ಶಿವಾಜಿ ಮಹಾರಾಜ, ಮೂಲ ಲಿಂಗಾಯತ!
|
|
*
ಛತ್ರಪತಿ ಶಿವಾಜಿ ಮಹಾರಾಜರ ಮೂಲಪುರುಷ ಲಿಂಗಾಯತ ಗೌಳಿ ಬಳಿಯಪ್ಪ
ಮತ್ತು
ಶಿವಾಜಿ ಮನೆತನದ ಲಿಂಗಾಯತ ಸ್ವಾಮಿಗಳು.
ಇಂದಿನ ಗದಗ ಹತ್ತಿರದ ಸೋರಟೂರು ನಿವಾಸಿಯಾದ ಲಿಂಗಾಯತ ಗೌಳಿ ಪಂಗಡದ ಬಳಿಯಪ್ಪ ಎಂಬ ಭಕ್ತರು, ಬಹುಜನರ ಮರಾಠ ಸಾಮ್ರಾಜ್ಯ ಸಂಸ್ಥಾಪಕರಾದ ಛತ್ರಪತಿ ಜನತಾರಾಜ ಶಿವಾಜಿ ಮಹಾರಾಜರ ಮೂಲಪುರುಷರು.
ಇದು ಐತಿಹಾಸಿಕವಾಗಿ ಸತ್ಯ. ಇದಕ್ಕೆ ಆಧಾರವಾಗಿ ಮಹಾರಾಷ್ಟ್ರ ರಾಜ್ಯದ ಹೆಸರಾಂತ ಇತಿಹಾಸ ಸಂಶೋಧಕರಾದ ಡಾ. ರಾಮಚಂದ್ರ ಚಿಂತಾಮಣಿ ಢೇರೆ ಅವರ ಸುಮಾರು 20 ವರ್ಷಗಳ ಅವಿಶ್ರಾಂತ ಸಂಶೋಧನೆಯ ಪರಿಶ್ರಮದಿಂದ ದಾಖಲಿಸಿದ ಕೃತಿ ಇದೆ. ಬ್ರಾಹ್ಮಣರಾದ ಡಾ. ಢೇರೆಯವರ ಈ ಕೃತಿಗೆ ಬಹುದೊಡ್ಡ ವಿರೋಧ ವ್ಯಕ್ತವಾಯಿತು. ಆದರೆ ಕೊನೆಗೆ ಮಹಾರಾಷ್ಟ್ರದ ಸಾಹಿತಿಗಳು, ಸರಕಾರ ಮತ್ತು ಜನರು ಸತ್ಯವನ್ನು ಒಪ್ಪಿಕೊಳ್ಳಬೇಕಾಯಿತು.
ಶಿಖರ ಶಿಂಗಣಾಪುರದ ಶಂಭು ಮಹಾದೇವ ಗುಡಿಯ ಪಕ್ಕದಲ್ಲಿರುವ ಶಾಂತಲಿಂಗಸ್ವಾಮಿಗಳ ಜಂಗಮ ಮಠ ಬಸವ ಪರಂಪರೆಯ ಲಿಂಗಾಯತ ಮಠವಾಗಿದೆ. ಗದಗ ಹತ್ತಿರದ ಸೋರಟೂರಿನಿಂದ ಸುಮಾರು ಕ್ರಿ. ಶ. 1250 ರಲ್ಲಿ ಉಂಟಾದ ಬರಗಾಲದ ಕಾರಣ ಮಹಾರಾಷ್ಟ್ರದ ಶಿಖರ ಶಿಂಗಣಾಪುರಕ್ಕೆ ವಲಸೆ ಹೋಗಿ, ಅಲ್ಲಿ ಶಂಭು ಮಹಾದೇವನ ಗುಡಿ ಕಟ್ಟಿಸಿದ ಶಿವಭಕ್ತ ಬಳಿಯಪ್ಪನ ನಂತರದ ನಾಲ್ಕನೇ ತಲೆಮಾರಿನ ಅವರ ಕಿರಿಮೊಮ್ಮಗನಾದ ಮಾಲೋಜಿ ರಾಜೇ ಭೋಸಲೆ ಅವರ ಸಮಕಾಲೀನರಾದ ಲಿಂಗಾಯತ ಪರಂಪರೆಯ ಶಾಂತಲಿಂಗಸ್ವಾಮಿಗಳು ಆ ಜಂಗಮ ಮಠದ ಅಧ್ಯಕ್ಷರಾಗಿದ್ದರು.
ಶಾಂತಲಿಂಗ ಸ್ವಾಮಿಗಳು (ಕ್ರಿ. ಶ. 1553 - 1623):
ಸಾಧನೆಗಳು:
* ಲಿಂಗಾಯತ ಧರ್ಮ ಜಾಗೃತಿ
* ಇಷ್ಟಲಿಂಗ ದೀಕ್ಷೆ ಪ್ರಾರಂಭ
* ಲಿಂಗಾಯತ ಧರ್ಮ ಜಾಗೃತಿಗಾಗಿ ಅಭಂಗ ರಚನೆ
ಇವರ ಲಿಂಗಾಯತ ಮರಾಠಿ ಸಾಹಿತ್ಯ ಕೃತಿಗಳು:
1) ಕರಣ ಹಂಸ ('ಕರಣ ಹಸಿಗೆ' ಯ ಅನುವಾದ ಕೃತಿ)
2) ಶಾಂತ ಬೋಧ (ಮರಾಠಿ ಅಭಂಗ ಗ್ರಂಥ)
3) ವಿವೇಕ ಚಿಂತಾಮಣಿ (ಮರಾಠಿ ಅಭಂಗ ಗ್ರಂಥ)
'ಕರಣ ಹಂಸ' ಕೃತಿಯು ಷ. ಚ. ಚೆನ್ನಬಸವಣ್ಣನವರ 'ಕರಣ ಹಸಿಗೆ'ಯ ಅನುವಾದವಾಗಿದೆ.
"ಶಾಂತಲಿಂಗ ಸ್ವಾಮಿಗಳು ಮರಾಠಿಯಲ್ಲಿ ಅಭಂಗ ರಚನೆ ಮಾಡಿದ ಪ್ರಪ್ರಥಮ ಜ್ಞಾತ ಲಿಂಗಾಯತ ಸಂತ ಕವಿಗಳು."
- ಡಾ. ರಾ. ಚಿಂ. ಢೇರೆ
ಛತ್ರಪತಿ ಶಿವಾಜಿ ಮಹಾರಾಜರ ಅಜ್ಜ ಮಾಲೋಜಿ ರಾಜೇ ಮತ್ತು ಶಾಂತಲಿಂಗಸ್ವಾಮಿಗಳ ಮಧ್ಯೆ ಭಾಕ್ತಿಕ
ಸಂಬಂಧವಿತ್ತು. ಇದೇ ಶಾಂತಲಿಂಗಸ್ವಾಮಿಗಳ ಲಿಂಗಾಯತ ಪರಂಪರೆಯವರಾದ ಅವರ ಶಿಷ್ಯರಾದ ಜಯರಾಂ ಸ್ವಾಮಿಗಳ ವಡಗಾಂವ್ ಮಠಕ್ಕೆ ಛತ್ರಪತಿ ಶಿವಾಜಿ ಮಹಾರಾಜರು ಭೇಟಿಕೊಡುತ್ತಿದ್ದರು.
ಜಯರಾಂ ಸ್ವಾಮಿಗಳ 'ಅಪರೋಕ್ಷಾನುಭವ' ಎಂಬ ಮರಾಠಿ ಅಭಂಗ ಕೃತಿಯ ಕಟ್ಟಿನ ಮೇಲೆ, ಜಯರಾಂ ಸ್ವಾಮಿಗಳು ಬೋಧನೆ ಮಾಡುತ್ತಿರುವುದು ಮತ್ತು ಹಣೆಗೆ ವಿಭೂತಿ ಧರಿಸಿದ ಛತ್ರಪತಿ ಶಿವಾಜಿ ಮಹಾರಾಜರು ಎರಡೂ ಕೈ ಮುಗಿದು ಗುರುಬೋಧನೆಯನ್ನು ಆಲಿಸುವ ಚಿತ್ರಗಳು ದೊರೆತಿವೆ.
ಜಯರಾಂ ಸ್ವಾಮಿಗಳು (16ನೇ ಶತಮಾನ):
ಮರಾಠಿ ಕೃತಿ: ಅಪರೋಕ್ಷಾನುಭವ
ರಚನೆ: ಲಿಂಗಾಯತ ಸಂತ ಕವಿ ಜಯರಾಂ ಸ್ವಾಮಿಗಳು
ಪರಂಪರೆ: ಲಿಂಗಾಯತ ಪರಂಪರೆ
ಏನು ಉಲ್ಲೇಖಿಸಲಾಗಿದೆ:
* ಶಿಖರ ಶಿಂಗಣಾಪುರ ಕ್ಷೇತ್ರ ವರ್ಣನೆ
* ಶಂಭು ಮಹಾದೇವ ವರ್ಣನೆ
* ಶಂಭು ಮಹಾದೇವ ಭಕ್ತನಾದ ಬಳಿಯಪ್ಪನ ಸ್ತುತಿ
* ಬಳಿಯಪ್ಪ ಛತ್ರಪತಿ ಶಿವಾಜಿ ಮಹಾರಾಜರ ಮೂಲಪುರುಷ ಎಂಬ ವಿವರ
* ಶಿವಾಜಿ ಮಹಾರಾಜರ ಮನೆತನದ ಮೂಲಪೀಠ ಮತ್ತು ಮನೆತನದ ಮೂಲ ಮಠ
ಜಯರಾಂ ಸ್ವಾಮಿಗಳ ವಡಗಾಂವ್ ಮಠ ಮತ್ತು ಅವರ ಜತೆಗಿನ ಭೇಟಿಯು ಛತ್ರಪತಿ ಶಿವಾಜಿ ಮಹಾರಾಜರ ಸಂಬಂಧವು ಮೂರು ತಲೆಮಾರುಗಳಿಂದ ಮುಂದುವರೆದಿದೆ.
ಮುಂದೆ ಛತ್ರಪತಿ ಶಿವಾಜಿ ಮಹಾರಾಜರು, ತಮ್ಮ ಅಜ್ಜ ಮಾಲೋಜಿ ರಾಜೇ ಪರಂಪರೆಯಿಂದ ಮನೆತನದ ಸ್ವಾಮಿಗಳಾದ ಶಾಂತಲಿಂಗ ಸ್ವಾಮಿಗಳ ಜಂಗಮ ಮಠಕ್ಕೆ ಹಾಗೂ ಶಂಭು ಮಹಾದೇವನ ಗುಡಿಗೆ ನಡೆದುಕೊಳ್ಳುವುದನ್ನು ಮುಂದುವರಿಸುತ್ತಾರೆ. ಧೀರತಾಯಿ ಜೀಜಾಬಾಯಿಯವರು ತಾವೇ ಮುತುವರ್ಜಿ ವಹಿಸಿ ಈ ಜಂಗಮ ಮಠಕ್ಕೆ ಮತ್ತು ಶಂಭು ಮಹಾದೇವ ಗುಡಿಯ ನಿರ್ವಹಣೆಗೆ ಉಂಬಳಿ ಮತ್ತು ಪ್ರತಿ ತಿಂಗಳು ಹಣಕಾಸಿನ ಸೌಲಭ್ಯವನ್ನು ಕಲ್ಪಿಸಿದ್ದರು. ಛತ್ರಪತಿ ಶಿವಾಜಿ ಮಹಾರಾಜರ ನಂತರ ಅವರ ಮುಂದಿನ ಪೀಳಿಗೆಯವರು ಶಂಭು ಮಹಾದೇವ ಮತ್ತು ಜಂಗಮ ಮಠಕ್ಕೆ ಭಕ್ತಿ ಗೌರವವನ್ನು ಅರ್ಪಿಸುತ್ತ ಬಂದಿದ್ದಾರೆ. ಪರಂಪರೆಯಿಂದ ಲಿಂಗಾಯತ ಸ್ವಾಮಿಗಳೇ ಛತ್ರಪತಿ ಶಿವಾಜಿ ಮಹಾರಾಜರ ಮನೆತನಕ್ಕೆ ಬಳಿಯಪ್ಪನವರ ಕಾಲದಿಂದಲೂ ಮತ್ತು ಛತ್ರಪತಿ ಶಾಹು ಮಹಾರಾಜರ ಕಾಲಕ್ಕೂ ಸ್ವಾಮಿಗಳಾಗಿರುವುದು ಚಾರಿತ್ರಿಕ ದಾಖಲೆಯಾಗಿದೆ. ಛತ್ರಪತಿಗಳ ಮನೆತನದ ಲಿಂಗಾಯತ ಪರಂಪರೆಗೆ ಮೂಲ ಕಾರಣ ಗದಗ ಹತ್ತಿರದ ಸೋರಟೂರಿನ ನಿವಾಸಿಯಾಗಿದ್ದ ಲಿಂಗಾಯತ ಗೌಳಿಯಾದ ಶಿವಭಕ್ತ ಲಿಂಗವಂತ ಬಳಿಯಪ್ಪನು.
ಗ್ರಂಥ ಋಣ:
ಕೃತಿ: ಶಿಖರ ಶಿಂಗಣಾಪುರಚಾ ಶಂಭು ಮಹಾದೇವ
ಲೇಖಕರು: ಡಾ. ರಾ. ಚಿಂ. ಢೇರೆ
ಕನ್ನಡ ಅನು: ಶಿವಾಜಿ ಮೂಲ ಕನ್ನಡ ನೆಲ
ಅನುವಾದಕರು: ಡಾ. ಸರಜೂ ಕಾಟ್ಕರ್
ಕೃತಿ: ಮರಾಠಿ ಸಂತ ಸಾಹಿತ್ಯದಲ್ಲಿ ವಿಶ್ವಗುರು ಬಸವಣ್ಣನವರು
ಕೃತಿಕಾರ: ಶರಣ ಡಾ. ರಾಜೇಂದ್ರ ಜೀರೋಬೆ, ಉದಗೀರ್ ಮಹಾರಾಷ್ಟ್ರ.
*