ಶಿವರಾತ್ರಿ ಎಂದರೇನು?

*

- ✍ ಶರಣ ಸಚ್ಚಿದಾನಂದ ಚಟ್ನಳ್ಳಿ

ನರವಿಂಧ್ಯದೊಳಗೆನ್ನ ಹುಲುಗಿಳಿಯ ಮಾಡಿ
ಸಲಹುತ್ತ ಶಿವ ಶಿವ ಎಂದೋದಿಸಯ್ಯಾ.
ಭಕ್ತಿಯೆಂಬ ಪಂಜರದೊಳಗಿಕ್ಕಿ ಸಲಹು
ಕೂಡಲಸಂಗಮದೇವಾ. -ಗುರು ಬಸವಣ್ಣನವರು

ಅನೇಕ ಕ್ರೂರ ಮೃಗಗಳು, ವಾಸಿಸುವ ಕಾಡಿನಲ್ಲಿ ಒಂದು ಮರಿ ಗಿಳಿ ಬದುಕಲಿಕ್ಕೆ ಸಾಧ್ಯವಿಲ್ಲ. ಅದಕ್ಕಾಗಿ ಅದು ಪಂಜರದ ಮೊರೆ ಹೋಗಬೇಕು. ಹಾರಲಿಕ್ಕೆ ಬರದ ಗಿಳಿ ಮರಿಗಳನ್ನು ತಿಂದು ಹಾಕಲು ಬೆಕ್ಕುಗಳು ಹೊಂಚು ಹಾಕುತ್ತಿರುತ್ತವೆ. ಅದೇ ರೀತಿ ಮನುಷ್ಯನು ವಾಸಿಸುವ ಈ ಜಗತ್ತೇ ಒಂದು ಕಾಡು. ಇಲ್ಲಿ ಅನೇಕ ಪ್ರಲೋಭನೆಗಳು, ಆಸೆ ಆಮಿಷಗಳೇ ಕ್ರೂರ ಮೃಗಗಳು. ಅವುಗಳು ವ್ಯಕ್ತಿಯಲ್ಲಿರುವ ಆತ್ಮಚೈತನ್ಯವನ್ನು ಮಲೀನ ಗೊಳಿಸುತ್ತವೆ. ಅದಕ್ಕಾಗಿ ವ್ಯಕ್ತಿಯು ತನ್ನ ಆತ್ಮವೆಂಬ ಗಿಳಿಯನ್ನು ಉಳಿಸಿಕೊಂಡು ಪರಮಾತ್ಮನಲ್ಲಿಗೆ ಸಲ್ಲಿಸಲು ಭಕ್ತಿಯೆಂಬ ಪಂಜರದ ಮೊರೆ ಹೋಗಬೇಕು. ಆಧ್ಯಾತ್ಮ ಜೀವಿಯು ತಾನೇ ನಿರ್ಮಿರ್ಸಕೊಂಡ ಒಂದು ಸಿಸ್ತಿನ ಚೌಕಟ್ಟಿನಲ್ಲಿ (Self imposed discipline)ಬದುಕಬೇಕು ಎಂಬುದೇ ಇದರ ಅರ್ಥ. ಅಂದರೆ ನಾವು ಮಾಡುವ ಭಕ್ತಿವೈಚಾರಿಕತೆಯಿಂದ ಕೂಡಿರಬೇಕು.

ಶಿವರಾತ್ರಿಯು ಭಕ್ತಿ ಪ್ರಧಾನವಾದ ಹಬ್ಬ. ಅಂದು ಯೋಗಿರಾಜನಾದ ಶಿವನು ತಪಸ್ಸಿಗೆ ಕುಳಿತ ದಿನ. ಅದಕ್ಕಾಗಿ ಆ ದಿನವನ್ನು ಸಾಂಕೇತಿಕವಾಗಿ ಶಿವರಾತ್ರಿಯೆಂದು ಆಚರಿಸುತ್ತಾರೆ. ವೈಚಾರಿಕ ತಳಹದಿಯ ಮೇಲೆ ಶಿವರಾತ್ರಿಯನ್ನು ವಿಶ್ಲೇಷಿಸುವುದಾದರೆ, ಅದನ್ನು ಜಾಗೃತೆಯ ರಾತ್ರಿ ಅಥವಾ ಎಚ್ಚರಿಕೆಯ ರಾತ್ರಿ (Night of awakenessಎಂದು ತಿಳಿದುಕೊಳ್ಳಬಹುದು. ಕೇವಲ ಸಂಸಾರ ಸುಖದಲ್ಲೇ ತಲ್ಲೀನನಾದ ಮಾನವನು ಇಂದ್ರೀಯ ಸುಖದಿಂದ ಎಚ್ಚೆತುಕೊಂಡು ಪಾರಮಾರ್ಥಿಕ ಸುಖವನ್ನು ಪಡೆಯಬೇಕು. ಅಜ್ಞಾನದ ಅಂಧಕಾರದಲ್ಲಿ ಮುಳುಗಿರುವ ಮಾನವನು ಆತ್ಮ ಜಾಗೃತಿಯನ್ನು ಮಾಡಿಕೊಳ್ಳಬೇಕು ಎನ್ನುವುದೇ ಶಿವರಾತ್ರಿ.

ಇಡೀ ವರ್ಷದಾದ್ಯಂತ ಲೌಕಿಕ ವ್ಯವಹಾರಗಳಲ್ಲಿಯೇ ಮುಳುಗಿರುವ ಮನುಷ್ಯನು ವರ್ಷಕ್ಕೊಮ್ಮೆಯಾದರೂ ಶಿವಭಕ್ತಿಯನ್ನು ಮಾಡಬೇಕು ಎಂದು ತಿಳಿದು ಶಿವರಾತ್ರಿಯನ್ನು ಆಚರಣೆಗೆ ತರಲಾಗಿದೆ. ಅದರ ಮೂಲ ಉದ್ದೇಶವೇ ಬೇರೆ, ಇಂದು ಜನರು ಅದನ್ನು ಆಚರಿಸುವ ರೀತಿಯೇ ಬೇರೆಯಾಗಿದೆ. ಶಿವರಾತ್ರಿಯಂದು ಉಪವಾಸವಿರಬೇಕು ಎಂಬುದು ನಿಯಮ. ಉಪವಾಸವೆಂದರೆ ಪ್ರಸಾದ (ಊಟ) ಮಾಡದೇ ಇರುವುದು ಎಂದಲ್ಲ. ಉಪ-ಎಂದರೆ ಹತ್ತಿರ, ವಾಸ-ಎಂದರೆ ಇರು. ಉಪವಾಸ ಎಂದರೆ ಹತ್ತಿರದಲ್ಲಿ ಇರು. ಯಾರಿಗೆ? ಶಿವನಿಗೆ. ಆದರೆ ಅನೇಕರು ಶಿವನಿಗೆ ಹತ್ತಿರ ಇರುವುದಿಲ್ಲ ಹಸಿವನ್ನು ಮರೆಯಲಿಕ್ಕೆ ಸಿನಿಮಾಗಳಿಗೆ ಹತ್ತಿರವಾಗುತ್ತಾರೆ. ಆದರೆ ಶರಣರು ಇದನ್ನು ಒಪ್ಪುವುದಿಲ್ಲ. ಊಟ ಮಾಡದೇ ಹೊಟ್ಟೆಯ ಚಿಂತೆ ಮಾಡುವ ಬದಲಿಗೆ, ಊಟ ಮಾಡಿ ದೇವರ ಚಿಂತೆ ಮಾಡಬೇಕು. ಬಸವ ತತ್ವ ಅನುಯಾಯಿಗಳಿಗೆ, ವರ್ಷಕ್ಕೊಮ್ಮೆ ಬರುವ ಶಿವರಾತ್ರಿಯೇ ಶಿವರಾತ್ರಿಯಲ್ಲ; ಅವರಿಗೆ ನಿಚ್ಚವೂ ಶಿವರಾತ್ರಿಯೆ. ಕಾರಣ ಶರಣರು ದಿನನಿತ್ಯವೂ ಎರಡೂ ಹೊತ್ತು ಲಿಂಗಾರ್ಚನೆ ಮಾಡುತ್ತಾರೆ. ಸದಾಕಾಲ ದೇವನ ಧ್ಯಾನದಲ್ಲಿಯೇ ಇರುತ್ತಾರೆ. ಅದಕ್ಕಾಗಿ ಅವರು ಮಲಗಿದರೆ ಅದುವೆ ಜಪ, ಎದ್ದು ಕುಳಿತರೇ ಅದುವೇ ಶಿವರಾತ್ರಿ.

ಶರಣ ನಿದ್ರೆಗೈದೂಡೆ ಜಪಕಾಣಿರೋ.
ಶರಣನೆದ್ದು ಕುಳಿತರೆ ಶಿವರಾತ್ರಿ ಕಾಣಿರೋ,
ಶರಣ ನಡೆದುದೇ ಪಾವನ ಕಾಣಿರೋ,
ಶರಣ ನುಡಿದುದೇ ಶಿವತತ್ವ ಕಾಣಿರೋ,
ನಮ್ಮ ಲಿಂಗದೇವನ ಶರಣನ
ಕಾಯಕವೇ ಕೈಲಾಸ ಕಾಣಿರೋ.


ದೇವರ ಹೆಸರಿನಲ್ಲಿ ಪ್ರಸಾದ ಮಾಡದೆ ಉಪವಾಸವಿರುವುದನ್ನು ಶರಣರು ಒಪ್ಪುವುದೇ ಇಲ್ಲ. ಕೆಲವರು ದೇವರ ಹೆಸರಿನಲ್ಲಿ ಉಪ್ಪು ಬಿಡುತ್ತಾರೆ, ಸಿಹಿ ಬಿಡುತ್ತಾರೆ, ಖಾರ ಬಿಡುತ್ತಾರೆ.

"ಲಿಂಗದೇವನ ಒಲಿಸಲು ಬಂದ ಪ್ರಸಾದ ಕಾಯವ ಕೆಡಿಸಲಾಗದು" ಎಂದು ಹೇಳುವ ಗುರು ಬಸವಣ್ಣನವರು, ದೇಹವನ್ನು ಆರೋಗ್ಯಯುತವಾಗಿ ಕಾಪಾಡಿಕೊಳ್ಳಬೇಕು ಎನ್ನುತ್ತಾರೆ. ಬಿಡಬೇಕಾಗಿರುವುದು ಬೇರೆಯೇ ಇದೆ. ಅದನ್ನು ಸಿದ್ಧಯ್ಯ ಪುರಾಣಿಕರು ತುಂಬಾ ಚೆನ್ನಾಗಿ ಹೇಳುತ್ತಾರೆ.

ದೇವಾ ನಿನ್ನ ಹೆಸರಿನಲ್ಲಿ ಉಪ್ಪು ಬಿಟ್ಟವರುಂಟು,
ಸೊಪ್ಪು ಬಿಟ್ಟವರುಂಟು, ತುಪ್ಪ ಬಿಟ್ಟವರುಂಟು,
ತಪ್ಪು ಬಿಟ್ಟವರ ತೋರಾ.
ದೇವಾ ನಿನ್ನ ಹೆಸರಿನಲ್ಲಿ ಕೇಶ ತೊರೆದವರುಂಟು,
ವೇಶ ತೊರೆದವರುಂಟು, ದೇಶ ತೊರೆದವರುಂಟು,
ಆಸೆ ತೊರೆದವರ ತೋರಾ.
ಸ್ವತಂತ್ರರ ಶಿವ ಸಿದ್ಧೇಶ್ವರ ಪ್ರಭುವೆ
ಆಸೆ ತೊರೆದವರು ನಿನಗೆ ಪ್ರಿಯರು.


ಇಲ್ಲಿಯವರೆಗೆ ಮಾಡಿರುವ ತಪ್ಪುಗಳನ್ನು ಬಿಡಬೇಕು. ಅತಿ ಆಸೆಯನ್ನು ಬಿಡಬೇಕು. ಇಲ್ಲಿಯವರೆಗೆ ಸಾಗಿ ಬಂದ ಜೀವನದ ಸಿಂಹಾವಲೋಕನ ಮಾಡಿಕೊಳ್ಳಬೇಕು. ಸ್ವವಿಮರ್ಶೆ ಮಾಡಿಕೊಳ್ಳಬೇಕು, ಅಂತರಾವಲೋಕನ ಮಾಡಿಕೊಳ್ಳಬೇಕು. ಹಿಂದೆ ಮಾಡಿರುವಂಥ ತಪ್ಪುಗಳನ್ನು ತಿದ್ದಿಕೊಂಡು ಭಕ್ತಿಮಾರ್ಗದಲ್ಲಿ ನಡೆದರೆ ದೇವರೊಲುಮೆಯಾಗುತ್ತದೆ.

ಅರಿಯದೆಸಗಿದ ತಪ್ಪು| ಅರಿತರದು ತನಗೊಳಿತು
ಅರಿತರಿತು ಎಸಗಿದ ತಪ್ಪು| ನಯನವನು
ಇರಿದುಕೊಂಬಂತೆ ಸರ್ವಜ್ಞ||

ಮತ್ತೆ ಮತ್ತೆ ಮಾಡುವಂಥ ತಪ್ಪುಗಳನ್ನಾಗಲೀ ಮೂಢಾಚರಣೆಗಳನ್ನಾಗಲೀ ಮಾಡಬಾರದು. ಏಕೆಂದರೆ ``ನಿಚ್ಚ ನಿಚ್ಚ ಪ್ರಾಯಶ್ಚಿತರನೊಲ್ಲ ನಮ್ಮ ಲಿಂಗದೇವರು" ಎನ್ನುತ್ತಾರೆ ಗುರು ಬಸವಣ್ಣನವರು.

ನಾನು ಈ ಮೊದಲೇ ಹೇಳಿದ ಹಾಗೆ ಶಿವರಾತ್ರಿ ಎಂದರೆ, ನಮ್ಮನ್ನು ನಾವು ಎಚ್ಚರಿಸಿಕೊಳ್ಳವ ರಾತ್ರಿ. ಒಂದು ಮನೆ ಕಟ್ಟಬೇಕಾದರೆ ಅದರ ತಳಪಾಯ ತುಂಬಾ ಗಟ್ಟಿಯಿರಬೇಕು ಮತ್ತು ಮನೆಕಟ್ಟುವ ಜಾಗದಲ್ಲಿ ಹೆಗ್ಗಣಗಳು ಇರಬಾರದು. ಹೆಗ್ಗಣಗಳಿದ್ದರೆ ಎಷ್ಟೇ ದೊಡ್ಡ ಮನೆಕಟ್ಟಿದರೂ ಅವುಗಳು ಕೆದರಿ ಹಾಕುತ್ತವೆ. ಅದೇ ರೀತಿ ನಾವು ಸದ್ಭಕ್ತಿಯ ಮನೆ ಕಟ್ಟಿಕೊಳ್ಳಬೇಕಾದರೆ, ಸುಜ್ಞಾನ ಮತ್ತು ನೈತಿಕತೆ ಎನ್ನುವ ತಳಪಾಯ ಗಟ್ಟಿಯಿರಬೇಕು.

ಹೆಗ್ಗಣವನಿಕ್ಕಿ ನೆಲಗಟ್ಟಿ ಕಟ್ಟಿದಂತೆ ಆಯಿತೆನ್ನ ಕಾಯಗುಣ
ಅಹಂಕಾರ ಪ್ರಲೋಭನೆಗಳೇಕಯ್ಯಾ?
ಕಾಮ ಕ್ರೋಧ ಮದ ಮತ್ಸರಗಳನಿಕ್ಕಿ ಎನ್ನ ಮಾಡಿದಿರಿ,
ಎನ್ನ ಬಾಸಲೆಂದು ಲಿಂಗಯ್ಯ ತಂದೆ.
ಆದಿವ್ಯಾಗಳೆಲ್ಲವ ಕಳೆದು
ನಿರ್ವಾಣವಪ್ಪ ಪದವ ಕರುಣಿಸಯ್ಯಾ
ಕೂಡಲ ಚೆನ್ನಸಂಗಮದೇವಾ. -ಗುರು ಚೆನ್ನಬಸವಣ್ಣನವರು

ಕಾಮ, ಕ್ರೋಧ ಮದ, ಮತ್ಸರಾದಿಗಳು ಭಕ್ತಿಯೆಂಬ ಮನೆಯಲ್ಲಿ ಬಿಟ್ಟ ಹೆಗ್ಗಣಗಳಂತೆ ಯಾವಾಗ ಈ ಮನೆಯನ್ನು ನಾಶಮಾಡುತ್ತವೆಯೋ ಗೊತ್ತಿಲ್ಲ. ರಾವಣ ಅಪ್ರತಿಮ ಶಿವಭಕ್ತ. ಶಿವಭಕ್ತಿಯಲ್ಲಿ ಅವರನ್ನು ಮೀರಿಸುವವರು ಯಾರೂ ಇಲ್ಲ. ಹಿಮಾಲಯದಲ್ಲಿ ತಪಸ್ಸನ್ನು ಮಾಡಿ ಶಿವನಿಂದ ಶಿವಲಿಂಗವನ್ನು ಪಡೆದುಕೊಂಡಿದ್ದರು. ಅಪ್ರತಿಮ ನಾದಯೋಗಿಯಾಗಿದ್ದರು ಆದರೆ ಅವನಲ್ಲಿ ಕಾಮ, ಕ್ರೋಧ, ಮದ, ಮತ್ಸರಾದಿಗಳು ತುಂಬಿ ತುಳುಕುತ್ತಿದ್ದವು. ಅದಕ್ಕಾಗಿಯೇ ಅವರು ಅರೆ ಆಯುಷ್ಯವಾಗಿ ನಾಶವಾಗಿರುವುದನ್ನು ಕಾಣುತ್ತೇವೆ. ಭಕ್ತಿಯನ್ನು ಮಾಡುವಂಥ ಭಕ್ತ ತುಂಬಾ ಎಚ್ಚರದಿಂದಿರಬೇಕಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ನಾಶ ಖಂಡಿತ. ಹಲವಾರು ದಿನಗಳಿಂದ ಗಳಿಸಿಕೊಂಡ ಭಕ್ತಿಕೆಡುತ್ತದೆ.

ಹಲವು ಕಾಲ ಧಾವತಿಗೊಂಡು ಒಟ್ಟಿದ ಹಿದಿರೆಯು
ಒಂದು ಮಿಡುಕುರಿಯಲ್ಲಿ ಬೇವಂತೆ
ಸಲೆ ನೆಲೆ ಸನ್ನಿಹಿತನಾಗಿಪ್ಪ ಶರಣನ ಭಕ್ತಿ
ಒಂದನಾಯತದಿಂದ ಕೆಡುವುದು.
ಸ್ವಧರ್ಮದಲ್ಲಿ ಗಳಿಸಿದ ಪಿತನ ಧನವ
ಅಧರ್ಮದಲ್ಲಿ ಕೆಡಿಸುವ ಸುತನಂತೆ
ಶಿವನ ಸೊಮ್ಮು ಶಿವಂಗೆ ಮಾಡದೆ ಅನ್ಯಕ್ಕೆ ಮಾಡಿದಡೆ
ತನ್ನ ಭಕ್ತಿತನ್ನನ್ನೇ ಕೆಡಿಸುವುದು ಕೂಡಲಸಂಗಮದೇವಾ.

ಕಬ್ಬು ಬೆಳೆಯುವ ಭಾಗದಲ್ಲಿ ಕಬ್ಬಿನ ರಾಶಿ ಮಾಡಲಿಕ್ಕೆ ಗಾಣ ಕಟ್ಟುತ್ತಾರೆ. ಕಬ್ಬು ಹಿಂಡಿದ ಮೇಲೆ ಉಳಿದಿರುವ ಸಿಪ್ಪೆಯನ್ನು ಒಣಗಿಸಿ, ಕಬ್ಬಿನ ಹಾಲು ಕಾಯಿಸಿ ಬೆಲ್ಲ ಮಾಡಲು ಸೌದೆಯಾಗಿ ಉಪಯೋಗಿಸುತ್ತಾರೆ. ಕೊನೆಯಲ್ಲಿ ದಿನವೂ ಸ್ವಲ್ಪ ಸ್ವಲ್ಪ ಸಿಪ್ಪೆಯನ್ನು ಮುಂದಿನ ವರ್ಷದ ಆರಂಭದಲ್ಲಿ ಸೌದೆಗಾಗಿ ಉಪಯೋಗಿಸಲು ಬಣವೆ (ಹಿದಿರೆ)ಯೊಟ್ಟುತ್ತಾರೆ. ಇಂಥ ಬಣವೆಯನ್ನು ಸುಮಾರು ದಿನಗಳ ಕಾಲ ಸಿಪ್ಪೆಯನ್ನು ಸಂಗ್ರಹ ಮಾಡಿ ಒಟ್ಟುತ್ತಾರೆ. ಇಂಥ ಬಣವೆಯನ್ನು ಒಂದು ವರ್ಷದವರೆಗೆ ಅತೀ ಜಾಗ್ರತೆಯಿಂದ ಕಾಯ್ದುಕೊಳ್ಳಬೇಕಾಗುತ್ತದೆ. ಒಂದೇ ಒಂದು ಸಣ್ಣ ಬೆಂಕಿಯ ಕಿಡಿ ಹತ್ತಿದರೂ ಬಣವೆಯು ಉರಿದು ಭಸ್ಮವಾಗುತ್ತದೆ. ಅದೇ ರೀತಿ ಭಕ್ತಿಮಾರ್ಗದಲ್ಲಿ ನಡೆವ ಭಕ್ತನು ತನ್ನ ಸದ್ಭಕ್ತಿಯ ಬಣವೆಯನ್ನು ಅತೀ ಜಾಗೃತೆಯಿಂದ ಕಾಯ್ದುಕೊಳ್ಳಬೇಕು. ಮನದಲ್ಲಿ ದೇವರ ಕರಣೆಯ ಬಗ್ಗೆ, ಗುರುವಿನ ಅನುಗ್ರಹದ ಬಗ್ಗೆ ಶಂಕೆ ಅನುಮಾನ ಮೂಡದಂತೆ ನೋಡಿಕೊಳ್ಳಬೇಕು. ಪರದೈವ, ಪರ`ನ, ಪರಸತಿ ಇವೂ ಮೂರು ಅತ್ಯಂತ ಅಪಾಯಕಾರಿಯಾದವುಗಳು. ಇಷ್ಟಲಿಂಗ ಪೂಜೆಯ ಮಾಡುವ ಭಕ್ತನು ಅನ್ಯದೇವರ ಪೂಜೆ ಮಾಡಲಾಗದು. ಹಾಗೆ ಮಾಡಿದರೆ ಹಿಂದೆ ಮಾಡಿದ ಭಕ್ತಿಹಾನಿಯಾದಂತೆಯೇ ಸರಿ.

ಪರಿವಿಡಿ (index)
*
Previousಲಿಂಗಾಯತ ಸ್ವತಂತ್ರ ಧರ್ಮವಚನಕಾರ್ತಿಯರ ಧ್ವನಿಗಳುNext
*