ಶರಣೆ ಜಯದೇವಿತಾಯಿ ಲಿಗಾಡೆ | ಉತ್ತರಾಯಣ ಪುಣ್ಯಕಾಲ |
ಶುಭ ಮುಹೂರ್ತವೆಂದರೇನು?. |
ವ್ಯಕ್ತಿ ಯಾವುದೇ ಕೆಲಸ ಪ್ರಾರಂಭಿಸುವ ಮೊದಲು ಅದರ ಮೂಹೂರ್ತ ನಿರ್ಣಯಿಸುವುದು ವಾಡಿಕೆ. ಆ ಕೆಲಸ ವೈಯುಕ್ತಿಕ,
ಕೌಟುಂಬಿಕ, ಸಾಮಾಜಿಕ ಅಥವಾ ರಾಷ್ಟ್ರೀಯ ಯಾವುದೇ ಆಗಿರಲಿ ಅಲ್ಲೆಲ್ಲ ’ಬಹುಜನ ಹಿತಾಯ ಬಹುಜನ ಸುಖಾಯ’
ಎಂಬ ತತ್ವವನ್ನು ಅನುಸರಿಸುವುದು ಸಾರ್ವಕಾಲಿಕ, ಸಾರ್ವದೈವಿಕ. ಆದರೆ ವರ್ತಮಾನ ’ವಿಜ್ಞಾನಯುಗ’ದಲ್ಲಿ
ಇದರ ಆಚರಣೆಯಲ್ಲಿ ನಾವು ಕಾಣುತ್ತಿರುವುದೇನು? ನಾಲ್ಕು ಪ್ರಾತಿನಿಧಿಕ ನಿದರ್ಶನಗಳನ್ನು ಪರಿಶೀಲಿಸೋಣ.
ಒಂದು ವೈಯುಕ್ತಿಕ, ಹೊಸ ಹುದ್ದೆಗೆ ಒಡನೆ ಹಾಜರಾಗಲು ಅಭ್ಯರ್ಥಿಗೊಬ್ಬನಿಗೆ ಆಣತಿ ಬಂದಿದೆ. ಆಗ ಆತ
ಏನು ಮಾಡುತ್ತಾನೆ? ಸಾಧಾರಣವಾಗಿ ಒಬ್ಬ ಜೋಯಿಸನನ್ನು ಕಂಡು ಇಲ್ಲವೇ ತಾನೇ ಪಂಚಾಂಗ ನೋಡಿ ತನ್ನ ಜನ್ಮತಾರೆಗೆ
ಶುಭ ಮುಹೂರ್ತ ಯಾವುದೆಂದು ತಿಳಿದು ಆ ಪ್ರಕಾರ ವರ್ತಿಸುವುದನ್ನು ಕಾಣತ್ತೇವೆ. ರಾಹುಕಾಲ ಸರ್ವಥಾ ವರ್ಜ್ಯವೆಂಬುದು
ಆತನ ನಂಬಿಕೆ.
ಎರಡು ಕೌಟುಂಬಿಕ, ಮಗಳಿಗೋ ಮಗನಿಗೋ ಮದುವೆ ಏರ್ಪಡಿಸಬೇಕು. ಜಾತಕಗಳ ಹೊಂದಾಣಿಕೆ ಇದೆಯೇ ಎಂಬ ಪರಿಶೀಲನೇ
ಮೊದಲ ಹೆಜ್ಜೆ. ಬಳಿಕ ಮುಹೂರ್ತ ನಿರ್ಧಾರ. ತಳದಲ್ಲಿಯೇ ಧೋರಣೆ: "ಇವೆಲ್ಲ ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದವು.
ಆದ್ದರಿಂದ ಇಲ್ಲಿ ವೃಥಾ ಚರ್ಚೆ ಬೇಡ" ಎಂಬ ನಿರ್ಲಕ್ಷ್ಯ ಅಥವಾ ಉಢಾಫೆ.
ಮೂರು, ಸಾಮಾಜಿಕ ಹೊಸ ಶಾಲೆಯ ಸ್ಥಾಪನೆ, ಸಮುದಾಯ ಭವನದ ನಿರ್ಮಾಣ, ಸಾರ್ವಜನಿಕ ಆಸ್ಪತ್ರೆಯ ಶಿಲಾನ್ಯಾಸ
ಮುಂತಾದ ಸಂದರ್ಭಗಳಲ್ಲಿ ಶುಭ ಮುಹೂರ್ತಕ್ಕೆ ಶರಣಾಗುವದೇ ಸಾಧಾರಣ ನೀತಿ.
ನಾಲ್ಕು, ಹೊಸ ಸರ್ಕಾರ ಎಂದು ಮತ್ತು ಎಷ್ಟು ಹೊತ್ತಿಗೆ ಪ್ರಮಾಣವಚನ ಸ್ವೀಕರಿಸಬೇಕು? ಸಂವಿಧಾನರೀತ್ಯ
ಭಾರತ ಒಂದು ಧರ್ಮನಿರಪೇಕ್ಷ ಪ್ರಜಾಪ್ರಭುತ್ವ, ಇಲ್ಲಿ ಎಲ್ಲ ಧರ್ಮಗಳವರಿಗೂ ಸಮಾನ ಗೌರವ ಯಾವ ಧರ್ಮಮೂ
’ಅಧಿಕ ಸಮಾನವಲ್ಲ, ಅಧಿಕ ಗೌರವಾರ್ಹವಾದುದೂ ಅಲ್ಲ’. ಆದರೆ ಆಚರಣೆಯಲ್ಲಿ ಕಾಣುತ್ತಿರುವುದೇನು? ಪುನ:
ಶುಭ ಮುಹೂರ್ತದ ಅನ್ವೇಷಣೆ!!.
ವೈಯುಕ್ತಿಕ ಸೌಕರ್ಯ, ಕೌಟುಂಬಿಕ ಸಾಮರಸ್ಯ, ಸಾಮಾಜಿಕ ಅನುಕೂಲತೆ ಮತ್ತು ರಾಷ್ಟ್ರೀಯ ಹಿತಾಸಕ್ತಿ ಇವುಗಳಿಗೆ
ಅನುಗುಣವಾಗಿ ಇರಬೇಕಾದ ಮುಹೂರ್ತನಿರ್ಣಯ ಖುದ್ದು ಉದ್ದೇಶದ ಮೇಲೇಯೇ ಸವಾರಿ ಮಾಡುತ್ತಿರುವ ಅಂಧಶ್ರದ್ಧೆಗೆ
ವ್ಯಕ್ತಿ ಬಲಿಯಾಗಿರುವುದೇಕೆ? ಶ್ವಾನಲಾಂಗೂಲಚಾಲನೆ ಸೃಷ್ಟಿನಿಯಮ. ಲಾಂಗೂಲ ಶ್ವಾನಚಾಲನೆ? (dog wagging
the tail is okay, never the tail wagging the dog!) ಅವೈಚಾರಿಕತೆಯ ಸಂಕೋಚರಹಿತ ನಗ್ನ ಪ್ರದರ್ಶನವಿದು!
ಜನ ಇದಕ್ಕೆ ಕೊಡುವ ಸಮರ್ಥನೆ ವಿಚಿತ್ರವಾಗಿದ, "ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು
ಪ್ರಶ್ನಿಸಲು ಅಥವಾ ಕೈಬಿಡಲು ನಾವು ಯಾರು? ಒಳ್ಳೆಯದಾಗದಿದ್ದರೂ ಬಿಡಿ, ಕೆಟ್ಟದಂತೂ ಆಗಬಾರದೆಂಬ ಘನೋದ್ದೇಶ
ನಮ್ಮದು".
ಅಂದ ಮೇಲೆ ಶುಭ ಮತ್ತು ಅಶುಭ ಮುಹೂರ್ತ ಎಂದಿವೆಯೇ. ಕಾಲವನ್ನು ಈ ತೆರನಾಗಿ ವಿಭೇದೀಕರಿಸುವುದು ಸಾಧ್ಯವೇ
ಮುಂತಾದ ಪ್ರಶ್ನೆಗಳು ಉದ್ಭವಿಸುತ್ತವೆ.
ಜನರ ಭಾವಕೋಶ (ಹೃದಯ) ಕುರಿತ ಇಂಥ ವಿಷಯದಲ್ಲಿ ನಮ್ಮ ಪ್ರಾಚೀನ ಮಂತ್ರಗಳು "ಸುಮುಹೂರ್ತೇ ಸಾವಧಾನಾ
ಸುಲಗ್ನಾ ಸಾವಧಾನಾ" ಎನ್ನುತ್ತವೆ. ಶರಣರು "ಎಮ್ಮವರು ಬೆಸಗೊಂಡರೆ ಶುಭ ಲಗ್ನವೆನ್ನಿರಯ್ಯಾ", "ಲಗ್ನವೆಲ್ಲಿಯದೋ
ವಿಘ್ನವೆಲ್ಲಿಯದೋ ಲಿಂಗಯ್ಯಾ" ಎಂದಿದ್ದಾರೆ, ಹರಿದಾಸರ ಪ್ರಕಾರ "ಇಂದಿನ ದಿನವೇ ಶುಭ ದಿನವು".
"ಎಲ್ಲ ಸರಿ, ಆದರೇಕೋ ಆ ರೀತಿ ಸಂಪ್ರದಾಯ ಬಿಟ್ಟು ನಡೆಯಲು ಮನವಳುಕುತ್ತದೆ. ಮುಂದೆ ಏನಾದರೂ ಕೆಟ್ಟದಾಗಬಾರದಲ್ಲ?"
ಅಥವಾ ನಿಮ್ಮಷ್ಟು ಎದೆಗಾರಿಕೆ ನಮಗಿಲ್ಲ" ಎಂದು ಮುಂತಾಗಿ ತಿಪ್ಪೆಸಾರಿಸುವುದೇ ಸಾಧಾರಣ ನಡವಳಿಕೆ.
ಈ ತವಡುಕುಟ್ಟುವ ಕೆಲಸ ಬಿಟ್ಟು ಮೂಲ ಪ್ರಶ್ನೆಗಳಿಗೆ ಮರಳೋಣ:
ಕಾಲ ಎಂದರೇನು? ಅದರಲ್ಲಿ ಶುಭ, ಅಶುಭ ಮತ್ತು ತಟಸ್ಥ ಎಂಬ ವಿಭಾಗಗಳಿವೆಯೇ? ವ್ಯಕ್ತಿಯ ಅಥವಾ ಸಮಾಜದ
ಭವಿಷ್ಯ ನಿಜಕ್ಕೂ ಮುಹೂರ್ತಾವಲಂಬಿಯೇ?
ಘಟನೆಗಳ ನಡುವಿನ ಅವಧಿಯೇ ಕಾಲ. ನಿನ್ನೆ ಸೂರ್ಯೋದಯವಾಯಿತು, ಇಂದು ಮತ್ತೆ ಅದು ಘಟಿಸಿದೆ. ಈ ಎರಡು
ಘಟನೆಗಳ ನಡುವೆ ಏನೋ ಒಂದು ಶಾಶ್ವತವಾಗಿ ಸಂದುಹೋಗಿರುವಂಥ ಅನುಭವವಾಗುತ್ತದೆ. ಈ ಅನುಭವವೇ ಕಾಲ. ಎರಡು
ಕ್ರಮಾಗತ ಸೂರ್ಯೋದಯಗಳ ನಡುವಿನ ಅವಧಿಗೆ ದಿವಸ ಎಂದು ಹೆಸರು. ಅಮಾವಾಸ್ಯೆಯಿಂದ ಮುಂದಿನ ಹುಣ್ಣಿಮೆಯ
ತನಕ ಅಥವಾ ಹುಣ್ಣಿಮೆಯಿಂದ ಮುಂದಿನ ಅಮಾವಾಸ್ಯೆಯ ತನಕ ಸಲ್ಲುವ ಅವಧಿಯನ್ನು ಪಕ್ಷ ಎಂದು ಹೆಸರಿಸಿದ್ದೇವೆ.
ಪಕ್ಷದ ಅವಧಿ ಸ್ಥೂಲವಾಗಿ ೧೫ ದಿವಸಗಳು. ಹೀಗೆಯೇ ಮುಂದೆ ಸಾಗಿ ತಿಂಗಳು, ವರ್ಷ ಎಂಬ ನೈಸರ್ಗಿಕ ಕಾಲಮಾನಗಳನ್ನು
ವಿವರಿಸಬಹುದು. ನಿಸರ್ಗದಲ್ಲಿಯ ವಿವಿಧ ವಿದ್ಯಮಾನಗಳನ್ನು ಚಿಕಿತ್ಸಕವಾಗಿ ಗಮನಿಸಿ ವಿಶ್ಲೇಷಿಸಿದರೆ
ಈ ವಿವರಗಳು ತಿಳಿಯುತ್ತವೆ. ಇಲ್ಲಿ ದೈವಿಕ, ಪಾರಲೈಕಿಕ ಅಥವಾ ಆಧ್ಯಾತ್ಮಿಕವಾದುದೇನೂ ಇಲ್ಲ. ಯಾರು
ಬೇಕಾದರೂ ತುಸು ಪರಿಶ್ರಮದಿಂದ ಗ್ರಹಿಸಬಹುದಾದ ಸಂಗತಿಗಳಿವು.
ಮಾನವನ ದೈನಂದಿನ ಚಟುವಟಿಕೆಗಳಗೆ ದಿವಸದ ಅವಧಿಯನ್ನು ಇನ್ನಷ್ಟು ಸೂಕ್ಷ್ಮವಾಗಿ ವಿಭಾಗಿಸುವುದು ಅನಿವಾರ್ಯವಾಯಿತು.
ಕಾರಣ ಬಲು ಸುಲಭ; ನಾವು ನಮ್ಮ ಇಂದ್ರಿಯಗಳ ಮಿತಿಯೊಳಗೆ ಮಾತ್ರ ವ್ಯವಹರಿಸಬಲ್ಲೆವು. ಎಲ್ಲರಿಗೂ ತಿಳಿದಿರುವಂತೆ
ನಾವು ಮಾಡಿಕೊಂಡಿರುವ ವಿಭಾಗಗಳಿವು:
ವಾರ (ಸಾಪ್ತಾಹಿಕ)-week = ೭ ದಿವಸಗಳು- days
೧ ದಿವಸ-day = ೨೪ ಗಂಟೆಗಳು -hours
೧ ಗಂಟೆ-hour = ೬೦ ನಿಮಿಷಗಳು-minutes
೧ ನಿಮಿಷ-minute = ೬೦ ಸೆಕೆಂಡುಗಳು-seconds
ಈ ಸಂಖ್ಯೆಗಳಲ್ಲಿ ಏನಾದರೂ ದೈವಿಕತೆ ಹುದುಗಿದೇಯೇ? ಮಾನವನಿಗೆ ಇವನ್ನೇ ಆಯಲು ಒದಗಿದ ಪ್ರೇರಣೆ ಏನು?
ವರ್ಷದಲ್ಲಿ ಸುಮಾರು ೩೬೦ ದಿವಸಗಳು, ಸುಮಾರು ೧೨ ತಿಂಗಳುಗಳು ಮತ್ತು ಸುಮಾರು ೨೪ ಪಕ್ಷಗಳಿರುವ ಸಂಗತಿ
ಪ್ರಾಚೀನ ಮಾನವನಿಗೆ ನಿಸರ್ಗ ವೀಕ್ಷಣೆಯಿಂದ ತಿಳಿಯಿತು. ಹೀಗೆ ಸಂಖ್ಯೆ ೧೨ ಮತ್ತು ಅದರ ಅಪವರ್ತ್ಯಗಳಿಗೆ
ಪ್ರಾಮುಖ್ಯ ಲಭಿಸಿತು. ಪಕ್ಷದ ಅವಧಿಯ ಘಟಕಗಳನ್ನು ನಮ್ಮ ಇಂದ್ರಿಯಗಳ ಮಿತಿಯೊಳಗೆ ತರುವ ಪ್ರಶ್ನೆ ಕ್ರಿಸ್ತಪೂರ್ವ
ದಿನಗಳಲ್ಲಿ ಪ್ರವರ್ಧಿಸಿದ ಪ್ರಾಚೀನ ನಾಗರಿಕತೆಗಳಿಗೆ ಎದುರಾಯಿತು.
ಭಾರತೀಯ ಋಷಿಗಳು ’ಪಾಕ್ಷಿಕ ವಾರ’ವನ್ನು ಆಚರಣೆಗೆ ತಂದರು. ಆಮಾವಾಸ್ಯೆ, ಹುಣ್ಣಿಮೆ ಮತ್ತು ಎರಡೂ ಪಕ್ಷಗಳಲ್ಲಿಯ
ಪಾಡ್ಯ ಹಾಗೂ ಚತುರ್ದಶಿಗಳು ಅನಧ್ಯಯನ (ರಜೆಯ) ದಿವಸಗಳೆಂದು ಅವರು ಅಂಗೀಕರಿಸಿದರು. ಇನ್ನು ದಿವಸವನ್ನು
ಘಳಿಗೆ, ವಿಘಳಿಗೆಗಳಾಗಿ ವಿಭಾಗಿಸಿ ಮುಹೂರ್ತಗಳನ್ನು ನಿರ್ಣಯಿಸುವ ಕ್ರಮ ರೂಢಿಗೆ ಬಂತು ಮೂಲತ: ’ಗಗನ
ಗಡಿಯಾರ’ಗಳಾಗಿರುವ ಚಂದ್ರ ಸೂರ್ಯರೇ ಇಲ್ಲಿಯ ಪ್ರೇರಕ ಆಕಾಶಕಾಯಗಳು.
ಸಮಕಾಲೀನವಾಗಿ ಚೀನಾದೇಶದಲ್ಲಿ ’ಪಾಂಚಮಿಕ ವಾರ’ವೂ ಈಜಿಪ್ಟಿನಲ್ಲಿ ’ದಾಶಮಿಕ ವಾರ’ವೂ ಬಳಕೆಯಲ್ಲಿದ್ದುವು,
ಸ್ಥಳೀಯ ಭೌಗೋಲಿಕ ಸ್ಥಿತಿ ಗತಿ, ಹವಾ ವೈಪರೀತ್ಯಗಳು, ನಾಗರಿಕತೆಯ ಅಗತ್ಯಗಳು, ದೇಶದ ಸಹಜ ಮಿತಿಗಳು
ಮುಂತಾದವನ್ನು ಗಮನಿಸಿ ಇಂಥ ಸೌಕರ್ಯಗಳು ಬಳಕೆಗೆ ಬಂದವು. ಕಾಲ ಸಂದಂತೆ, ಜನಸಂಚಾರ ಬೆಳೆದಂತೆ, ಕೊಡುಕೊಳು
ವ್ಯವಹಾರ ವರ್ಧಿಸಿದಂತೆ ಕ್ರಿಸ್ತಪೂರ್ವ ಸುಮಾರು ೮ನೇಯ ಶತಮಾನ ಬಂದಿತು. ಆಗ ಟೈಗ್ರಿಸ್ ನದಿಯ ಬ್ಯಾಬಿಲೋನ್‌ನ
(ಕಾಲ್ಡಿಯಾ) ಪ್ರಶಾಂತ ವಿಸ್ತಾರದಲ್ಲಿ ವಿವಿಧ ದೇಶಗಳ ಚಿಂತಕರು ಜಮಾಯಿಸಿದರು -ನಮ್ಮ ಕಾಶಿ, ಪಾಟಲೀಪುತ್ರ
ವಿಜಯನಗರ ಮುಂತಾದ ಜ್ಞಾನ-ವಿಜ್ಞಾನ ಕೇಂದ್ರದಲ್ಲಿಯಂತೆ.
ಆಗ ಬೆಳಕಿಗೆ ಬಂದ ಹೊಸ ವಿಚಾರ: ಭಾರತೀಯರ ಪಾಕ್ಷಿಕ ವಾರದ ಅವಧಿ ವ್ಯವಹಾರಿಕವಾಗಿ ಅತಿ ದೀರ್ಘ, ಚೀನೀಯರ
ಪಾಂಚಮಿಕ ವಾರ ಅತಿ ಹ್ರಸ್ವ (ಚಿಕ್ಕ). ಆದ್ದರಿಂದ ಇವೆರಡೂ ಅಂಗೀಕಾರಯೋಗ್ಯವಲ್ಲ. ಇನ್ನು ಈಜಿಪ್ಟಿನವರ
ದಾಶಮಿಕ ವಾರ? ಸಂದೇಹವೆದುರಾದಾಗ ನಿಸರ್ಗಕ್ಕೆ ಶರಣಾಗು ಎಂಬುದೊಂದು ಉಪಯುಕ್ತ ಅನುಭವಜನ್ಯ ನಿಯಮ. ಈ
ಧಾಟಿಯಲ್ಲಿ ಹಲವು ವರ್ಷ ಪರ್ಯಂತ ಚಿಂತನೆ, ಚರ್ಚೆ ಮುಂದುವರಿದಾಗ ಸಂಖ್ಯೆ ೭ರ ಸುತ್ತಲೂ ಬಹುಮತ ಹೆಪ್ಪುಗಟ್ಟಿತು:
ಆಕಾಶದಲ್ಲಿ ೭ ಚರ ’ಗ್ರಹ’ಗಳಿವೆ (ಅಂದಿನ ಕಾಲಕ್ಕೆ ಗುರುತಿಸಲ್ಪಟ್ಟವು) (at that time known)
- ಸೂರ್ಯ, ಚಂದ್ರ, ಕುಜ, ಬುಧ, ಗುರು, ಶುಕ್ರ ಮತ್ತು ಶನಿ, ಸ್ಥೂಲವಾಗಿ ಪಕ್ಷದ ಅರ್ಧಾವಧಿ ೭. ಅಂದ
ಮೇಲೆ೭ ಒಂದು ದೈವಿಕ ಸಂಖ್ಯೆಯೇ ಹೌದು! ಭಾರತೀಯ ಚಿಂತನೆಯಲ್ಲಿ ಸಪ್ತರ್ಷಿಗಳು, ಚತುರ್ದಶ ಭುವನಗಳು
ಮುಂತಾದವುಗಳಿಗೆ ನೀಡಿರುವ ಪ್ರಾಮುಖ್ಯವನ್ನು ಗಮನಿಸಿಬೇಕು. ಬೈಬಲ್ಲ ಪ್ರಕಾರ ಭಗವಂತ ೬ ದಿವಸಗಳಲ್ಲಿ
ಸೃಷ್ಟಿಕಾರ್ಯ ಮುಗಿಸಿ ೭ನೇಯ ದಿವಸ ವಿಶ್ರಾಂತಿ ಪಡೆದ. ಸಾಪ್ತಾಹಿಕದ ಸುಂದರ ಮತ್ತು ಅನುಕೂಲ ಪರಿಕಲ್ಪನೆ
ಕ್ರಮೇಣ ಪ್ರಪಂಚಾದ್ಯಂತ ವ್ಯಾಪಿಸಿ ರೂಢಿಗೆ ಬಂತು, ಕ್ರಿಸ್ತ ಶಕ ೧೨ನೇಯ ಶತಮಾನದ ತನಕ ಭಾರತದಲ್ಲಿ
ಪಾಕ್ಷಿಕ ವಾರವೇ ಬಳಕೆಯಲ್ಲಿತ್ತು. ಇಂದಿಗಾದರೂ ವೈದಿಕರು ’ಸಂಕಲ್ಪ ಮಂತ್ರ’ದಲ್ಲಿ ಇದೇ ಸಂಪ್ರದಾಯವನ್ನು
ಪಾಲಿಸುವುದನ್ನು ಕಾಣುತ್ತೇವೆ.
ಏಳು ದಿವಸಗಳ ವಾರದ, ಅಂದರೇ ಸಾಪ್ತಾಹಿಕದ ತಳಪರಿಕಲ್ಪನೆಯಲ್ಲಿ ಯಾವುದೇ ನೈಸರ್ಗಿಕ ತಥ್ಯವಿಲ್ಲ ಇದೊಂದು
ಅನುಕೂಲ ಏರ್ಪಾಡು ಮಾತ್ರ ಎಂಬ ಸಂಗತಿ ಕ್ರಮೇಣ ಅರಿವಿಗೆ ಬಂದಿತು. ಏಕೆಂದರೆ ಸೂರ್ಯ ಒಂದು ನಕ್ಷತ್ರ,
ಚಂದ್ರ ಭೂಮಿಯ ಉಪಗ್ರಹ ಎಂಬ ವಾಸ್ತವ ಚಿತ್ರ ೧೬ನೇಯ ಶತಮಾನದಲ್ಲಿ ಪ್ರಕಟವಾಯಿತು. ಆಗ ಭೂಕೇಂದ್ರವಾದವನ್ನು
ಸೂರ್ಯ ಕೇಂದ್ರವಾದ ವಿಸ್ಥಾಪಿಸಿತು. ಆದರೂ ಸಾಪ್ತಾಹಿಕದ ಪರಿಕಲ್ಪನೆ ಇದರ ಉಪಯುಕ್ತತೆಯ ಕಾರಣವಾಗಿ
ಜನಜೀವನದ ಅವಿಭಾಜ್ಯ ಅಂಗವಾಗಿ ಉಳಿದಿದೆ.
ದಿವಸನಾಮಗಳ ಅನುಕ್ರಮದಲ್ಲಿರುವ ತಾರ್ಕಿಕ ಚಿಂತನೆ ಕೂಡ ಬ್ಯಾಬಿಲೋನಿಯರ ಕೊಡುಗೆ. ಪ್ರಾಚೀನ ದಾಖಲೆಗಳನ್ನೂ
ಪ್ರತ್ಯಕ್ಷ ವೀಕ್ಷಣೆಗಳನ್ನೂ ಆಧರಿಸಿ ಅವರು ೭ ’ಗ್ರಹ’ಗಳ ಪರಿಭ್ರಣಾವಧಿಗಳನ್ನು (ನಮಗೆ ಗೋಚರಿಸುವಂತೆ
ಈ ’ಗ್ರಹ’ಗಳು ಪರಿಭ್ರಮಿಸಲು ತೆಗೆದುಕೊಳ್ಳುವ ಅವಧಿ) ನಿರ್ಣಯಿಸಿ ಅವನ್ನು ಅವರೋಹೀ(ಇಳಿಕೆ) ಕ್ರಮದಲ್ಲಿ
ಅಳವಡಿಸಿದರು:
೧ | ೨ | ೩ | ೪ | ೫ | ೬ | ೭ |
ಶನಿ, | ಗುರು, | ಕುಜ, | ಸೂರ್ಯ, | ಶುಕ್ರ, | ಬುಧ, | ಚಂದ್ರ. |
ಪ್ರತಿ ದಿವಸದ ೨೪ ಗಂಟೆಗಳಿಗೆ ಇದೇ ಕ್ರಮದಲ್ಲಿ ಅಧಿಪತಿಗಳನ್ನು ನೇಮಿಸಿದರು ಮತ್ತು ಸೂರ್ಯೋದಯ ಮುಹೂರ್ತದಲ್ಲಿ
ಅಧಿಪತಿಯಾಗಿರುವ ’ಗ್ರಹ’ದ ಹೆಸರನ್ನು ಆ ದಿವಸಕ್ಕೆ ನಿಗದಿ ಮಾಡಿದರು ಕೂಡ.
ಉದಾಹರಣೆಗೆ, ನಿರ್ದಿಷ್ಟ ದಿನವೊಂದರ ಆರಂಭದ ಕ್ಷಣದಲ್ಲಿ (ಸೂರ್ಯೋದಯ) ಗುರು ಅಧಿಪತಿಸ್ಥಾನದಲ್ಲಿದೆಯೆಂದು
ಭಾವಿಸೋಣ. ಆದ್ದರಿಂದ ಆಂದಿನ ಹೆಸರು ಗುರುವಾರ ಮತ್ತು ಅಂದು ೮, ೧೫, ೨೨ನೆಯ ಗಂಟೆಗಳ ಅಧಿಪತಿ ಕುಡ
ಗುರು ಎಂಬುದು ಮೇಲಿನ ಶನಿ-ಚಂದ್ರ ಅನುಕ್ರಮದಿಂದ ಸ್ಪಷ್ಟ. ಮುಂದೆ ೨೩,೨೪ ಮತ್ತು ೨೫ನೇಯ ಗಂಟೆಗಳ ಅಧಿಪತಿಗಳು
ಅನುಕ್ರಮವಾಗಿ ಕುಜ, ಸೂರ್ಯ ಮತ್ತು ಶುಕ್ರ, ಇಂದಿನ ೨೫ನೇಯ ಗಂಟೆ ಅಂದರೆ ನಾಳೆಯ ೧ನೆಯ (ಆರಂಭದ) ಗಂಟೆ
ಎಂದರ್ಥ. ಆದ್ದರಿಂದ ನಾಳೆಯ ಅಧಿಪತಿ ಶುಕ್ರ. ಎಂದೇ ನಾಳೇ ಶುಕ್ರವಾರ.
ಶನಿ | ಗುರು | ಕುಜ | ಸೂರ್ಯ | ಶುಕ್ರ | ಬುಧ | ಚಂದ್ರ. | ಶನಿ | ಗುರು | ಕುಜ | ಸೂರ್ಯ | ಶುಕ್ರ | ಬುಧ | ಚಂದ್ರ. | ಶನಿ | ಗುರು | ಕುಜ | ಸೂರ್ಯ | ಶುಕ್ರ | ಬುಧ | ಚಂದ್ರ. | ಶನಿ | ಗುರು | ಕುಜ | ಸೂರ್ಯ | ಶುಕ್ರ | ಬುಧ | ಚಂದ್ರ. |
1 | 2 | 3 | 4 | 5 | 6 | 7 | 8 | 9 | 10 | 11 | 12 | 13 | 14 | 15 | 16 | 17 | 18 | 19 | 20 | 21 | 22 | 23 | 24 | 25 | 26 | 27 | 28 |
ಇದೇ ಪ್ರಕಾರ ಮುಂದುವರಿದರೆ ಪ್ರಚಲಿತ ದಿವಸ- ನಾಮಕರಣ ಸೂತ್ರದ ಆದಿತ್ಯವಾರ, ಸೋಮವಾರ, ಮಂಗಳವಾರ, ಬುಧವಾರ,
ಗುರುವಾರ, ಶುಕ್ರವಾರ, ಶನಿವಾರ ಹಿನ್ನೆಲೆ ತರ್ಕ ಅರ್ಥವಾಗುತ್ತದೆ. ಸೊನ್ನೆಯ (೦) ಉಪಜ್ಞೆ (invention)
ಎಣಿಕೆಯ ವಿಧಾನಕ್ಕೆ ಹೇಗೋ ಹಾಗೆ ಸಾಪ್ತಾಹಿಕದ ಉಪಜ್ಞೇ ದಿನಾಂಕ ಪಟ್ಟಿಯಲ್ಲಿ ಒಂದು ವಿನೂತನ ಸುಧಾರಣೆ.
ಈ ವಿವರಣೆಯಿಂದ ನಾಲ್ಕು ಮುಖ್ಯ ಅಂಶಗಳು ತಿಳಿಯುತ್ತವೆ:
೧. ಆಕಾಶಕಾಯ ಮತ್ತು ಅದರ ಹೆಸರನ್ನು ಪಡೆದಿರುವ ದಿವಸ ಇವುಗಳ ನಡುವೆ ಯಾವ ವೈಜ್ಞಾನಿಕ ಸಂಬಂಧವೂ ಇಲ್ಲ.
ಅಂದರೆ ಗಗನವನ್ನು ನೋಡಿ ಈಗ ಹಗಲೋ ಇರುಳೋ ಮತ್ತು ಇಂದಿನ ತಿಥಿ (ಚಂದ್ರನ ನೆಲೆ ಮತ್ತು ಕಲೆ) ಏನು ಎಂಬ
ವಿವರಗಳನ್ನು ಅರಿಯಬಹುದು. ಆದರೆ ದಿವಸದ ಹೆಸರನ್ನು ಹೇಳಲಾಗುವುದಿಲ್ಲ. ಆರ್ಥಾತ್ ಬಾನಿನಲ್ಲಿ ದಿವಸನಾಮ
ಪ್ರಕಟವಾಗುವುದಿಲ್ಲ.
೨. ಸಾಪ್ತಾಹಿಕದಲ್ಲಿ ೭ ದಿವಸಗಳಿರುವುದೂ ಆಕಾಶದಲ್ಲಿ (ಅಂದು) ೭ ಚರಕಾಯಗಳನ್ನು ಗುರುತಿಸಲಾದುದೂ ಕೇವಲ
ಆಕಸ್ಮಿಕ. ಇದರ ಹಿನ್ನೆಲೆಯಲ್ಲಿ ನಿಸರ್ಗದ ಯಾವ ಯೋಜನೆಯೂ ಅಡಗಿಲ್ಲ. ಅರ್ಥಾತ್. ಬಾನಿನಲ್ಲಿ ಸಾಪ್ತಾಹಿಕ
ಪರಿಕಲ್ಪನೆ ಸಿಂಧುವಲ್ಲ.
೩. ಸಾಪ್ತಾಹಿಕ ಏರ್ಪಾಡಿನಲ್ಲಿ ೭೨೦ ವಿವಿಧ ಜೋಡಣೆಗಳು ಇರುವುದು ಸಾಧ್ಯ, ಆ ಪೈಕಿ ಈಗ ಚಾಲ್ತಿಯಲ್ಲಿರುವುದನ್ನು
ಮಾತ್ರ ಆಯುವಲ್ಲಿ ನಮ್ಮ ಪ್ರಾಚೀನರು ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ನಮ್ಮ ಸೌಕರ್ಯಕ್ಕಾಗಿ
ನಾವು ಬಳಕೆಗೆ ತಂದಿರುವ ಏರ್ಪಾಡು ಇದು. ಅರ್ಥಾತ್. ಬಾನಿನಲ್ಲಿ ಮಾನವಕೃತ ಕಟ್ಟುಕಟ್ಟಲೆಗಳಿಗೆ ಮನ್ನಣೆ
ಇಲ್ಲ.
೪. ಭೂಕೇಂದ್ರವಾದ ಪ್ರಚಲಿತವಾಗಿದ್ದ ಆ ದಿನಗಳಂದು ಭೂಮಿಗೆ ಸಹಜವಾಗಿ ವಿನಾಯಿತಿ ದೊರೆಯಿತು. ರಾಹು,
ಕೇತುಗಳಿಗೆ ಭೌತ ಆಸ್ತಿತ್ವವಿಲ್ಲವಾದ್ದರಿಂದ ಇವು (ಅಂದಿನ) ಜ್ಞಾತ ೭ ಚರ ಆಕಾಶಕಾಯಗಳ ಯಾದಿಗೆ ಸೇರಲು
ಅರ್ಹತೆ ಗಳಿಸಲಿಲ್ಲ. ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಿದವನಿಗೆ ಮಾತ್ರ ಋತದ ಕಿಂಚಿದ್ದರ್ಶನವಾದರೂ
ಆಗುವ ಸಾಧ್ಯತೆ ಉಂಟು ಅಲ್ಲವೇ?
ಆದ್ದರಿಂದ ಅನವರತ ಗತಿಶೀಲವಾಗಿರುವ ಕಾಲವನ್ನು ಕೆಟ್ಟಕಾಲ, ಒಳ್ಳೆಕಾಲ, ಶುಭಮುಹೂರ್ತ, ಅಶುಭಮಹೂರ್ತ,
ರಾಹುಕಾಲ, ಗುಳಿಕಕಾಲ, ಯಮಗಂಡಕಾಲ ಎಂದು ಮುಂತಾಗಿ ವಿಭಾಗಿಸಿ ತದನುಸಾರ ವರ್ತಿಸುವುದು ಪೂರ್ತಿ ಅವೈಜ್ಞಾನಿಕ,
ಬುದ್ಧಿ ಮೌಢ್ಯದ ಲಕ್ಷಣವಿದು. ನಿಜಕ್ಕೂ ಈ ಹಿಂದೆ ಹೇಳಿದಂತೆ "ಇಂದಿನ ದಿನವೇ ಶುಭದಿನವು!" ನಮ್ಮ ಮಾನಸಿಕ
ವಿಕಾರ ವಿಕೃತಿಗಳನ್ನೂ ಕಲ್ಪನಾವಿಲಾಸಗಳನ್ನೂ ಜಡ ಮತ್ತು ಮತಿರಹಿತ ನಿಸರ್ಗಕ್ಕೆ ಅನ್ವಹಿಸಿ ಅದಕ್ಕೆ
’ಶಾಂತಿ’ ಒದಗಿಸಲು ಇಲ್ಲದ ಶಾಸ್ತ್ರ ಮತ್ತು ಸಲ್ಲದ ವಿಧಿಗಳಿಗೆ ಶರಣಾಗಿ ನಡೆಯುವ ಬುದ್ಧಿಹೀನರನ್ನು
ಕಂಡಾಗ "ನಗೆಯು ಬರುತಿದೆ ಎನಗೆ ನಗೆಯು ಬರುತಿದೆ!".
ಗ್ರಂಥ ಋಣ: "ವೈಜ್ಞಾನಿಕ ಮನೋಧರ್ಮ ಎಂದರೇನು?", ಲೇ:ಜಿ.ಟಿ. ನಾರಾಯಣರಾವ್, ಪ್ರಕಾಶಕರು: ನಿರ್ದೇಶಕರು, ಪ್ರಸಾರಾಂಗ, ಮಾನಸಗಂಗೋತ್ರಿ, ಮೈಸೂರು-೬, ೨೦೦೭.
*ಶರಣೆ ಜಯದೇವಿತಾಯಿ ಲಿಗಾಡೆ | ಉತ್ತರಾಯಣ ಪುಣ್ಯಕಾಲ |