆ ಸಾಧಿಸಿದವರು ಮಾತ್ರ ಹಿರಿಯರು. ಹಾಗಾಗಿ 'ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬಾರನೆತ್ತುವೆ, ಆಗಮದ ಮೂಗ ಕೊಯಿವೆ' ಎಂದು ನಿರ್ಭಿಡೆಯಿಂದ ಹೇಳುವರು. 'ಕೂಡಲಸಂಗಯ್ಯನು ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ ವೇದ ನಡುನಡುಗಿತ್ತು' ಎಂದು ವೇದ ಹೇಳುವವರ ಹೂರಣವನ್ನು ಅನಾವರಣಗೊಳಿಸಿದ್ದಾರೆ. ಲಿಂಗಾಯತ ಸ್ವತಂತ್ರ ಧರ್ಮ, ಅದು ಹಿಂದೂ ಧರ್ಮದ ಅಂಗವಲ್ಲ ಎನ್ನುವುದನ್ನು ಬಸವಾದಿ ಶಿವಶರಣರು ಸ್ಪಷ್ಟಪಡಿಸಿದ್ದರೂ ಇನ್ನೂ ಕೆಲವು ಮತಾಂಧರು ಇದನ್ನು ಒಪ್ಪಿಕೊಳ್ಳುವ ಮನಸ್ಸಿಲ್ಲದೆ ತಮಗೆ ತೋಚಿದಂತೆ ವಿಶ್ಲೇಷಣೆ ಮಾಡುವ ಹುನ್ನಾರ ನಡೆಸಿದ್ದಾರೆ.

ಲಿಂಗಾಯತ ಸ್ವತಂತ್ರ ಧರ್ಮವೆಂದು ಪ್ರತಿಪಾದಿಸುವುದು ರಾಷ್ಟ್ರದ ಐಕ್ಯತೆಗೆ ಧಕ್ಕೆ, ರಾಷ್ಟ್ರ ದ್ರೋಹ, ಧರ್ಮ ದ್ರೋಹ ಎಂದು ಕೆಲವು ಬುದ್ದಿವಂತರು ಅದೇನೇನೋ ಹಳಹಳಿಸುತ್ತಿದ್ದಾರೆ. ಬಾಗಲಕೋಟೆಯ ರಾಮಣ್ಣ ಎನ್ನುವವರಂತೂ 'ಲಿಂಗಾಯತರು ಶನಿ ಸಂತಾನ' ಎಂದು ಪ್ರತಿಕ್ರಿಯಿಸಿದ್ದಾರೆ. ನೈಜ ಬಸವಪ್ರತಿಪಾದಿತ ಲಿಂಗಾಯತ ಧರ್ಮದ ತತ್ವ ಸಿದ್ದಾಂತಗಳನ್ನು ಅವರು ತಿಳಿದರೆ ಯಾರು ಶನಿ ಸಂತಾನ ಎನ್ನುವ ಅರಿವಾಗುವುದು. ಹಿಂದೂ ಧರ್ಮದ ವಕ್ತಾರರಂತೆ ಮಾತನಾಡುವ ಹಿರಿಯರೂ ಪೂಜ್ಯರೂ ಆದ ಶ್ರೀ ಪೇಜಾವರ ಸ್ವಾಮಿಗಳು ನೀವು ಹಿಂದೂ ಧರ್ಮ ಬಿಟ್ಟು ಹೋಗಬಾರದು, ಲಿಂಗಾಯತರೂ ನಮ್ಮವರೇ, ಬಸವಣ್ಣ ಶಿವನೇ ಸರ್ವೋತ್ತಮ ಅಂತ ಹೇಳಿದ್ದಾರೆ, ಪ್ರತಿಯೊಂದು ಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಲಿಂಗಾಯತರು. ಮಠಾಧೀಶರು ಪಾಲ್ಗೊಂಡಿದ್ದಾರೆ. ಸಿದ್ಧಗಂಗಾ ಮತ್ತು ಹಿಂದಿನ ಸುತ್ತೂರು ಶ್ರೀಗಳು 1968ರಲ್ಲಿ ನಡೆದ ವಿಶ್ವಹಿಂದೂ ಪರಿಷತ್ ಸಮಾವೇಶದಲ್ಲಿ ಭಾಗವಹಿಸಿದ್ದರು. ಈಗ ಹೊಸ ವಿವಾದ ಪ್ರಾರಂಭವಾಗಿದೆ. ಧರ್ಮ ಬೇರೆ ಎಂಬ ಚರ್ಚೆ ಆರಂಭವಾಗಿರುವುದು ಬೇಸರದ ವಿಷಯ ಎಂದೆಲ್ಲ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಪೇಜಾವರ ಶ್ರೀಗಳು ವಾಸ್ತವವನ್ನು ಅರಿಯದಷ್ಟು ಅಜ್ಞಾನಿಗಳಲ್ಲ, ನಾವು ಈ ಹಿಂದೆ ಆನೇಕ ಸಂದರ್ಭಗಳಲ್ಲಿ ಪ್ರತಿಪಾದಿಸಿರುವಂತೆ ಹಿಂದೂ ಪದ ಪ್ರದೇಶ ವಾಚಕವಾಗಿ ಬಳಕೆಯಾದಲ್ಲಿ ಲಿಂಗಾಯತರೂ ಹಿಂದೂಗಳೆ. ಧರ್ಮ ಎಂದು ಬಳಕೆ ಆಗುವುದಾದರೆ ಖಂಡಿತ ಲಿಂಗಾಯತರು ಹಿಂದೂಗಳಲ್ಲ. ಎರಡೂ ಧರ್ಮಗಳ ತಾತ್ವಿಕ ವಿಚಾರಗಳಲ್ಲಿ ಆಜಗಜಾಂತರ ವ್ಯತ್ಯಾಸ ಇರುವುದನ್ನು ಪೇಜಾವರ ಶ್ರೀಗಳೂ ಬಲ್ಲರು. ಆದನ್ನು ಮತ್ತೆ ವಿಸ್ತರಿಸುವ ಅಗತ್ಯವಿಲ್ಲ. ನಾವು ಹಿಂದೂ ಧರ್ಮವನ್ನು ಬಿಟ್ಟು ಹೋಗುತ್ತೇವೆ ಎನ್ನುವುದಕ್ಕಿಂತ ಲಿಂಗಾಯತ ಧರ್ಮವನ್ನು ಅಪ್ಪಿಕೊಂಡಿದ್ದೇವೆ. ನಾವು ಬಿಟ್ಟಿರುವುದು ಭಾರತವನ್ನಲ್ಲ, ಭಾವೈಕ್ಯತೆಯನ್ನಲ್ಲ ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮವನ್ನಲ್ಲ ಶ್ರೀಗಳು ಹೇಳುವಂತೆ ಬಸವಣ್ಣನವರು ಶಿವನೇ ಸರ್ವೋತ್ತಮ ಎಂದಿರುವುದು ಸತ್ಯ. ಆದರೆ ಹಿಂದೂಗಳು ನಂಬುವ ಶಿವನಿಗೂ ಬಸವಣ್ಣನವರು ನಂಬುವ ಶಿವನಿಗೂ ಹೋಲಿಕೆ ಇಲ್ಲ.

ಗುರು ಬಸವಣ್ಣನವರ ಶಿವ ಕೈಲಾಸವಾಸಿಯಲ್ಲ, ಅವನಿಗೆ ಹೆಂಡಿರು ಮಕ್ಕಳಿಲ್ಲ. ಆತ ನಿರ್ಗುಣ, ನಿರಾಕಾರ ಶಿವ ಎಂದರೆ ಮಂಗಳ, ಆಭ್ಯುದಯ, ಲೇಸು, ಒಳಿತು, ಹಿತ, ಕಲ್ಯಾಣ, ನಮ್ಮ ಶಿವ ಸ್ಥಾವರ ಪ್ರತಿಮೆಯಲ್ಲ ಆವನು ಜಂಗಮಸ್ವರೂಪಿ ಅವನು ಗುಡಿಯಲ್ಲಿಲ್ಲ. ಪ್ರತಿಯೊಬ್ಬರ ದೇಹದಲ್ಲಿ ಜಂಗಮರೂಪಿಯಾಗಿ, ಇಷ್ಟಲಿಂಗರೂಪಿಯಾಗಿ ಇದ್ದಾನೆ, ಲಿಂಗಾಯತ ಧರ್ಮದಲ್ಲಿ ಕೈಲಾಸ, ಸ್ವರ್ಗ, ನರಕಗಳಿಗೆ ಸ್ಥಾನವೇ ಇಲ್ಲ ಶಿವಯೋಗಿ ಸಿದ್ದರಾಮೇಶ್ವರರು ಹೇಳುವ ಹಾಗೆ 'ಕೈಲಾಸವೆಂಬುದು ಹಾಳು ಬೆಟ್ಟ ಆಲ್ಲಿರುವ ಮುನಿಗಳು ಜೀವಗಳ್ಳರು, ಅಲ್ಲಿರುವ ಶಿವನೊಬ್ಬ ಹೆಡ್ಡ'. ಬಸವಣ್ಣನವರು 'ಆಚಾರವೇ ಸ್ವರ್ಗ, ಅನಾಚಾರವೇ ನರಕ'. "ಆಯ್ಯಾ ಎಂದರೆ ಸ್ವರ್ಗ ಎಲವೋ ಎಂದರೆ ನರಕ" ಎನ್ನುವರು ಶಿವ ಜಗದಗಲ, ಮುಗಿಲಗಲ ಎತ್ತೆತ್ತ ನೋಡಿದರೂ ಅತ್ತ ಲಿಂಗಾಯತರ ಶಿವ ಇದ್ದಾನೆ.

ಬಸವಣ್ಣನವರು ಶಿವರಾತ್ರಿ, ಶಿವಗೋಷ್ಠಿ, ಶಿವತತ್ವಗೀತ, ಶಿವಜನ್ಮ, ಶಿವಲೋಕ, ಶಿವಾಚಾರ, ಶಿವಪಥ, ಶಿವಜ್ಞಾನ, ಶಿವಚಿಂತೆ, ಶಿವಲಿಂಗ ಹೀಗೆ ಶಿವ ಪದದ ಬಳಕೆ ಮಾಡಿರುವುದನ್ನು ವಚನಗಳ ಅಧ್ಯಯನದಿಂದ ತಿಳಿಯಬಹುದು ಅಲ್ಲೆಲ್ಲೂ ಹಿಂದೂಗಳು ಹೇಳುವ ಶಿವ ಇಲ್ಲ. ನಮ್ಮ ಶಿವ ಭಕ್ತರ ಅಂತರಂಗ ಬಹಿರಂಗದಲ್ಲಿದ್ದು ಎಲ್ಲರ ಒಳಿತು ಬಯಸುವವ. ಹಾಗಾಗಿ ಶಿವತತ್ವವನ್ನು ಬಸವಣ್ಣನವರು ಹೇಳಿದ ಮಾತ್ರಕ್ಕೆ ಲಿಂಗಾಯತರು ಹಿಂದೂಗಳೇ ಎಂದು ವಾದಿಸುವುದು ಸಲ್ಲದು. ಇಲ್ಲಿ ಶಿವದೀಕ್ಷೆ ಕೊಡುವಾಗ ಆ ವ್ಯಕ್ತಿಯ ಪೂರ್ವಗುಣವಳಿದು ಪುನರ್ಜಾತನಾಗಬೇಕು ಎನ್ನುವ ಸಿದ್ದಾಂತವಿದೆ. 'ಲೋಕದ ಮಾನವಂಗೆ ಶಿವದೀಕ್ಷೆಯ ಕೊಟ್ಟಡೆ ಕೆಟ್ಟವನೇಕೆ ಸದ್ಭಕ್ತನಹನು' ಎಂದು ಬಸವಣ್ಣನವರು ಹೇಳುವ ಮೂಲಕ ಶಿವದೀಕ್ಷೆ ಪಡೆದವರು ಶಿವಗುಣಗಳನ್ನು ಬೆಳೆಸಿಕೊಳ್ಳಬೇಕು ಎನ್ನುವರು, ಅಳಿಮನದವಂಗೆ ಶಿವದೀಕ್ಷೆಯ ಕೊಟ್ಟಡೆ ಅವನು ಭಕ್ತನಾಗಲಾರ ಎಂದು ಇಷ್ಟಲಿಂಗ ದೀಕ್ಷೆಯನ್ನು ಎಂತವರಿಗೆ ಕೊಡಬೇಕೆಂದು ತಿಳಿಸಿದ್ದಾರೆ.

ಲಿಂಗಾಯತ ಮಠಾಧೀಶರು ವಿಶ್ವಹಿಂದೂ ಪರಿಷತ್‌ ಸಮಾವೇಶದಲ್ಲಿ ಭಾಗವಹಿಸಿದ ಮಾತ್ರಕ್ಕೆ ಅವರು ಹಿಂದೂ ಧರ್ಮವನ್ನು ಒಪ್ಪಿದ್ದರು ಎನ್ನುವುದು ಅತೀ ಬುದ್ದಿವಂತಿಕೆಯಾಗುವುದು. ಪ್ರೀತಿ ವಿಶ್ವಾಸಗಳಿಂದಾಗಿ ನಾವು ಪೇಜಾವರ ಮಠಕ್ಕೆ, ವೇಜಾವರ ಶ್ರೀಗಳು ನಮ್ಮ ಮಠಕ್ಕೆ ಆಗಮಿಸಿದ್ದು ಸತ್ಯ. ಹಾಗಂತ ಅವರ ಎಲ್ಲ ವಿಚಾರಗಳನ್ನು ನಾವು ನಮ್ಮ ವಿಚಾರಗಳನ್ನು ಅವರು ಒಪ್ಪಿದ್ದಾರೆಂದು ಭ್ರಮಿಸುವುದು ತಪ್ಪು ಸೈದ್ದಾಂತಿಕ, ತಾ‌ತ್ವಿಕ ಭಿನ್ನಾಭಿಪ್ರಾಯ ಬೇರೆ. ವ್ಯಕ್ತಿಗತ ಪ್ರೀತಿ ವಿಶ್ವಾಸಗಳು ಬೇರೆ. ಒಂದಕ್ಕೊಂದು ತಾಳೆ ಹಾಕಬಾರದು. ಎಷ್ಟೋ ಸಮಾರಂಭಗಳಿಗೆ ನಾವು ಹೋಗಿ ನಮ್ಮ ವಿಚಾರಗಳನ್ನು ಹೇಳಿ ಅವರು ಮಾಡುವುದನ್ನು ವಿರೋಧಿಸುತ್ತ ಬಂದಿದ್ದೇವೆ. ನಾವು ವಿರೋಧಿಸಿದ್ದನ್ನು ಮುಚ್ಚಿಟ್ಟು ಅವರು ನಮ್ಮ ಸಮಾರಂಭಕ್ಕೆ ಬಂದಿದ್ದರು ಎಂದು ಹೇಳುವುದು ಆತ್ಮವಂಚನೆಯಾಗುವುದು.

ಇವತ್ತು ವಿವಿಧ ಪಕ್ಷಗಳ ರಾಜಕೀಯ ಸಮಾರಂಭಗಳಿಗೆ ಲಕ್ಷ ಲಕ್ಷ ಜನರು ಬರುತ್ತಾರೆ ಅಥವಾ ಬರುವಂತೆ ಮಾಡಿಕೊಳ್ಳುತ್ತಾರೆ. ಹಾಗಂತ ಬಂದವರೆಲ್ಲರೂ ಅವರ ಪಕ್ಷಕ್ಕೆ ಮತ ಕೊಡುತ್ತಾರೆಂದು ನಂಬಿದರೆ ಎಷ್ಟು ಆಭಾಸ, ಅತಾರ್ಕಿಕವಾಗುತ್ತದೆ. ಹಾಗೆಯೇ ಲಿಂಗಾಯತರು, ಲಿಂಗಾಯತ ಸ್ವಾಮಿಗಳು ವಿಶ್ವಹಿಂದೂ ಪರಿಷತ್ ಸಮಾವೇಶಕ್ಕೆ ಆಗಮಿಸಿದ್ದರು ಎನ್ನುವುದು ಸಹ, ಉಡುವುದು, ಉಂಬುವುದು ಬೇರೆ, ಕೊಡುವುದು ಕೊಂಬುವದು ಬೇರೆ, ಈ ನಿಟ್ಟಿನಲ್ಲಿ ಪೇಜಾವರ ಶ್ರೀಗಳು ಇನ್ನಾದರೂ ಸತ್ಯವನ್ನು ಮನಗಂಡು ಲಿಂಗಾಯತರು ಹಿಂದೂಗಳೇ ಎನ್ನುವ ವಾದದಿಂದ ಹಿಂದೆ ಸರಿಯುವರೆಂದು ತಿಳಿದಿದ್ದೆವೆ. ಅವರು ಹೇಳುವಂತೆ ಲಿಂಗಾಯತ ಖಂಡಿತ ನಿಮ್ಮವರೆ, ಪ್ರೀತಿ ವಿಶ್ವಾಸಗಳಿಗೆ ಎಂದಿಗೂ ಭಂಗ ಬರಬಾರದು. ಬರುವುದಿಲ್ಲ.

ಲಿಂಗಾಯತ ಸ್ವತಂತ್ರ ಧರ್ಮ, ಬಸವಣ್ಣನವರೇ ಈ ಧರ್ಮದ ಸಂಸ್ಥಾಪಕರು, ವಚನ ಸಾಹಿತ್ಯವೇ ಈ ಧರ್ಮದ ಧರ್ಮಗ್ರಂಥ, ಇಷ್ಟಲಿಂಗವೇ ಈ ಧರ್ಮದ ಲಾಂಭನ ಎಂದು ಹೇಳಿದಾಕ್ಷಣ ನಾವು ದೇಶದ್ರೋಹಿಗಳಾಗಲು ಹಿಂದೂಗಳ ವಿರೋಧಿಗಳಾಗಲು ಸಾಧ್ಯವಿಲ್ಲ ಎನ್ನುವುದನ್ನು ಇನ್ನಾದರೂ ಲಿಂಗಾಯತ ಧರ್ಮವನ್ನು ವಿರೋಧಿಸುವವರು ಅರಿಯಬೇಕು.

ಊಡುವ, ಉಡಿಸುವ ಗಂಡನಿದ್ದಂತೆ
ಜೋಡೆ ಮಿಂಡಂಗೆ ಕಣ್ಣ ಚೆಲ್ಲುವಳ
ಕೇಡಿಂಗೆ ಬೆರಗಾದೆ ನಾನು.
ಕೂಡಲಸಂಗಮದೇವನು
ಸಿಂಗಾರದ ಮೂಗ ಬಣ್ಣಿಸಿ, ಹಲುದೋರೆ ಕೊಯ್ವ.

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು
ಪಟ್ಟಾಧ್ಯಕ್ಷರು
ಶ್ರೀ ತರಳಬಾಳು ಜಗದ್ಗುರು ಶಾಖಾ ಮಠ
ಸಾಣೇಹಳ್ಳಿ - 577 515
ಹೊಸುದರ್ಗ - ತಾಲ್ಲೂಕು, ಚಿತ್ರದುರ್ಗ ಜಿಲ್ಲೆ.

*
ಪರಿವಿಡಿ (index)
Previousಲಿಂಗಾಯತರಿಂದ ದೇಶದ ಪ್ರಜಾಪ್ರಭುತ್ವ ರಕ್ಷಣೆಶಿವರಾತ್ರಿ ಎಂದರೇನು?Next
*