ಶ್ರೀ ಸಿದ್ಧಗಂಗಾ ಮಠ

*

ಶರಣರ ನಾಡಾದ ಶ್ರೀ ಕ್ಷೇತ್ರ ಸಿದ್ಧಗಂಗಾ ಮಠ.

ಶ್ರೀ ಸಿದ್ಧಗಂಗಾ ಕ್ಷೇತ್ರ ಬೆಂಗಳೂರು-ಪುಣಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಳೂರಿನಿಂದ 66 ಕಿಮೀ ದೂರದ ತುಮಕೂರು ನಗರಕ್ಕೆ ಹೊಂದಿಕೊಂಡಿದೆ. ಶ್ರೀ ಮಠವು 14ನೇ ಶತಮಾನದಲ್ಲಿ ಸ್ಥಾಪಿಸಲ್ಪಟ್ಟದೆ. ಶ್ರೀ ಸಿದ್ಧಗಂಗಾ ಮಠ ಶ್ರೀ ಗೋಶಾಲ (ಶ್ರೀಗೋಸಲ) ಸಿದ್ಧೇಶ್ವರ ಸ್ವಾಮಿಜಿಯವರಿಂದ ಸ್ಥಾಪಿತವಾಗಿದೆ.

ಸಿದ್ದಗಂಗಾ ಕ್ಷೇತ್ರಕ್ಕೆ 900 ವರ್ಷಗಳ ಸುದೀರ್ಘ ಇತಿಹಾಸ, ಭವ್ಯ ಪರಂಪರೆ ಇದೆ. ಕಲ್ಯಾಣದ ಕ್ರಾಂತಿಯ ನಂತರ ನಾನಾ ಕಡೆಗೆ ಚೆದುರಿದ ಶರಣರ ಒಂದು ಗುಂಪು ಶಿವಗಂಗೆ, ಸಿದ್ದಗಂಗೆ, ಗೂಳೂರು, ಗುಬ್ಬಿ ಬೇರೆ ಬೇರೆ ಕಡೆ ಸಂಚರಿಸಿ ತಮ್ಮ ಶರಣ ಧರ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡಿದವು. ಇದರಲ್ಲಿ ಸಿದ್ದಗಂಗಾ ಕ್ಷೇತ್ರಕ್ಕೆ ಆಗಮಿಸಿದವರೇ ಗೋಸಲ ಸಿದ್ದೇಶ್ವರರು.

ಸಿದ್ಧಗಂಗಾ ಹೆಸರು ಬರಲು ಕಾರಣ

ಚಾಮರಾಜನಗರ ಜಿಲ್ಲೆ ಹರದನಹಳ್ಳಿಯ ಶೂನ್ಯ ಪೀಠ ಪರಂಪರೆಯ ಗೋಸಲ ಸಿದ್ದೇಶ್ವರರು ಧರ್ಮ ಪ್ರಚಾರಾರ್ಥ ವಿರಕ್ತಗಣಗಳೊಡನೆ ದೇಶಾಟನೆ ಹೊರಟು ಸಿದ್ದಗಂಗೆ ಬೆಟ್ಟದ ತಪ್ಪಲಿಗೆ ಬಂದು ತಪೋನುಷ್ಠಾನ ಮಾಡಿದರು. ಒಮ್ಮೆ ಒಬ್ಬ ವಿರಕ್ತರಿಗೆ ಬಾಯಾರಿಕೆಯಾಗಿ ಕತ್ತಲಲ್ಲಿ ನೀರಿಗಾಗಿ ಪರದಾಡಿದರು. ವೃದ್ಧ ಯೋಗಿಗಳು ಶಕ್ತಿ ಹೀನರಾಗಿ ಗೋಸಲ ಸಿದ್ದೇಶ್ವರರನ್ನು ಪ್ರಾರ್ಥಿಸಿದರು. ಆಗ ಸಿದ್ದೇಶ್ವರರು ಪ್ರತ್ಯಕ್ಷರಾಗಿ ತಮ್ಮ ಮೊಣಕಾಲಿನಿಂದ ಬಂಡೆಗೆ ಗುದ್ದಿದ್ದಾಗ ಬಂಡೆ ಸೀಳಿಕೊಂಡು ಜಲ ಒಸರಿಸಿತು. ಈ ಸಿದ್ದರ ಪಾದ ಸ್ಪರ್ಶದಿಂದ ಉದ್ಭವವಾದ ಗಂಗೆಯೇ ಸಿದ್ದಗಂಗೆ. ಅಂದಿನಿಂದ ಈ ಕ್ಷೇತ್ರಕ್ಕೆ ಸಿದ್ದಗಂಗೆ ಎಂಬ ಹೆಸರು ಬಂತು. ಇಂದಿಗೂ ಭಕ್ತರು ತಮ್ಮ ಸಂತಾನ ಪ್ರಾಪ್ತಿ, ಇಷ್ಟ ಸಿದ್ದಿಗೆ, ಗಂಗಾ ಪೂಜೆ ಮಾಡಿ ತಮ್ಮ ಮನದ ಮಲಿನತೆಯನ್ನು ಕಳೆದುಕೊಳ್ಳುತ್ತಾರೆ. ಈ ಪವಿತ್ರ ಗಂಗೆಯು ಎಲ್ಲಾ ಬಗೆಯ ಮಾನಸಿಕ ಮತ್ತು ದೈಹಿಕ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ. ಇಂದು ಇಲ್ಲಿಗೆ ಬರುವ ಎಲ್ಲಾ ಜಾತಿ, ಧರ್ಮ, ಸಮುದಾಯದ ಹಂಗಿಲ್ಲದ ಸಾವಿರಾರು ಭಕ್ತರು ಈ ನೀರನ್ನು ಬಳಸುತ್ತಾರೆ.

ಗೋಸಲ ಸಿದ್ದೇಶ್ವರ ಸ್ವಾಮೀಜಿ ತಮ್ಮ ಹದಿನೈದನೇ ವಯಸ್ಸಿನಲ್ಲಿ ನಿರಂಜನ ಜಗದ್ಗುರುನ ಪೀಠಾಚಾರ್ಯ (ಮಠದ ಮುಖ್ಯಸ್ಥ) ಆಗಿದ್ದರು ಬಳಿಕ ಅವರು ತಮ್ಮ ಕಿರಿಯ ಶ್ರೀಗಳಿಗೆ ಮಠದ ಆಡಳಿತ, ಪೀಠವನ್ನು ವಹಿಸಿ ತಾವು ಧಾರ್ಮಿಕ ಕಾರ್ಯಗಳಿಗೆ ತಮ್ಮ ಸ್ವಂತ ಮಠ ಸ್ಥಾಪನೆಗಾಗಿ 101 ಅನುಯಾಯಿಗಳೊಂದಿಗೆ ಶಿವಗಂಗೆಗೆ ತೆರಳಿದ್ದರು.ಅಲ್ಲಿಂದ ಅವರು ಈಗಿನ ಕ್ಯಾತಸಂದ್ರ (ಕೇತ ಸಮುದ್ರ) ಸಮೀಪದ ಬೆಟ್ಟಕ್ಕೆ ಆಗಮಿಸಿದರು.ಅಲ್ಲಿ ಅವರು ತಮ್ಮ ಶಿಷ್ಯರ ಅಧ್ಯಯನ, ಧ್ಯಾನದ ಅನುಕೂಲಕ್ಕೆ 101 ಗುಹೆಗಳನ್ನು ರಚಿಸಿದರು.

Siddhaganga Matha Tumkur,ಶ್ರೀ ಕ್ಷೇತ್ರ ಸಿದ್ಧಗಂಗಾ ಮಠ
ಗೋಸಲ ಸಿದ್ದೇಶ್ವರರಿಂದ ಬೆಳಕಿಗೆ ಬಂದ ಸಿದ್ದಗಂಗೆ ನಂತರ ಮಠವಾಗಿ ಪರಿವರ್ತನೆಯಾಯಿತು. ಗೋಸಲ ಸಿದ್ದೇಶ್ವರರು ಅಲ್ಲಿನ ಭಕ್ತರ ಸಹಾಯದಿಂದ ಬೆಟ್ಟದ ತಪ್ಪಲಿನಲ್ಲಿ ಒಂದು ಮಠ ಕಟ್ಟಿದರು.ಅದೇ ಈಗ ಪ್ರಸ್ತುತ ಇರುವ ಸಿದ್ದಗಂಗಾ ಮಠ. ಈ ಮಠದ ಚರಿತ್ರೆ ಗಮನಿಸಿದಾಗ 1350ರಲ್ಲಿ ನಿರ್ಮಾಣವಾಗಿರಬಹುದು ಎನ್ನಲಾಗುತ್ತದೆ. ನಂತರ ಸಿದ್ದೇಶ್ವರರು ಬಹುಕಾಲ ಇದೇ ಮಠದಲ್ಲಿ ಅನುಷ್ಠಾನಗೊಂಡಿದ್ದರು. ನಂತರ ಗುಬ್ಬಿಯ ಗೋಸಲ ಚೆನ್ನಬಸವರಾಜೇಂದ್ರರಿಗೆ ಅನುಗ್ರಹ ಮಾಡಿದರು. ಗೋಸಲ ಚೆನ್ನ ಬಸವೇಶ್ವರರಿಂದ ಶ್ರೀ ಸಿದ್ದಲಿಂಗೇಶ್ವರರು ಷಟ್ಸ್ಥಲ ಜ್ಞಾನೋಪದೇಶ ಪಡೆದು ವಚನ ಸಾಹಿತ್ಯ ಪುನರುಜ್ಜೀವನ ಗೊಳಿಸಿದ ಮಹಾಯೋಗಿಗಳಾದರು. ಇವರು ಬೋಳ ಬಸವೇಶ್ವರರಿಗೆ ಅಧಿಕಾರ ವಹಿಸಿಕೊಟ್ಟು 700 ವಿರಕ್ತರು, 3000 ಚರಮೂರ್ತಿಗಳೊಡನೆ ಸಮಸ್ತ ಭಾರತವನ್ನು ಸುತ್ತಿ ಮಠಗಳನ್ನು ಸ್ಥಾಪಿಸಿ ಸಮರ್ಥ ಶಿಷ್ಯರನ್ನು ಅಲ್ಲಿಯೆ ನೆಲೆಗೊಳಿಸಿದ್ದರು.

1470 ರಲ್ಲಿ ಮತ್ತೆ ಸಿದ್ದಗಂಗೆಗೆ ಬಂದು ಅನೇಕ ಪವಾಡಗಳನ್ನು ಮಾಡ ತೊಡಗಿದರು. ನಂತರ ಕುಣಿಗಲïನ ಕಗ್ಗೆರೆಯಲ್ಲಿ ತಪೋನಿಷ್ಠೆ ಕೈಗೊಂಡರು. ನಂತರ ಎಡೆಯೂರಿನಲ್ಲಿ ಶಿವಯೋಗ ಸಮಾಧಿ ಹೊಂದಿದರು. 1470ರ ನಂತರ ಕೆಲವಾರು ವರ್ಷಗಳು ಸಿದ್ದಗಂಗೆಯ ಇತಿಹಾಸದ ದಾಖಲೆಗಳು ಲಭ್ಯವಾಗಿಲ್ಲ. 1850 ರಿಂದ ಮತ್ತೆ ಸಿದ್ದಗಂಗಾ ಮಠದ ಚರಿತ್ರೆ ಶುರುವಾಗುತ್ತದೆ. ಉತ್ತರ ಕರ್ನಾಟಕದಿಂದ ಗುಬ್ಬಿಗೆ ಬಂದ ಅಟವಿಸ್ವಾಮಿಗಳು ಗೋಸಲ ಚನ್ನಬಸವೇಶ್ವರ ಸಮಾಧಿಯ ಸೇವೆ ಮಾಡಿದರು.

ಅಲ್ಲಿಯೇ ಒಂದು ತೊರೆಯ ಪಕ್ಕದಲ್ಲಿ ಮಠವನ್ನು ಕಟ್ಟಿದ್ದರು. ಅದೇ ಈಗಿನ ತೊರೆ ಮಠ. ಒಮ್ಮೆ ಸಿದ್ದಗಂಗಾ ಕ್ಷೇತ್ರದ ಮಹಿಮೆ ಕೇಳಿ ಅಲ್ಲಿಗೆ ಬಂದು ಗಂಗಾ ಪೂಜೆ ಕೈಗೊಂಡರು. ಸಿದ್ದಲಿಂಗೇಶ್ವರರ ಬಳಿಕ ಅಭಿವೃದ್ದಿ ಕಾಣದ ಸಿದ್ದಗಂಗಾ ಕ್ಷೇತ್ರ ಮತ್ತೆ ಪಾವನ ವಾಯಿತು. ಅಟವಿಸ್ವಾಮಿಗಳು ಅಲ್ಲಿಗೆ ಬರುವ ಭಕ್ತರಿಗೆ ಅನ್ನ, ವಸತಿ ನೀಡಲು ಅನ್ನಸಂತರ್ಪಣೆ ಕಾರ್ಯ ಪ್ರಾರಂಭಿಸಿದ್ದರು.

ಅಂದು ಅವರ ಅಮೃತ ಹಸ್ತದಿಂದ ಹಚ್ಚಿದ ಅಡುಗೆ ಒಲೆ ಇಂದಿಗೂ ನಂದದೆ ಮಠಕ್ಕೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಹಸಿವು ನೀಗಿಸುತ್ತಿದೆ. ಇಲ್ಲಿಂದ ಶುರುವಾಯಿತು ಸಿದ್ದಗಂಗೆಯ ದಾಸೋಹ ವೈಭವ. ಅನ್ನದಾಸೋಹದ ಜೊತೆಗೆ ಅಕ್ಷರ ಸೇರಿ ಜ್ಞಾನ ದಾಸೋಹವೂ ಶುರುವಾಯಿತು. ಪ್ರಾಥಮಿಕ ಹಂತದ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿ ವಿದ್ಯಾರ್ಥಿ ನಿಲಯಗಳು ಪ್ರಾರಂಭಿಸಿದರು. ಅಂದು ಪ್ರಾರಂಭಿಸಿದ ಅನ್ನ, ವಿದ್ಯೆ ವಸತಿ, ಭಕ್ತಿಯ ಜ್ಞಾನ ದಾಸೋಹಗಳು ಇಂದಿಗೂ ಮುಂದುವರಿತಾ ಸಾಗಿದೆ.

ಇವರ ಬಳಿಕ ತೋಂಟದ ಸಿದ್ದಲಿಂಗೇಶ್ವರ ಸ್ವಾಮೀಜಿ ವರೆಗಿನ ಇತಿಹಾಸ ನಮಗೆ ಲಭ್ಯವಾಗುತ್ತದೆ ಆದರೆ ಆ ಬಳೀಕ 15ನೇ ಶತಮಾನದಿಂದ 18ನೇ ಶತಮಾನದವರೆಗಿನ ಇತಿಹಾಸದ ಬಗ್ಗೆ ನಮಗೆ ಸರಿಯಾದ ದಾಖಲೆಗಳು ದೊರೆಯುವುದಿಲ್ಲ. ಆ ಬಳಿಕ ಆಧುನಿಕ ಕಾಲದಲ್ಲಿ ಸಿದ್ದಗಂಗಾ ಮಠದ ಅಭಿವೃದ್ದಿ ಇತಿಹಾಸದ ಬಗ್ಗೆ ಶ್ರೀ ಅಥವೀಶ್ವರ ಸ್ವಾಮಿಗಳ ಕಾಲದೊಡನೆ ಪ್ರಾರಂಭವಾಗಿದೆ.

ಈ ಮಠದ ಪೀಠಾಧಿಪತಿಗಳಾಗಿದ್ದ ಗುರುಗಳ ಪರಂಪರೆ ಹೀಗಿದೆ

ಶ್ರೀ ಹರದನಹಳ್ಳಿ ಗೋಸಲ ಸಿದ್ಧೇಶ್ವರ ಸ್ವಾಮಿಗಳು (1300 - 1350))
ಶ್ರೀ ಹರದನಹಳ್ಳಿ ಶಂಕರಾಚಾರ್ಯ ಸ್ವಾಮಿಗಳು(1393)
ಶ್ರೀ ಹರದನಹಳ್ಳಿ ಗೋಸಲ ಚನ್ನಬಸವರಾಜೇಂದ್ರ ಸ್ವಾಮಿಗಳು
ಶ್ರೀ ತೋಂಟದ ಸಿದ್ದಲಿಂಗೇಶ್ವರ ಸ್ವಾಮೀಜಿ (1400 - 1480)

ಅಟವಿ ಸ್ವಾಮಿಗಳ ನಂತರ ಉದ್ದಾನ ಶಿವಯೋಗಿಗಳು ಮಠದ ಉತ್ತರಾಧಿಕಾರಿಯಾದರು. ಅಟವಿ ಶ್ರೀಗಳಿಗೆ ಈಗಿನ ಚಿಕ್ಕತೊಟ್ಲುಕರೆ ಮಠದಲ್ಲಿ ಅವರ ಅಪೇಕ್ಷೆಯಂತೆ ಕ್ರಿಯಾ ಸಮಾಧಿಯನ್ನು ಮಾಡಲಾಗಿತ್ತು. ಉದ್ದಾನ ಶಿವಯೋಗಿಗಳ ಮೂಲ ಹೆಸರು ರುದ್ರಪ್ಪಇವರು ಲಕ್ಕೂರು ಗ್ರಾಮದವರು. ಹುಟ್ಟು ಮಹಿಮಾ ಶಾಲಿ, ಯೋಗ ಸಾಧನೆಯಲ್ಲಿ ಮೇರು ವ್ಯಕ್ತಿ, ಕುರಿ ಕಾಯುವುದು ಅವರ ಕಾಯಕ. ಒಂದೆರಡು ಬಾರಿ ಸಿದ್ದಗಂಗೆಗೆ ಬಂದು ಪೂಜೆ ಮಾಡಿಸಿಕೊಂಡು ಹೋಗಿದ್ದರು. ಮನೆಯಲ್ಲಿ ನಡೆದ ಸಣ್ಣ ಘಟನೆಯಿಂದ ಮನೆ ಬಿಟ್ಟು ಬಂದು ಸಿದ್ದಗಂಗೆಯ ಮಠದ ಸೇವೆಯಲ್ಲಿ ನಿರತರಾದರು.

ಅಟವಿ ಸ್ವಾಮಿಗಳ ಅಗ್ನಿ ಪರೀಕ್ಷೆಯಲ್ಲಿ ರುದ್ರಪ್ಪ ಉತ್ತೀರ್ಣರಾದರು. ಮಠಕ್ಕೆ ಹೇಳಿ ಮಾಡಿಸಿದಂತ ವ್ಯಕ್ತಿಯಾಗಿದ್ದರು. ಅಟವಿಸ್ವಾಮಿಗಳು ಶಿಷ್ಯನ ಹೆಗಲ ಮೇಲೆ ಸಂಪೂರ್ಣ ಕಾರ್ಯಭಾರ ವಹಿಸಿ ಸನ್ಯಾಸ ದೀಕ್ಷೆ ನೀಡಿ ಉದ್ದಾನ ಶಿವಯೋಗಿಗಳೆಂದು ಹೆಸರು ಬದಲಾಯಿಸಿದರು. ಉದ್ದಾನಪ್ಪನವರು ಬಹಳ ಕೋಪಿಷ್ಟರು ಇಟ್ಟರೆ ಶಾಪ ಕೊಟ್ಟರೆ ವರವೆಂಬಂತೆ ಕಾಣುತ್ತಿದ್ದರು.ಇವರ ಕಾಲದಲ್ಲಿ ಭಕ್ತರ ಸಂಖ್ಯೆ ಹೆಚ್ಚಿತು. ದಾಸೋಹದ ಖರ್ಚು ಹೆಚ್ಚಾಗತೊಡಗಿತು. 1905 ರಲ್ಲಿ ಜಾತ್ರೆ ದನಗಳ ಪರಿಷೆ ಆರಂಭಿಸಿದರು. ಮಠಕ್ಕೆ ದವಸ ಧಾನ್ಯ, ತರಕಾರಿ ಊಟದ ಎಲೆ ಪವಾಡ ಸದೃಶ್ಯವಾಗಿ ಹರಿದು ಬರಲು ಪ್ರಾರಂಭಿಸಿತು.ಇಂದಿಗೂ ದಾಸೋಹದ ಖರ್ಚು ವೆಚ್ಚ ಲೆಕ್ಕಹಾಕಿದ್ದಿಲ್ಲ.

ಮಠದ ಉತ್ತರಾಧಿಕಾರಿಯಾಗಿದ್ದ ಮರುಳಾರಾಧ್ಯರ ಆತ್ಮೀಯ ಸ್ನೇಹಿತ ಯೋಗ್ಯ ದಕ್ಷ, ಪ್ರಾಮಾಣಿಕ ಮಾಗಡಿ ತಾಲ್ಲೂಕಿನ ವೀರಾಪುರದ ಶಿವಣ್ಣನನ್ನು ಗುರುತಿಸಿ ಮಠದ ಉತ್ತರಾಧಿಕಾರಿಯೆಂದು ಘೋಷಣೆಯಾಯಿತು. ಶಿವಣ್ಣನಿಗೆ ಆ ಕ್ಷಣಕ್ಕೆ ಏನೂ ತೋಚಲಿಲ್ಲ, ಮುಗ್ದ ಮಗುವಿನಂತೆ ಗುರುಗಳಿಗೆ ಒಪ್ಪಿಗೆಯೆಂದು ನಮಸ್ಕರಿಸಿದರು. ಉದ್ದಾನ ಶಿವಯೋಗಿಗಳು ಶಿವಣ್ಣ ನನ್ನ ಶ್ರೀಮಾನ್ ನಿರಂಜನ ಪ್ರಣವ ಸ್ವರೂಪಿ ಶ್ರೀ ಶಿವಕುಮಾರಸ್ವಾಮಿಗಳೆಂದು ನಾಮಕರಣ ಮಾಡಿದರು. ಅವರೇ ಶತಾಯುಷಿ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳು. (೧ ಏಪ್ರಿಲ್ ೧೯೦೭ - ೨೧ ಜನವರಿ ೨೦೧೯ ). ಡಾ. ಶ್ರೀ ಶಿವಕುಮಾರ ಸ್ವಾಮಿಗಳು ಉದ್ಧಾನ ಸ್ವಾಮಿಗಳವರಿಂದ 1930ರ ಮಾರ್ಚ್‌ 3ರಂದು ನಿರಂಜನ ಜಂಗಮ ಚಿನ್ಹಾಂಕಿತ ವಿರಕ್ತಾಶ್ರಮ ದೀಕ್ಷೆ ಪಡೆದಿದ್ದರು.

ಶ್ರೀಮಠದ ಶಾಖಾ ಮಠಗಳು

ಮಠದ ಉಪ ಶಾಖಾ ಮಠಗಳು: ಶಿವಗಂಗೆಯಲ್ಲಿ ಹಿಂದೆ 64 ಮಠಗಳಿದ್ದುದಕ್ಕೆ ಅನೇಕ ಪುರಾವೆ, ಸಾಕ್ಷಿಗಳಿವೆ. ಕಂಬಾಳು ಮರುಳಸಿದ್ದರ ಮಠ, ಕಂಚುಗಲ್‌ ಬಂಡೆ ಮಠ, ಚಿಲುಮೆ ಮಠ, ಬಸವಾಪಟ್ಟಣದಲ್ಲಿನ ಬೋಳಬಸವೇಶ್ವರ ಸ್ವಾಮಿ ಕ್ಷೇತ್ರ, ಮಸ್ಕಲ್‌ ಮಠ, ಸೋಲೂರಿನ ಮೂರು-ನಾಲ್ಕು ಮಠಗಳು, ಮಹಂತೇಶ್ವರ ಸ್ವಾಮಿಗದ್ದಿಗೆ ಮಠ, ತೋಪಿನಮಠ, ಕಣ್ಣೂರು ಮಠ, ತಿಪ್ಪಸಂದ್ರದ ಮಠ, ಹರ್ತಿದುರ್ಗ ಸಾವನದುರ್ಗದ ಮಠ, ಬೆಳ್ಳಾವೆಯ ರುದ್ರಮಠ, ದೇಶಮಠ, ಮೂಲೆಮಠ, ದೇವರಾಯಣಪಟ್ಟಣದ ಮಠ, ಸಿದ್ದರಬೆಟ್ಟದ ಗದ್ದುಗೆ, ಬೆಟ್ಟದ ಹಳ್ಳಿ, ಚಕ್ರಭಾವಿ, ಹಿತ್ತಲಹಳ್ಳಿ, ಅಂಕನಹಳ್ಳಿ ಮಠ, ಹುಲಿಯೂರು ದುರ್ಗದ ಮಠ, ಕಗ್ಗೆರೆ ವಿರುಪಸಂದ್ರ ತಾವರೆಕೆರೆಮಠ, ನೊಣವಿನಕೆರೆ, ಗೋಡೆಗೆರೆ, ಎಳನಡು, ಕಟ್ಟಿಗೆನಹಳ್ಳಿ, ಗವಿಮಠ ಸೇರಿ ಹಲವು ಮಠಗಳು ಸಿದ್ದಗಂಗಾ ಮಠದ ಶಾಖಾ ಮಠಗಳಾಗಿದೆ.

ವಿಶೇಷ ಉತ್ಸವಗಳು

ಪ್ರತಿವರ್ಷವೂ ಮಹಾಶಿವರಾತ್ರಿ ಸಮಯದಲ್ಲಿ ನಡೆಯುವ ಶ್ರೀಸಿದ್ಧಲಿಂಗೇಶ್ವರ ಸ್ವಾಮಿಯ ಜಾತ್ರೆ ಶ್ರೀ ಕ್ಷೇತ್ರದ ವಿಶೇಷ ಆಚರಣೆ. 10 ದಿನಗಳ ಕಾಲ ನಡೆಯುವ ಈ ಉತ್ಸವಕ್ಕೆ ದೇಶದೆಲ್ಲೆಡೆಗಳಿಂದ ಭಕ್ತರು ಬರುತ್ತಾರೆ. ಗ್ರಾಮೀಣ ಜನರಿಗೆ ತಮ್ಮ ಜಾನುವಾರುಗಳನ್ನು ಮಾರಾಟ ಮಾಡಲು ಬೃಹತ್‌ ಜಾನುವಾರು ಜಾತ್ರೆ ಆಯೋಜಿಸಲಾಗುತ್ತದೆ. 1909ರಲ್ಲಿ ಉದ್ಧಾನ ಶೀವಯೋಗಿಗಳಿಂದ ಸಣ್ಣ ಮಟ್ಟದಲ್ಲಿ ಈ ಜಾತ್ರೆ ಆರಂಭಗೊಂಡಿತು. ಈ ಸಂದರ್ಭದಲ್ಲಿ ರಥೋತ್ಸವ, ಬೆಳ್ಳಿ ಪಲ್ಲಕಿ ಉತ್ಸವ ಜರುಗುತ್ತದೆ. ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ, ಕೃಷಿ ಕೈಗಾರಿಕೆ ವಸ್ತು ಪ್ರದರ್ಶನ ನಡೆಯುತ್ತದೆ. ವೈಭವದ ನವರಾತ್ರಿ ಆಚರಣೆ ಮಠದ ವೈಶಿಷ್ಟ್ಯಗಳಲ್ಲೊಂದು ಶ್ರಾವಣ ಮಾಸದ ವಿಶೇಷ ಸಂದರ್ಭಗಳಲ್ಲಿ ಕೀರ್ತನೆ, ಶರಣರ ಪುರಾಣ ಪ್ರವಚನಾದಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಪ್ರತಿ ಹುಣ್ಣಿಮೆಯಂದು ನಡೆವ ಶೂನ್ಯ ಸಂಪಾದನೆ ಪ್ರವಚನ ಕಾರ್ಯಕ್ರಮ ನಿರಂತರವಾಗಿ ನಡೆದುಬರುತ್ತಿದೆ.

ಶ್ರೀಕ್ಷೇತ್ರದ ಸಾಧನೆಗಳು:

1917ರಲ್ಲಿ ಆರಂಭವಾದ ಶ್ರೀ ಸಿದ್ಧಲಿಂಗೇಶ್ವರ ಉಚಿತ ವಿದ್ಯಾರ್ಥಿ ನಿಲಯದಲ್ಲಿ ವಿವಿಧ ಜಾತಿಯ 8 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಸತಿ, ಊಟ ಸಹಿತ ಇಲ್ಲಿ ಆಶ್ರಯ ಪಡೆದಿದ್ದಾರೆ.
ಈ ಮಠವು ಜಾತಿ-ಧರ್ಮ ಬೇಧವಿಲ್ಲದೇ, ಪ್ರಾಂತ್ಯ-ಪ್ರದೇಶ ತಾರತಮ್ಯ ಮಾಡದೇ ಲಕ್ಷಾಂತರ ಮಕ್ಕಳಿಗೆ ಅನ್ನ, ಆಶ್ರಯ ಮತ್ತು ವಿದ್ಯೆಯನ್ನು ದಾನ ಮಾಡಿ ಪೊರೆಯುತ್ತಿರುವ ಕೀರ್ತಿ ಹೊಂದಿದೆ. ಹಿಂದಿನ ಶ್ರೀಗಳ ಸೇವಾ ಪರಂಪರೆಯನ್ನು ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮೀಜಿ ಮುಂದುವರಿಸುತ್ತಿದ್ದು, 1963ರಲ್ಲಿ ಸ್ಥಾಪನೆಯಾದ ಸಿದ್ಧಗಂಗಾ ವಿದ್ಯಾ ಸಂಸ್ಥೆ 132ಕ್ಕೂ ಅಧಿಕ ಶಾಲಾ-ಕಾಲೇಜುಗಳನ್ನು ತೆರೆದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅಕ್ಷರಜ್ಞಾನವನ್ನು ನೀಡುತ್ತಾ ಬಂದಿದೆ.

ಧರ್ಮ ಪ್ರಸಾರ ಉದ್ದೇಶದ ಜತೆಗೆ ಸಮಾಜಮುಖಿ ಕಾರ್ಯಗಳೇ ಮಠದ ಜೀವಾಳ, ಶೈಕ್ಷಣಿಕ ರಂಗದಲ್ಲಿ ಮಠದ ಕೊಡುಗೆ ಅಪಾರ.

ಶೈಕ್ಷಣಿಕ ಸಾಧನೆ: ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಶಿಕ್ಷಕ ತರಬೇತಿ ಸಂಸ್ಥೆ, ಸಂಸ್ಕೃತ ಕಾಲೇಜು, ಕನ್ನಡ ಪಂಡಿತ ತರಗತಿ ವಿಭಾಗ, ದೈಹಿಕ ತರಬೇತಿ ಕಾಲೇಜು, ಸಂಗೀತ ಪಾಠಶಾಲೆ, ಸಮನ್ವಯ ಶಿಕ್ಷಣ ಸಂಸ್ಥೆ, ದೈಹಿಕ ಶಿಕ್ಷಣ ತರಬೇತಿ ಕಾಲೇಜು, ಸಂಗೀತ ಪಾಠಶಾಲೆ ಮಠದಿಂದ ನಡೆಯುತ್ತಿದೆ. ನಾಡಿನ ನಾನಾ ಭಾಗಗಳ ನಗರ, ಗ್ರಾಮೀಣ ಪ್ರದೇಶದಲ್ಲಿ ಮಠ ಸಾಕಷ್ಟು ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ.

His holliness Dr. Shri Shivkumar Mahaswamy, ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳು
ವಿಶೇಷ ಗೌರವ: ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳಿಗೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡವು ೧೯೬೫ರಲ್ಲಿ ಗೌರವ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿದೆ.

ಪೂಜ್ಯ ಸ್ವಾಮೀಜಿಯವರ ೧೦೦ ನೆ ವರ್ಷದ ಹುಟ್ಟು ಹಬ್ಬ ಮತ್ತು ಕರ್ನಾಟಕ ಸುವರ್ಣ ಮಹೋತ್ಸವ ಸಮಯದಲ್ಲಿ ಶ್ರೀಗಳ ಜೀವಮಾನ ಸಮಾಜ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ರಾಜ್ಯದ ಮಹೋನ್ನತ ಪ್ರಶಸ್ತಿಯಾದ ಕರ್ನಾಟಕ ರತ್ನ ಪ್ರಶಸ್ತಿಯನ್ನು ಶ್ರೀಗಳಿಗೆ ನೀಡಿ ಗೌರವಿಸಿದೆ.

2015ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ

ಮಹೋತ್ಸವಗಳು: ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳಿಗೆ 1972ರಲ್ಲಿ ರಜತ ಮಹೋತ್ಸವ ಮತ್ತು 1982ರಲ್ಲಿ ಸುವರ್ಣ ಮಹೋತ್ಸವ ಹಾಗೂ 1997ರಲ್ಲಿ ವಜ್ರಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಶ್ರೀಗಳವರು ವಿರಕ್ತಾಶ್ರಮ ಸ್ವೀಕರಿಸಿ 75 ವರ್ಷ ತುಂಬಿದ ಶುಭ ಸಂದರ್ಭದಲ್ಲಿ ಅಮೃತ ಮಹೋತ್ಸವ ಸಮಾರಂಭವನ್ನು 2005ರ ಏಪ್ರಿಲ್‌ 24, 25ರಂದು ಆಚರಿಸಲಾಯಿತು.

ಮಠದಿಂದ ಪತ್ರಿಕೆ: ಸಿದ್ಧಗಂಗಾ ಮಠದಿಂದ ‘ಸಿದ್ಧಗಂಗಾ’ ಮಾಸ ಪತ್ರಿಕೆಯನ್ನು ಹೊರತರಲಾಗುತ್ತಿದೆ. ಧಾರ್ಮಿಕ ಶಿಕ್ಷಣ ಪ್ರಸಾರ, ಸಾಮಾಜಿಕ ಆರೋಗ್ಯ, ನೈರ್ಮಲ್ಯಗಳ ವಿಚಾರ ಹೊಂದಿರುವ ಈ ಪತ್ರಿಕೆ 1965ರಲ್ಲಿ ತ್ರೈಮಾಸಿಕವಾಗಿ ಆರಂಭವಾಗಿ ನಂತರ ಮಾಸಿಕವಾಗಿ ಬದಲಾಯಿತು. ಪತ್ರಿಕೆಗೆ ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಕ್ಷೇತ್ರದ ಪ್ರಮುಖ ದೇವಸ್ಥಾನಗಳು: ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನ, ಶ್ರೀ ಸಿದ್ದಗಂಗಾ ಮಾತೆ ದೇವಸ್ಥಾನ. ಬೆಟ್ಟದ ಮೇಲೆ ಸಿದ್ಧಲಿಂಗೇಶ್ವರ ಹಾಗೂ ಗಂಗಾಮಾತೆ ಮಂದಿರಗಳಿವೆ. ಬೆಟ್ಟದ ಬುಡದಲ್ಲಿಯೇ ಹಳೆಯ ಮಠವಿದೆ. ಶ್ರೀ ಉದ್ಧಾನಸ್ವಾಮಿಗಳ ಗದ್ದುಗೆಯಿದ್ದು ಅದು ಜಾಗೃತ ಸ್ಥಾನವಾಗಿದೆ.ಅತಿಥಿಗೃಹ. ವಿದ್ಯಾರ್ಥಿನಿಲಯ, ಪ್ರಸಾದ ವಿತರಣಾ ಮಂದಿರ, ಮಹಾನವಮಿ ಮಂಟಪ, ಮರುಳಾರಾಧ್ಯರ ಗದ್ದುಗೆ, ಗೋಶಾಲೆ ಮೊದಲಾದವನ್ನು ವೀಕ್ಷಿಸಬಹುದು.

ಪರಿವಿಡಿ (index)
*
Previousಡಾ|| ಫ.ಗು.ಹಳಕಟ್ಟಿ ತೊಂಟಾದಾರ್ಯ ಮಠ ಗದಗNext
*