Previous ವಚನ ಸಾಹಿತ್ಯದಲ್ಲಿ ಮಾನವ ಸಮಾನತೆ ವೇದಶಾಸ್ತ್ರ ಪುರಾಣಕ್ಕಿಂತ ಶರಣರ ವಚನ ಶ್ರೇಷ್ಠ Next

ಎಲ್ಲ ದಿನವೂ ಶುಭ ದಿನವೇ! ಎಲ್ಲಾ ಕಾಲವೂ ಶುಭವೇ!

*

ಲಿಂಗಾಯತ ಧರ್ಮದ ದೃಷ್ಟಿಯಲ್ಲಿ ಕಾಲದ ಬಗ್ಗೆ ಶುಭ-ಅಶುಭ ಎಂಬುದಿಲ್ಲ

ಲಿಂಗಾಯತ ಧರ್ಮದ ದೃಷ್ಟಿಯಲ್ಲಿ ಕಾಲದ ಬಗ್ಗೆ ಶುಭ-ಅಶುಭ ಎಂಬುದಿಲ್ಲ. ಸೃಷ್ಟಿಕರ್ತನನ್ನು ಸ್ಮರಿಸಿಕೊಂಡು ಮಾಡಿದುದೆಲ್ಲ ಶುಭಗಳಿಗೆಯೆ. ಆದ್ದರಿಂದ ನಿಜವಾದ ಲಿಂಗಾಯತನು ರಾಹು ಕಾಲ - ಗುಳಿಕ ಕಾಲ - ಯಮ ಕಂಟಕ ಕಾಲ ಎಂದು ಭೇದವೆಣಿಸದೆ ಗುರು ಬಸವಣ್ಣ - ಲಿಂಗದೇವ - ಜಂಗಮರ ದಿವ್ಯ ಸ್ಮರಣೆ ಮಾಡಿ ಕೆಲಸಗಳನ್ನು ಮಾಡಬೇಕು.

ಎಮ್ಮವರು ಬೆಸಗೊಂಡರೆ ಶುಭ ಲಗ್ನವೆನ್ನಿರಯ್ಯ
ರಾಶಿಕೂಟ ಗಣ ಸಂಬಂಧ ಉಂಟೆಂದು ಹೇಳಿರಯ್ಯ
ಚಂದ್ರಬಲ ತಾರಾಬಲ ಉಂಟೆಂದು ಹೇಳಿರಯ್ಯ
ನಾಳಿನ ದಿನಕ್ಕಿಂದಿನ ದಿನ ಲೇಸೆಂದು ಹೇಳಿರಯ್ಯ
ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯ -ಬಸವಣ್ಣ

ಲಗ್ನವೆಲ್ಲಿಯದೋ ವಿಘ್ನವೆಲ್ಲಿಯದೋ ಲಿಂಗಯ್ಯಾ|
ದೋಷವೆಲ್ಲಿಯದೋ ದುರಿತವೆಲ್ಲಿಯದೋ|
ಕೂಡಲಸಂಗಮದೇವಯ್ಯಾ ನಿಮ್ಮ ಮಾಣದೆ ನೆನೆವಂಗೆ
ಭವ ಕರ್ಮವೆಲ್ಲಿಯದೋ| -ಬಸವಣ್ಣ

ಅಂದು ಇಂದು ಮತ್ತೊಂದೆನಬೇಡ,
ದಿನವಿಂದೇ `ಶಿವ ಶರಣೆಂ'ಬವಂಗೆ,
ದಿನವಿಂದೇ 'ಹರ ಶರಣೆಂ'ಬವಂಗೆ,
ದಿನವಿಂದೇ ನಮ್ಮ ಕೂಡಲಸಂಗನ ಮಾಣದೆ ನೆನೆವಂಗೆ. 174

ಭವಿಷ್ಯವ ಓದುವ ಗಿಳಿ ತನ್ನ ಸಾವು ಬೆಕ್ಕಿನ ಮುಖಾಂತರ ಬರುವುದನ್ನು ಹೇಳಲಾರದು, ಅಂದರೆ ಯಾವ ಮೂಲೆಯಿಂದ ಬೆಕ್ಕು ತನ್ನ ಮೇಲೆ ಆಕ್ರಮಿಸಿ ಕೊಂದು ತಿನ್ನುವುದೋ ಅದಕ್ಕೆ ಗೊತ್ತಿಲ್ಲ. ಅಂದ ಮೇಲೆ ಗಿಳಿ ಮನುಷ್ಯರ ಭವಿಷ್ಯವೇನು ಹೇಳುತ್ತದೆ? ಇದನ್ನೆ ಗುರು ಬಸವಣ್ಣನವರು ವಿಡಂಬಿಸುತ್ತಿದ್ದಾರೆ.

ಗಿಳಿಯೋದಿ ಫಲವೇನು
ಬೆಕ್ಕು ಬಹುದ ಹೇಳಲರಿಯದು.
ಜಗವೆಲ್ಲವ ಕಾಬ ಕಣ್ಣು,
ತನ್ನ ಕೊಂಬ ಕೊಲ್ಲೆಯ ಕಾಣಲರಿಯದು.
ಇದಿರ ಗುಣವ ಬಲ್ಲೆವೆಂಬರು, ತಮ್ಮ ಗುಣವನರಿಯರು,
ಕೂಡಲಸಂಗಮದೇವಾ. 123

ಇಪ್ಪತ್ತುನಾಲ್ಕು ತಿಥಿಯಿಂದ ವೆಗ್ಗಳ,
ಗ್ರಹಣ ಸಂಕ್ರಾಂತಿಯಿಂದ ವೆಗ್ಗಳ,
ಏಕಾದಶಿ-ವ್ಯತೀಪಾತದಿಂದ ವೆಗ್ಗಳ,
ಸೂಕ್ಷ್ಮ ಶಿವಪಥವನರಿದಂಗೆ
ಹೋಮ-ನೇಮ-ಜಪ-ತಪದಿಂದ ವೆಗ್ಗಳ,
ಕೂಡಲಸಂಗಮದೇವಾ ನಿಮ್ಮ ಮಾಣದೆ ನೆನೆವಂಗೆ. -ಬಸವಣ್ಣ

’ಅಷ್ಟಮಿ ನವಮಿ ಎಂಬ ಕಲ್ಪತವೇಕೊ ಶರಣಂಗೆ?’ ಎಂದುಪ್ರಶ್ನಿಸುತ್ತಾರೆ.

ಲಿಂಗಭಕ್ತನ ವಿವಾಹದಲ್ಲಿ ಶಿವಗಣಂಗಳಿಗೆ
ವಿಭೂತಿ ವೀಳೆಯವ ಕೊಟ್ಟು ಆರೋಗಣೆಯ ಮಾಡಿಸಿ
ಶಿವಗಣಂಗಳು ಸಾಕ್ಷಿಯಾಗಿ ಪ್ರಸಾದವನಿಕ್ಕುವುದೇ ಸದಾಚಾರವಲ್ಲದೆ,
ವಾರ ತಿಥಿ ಸುಮುಹೂರ್ತವೆಂಬ ಲೌಕಿಕದ ಕರ್ಮವ ಮಾಡಿದಡೆ
ನಿಮ್ಮ ಸದ್ಭಕ್ತರಿಗೆ ದೂರವಯ್ಯಾ ಕೂಡಲಚನ್ನಸಂಗಮದೇವಾ. -ಚನ್ನಬಸವಣ್ಣ

ಎಂದು ಚನ್ನಬಸವಣ್ಣನವರು ಅನಿಶ್ಚಿತ ಹೇಳಿಕೆಗಳ ಪಂಚಾಂಗವನ್ನು ತಿರಸ್ಕರಿಸುತ್ತ ವೈಚಾರಿಕ ಪ್ರಜ್ಞೆಯನ್ನು ಎತ್ತಿ ಹಿಡಿದಿದ್ದಾರೆ.

ಪ೦ಚಾ೦ಗ ಕೇಳಿದವರು ಏನಾದರು?
ಶ್ರೀ ಮತ್ಸಜ್ಜನ ಶುದ್ಧ ಶಿವಾಚಾರರಾಗಿ ಅಷ್ಟಾವರಣವೆ ಅ೦ಗವಾಗಿ, ಪ೦ಚಾಚಾರವೆ ಪ್ರಾಣವಾಗಿ, ಬಸವೇಶ್ವರದೇವರ ಸಾ೦ಪ್ರಾದಾಯಕರೆ೦ದು ನುಡಿದು ನಡೆದರೆ ಭಕ್ತರೆ೦ಬೆ, ಪುರಾತನರೆ೦ಬೆ.
ಅ೦ತಪ್ಪ ಭಕ್ತ೦ಗೆ ಈ ಮೂಜಗವೆಲ್ಲ ಸರಿಯಲ್ಲವೆ೦ಬೆ.
ಆ ಭಕ್ತ೦ಗೆ ಶಿವನ ಗದ್ದುಗೆ ಕೈಲಾಸವಾಗಿಪ್ಪುದು ನೋಡಾ.
ಈ ಶಿವಾಚಾರದ ಪಥವನರಿಯದೆ ಇರುಳು ಹಗಲು ಅನ೦ತ ಸೂತಕಪತಕ೦ಗಳೊಳಗೆ ಮುಳುಗಾಡಿ ಮತಿಗೆಟ್ಟು ಪ೦ಚಾ೦ಗವ ಬೊಗಳುವ ಭ್ರಷ್ಟಮಾದಿಗರ ಮಾತು ಅ೦ತಿರಲಿ.
ಪ೦ಚಾ೦ಗ ಕೇಳಿದ ದಕ್ಷಬ್ರಹ್ಮನ ತಲೆಯೇಕೆ ಹೋಯಿತು?
ಪ೦ಚಾ೦ಗ ಕೇಳಿದ ಪ೦ಚಪಾ೦ಡವರು ದೇಶಭ್ರಷ್ಟರಾದರೇಕೆ?
ಪ೦ಚಾ೦ಗ ಕೇಳಿದ ಶ್ರೀರಾಮನ ಹೆ೦ಡತಿ ರಾವಣಗೆ ಸೆರೆಯಾದಳೇಕೆ?
ಪ೦ಚಾ೦ಗ ಕೇಳಿದ ಇ೦ದ್ರನ ಶರೀರವೆಲ್ಲ ಯೋನಿಮ೦ಡಲವೇಕಾಯಿತು?
ಪ೦ಚಾ೦ಗ ಕೇಳಿದ ದ್ವಾರವತಿ ಪಟ್ಟಣದ ನಾರಾಯಣ ಹೆ೦ಡರು ಹೊಲೆಮದಿಗರನ್ನು ಕೂಡಿದರೇಕೆ?
ಪ೦ಚಾ೦ಗ ಕೇಳಿದ ಸರಸ್ವತಿ ಮೂಗು ಹೋಯಿತೇಕೆ?
ಪ೦ಚಾ೦ಗ ಕೇಳಿದ ಕಾಮ ಸುಟ್ಟು ಭಸ್ಮವಾದನೇಕೆ?
ಪ೦ಚಾ೦ಗ ಕೇಳಿದ ಬ್ರಹ್ಮ ವಿಷ್ಣು ಇ೦ದ್ರ ಮೊದಲಾದ ಮೂವತ್ತುಮೂರು ಕೋಟಿದೇವರಗಳು ತಾರಕಾಸುರನಿ೦ದ ಬಾಧೆಯಾಗಿ ಕ೦ಗೆಟ್ಟು ಶಿವನ ಮೊರೆಯ ಹೊಕ್ಕರೇಕೆ?
ಕುರುಡು ಕು೦ಟ ಹಲ್ಲುಮುರುಕ ಗುರುತಲ್ಪಕನ ಬಲವ ಕೇಳಲಾಗದು.
ಶುಭದಿನ ಶುಭಲಗ್ನ ಶುಭವೇಳೆ ಶುಭಮುಹೂತ೯ ವ್ಯತಿಪಾತ ದಗ್ದವಾರವೆ೦ದು ಸ೦ಕಲ್ಪಿಸಿ ಬೊಗಳುವರ ಮಾತು ಕೇಳಲಾಗದು ಗುರುವಿನಾಜ್ಞೆಯಮೀರಿ ಸತ್ತರೆ ಹೊಲೆ, ಹಡೆದರೆ ಹೊಲೆ, ಮುಟ್ಟಾದರೆ ಹೊಲೆ, ಎ೦ದು ಸ೦ಕಲ್ಪಿಸಿಕೊ೦ಬಿರಿ.
ನಿಮ್ಮ ಮನೆ ಹೊಲೆಯಾದರೆ ನಿಮ್ಮ ಗುರು ಕೊಟ್ಟ ಲಿ೦ಗವೇನಾಯಿತು? ವಿಭೂತಿ ಏನಾಯಿತು? ರುದ್ರಾಕ್ಷಿ ಏನಾಯಿತು? ಮ೦ತ್ರವೇನಾಯಿತು? ಪಾದೋದಕವೇನಾಯಿತು? ನಿಮ್ಮ ಶಿವಾಚಾರವೇನಾಯಿತು? ನೀವೇನಾದಿರಿ ಹೇಳಿರಣ್ಣಾ? ಅರಿಯದಿದ್ದರೆ ಕೇಳಿರಣ್ಣಾ.
ನಿಮ್ಮ ಲಿ೦ಗ ಪೀತಲಿ೦ಗ; ನೀವು ಭೂತಪ್ರಾಣಿಗಳು. ನಿಮ್ಮ ಮನೆಯೊಳಗಾದ ಪದಾಥ೯ವೆಲ್ಲ ಹೆ೦ಡಕ೦ಡ ಅಶುದ್ಧ ಕಿಲ್ಬಿಷವೆನಿಸಿತ್ತು.
ಇದ ಕ೦ಡು ನಾಚದೆ, ಮತ್ತೆ ಮತ್ತೆ ಶುಭಲಗ್ನವ ಕೇಳಿ, ಮದುವೆಯಾದ ಅನ೦ತ ಜನರ ಹೆ೦ಡಿರು ಮು೦ಡೆಯರಾಗಿ ಹೋದ ದೃಷ್ಟ್ರವಕ೦ಡು ಪ೦ಚಾ೦ಗವ ಕೇಳಿದವರಿಗೆ ನಾಯಿ ಮಲವ ಹ೦ದಿಕಿತ್ತು ಕೊ೦ಡು ತಿ೦ದ೦ತ್ತಾಯಿತ್ತು ಕಾಣಾ ನಿಸ್ಸ೦ಗ ನಿರಾಳ ನಿಜಲಿ೦ಗಪ್ರಭುವೆ. (ನಿರಾಲ೦ಬ ಪ್ರಭು)

ಕೇಳು ನೀನೆಲೊ ಮಾನವಾ,
ಸೋಮವಾರ ಅಮಾವಾಸ್ಯೆ ಹುಣ್ಣಿಮೆ ಎಂಬ
ದೊಡ್ಡ ಹಬ್ಬಗಳು ಬಂದಿಹವೆಂದು
ಮನೆಯ ಸಾರಿಸಿ, ರಂಗವೋಲೆಯನಿಕ್ಕಿ, ಆಸನವ ಬಲಿದು,
ಪತ್ರೆ ಪುಷ್ಪ ಮೊದಲಾದ ಅನಂತ ಸಾರಂಭವ ಸವರಿಸಿ
ವಿರಕ್ತನ ಕರೆತಂದು ಪೂಜೆಯ ಮಾಡುವುದಕ್ಕಿಂತಲೂ
ಹೊರೆಯಲ್ಲಿ ಚರಿಸಾಡುವ ಕಾಳ ಶುನಕನ ತಂದು
ಆ ಗದ್ದುಗೆಯಲ್ಲಿ ಪೂಜೆ ಮಾಡುವುದು ಮಹಾ ಲೇಸಯ್ಯಾ.
ಅದೇನು ಕಾರಣವೆಂದರೆ,
ಆಣವಮಲ ಮಾಯಾಮಲ ಕಾರ್ಮಿಕಮಲಕ್ಕೆ ಹೊರತೆಂದು,
ಅಷ್ಟಮದ ವಿರಹಿತನೆಂದು, ಷಡ್ಗುಣವ ಸಂಹರಿಸಿದವನೆಂದು,
ಶಾಸ್ತ್ರದಲ್ಲಿ ಸಂಪನ್ನನೆಂದು,
ಕ್ರಿಯೆಯಲ್ಲಿ ಲಿಂಗಾಯತನೆಂದು, ನಿರಾಭಾರಿಯೆಂದು,
ಬಾಯಿಲೆ ಬೊಗಳಿ ಲೌಕಿಕದಲ್ಲಿ ಮಠವ ಮಾಡಿಕೊಂಡು,
ಮಾನ್ಯವ ಸಂಪಾದಿಸಿಕೊಂಡು,
ಅಶನಕ್ಕಾಶ್ರಯನಾಗಿ, ವ್ಯಸನಕ್ಕೆ ಹರಿದಾಡಿ, ವಿಷಯದಲ್ಲಿ ಕೂಡಿ,
ಸರ್ವವು ಎನಗೆ ಬೇಕೆಂದು ತಮೋಗುಣದಿಂದ ದ್ರವ್ಯವ ಕೂಡಿಸಿ
ವಿರತಿಸ್ಥಲವು ಹೆಚ್ಚೆಂದು ಕಾವಿಯ ಹೊದೆದು, ಕಾಪೀನವ ಕಟ್ಟಿ,
ವೇಷ ಡಂಭಕದಿಂದ ತಿರುಗುವ ಭ್ರಷ್ಟರ ಮುಖವ ನೋಡಲಾಗದು.
ಇಂತಪ್ಪ ವಿರಕ್ತರ ಪೂಜೆಯ ಮಾಡುವುದಕ್ಕಿಂತಲೂ
ಕರೇನಾಯಿಯ ತಂದು ಪೂಜೆಯ ಮಾಡುವುದು
ಮಹ ಲೇಸು ಕಂಡಯ್ಯ.
ಪಂಚಾಮೃತವ ಮುಂದಿಟ್ಟರೆ ಕಣ್ಣು ನೋಡುವುದು,
ದ್ರವ್ಯ ಮುಂದಿಟ್ಟರೆ ಕೈಯು ಮುಟ್ಟುವುದು,
ಎಂದು ಪೇಳುವ ವಿರಕ್ತರ ನಾಲಗೆಯು
ಆ ನಾಯ ಬಾಲಕ್ಕಿಂತಲು ಕರ ಕಷ್ಟವು.
ಇಂತಹ ವಿರಕ್ತರ ಪೂಜೆಯ ಮಾಡುವಾತನು, ಆ ಜಂಗಮವು
ಉಭಯತರ ಮೂಗು ಸವರಿ ಕತ್ತೆಯನೇರಿಸಿ
ಪಡಿಹಾರಿಕೆಗಳ ಪಾದುಕೆಯಿಂದ ಪಡಪಡ ಹೊಡಿ ಎಂದಾತ
ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.

ಪರಿವಿಡಿ (index)
*
Previous ವಚನ ಸಾಹಿತ್ಯದಲ್ಲಿ ಮಾನವ ಸಮಾನತೆ ವೇದಶಾಸ್ತ್ರ ಪುರಾಣಕ್ಕಿಂತ ಶರಣರ ವಚನ ಶ್ರೇಷ್ಠ Next
cheap jordans|wholesale air max|wholesale jordans|wholesale jewelry|wholesale jerseys