Previous ಲಿಂಗಾಯತ ರಾಜಮನೆತನಗಳು ಹನ್ನೆರಡನೆಯ ಶತಮಾನದಲ್ಲಿ ಸಂಗೀತದ ಸ್ಥಿತಿ Next

ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ

*

ದಾನವೀರ ಶರಣ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ

ಈ ನಾಡು ಕಂಡ ಅಪ್ರತಿಮ ದಾನವೀರ ಶಿರಸಂಗಿ ಲಿಂಗರಾಜ ದೇಸಾಯಿಯವರ ತ್ಯಾಗ ಮತ್ತು ಉದಾರ ಮನೋಭಾವ ಸದಾ ಸ್ಮರಣೀಯವಾದದ್ದು.
ಕನ್ನಡ ನಾಡಿಗೆ ಮತ್ತು ಲಿಂಗಾಯತ ಸಮಾಜಕ್ಕೆ ಅಪಾರ ಸೇವೆ ಸಲ್ಲಿಸಿ, ತಮ್ಮ ಜೀವನವನ್ನೇ ತ್ಯಾಗ ಮಾಡಿದ ದೇಸಾಯಿಯವರ ಸಂಪೂರ್ಣ ಪರಿಚಯ ನಮ್ಮ ನಾಡಿಗೆ ಆಗಬೇಕಿದೆ.

ಜನವರಿ ೧೦, ೧೮೬೧ ರಂದು ಬೆಳಗಾವಿ ಜಿಲ್ಲೆಯ ಶಿರಸಂಗಿ ಗ್ರಾಮದಲ್ಲಿ ಜನಿಸಿದರು.
ಅವರ ಹುಟ್ಟಿದಾಗಿನಿಂದ ಕರೆದ ಹೆಸರು ರಾಮಪ್ಪ. ಅವರನ್ನು ಶಿರಸಂಗಿ - ನವಲಗುಂದ ದೇಸಾಯಿ ಮತ್ತು ಗಂಗಾಬಾಯಿಯವರು ದತ್ತು ಪಡೆದುಕೊಂಡರು, ಅನಂತರ ಅವರು ಸಂಸ್ಥಾನಾಧಿಪತಿಗಳಾಗಿ ಮುಂದುವರಿದರು.

Sir Sirsangi Lingaraj Desai, ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ

ಶಿರಸಂಗಿ ಲಿಂಗರಾಜರು ಶಿರಸಂಗಿ - ನವಲಗುಂದ ಮತ್ತು ಸವದತ್ತಿ ಸಂಸ್ಥಾನಗಳ ಸಂಸ್ಥಾನಾಧಿಪತಿಯಾಗಿದ್ದರು.

ದೇಶದ ಬೆನ್ನೆಲುಬು ರೈತ ಎಂಬುದನ್ನು ಮನಗೊಂಡಿದ್ದ ಲಿಂಗರಾಜರು, ತಮ್ಮ ೧೫೦ ಎಕರೆ ಹೊಲದಲ್ಲಿ ಕೃಷಿ ತರಬೇತಿ ಶಾಲೆ ಯನ್ನು ಸ್ಥಾಪಿಸಿ, ಭವ್ಯವಾದ ಹಲವಾರು ಕರೆಗಳನ್ನು ಕಟ್ಟಿಸಿದರು‌ . ಭೂ ಅಭಿವೃದ್ಧಿ, ನೀರಾವರಿ ಯೋಜನೆಗಳು ಇವರ ದೂರದೃಷ್ಟಿಗೆ ಹಿಡಿದ ಕನ್ನಡಿ.
ಸಾಮಾಜಿಕ ಕ್ರಾಂತಿಕಾರಿಗಳಾದ ಇವರು ಬಾಲ್ಯ ವಿವಾಹವನ್ನು ವಿರೋಧಿಸಿದರು.

ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸು ವಲ್ಲಿ ಲಿಂಗರಾಜರು ಕೈಗೊಂಡ ಯೋಜನೆಗಳು ಇಂದಿಗೂ ಪ್ರಚಲಿತವಿದ್ದು, ಕೃಷಿ ಮತ್ತು ನೀರಾವರಿ ಬಗೆಗಿನ ಕಾಳಜಿ, ರೈತಪರ ನಿಲುವು, ಶಿಕ್ಷಣ ಮತ್ತು ಸಮಾಜದ ಒಲವು ಗಳು ಅವರೊಳಗಿನ ಚುರುಕಿನ ಕ್ರಿಯಾಶೀಲತೆಯನ್ನು ಪ್ರದರ್ಶನಗೊಳಿಸುವಂತಹವಾಗಿದ್ದವು.ಪ್ರತಿ ಆರ್ಥಿಕ ವಲಯದ ಅಭಿವೃದ್ಧಿಗೆ ಕೊಟ್ಟಂತಹ ಬೆಂಬಲ ಬಹಳ ಮಹತ್ವಪೂರ್ಣವಾದದ್ದು.
ಸದಾ ಸಾಮಾಜಿಕ ಚಿಂತನೆಯಲ್ಲಿದ್ದ ಇವರು ಸಮಾಜದ ಸಂಘಟನೆಗೆ ಹಲವಾರು ಯೋಜಿತ ದಾನ ದತ್ತಿಗಳನ್ನು ನೀಡಿದ್ದಲ್ಲದೇ ತಮ್ಮ ಸರ್ವಸ್ವವನ್ನೂ ಸಮಾಜಕ್ಕೋಸ್ಕರ ಮುಡಿಪಾಗಿಟ್ಟ ಧೀರೋದಾತ್ತರು .
ಮಾತಿನ ನಿಲುವು, ಯೋಜಿತ ಲಹರಿ, ಗಟ್ಟಿ ನಿರ್ಧಾರಗಳು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಅಧಿಕಾರಿಗಳೂ ಸಹ ಬೆರಗುಗೊಳಿಸುವಂತೆ ಮಾಡಿದ್ದವು.

ಸಂಘಟನೆಯೇ ಅಭಿವೃದ್ಧಿಯ
ಹೆದ್ದಾರಿ ಎಂದರಿತ ಲಿಂಗರಾಜರು, ಲಿಂಗಾಯತ ಸಂಘಟನೆಯ ಪ್ರಥಮ ರೂವಾರಿ ಎನಿಸಿ, ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಸ್ಥಾಪಿಸಿದರು. ಪ್ರಸಿದ್ಧ ಕರ್ಣಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ (ಕೆಎಲ್ ಇ) ಗೆ ಇವರೆ ಬುನಾದಿಯನ್ನು ಹಾಕಿ ಕೊಟ್ಟವರು.

ಅವರು ಲಿಂಗಾಯತ ವಿದ್ಯಾರ್ಥಿಗಳ ಶಿಕ್ಷಣದ ಸಲುವಾಗಿ ಅವರ ಎಲ್ಲಾ ಆಸ್ತಿಗಳನ್ನು ದಾನ ಮಾಡಿ ಲೋಕೋಪಕಾರಿ ಎನಿಸಿಕೊಂಡರು. ಅವರನ್ನು ಲಿಂಗಾಯತ ಸಮುದಾಯದ ಶೈಕ್ಷಣಿಕ ಸಂಚಲನೆಯ ಒಂದು ಮಹಾನ್ ಮೂಲ ಸ್ಫೂರ್ತಿ ಯೆಂದೆ ಪರಿಗಣಿಸಲಾಗುತ್ತದೆ.

ಶಿರಸಂಗಿ ಲಿಂಗರಾಜರು ೧೯೦೬ ನೇ ಇಸವಿಯ ಆಗಸ್ಟ್ ತಿಂಗಳಲ್ಲಿ ಲಿಂಗಾಯತ ವಿದ್ಯಾರ್ಥಿಗಳ ಉನ್ನತಿ ಮತ್ತು ಶಿಕ್ಷಣಾಭಿವೃದ್ಧಿಗಾಗಿ ನವಲಗುಂದ - ಶಿರಸಂಗಿ ಟ್ರಸ್ಟ್ ಸ್ಥಾಪಿಸಿದರು. ೧೯೩೦ ಮತ್ತು ೧೯೮೪ ರ ನಡುವೆ ಈ ಟ್ರಸ್ಟ್ ನಿಂದ ಸುಮಾರು ೬೯೨೫ ವಿದ್ಯಾರ್ಥಿಗಳು ಪಡೆದ ಹಣಕಾಸು ನೆರವಿನ ಮೌಲ್ಯ ಅಂದಾಜು ೨೨,೯೮,೩೨೧-೦೦ ಭಾರತೀಯ ರೂಪಾಯಿಗಳು . ಈ ಟ್ರಸ್ಟ್ ಈಗಲೂ ಸಹ ಲಿಂಗಾಯತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ಮುಂದುವರೆಸಿದೆ. ಡಿ.ಸಿ.ಪಾವಟೆ, ಬಿ.ಡಿ.ಜತ್ತಿ, ಎಸ್.ಆರ್.ಕಂಠಿ, ರತ್ನಪ್ಪಾ ಕುಂಬಾರರು ಈ ಟ್ರಸ್ಟ್ ನಿಂದ ಆರ್ಥಿಕ ನೆರವು ಪಡೆದ ಕೆಲವು ಗಮನಾರ್ಹ ವ್ಯಕ್ತಿಗಳು..

"ಬಡಮಕ್ಕಳಿಗೆ ಉನ್ನತ ಶಿಕ್ಷಣ ಸಿಗಬೇಕು, ಸರ್ವರೂ ಸಹಬಾಳ್ವೆಯಿಂದ ಸುಖ ಜೀವನ ನಡೆಸಬೇಕೆಂಬ ಉದ್ದೇಶದಿಂದ ಸಿರಸಂಗಿ ಲಿಂಗರಾಜ ದೇಸಾಯಿ ಅವರು ತಮ್ಮ ಆಸ್ತಿಯನ್ನು ಸಮಾಜಕ್ಕೆ ದಾನ ಮಾಡಿ ನಾಡಿಗೆ ಮಾದರಿಯಾಗಿದ್ದಾರೆ".

ಪರಿವಿಡಿ (index)
*
Previous ಲಿಂಗಾಯತ ರಾಜಮನೆತನಗಳು ಹನ್ನೆರಡನೆಯ ಶತಮಾನದಲ್ಲಿ ಸಂಗೀತದ ಸ್ಥಿತಿ Next