ಸಿದ್ಧಾಂತ ಶಿಖಾಮಣಿಯ ಅಸಂಬದ್ಧ ಸಿದ್ಧಾಂತಗಳು

*

- ಡಾ.ಎನ್.ಜಿ.ಮಹಾದೇವಪ್ಪ,

1.ಸಿದ್ಧಾಂತ ಶಿಖಾಮಣಿಯ ಕುರಿತು:

ಸಿದ್ಧಾಂತ ಶಿಖಾಮಣಿಯು [1] ಹಲವು ಅಸಂಬದ್ಧ ಸಿದ್ಧಾಂತಗಳಿಂದ ಕೂಡಿದ್ದರೂ, ಅನೇಕ ಪಂಡಿತರು ಅದೊಂದು ಅತ್ಯಂತ ಪ್ರಾಚೀನವಾದ, ಅತ್ಯಂತ ಶ್ರೇಷ್ಠವಾದ, ವೀರಶೈವ ಗ್ರಂಥ ಎಂದು ಪ್ರಶಂಸಿದಿದಾರೆ. "ಇದು ವೀರಶೈವದ ಸಕಲ ವಿಷಯಗಳನ್ನು ಪ್ರತಿಪಾದಿಸುವ ಏಕೈಕ ಗ್ರಂಥವಾಗಿರುತ್ತದೆ, ಅಂತೆಯೇ ಇದಕ್ಕೆ 'ವೀರಶೈವ ಸರ್ವಸ್ವ' ಎಂದು ಕರೆಯಲಾಗಿದೆ. ಈ ಗ್ರಂಥದಲ್ಲಿ ಯಾವುದೇ ವಿಧವಾದ ದೋಷವಿರುವುದಿಲ್ಲ" ಎಂದು ಪೂಜ್ಯ ಶ್ರೀ ಕಾಶೀ ಜಗದ್ಗುರುಗಳು ಪ್ರಮಾಣಪತ್ರ ನೀಡಿದ್ದಾರೆ.[2] ಅನೇಕ ವಿದ್ವಾಂಸರು, ಅದೇ ವೀರಶೈವರ ಅಥವಾ ಲಿಂಗಾಯತರ ಮೂಲಗ್ರಂಥವೆಂದೂ ವಚನಕಾರರೆಲ್ಲ ಅದರಿಂದ ಪ್ರಭಾವಿತರಾಗಿದ್ದಾರೆಂದೂ ವಾದಿಸುತ್ತಾರೆ. ಅಂದರೆ, ಅವರ ಪ್ರಕಾರ ವೀರಶೈವದ ಎಲ್ಲ ಸಿದ್ಧಾಂತಗಳನ್ನು ಒಳಗೊಂಡಿರುವುದು, ದೋಷವಿಲ್ಲದಿರುವುದು, ಪ್ರಾಚೀನತೆಯನ್ನು ಹೊಂದಿರುವುದು ಈ ಗ್ರಂಥದ ವೈಶಿಷ್ಟವಾಗಿದೆ.

ಆದರೆ ಸಿದ್ಧಾಂತ ಶಿಖಾಮಣಿಯ ಒಳಹೊಕ್ಕು, ಅದರಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ವಿವಿಧ ಸಿದ್ಧಾಂತಗಳನ್ನು ತೌಲನಿಕವಾಗಿಯೂ ವಿಶ್ಲೇಷಣಾತ್ಮಕವಾಗಿಯೂ ವಿಮರ್ಶಾತ್ಮಕವಾಗಿಯೂ ನೋಡಿದರೆ, ಅದರಲ್ಲಿ ಅನೇಕ ವಿರೋಧಾಬಾಸಗಳು, ಅನೇಕ ಅಸತ್ಯಗಳು ಅಡಗಿರುವುದು ಗೊತ್ತಾಗುತ್ತದೆ; ಅಲ್ಲದೆ, ವಿದ್ವಾಂಸರು ಹೇಳುವುಷ್ಟು ಪ್ರಾಚೀನತೆ ಅದಕ್ಕಿಲ್ಲದಿರುವುದೂ, ಸ್ಪಷ್ಟವಾಗುತ್ತದೆ. ಅದರ ಕೆಲವು ಸಿದ್ಧಾಂತಗಳನ್ನು ನಾವು ಪರಿಶಿಲಿಸೋಣ.

2. ಸಿದ್ಧಾಂತ ಶಿಖಾಮಣಿಯಲ್ಲಿ ಕಾಲಕ್ಕೆ ಸಂಬಂಧಿಸಿದ ಅಸಂಬದ್ಧ ವಿಚಾರಗಳು:

ಸಿದ್ಧಾಂತ ಶಿಖಾಮಣಿಯು ಬಹಳ ಹಳೆಯ ಗ್ರಂಥವೆಂದೂ, ರೇಣುಕಾಚಾರ್ಯರು ರಾಮಾಯಣ ಕಾಲದಲ್ಲಿದ್ದರು ಮತ್ತು ಅವರು ಅಗಸ್ತ್ಯನಿಗೆ ವೀರಶೈವ ಸಿದ್ಧಾಂತವನ್ನು ಬೋಧಿಸಿದರು, ಅದುದರಿಂದ ವೀರಶೈವವು ರಾಮಾಯಣದಷ್ಟು ಹಳೆಯದು ಎಂದೂ ತೋರಿಸುವ ಭರದಲ್ಲಿ ಅನೇಕ ಪಂಡಿತರು ಕಾಲದ ಬಗೆಗೆ ವಿಚಿತ್ರ ರೀತಿಯ, ಅಸಂಬದ್ಧ ವಾದಗಳನ್ನು ಮಂಡಿಸುತ್ತಾ ಬಂದಿದ್ದಾರೆ. ಅವುಗಳಲ್ಲಿ ಮುಖ್ಯವಾದ ಕೆಲವನ್ನು ಇಲ್ಲಿ ಪರಿಶೀಲಿಸಬಹುದು.

2.1 "ದ್ವಾಪರಯುಗದ ಆಚಾರ್ಯರಾದ ರೇಣುಕ, ದಾರುಕ, ಘಂಟಾಕರ್ಣ, ಧೇನುಕರ್ಣ ಮತ್ತು ವಿಶ್ವಕರ್ಣರೆಂಬ ಶ್ರೀ ಜಗದ್ಗುರು ಪಂಚಾಚಾರ್ಯರು ಕ್ರಮವಾಗಿ ಅಗಸ್ತ್ಯ, ದಧೀಚಿ, ವ್ಯಾಸ, ಸಾನಂದ ಮತ್ತು ದೂರ್ವಾಸ ಮಹರ್ಷಿಗಳಿಗೆ ವೀರಶೈವ ಸಿದ್ಧಾಂತವನ್ನು ಬೋಧಿಸಿದ ಸಂಗತಿಯು ಸುಪ್ರಸಿದ್ಧವಾಗಿದೆ" [3] . ಇಲ್ಲಿ ಅಡಕವಾಗಿರುವ ಅಸಂಬದ್ಧತೆಯೆಂದರೆ, ದ್ವಾಪರಯುಗದಲ್ಲಿ ಹುಟ್ಟಿದ ರೇಣುಕಾಚಾರ್ಯರು, ಅವರಿಗಿಂತ ಹಿಂದಿನ ಯುಗದವರಾದ (ಅಂದರೆ ತ್ರೇತಾಯುಗದವರಾದ ಅಗಸ್ತ್ಯ ಮುನಿಗೆ ವೀರಶೈವ ಸಿದ್ಧಾಂತ ಬೋಧಿಸಲು ಹೇಗೆ ಸಾಧ್ಯವಾಯಿತು?

2.2 ಸಿದ್ಧಾಂತ ಶಿಖಾಮಣಿಯ ಸಂವಾದ ರೂಪದಲ್ಲಿ ರಚಿತವಾದ ಗ್ರಂಥ. ಅದರ ಸಿದ್ಧಾಂತಗಳು ವೀರಶೈವ ಸಿದ್ಧಾಂತಗಳು, ಅವನ್ನು ರೇಣುಕಾಚಾರ್ಯರು ಅಗಸ್ತ್ಯ ಋಷಿಗೆ ಬೋಧಿಸಿದರು. ಎಂಬುದು ಎಲ್ಲರ ಗ್ರಹಿಕೆ. ರೇಣುಕಾಚಾರ್ಯರು ರಾವಣನ ತಮ್ಮ ವಿಭೀಷಣನನ್ನು ಭೇಟಿ ಮಾಡಿ, ಅವನ ಕೋರಿಕೆ ಮೇರೆಗೆ ಮೂರು ಕೋಟಿ ಸ್ಥಾವರ ಲಿಂಗಗಳನ್ನು ಪ್ರತಿಷ್ಠಾಪನೆ ಮಾಡಿದರು, ಎಂಬ ಮಾತು ಸಿದ್ಧಾಂತ ಶಿಖಾಮಣಿಯಯಲ್ಲಿ ಪ್ರಸ್ತಾಪಿಸಲ್ಪಟ್ಟಿದೆ. ಈ ಪ್ರಸ್ತಾಪದ ಆಧಾರದ ಮೇಲೇ ಆಧುನಿಕ ಪಂಡಿತರು ವೀರಶೈವ ಧರ್ಮವು ಈ ಅಗಸ್ತ್ಯ ಮತ್ತು ವಿಭೀಷಣರಷ್ಟು (ಅಂದರೆ ರಾಮಾಯಣದಷ್ಟು) ಪುರಾತನವಾದುದು ಎಂದು ವಾದಿಸುತ್ತಾರೆ.

------------------------------------------------------------------------------ಪುಟ ಸಂಖ್ಯೆ 4-5 -----------------------------------------------------------------------------------

ಅದನ್ನು ಸಮರ್ಥಿಸಲು ಪ್ರಯತ್ನಿಸುತ್ತಿರುವುದು, ಇನ್ನೂ ಹೆಚ್ಚು ವಿಷಾದನೀಯ.

ಅನೇಕ ವಿದ್ವಾಂಸರು ರಾಮಾಯಣ ಗ್ರಂಥವನ್ನು ಕ್ರಿ. ಪೂ. 300ರಲ್ಲಿ ರಚಿಸಲಾಯಿತು ಎಂದು ನಂಬುತ್ತಾರೆ. ಅವರ ನಂಬಿಕಗೆ ಒಂದು ಸಂಶಯಾತೀತ ಆಧಾರವೆಂದರೆ, ರಾಮಾಯಣದ ಅಯೋಧ್ಯಾಕಾಂಡದಲ್ಲಿ ಬರುವ "ಬುದ್ಧ ಒಬ್ಬ ನಾಸ್ತಿಕ" ಎಂಬ ಮಾತು. ಈ ಆಧಾರದ ಮೇಲೆ ಡಾ|| ರಾಧಾಕೃಷ್ಣನ್ [4] ರಾಮಾಯಣ ಗ್ರಂಥ ರಚನೆ ಕಾಲವು ಮಹಾಭಾರತ ಗ್ರಂಥ ರಚನೆಯ ಕಾಲದನಂತರ ಎಂದು ತೀರ್ಮಾನಿಸುತ್ತಾರೆ. ಆದರೆ ರಾಮಾಯಣದ ಘಟನೆಗಳು ಬಹಳ ಹಿಂದೆಯೇ ನಡೆದಿದ್ದವು ಎಂಬುದನ್ನು ರಾಧಾಕೃಷ್ಣನ್ ಒಪ್ಪಿಕೊಳ್ಳುತ್ತಾರೆ. ಡಾ. ಪದ್ಮಾಕರ ವಿಷ್ಣುವರ್ತಕ ಎಂಬ ವಿದ್ವಾಂಸರು ತಮ್ಮ "ವಾಸ್ತವ ರಾಮಾಯಣ' [5] ಎಂಬ ಗ್ರಂಥದಲ್ಲಿ ಪಾಣಿನಿಯು ಕೆಲವು ಸಂಶೋಧಕರ ಪ್ರಕಾರ ಕ್ರಿ.ಪೂ. 800ರಲ್ಲಿ ಇದ್ದನೆಂದೂ, ಅವನೆ ಶೂರ್ಪನಖಿ, ಸೌಮಿತ್ರಿ, ರಾವಣ, ಕಾಕುತ್ಸ್ಥ, ರಾವಣಿ ಕೈಕೆಯಿ, ವೈಶ್ರವಣ ಮುಂತಾದ ರಾಮಾಯಣದ ಪದಗಳನ್ನು ಪ್ರಯೋಗಿಸಿದ್ದಾನೆಂದೂ, ಆದುದರಿಂದ ರಾಮಾಯಣವು ಕ್ರಿ.ಪೂ. 800ಕ್ಕಿಂತ ಹಿಂದಿನದೆಂದೂ ಹೇಳುತ್ತಾರೆ. ಡಾ. ವರ್ತಕರು [6] ಪಾಣಿನಿಯ ಕಾಲ ಕ್ರಿ.ಪೂ. 800 ಎಂಬುದನ್ನು ಒಪ್ಪದೆ. ಅದು ಕನಿಷ್ಠ ಕ್ರಿ.ಪೂ.1160 ಇರಬೇಕೆಂದು ವಾದಿಸುತ್ತಾರೆ. ಒಂದು ವೇಳೆ, ಪಾಣಿನಿಯ ಕಾಲ ಕ್ರಿ. ಪೂ. 800 ಎಂಬುದೇ ನಿಜವೆಂದರೂ ಸಹ, ರಾಮಾಯಣದ ಘಟನೆ ಬುದ್ಧನಿಗಿಂತ ಹಳೆಯದು ಎಂಬುದಂತೂ ಖಚಿತವಾಗುತ್ತದೆ [7] (ಡಾ. ವರ್ತಕರ ಪ್ರಕಾರ ರಾಮ ಮತ್ತು ವಾಲ್ಮೀಕಿ ಕ್ರಿ. ಪೂ. 5600 ಕ್ಕಿಂತ ಹಿಂದೆ ಇದ್ದರು [8] ).

ಮಹಾಭಾರತ ಗ್ರಂಥವು ರಾಮಾಯಣ ಗ್ರಂಥಕ್ಕಿಂತ ಮೊದಲೆ ರಚನೆಯಾದರೂ, ಮಹಾಭಾರತದ ಘಟನೆಗಳು ರಾಮಾಯಣದ ಘಟನೆಗಳ ನಂತರ ಎಂಬುದರ ಬಗ್ಗೆ ಸಂಶೋಧಕರಲ್ಲಿ ಭಿನ್ನಾಭಿಪ್ರಾಯಗಳಿಲ್ಲ, ಕೋಲ್‍ಬ್ರೂಕ್, ವಿಲ್ಸನ್, ಎಲ್‍ಫಿನ್‍ಸ್ಟನ್, ವಿಲ್ಫರ್ಡ್ ಇವರ ಪ್ರಕಾರ ಮಹಾಭಾರತವು ಕ್ರಿ. ಪೂ. 10ನೇ ಶತಮಾನಕ್ಕಿಂತ ಈಚೆಗಿರಲು ಸಾಧ್ಯವೇ ಇಲ್ಲ. [9] ರಾಮಾಯಣ ಕಾಲ ಅದಕ್ಕಿಂತ ಹಿಂದಿನದು ಎಂದ ಮೇಲೆ ರಾಮಾಯಣದ ಅಗಸ್ತ್ಯ ಮತ್ತು ವಿಭೀಷಣರನ್ನು ಸಂಧಿಸಿದ ರೇಣುಕಾಚಾರ್ಯರು, ಅನೇಕ ಶತಮಾನಗಳನಂತರ ಉದಿಸಿದ ಬೌದ್ಧಮತವನ್ನು ಖಂಡಿಸುವುದು ಹಾಸ್ಯಾಸ್ಪದವೇ ಸರಿ. ಅಥವಾ ಅವರು ಬುದ್ಧೋತ್ತರ ಕಾಲಕ್ಕೆ ಸೇರಿದವರಾದರೆ, ಅನೇಕ ಶತಮಾನಗಳ ಹಿಂದಿದ್ದ ಅಗಸ್ತ್ಯ ಮತ್ತು ವಿಭೀಷಣರನ್ನು ಸಂಧಿಸಿದುದು ಅಸಾಧ್ಯದ ಮಾತಾಗುತ್ತದೆ.

ಒಂದು ವೇಳೆ ನಾವು ಪೌರಾಣಿಕ ಭಾಷೆಯಲ್ಲೇ ಮಾತಾಡಬೇಕೆಂದರೂ ಸಹ, ಮಹಾಭಾರತ ದ್ವಾಪರಯುಗದಲ್ಲಿ ನಡೆಯಿತೆಂದೂ, ರಾಮಾಯಣವೂ ಅದಕ್ಕಿಂತ ಹಿಂದಿನ ತ್ರೇತಾಯುಗದಲ್ಲಿ ನಡೆಯಿತೆಂದೂ ಹೇಳುವುದು ಸಮಂಜಸ. ತ್ರೇತಾಯುಗದಲ್ಲಿ ರೇಣುಕಾಚಾರ್ಯರು ಅನೇಕ ಸಾವಿರ ವರ್ಷಗಳ ನಂತರ ಕಲಿಯುಗದಲ್ಲಿ ಹುಟ್ಟಿದ ಭೌದ್ಧಮತವನ್ನು ಖಂಡಿಸುವುದು, ಪುರಾಣಪ್ರಿಯರಿಗೆ ಇಷ್ಟವಾಗುತ್ತದೆಯೇ ಹೊರತು ಸಂಶೋಧಕ ಬುದ್ಧಿಯವರಿಗಲ್ಲ.

2.3 ಅದೇ ರೀತಿ ಸಿದ್ಧಾಂತ ಶಿಖಾಮಣಿಯಲ್ಲಿ ಸಾಂಖ್ಯ ಪಾತಂಜಲ ಯೋಗಗಳ ಪ್ರಸ್ತಾಪವೂ ಬರತ್ತದೆ. ಸಾಂಖ್ಯವು ಈಶ್ವರಕೃಷ್ಣನ "ಸಾಂಖ್ಯಕಾರಿಕಾ" ಎಂಬ ಗ್ರಂಥದ ಮೂಲಕ ಪ್ರಕಾಶಕ್ಕೆ ಬಂದಿದೆ. ಈಶ್ವರಕೃಷ್ಣನ ಕಾಲ ಸುಮಾರು ಕ್ರಿ.ಶ. 200, ಪತಂಜಲಿಯ ಕಾಲ ಕ್ರಿ. ಪೂ. 150. ಅಂದರೆ, ಸಾಂಖ್ಯ ಮತ್ತು ಯೋಗವನ್ನು ಪ್ರಸ್ತಾಪಿಸುವ ರೇಣುಕಾಚಾರ್ಯರು ರಾಮಾಯಣ ಕಾಲದಲ್ಲಿದ್ದರು ಎಂದು ನಂಬುವುದು ಹೇಗೇ? ಅಥವಾ ಅವರು ರಾಮಾಯಣ ಕಾಲದಲ್ಲಿದ್ದರೆ ಇನ್ನೂ ಹುಟ್ಟದಿದ್ದ ಸಾಂಖ್ಯ ಮತ್ತು ಯೋಗ ದರ್ಶನಗಳನ್ನು ಪ್ರಸ್ತಾಪಿಸಲು ಹೇಗೆ ಸಾಧ್ಯ?

3. ಧರ್ಮಸ್ಥಾಪಕರ ಬಗ್ಗೆ ಅಸಂಬದ್ಧ ಮಾತುಗಳು:

3.1 ಕೈಲಾಸದಿಂದ ಭೂಮಿಗೆ ಅವತರಿಸಿದ ರೇಣುಕಾಚಾರ್ಯರು ಅಗಸ್ತ್ಯ ಮುನಿಗೆ ವೀರಶೈವ ಸಿದ್ಧಾಂತಗಳನ್ನು ಬೋಧಿಸಿದರು ಎಂಬ ವಿಚಾರ ಸಿದ್ಧಾಂತ ಶಿಖಾಮಣಿಯಲ್ಲಿ ಉಕ್ತವಾಗಿದೆ. ಈ ಆಧಾರದ ಮೇಲೆ ಅನೇಕ ಜನ ಪಂಡಿತರು ರೇಣುಕಾಚಾರ್ಯರೇ ವೀರಶೈವ ಮತಸ್ಥಾಪಕರು ಎಂದು ನಿರರ್ಥಕವಾಗಿ ವಾದಿಸುತ್ತಾರೆ. ಅಂಥ ಒಂದು ವಾದ ಹೀಗಿದೆ.

ವೀರಶೈವ ಧರ್ಮಸಂಸ್ಥಾಪಕರಾದ ರೇವಣಾಧ್ಯ, ಮರುಳಾರಾಧ್ಯ, ಏಕೋರಾಮಾರಾಧ್ಯ ಪಂಡಿತಾರಾಧ್ಯ ಮತ್ತು ವಿಶ್ವಾರಾಧ್ಯರೆಂಬ ಪಂಚಾಚಾರ್ಯರು ಸದಾಶಿವನ ಪಂಚಮುಖಗಳಿಂದ ಪ್ರತಿಯುಗದಲ್ಲಿಯೂ ಅವತರಿಸಿ ಧರ್ಮತತ್ವಗಳನ್ನು ಪ್ರತಿಸ್ಥಾಪಿಸಿದ್ದಾರೆ, ಆ ಆಚಾರ್ಯರು. "ಅಗಸ್ತ್ಯ, ದಧೀಚಿ, ವ್ಯಾಸ ಸಾನಂದ ಮತ್ತು ದೂರ್ವಾಸರೆಂಬ ಮಹರ್ಷಿಗಳಿಗೆ ಧರ್ಮಬೋಧೆಯನ್ನು ಮಾಡಿದ್ದು ಆಗಲೇ ಶಿವಾಗಮಗಳಲ್ಲಿ ಸುಪ್ರಸಿದ್ಧವಾಗಿದೆ. ಇದೂ ಅಲ್ಲದೆ, ಸಿದ್ಧಾಂತ ಬೋಧಕಗಳಾದ ಕಾಮಿಕಾದಿ ವಾತುಲಾಂತಗಳಾದ ಇಪ್ಪತ್ತೆಂಟು ಶಿವಾಗಮಗಳು ಸಾಕ್ಷಾತ್ ಶಿವನಿಂದ ಪಾರ್ವತಿಗೆ ಉಪದೇಶಿಸಲ್ಪಟ್ಟಿವೆ. ಈ ಆಗಮಗಳ ಉತ್ತರಭಾಗದಲ್ಲಿ ಉಕ್ತಗಳಾದ ವೀರಶೈವ ತತ್ವಗಳು.. ಪುನ: ಜನತೆಗೆ ಪ್ರಾಪ್ತವಾದ ಕಾರಣ, ಈ ಜ್ಞಾನ ಪರಂಪರೆಗಾದರೂ ಪರಮಾತ್ಮನೆ ಮೂಲ...[10] .

ಮೇಲಿನ ಮಾತುಗಳಿಂದ ಮೂರು ಅಂಶಗಳು ವ್ಯಕ್ತವಾಗುತ್ತವೆ.
(1) ವೀರಶೈವ ಧರ್ಮದ ತತ್ವಗಳು ಮೊದಲು ಶಿವನಿಂದ ಇತರರಿಗೆ ಹೇಳಲ್ಪಟ್ಟವು.
(2) ವೀರಶೈವ ಧರ್ಮದ ತತ್ವಗಳು ಆಗಲೇ ಆಗಮದಲ್ಲಿ ಹೇಳಲ್ಪಟ್ಟಿವೆ.
(3) ಪಂಚಾಚಾರ್ಯರೇ ವೀರಶೈವ ಧರ್ಮದ ತತ್ವಗಳನ್ನು ಮೊದಲು ಬೋಧಿಸಿದರು (ಪಂಚಾಚಾರ್ಯರೇ ವೀರಶೈವ ಧರ್ಮಸ್ಥಾಪಕರು).
ಈ ಮೂರು ಮಾತುಗಳನ್ನು ಮೂವರು ಬೇರೆ ಬೇರೆ ಪಂಡಿತರು ಹೇಳಿದರೆ ಅಸಂಬದ್ಧ ಅಥವಾ ವಿರೋಧಾಭಾಸ ಎನಿಸುವುದಿಲ್ಲ. ಆದರೆ ಒಬ್ಬರೇ ಇದನ್ನು ಹೇಳುವುದು ಖಂಡಿತ ವಿರೋಧಾಭಾಸವಾಗುತ್ತದೆ. ಪರಶಿವನೇ ವೀರಶೈವ ತತ್ವಗಳನ್ನು ಮೊದಲು ಹೇಳಿದ ಎಂದರೆ, ಪಂಚಾಚಾರ್ಯರು ವೀರಶೈವ ಧರ್ಮಸಂಸ್ಥಾಪಕರಾಗುವುದಿಲ್ಲ. ವೀರಶೈವ ಧರ್ಮದ ತತ್ವಗಳು ಮೊದಲೇ ಆಗಮಗಳಲ್ಲಿದ್ದರೆ, ಆಗಲೂ ಪಂಚಾಚಾರ್ಯರು ವೀರಶೈವ ಧರ್ಮ ಸಂಸ್ಥಾಪಕರಾಗುವುದಿಲ್ಲ. ಆದುದರಿಂದ, ಪಂಚಾಚಾರ್ಯರೇ ವೀರಶೈವ ಧರ್ಮ ಸಂಸ್ಥಾಪಕರು ಎಂದು ವಾದಿಸುವವರು ಆಗಮಗಳು ಮೊದಲೋ ಪಂಚಾಚಾರ್ಯರು ಮೊದಲೋ ಎಂಬುದನ್ನು ನಿರ್ಣಯಿಸಬೇಕು.

3.2 ಭೋಲೋಕದಲ್ಲಿ ಅವತರಿಸಿ, ಜನರಿಗೆ ವೀರಶೈವ ಧರ್ಮ ಬೋಧಿಸು ಎಂದು ಶಿವನಿಂದ ಅಣತಿ ಪಡೆದ ಮೇಲೆ ರೇಣುಕಾಚಾರ್ಯರು ಮೊದಲು ಅಗಸ್ತ್ಯ ಋಷಿಯನ್ನು ಭೇಟಿ ಮಾಡುತ್ತಾರೆ. ಇವರಿಬ್ಬರ ಸಂಭಾಷಣೆಯೇ 'ಸಿದ್ಧಾಂತ ಶಿಖಾಮಣಿ' ಎಂಬ ಗ್ರಂಥ ರೂಪದಲ್ಲಿ ಪ್ರಸಿದ್ಧಿಯಾಗಿದೆ. ಆದರೆ, ಇವರಿಬ್ಬರು ನಡೆಸುವ ಸಂಭಾಷಣೆಯಲ್ಲಿ ಈ ಎರಡು ಅಂಶಗಳು ನಮ್ಮ ಗಮನ ಸೆಳೆಯುತ್ತವೆ.

1. ರೇಣುಕಾಚಾರ್ಯರು ಅಗಸ್ತ್ಯಮುನಿಗೆ ಹೀಗೆ ಹೇಳುತ್ತಾರೆ: "ಶಿವದ್ವೈತದಿಂದ ಉಂಟಾಗುವ ಆನಂದವನ್ನು ವ್ಯಕ್ತಪಡಿಸುವುದರಲ್ಲಿ ನಿನಗೆ ಆಸಕ್ತಿ ಇದೆ ಎಂದು ಜನರು ನಿನ್ನನ್ನು ಹೊಗಳುತ್ತಿರುವವರು" (4.43).

2. ರೇಣುಕಾಚಾರ್ಯರು ಅಗಸ್ತ್ಯಮುನಿಯನ್ನು 'ಸಮಸ್ತಾಗಮಪಾರಗ' (ಎಲ್ಲ ಆಗಮಗಳಲ್ಲಿ ಪರಿಣತಿ ಉಳ್ಳವನು) ಎಂದು ಹೊಗಳುತ್ತಾರೆ. (5.2).

ರೇಣುಕಾಚಾರ್ಯರು ಅಗಸ್ತ್ಯಮುನಿಗೆ ಶಿವಾದ್ವೈತವನ್ನು ಬೋಧಿಸುವ ಮುನ್ನವೇ ಅವನಿಗೆ ಅದು ಗೊತ್ತಿತ್ತು ಎಂಬ ಮಾತು ಮೊದಲನೆಯ ಶ್ಲೋಕದಿಂದ ಸ್ಪಷ್ಟವಾಗುತ್ತದೆ. ಆದುದರಿಂದಲೇ ಜನರು ಅವನನ್ನು ಶಿವಾದ್ವೈತಪರಮಾನಂದ ಪ್ರಕಾಶಕ ಎಂದು ಹೊಗಳುವುದು. ರೇಣುಕರೇ ಈ ವಿಷಯವನ್ನು ಒಪ್ಪಿಕೊಳ್ಳುತ್ತಾರೆ. ಎರಡನೇ ಶ್ಲೋಕದ ಪ್ರಕಾರ ಅಗಸ್ತ್ಯಮುನಿಗೆ ಎಲ್ಲ ಆಗಮಗಳೂ ಗೊತ್ತಿದ್ದವು, ಅಂದಮೇಲೆ, ಅವುಗಳಲ್ಲಿದ್ದ ವೀರಶೈವಪರವಾದ ಸಿದ್ಧಾಂತಗಳೂ ಗೊತ್ತಿದ್ದವು, ಎಂದೇ ಅರ್ಥ, ಹಾಗಾದರೆ, ರೇಣುಕಾಚಾರ್ಯರು ವೀರಶೈವ ಸಿದ್ಧಾಂತದ ಪ್ರಸಾರಕರಾಗುತ್ತಾರೆಯೇ ಹೊರತು ಸಂಸ್ಥಾಪಕರಾಗುವುದಿಲ್ಲ.

4. ಸಿದ್ಧಾಂತ ಶಿಖಾಮಣಿಯಲ್ಲಿ ಲಿಂಗಾಯತ ವಿರೋಧಿ ಸಿದ್ಧಾಂತಗಳು:

ಸಿದ್ಧಾಂತ ಶಿಖಾಮಣಿಯ ಅನೇಕ ಸಿದ್ಧಾಂತಗಳು ವಚನೋಕ್ತ ಲಿಂಗಾಯತಕ್ಕೆ ವಿರುದ್ಧವಾಗಿವೆ. ಇವನ್ನು ಎರಡು ಭಾಗ ಮಾಡಬಹುದು.
(ಅ) ತತ್ವಮೀಮಾಂಸೀಯ ಮತ್ತು (ಆ) ಆಚರಣೆಯ ಸಿದ್ಧಾಂತಗಳು.

4.1 ತತ್ವಮಿಮಾಂಸೀಯ ಸಿದ್ಧಾಂತಗಳು

4.1.1 ಪರಶಿವನ ಪರಿಕಲ್ಪನೆ
ಸಿದ್ಧಾಂತ ಶಿಖಾಮಣಿಯ ಪರಶಿವ ಕಲ್ಪನೆಗೂ ಆಗಮಗಳ ಪರಶಿವ ಪರಿಕಲ್ಪನೆಗೂ ಏನೂ ವ್ಯತ್ಯಾಸವಿಲ್ಲ. ಎರಡೂ ಪೌರಾಣಿಕವೇ. ಸಿದ್ಧಾಂತ ಶಿಖಾಮಣಿಯ ಪರಶಿವ ರುಂಡಮಾಲಾಧರ (3:17). ತಲೆಯಲ್ಲಿ ಚಂದ್ರನನ್ನು ಧರಿಸಿದ್ದಾನೆ, (3:16), ಗಲ್ಲದವರೆಗೆ ಜೋಲಾಡುತ್ತಿರುವ ಕರ್ಣ ಕುಂಡಲಧಾರಿ. (3:19), ರತ್ನಕಂಕಣ ಮತ್ತು ರತ್ನಮಯಭುಜ ಕಿರೀಟಗಳನ್ನು ಧರಿಸಿರುವವನು(3.20).

ಬಹಳ ಮುಖ್ಯವಾದ ಮತ್ತು ಗಮನಿಸಲೇಬೇಕಾದ ಅಂಶವೆಂದರೆ- ಸಿದ್ಧಾಂತ ಶಿಖಾಮಣಿಯ ಪರಶಿವ ಸುವರ್ಣಬ್ರಹ್ಮಸೂತ್ರಾಂಕ(ಜನಿವಾರ) ಧರಿಸಿರುವುದು. ಇದರಿಂದ ಶಿವ ಬ್ರಾಹ್ಮಣ ಎಂಬುದೂ ಸಿದ್ಧಾಂತ ಶಿಖಾಮಣಿಯ ಬ್ರಾಹ್ಮಣರ ಗ್ರಂಥ ಎಂಬುದೂ ಸ್ಪಷ್ಟವಾಗುತ್ತದೆ. ಸಿಂಹಗಳಿಗೂ ಕುದುರೆಗಳಿಗೂ ಚಿತ್ರ ಬರೆಯಲು ಬಂದರೆ, ಅವು ತಮ್ಮ ದೇವರನ್ನು ಒಂದು ದೊಡ್ಡ ಬಲಿಷ್ಠಶಾಲಿ ಸಿಂಹ ಅಥವಾ ಕುದುರೆಯಂತೆ ಚಿತ್ರಿಸುತ್ತಿದ್ದವು ಎಂಬ ಗ್ರೀಕ್ ತತ್ವಜ್ಞಾನಿಯೊಬ್ಬನ ಮಾತನ್ನು ಇಲ್ಲಿ ನೆನಪಿಸಿಕೊಳ್ಳುವುದು ಸೂಕ್ತವೆನಿಸುತ್ತದೆ. ಅದೇ ರೀತಿ ಪೂಜಕರು ಬಾಹ್ಮಣರಾಗಿದ್ದರೆ ತಮ್ಮ ದೇವನನ್ನೂ ಬಾಹ್ಮಣನಂತೆ ಚಿತ್ರಿಸುತ್ತಾರೆ.

ನಂದಿ, ಮಹಾಕಾಳ, ಚಂಡ ಭೃಂಗಿ, ಘಂಟಾಕರ್ಣ, ಪುಷ್ಪದಂತ ಕಪಾಲಿ, ವೀರಭದ್ರ ಮುಂತಾದ ಗಣಶ್ರೇಷ್ಠರು ಶಿವನನ್ನು ಸೇವಿಸುತ್ತಾರೆ. (3:46). ಅವನ ಸೇವೆ ಮಾಡುವ ಇತರರೆಂದರೆ ಬ್ರಹ್ಮ, ವಿಷ್ಣು, ದೇವೇಂದ್ರ ಮುಂತಾದವರು (3.53). ದ್ವಾದಶ ಆದಿತ್ಯರು, ಧ್ರುವ ಅಷ್ಟವಸುಗಳು, ಕುಬೇರ ಮೊದಲಾದ ಯಕ್ಷರು, ಗಂಧರ್ವರು, ಕಿನ್ನರರು(3.54), ದಾನವರು, ರಾಕ್ಷಸರು, ದೈತ್ಯರು, ಸಿದ್ಧರು, ವಿದ್ಯಾಧರರು (3:55), ವಿಸಿಷ್ಠ, ವಾಮದೇವ, ಪುಲಸ್ತ್ಯ, ಅಗಸ್ತ್ಯ, ಶೌನಕ ದಧೀಚಿ, ಗೌತಮ, ಸಾನಂದ, ಶುನಕ, ಭೃಗು, ವ್ಯಾಸ, ಪರಾಶರ ಮೊದಲಾದ ಋಷಿಗಳು(3:56).

ಇದಕ್ಕೆ ಭಿನ್ನವೆಂಬಂತೆ ವಚನಕಾರರು ಪರಶಿವನನ್ನು ಆದಷ್ಟು ಮನುಷ್ಯಗುಣಗಳಿಂದ ಮುಕ್ತಮಾಡಿದ್ದಾರೆ. ಅಂಬಿಗರ ಚೌಡಯ್ಯ ಹೇಳುವಂತೆ ಪರಶಿವನಿಗೆ "ಅಸುರರ ಮಾಲೆಗಳಿಲ್ಲ, ತ್ರಿಶೂಲ ಢಮರುಗವಿಲ್ಲ, ಬ್ರಹ್ಮಕಪಾಲವಿಲ್ಲ...." [11] ಪರಶಿವ ಸತ್ ಚಿತ್ ಆನಂದ ನಿತ್ಯ ಪರಿಪೂರ್ಣ. ಅವನಿಗೆ ಯಾವುದೇ ಆಕಾರಗಳಿಲ್ಲ.

4.1.2 ಕೈಲಾಸದ ಪರಿಕಲ್ಪನೆ
ಸಿದ್ಧಾಂತ ಶಿಖಾಮಣಿಯ ಪ್ರಕಾರ ಪರಶಿವ ಕೈಲಾಸದಲ್ಲಿರುತ್ತಾನೆ. ಅವನು ಶೀಘ್ರ ಕೋಪಿ, ತಾಂಬೂಲ ಪ್ರಸಾದವನ್ನು ಪಡೆಯಲು ರೇಣುಕರು ದಾರುಕ ಎಂಬ ಮತ್ತೊಬ್ಬ ಶಿವಭಕ್ತರನ್ನು ದಾಟಿಕೊಂಡು ಹೋದುದೇ ಪರಶಿವನಿಗೆ ಘೋರ ಅಪರಾಧವಾಗಿ ಕಾಣುತ್ತದೆ. ರೇಣುಕನನ್ನು ದುರ್ಬುದ್ಧಿಯ ರೇಣುಕ ಎಂದು ಹೀಯಾಳಿಸಿ. 'ನೀನು ಭೋಲೋಕದಲ್ಲಿ ಹುಟ್ಟು' ಎಂದು ಶಪಿಸುತ್ತಾನೆ (3.70,79).

ಇದಕ್ಕೆ ವಿರುದ್ಧವಾಗಿ ವಚನಕಾರರು ಕೈಲಾಸ ಪರಿಕಲ್ಪನೆಯನ್ನು ತಿರಸ್ಕರಿಸುತ್ತಾರೆ. 'ಕೈಲಾಸ ಕೈಲಾಸವೆಂದು ಬಡಿದಾಡುವ ಅಣ್ಣಗಳಿರಾ ಕೇಳಿರಯ್ಯಾ ಕೈಲಾಸವೆಂಬುದೊಂದು ಹಾಳು ಬೆಟ್ಟ... ಅಲ್ಲಿರುವ ಚಂದ್ರಶೇಖರನು ಬಹು ಎಡ್ಡ... [12] ಎಂದು ಸಿದ್ಧರಾಮನು ವಿಡಂಬಿಸಿದರೆ "ಕೈಲಾಸವೆಂಬುದೇನೊ, ಪೃಥ್ವಿಯ ಮೇಲೊಂದು ಮೊರಡಿ" ಎಂದು ಬಸವಣ್ಣನವರು [13]. "ಕೈಲಾಸವೆಂಬುದೊಂದು ಬೆಳ್ಳಿಯ ಬೆಟ್ಟ, ಅಲ್ಲದ್ದಾತ ರುದ್ರನೊಬ್ಬ, ಆ ಬೆಟ್ಟಕ್ಕೂ ಆ ರುದ್ರಂಗೆಯೂ ಪ್ರಳಯ ಉಂಟೆಂಬುದು...[14] , ಎಂದು ಅಲ್ಲಮಪ್ರಭುವೂ ಅಪಹಾಸ್ಯ ಮಾಡುತ್ತಾರೆ. ಕೆಲವು ಸಾರಿ ವಚನಕಾರರು ಕಾಯವೇ ಕೈಲಾಸ, ಅಯ್ಯಾ ಎಂದಡೆ ಸ್ವರ್ಗ, ಮುಂತಾದ ಮಾತಾಡಿದರೂ, ಅವರಿಗೆ ಕೈಲಾಸ ಸ್ವರ್ಗ, ಶಿವಪುರಿ ಮುಂತಾದವುಗಳಲ್ಲಿ ನಂಬಿಕೆಯಿಲ್ಲ.

4.1.3 ಶಕ್ತಿಯ ಪರಿಕಲ್ಪನೆ
ಶಂಕರಾಚಾರ್ಯರ ಅದ್ವೈತದಲ್ಲಿ ಮಾಯೆಯ ಪರಿಕಲ್ಪನೆ ಎಷ್ಟು ಮುಖ್ಯವೋ, ವಚನಗಳ ತತ್ವ ಮೀಮಾಂಸೆಯಲ್ಲಿ ಶಕ್ತಿಯ ಪರಿಕಲ್ಪನೆಯೂ ಅಷ್ಟೇ ಮುಖ್ಯ. ವಚನಕಾರರ ಪ್ರಕಾರ, ಶಕ್ತಿ ಒಂದು ಜಡವಸ್ತು, ಕೆಲವರು ಅದು ಪರಶಿವನ ಶರೀರ ಎಂದು ಪರಿಗಣಿಸುತ್ತಾರೆ. ಅಂತೂ ಪರಶಿವ ಇಲ್ಲದೆ ಶಕ್ತಿಯಿಲ್ಲ, ಶಕ್ತಿಯಿಲ್ಲದೆ ಪರಶಿವ ಇಲ್ಲ. ಶಕ್ತಿ ಅವನ ಶರೀರವಾಗಿರುವುದರಿಂದ (ಅಥವಾ ಶರೀರದಂತೆ ಅವನನ್ನೇ ಅವಿನಾಭಾವದಿಂದ ಅವಲಂಬಿಸಿರುವುದರಿಂದ) ಅವನಿಗೆ ಅದು ಅನ್ಯವಲ್ಲ. ವಚನೋಕ್ತ ಲಿಂಗಾಯತದ ಪ್ರಕಾರ, ಶಿವ ಜಗವಾಗಲೂ ಬಲ್ಲ, ಜಗವಾಗದಿರಲೂ ಬಲ್ಲ. ಅಥವಾ ಶಕ್ತಿಯೇ ಜಗವಾಗುತ್ತದೆ, ಎಂದರೂ ಸಹ, ಅದು ತಂತಾನೇ ಜಗವಾಗದೆ, ಶಿವನ ಇಚ್ಛೆಯಂತೆ ಜಗವಾಗುತ್ತದೆ. ಅಂದರೆ, ಶಕ್ತಿಯು ಚೇತನವಲ್ಲ, ಚೈತನ್ಯಾತ್ಮಕ ಪರಶಿವನ ಇಚ್ಛೆಯಂತೆ ಪರಿವರ್ತನೆಗೊಳಗಾಗುವ, ಅವನಲ್ಲೇ ಇರುವ, ಜಡವಸ್ತು. ಅದು ಜಗತ್ತಿನ ಉಪಾದಾನ ಕಾರಣ.

ಆದರೆ ಸಿದ್ಧಾಂತ ಶಿಖಾಮಣಿಯ ಪ್ರಕಾರ, ಶಕ್ತಿ ಒಬ್ಬ ಹೆಂಗಸು, ಆಕೆ ಪರಶಿವನ ಹೆಂಡತಿಯಾದುದರಿಂದ, ಗ್ರಂಥಕರ್ತೃ ಆಕೆಗೆ ಗ್ರಂಥಾರಂಭದಲ್ಲಿ ನಮಸ್ಕರಿಸುತ್ತಾನೆ. (ವಚನಕಾರರು ಶಕ್ತಿಯನ್ನು ವಂದಿಸಿದ ಉದಾಹರಣೆಗಳು ಇಲ್ಲ). ಆಕೆಯನ್ನು ಧರ್ಮಚಾರಣೀ ಎಂದು ಕರೆದಿದ್ದಾನೆ (ನೋಡಿ ಮೊದಲನೆ ಪರಿಚ್ಛೇದ, 8-10). ಹಾಗೆಯೇ, ಮತ್ತೆ ಎರಡನೇ ಪರಿಚ್ಛೇದದ ಮೊದಲಿನ ಎರಡು ಶ್ಲೋಕಗಳಲ್ಲಿ ಶಕ್ತಿಯನ್ನು ಸ್ತುತಿಸುವಾಗ "ಮಹೇಶ್ವರೀಂ ಶಕ್ತಿಂ" ಎಂದು ಕರೆದಿದ್ದಾನೆ. ಎರಡನೇ ಪರಿಚ್ಛೇದದ 35 ಮತ್ತು 36ನೇ ಶ್ಲೋಕಗಳೂ ಸಹ ಶಕ್ತಿಯು ಹೆಂಗಸೆಂಬುದನ್ನು ದೃಢಪಡಿಸುತ್ತವೆ. ಅಷ್ಟೇ ಅಲ್ಲ. ಆಕೆ ತಾನೇ ಜಗತ್ತಾಗುತ್ತಾಳೆ(2.13). ಮೂರನೆ ಪರಿಚ್ಛೇದದ 25ರಿಂದ 36ರವರೆಗಿನ ಶ್ಲೋಕಗಳೂ ಸಹ ಆಕೆಯೆ ಇಚ್ಛಾಜ್ಞಾನಕ್ರಿಯಾಶಕ್ತಿಗಳಾಗುವಳೆಂದೂ, ಮುಂದೆ ಜಗತ್ತಾಗುತ್ತಾಳೆಂದೂ ವರ್ಣಿಸುತ್ತವೆ. ಅಂತೂ ಸಿದ್ಧಾಂತ ಶಿಖಾಮಣಿಯ ಶಕ್ತಿ ಜಡವಸ್ತುವಲ್ಲ, ಜಗತ್ತಿನ ಉಪಾದಾನ ಕಾರಣವಾದ, ಚೈತನ್ಯರೂಪದ ಶಕ್ತಿ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಸಿದ್ಧಾಂತ ಶಿಖಾಮಣಿಯ ಈ ಪರಿಕಲ್ಪನೆ ಆಗಮಗಳಿಗೂ ಅವುಗಳ ಆಧಾರದ ಮೇಲೆ ನಿಂತಿರುವ ಶೈವ ಸಿದ್ಧಾಂತಕ್ಕೂ ಅನುಗುಣವಾಗಿದೆ. ಸಿದ್ಧಾಂತ ಶಿಖಾಮಣಿಯ ಶೈವ ಸಿದ್ಧಾಂತದ (ಅಥವಾ ಶುದ್ಧ ಶೈವದ) ಅನೇಕ ಸಿದ್ಧಾಂತಗಳನ್ನು ಅನುಮೋದಿಸುವಂತೆ, ಅದರ ಶಕ್ತಿಪರಿಕಲ್ಪನೆಯನ್ನೂ ಅನುಮೋದಿಸುವುದರಲ್ಲಿ ಆಶ್ಚರ್ಯವೇನಿಲ್ಲ. ಹಾಗೆ ಅನುಮೋದಿಸದಿದ್ದರೆ, ಆಗಮಗಳಿಗೆ ವಿರೋಧವಾದೀತೆಂಬ ಭಯ ಸಿದ್ಧಾಂತ ಶಿಖಾಮಣಿಯ ಕರ್ತೃವಿಗಿದ್ದೀತು.

ಶಕ್ತಿಯು ಒಬ್ಬ ವ್ಯಕ್ತಿ ಎಂಬ ಸಿದ್ಧಾಂತದಲ್ಲಿ ಒಂದು ದೋಷವಿದೆ. ಕುಂಬಾರನು ಮಣ್ಣು ಎಂಬ ಉಪಾದಾನ ಕಾರಣವನ್ನು ಬಳಸಿಕೊಂಡು ಮಡಿಕೆಗಳನ್ನು ಹೇಗೆ ಮಾಡುತ್ತಾನೋ, ಹಾಗೆ ಪರಶಿವನು ಶಕ್ತಿ ಎಂಬ ಉಪಾದಾನ ಕಾರಣವನ್ನು ಬಳಸಿಕೊಂಡು ಜಗತ್ತನ್ನು ರಚಿಸುತ್ತಾನೆ ಎಂಬುದು ಆಗಮಗಳ ಮತ್ತು ಶೈವಸಿದ್ಧಾಂತದ ನಿಲುವು. ಆಗ ಆ ಶಕ್ತಿಯು ಜಡವಾಗಿದ್ದರೆ ಸಾಕು. ಒಂದು ವೇಳೆ ಶಕ್ತಿಯೇ ಉದ್ದೇಶವುಳ್ಳ ಸೃಷ್ಟಿಕರ್ತೆಯಾಗಿದ್ದರೆ (ಸಿದ್ಧಾಂತ ಶಿಖಾಮಣಿಯ ಹೇಳುವಂತೆ ಆಕೆಯೇ ಜಗತ್ತಾಗಿ ರೂಪಾಂತರಗೊಂಡರೆ). ಆಗ ಶಿವ ಎಂಬ ಸೃಷ್ಟಿಕರ್ತ ಏಕೆ ಬೇಕು? ಅಂದರೆ, ಜಡಶಕ್ತಿ ಸಮೇತನಾದ ಶಿವನೇ ಜಗತ್ತಾದರೆ, ಶಕ್ತಿ ಎಂಬ ಹೆಂಗಸರು ಅನಗತ್ಯ. ಚೈತನ್ಯರೂಪಿಣಿಯಾದ ಶಕ್ತಿಯೇ ಜಗತ್ತಾದರೆ, ಆಗ ಶಿವ ಅನಗತ್ಯ, ಸಿದ್ಧಾಂತ ಶಿಖಾಮಣಿಯು ಶಕ್ತಿಯು ಚೈತನ್ಯರೂಪಿಣಿ ಎಂದೂ, ಆಕೆಯೇ ಜಗತ್ತಾಗುತ್ತಾಳೆ ಎಂದೂ ಹೇಳುವುದರಿಂದ, ಶಿವ ಏಕೆ ಬೇಕು ಎಂಬುದನ್ನು ಪರಾಮರ್ಶಿಸಬೇಕು.

4.1.4 ಶಿವ ಮತ್ತು ಜಗತ್ತುಗಳ ನಡುವಿನ ಸಂಬಂಧ
ಪ್ರತಿಯೊಂದು ಧರ್ಮದಲ್ಲಯೂ ದೈವದ ಸ್ವರೂಪ, ವಿಶ್ವದ ಸ್ವರೂಪ ದೈವ ಮತ್ತು ಜಗತ್ತುಗಳ ನಡುವಿನ ಸಂಬಂಧದ ಸ್ವರೂಪ, ಇವುಗಳ ಬಗ್ಗೆ ಖಚಿತವಾದ ಸಿದ್ಧಾಂತಗಳಿರುತ್ತವೆ. ಇಂಥ ಸಿದ್ಧಾಂತಗಳು ಕೆಲವೊಮ್ಮೆ ಹಾಸ್ಯಾಸ್ಪದ ಎನಿಸುವಷ್ಟು ಅಸಮಬದ್ಧವಾಗಿರಬಹುದು; ಕೆಲವೊಮ್ಮೆ ತಾರ್ಕಿಕ ಸಮರ್ಥನೆಯಿಂದ ಕೂಡಿರಬಹುದು. ಆದರೆ ಸಿದ್ಧಾಂತ ಶಿಖಾಮಣಿಯಲ್ಲಿ ಶಿವ ಮತ್ತು ಜಗತ್ತುಗಳ ನಡುವಿನ ಸಂಬಂಧ ಕುರಿತಂತೆ ಹಲವಾರು ಅಭಿಪ್ರಾಯಗಳಿವೆ ಮತ್ತು ಸಿದ್ಧಾಂತ ಶಿಖಾಮಣಿಯು ತನ್ನ ನಿಲುವು ಯಾವುದು ಎಂಬುದನ್ನು ಹೇಳುವುದಿಲ್ಲ. ಅದರಲ್ಲಿ ಬರುವ ಈ ಕುರಿತ ಅಭಿಪ್ರಾಯಗಳನ್ನು ತಿಳಿಸಲು ಸಿದ್ಧಾಂತ ಶಿಖಾಮಣಿ ಬಳಸಿಕೊಳ್ಳುವ ಉಪಮೆಗಳನ್ನೂ ಅವುಗಳ ಹಿಂದಿರುವ ಸಿದ್ಧಾಂತಗಳನ್ನೂ ಗಮನಿಸಿ.
1. ಮಣ್ಣಿನಿಂದ ಗಡಿಗೆ ಮುಂತಾದವುಗಳು ಹೇಗೆ ಮಣ್ಣಿನಿಂದ ಭಿನ್ನವಲ್ಲವೋ ಹಾಗೆಯೇ ಪರಶಿವನಿಂದಾದ ಜಗತ್ತು ಅವನಿಂದ ಭಿನ್ನವಲ್ಲ(10.65).
2. ಸಮುದ್ರದಲ್ಲಿ ಹುಟ್ಟುವ ನೊರೆತೆರೆಗುಳ್ಳೆ ಮುಂತಾದವು ಸಮುದ್ರದಿಂದ ಹೇಗೆ ಭಿನ್ನವಲ್ಲವೋ, ಹಾಗೆ ಶಿವತತ್ವದಿಂದ ಹುಟ್ಟಿದ ಜಗತ್ತು ಶಿವನಿಂದ ಭಿನ್ನವಲ್ಲ.(10.66)
3. ನೂಲಿನಿಂದಾದ ಬಟ್ಟೆಯು ನೂಲಿನಮಯ ವಾಗಿರುವಂತೆ ಚರಾಚರಜಗತ್ತು ಶಿವಮಯವಾಗಿದೆ(10.67)
4. ಹಗ್ಗವು ದುಂಡಾಗಿಯೂ ಉದ್ದನಾಗಿಯೂ ಗೋದಿ ಬಣ್ಣವಾಗಿಯೂ ಇರುವುದರಿಂದಾಗಿಯೇ ಅದು ಸರ್ಪದಂತೆ ಹೇಗೆ ತೋರುತ್ತದೆಯೋ ಹಾಗೆಯೇ ಶಿವನೂ ಸಹ ತನ್ನ ಮಾಯಾಶಕ್ತಿಯಿಂದಾಗಿ ತಾನೇ ಯಾವ ವಿಕಾರಕ್ಕೊಳಗಾಗದಿದ್ದರೂ ಜಗತ್ತಿನಂತೆ ತೋರುವನು. (10.69)
5. ಹಗ್ಗವು ತನ್ನ ಉದ್ದ ಗೋದಿ ಬಣ್ಣ, ದುಂಡುತನ ಇವುಗಳಿಂದಾಗಿ ಸರ್ಪದಂತೆ ಕಾಣುವಂತೆ, ಮೋಟುಮರಗು ಕುಳಿತ ಕಳ್ಳನಂತೆ ಕಾಣುವಂತೆ ಮರೀಚಿಕೆಯಲ್ಲಿ ನೀರು ತೋರುವಂತೆ, ಆಕಾಶದಲ್ಲಿ ಗಂಧರ್ವಪುರ ತೋರುವಂತೆ ನಿರ್ವಿಕಾರ ಬ್ರಹ್ಮನಲ್ಲಿ ವಿಶ್ವವು ತೋರುತ್ತದೆ. (10.70-71)

ಈ ಮೇಲಿನ ಐದು ಉಪಮೆಗಳಲ್ಲಿ ಮೊದಲಿನ ಮೂರು ಒಂದು ವರ್ಗಕ್ಕೆ ಸೇರಿದರೆ ಕೊನೆಯ ಎರಡು ಮತ್ತೊಂದು ವರ್ಗಕ್ಕೆ ಸೇರುತ್ತವೆ. ಮಣ್ಣು ಮಡಿಕೆಯಂತೆ ತೋರುವುದಿಲ್ಲ, ಅದು ವಾಸ್ತವವಾಗಿಯೂ ಮಡಿಕೆಯಾಗಿ ಪರಿವರ್ತನೆಯಾಗಿದೆ; ಅದೇ ರೀತಿ ಸಮುದ್ರದಲ್ಲಿ ನೊರೆ, ತೆರೆ, ಗುಳ್ಳೆಗಳಾಗುವುದೂ, ನೂಲು ಬಟ್ಟೆಯಾಗುವುದೂ ವಾಸ್ತವವೇ ಹೊರತು. ಕೇವಲ ತೋರಿಕೆ ಅಥವಾ ಮಿಥ್ಯವಲ್ಲ. ಈ ಅರ್ಥದಲ್ಲಿ ಶಿವನು ತನ್ನ ಶಕ್ತಿಯಿಂದಾಗಿ ತಾನೇ ಜಗತ್ತಾಗಿರುವುದು ಮಿಥ್ಯೆಯಲ್ಲ, ವಾಸ್ತವ.

ಆದರೆ ಹಗ್ಗ ಹಾವಿನಂತೆ ಕಾಣುವುದು, ಕಪ್ಪೆ ಚಿಪ್ಪು ಬೆಳ್ಳಿಯಂತೆ ಕಾಣುವುದು, ಸ್ಥಾಣು (ಮೋಟುಮರ) ಕಳ್ಳನಂತೆ ಕಾಣುವುದು, ಮರೀಚಿಕೆ ನೀರಿನಂತೆ ಕಾಣುವುದು, ಆಕಾಶದಲ್ಲಿ ಗಂಧರ್ವಪುರ ಕಾಣವುದು ಭ್ರಮೆಗಳಿಗೆ ಉದಾಹರಣೆಗಳು, ವಾಸ್ತವವಾಗಿ ಹಾವು, ಬೆಳ್ಳಿ ಕಳ್ಳ, ನೀರು, ಗಂಧರ್ವಪುರ ಆಯಾ ಸಂದರ್ಭಗಳಲ್ಲಿ ಅಸ್ತಿತ್ವದಲ್ಲಿಲ್ಲ. ಅದೇ ರೀತಿ ಶಿವ ಜಗತ್ತಿನಂತೆ ಕಾಣುವದೂ ಒಂದು ಭ್ರಮೆಯೇ ಅಂದರೆ, ನಮಗೆ ಕಾಣುವ ಜಗತ್ತು ವಾಸ್ತವವಲ್ಲ, ಅದು ಕೇವಲ ತೋರಿಕೆ- ಹಗ್ಗದಲ್ಲಿ ಕಾಣುವ ಹಾವಿನಂತೆ.

ಸಿದ್ಧಾಂತ ಶಿಖಾಮಣಿಯ ಮೂರನೇ ಪರಿಚ್ಛೇದದ ಕೈಲಾಸವಾಸಿಯಾದ ಶಿವನ ವರ್ಣನೆಯನ್ನು ನೋಡಿದರೆ, ಶಿವ ಮತ್ತು ಜಗತ್ತುಗಳ ನಡುವಿನ ಸಂಬಂಧ ಮತ್ತೊಂದು ರೀತಿಯಾಗಿರುವುದು ಕಾಣುತ್ತದೆ. ಶಿವನು ಯಾವಾಗಲೂ ಕೈಲಾಸದಲ್ಲಿದ್ದು, ಜಗತ್ತಿಗೆ ಅತೀತನಾಗಿದ್ದಾನೆ ಎಂಬ ಅಂಶ ಅದರಿಂದ ವ್ಯಕ್ತವಾಗುತ್ತದೆ. ವಚನೋಕ್ತ ಲಿಂಗಾಯತದ ಶಿವ ವಿಶ್ವಾತೀತನೂ ಹೌದು, ಸರ್ವಾಂತರ್ಯಾಮಿಯೂ ಹೌದು. ಆದರೆ ಸಿದ್ಧಾಂತ ಶಿಖಾಮಣಿಯ ಮೂರನೇ ಪರಿಚ್ಛೇದದ ಶಿವ ಕೇವಲ ವಿಶ್ವಾತೀತ.

ಶಿವ-ಜಗತ್ತುಗಳ ಸಂಬಂಧದ ಬಗ್ಗೆ ನಾಲ್ಕನೇ ಆಭಿಪ್ರಾಯವೂ ಸಿದ್ಧಾಂತ ಶಿಖಾಮಣಿಯಲ್ಲಿ ಸಿಕ್ಕುತ್ತದೆ. ಶಿವನ ಇಚ್ಚೆಯಂತೆ ಶಕ್ತಿಯು ಇಚ್ಛಾಜ್ಞಾನಕ್ರಿಯಾಶಕ್ತಿಗಳಾಗಿ, ಕೊನೆಗೆ ಜಗತ್ತಾಗಿ ಪರಿವರ್ತಿತವಾಗುತ್ತಾಳೆ(3.25). ಇಲ್ಲಿಯೂ ಶಿವ ವಿಶ್ವಾತೀತನೇ, ಕುಂಬಾರ ತಾನೇ ಸೃಷ್ಟಿಸಿದ ಮಡಿಕೆಗಳಿಂದ ಭಿನ್ನವಾಗಿರುವಂತೆ, ಶಿವನು ಶಕ್ತಿಯಿಂದ (ಶಕ್ತಿಯಿಂದಾದ ಜಗತ್ತಿನಿಂದ) ಭಿನ್ನ.

ಇಷ್ಟೇ ಸಾಲದೆಂಬಂತೆ, ಸಿದ್ಧಾಂತ ಶಿಖಾಮಣಿ ಕೈಲಾಸದಲ್ಲಿಯೂ, ಮಂದಾರ ಪರ್ವತದಲ್ಲಿಯೂ ಹಿಮವತ್ಪರ್ವತದಲ್ಲಿಯೂ ಮೇರುಪರ್ವತದಲ್ಲಿಯೂ ಭಕ್ತರ ಹೃದಯದಲ್ಲಿಯೂ ಶಿವನು ವಿಶೇಷವಾಗಿ ನೆಲೆಸಿರುವನು (10.73-74) ಎಂದು ಹೇಳಿ ಮತ್ತಷ್ಟು ಗೊಂದಲವನ್ನು ಸೃಷ್ಟಿಸಿದೆ, ಇದು ಗೊಂದಲ ಏಕೆಂದರೆ, ಶಿವ ಎಲ್ಲ ಕಡೆಯೂ ಇದ್ದಾನೆ ಎಂದು ಶಿವಜಗನ್ಮಯಸ್ಥಲದಲ್ಲಿ ಹೇಳಿ (ಉದಾ: 10.72) ಮುಂದಿನ ಎರಡು ಶ್ಲೋಕಗಳಲ್ಲಿ ಕೆಲವು ಪ್ರದೇಶಗಳಲ್ಲಿ ವಿಶೇಷವಾಗಿ ನೆಲೆಸಿದ್ದಾನೆ, ಎಂದು ಹೇಳುವುದೇಕೆ? ಸಿದ್ಧಾಂತ ಶಿಖಾಮಣಿ ಕೈಲಾಸ ಸಿದ್ಧಾಂತವನ್ನು ಕೈಬಿಡಲು ಸಾಧ್ಯವಿಲ್ಲವೇ?

ಇವುಗಳಲ್ಲಿ ರೇಣುಕಾಚಾರ್ಯರ (ಸಿದ್ಧಾಂತ ಶಿಖಾಮಣಿಯ) ನಿಲುವು ಯಾವುದು? ಶಿವಸತ್ಯ, ಜಗತ್ತು ಮಿಥ್ಯಾ ಎಂಬುದೇ ಅವರ ಅಂತಿಮ ತೀರ್ಮಾನವೆನಿಸುತ್ತದೆ. ಹಾಗೆನ್ನಲು ಸಿದ್ಧಾಂತ ಶಿಖಾಮಣಿಯಲ್ಲಿ ಹೇರಳವಾಗಿರುವ ಅದ್ವೈತಪರ ಶ್ಲೋಕಗಳೇ ಆಧಾರ, ಉದಾಹರಣೆಗೆ-
1. ಅವಿದ್ಯಾ ಶಕ್ತಿಭೇದೇನ ಜೀವಾ:ಬಹುವಿಧಾ: ಸ್ಮತಾ:|| ಮಾಯಾಶಕ್ತಿವಶಾದೀಶೋ ನಾನಾಮೂರ್ತಿಧರ: ಪ್ರಭು:|| (5.47)
(ಅವಿದ್ಯಾಶಕ್ತಿಯಿಂದಾಗಿ ಜೀವರು ಅನೇಕ ಪ್ರಕಾರವೆಂದು ಹೇಳಲ್ಪಡುವರು, ಮಾಯಾಶಕ್ತಿಯಿಂದಾಗಿ ಈಶನು ನಾನಾ ಮೂರ್ತಿಗಳನ್ನು ಧರಿಸಿದನು)
2. ರಚ್ಚೌಸರ್ಪತ್ವವದ್ಭಾತೀ ಶುಕ್ತೌ ಚ ರಜತತ್ವವತ್| ಚೋರತ್ವಮಪಿ ಚ ಸ್ಥಾಣೌ ಮರೀಚ್ಯಾಂಚ ಜಲತ್ವವತ್|| (10.70)
3. ಗಂಧರ್ವಪುರವದ್ಯೋಮ್ನಿ ಸಚ್ಚಿದಾನಂದ ಲಕ್ಷಣೇ ನಿರಸ್ತಭೇದಸದ್ಭಾವೇ ಶಿವೇ ವಿಶ್ವಂ ವಿರಾಜತೇ|| (10.71)
(ಹಗ್ಗದಲ್ಲಿ ಸರ್ಪ ತೋರುವಂತೆ ಕಪ್ಪೆಚಿಪ್ಪಿನಲ್ಲಿ ಬೆಳ್ಳಿ ಕಾಣುವಂತೆ, ಸ್ಥಾಣುವಿನಲ್ಲಿ ಕಳ್ಳ ತೋರುವಂತೆ, ಮರೀಚಿಕೆಯಲ್ಲಿ ನೀರು ತೋರುವಂತೆ, ಆಕಾಶದಲ್ಲಿ ಗಂಧರ್ವಪುರ ತೋರುವಂತೆ, ಶಿವನು ಜಗತ್ತಾಗಿ ತೋರುತ್ತಾನೆ).
4. ಮಾಯಾವಿಕಲ್ಪಜಂ ವಿಶ್ವಂ ಹೇಯಂ ಸಂಚಿಂತ್ಯ ನಿತ್ಯಶ:| ಚಿದಾನಂದಮಯೇ ಲಿಂಗೇ ವಿಲೀನ: ಪ್ರಾಣಲಿಂಗವಾನ್|| (12.11)
(ಕೇವಲ ಮಾಯೆ ಅಥವಾ ಅವಿದ್ಯೆಯಿಂದ ಹುಟ್ಟಿದ ಜಗತ್ತು, ಹೇಯವಾದುದು, ಚಿದಾನಂದಮಯವಾದ ಪ್ರಾಣಲಿಂಗದಲ್ಲಿ ಮನೋಲಯಮಾಡುವವನೆ ಪ್ರಾಣಲಿಂಗಿ ಎನಿಸಿಕೊಳ್ಳುವನು).
5. ಮಿಥ್ಯೇತಿ ಭಾವಯನ್ ವಿಶ್ವಂ ವಿಶ್ವಾತೀತಂ ಶಿವಂ ಸ್ಮರನ್| ಸತ್ತಾನಂದ ಚಿದಾಕಾರಂ ಕಥಂ ಬುದ್ಧುಮಿಹಾರ್ಹತಿ|| (17.55)
6. ಶಿವಾದನ್ಯ ಜಗನ್ಮಿಥ್ಯಾ ಶಿವ: ಸಂವಿತ್‍ಸ್ವರೂಪಕ:| ಶಿವಸ್ತ್ವಮಿತಿ ನಿರ್ದಿಷ್ಟೋ ಗುರುಣಾ ಮುಕ್ತ ಏವಸ:|| (17.66)
(ಶಿವನಿಗಿಂತ ಬೇರೆಯಾದ ಜಗತ್ತು ಮಿಥ್ಯೆ. ಶಿವನು ಜ್ಞಾನಸ್ವರೂಪನು. ಶಿಷ್ಯನಲ್ಲಿ ಶಿವ ಅಂತರ್ಗತ ವಾಗಿರುವುದರಿಂದ ಗುರುವಿನಿಂದ ಉಪದೇಶಿಸಲ್ಪಟ್ಟ ಶಿಷ್ಯನೂ ಶಿವನೇ ಆಗುತ್ತಾನೆ)
ಈ ಶ್ಲೋಕವನ್ನು ನಾವು ಎರಡು ರೀತಿಯಲ್ಲಿ ವ್ಯಾಖ್ಯಾನಿಸಬಹುದು. (1) ಶಿವನೇ ಜಗತ್ತಾಗಿ ಮಾರ್ಪಟ್ಟಿರುವುದರಿಂದ, ಅವನಿಗಿಂತ ಅನ್ಯವಾದ ಜಗತ್ತೆಂಬುದು ಇಲ್ಲ. (2) ಶಿವ ಮಾತ್ರ ಸತ್ಯ, ಜಗತ್ತು ಮಿಥ್ಯೆ, ಆದುದರಿಂದ ಶಿವನೆ ಜಗತ್ತಿನಂತೆ ತೋರುತ್ತಿದ್ದಾನೆಯೇ ಹೊರತು, ಶಿವ ಸೃಷ್ಟಿಸಿದ, ಶಿವನಿಗಿಂತ ಅನ್ಯವಾದ ಜಗತ್ತೆಂಬುದು ಮಿಥ್ಯೆ. ಶಿದ್ಧಾಂತ ಶಿಖಾಮಣಿಯ ಅಭಿಪ್ರಾಯ ಎರಡನೇಯದು. ಏಕೆಂದರೆ, ಶಿವನು ಸಂವಿತ್(ಚಿತ್) ಸ್ವರೂಪನಾದುದರಿಂದ, ಅವನಿಗಿಂತ ಅನ್ಯವಾದುದು ಏನಿದೆಯೋ ಅದು ಮಿಥ್ಯೆ, ಅದು ನಮ್ಮ ಅಜ್ಞಾನದ ಫಲ.
7. ಅಯಥಾರ್ಥ ಪ್ರಪಂಚೋಯಂ ಪ್ರತಿತಿಷ್ಠತಿ ಶಂಕರೇ| ಸದಾತ್ಮನಿಯಥಾ ಶುಕ್ತೌ ರಜತತ್ವಂ ವ್ಯವಸ್ಥಿತಂ|| (17.77)
(ಎಲ್ಲಿಯವರೆಗೆ ಕಪ್ಪೆ ಚಿಪ್ಪನ್ನು ನೋಡುತ್ತಾ ಬೆಳ್ಳಿಯೆಂದು ಭ್ರಮಿಸುತ್ತೇವೆಯೋ ಅಲ್ಲಿಯವರೆಗೆ ಬೆಳ್ಳಿ ಇರುತ್ತದೆ. ಹತ್ತಿರದಿಂದ ನೋಡಿದಕೂಡಲೇ ಬೆಳ್ಳಿ ಇಲ್ಲವಾಗುತ್ತದೆ. ಅದೇ ರೀತಿ, ಅವಿದ್ಯೆ ಅಥವಾ ಮರೆವು ಇರುವವರೆಗೆ ಜಗತ್ತೇ ಸತ್ಯ ಎಂದು ನಂಬುತ್ತೇವೆ. ಜಗತ್ತು ಸತ್ಯವಲ್ಲ ಏಕೆಂದರೆ, ಶಿವಸಾಕ್ಷಾತ್ಕಾರವಾದ ಕೂಡಲೇ ಶಿವ ಮಾತ್ರ ಸತ್ಯ, ಜಗತ್ತು ಅಯಿಥಾರ್ಥ(ಮಿಥ್ಯೆ) ಎಂಬ ಸತ್ಯದ ಅರಿವಾಗುತ್ತದೆ).
8. ನೇದಂ ರಜತಮಿತ್ಯುಕ್ತೇ ಯಥಾಶುಕ್ತೀ: ಪ್ರಕಾಶತೇ| ನೇದಂ ಜಗದಿತಿಜ್ಞಾತೇ ಶಿವತತ್ವಂ ಪ್ರಕಾಶತೇ||
(ಕಪ್ಪೆ ಚಿಪ್ಪು ಬೆಳ್ಳಿಯಲ್ಲ ಎಂಬ ಜ್ಞಾನ ಉಂಟಾದಾಗ, ಕಪ್ಪೆಚಿಪ್ಪೆ ಸತ್ಯ, ಬೆಳ್ಳಿ ಕೇವಲ ಭ್ರಮೆ ಎಂಬ ಜ್ಞಾನ ಹೇಗೆ ಉಂಟಾಗುತ್ತದೆಯೋ ಹಾಗೆ ಶಿವಜ್ಞಾನ ಉಂಟಾದಾಗ ಜಗತ್ತು ಭ್ರಮೆ, ಶಿವ ಮಾತ್ರ ಸತ್ಯ ಎಂಬ ಅರಿವು ಮೂಡುತ್ತದೆ).
9. ಆಖಂಡಾನಂದ ಸಂವಿತ್ತಿಸ್ವರೂಪಂ ಬ್ರಹ್ಮಕೇವಲಂ| ಮಿಥ್ಯಾತರನ್ಯದಿತ್ಯೇಷಾ ಸ್ಥತಿಜ್ರ್ಞಾನಮಿಹೋಚ್ಯತೇ|| (19.47)
(ಸಂವಿಶ್‍ಸ್ವರೂಪನೂ ಅಖಂಡಾನಂದನೂ ಆದ ಬ್ರಹ್ಮ ಅಥವಾ ಶಿವ ಮಾತ್ರ ಇದ್ದಾನೆ. ಅನ್ಯವಾದುದೆಲ್ಲವೂ ಕೇವಲ ತೋರಿಕೆ ಅಥವಾ ಮಿಥ್ಯೆ).
10. ಅನಾದ್ಯವಿದ್ಯಾಮೂಲಾಹಿ ಪ್ರತೀತಿರ್ಜಗತಾಮಿಯಂ| ಸ್ವಾತ್ಯೈಕ ಬೋಧಾತ್ತನ್ನಾಶೇಕುತೋ ವಿಶ್ವಪ್ರಕಾಶನಂ|| (20.21)
(ಅನಾದಿಯಾದ ಅವಿದ್ಯೆಯಿಂದ ಬಳಲುವವನಿಗೆ ಜಗತ್ತು ವಾಸ್ತವವೆಂದು ತೋರುತ್ತದೆ. ಆತ್ಮಬೋಧೆಯಾದ ಶಿವಯೋಗಿಗೆ ಆ ಅವಿದ್ಯೆಯೇ ಇಲ್ಲವಾದ ಕಾರಣ ಅವನಿಗೆ ಜಗತ್ತೆಲ್ಲಿ ಕಾಣಬೇಕು?)
11. ಸ್ವಪ್ರೇದೃಷ್ಟೇ ಯಥಾವಸ್ತು ಪ್ರಬೋಧೇಲಯಮಶ್ನುತೇ| ತಥಾ ಸಾಂಸಾರಿಕಂ ಸರ್ವಮಾತ್ಮ ಜ್ಞಾನೇ ವಿನಶ್ಯತಿ || (20.23)
(ಜಾಗ್ರತಸ್ಥಿತಿಗೆ ಬಂದಕೂಡಲೇ ಕನಸಿನ ವಸ್ತು ಹೇಗೆ ಇಲ್ಲವಾಗುವುದೋ ಹಾಗೆ, ಆತ್ಮಬೋಧೆ ಆದ ಕ್ಷಣವೇ ಸಾಂಸಾರಿಕ ಜಗತ್ತು ನಾಶವಾಗುತ್ತದೆ.)
12. ಅಸದೇವ ಜಗತ್‍ಸರ್ವಂ ಸದಿವ ಪ್ರತಿಭಾಸತೇ| ಜ್ಞಾತೇ ಶಿವೇತದಜ್ಞಾನಂ ಸ್ವರೂಪಮುಪಪದ್ಯತೇ|| (20.27)
(ವಾಸ್ತವವಾಗಿ ಇಲ್ಲದ ಜಗತ್ತು ವಿದ್ಯಾಪೀಡಿತನಿಗೆ ಇರುವಂತೆ ಭಾಸವಾಗುವುದು. ತಾನೇ ಶಿವನೆಂಬ ಜ್ಞಾನ ಸಂಪಾದಿಸಿದವನಿಗೆ ಜಗತ್ತು ಕಾಣದಾಗಿ, ಅಲ್ಲಿ ಶಿವ ಕಾಣಿಸುವವನು)

ಹೀಗೆ ಅದ್ವೈತದ ಜಗನ್ಮಿಥ್ಯಾವಾದ ಸಿದ್ಧಾಂತ ಶಿಖಾಮಣಿಯ ಕರ್ತೃವಿಗೆ (ಅಥವಾ ಅದನ್ನು ಬೋಧಿಸುವ ರೇಣುಕಾಚಾರ್ಯರಿಗೆ) ಬಹಳ ಪ್ರಿಯವಾಗಿದೆ. ಬಹಳಷ್ಟು ಜನ ಪಂಡಿತರಿಗೆ ಸಿದ್ಧಾಂತ ಶಿಖಾಮಣಿಯ ಅದ್ವೈತವು ನುಂಗಲಾರದ ಬಿಸಿ ತುಪ್ಪವಾಗಿದೆ. ಪಂಡಿತ ಕಾಶೀನಾಥ ಶಾಸ್ತ್ರಿಗಳು ಸಿದ್ಧಾಂತ ಶಿಖಾಮಣಿಗೂ ಅದ್ವೈತಕ್ಕೂ ಹೊಂದಾಣಿಕೇಯಾಗುವುದಿಲ್ಲ ಎಂದು ಹೇಳಿ, ಅದ್ವೈತಪರ ಶ್ಲೋಕಗಳನ್ನು ಬೇರ್ಪಡಿಸಿ ಗ್ರಂಥದ ಕೊನೆಯಲ್ಲಿ ಕೊಟ್ಟಿದ್ದಾರೆ [15] ಮತ್ತೆ ಕೆಲವರು (ಉದಾ: ಎನ್. ಆರ್. ಕರಿಬಸವಶಾಸ್ತ್ರಿಗಳು ತಮ್ಮ "ತಾತ್ಪರ್ಯ ದೀಪಿಕೆಯಲ್ಲಿ [16] ) ಅದ್ವೈತಪರ ವ್ಯಾಖ್ಯಾನ ಕೊಡದೆ, ಶಿವಾದ್ವೈತಪರವಾದ ವ್ಯಾಖ್ಯಾನಕೊಟ್ಟು ಸಿದ್ಧಾಂತ ಶಿಖಾಮಣಿಗೆ ಅಪಚಾರ ಮಾಡಿದ್ದಾರೆ. ಕಾಶೀ ಜಗದ್ಗುರುಗಳು ಮಾತ್ರ ತಮ್ಮ ಅಂತಿಮ ತೀರ್ಮಾನವನ್ನು ಹೀಗೆ ವ್ಯಕ್ತಪಡಿಸುತ್ತಾರೆ.

ವೀರಶೈವ ಸಂಸ್ಥಾಫಕರಾದ ಶ್ರೀ ಜಗದ್ಗುರು ಪಂಚಾಚಾರ್ಯರು ಕೇವಲ ದ್ವೈತವನ್ನಾಗಲಿ ಕೇವಲ ಅದ್ವೈತವನ್ನಾಗಲಿ ಅಂಗೀಕರಿಸದೆ ಸಮನ್ವಯ ದೃಷ್ಟಿಯಿಂದ ದ್ವೈತಾದ್ವೈತಗಳೆರಡನ್ನೂ ಸ್ವೀಕರಿಸಿದ್ದಾರೆ. ಪೂಜ್ಯ ಆಚಾರ್ಯರ ವಿಚಾರದಂತೆ ಸಾಧಕನ ಪ್ರಾರಂಭಾವಸ್ಥೆಯಲ್ಲಿ ದ್ವೈತವು, ಮಧ್ಯದಲ್ಲಿ ದ್ವೈತಾದ್ವೈತವು ಕೊನೆಗೆ ಅದ್ವೈತವು ಸಮನ್ವಯಗೊಳಿಸಲ್ಪಟ್ಟಿದೆ. [17] .

ಇದೊಂದು ತಿಪ್ಪೆಯನ್ನು ಸಿಂಗರಿಸುವ ಪ್ರಯತ್ನ. ಇಂಥ ಪ್ರಯತ್ನದಲ್ಲೇ ಒಂದು ದೋಷ ಅಂತರ್ಗತವಾಗಿದೆ. ಪಂಚಾಚಾರ್ಯರು ಕೇವಲ ದ್ವೈತವನ್ನಾಗಲಿ, ಕೇವಲ ಅದ್ವೈತವನ್ನಾಗಲಿ ಸ್ವೀಕರಿಸದೆ, ದ್ವೈತ ಮತ್ತು ಅದ್ವೈತಗಳನ್ನು ಸಮನ್ವಯ ಮಾಡುತ್ತಾರೆಂಬ ಹೇಳಿಕೆಗೆ ಯಾವ ಅರ್ಥವಿರಬೇಕು? ಪೂರ್ಣ ದ್ವೈತವೂ ಬೇಡ, ಪೂರ್ಣ ಅದ್ವೈತವೂ ಬೇಡ, ಎರಡೂ ಅಂಶಿಕವಾಗಿ ಇರಲಿ ಎಂಬರ್ಥ ಇರಬೇಕಾಗಿತ್ತು ಎರಡೂ ಬೇಕು ಅಂದರೆ ದ್ವೈತಾದ್ವೈತ (ಅಥವಾ ಭೇದಾಭೇದ ಅಥವಾ ಶಿವಾದ್ವೈತ) ಬೇಕು ಎಂದರ್ಥ. ಆದರೆ ಇಲ್ಲಿ ಅದ್ವೈತ ಉಳಿದುಕೊಳ್ಳುತ್ತದೆ. ಅಂದರೆ ದ್ವೈತ ಮತ್ತು ಶಿವಾದ್ವೈತ ಎರಡೂ ತಿರಸ್ಕರಿಸಲ್ಪಟ್ಟಿವೆ ಎಂದರ್ಥ. ಹಾಗಾದರೆ ಸಮನ್ವಯ ಎಲ್ಲಿದ? ಎರಡನೆಯದಾಗಿ, ಸಮನ್ವಯ ಸಾಧ್ಯವೇ ಇಲ್ಲ. ಶಿವಾದ್ವೈತದ ಪ್ರಕಾರ ಶಿವನೇ (ಶಿವನ ಶಕ್ತಿಯೇ) ಸ್ವ-ಇಚ್ಛೆಯಿಂದ ಜಗತ್ತಾಗುತ್ತಾನೆ. ಅವನು ಇಚ್ಛಿಸುವುದೂ ಸತ್ಯ, ಅವನಲ್ಲಿ ಮಾರ್ಪಾಟಾಗುವುದೂ ಸತ್ಯ, ಜಗತ್ತೂ ಸತ್ಯ, ಜಗತ್ತು ಶಿವನಷ್ಟೇ ಸತ್ಯ ಎಂದ ಮೇಲೆ, ಅದು ಭ್ರಮೆ ಅಥವಾ ಮಿಥ್ಯೆ ಅಲ್ಲ. ಹೀಗಿರುವಾಗ ಕೊನೆಯಲ್ಲಿ ಅದ್ವೈತ ಪ್ರತಿಪಾದಿಸುವಂತೆ ಜಗತ್ತು ಮಿಥ್ಯೆ ಆಗಲು ಹೇಗೆ ಸಾಧ್ಯ? ಅಥವಾ ಜಗತ್ತು ಮಿಥ್ಯೆ ಆದರೆ, ಶಿವ ಜಗತ್ತಾಗಿ ರೂಪಾಂತರಗೊಂಡಿದುದು ಸತ್ಯವಾದರೆ, ಕೊನೆಯಲ್ಲಿ ಅದ್ವೈತ ಪ್ರತಿಪಾದಿಸುವ ಜಗನ್ಮಿತ್ಯಾತ್ವ ಸಾಧ್ಯವೇ ಇಲ್ಲ. ಅರ್ಥಾತ್, ಮೊದಲು ದ್ವೈತ ಅಥವಾ ದ್ವೈತಾದ್ವೈತವಾದರೆ, ಕೊನೆಯಲ್ಲಿ ಅದ್ವೈತವಾಗಲು ಸಾಧ್ಯವೇ ಇಲ್ಲ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಸಮನ್ವಯ ಸಾಧ್ಯವೇ ಇಲ್ಲ.

ಮೂರನೆಯದಾಗಿ ಸಿದ್ಧಾಂತ ಶಿಖಾಮಣಿಯ ಅದ್ವೈತವನ್ನು ಅನುಸರಿಸಿ, ಜಗತ್ತು ಮಿಥ್ಯೆಂದು ತೀರ್ಮಾನಿಸುವುದು ವಚನೋಕ್ತ ಲಿಂಗಾಯತಕ್ಕೆ ವಿರುದ್ಧ. ವಚನಗಳಲ್ಲೂ ಲಿಂಗೈಕ್ಯ ಸಾಧಿಸಿದವನಿಗೆ ಎಲ್ಲೆಲ್ಲಿಯೂ ಶಿವ ಕಾಣಿಸುತ್ತಾನೆ, ಎಂಬ ಮಾತು ಬರುತ್ತದೆ. ಆದರೆ ವಚನಕಾರರು "ಶಿವ ಮಾತ್ರ ಇದ್ದಾನೆ, ಜಗತ್ತು ಮಿಥ್ಯೆ" ಎಂದು ಅದ್ವೈತವನ್ನು ನುಡಿಯದೆ. "ಜಗತ್ತೂ ಇದೆ, ಜಗತ್ತಿನ ಎಲ್ಲ ಕಡೆ ಶಿವನೂ ಇದ್ದಾನೆ" ಎಂದು ಹೇಳುತ್ತಾರೆ. ಉದಾಹರಣೆಗೆ

ಗಿರಿಗಳ ಗುಹೆಗಳ ಕಂದರದಲ್ಲಿ, ನೆಲಹೊಲನ ಮುಟ್ಟದೆ ಇಪ್ಪೆ ದೇವಾ!
ಮನಕ್ಕೆ ಅಗಮ್ಯ ಅಗೋಚರನಾಗಿ, ಅಲ್ಲಲ್ಲಿ ಎಲ್ಲೆಲ್ಲಿಯೂ ನೀನೆ ಇಪ್ಪೆಯಯ್ಯಾ!
ಗುಹೇಶ್ವರಾ ನಿಮ್ಮನು ಅಗಲಕ್ಕೆ ಹರಿವರಿದು ಕಂಡೆ ನಾನು [18]

ಎಂದು ಪ್ರಭುದೇವರೂ,

ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ,
ಸಕಲವಿಸ್ತಾರದ ರೂಹು ನೀನೇ ದೇವಾ,
`ವಿಶ್ವತಶ್ಚಕ್ಷು' ನೀನೆ ದೇವಾ,
`ವಿಶ್ವತೋಮುಖ' ನೀನೆ ದೇವಾ,
`ವಿಶ್ವತೋಬಾಹು' ನೀನೇ ದೇವಾ,
`ವಿಶ್ವತಃಪಾದ' ನೀನೆ ದೇವಾ, ಕೂಡಲಸಂಗಮದೇವಾ. [19] ಎಂದೂ ಬಸವಣ್ಣನವರೂ

ವನವೆಲ್ಲಾ ನೀನೆ, ವನದೊಳಗಣ ದೇವತರುವೆಲ್ಲಾ ನೀನೆ,
ತರುವಿನೊಳಗಾಡುವ ಖಗಮೃಗವೆಲ್ಲಾ ನೀನೆ.
ಚೆನ್ನಮಲ್ಲಿಕಾರ್ಜುನಾ, ಸರ್ವಭರಿತನಾಗಿ ಎನಗೇಕೆ ಮುಖದೋರೆ ? [20]

ಎಂದು ಅಕ್ಕಮಹಾದೇವಿಯೂ ಹೇಳುವಾಗ ಜಗತ್ತೂ ಸತ್ಯ, ಅದರೊಳಗೆ ಶಿವ ಇರುವುದೂ ಸತ್ಯ ಎಂಬುದು ಸ್ಪಷ್ಟವಾಗುತ್ತದೆ. ಅನೇಕ ವೇಳೆ ವಚನಕಾರರು ಜಗತ್ತು ಮಾಯೆಯಿಂದಾಗಿದೆ ಎಂದು ಹೇಳುವಾಗಲು ಸಹ ಅವರ ಮಾತಿಗೆ, ಅದು ಕೇವಲ ತೋರಿಕೆ ಎಂಬ ಅರ್ಥವಿದೆ, ಅದು ಅಧೋಮಾಯೆ (ಕಲಾಶಕ್ತಿ)ಯಿಂದಾಗಿದೆ ಎಂದರ್ಥವಾಗುತ್ತದೆ.

ಇದರರ್ಥ ಸಿದ್ಧಾಂತ ಶಿಖಾಮಣಿ ಅದ್ವೈತಪ್ರತಿಪಾದನೆ ಮಾಡಬಾರದು, ಎಂದಲ್ಲ, ಶಿವನೇ ಜಗತ್ತಾಗಬಲ್ಲ ಎಂದೂ ಹೇಳುತ್ತಾ ಕೊನೆಯಲ್ಲಿ ಜಗತ್ತು ಮಿಥ್ಯೆ ಎಂದೂ ಹೇಳುವುದು ತಾರ್ಕಿಕ ದೋಷ. ಆದುದರಿಂದ ಸಿದ್ಧಾಂತ ಶಿಖಾಮಣಿಯ ದೋಷವಿರುವುದು ಜಗನ್ಮಿಥ್ಯಾವಾದವನ್ನು ಪ್ರತಿಪಾದಿಸುವದರಲ್ಲಲ್ಲ, ಬ್ರಹ್ಮಪರಿಣಾಮವಾದ (ಶಿವ ಜಗತ್ತಾಗುತ್ತಾನೆ ಎಂಬ ವಾದ)ವನ್ನೂ ಜಗನ್ಮಿಥ್ಯಾ ವಾದವನ್ನೂ ಒಟ್ಟಿಗೇ ಪ್ರತಿಪಾದಿಸುವುದರಲ್ಲಿ.

4.1.5 ಮೋಕ್ಷದ ಪರಿಕಲ್ಪನೆ

ಸಿದ್ಧಾಂತ ಶಿಖಾಮಣಿಯಲ್ಲಿ ಮೋಕ್ಷದ ಬಗೆಗೆ ಎರಡು ಅಭಿಪ್ರಾಯಗಳಿವೆ
(1) ಸಿದ್ಧಾಂತ ಶಿಖಾಮಣಿಯ ಆಗಮಗಳಿಗನುಗುಣವಾದ ಸಿದ್ಧಾಂತಗಳನ್ನು ಬೋಧಿಸುವುದರಿಂದ, ಅದು ಸಿದ್ಧಾಂತಕ್ಕೆ ಅಥವಾ ಶೈವ ಸಿದ್ಧಾಂತಕ್ಕೆ (ಶುದ್ಧ ಶೈವ ಅಥವಾ ತಮಿಳು ಶೈವಕ್ಕೆ) ಹತ್ತಿರವಾಗಿದೆ. ಅದು ಆಗಮಗಳು ಮತ್ತು ಶೈವ ಸಿದ್ಧಾಂತದಂತೆ ಆಧ್ಯಾತ್ಮಿಕ ಜೀವನದ ಅಂತಿಮ ಗುರಿ ಸಾರೂಪ್ಯ (ಅಥವಾ ಸಾಯುಜ್ಯ) ಎನ್ನುತ್ತದೆ. ಮುಕ್ತಿಯೋಗ್ಯವಾದ ಆತ್ಮವು ದೇಹದ ಮರಣಾನಂತರ ಶಿವನ ಲೋಕಕ್ಕೆ ಹೋಗುತ್ತದೆ (ಇದಕ್ಕೆ ಸಾಲೋಕ್ಯ ಪದ ಅಥವಾ ಸಾಲೋಕ್ಯ ಮೋಕ್ಷ ಎಂದು ಹೆಸರು); ಅನಂತರ ಅದು ಶಿವನ ಸಮೀಪಕ್ಕೆ ಹೋಗುತ್ತದೆ (ಇದಕ್ಕೆ ಸಾಮಿಪ್ಯ ಪದ ಅಥವಾ ಸಾಮಿಪ್ಯ ಮೋಕ್ಷ ಎಂದು ಹೆಸರು(; ಅನಂತರ ಅದು ಶುದ್ಧನಾಗಿ ಶಿವನ ರೂಪವನ್ನು ಪಡೆಯುತ್ತದೆ (ಇದಕ್ಕೆ ಸಾರೂಪ್ಯ ಅಥವಾ ಸಾರೂಪ್ಯ ಮೋಕ್ಷ ಎಂದು ಹೆಸರು), ಕೊನೆಯದಾಗಿ, ಅದು ಶಿವನೊಂದಿಗೆ ಒಟ್ಟಿಗೆ ಇರುತ್ತದೆ. (ಇದಕ್ಕೆ ಸಾಯುಜ್ಯ ಮೋಕ್ಷ ಅಥವಾ ಸಾಯುಜ್ಯ ಪದ ಎಂದು ಹೆಸರು.) ಕೆಲವು ಆಗಮಗಳು ವೀರಶೈವರಿಗೆ ಚತುಷ್ಪದ ಮೋಕ್ಷ ಉಂಟೆಂದೂ, ಮತ್ತೆ ಕೆಲವು ಆಗಮಗಳು ನಾಲ್ಕನೆಯ ಸಾಯುಜ್ಯದಪದ ಹೊರತು ಪಡಿಸಿ ಮೊದಲಿನ ಮೂರು ಮಾತ್ರ ಉಂಟೆಂದೂ ಹೇಳುತ್ತವೆ. ಆದರೆ ನಾಲ್ಕನೆಯ ಸಾಯುಜ್ಯ ಮೋಕ್ಷವೂ ಲಿಂಗೈಕ್ಯಕ್ಕೆ ಸಮನಲ್ಲ ಎಂಬುದು ಗಮನಾರ್ಹ; ಏಕೆಂದರೆ ಲಿಂಗೈಕ್ಯವೆಂದರೆ, ಮುಕ್ತನು ತನ್ನ ಅಹಂನ್ನು ಕಳೆದುಕೊಂಡು ಸಂಪೂರ್ಣವಾಗಿ ಶಿವನಲ್ಲಿ ಐಕ್ಯವಾಗುವುದು. ಲಿಂಗೈಕ್ಯನಾದವನಿಗೆ ತನ್ನತನ ಇರುವುದಿಲ್ಲ. ವಚನಕಾರರು ಅನೇಕ ಉಪಮೆಗಳನ್ನು ಬಳಸಿ ಈ ಪರಿಕಲ್ಪನೆಯನ್ನು ಸ್ಪಷ್ಟಪಡಿಸಿದ್ದಾರೆ. ಸಮುದ್ರದಲ್ಲಿ ಐಕ್ಯವಾದ ನದಿಯು ಮೊದಲಿನ ತನ್ನ ವೈಶಿಷ್ಟ್ಯ ಮತ್ತು ಪ್ರತ್ಯೇಕತೆಯನ್ನು ಕಳದುಕೊಂಡು ಸಮುದ್ರದಲ್ಲಿ ಐಕ್ಯವಾದಂತೆ, ಮೋಕ್ಷ ಪಡೆದವನು ತನ್ನ ದೋಷಗಳನ್ನು ವೈಶಿಷ್ಟವನ್ನೂ ಪ್ರತ್ಯೇಕತೆಯನ್ನೂ ಕಳೆದುಕೊಂಡು ಲಿಂಗದಲ್ಲಿ ಐಕ್ಯನಾಗುತ್ತಾನೆ. ಕರ್ಪೂರ ಬೆಂಕಿಯಲ್ಲಿ ಐಕ್ಯವಾದಾಗ ಅದು ಇಲ್ಲವಾಗಿ ಬೆಂಕಿಯಷ್ಟೇ ಉಳಿಯುವಂತೆ, ಅಂಗನು ತನ್ನ ವೈಯಕ್ತಿಕತೆಯನ್ನು ಕಳದುಕೊಳ್ಳುತ್ತಾನೆ ಹಾಗು ಶಿವ ಅಷ್ಟೇ ಉಳಿಯುತ್ತಾನೆ.

ಸಿದ್ಧಾತ ಶಿಖಾಮಣಿಯ ಮೂರನೇ ಪರಿಚ್ಛೇದದ 52ನೇ ಶ್ಲೋಕದಲ್ಲಿ ಸಾರೂಪ್ಯ ಪದವಿಯೇ ಶ್ರೇಷ್ಠ ಧ್ಯೇಯವೆಂದು ಹೇಳುತ್ತದೆ. ಅದನ್ನು ಪಡೆದವರು ಶಿವನನ್ನು ಕೈಲಾಸದಲ್ಲಿ ನಿರಂತರವಾಗಿ ಸೇವಿಸುತ್ತಾರೆ. ಕೈಲಾಸದ ವರ್ಣನೆಯಲ್ಲಿ ಶಿವನನ್ನು ಸೇವಿಸುವವರ ಪಟ್ಟಿ ಹೀಗಿದೆ. ಬ್ರಹ್ಮ, ಉಪೇಂದ್ರ, ಮಹೇಂದ್ರ, ರುದ್ರ, ಯಕ್ಷರು, 12 ಜನ ಆದಿತ್ಯರು, ಅಷ್ಟವಸುಗಳು, ಗಂಧರ್ವರು, ಕಿನ್ನರರು, ಬಾಣಾದಿ ದಾನವರು, ರಾವಣಾದಿ, ರಾಕ್ಷಸರು, ಸಿದ್ಧರು, ವೈಶಿಷ್ಟಾದಿ ಋಷಿಗಳು, ಮುಂತಾದವರು (3.53-56). ಇವರು ಮುಕ್ತರಾದರೂ ತಮ್ಮ ವೈಶಿಷ್ಟ ಮತ್ತು ಪ್ರತ್ಯೇಕತೆಯನ್ನು ಕಳೆದುಕೊಂಡವರಲ್ಲ. ಅವರು ಕೇವಲ ಮಲತ್ರಯಗಳನ್ನು ಕಳೆದುಕೊಂಡವರೇ ಹೊರತು, ಮನನಷ್ಟವಾದವರಲ್ಲ.

ವಚನೋಕ್ತ ಲಿಂಗಾಯತ ಧರ್ಮದ ಪ್ರಕಾರ, ಮೋಕ್ಷ ಪಡೆಯಲು ಸಾಧಕನು ದೇಹ ತ್ಯಜಿಸಬೇಕಾಗಿಲ್ಲ ಮತ್ತೊಂದು ಲೋಕಕ್ಕೆ ಹೋಗಬೇಕಾಗಿಲ್ಲ. ವಾಸ್ತವವಾಗಿ ಅವರು ಕೈಲಾಸಕ್ಕೆ ಹೋಗುವವರನ್ನು ಮೈಗಳ್ಳರು ಎಂದೂ, ಮುಕ್ತಿಯನ್ನು ಜೀವಂತವಿದ್ದಾಗಲೇ, ಈ ಲೋಕದಲ್ಲೇ ಪಡೆಯಬೇಕು ಎಂದೂ ನಂಬುತ್ತಾರೆ.

(2) ಸಿದ್ಧಾತ ಶಿಖಾಮಣಿಯ ನೂರೊಂದು ಸ್ಥಲವನ್ನು ಪ್ರಸ್ತಾಪಿಸುವಾಗ ಲಿಂಗೈಕ್ಯವೇ ಪರಮಧ್ಯೇಯ, ಲಿಂಗೈಕ್ಯವು ಜೀವನ್ಮುಕ್ತಿ (ಜೀವ ಇದ್ದಾಗಲೇ ಪಡೆಯಬಹುದಾದ ಮುಕ್ತಿ)ಎಂದೂ ಹೇಳುತ್ತದೆ. ಲಿಂಗೈಕ್ಯ ಸಾಧಿಸಿದವನಿಗಾಗಲಿ ಸಾರೂಪ್ಯ ಮೋಕ್ಷವನ್ನು ಸಾಧಿಸಿದವನಿಗಾಗಲಿ ಜಗತ್ತು ಮಿಥ್ಯೆ ಎನಿಸುವುದಿಲ್ಲ ಆದರೆ, ಸಿದ್ಧಾತ ಶಿಖಾಮಣಿಯ ಪ್ರಕಾರ ಐಕ್ಯಸ್ಥಲ ಮುಟ್ಟಿದವನಿಗೆ ಜಗತ್ತು ಮಿಥ್ಯೆಯಾಗಿ ಕಾಣಿಸುತ್ತದೆ.

ಲಿಂಗೈಕ್ಯ ಸಾಧಿಸದವನಿಗೆ ಮತ್ತೆ ಹುಟ್ಟುವ ಭಯವಿಲ್ಲ. ಏಕೆಂದರೆ ಭವಕ್ಕೆ ಕಾರಣವಾದ ಎಲ್ಲ ಕರ್ಮಗಳನ್ನೂ, ಕರ್ಮಗಳಿಗೆ ಕಾರಣವಾದ ಎಲ್ಲ ಸ್ವಾರ್ಥ ಆಸೆಗಳನ್ನೂ ಅವನು ಸುಟ್ಟು ಹಾಕಿದ್ದಾನೆ. ವಾಸ್ತವವಾಗಿ, ಎಲ್ಲ ದೋಷಗಳ ನಿವಾರಣೆಯ ನಂತರವೇ ಅವನು ಮೋಕ್ಷ ಸಾಧಿಸಿದ್ದಾನೆ. ಆದರೆ, ಸಿದ್ಧಾತ ಶಿಖಾಮಣಿಯ ಪ್ರಕಾರ, ಒಮ್ಮೆ ಕೈಲಾಸಕ್ಕೆ ಹೋದವನು ಮತ್ತೆ ಹುಟ್ಟಬಹುದು. ರೇಣುಕಾಚಾರ್ಯರು ಸಾರೂಪ್ಯ ಮೋಕ್ಷ ಪಡೆದು ಕೈಲಾಸದಲ್ಲಿದ್ದಾಗ ಯಾವುದೋ ಒಂದು ಕ್ಷುಲ್ಲಕ ದೋಷಕ್ಕಾಗಿ ಶಿವನಿಂದ ಶಪಿಸಲ್ಪಟ್ಟು ಭೂಮಿಯಲ್ಲಿ ಅವತರಿಸುತ್ತಾರೆ. ಆಂಥ ದೋಷವನ್ನಿಟ್ಟುಕೊಂಡು ಕೈಲಾಸಕ್ಕೆ ಹೋಗಲು ಅವರಿಗೆ ಹೇಗೆ ಸಾಧ್ಯವಾಯಿತು ಎಂಬುದು ಒಂದು ಒಗಟಾದರೆ, ಮತ್ತೆ ಸಂಸಾರದಲ್ಲಿ ಹುಟ್ಟುವ ಭಯವಿದ್ದರೆ ಸಾರೂಪ್ಯ ಮೋಕ್ಷವನ್ನೇಕೆ ಪಡೆಯಬೇಕು. ಎಂಬುದು ಮತ್ತೊಂದು ಒಗಟಾಗುತ್ತದೆ.

ಇದರಿಂದ ಲಿಂಗಾಂಗ ಸಾಮರಸ್ಯವನ್ನು ಬೋಧಿಸುವ ರೇಣುಕರಿಗೆ ಲಿಂಗಾಂಗ ಸಾಮರಸ್ಯ ಅಗಿರಲಿಲ್ಲ, ಎಂಬುದು ಸ್ಪಷ್ಟವಾಗುತ್ತದೆ ಏಕೆಂದರೆ ಅವರು ಭೂಮಿಯಲ್ಲಿ ಅವತರಿಸುವ ಮುನ್ನ ಸಾರೂಪ್ಯ ಪದವಿಯನ್ನು ಪಡೆದ (ಕೈಲಾಸವಾಸಿಯಾಗಿದ್ದರೇ ಹೊರತು, ಜೀವನ್ಮುಕ್ತಿಯನ್ನು ಪಡೆದ ಲೀಗೈಕ್ಯರಾಗಿರಲಿಲ್ಲ. ಶಿವನ ಅಣತಿಯ ಮೇರೆಗೆ ವೀರಶೈವ ಸಿದ್ಧಾಂತ ಬೋಧಿಸಿದ ಅವರು, ಸೋಮೇಶ್ವರ ಲಿಂಗದಲ್ಲಿ ಐಕ್ಯರಾಗಿ ಮತ್ತೆ ಕೈಲಾಸಕ್ಕೆ ಹೋಗುತ್ತಾರೆಯೇ ಹೊರತು ಲಿಂಗಾಂಗ ಸಾಮರಸ್ಯ ಸಾಧಿಸುವುದಿಲ್ಲ. (ಲಿಂಗೈಕ್ಯರಾಗುವುದು ಬೇರೆ, ಸೋಮೇಶ್ವರ ಎಂಬ ವಿಶಿಷ್ಟ ಸ್ಥಾವರಲಿಂಗದಲ್ಲಿ ಸದೇಹಿಯಾಗಿ ಅಂತರ್ಗತರಾಗುವುದು ಬೇರೆ, ಮೇಲಾಗಿ ಶಿವ ಮೊದಲೇ ಹೇಳಿಕಳಿಸಿರುತ್ತಾನೆ - ವೀರಶೈವ ಸಿದ್ಧಾಂತ ಬೋಧನೆಯನಂತರೆ ರೇಣುಕರು ಕೈಲಾಸಕ್ಕೆ ಮರಳಿ ಬರಬೇಕೆಂದು.)

ಅಲ್ಲದೇ ರೇಣುಕಾಚಾರ್ಯರು ರಾಮಾಯಣ ಕಾಲದಲ್ಲಿದ್ದುದು ಸತ್ಯವಾದರೆ, ರಾಮಾಯಣ ಕಾಲದಲ್ಲಿ ಮೋಕ್ಷ ಕಲ್ಪನೆ ಇದ್ದದೂ ಸತ್ಯವಾಗಬೇಕು ಆದರೆ ರಾಮಾಯಣ ಕಾಲದಲ್ಲಿ ಮೋಕ್ಷ ಕಲ್ಪನೆ ಇತ್ತೆಂಬುದು ಸಂದೇಹಾಸ್ಪದ.

ಪ್ರೊ. ಕುನ್ಹನ್ ರಾಜಾ [21] ಎಂಬ ಮಹಾನ್ ದಾರ್ಶನಿಕರ ಪ್ರಕಾರ ರಾಮಾಯಣ ಕಾಲದಲ್ಲಾಗಲಿ ಮಹಾಭಾರತ್ದ ಕಾಲದಲ್ಲಾಗಲಿ ಸ್ವರ್ಗದ ಕಲ್ಪನೇ ಇತ್ತೇ ಹೊರತು, ಮೋಕ್ಷದ ಕಲ್ಪನೆ ಇರಲಿಲ್ಲ. ಪ್ರಾಚೀನ ಸಂಸ್ಕೃತ ಕಾವ್ಯಗಳಲ್ಲಿ ಧರ್ಮ, ಅರ್ಥ, ಕಾಮ ಎಂಬ ತ್ರಿವರ್ಗಗಳ ಪ್ರಸ್ತಾಪವಿದೆ. ನಾಲ್ಕನೇಯ ಪುರುಷಾರ್ಥ ಎಂಬ ಹೆಸರಿನ ಮೋಕ್ಷದ ಪ್ರಸ್ತಾಪವೇ ಇಲ್ಲ. ಒಂದು ವೇಳೆ ಮಹಾಭಾರತದ ಭಾಗವಾದ ಭಗವದ್ಗೀತೆಯಲ್ಲಿ ಮೋಕ್ಷದ ಪ್ರಸ್ತಾಪವಿದೆ ಎಂದು ಯಾರಾದರೂ ವಾದಿಸಿದರೂ ಸಹ, ಮಹಾಭಾರತ ಗ್ರಂಥಕ್ಕೆ ಅನೇಕ ಜನರಿಂದ ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ಸಿದ್ಧಾಂತಗಳು ಸೇರಿಸಲ್ಪಟ್ಟವು, ಎಂಬ ಮಾತನ್ನು ನಾವು ಮರೆಯಬಾರದು. ಆದರೆ ರಾಮಾಯಣದಲ್ಲಂತು ಮೋಕ್ಷ ವಿಚಾರವಿಲ್ಲ. ರಾಮ, ದಶರಥ ಮುಂತಾದವರಾರೂ ಮೋಕ್ಷ ಪಡೆದ ವಿಚಾರ ಪ್ರಸ್ತಾಪವಾಗಿಲ್ಲ. ಅದೇ ರೀತಿ ಮಹಾಭಾರತ ಕತೆಯ ಕೊನೆಯಲ್ಲಿ ಯುಧಿಷ್ಠರ ಸ್ವರ್ಗಕ್ಕೆ ಹೋಗುವ ವಿಚಾರವಿದೆ. ಆದರೆ ಅವನಿಗಾಗಲಿ ಕೃಷ್ಣನಿಗಾಗಲಿ ಮೋಕ್ಷ ಸಿಕ್ಕಿದ ವಿಚಾರ ಪ್ರಸ್ತಾಪವಾಗಿಲ್ಲ.

ಅನಂತರದ ಸಾಹಿತ್ಯದಲ್ಲಿ (ಪ್ರಾಚೀನ ವೇದದಲ್ಲಿ) ದೇವಲೋಕ, ಪಿತೃಲೋಕ, ಸ್ವರ್ಗಗಳ ಪ್ರಸ್ತಾಪವಿದೆಯೇ ಹೊರತು, ಮೋಕ್ಷದ ಪ್ರಸ್ತಾಪವಿಲ್ಲ. ಮೋಕ್ಷ ಕಲ್ಪನೆಯು ನಮಗೆ ಮೊದಲು ಸಿಕ್ಕುವುದು ಉಪನಿಷತ್ತುಗಳಲ್ಲಿ. ಆದರೆ ಮಹಾಭಾರತವೇ ವೇದಪೂರ್ವದ ಕತೆ ಎಂದರೆ, ರಾಮಾಯಣದ ಘಟನೆಗಳು ಅದಕ್ಕಿಂತ ಹಿಂದಿನವು ಇರಬೇಕು. ಹೀಗಿರುವಾಗ ರೇಣುಕಾಚಾರ್ಯರು ಮೋಕ್ಷ ಪರಿಕಲ್ಪನೆಯನ್ನು-ಅದರಲ್ಲೂ ತಾವೇ ಪಡೆಯದ ಲಿಂಗಾಂಗ ಸಾಮರಸ್ಯವನ್ನು -ಅಗಸ್ತ್ಯನಿಗೆ ಬೋಧಿಸಲು ಹೇಗೆ ಸಾಧ್ಯ?

ಆಗಮಗಳಲ್ಲಿ ಆಗಲೆ ಮೋಕ್ಷ ಕಲ್ಪನೆ ಇದೆ. ಅದನ್ನೇ ರೇಣುಕಾಚಾರ್ಯರು ಅಗಸ್ತ್ಯನಿಗೆ ಬೋಧಿಸಿದರು, ಎಂದೂ ವಾದಿಸಲು ಬರುವುದಿಲ್ಲ. ಏಕೆಂದರೆ, ಆಗಮಗಳಲ್ಲಿ ಇರುವುದು ಸಾಯುಜ್ಯ ಕಲ್ಪನೆ, ಲಿಂಗಾಂಗ ಸಾಮರಸ್ಯವಲ್ಲ. ಒಂದು ವೇಳೆ ಲಿಂಗಾಂಗ ಸಾಮರಸ್ಯ ಕಲ್ಪನೆಯೂ ಸಹ ಆಗಮಗಳಲ್ಲಿದೆ ಎಂಬುದನ್ನು ಒಪ್ಪಿಕೊಂಡರೂ ಸಹ, ಅದು ಅವರ ಸ್ವಂತ ಸಿದ್ಧಾಂತವಾಗುವುದಿಲ್ಲ.

4.2 ಆಚರಣೆಯ ಸಿದ್ಧಾಂತಗಳು

4.2.1 ಜಾತಿ ತಾರತಮ್ಯ:
ಸಿದ್ಧಾಂತ ಶಿಖಾಮಣಿಯಲ್ಲಿ ಲಿಂಗೀಬ್ರಾಹ್ಮಣ, ಲಿಂಗೀಕ್ಷತ್ರಿಯ, ಮುಂತಾದ ಜಾತಿಗಳ ಪ್ರಸ್ತಾಪವಿದೆ, ಆದರೆ, ಇದು ಜಾತಿಭೇದವೇ ಹೊರತು ಜಾತಿತಾರತಮ್ಯವಲ್ಲ ಎಂಬುದು ಕೆಲ ವಿದ್ವಾಂಸರ ವಾದ, ಅವರು ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಸಿದ್ಧಾಂತ ಶಿಖಾಮಣಿಯ ಈ ಕೆಳಗಿನ ಶ್ಲೋಕಗಳನ್ನು ಉದ್ಧರಿಸುತ್ತಾರೆ.

1. ವರ್ಣಾಶ್ರಮಾದಿ ಧರ್ಮಾಣಾಂ ವ್ಯವಸ್ಥಾಹಿ ದ್ವಿಧಾಮತಾ| ಏಕಾ ಶಿವೇನ ನಿರ್ದಿಷ್ಟಾ ಬ್ರಹ್ಮಣಾ ಕಥಿತಾ ಪರಾ|| (10.35)
2. ಶಿವಸಂಸ್ಕಾರಯುಕ್ತೇಶು ಜಾತಿಭೇದೋ ನ ವಿದ್ಯತೇ| ಉಷ್ಣೇಶು ದಹ್ನಿದಗ್ಧೇಶು ಯಥಾ ರೂಪಂ ನ ವಿದ್ಯತೇ|| (10.37)
(ವರ್ಣಾಶ್ರಮಾದಿ ಧರ್ಮಗಳಲ್ಲಿ ಎರಡು ರೀತಿಯ ವ್ಯವಸ್ಥೆಗಳಿವೆ. ಒಂದು ಶಿವೋಕ್ತ ಮತ್ತೊಂದು ಬ್ರಹ್ಮೋಕ್ತ, ಬೆಂಕಿಯಿಂದ ಸುಟ್ಟಾಗ ವಿವಿಧ ರೂಪದ ಮರಗಳು ತಮ್ಮ ಮೊದಲಿನ ರೂಪವನ್ನು ಕಳೆದುಕೊಳ್ಳುವಂತೆ, ಶಿವದೀಕ್ಷೆಯಾದ ವೀರಶೈವರು ತಮ್ಮ ಮೊದಲಿನ ಜಾತಿತಾರತಮ್ಯವನ್ನು ಮರೆಯುತ್ತಾರೆ).

ಈ ಶ್ಲೋಕಗಳು ಪೂರ್ವಾಶ್ರಯ ನಿರಸನಸ್ಥಲಕ್ಕೆ ಸಂಬಂಧಿಸಿದವು. ಅಂದರೆ, ಲಿಂಗೀಬ್ರಾಹ್ಮಣ, ಲಿಂಗೀಕ್ಷತ್ರಿಯ ಮುಂತಾದ ಜಾತಿಭೇದವಾಗಲಿ ಜಾತಿತಾರತಮ್ಯವಾಗಲಿ ಲಿಂಗದೀಕ್ಷೆಯ ನಂತರ ಇರಕೂಡದು, ಎಂಬುದು ಇದರ ಆರ್ಥ.

ಇಲ್ಲಿ ಒಂದು ಸಮಸ್ಯೆ ಉದ್ಭವವಾಗುತ್ತದೆ. ಒಂದು ವೇಳೆ ಬ್ರಹ್ಮೋಕ್ತವಾಗಿ ಲಿಂಗದೀಕ್ಷೆ ಪಡೆದ ಬ್ರಾಹ್ಮಣರು, ಕ್ಷತ್ರಿಯರು, ಮುಂತಾದವರಲ್ಲಿ ಜಾತಿಭೇದ ಮತ್ತು ಜಾತಿತಾರತಮ್ಯ ಇರಕೂಡದು ಎಂಬುದು ಇದರ ಅರ್ಥವಾದರೆ, ಆಗ ಪೂರ್ವಾಶ್ರಯ ನಿರಸನಸ್ಥಲದ ವಿಧಿಯನ್ನು ಪಾಲಿಸುವುದು ಬಹಳ ಅರ್ಥಪೂರ್ಣವಾಗುತ್ತದೆ. ಆದರೆ. ಸಿದ್ಧಾಂತ ಶಿಖಾಮಣಿಯ ಮಾತು ಬ್ರಹ್ಮೋಕ್ತ ಜಾತಿತಾರತಮ್ಯಕ್ಕೆ ಅನ್ವಯಿಸುವುದಿಲ್ಲ, ಅದು ಅನ್ವಯಿಸುವುದು ಶಿವೋಕ್ತ ಜಾತಿತಾರತಮ್ಯಕ್ಕೆ. ಆದುದರಿಂದ, ಅದರ ಉದ್ದೇಶ ಬ್ರಹ್ಮೋಕ್ತ ಜಾತಿತಾರತಮ್ಯವನ್ನು ನಿರಸನ ಮಾಡುವುದಿಲ್ಲ ಅದರ ಉದ್ದೇಶ ಶಿವೋಕ್ತ ವರ್ಣಾಶ್ರಮ ಪದ್ಧತಿಯನ್ನು ನಿರಸನ ಮಾಡಬೇಕೆಂಬುದು. ಇದರಿಂದ ಸಿದ್ಧಾಂತ ಶಿಖಾಮಣಿಯ ಪ್ರಕಾರ ವೀರಶೈವರಲ್ಲಿ ಲಿಂಗೀಬ್ರಾಹ್ಮಣ, ಲಿಂಗೀಕ್ಷತ್ರಿಯ ಮುಂತಾದ ಉಪಜಾತಿಗಳಿರುವುದು ಸತ್ಯ, ಅದು ನಿರಸನವಾಗಬೇಕು ಎಂಬುದು ಸಿದ್ಧವಾಗುತ್ತದೆ.

ಲಿಂಗೀಬ್ರಾಹ್ಮಣ, ಲಿಂಗೀಕ್ಷತ್ರಿಯ, ಲಿಂಗೀ ಶೂದ್ರ ಮುಂತಾದ ಉಪಜಾತಿಗಳಿರುವುದು ಸತ್ಯ, ಆದರೆ ಮಹೇಶ್ವರಸ್ಥಲದಲ್ಲಿ ಸಾಧಕನು ಆ ಜಾತಿಭೇದವನ್ನು ತ್ಯಜಿಸಬೇಕು (ಏಕೆಂದರೆ ಪೂರ್ವಾಶ್ರಯನಿರಸನ ಸ್ಥಲವು ಮಹೇಶ್ವರ ಸ್ಥಲದ ಒಂದು ಅವಿಭಾಜ್ಯ ಅಂಗ) ಎಂಬುದು ಇದರ ಅರ್ಥ, ಎಂದು ಕೆಲವರು ಇದನ್ನು ಸಮರ್ಥಿಸಿಕೊಳ್ಳಬಹುದು, ಆದರೆ ಇಂಥ ಸಮರ್ಥನೆಯಲ್ಲಿ ಒಂದು ದೋಷ ಅಂತರ್ಗತವಾಗಿದೆ. ಆ ದೋಷ ಇದು: ಶಿವೋಕ್ತ ವರ್ಣಾಶ್ರಮ ಧರ್ಮಕ್ಕೆ ಸೇರಿದವರಲ್ಲಿ ಲಿಂಗೀಬ್ರಾಹ್ಮಣರು, ಲಿಂಗೀಕ್ಷತ್ರಿಯರು ಆಗಲೇ ಇದ್ದಾರೆ, ಎಂದ ಮೇಲೆ- ಅಂದರೆ, ಅವರು ಆಗಲೇ ಲಿಂಗದೀಕ್ಷೆ ಪಡೆದಿದ್ದಾರೆ, ಎಂದ ಮೇಲೆ -ಅವರು ಪೂರ್ವಾಶ್ರಯ ನಿರಸನ ಮಾಡಿಕೊಳ್ಳಬೇಕಾಗಿತ್ತು ಅಂದರೆ ಅವರು ವೀರಶೈವರೂ ಹೌದು, ಶಿವೋಕ್ತ ವರ್ಣಾಶ್ರಮ ಪದ್ಧತಿಯನ್ನು ಪಾಲಿಸುವವರೂ ಹೌದು ಎಂದಂತಾಯಿತು.

ಒಂದು ವೇಳೆ ಪೂರ್ವಾಶ್ರಯ ನಿರಸನ ಸ್ಥಲವು ಮೋಕ್ಷಾಪೇಕ್ಷಿಗಳಾದ ಲಿಂಗಾಯತರಿಗಷ್ಟೇ ಅನ್ವಯವಾಗುತ್ತದೆ, ಉಳಿದ ಲಿಂಗಾಯತರಿಗಲ್ಲ, ಎಂದು ಯಾರದರೂ ವಾದಿಸಿದರೆ, ಆಗ ಅವರ ಪ್ರಕಾರ, ಮೋಕ್ಷಾಪೇಕ್ಷಿಗಳಲ್ಲದ ಲಿಂಗಾಯತರು ಲಿಂಗೀಬ್ರಾಹ್ಮಣ, ಲಿಂಗೀಕ್ಷತ್ರಿಯ ಮುಂತಾಗಿ ಜಾತಿ ತಾರತಮ್ಯ ಮಾಡಬಹುದು, ಎಂದರ್ಥವಾಗುತ್ತದೆ. ಆದರೆ, ಜಾತಿತಾರತಮ್ಯ ಮಾಡಲೇಬೇಕು ಎಂಬುದು ಅವರ ಅಂತಿಮ ನಿರ್ಣಯವಾದರೆ, ಅವರು ಆಗಮೋಕ್ತ ವೀರಶೈವರಾಗುತ್ತಾರೆಯೇ ಹೊರತು ವಚನೋಕ್ತ ಲಿಂಗಾಯತ ಧರ್ಮದ ಅನುಯಾಯಿಗಳಾಗುವುದಿಲ್ಲ. ಜಾತಿತಾರತಮ್ಯವು ವಚನೋಕ್ತ ಲಿಂಗಾಯತಕ್ಕೆ ವಿರುದ್ಧ. ಒಮ್ಮೆ ಲಿಂಗದೀಕ್ಷೆ ಪಡೆದನೆಂದರೆ, ಲಿಂಗಾಯತನು ಕುಲಜನಾಗುತ್ತಾನೆ. ಜಾತಿತಾರತಮ್ಯವಿರಕೂಡದೆಂದು ವಚನಕಾರರ ಸರ್ವಾನುಮತ. ಆದುದರಿಂದ ಮಹೇಶ್ವರ ಸ್ಥಲಕ್ಕೆ ಬಂದ ಮೇಲೆ ಪೂರ್ವಾಶ್ರಯನಿರಸನ ಆಚರಿಸಬೇಕು (ಪೂರ್ವಾಶ್ರಯದ ಜಾತಿಗಳನ್ನು ಬರೆಯಬೇಕು) ಎಂಬ ಪ್ರಶ್ನೆಯೇ ಅವರಿಗೆ ಉದ್ಭವಿಸುವುದಿಲ್ಲ.

ಆದರೆ, ವಚನಕಾರರೂ ನೂರೊಂದು ಸ್ಥಲದ ಬಗ್ಗೆ ಮಾತನಾಡುವಾಗ ಪೂರ್ವಾಶ್ರಯ ನಿರಸನಸ್ಥಲ ಎಂಬುದನ್ನು ಗುರುತಿಸಿದ್ದಾರಲ್ಲ ಎಂದು ಕೆಲವರು ಆಕ್ಷೇಪಿಸಬಹುದು. ಆದರೆ, ವಚನಕಾರರು ಪೂರ್ವಾಶ್ರಯ ನಿರಸನಸ್ಥಲವನ್ನು ಮಾಹೇಶ್ವರಸ್ಥಲದ ಅಂಗವೆಂದು ವಿಧಿಸಿದ್ದರೂ, ಅವರ ಅರ್ಥ ಮತ್ತು ಉದ್ದೇಶ ಬೇರೆಯೇ ಇರುವುದು ಸರಿಯಾದ ವಿಶ್ಲೇಷಣೆಯಿಂದ ಗೊತ್ತಾಗುತ್ತದೆ. ಉದಾಹರಣೆಗೆ ಮಹಾಲಿಂಗದೇವರ ಎಕೋತ್ತರ ಶತಸ್ಥಲದ ಪೂರ್ವಾಶ್ರಯನಿರಸನಸ್ಥಲದ ಈ ಕೆಳಗಿನ ವಚನಗಳನ್ನು [22] ಗಮನಿಸಿ:

ಪಟ್ಟವ ಕಟ್ಟಿದ ಬಳಿಕ ಲಕ್ಷಣವನರಸುವರೆ
ಲಿಂಗದೇವನ ಪೂಜಿಸಿ ಕುಲವನರಸುವರೆ, ಅಯ್ಯಾ
ಕೂಡಲಸಂಗಮವೇವ
ಭಕ್ತಕಾಯ ಮಮಕಾಯವೆಂದನಾಗಿ. /138

ಶ್ರೀಗುರುಕರುಣಕಟಾಕ್ಷದಲ್ಲಿ ಉತ್ಪತ್ಯವಾದ ಅಜಾತಂಗೆ
ಜಾತಿಸೂತಕ, ಜನನಸೂತಕ, ಪ್ರೇತಸೂತಕ, ರಜಸ್ಸೂತಕವುಂಟೆಂಬವಂಗೆ
ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪ್ರಸಾದವಿಲ್ಲವಯ್ಯಾ
ಕೂಡಲಚೆನ್ನಸಂಗಯ್ಯ. /168

ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ
ಸ್ಥಾವರದೈವಕ್ಕೆರಗಲಾಗದು.
ತನ್ನ ಪುರುಷನ ಬಿಟ್ಟು ಅನ್ಯಪುರುಷನ ಸಂಗ ಸಲ್ಲುವುದೇ ರಿ
ಕರಸ್ಥಲದ ದೇವನಿದ್ದಂತೆ
ಧರೆಯ ಮೇಲಣ ಪ್ರತಿಷ್ಠೆಗೆರಗಿದಡೆ
ನರಕದಲ್ಲಿಕ್ಕುವ ಕೂಡಲಸಂಗಮದೇವ. /962

ಅಂಗದ ಮೇಲೆ ಲಿಂಗಧಾರಣವಾದ ಬಳಿಕ ಮರಳಿ ಭವಿ ನಂಟನೆಂದು ಬೆರಸಿದರೆ
ಕೊಂಡ ಮಾರಿಂಗೆ ಹೋಹದು ತಪ್ಪದು.
ಹಸಿಯ ಮಣ್ಣಿನಲ್ಲಿ ಮಾಡಿದ ಮಡಕೆ ಅಗ್ನಿಮುಖದಿಂದಾದ ಬಳಿಕ
ಅದು ತನ್ನ ಪೂರ್ವಕುಲವ ಬೆರಸೂದೆ?
ಅಗ್ನಿದಗ್ಧಘಟಃ ಪ್ರಾಹುರ್ನ ಭೂಯೋ ಮೃತ್ತಿಕಾಯತೇ
ತಚ್ಛಿವಾಚಾರಸಂಗೇನ ನ ಪುನರ್ಮಾನುಷೋ ಭವೇತ್
ಇದು ಕಾರಣ ಪೂರ್ವ ನಾಸ್ತಿಯಾದ ಭಕ್ತನಪೂರ್ವ,
ಕೂಡಲಚೆನ್ನಸಂಗಮದೇವಾ./ 169

ಪೂರ್ವಾಶ್ರಯ ಪೂರ್ವಾಶ್ರಯವೆಂದೆಂಬರು,
ಪೂರ್ವಾಶ್ರಯವಾವುದೆಂದರಿಯರು.
ಪೂರ್ವವೆಂಬುದೆ ಬಂದ ಬಟ್ಟೆ, ಆಶ್ರಯವೆಂಬುದೆ ಕರಣಾದಿ ಗುಣಂಗಳು.
ಈ ಉಭಯವಳಿದು ಕೂಡಲಚೆನ್ನಸಂಗನಲ್ಲಿಪ್ಪ
ಶರಣಂಗೆ ಶರಣೆಂಬೆ. /569

ಅಂದರೆ ವಚನಕಾರರ ಪ್ರಕಾರ, ಪೂರ್ವಾಶ್ರಯ ನಿರಸನವೆಂದರೆ ಲಿಂಗದೀಕ್ಷೆಗಿಂತ ಹಿಂದಿದ್ದ ಭವಿತನ, ಭವಿಗಳೊಡನೆ ಇದ್ದ ನೆಂಟಸ್ತಕೆ; ಬೇರೆ ಕುಲ(ಜಾತಿ)ದಿಂದ ಬಂದಿದ್ದರೆ ಆ ಜಾತಿಯ ಕರ್ಮ (ಉದಾಹರಣೆಗೆ, ಬೇಟೆಯಡುವುದು, ವೈದಿಕ ಕರ್ಮ ಆಚರಿಸುವುದು), ಮುಂತಾದ ಅಧಾರ್ಮಿಕ ಗುಣಗಳನ್ನು ತ್ಯಜಿಸುವುದು. ಆದುದರಿಂದ ವಚನಕಾರರು ಮಹೇಶ ಸ್ಥಲಕ್ಕೆ ಬಂದನಂತರ ಜಾತಿಭೇದವನ್ನು ಮರೆಯಬೇಕು, ಎಂದು ಹೇಳುವ ಅಗತ್ಯವೇ ಬರುವುದಿಲ್ಲ.

ಜಾತಭೇದ ಮತ್ತು ಜಾತಿತಾರತಮ್ಯ ಮಾಡಬೇಕೆಂಬ ಸಿದ್ಧಾಂತ ಶಿಖಾಮಣಿಯ ಬೋಧನೆ ಆಕಸ್ಮಿಕವೇನಲ್ಲ. ಮತ್ತೂ ಒಂದು ಕಡೆ ಅದು ಇನ್ನೂ ಹೆಚ್ಚು ಸ್ಪಷ್ಟವಾಗಿದೆ.

ಶಿವಭಕ್ತೋ ಮಹಾತೇಜಾ: ಶಿವಭಕ್ತಿ ಪರಾಙ್ಮಖಾನ್ | ನಸ್ಪøಶೇನ್ಸೈವ ವೀಕ್ಷೇತ ನತ್ಯೆ; ಸಹ ವಸೇತ್ ಕ್ವಚಿತ್|| (9.27)
ಸ್ವಮಾರ್ಗಾಚಾರನಿರತಾ: ಸಜಾತೀಯ ದ್ವಜಾಸ್ತು ಯೇ | ತೇಷಾಂ ಗೃಹೇಷು ಭುಂಜೀತ ನೇತರೇಷಾಂ ಕದಾಚನ || (9.29)

ಇವು ಪಂ. ಕಾಶೀನಾಥ ಶಾಸ್ತ್ರಿಯವರು ಸಂಪಾದಿಸಿದ ಸಿದ್ಧಾಂತ ಶಿಖಾಮಣಿಯಲ್ಲಿ ಕಾಣುವ ಶ್ಲೋಕಗಳು, ಇದಕ್ಕೆ ಶಾಸ್ತ್ರಿಗಳು ಹೀಗೆ ವ್ಯಾಖ್ಯಾನ ಬರೆದಿದ್ದಾರೆ: ಮಹತೇಜಸ್ವಿಯಾದ ಶಿವಭಕ್ತನು ಶಿವಭಕ್ತಿವಿಮುಖರಾದ ಜನರನ್ನು ಮುಟ್ಟಬಾರದು, ನೋಡಬಾರದು; ಅವರೊಡನೆ ಸ್ವಲ್ಪಕಾಲವಾದರೂ ವಾಸಮಾಡಬಾರದು || (9.27).... ತಮ್ಮ ತಮ್ಮ ಜಾತಿಧರ್ಮಾನುಸಾರವಾಗಿ ಆಚಾರದಲ್ಲಿ ನಿಷ್ಠರಾದ ವೀರಶೈವ ದ್ವಿಜರು ಅಂದರೆ ವೀರಶೈವ, ಬ್ರಾಹ್ಮಣ-ವೀರಶೈವ ಕ್ಷತ್ರಿಯ-ವೀರಶೈವ, ವೈಶ್ಯರು ತಮ್ಮ ತಮ್ಮ ಜಾತಿಯ ಜನರ ಮನೆಗಳಲ್ಲಿಯೇ ಭೋಜನವನ್ನು ಮಾಡಬೇಕಲ್ಲದೆ ಇತರರ ಮನೆಯಲ್ಲಿ ಭೋಜನ ಮಾಡಬಾರದು. ವೀರಶೈವ, ಕ್ಷತ್ರಿಯ-ವೀರಶೈವ, ವೈಶ್ಯರು, ವೀರಶೈವ-ಬ್ರಾಹ್ಮಣರಲ್ಲಿ ಭೋಜನ ಮಾಡಬೇಕಲ್ಲದೆ ಬ್ರಾಹ್ಮಣರು ಕ್ಷತ್ರಿಯ-ವೈಶ್ಯರಲ್ಲಿ ಭೋಜನ ಮಾಡಬಾರದು. "ಶಿವೋಕ್ತಾಂ ಜಾತಿ ಮರ್ಯಾದಾಂ ಯೋ ತೀತ್ಯಭುವಿವರ್ತತೇ|ಸ ಚಂಡಾಲ ಇತಿ ಜ್ಷೇಯ: ಸರ್ವಕರ್ಮ ಬಹಿಷ್ಕೃತ:||" ಶಿವನಿಂದ ಹೇಳಲ್ಪಟ್ಟ ಜಾತಿ ಮರ್ಯಾದೆಯನ್ನು ಯಾವನು ಮೀರಿ ನಡೆಯುವನೋ ಅವನು ಚಂಡಾಲನೂ ಸರ್ವಕರ್ಮಬಹಿಷ್ಕೃತನೂ ಆಗುವನು. ಎಂದು ಶಿವಾಗಮಗಳು ಸಾರುತ್ತಿರುವುದರಿಂದ ವೀರಶೈವ ಮತೀಯರು ತಮ್ಮ ತಮ್ಮ ಜಾತಿ ಧರ್ಮದಂತೆ ವರ್ತಿಸಬೇಕಲ್ಲದೆ, ಅದಕ್ಕೆ ವಿರುದ್ಧವಾಗಿ ವರ್ತಿಸಿ ನರಕ ಭಾಗಿಗಳಾಗಬಾರದು" (9.29).

ಇದು ಶಾಸ್ತ್ರಿಗಳ ಸ್ವಂತ ಅಭಿಪ್ರಾಯ ಎಂದು ಸುಲಭವಾಗಿ ತಳ್ಳಿ ಹಾಕುವ ಮಾತಲ್ಲ. ಮರಿ ತೋಂಟದಾರ್ಯರು ಬರೆದಿರುವ ಸಂಸ್ಕೃತ ವ್ಯಾಖ್ಯಾನದಲ್ಲೂ ಇದೇ ಪಾಠವಿದೆ (ನೋಡಿ 9-29) [22] . ಆದರೆ ಎನ್. ಆರ್. ಕರಿಬಸವಶಾಸ್ತ್ರಿಯವರು ಸಂಪಾದಿಸಿದ ಸಿದ್ಧಾಂತ ಶಿಖಾಮಣಿ ಆವೃತ್ತಿಯಲ್ಲಿ "ಸ್ವಮಾರ್ಗಾನಿರತಾಚಾರೈಸ್ಸಹವಾಸು ಸಮಾಚರೇತ್" (9.30) ಎಂಬ ಪಾಠವಿದೆ. ಎನ್. ಆರ್. ಕರಿಬಸವಶಾಸ್ತ್ರಿಗಳ ಆವೃತ್ತಿಯೂ ಮರಿತೋಂಟದಾರ್ಯರದ್ದೇ. ಆದರೆ ಅವರು ಅದರಲ್ಲಿನ "ದ್ವಿಜ" ಶಬ್ದವನ್ನು ತೆಗೆದುಹಾಕಿದ್ದಾರೆ.

ಆದರೇನಂತೆ? ಅದರ ಹಿಂದಿರುವ ಜಾತಿ ತಾರತಮ್ಯ ಪ್ರೇಮವನ್ನೇನೂ ಅವರು ತೆಗೆದುಹಾಕಿಲ್ಲವಲ್ಲ? ಶಿವಭಕ್ತರು ತೇಜೋಮಯರಾದ್ದರಿಂದ ಅವರು ಭವಿಯನ್ನು ಕಣ್ಣೆತ್ತಿ ನೋಡಬಾರದು, ಅವನನ್ನು ಮುಟ್ಟಬಾರದು, ಅವರ ಮನೆಗೆ ಹೋಗಬಾರದು, ಅವನೊಡನೆ ಊಟಮಾಡಬಾರದು. ಇವೆಲ್ಲ ಏನನ್ನು ಸೂಚಿಸುತ್ತವೆ? ಇದೇ ಶಿವಭಕ್ತ ಮುಂದೆ ಗುರುವಾದಾಗ ಇವನ ತೇಜಸು ಮತ್ತಷ್ಟು ಹೆಚ್ಚುತ್ತದೆಯಲ್ಲವೆ? ಆಗ ಗುರುವಾದ ಅವನು ಭಕ್ತನಾಗ ಬಯಸುವ ಭವಿಯನ್ನು ನೋಡುವುದಿಲ್ಲವೆ? ಹಸ್ತಮಸ್ತಕ ಸಂಯೋಗ ಮಾಡುವುದಿಲ್ಲವೆ? ಅವನೊಡನೆ ಮಾತಾಡುವುದಿಲ್ಲವೆ?

ಇಷ್ಟೇ ಸಾಲದೆಂಬಂತೆ ಸಿದ್ಧಾಂತ ಶಿಖಾಮಣಿಯ ಮತ್ತೊಂದು ನಿಯಮವನ್ನು ವಿಧಿಸಿ ಜಾತಿಪದ್ಧತಿಯನ್ನು ಮತ್ತಷ್ಟು ಬಲಪಡಿಸಲಿಚ್ಛಿಸುತ್ತದೆ. ಆ ವಿಧಿ ಹೀಗಿದೆ.

ಸ್ವಮಾರ್ಗಾಚಾರವರ್ತಿಭ್ಯಸ್ವಜಾತಿಭ್ಯಸ್ಸದಾವ್ರತೀ| ದದ್ಯಾಸ್ತೇ ಭ್ಯಸ್ಸಮಾದದ್ಯಾತ್ ಕನ್ಯಾಂ ಕುಲ ಸಮುದ್ಭವಾಂ|| (9.50)

(ಶಿವವ್ರತಿಗಳು ಯಾವಗಲೂ ಸ್ವಧರ್ಮಾಚಾರಶೀಲರಾದ ತನ್ನ ಜಾತಿಯವರೇ ಆದ ಶಿವಭಕ್ತರಿಗೆ ತನ್ನ ಕುಲದಲ್ಲಿ ಹುಟ್ಟಿದ ಕನ್ಯೆಯನ್ನು ಕೊಡಬೇಕು ಮತ್ತು ಅಂಥ ಸ್ವಜಾತಿಯವರಿಂದಲೇ ಕನ್ಯೆಯನ್ನು ತಂದುಕೊಳ್ಳಬೇಕು). ಕನ್ಯಾರ್ಥಿಯು ಸ್ವಮಾರ್ಗಾಚಾರಿಯೂ (ವೀರಶೈವನೂ) ಆಗಿರಬೇಕು, ಸ್ವಜಾತೀಯನೂ ಆಗಿರಬೇಕು; ಹಾಗಿದ್ದರೆ ಮಾತ್ರ ಅವನೊಡನ ಲಗ್ನ ಸಂಬಂಧ ಮಾಡಬೇಕ. ಅವನು ವೀರಶೈವರಲ್ಲೇ ಅನ್ಯಜಾತಿಯವನಾಗಿದ್ದರೆ ಅವನೊಡನೆ ಲಗ್ನ ಸಂಬಂಧ ಮಾಡಬಾರದು, ಎಂಬ ಸಿದ್ಧಾಂತ ಶಿಖಾಮಣಿಯ ಈ ಆಬಿಪ್ರಾಯ ವಚನೋಕ್ತ ಲಿಂಗಾಯತಕ್ಕೆ ಎಷ್ಟೊಂದು ವಿರುದ್ಧವಿದೆ ಎಂಬುದನ್ನಯ ಗಮನಿಸಿ:

ಉಂಬಲ್ಲಿ ಊಡುವಲ್ಲಿ ಕ್ರೀಯಳಿಯಿತ್ತೆಂಬರು,
ಕೊಂಬಲ್ಲಿ ಕೊಡುವಲ್ಲಿ ಕುಲವನರಸುವರು,
ಎಂತಯ್ಯಾ ಅವರ ಭಕ್ತರೆಂತೆಂಬೆ
ಎಂತಯ್ಯಾ ಅವರ ಯುಕ್ತರೆಂತೆಂಬೆ
ಕೂಡಲಸಂಗಮದೇವಾ ಕೇಳಯ್ಯಾ,
ಹೊಲತಿ ಶುದ್ಧ ನೀರ ಮಿಂದಂತಾಯಿತ್ತಯ್ಯಾ. [23]

ಉಂಬುದು ಉಡುವುದು ಶಿವಾಚಾರ,
ಕೊಂಬುದು ಕೊಡುವುದು ಕುಲಾಚಾರ ಎಂಬ
ಅನಾಚಾರಿಯ ಮಾತ ಕೇಳಲಾಗದು.
ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರ ಒಂದೆ ಎಂದು
ಕೊಟ್ಟು ಕೊಂಬುದು ಸದಾಚಾರ, ಉಳಿದುದೆಲ್ಲ ಅನಾಚಾರ.
ಅದೆಂತೆಂದಡೆ;
ಸ್ಫಟಿಕದ ಕೊಡದಲ್ಲಿ ಕಾಳಿಕೆಯನರಸುವ ಹಾಗೆ,
ಸಿಹಿಯೊಳಗೆ ಕಹಿಯನರಸುವ ಹಾಗೆ,
ರಜಸ್ಸೂತಕ ಕುಲಸೂತಕ ಜನನಸೂತಕ ಪ್ರೇತಸೂತಕ ಉಚ್ಛಿಷ್ಟಸೂತಕ ಎಂದಡೆ,
ಆತಂಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ತೀರ್ಥಪ್ರಸಾದವಿಲ್ಲ.
ಇಂತೀ ಪಂಚಸೂತಕವ ಕಳೆದಲ್ಲದೆ ಭಕ್ತನಾಗ.
ಇಂತಹ ಭಕ್ತರಲ್ಲಿ ಕೊಟ್ಟು ಕೊಂಬುದು ಸದಾಚಾರ-
ಕೂಡಲಚೆನ್ನಸಂಗಮದೇವಾ [24]

ಲಿಂಗಧಾರಿಗಳೇ ಆದರೂ ಸ್ವಜಾತೀಯವರಲ್ಲದ ಮನೆಯಲ್ಲಿ ಒಬ್ಬ ಊಟ ಮಾಡಿದರೆ (ಉಂಬಲ್ಲಿ) ಅಥವಾ ಅವರಿಗೆ ತನ್ನ ಮನೆಯಲ್ಲಿ ಊಟ ಮಾಡಿಸಿದರೆ (ಊಡುವಲ್ಲಿ) ಅಥವಾ ಸ್ವಜಾತೀಯವರಲ್ಲದವರಿಂದ ಹೆಣ್ಣು ತಂದರೆ (ಕೊಂಬಲ್ಲಿ) ಅಥವಾ ಅವರಿಗೆ ಹೆಣ್ಣು ಕೊಟ್ಟರೆ (ಕೊಡುವಲ್ಲಿ) ತನ್ನ ಜಾತಿ ಹಾಳಾಯಿತು (ಕ್ರೀಯಳಿಯಿತು) ಎಂದು ಕೂರಗುವವರನ್ನು ಶಿವಭಕ್ತರೆಂದಾಗಲಿ ಯುಕ್ತರೆಂದಾಗಲಿ (ವಿಚಾರಶೀಲರು ಎಂದಾಗಲಿ) ಹೇಗೆ ಕರೆಯಲಿ, ಎಂದು ಬಸವಣ್ಣ ಮರುಗುವುದು ಮೊದಲನಯೆ ವಚನದ ಸಾರಾಂಶ.

ಎರಡನೆಯ, ಚೆನ್ನಬಸವಣ್ಣನವರ ವಚನದ ಅರ್ಥವನ್ನು ಡಾ. ಚಿದಾನಂದಮೂರ್ತಿಯವರು ಹೀಗೆ ಸ್ಪಷ್ಟಪಡಿಸಿದ್ದಾರೆ.

ಜನರು ತಾವು ಇನ್ನೊಬ್ಬರ ಮನೆಯಲ್ಲಿ ಊಟ ಮಾಡಿ, ಅವರನ್ನು ಊಟಕ್ಕೆ ಕರೆಯುವುದನ್ನು 'ಶಿವಾಚಾರ' ಎಂದೂ, ಇನ್ನೊಬ್ಬರ ಮನೆಗೆ ಹೆಣ್ಣು ಕೊಟ್ಟು ಅವರಿಂದ ಹೆಣ್ಣು ತರುವುದನ್ನು 'ಕುಲಾಚಾರ' ಎಂದೂ ಕರೆಯುತ್ತಾರೆ. ಇದು ಅನಾಚಾರಿಗಳ ಮಾತು-ಇಂತಹ ಮಾತುಗಳಿಗೆ ಗೌರವ ಕೊಡಕೂಡದು. ಬ್ರಾಹ್ಮಣನಿಂದ ಹಿಡಿದು ಅಸ್ಪøಶ್ಯನವರೆಗೆ ಯಾವುದೇ ಜಾತಿಯವರಾಗಿದ್ದರೂ ಸರಿಯೇ, ಅವರು ಶಿವಭಕ್ತರಾಗಿದ್ದರೆ ಸಾಕು, ಅವರೆಲ್ಲರೂ ಸಮಾನರು; ಅವರೆಲ್ಲರೂ ಒಂದೇ ಎಂದು ಭಾವಿಸಿ, ಯಾವುದೇ ಜಾತಿಭೇದವನ್ನೂ ಮಾಡದೇ ಅವರಿಗೆ ಹೆಣ್ಣುಕೊಟ್ಟು ಅವರಿಂದ ಹೆಣ್ಣು ತಂದು ಮದುವೆ ನೆಡಸಬೇಕು; ಹೀಗೆ ನಡೆದುಕೊಳ್ಳುವುದು 'ಸದಾಚಾರ'; ಉಳಿದುದೆಲ್ಲವೂ 'ಅನಾಚಾರ' [25]

ಉಂಬಲ್ಲಿ ಉಡುವಲ್ಲಿ ಕ್ರೀಯಳಿಯಿತ್ತೆಂಬರು,
ಕೊಂಬಲ್ಲಿ ಕೊಡುವಲ್ಲಿ ಕುಲವನರಸುವರು,
ಏನೆಂಬೆನಯ್ಯ ಒಚ್ಚೊಚ್ಚಿ ಭಕ್ತರಳ ಏನೆಂಬೆನಯ್ಯ ಒಚ್ಚೊಚ್ಚಿ ಭವಿಗಳ?
ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ
ಭಕ್ತಕಾಯ ಮಮಕಾಯವೆಂತೆಂಬರು? [ಸಮಗ್ರ ವಚನ ಸಂಪುಟ-3/166]

ಈ ವಚನಗಳ ಉದ್ದೇಶ ಇಷ್ಟು: (1) ಲಿಂಗಧಾರಿಯಾದರೆ ಸಾಕು. ಅವನಲ್ಲಿದ್ದ ಎಲ್ಲ ದೋಷಗಳು (ಮಲಗಳೂ) ನಿರ್ನಾಮವಾಗುತ್ತವೆ. (2) ಅವನು ಹೀಗೆ ನಿರ್ಮಲ (ಶುದ್ಧ)ನಾಗುವುದರಿಂದ ಲಿಂಗಧಾರಿಯು ತಾನು ಬ್ರಾಹ್ಮಣ, ಕ್ಷತ್ರಿಯ ಎಂದು ಗುರುತಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಒಂದರ್ಥದಲ್ಲಿ (ಅಂದರೆ ವಚನೋಕ್ತ ಲಿಂಗಾಯತದ ದೃಷ್ಟಿಯಲ್ಲಿ) ಲಿಂಗೀಬ್ರಾಹ್ಮಣ, ಲಿಂಗೀಶೂದ್ರ, ಎಂಬ ಪದ ಬಳಕೇಯೇ ಸ್ವವಿರೋಧಕ್ಕೊಳಗಾಗಿದೆ.

ಸಿದ್ಧಾಂತ ಶಿಖಾಮಣಿಯಲ್ಲಿ ಜಾತಿವಿರೋಧದ ಶ್ಲೋಕಗಳೂ ಇವೆ. ಆದರೆ ವರ್ಣಾಶ್ರಮಧರ್ಮವನ್ನು ಪಾಲಿಸಬೇಕೆಂದು ಹೇಳುವ ಶ್ಲೋಕಗಳೂ ಇವೆ. ಐಕ್ಯಸ್ಥಲ ಮುಟ್ಟಿದವನೂ ಸಹ ವರ್ಣಾಶ್ರಮಧರ್ಮ ಬಿಡಬಾರದು ಎಂಬುದು ಸಿದ್ಧಾಂತ ಶಿಖಾಮಣಿಯ ಆದೇಶ.

ವರ್ಣಾಶ್ರಮ ಸದಾಚಾರೈಜ್ರ್ಞಾನಿನಾಂ ಕಿಂ ಪ್ರಯೋಜನಂ| ಲೌಕಿಕಸ್ತು ಸದಾಚಾರ: ಫಲಾಭಾವೇಪಿ ಭಾವ್ಯತೇ|| (14.20)

(ಜ್ಞಾನಿಗಳಿಗೆ ವಣಾಶ್ರಮ ಸದಾಚಾರ ಪಾಲಿಸುವುದರಿಂದ ಪ್ರಯೋಜನವೇನು? ಅವೆಲ್ಲ ಲೌಕಿಕವಾದವುಗಳು. ಆದರೂ ಆ ಸದಾಚಾರಗಳು ಶಾಸ್ತ್ರಚೋದಿತವಾಗಿರುವುದರಿಂದ ಜ್ಞಾನಿಯಾದರೂ ದೇಹವಿರುವವರೆಗೆ ಅವನ್ನು ಮಾಡಲೇಬೇಕು).

ಸಿದ್ಧಾಂತ ಶಿಖಾಮಣಿ ಹೀಗೆ ವರ್ಣಾಶ್ರಮಧರ್ಮದ ಪರವಾಗಿರುವುದಕ್ಕೆ ಕಾರಣಗಳು ಇವೆ. ಮುಖ್ಯವಾಗಿ ಸಿದ್ಧಾಂತ ಶಿಖಾಮಣಿ ಆಗಮಗಳು, ಶೈವಪುರಾಣಗಳು, ಮುಂತಾದ ಮೂಲ ಆಕರಗಳಿಗೆ ಬದ್ಧವಾಗಿದೆ (1,25,26,28) ಈ ಮೂಲ ಆಕರಗಳಿಗೆ ಅನುಗುಣವಾಗಿ ಮತ್ತು ವೇದಗಳಿಗೆ ವಿರೋಧವಾಗದಂತೆ ವೀರಶೈವಪರವಾದ ಸಿದ್ಧಾಂತಗಳನ್ನೂ ವಿಧಿಗಳನ್ನು ಸಂಗ್ರಹಿಸುವುದು ಸಿದ್ಧಾಂತ ಶಿಖಾಮಣಿಯ ಉದ್ಧೇಶ. ಹೀಗಿರುವಾಗ ಅದು ವೇದಗಳಲ್ಲಿರುವ ವರ್ಣಾಶ್ರಮಧರ್ಮ ಸಿದ್ಧಾಂತಕ್ಕೆ ವಿರುದ್ಧವಾದ ಸಿದ್ಧಾಂತವನ್ನು ಬೋಧಿಸಲು ಸಹಜವಾಗಿಯೇ ಹಿಂಜರಿಯುತ್ತದೆ.

ವೇದಗಳಲ್ಲಷ್ಟೇ ಅಲ್ಲ, ವೀರಶೈವವನ್ನು ಪ್ರತಿಪಾದಿಸುವ ಆಗಮಭಾಗಗಳಲ್ಲೂ ವರ್ಣಾಶ್ರಮ ಪದ್ಧತಿಯ ಬೋಧನೆಯಿದೆ ಉದಾಹರಣೆಗೆ:
1. ಗುರು: ಚಂದ್ರಜ್ಞಾನಾಗಮದಲ್ಲಿ ಲಿಂಗದೀಕ್ಷೆ ಪಡೆಯಲಿಚ್ಛಿಸುವವನು ಪ್ರಾರಂಭದಲ್ಲಿ ವೇದಪಾರಮಗತನಾದ, ಜ್ಞಾನಿಯಾದ ಶೈವಸಿದ್ಧಾಂತದಲ್ಲಿ ಪರಿಣತನಾದ, ಸ್ಥಾವರಲಿಂಗ ಪ್ರತಿಷ್ಠಾಪನೆಯ ಮಂತ್ರಗಳನ್ನು ಬಲ್ಲ, ಬ್ರಾಹ್ಮಣನ ಬಳಿ ಹೋಗಿ ಗುರುವೆಂದು ಆರಾಧಿಸಬೇಕು [26]
2. ರುದ್ರಾಕ್ಷಿ: ಶಿವನ ಆಜ್ಞೆಯಂತೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ಜಾತಿಯ ರುದ್ರಾಕ್ಷಿ ವೃಕ್ಷಗಳು ಅವೇ ಜಾತಿಯ ರುದ್ರಾಕ್ಷಿಗಳನ್ನು ಕೊಡುತ್ತವೆ. ಅವು ಕ್ರಮವಾಗಿ, ಬಿಳಿ, ಕೆಂಪು, ಹಳದಿ ಮತ್ತು ಕಪ್ಪು ಬಣ್ಣದವಿದ್ದು, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರು ತಂತಮ್ಮ ಜಾತಿಯ ರುದ್ರಾಕ್ಷಿಗಳನ್ನೇ ಧರಿಸಬೇಕು, ಬ್ರಾಹ್ಮಣರು ಕ್ಷತ್ರಿಯ ರುದ್ರಾಕ್ಷಿಯನ್ನಾಗಲಿ, ವೈಶ್ಯರು ಬ್ರಾಹ್ಮಣ ರುದ್ರಾಕ್ಷಿಯನ್ನಾಗಲಿ ಧರಿಸಕೂಡದು [27].
3. ವೀರಶೈವರು ಯಜ್ಞೋಪವೀತವನ್ನು ಧರಿಸಬೇಕು [28]
4. ಶೂದ್ರನು ತಂದ ಹೂಪತ್ರೆಯಿಂದ ಬ್ರಾಹ್ಮಣನು ಲಿಂಗಪೂಜೆ ಮಾಡಿಕೊಳ್ಳಬಾರದು. [29]
5. ಸ್ತ್ರೀಯರೂ ಶೂದ್ರೂ ಓಂ ವಿನಾ ಪಂಚಾಕ್ಷರಿ ಜಪಿಸಬೇಕು; ತ್ರೈವರ್ಣಿಕ ಲಿಂಗಿಗಳು ಓಂ ಸಹಿತ ಷಡಾಕ್ಷರಿ ಜಪಿಸಬೇಕು [30]
6. ಚಂದ್ರಜ್ಞಾನಾಗಮದ ಉತ್ತರ ಭಾಗದಲ್ಲಿ ವೀರಶೈವರು ವರ್ಣಾಶ್ರಮಧರ್ಮವನ್ನು ಆಚರಿಸಲೇ ಬೇಕು. ಇಲ್ಲದಿದ್ದರೆ ಅವರು ಪತಿತರಾಗುತ್ತಾರೆ. ಎಂಬುದನ್ನು ಬೋಧಿಸಲೋಸ್ಕರವೇ "ವರ್ಣಾಶ್ರಮಧರ್ಮಾ ವಶ್ಯಕತಾಕಥನಂ" ಎಂಬ ಪ್ರತ್ಯೇಕ ಪಟಲವಿದೆ. (ಉತ್ತರ ಭಾಗ, ಪ್ರಥಮ: ಪಟಲ) [31].

ಹೀಗೆ ವೇದಗಳಿಗೂ ಆಗಮಗಳಿಗೂ ವಿಧೇಯವಾಗಿರುವ ಸಿದ್ಧಾಂತ ಶಿಖಾಮಣಿಯು ವಚನೋಕ್ತ ಲಿಂಗಾಯತದಂತೆ ಜಾತಿಪದ್ಧತಿ ವಿರೋಧಿಯಾಗಿರಲು ಹೇಗೆ ಸಾಧ್ಯ? ಅಲ್ಲದೆ, ಸ್ವತ: ಪರಶಿವನೇ ಬ್ರಹ್ಮಸೂತ್ರಾಂಕ (ಜನಿವಾರ)ವನ್ನು ಧರಿಸಿ, ತನ್ನ ಬ್ರಾಹ್ಮಣವನ್ನು ಮೆರೆಯುತ್ತಿರುವಾಗ, ಸಿದ್ಧಾಂತ ಶಿಖಾಮಣಯಲ್ಲಿ ಜಾತಿಭೇದ ಸಿದ್ಧಾಂತವಿಲ್ಲ ಎನ್ನುವುದು ಹೇಗೆ?

4.2.2 ಲಿಂಗಧಾರಣ ಕ್ರಮ ಮತ್ತು ಲಿಂಗಪೂಜಾಕ್ರಮ
ಸಿದ್ಧಾಂತ ಶಿಖಾಮಣಿಯಲ್ಲಿ ಲಿಂಗಧಾರಣಕ್ರಮ ಹೀಗೆ ವಿವರಿಸಲ್ಪಟ್ಟಿದೆ: ಸ್ಪಟಿಕದಿಂದಾಗಲಿ ಚಂದ್ರಕಾಂತ ಶಿಲೆಯಿಂದಾಗಲಿ ಸೂರ್ಯಕಾಂತ ಶಿಲೆಯಿಂದಾಗಲಿ ಪರ್ವತಶಿಲೆಯಿಂದಾಗಲಿ ಮಾಡಿದ ಲಿಂಗವನ್ನು ಅಥವಾ ಬಾಣಲಿಂಗವನ್ನು ಗುರುವು ಪರೀಕ್ಷಿಸಿ ತೆಗೆದುಕೊಳ್ಳಬೇಕು (6.22) ಅನಂತರ ಸರ್ವಲಕ್ಷಣ ಸಂಪನ್ನನಾದ ಆ ಲಿಂಗವನ್ನು ಪೀಠದಲ್ಲಿಟ್ಟು ಪಂಚಾಮೃತಗಳಿಂದ ಅಭಿಷೇಕ ಮಾಡಿ, ಗಂಧಪುಷ್ಪಾದಿಗಳಿಂದ ಪೂಜಿಸಬೇಕು... ಇತ್ಯಾದಿ (6.23,24). ಇಲ್ಲಿ ಇಷ್ಟಲಿಂಗವನ್ನು ಪೀಠ ಅಥವಾ ಸಿಂಹಾಸನದ ಮೇಲಿಟ್ಟು ಪೂಜಿಸುವ ಕ್ರಮ ನಮ್ಮ ಗಮನ ಸೆಳೆಯುತ್ತದೆ. ಇಲ್ಲಿ 'ಪೀಠ ಸ್ಥಿತ' ಎಂಬ ಪದಕ್ಕೆ ಸೋಸಲೆ ರೇವಣಾಧ್ಯರೂ, ಎನ್. ಆರ್. ಕರಿಬಸವಶಾಸ್ತ್ರೀಗಳೂ 'ಕರಪೀಠ' ಎಂದು ಅರ್ಥೈಸಿದ್ದಾರೆ. ಆದರೆ ಉಜನೀಶನು 'ಪೀಠ' ಎಂದೇ ಅರ್ಥೈಸಿದ್ದಾನೆ. ಆದರೆ 'ಪೀಠ'ಕ್ಕೆ 'ಕರಪೀಠ' ಎಂಬ ಅರ್ಥ ಕೊಡುವುದು ತಪ್ಪಾಗುತ್ತದೆ. ಏಕೆಂದರೆ ಅದರ ಮುಂದಿನ ಎರಡನೇ ಶ್ಲೋಕದಲ್ಲಿ "ಏವಂ ಕೃತ್ವಾ ಗುರುರ್ಲಿಂಗಂ ಶಿಷ್ಯ ಹಸ್ತೇನಿಧಾಪಯೇತ್" (ಹೀಗೆ ಮಾಡಿದ ಮೇಲೆ ಗುರುವು ಲಿಂಗವನ್ನು ಶಿಷ್ಯನ ಹಸ್ತದಲ್ಲಿ ಇಡಬೇಕು) ಎಂದಿದೆ. ಲಿಂಗ ಮೊದಲೇ ಕರಪೀಠದಲ್ಲಿದ್ದರೆ ಅದನ್ನು ಮತ್ತೆ ಗುರುವು ಕರಪೀಠದಲ್ಲಿಡುವ ಅಗತ್ಯವೇ ಬರುವುದಿಲ್ಲ. ಎರಡನೆಯದಾಗಿ ಶಿಷ್ಯನು ಲಿಂಗವನ್ನು ಪಡೆದ ಮೇಲೂ ಅವನು ಅದನ್ನು ಕರಸ್ಥಲದಲ್ಲಿಟ್ಟು ಪೂಜಿಸುವುದಿಲ್ಲ; ಕರಸ್ಥಲದಲ್ಲಿಟ್ಟು ಪೂಜಿಸು ಎಂದು ಗುರುವೂ ಹೇಳುವುದಿಲ್ಲ. ಲಿಂಗದೀಕ್ಷಾ ಸಮಯದಲ್ಲಿ ಹೇಗೆ ಪೀಠ ಅಥವಾ ಸಿಂಹಾಸನದ ಮೇಲಿಟ್ಟು ಪೂಜಿಸುತ್ತಾರೋ ಹಾಗೆ ಅನಂತರವೂ ಪೂಜಿಸುತ್ತಾರೆ.

ಸಿಂಹಾಸನೇ ಶುದ್ಧದೇಶೇ ಸುರಮ್ಯೇ ರತ್ನಚಿತ್ರಿತೇ| ಶಿವಲಿಂಗಸ್ಯ ಪೂಜಾ ಯಾಸಾಬಾಹ್ಯಾಭಕ್ತಿರುಚ್ಯತೇ|| (9.7)

(ಶುದ್ಧವಾದ ಸ್ಥಳವಾದ ರಮ್ಯವೂ ರತ್ನಖಚಿತವೂ ಆದ ಸಿಂಹಾಸನದ ಮೇಲೆ ಲಿಂಗವನ್ನಿಟ್ಟು ಪೂಜಿಸುವುದು ಬಾಹ್ಯ ಭಕ್ತಿ ಎನಿಸಿಕೊಳ್ಳುತ್ತದೆ).
ಆದರೆ ಆರನೆ ಪರಿಚ್ಛೇದದ 54ನೇ ಶ್ಲೋಕವು ಸಿಂಹಾಸನದ ಮೇಲಿಟ್ಟು ಪೂಜಿಸುವುದಕ್ಕಿಂತ ಕರಪೀಠದಲ್ಲಿಟ್ಟು ಪೂಜಿಸುವುದು ಉತ್ತಮ ಎಂದು ಹೇಳುತ್ತದೆ. ವಚನಗಳಲ್ಲಿ ಸಿಂಹಾಸನದ ಮೇಲಿಟ್ಟು ಪೂಜಿಸುವ ಕ್ರಮ ನಿಷ್ಪ್ರಯೋಜಕವೆಂದೂ ವರ್ಜ್ಯವೆಂದು ಹೇಳಲಾಗಿದೆ.

ಸ್ಥಾವರ ಲಿಂಗಪೂಜೆ ಶುದ್ಧಶೈವ, ಮಾರ್ಗಶೈವ ಲಿಂಗಪೂಜೆ
ಸಿಂಹಾಸನ ಪೂರ್ವಶೈವಪೂಜೆ ಸಂಕಲ್ಪನಿರಾವರಣ.
ವೀರಶೈವ ಲಿಂಗಪೂಜೆ ಅಂಗದ ಮೇಲೆ ಹಿಂಗದೆ
ಧರಿಸಿಹುದು. ಇವೆಲ್ಲವು ಸರಿ, ಶೈವಪೂಜೆ ಅದೆಂತೆಂದಡೆ;
ಇಷ್ಟಲಿಂಗ ಜೀವನ ಅಂಗ ಉಭಯವ ಕೂಡಿ
ಲೀಯವಾಗಿದ್ದುದ ಶೈವಭೇದಂಗಳಿಗೆ ಹೊರಗು
ಸದಾಶಿವಮೂರ್ತಿಲಿಂಗಕ್ಕೆ ಒಳಗು [32]

ಶುದ್ಧಶೈವರು ಸ್ಥಾವರಲಿಂಗಪೂಜೆ ಮಾಡಿದರೆ, ಮಾರ್ಗಶೈವರು ಲಿಂಗವನ್ನು ಸಿಂಹಾಸನದ ಮೇಲಿಟ್ಟು ಪೂಜಿಸುತ್ತಾರೆ. ಇಷ್ಟಲಿಂಗಪೂಜೆ ಅಂಗಲಿಂಗದಲ್ಲಿ ಲೀಯವಾಗಲು ಸಹಾಯಕವಾಗುತ್ತದೆ. ಇತರ ಶೈವಭೇದಗಳು ಪೂಜಾವಿಧಾನಗಳು ಲಿಂಗಾಯತದ ಲಿಂಗೈಕ್ಯಕ್ಕೆ ಹೊರಗು.

5. ಉಪಸಂಹಾರ

ಸಿದ್ಧಾಂತ ಶಿಖಾಮಣಿಯಲ್ಲಿ ವೀರಶೈವ ಸಿದ್ಧಾಂತಗಳಿವೆ ಎನ್ನುವುದು ಸರಿಯೇ ಆದರೂ. ಅದರಲ್ಲಿ ವೀರಶೈವ ಸಿದ್ಧಾಂತಗಳು ಇವೆ. ಎನ್ನುವುದು ಹಚ್ಚು ಸರಿ. ಏಕೆಂದರೆ ಅದರಲ್ಲಿ ಇನ್ನೂ ಮೂರು ಸಿದ್ಧಾಂತಗಳಿವೆ. ಅವೆಂದರೆ. ಶೈವ ಸಿದ್ಧಾಂತ ಅಥವಾ ಶುದ್ಧಶೈವ: ವಚನೋಕ್ತ ಲಿಂಗಾಯತ ಮತ್ತು ಶಾಂಕರ ಅದ್ವೈತ. ಕೈಲಾಸದ ಪರಿಕಲ್ಪನೆ. ಶಕ್ತಿ ಪರಶಿವನ ಹೆಂಡತಿ ಎಂಬ ಸಿದ್ಧಾಂತ, ಸಾಯುಜ್ಯಮೋಕ್ಷ ಸಿದ್ಧಾಂತ, ಇವು ಶೈವ ಸಿದ್ಧಾಂತ ಮತ್ತು ಆಗಮೋಕ್ತ ವೀರಶೈವ ಸಿದ್ಧಾಂತಗಳು. ಲಿಂಗೈಕ್ಯ ಸಿದ್ಧಾಂತ, ಬ್ರಹ್ಮಪರಿಣಾಮವಾದ, ಇವು ವಚನೋಕ್ತ ಲಿಂಗಾಯತ ಸಿದ್ಧಾಂತಗಳು. ಮೋಕ್ಷ ಪಡೆದವನಿಗೆ ಜಗತ್ತು ಇಲ್ಲವಾಗುತ್ತದೆ. ಎಂಬ ಸಿದ್ಧಾಂತ (ಜಗನ್ಮಿಥ್ಯಾವಾದ) ಶಂಕರರ ಆದ್ವೈತ ಸಿದ್ಧಾಂತ.

ಸಿದ್ಧಾಂತ ಶಿಖಾಮಣಿಯ ಕರ್ತೃ ಗ್ರಂಥಾರಂಭದಲ್ಲಿ ಅನೇಕ ಆಗಮಗಳು, ಶೈವಪುರಾಣಗಳು ಮುಂತಾದ ವಿವಿಧ ಆಕರಗಳಿಂದ ಅನೇಕ ಸಿದ್ಧಾಂತಗಳನ್ನು ಸಂಗ್ರಹಿಸಿ ಅವುಗಳನ್ನು ವೇದಗಳಿಗೆ ವಿರೋಧವಾಗದಂತೆ ಹೊಂದಿಸುವುದು (1,25,26,28) ತನ್ನ ಉದ್ದೇಶ ಎಂದು ಹೇಳಿಕೊಳ್ಳುತ್ತಾನೆ. ಸಿದ್ಧಾಂತ ಶಿಖಾಮಣಿಯ ಸಿದ್ಧಾಂತಗಳು, ವೇದೋಪನಿಷತ್ತು ಮತ್ತು ಆಗಮಗಳ ಸಿದ್ಧಾಂತಗಳು, ಮತ್ತು ವಚನಕಾರರ ಸಿದ್ಧಾಂತಗಳು ಇವುಗಳಲ್ಲಿ ಒಮ್ಮತ ಏರ್ಪಟ್ಟರೆ ಆಗ ಸಿದ್ಧಾಂತ ಶಿಖಾಮಣಿಯ ಧ್ಯೇಯ ಕೈಗೂಡಿದೆ ಎನ್ನಬಹುದು, ಅದೊಂದು ಉತ್ಕೃಷ್ಟ ವೀರಶೈವ ಗ್ರಂಥ ಎನ್ನಬಹುದು. ಆದರೆ ಅವುಗಳಲ್ಲಿ ಒಮ್ಮತ ಏರ್ಪಡಲು ಸಾಧ್ಯವಿಲ್ಲ. ಉದಾಹರಣೆಗೆ
(1) ವಚನೋಕ್ತ ಲಿಂಗಾಯತವು ಪ್ರತಿಪಾದಿಸುವ 36 ತತ್ವಗಳು, ಶಿವನು ತಾನೇ ತನ್ನ ಶಕ್ತಿಯಿಂದಾಗಿ ಜಗತ್ತಾಗುತ್ತಾನೆಂಬ ಸಿದ್ಧಾಂತವನ್ನು ಸಿದ್ಧಾಂತ ಶಿಖಾಮಣಿ ಪ್ರಸ್ತಾಪಿಸುತ್ತದೆ. ಅದ್ವೈತದ ಜಗನ್ಮಿಥ್ಯಾವಾದ (ಮಾಯಾವಾದ)ವನ್ನೂ ಪ್ರಸ್ತಾಪಿಸುತ್ತದೆ. ಆದರೆ ಮೊದಲನೆಯದನ್ನು ಒಪ್ಪಿಕೊಂಡರೆ, ಮಾಯಾವಾದವನ್ನು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ.
(2) ಸಿದ್ಧಾಂತ ಶಿಖಾಮಣಿಯಲ್ಲಿ ಆಗಮಗೋಕ್ತ ಸಾಯುಜ್ಯ ಸಿದ್ಧಾಂತವಿರುವಂತೆ ವಚನೋಕ್ತ ಲಿಂಗಾಂಗ ಸಾಮರಸ್ಯ ಸಿದ್ಧಾಂತವೂ ಇದೆ. ಆದರೆ ಒಂದನ್ನೊಪ್ಪಿಕೊಂಡರೆ ಇನ್ನೋಂದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ, ಲಿಂಗೈಕ್ಯ ಸಿದ್ಧಾಂತವನ್ನೂ ಜಗನ್ಮಿಥ್ಯಾವಾದವನ್ನು ಒಪ್ಪಿಕೊಳ್ಳಬೇಕು ಎಂದರೆ ಅದೂ ಸಾಧ್ಯವಾಗುವುದಿಲ್ಲ. ಅರ್ಥಾತ್ "ಉತ್ಕೃಷ್ಠ ವೀರಶೈವ ಗ್ರಂಥ" ಎಂಬ ಪ್ರಶಂಸೆ, ಸಿದ್ಧಾಂತ ಶಿಖಾಮಣಿಗೆ ಅನ್ವಯವಾಗುವುದಿಲ್ಲ. ಅದು ಉತ್ಕೃಷ್ಠವೂ ಅಲ್ಲ, ವೀರಶೈವ ಗ್ರಂಥವೂ ಅಲ್ಲ.

ಪ್ರಾಯಶ: ಸಿದ್ಧಾಂತ ಶಿಖಾಮಣಿಯ ಮೊದಲಿನ ನಾಲ್ಕು ಪರಿಚ್ಛೇದಗಳು ಶೈವ ಸಿದ್ಧಾಂತ ಗ್ರಂಥವೊಂದರ ಭಾಗವಾಗಿರಬೇಕು. ಈ ಕಾರಣಕ್ಕಾಗಿಯೇ ಅದಕ್ಕೆ "ಸಿದ್ಧಾಂತ ಶಿಖಾಮಣಿ" ಎಂಬ ಹೆಸರಿರುವುದು. ಈ ಗ್ರಂಥದಲ್ಲಿ ಅನೇಕ ಕಡೆ ಶೈವ ಸಿದ್ಧಾಂತದ ಸಿದ್ಧಾಂತಗಳೇ ಬೋಧಿಸಲ್ಪಟ್ಟಿವೆ. ಈ ನಮ್ಮ ಸಂಶಯಕ್ಕೆ ಮತ್ತೆರಡು ಸಾಕ್ಷಿಗಳಿವೆ.
(1) ಸಿದ್ಧಾಂತ ಶಿಖಾಮಣಿಯ ಒಂದು ಶ್ಲೋಕ ಹೀಗಿದೆ:-

ತಸ್ಯಾಸೀನ್ನಂದನ: ಶಾಂತ: ಸಿದ್ಧನಾಥಾಭಿದ: ಶುಚಿ: | ಶಿವಸಿದ್ಧಾಂತ ನಿರ್ಣೀತಾ ಶಿವಾಚಾರ್ಯ: ಶಿವಾತ್ಮಕ: || (1.17)
(ಅವನಿಗೆ ಶಾಂತನೂ ಪವಿತ್ರನೂ ಶೈವಸಿದ್ಧಾಂತ ನಿರ್ಣೀತನೂ ಆದ ಸಿದ್ಧನಾಥನೆಂಬ ಶಿವಾಚಾರ್ಯನು ಜನಿಸಿದನು).

ಶೈವಸಿದ್ಧಾಂತ ಬಲ್ಲವನಾದ ಸಿದ್ಧನಾಥನಿಗೆ ಶುದ್ಧಶೈವ ಗುರುಗಳಿಗೆ ಸಲ್ಲುವ 'ಶಿವಾಚಾರ್ಯ" ಎಂಬ ಬಿರುದು ಇರುವುದು ಗಮನಾರ್ಹ.

(2) ಇಪ್ಪತ್ತೋಂದನೆಯ ಪರಿಚ್ಛೇದದಲ್ಲಿ ರೇಣುಕಾಚಾರ್ಯರು 3 ಕೋಟಿ ಸ್ಥಾವರಲಿಂಗಗಳನ್ನು ಪ್ರತಿಷ್ಠಾಪಿಸುವ ಪ್ರಸ್ತಾಪವಿದೆ ಇದೂ ಶುದ್ಧಶೈವ (ಶೈವಸಿದ್ಧಾಂತ)ಕ್ಕನುಗುಣವಾಗೇ ಇದೆ.

ಐದನೆಯ ಪರಿಚ್ಛೇದದಿಂದ ಮುಂದಿನ ಹದಿನಾರು ಪರಿಚ್ಛೇದಗಳಲ್ಲಿ ವಚನೋಕ್ತ ಲಿಂಗಾಯತ ತತ್ವಗಳನ್ನು ಆ ಶೈವಸಿದ್ಧಾಂತದ ಮೂಲ ಗ್ರಂಥಕ್ಕೆ ಸೇರಿಸಲಾಗಿದೆ. ಮತ್ತೆ ಕೊನೆಯ (ಇಪ್ಪತ್ತೊಂದನೆಯ) ಪರಿಚ್ಛೇದ ಶೈವಸಿದ್ಧಾಂತಕ್ಕನುಗುಣವಾಗಿದೆ. ಬೇವಿನ ಮರದ ಬುಡಕ್ಕೆ ಮಾವಿನಮರದ ಟೊಂಗೆಗಳನ್ನು ಸಿಕ್ಕಿಸಿದಂತಾಗಿದೆ. ಇದರಿಂದಾಗಿ ಈ ಗ್ರಂಥ ವೀರಶೈವ ಗ್ರಂಥವೋ, ಲಿಂಗಾಯತ ಗ್ರಂಥವೋ, ಶೈವಸಿದ್ಧಾಂತ ಗ್ರಂಥವೋ? ಎಂಬ ಗೊಂದಲವಾಗುತ್ತದೆ. ಇದರ ಸಿದ್ಧಾಂತ ಶೈವಸಿದ್ಧಾಂತದ ದ್ವೈತವೋ, ವಚನೋಕ್ತ ಲಿಂಗಾಯತದ ಶಿವಾದ್ವೈತವೋ, ಶಂಕರರ ಆದ್ವೈತವೋ ಎಂಬ ಗೊಂದಲವೂ ಉಂಟಾಗುತ್ತದೆ.

ಸಿದ್ಧಾಂತ ಶಿಖಾಮಣಿಯ ಕರ್ತೃ ಸಂಗ್ರಹಿಸಿರುವುದು ಉತ್ತಮ ವಿಶ್ವಾಸಾರ್ಹ ಶ್ಲೋಕಗಳಿರಬಹುದು, ಉದಾತ್ತ ಸಿದ್ಧಾಂತ ಅಥವಾ ಧ್ಯೇಯಗಳಿರಬಹುದು. ಆದರೆ ಅವುಗಳಲ್ಲಿ ಸಾಮರಸ್ಯವಿರಲು ಸಾಧ್ಯವೇ ಇಲ್ಲ. ಇಬ್ಬರು ಫುಟ್‍ಬಾಲ್ ಆಟಗಾರರು, ಇಬ್ಬರು ಹಾಕಿ ಆಟಗಾರರು, ಇಬ್ಬರು ಕ್ರಿಕೆಟಿಗರು, ಇಬ್ಬರು ಖೋಖೋ ಆಟಗಾರರು, ಇಬ್ಬರು ವಾಲಿಬಾಲ್ ಆಟಗಾರರು ಮುಂತಾದ ವಿವಿಧ ರೀತಿಯ ಆಟಗಾರರನ್ನು ಸೇರಿಸಿಕೊಂಡು ಒಂದು ಫುಟ್‍ಬಾಲ್ ಟೀಮನ್ನೋ ಅಥವಾ ಕ್ರಿಕೆಟ್ ಟೀಮನ್ನೋ ರಚಿಸಲೂ ಸಾಧ್ಯವಿಲ್ಲ. ಅವರೆಲ್ಲ ಉತ್ತಮ ಆಟಗಾರರೇ ಇರಬಹುದು. ಆದರೆ ಅವರಲ್ಲಿ ಹೊಂದಾಣಿಕೆ ಇರಲು ಸಾಧ್ಯವಿಲ್ಲ. ಅದೇ ರೀತಿ, ಕೈಲಾಸದ ಕಲ್ಪನೆ, ಲಿಂಗೈಕ್ಯ ಸಿದ್ಧಾಂತ, ಬ್ರಹ್ಮಪರಿಣಾಮವಾದ, ಜಾತಿನಿರಸನ ಕಲ್ಪನೆ, ವರ್ಣಾಶ್ರಮಧರ್ಮಪ್ರತಿಪಾದನೆ, ಜಗನ್ಮಿಥ್ಯಾವಾದ, ಇವೆಲ್ಲ ಬೇರೆ ಬೇರೆ ಸಂದರ್ಭಗಳಲ್ಲಿ ಪ್ರಬಲ ಪ್ರಸಿದ್ಧ ಸಿದ್ಧಾಂತಗಳೇ. ಆದರೆ ಅವುಗಳನ್ನು ಸೇರಿಸಿಕೊಂಡು ಒಂದು ವೀರಶೈವ ಅಥವಾ ಲಿಂಗಾಯತ ಸಿದ್ಧಾಂತ ರಚಿಸಲು ಸಾಧ್ಯವಿಲ್ಲ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ:
"ಸಿದ್ಧಾಂತ ಶಿಖಾಮಣಿಯು ಅನೇಕ ಪರಸ್ಪರ ಸಂಬಂಧವಿಲ್ಲದ, ಸಿದ್ಧಾಂತಗಳನ್ನು ಪ್ರತಿಪಾದಿಸುವ ಒಂದು ಅಸಂಬದ್ಧ ಕೃತಿ."
*

[1] ಇದರಲ್ಲಿ ಉದ್ಧರಿಸಿರುವ ಶ್ಲೋಕಗಳನ್ನು ಪ್ರೊ. ಸಂ. ಶಿ. ಭೂಸನೂರಮಠ ಮತ್ತು ಡಾ. ಎಸ್. ಜಿ. ಘಿವಾರಿ (ಸಂ): ವೀರಶೈವ ಸಿದ್ಧಾಂತ ಶಿಖಾಮಣಿ (ಶ್ರೀಮದ್ವೀರಶೈವ ಶಿವಯೋಗಮಂದಿರ, ತಾ: ಬಾದಾಮಿ, 1992) ಯಿಂದ ತೆಗೆದುಕೊಳ್ಳಲಾಗಿದೆ.
[2] ವಿದ್ಯಾವಾಚಸ್ಪತಿ ಶ್ರೀ 1008 ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಸಿದ್ಧಾಂತ ಶಿಖಾಮಣಿ ಪ್ರವಚನ ಪ್ರಭೆ ಸಂ. 1(ಶ್ರೀ ಜಗದ್ಗುರು ಪಂಚಾಚಾರ್ಯ ಮಾನವಧರ್ಮ ಸಂಸ್ಥೆ, ಮಹಾಂತರಮಠ ಬೆಂಗಳೂರು.2000). ಪು.5-6.
[3] ಪೂರ್ವೋಕ್ತ ಉಪೋದ್ಧಾತ ಪು.1
[4] Indian Philosophy vol-I (George Allen and Unwin, London, 1972 Reprint.) P.483.
[5] ಮೂಲ ಮರಾಠಿ. ಕನ್ನಡಕ್ಕೆ ಅನುವಾದಿಸಿದವರು ಹೇಮಂತರಾಜ (ಪ್ರ. ಸುಮಂತ ಪ್ರಕಾಶನ, ಬೆಂಗಳೂರು-32, 2002)
[6] ಡಾ. ವರ್ತಕರಿಗೆ ಅವರ "ವಾಸ್ತವ ರಾಮಾಯಣ" (ರಾಮಾಯಣದ ಕುರಿತ ವಿಜ್ಞಾನನಿಷ್ಠ ಸಂಶೋಧನೆ) ಮತ್ತು "ಸ್ವಯಂಭೂ" (ಮಹಾಭಾರತ ಕುರಿತ ವಿಜ್ಞಾನನಿಷ್ಠ ಸಂಶೋಧನೆ) ಎಂಬ ಎರಡು ಪುಸ್ತಕಗಳಿಗೆ ಅಮೇರಿಕೆಯ ವಾಷಿಂಗ್‍ಟನ್ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿದೆ.
[7] ನೋಡಿ "ವಾಸ್ತವ ರಾಮಾಯಣ" ಪು. 224
[8] ಅದರಲ್ಲೇ ಪು. 225
[9] ರಾಧಾಕೃಷ್ಣನ್: ಪೂರ್ವೋಕ್ತ ಪು. 478
[10] ಕಾಶೀ ಜಗದ್ಗುರುಗಳು: ಪೂರ್ವೋಕ್ತ. ಪು. 143-44
[11] ಸಮಗ್ರ ವಚನ ಸಂಪುಟ-6, ವ47
[12] ಸಮಗ್ರ ವಚನ ಸಂಪುಟ-4, ವ.1492
[13] ಸಮಗ್ರ ವಚನ ಸಂಪುಟ-1 ವ.1291
[14] ಸಮಗ್ರ ವಚನ ಸಂಪುಟ-2, ವ.1143
[15] ಪಂ. ಕಾಶೀನಾಥಶಾಸ್ತ್ರಿ (ಸಂ); ಸಿದ್ಧಾಂತ ಶಿಖಾಮಣಿ(ಪಂಚಾಚಾರ್ಯ ಎಲೆಕ್ಟ್ರಿಕ್ ಪ್ರೆಸ್, ಮೈಸೂರು 1953.
[16] ಪ್ರೊ. ಸಂ. ಶಿ. ಭೂಸನೂರಮಠ ಮತ್ತು ಡಾ. ಎಸ್. ಜಿ. ಘಿವಾರಿ (ಸಂ).; ವೀರಶೈವ ಸಿದ್ಧಾಂತ ಶಿಖಾಮಣಿ
[17] ಕಾಶೀ ಜಗದ್ಗುರುಗಳು: ಪೂರ್ವೋಕ್ತ ಪು.791
[18] ಸಮಗ್ರ ವಚನ ಸಂಪುಟ-2 ವಚನ 1161
[19] ಸಮಗ್ರ ವಚನ ಸಂಪುಟ-1/ 533
[20] ಸಮಗ್ರ ವಚನ ಸಂಪುಟ-5/ 365
[21] ಕುನ್ಹನ್ ರಾಜಾ. Some Fundamental Problems in Indian Philosophy (Motilal Banarsidas. Delhi. 1960) ಪು. 399-402
[22] ಪ್ರೊ. ಸಂ. ಶಿ. ಭೂಸನೂರಮಠ; ಮಹಾಲಿಂಗದೇವರು ನಿರೂಪಿಸಿದ ಏಕೋತ್ತರ ಶತಸ್ಥಲ (ನಾಗನೂರು ರುದ್ರಾಕ್ಷಿಮಠ, ಬೆಳಗಾವಿ. 1974) ಪು. 80-82
[23] ಸಮಗ್ರ ವಚನ ಸಂಪುಟ-1/628].
[24] ಸಮಗ್ರ ವಚನ ಸಂಪುಟ-3/1018].
[25] ಸಾ. ಚಿದಾನಂದ ಮೂರ್ತಿ, ವಚನಶೋಧ-1 (ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು,1998). ಪು.24).
[26] ಡಾ. ಎಂ. ಶಿವಕುಮಾರ ಸ್ವಾಮಿ (ಸಂ). ಚಂದ್ರಜ್ಞಾನಾಗಮ (ಕ್ರಿಯಾಪಾದ) ಎರಡನೆಯ ಪಟಲ 61-62.
[27] ಅದರಲ್ಲೆ. ಸಪ್ತಮ ಪಟಲ 11-13
[28] ಡಾ. ಎಂ. ಶಿವಕುಮಾರ ಸ್ವಾಮಿ (ಸಂ). ಕಾರಣಾಗಮ (ವೀರಶೈವ ಅನುಸಂಧಾನ ಸಂಸ್ಥಾನ ಬೆಂಗಳೂರು. 1999). ಮೂರನೆಯ ಪಟಲ. 71.
[29] ಅದರೆಲ್ಲೆ ಐದನೇಯ ಪಟಲ 78.
[30] ಡಾ. ಎಂ. ಶಿವಕುಮಾರ ಸ್ವಾಮಿ (ಸಂ). ಚಂದ್ರಜ್ಞಾನಾಗಮ (ಕ್ರಿಯಾಪಾದ) (ವೀರಶೈವ ಅನುಸಂಧಾನ ಸಂಸ್ಥಾನ ಬೆಂಗಳೂರು. 2002). ಎಂಟನೆಯ ಪಟಲ. 10
[31] ನೋಡಿ 9-16
[32] ಸಮಗ್ರ ವಚನ ಸಂಪುಟ-6 ವ. 390

ಪರಿವಿಡಿ (index)
*
Previousಉತ್ತರಾಯಣ ಪುಣ್ಯಕಾಲಲಂಡನ್‌ನಲ್ಲಿ ಧರ್ಮಗುರು ಬಸವೇಶ್ವರ ಪ್ರತಿಮೆNext
*