Previous ಲಿಂಗಾಯತ ಧರ್ಮ ಶುದ್ಧ ಸಸ್ಯಾಹಾರಿಗಳ ಧರ್ಮ ಲಿಂಗಸೀಮೇ ಸೀಮೋಲಂಘನವಾದಲ್ಲಿ Next

ಮಾಡಿದ ಕಾರ್ಯದಿಂದ ಜ್ಞಾನ ಸಾಧನೆಯಾಗಬೇಕು..

*

✍ ಶ್ರೀಮತಿ ರುದ್ರಮ್ಮ ಅಮರೇಶ
ಹಾಸಿನಾಳ ಗಂಗಾವತಿ ವಿಶ್ವಲಿಂಗಾಯತ ಸಮಿತಿ.

ಸಿದ್ಧರಾಮೇಶ್ವರ ವಚನ

|| ಓ೦ ಶ್ರೀಗುರು ಬಸವಲಿಂಗಾಯ ನಮಃ ||

ಮಾಡಿದ ಕಾರ್ಯದಿಂದ ಜ್ಞಾನ ಸಾಧನೆಯಾಗಬೇಕು.
ಮಾಡಿದ ಕಾರ್ಯದಿಂದ ಸತ್ಪುರುಷರ ಹರ್ಷ ನಿರ್ಭರವಾಗಬೇಕು.
ಮಾಡಿದ ಕಾರ್ಯದಿಂದ ಪ್ರಮಥರು ಅಹುದಹುದೆನಬೇಕು.
ಅದು ಕಾರಣ, ಮಾಡಿಸಿ ಜ್ಞಾನಪ್ರಾಪ್ತಿಯಾಗಲಿಲ್ಲ;
ಮಾಡಿಸಿ ಪ್ರಮಥರ ಮನೋಲ್ಹಾದವಾಗಲಿಲ್ಲ;
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಸಾಕ್ಷತ್ಕಾರವಾಗಲಿಲ್ಲ;
ಕೇಳಾ ಕೇದಾರಯ್ಯಾ. - ಸಿದ್ಧರಾಮೇಶ್ವರ

ಭಾವಾರ್ಥ: ನಮ್ಮ ಶರಣರು ಅವರು ಯಾವುದೆ ಸತ್ಕಾರ್ಯವನ್ನು ಮಾಡಿದರು ಆ ಕಾರ್ಯಕ್ಕೆ ತಕ್ಕ ಫಲ ಸಿಗುತ್ತಿತ್ತು. ಇದಕ್ಕೆ ಕಾರಣ ಅವರಲ್ಲಿರುವ ಜ್ಞಾನಶಕ್ತಿ, ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿ ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮ ಶರಣರಲ್ಲಿ ಸಾಮಾಜಿಕ ಕಳಕಳಿಯು ಕೂಡ ಅವರಲ್ಲಿ ಮನೆ ಮಾಡಿತ್ತು. ಈ ರೀತಿ ನಮ್ಮ ಸಂಕಲ್ಪ ಶಕ್ತಿಯು ಸಹ ನಮಗೆ ಗಟ್ಟಿಯಾಗಿದ್ದಲ್ಲಿ ನಾವು ಮಾಡುವ ಕಾರ್ಯಗಳು ಯಶಸ್ವಿಯಾಗುತ್ತವೆ ಎಂಬುದಕ್ಕೆ ಅಂದಿನ ಹನ್ನೆರಡನೆ ಶತಮಾನದ ನಮ್ಮ ಶರಣರು ಸಾಕ್ಷಿಪ್ರಜ್ಞೆಯಾಗಿ ನಮ್ಮ ಕಣ್ಣೇದುರುಗೆಯೆ ನಿಲ್ಲುತ್ತಾರೆ. ಅಂತಹ ಕಾರ್ಯವನ್ನು ನಮ್ಮ ನಿಜಶರಣರು ಹೇಗೆ ಮಾಡಿದರು ಮತ್ತು ನಮ್ಮಂಥವರು ಹೇಗೆ ಮಾಡಿದರು ಮತ್ತು ಹೇಗೆ ಮಾಡುತ್ತಿದ್ದೇವೆ ಎಂಬ ವ್ಯತ್ಯಾಸವನ್ನ ಶರಣರಾದ ಸಿದ್ಧರಾಮೇಶ್ವರರು ಚೆನ್ನಾಗಿ ಮನದಟ್ಟು ಮಾಡಿಕೊಟ್ಟಿದ್ದಾರೆ ತಮ್ಮ ಈವೊಂದು ವಚನದಲ್ಲಿ.

ಮಾಡಿದ ಕಾರ್ಯದಿಂದ ಜ್ಞಾನ ಸಾಧನೆಯಾಗಬೇಕು.

ಶರಣರು ತಾವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಸಂಪೂರ್ಣ ಅನುಭವ ಪಡೆದು ಮಹಾಜ್ಞಾನಿಗಳಾದರು. ಆವೊಂದು ಆಂತರಿಕ ಜ್ಞಾನವೆ ಅವರನ್ನು ಪರಿಪೂರ್ಣತೆಯಡೆಗೆ ಕರೆದುಕೊಂಡು ಹೋಗಲು ಸಾಧ್ಯ ಮಾಡಿಕೊಟ್ಟಿತು ಹಾಗಾಗಿ ಅವರ ಈ ಸಾಧನೆ ಸದಕಾಲ ಜೀವಂತಿಕೆಯಾಗಿ ಉಳಿಯಿತು. ಈವೊಂದು ಅನುಭವದಿಂದ ಸಿದ್ಧರಾಮೇಶ್ವರರು ನಾವು ಮಾಡುವ ಪ್ರತಿಯೊಂದು ಕೆಲಸದಿಂದ ಅನುಭವ ಸಾಧನೆಯಾಗಬೇಕು ಎನ್ನುತ್ತಾರೆ ಇಲ್ಲಿ.

ಮಾಡಿದ ಕಾರ್ಯದಿಂದ ಸತ್ಪುರುಷರ ಹರ್ಷ ನಿರ್ಭರವಾಗಬೇಕು.

ನಾವು ಮಾಡುವ ಪ್ರತಿಯೊಂದು ಕೆಲಸಗಳು ಸಜ್ಜನರಿಗೆ ಸಂತೋಷ ಆನಂದ ಅಧಿಕವಾದ ರೀತಿಯಲ್ಲಿ ಪೂರ್ಣವಾಗಿ ತುಂಬಿರಬೇಕು ಎನ್ನುತ್ತಾರೆ ಸಿದ್ಧರಾಮೇಶ್ವರರು. ಅಂದರೆ ನಮ್ಮ ಕೆಲಸವನ್ನು ನೋಡಿ ಪ್ರತಿಯೊಬ್ಬರು ಹಿಗ್ಗುವಂತಾಗಬೇಕು ಅವರು ಯಾವುದೇ ಕಾರಣಕ್ಕೂ ಕುಗ್ಗಬಾರದು ಎಂಬ ಎಚ್ಚರಿಕೆಯನ್ನ ನೀಡಿದ್ದಾರೆ ಇಲ್ಲಿ.

ಮಾಡಿದ ಕಾರ್ಯದಿಂದ ಪ್ರಮಥರು ಅಹುದಹುದೆನಬೇಕು.

ನಾವು ಮಾಡುತ್ತಿರುವ ಕೆಲಸಗಳನ್ನು ನೋಡಿ ಪ್ರತಿಯೊಬ್ಬ ಶಿವಶರಣರು ಕೊಂಡಾಡುವಂತೆ ಇರಬೇಕು ಎನ್ನುತ್ತಾರೆ ಸಿದ್ಧರಾಮೇಶ್ವರರು. ಅಂದರೆ ನಾವು ಮಾಡುವ ಸಾಧನೆಯನ್ನ ನೋಡಿ ಎಲ್ಲರು ಮೆಚ್ಚುಗೆಯನ್ನ ವ್ಯಕ್ತಪಡಿಸುವಂತೆ ಇರಬೇಕೆಂಬುದು ಸಿದ್ಧರಾಮೇಶ್ವರರ ಕಳಕಳಿಯ ಮಾತಾಗಿದೆ ಇಲ್ಲಿ.

ಅದು ಕಾರಣ, ಮಾಡಿಸಿ ಜ್ಞಾನಪ್ರಾಪ್ತಿಯಾಗಲಿಲ್ಲ; ಮಾಡಿಸಿ ಪ್ರಮಥರ ಮನೋಲ್ಹಾದವಾಗಲಿಲ್ಲ; ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಸಾಕ್ಷತ್ಕಾರವಾಗಲಿಲ್ಲ; ಕೇಳಾ ಕೇದಾರಯ್ಯಾ.

ಸಿದ್ಧರಾಮೇಶ್ವರರು ತಮ್ಮ ವಚನದ ಕೊನೆಯ ಸಾಲುಗಳಲ್ಲಿ ನೇರವಾಗಿ ತಮ್ಮ ಅಭಿಪ್ರಾಯವನ್ನ ಇಲ್ಲಿ ವ್ಯಕ್ತಪಡಿಸಿದ್ದಾರೆ. ನಾವು ಒಂದು ವೇಳ ಕೆಲಸ ಮಾಡಿದರು ಸಹ ಅನುಭವ ಆಗದಿದ್ದರೆ, ಮಾಡುವ ಕೆಲಸವನ್ನು ನೋಡಿ ಶರಣರಿಗೆ ಮನಸ್ಸು ಉಲ್ಲಾಸ ಸಂತೋಷ ಆಗದಿದ್ದರೆ, ಕಪಿಲಸಿದ್ಧಮಲ್ಲಿನಾಥಯ್ಯನ ಸಾಕ್ಷತ್ಕಾರ ಆಗುವುದಿಲ್ಲ ಅಂದರೆ ನಮ್ಮ ಸ್ವಂತ ಅರಿವು ನಮಗೆಯೆ ಪ್ರಾಪ್ತಿಯಾಗಲಿಲ್ಲ ಕೇಳು ಕೇದಾರಯ್ಯಾ ಎಂದು ಕೇದಾರಯ್ಯಾ ಶರಣರಿಗೆ ಹೇಳುವ ಮುಖಾಂತರ ಸಾರ್ವತ್ರಿಕವಾಗಿಯೂ ಹೇಳಿದ್ದಾರೆ ಸಿದ್ಧರಾಮೇಶ್ವರರು. ಒಟ್ಟಾರೆ ಈ ವಚನವು ನಾವು ಕೆಲಸ ಮಾಡುತ್ತಿದ್ದರೆ ಅದು ಬೂಟಾಟಿಕೆಯಿಂದ, ಸ್ವಾರ್ಥದಿಂದ, ತಮ್ಮ ವೈಯಕ್ತಿಕ ಪ್ರತಿಷ್ಠೆಗೋಸ್ಕರ, ಪ್ರಚಾರಕ್ಕಾಗಿ ಕೂಡಿರಬಾರದು ಎಂಬುದು ಸಿದ್ಧರಾಮೇಶ್ವರರ ಜಾಗೃತಿಯ ನಡಿಗಳಾಗಿವೆ ನಮಗಿಲ್ಲಿ. ಆದರೆ ನಾವಿಂದು ನಮ್ಮ ಮನಮೆಚ್ಚುವಂತೆ ಮಾಡದೆ ಕೇವಲ ಜನಗಳ ಮನೋರಂಜನೆಗಾಗಿ ಕೆಲಸ ಮಾಡಿದರೆ ಅರಿವು ಸಾಧನೆಯು ಆಗುವುದಿಲ್ಲ, ಬದುಕು ಪರಿಪೂರ್ಣವು ಆಗುವುದಿಲ್ಲ, ನಿಜಶರಣರು ಮೆಚ್ಚುವುದು ಇಲ್ಲ , ನಮ್ಮನ್ನು ನಾವು ಸಾಕ್ಷತ್ಕಾರ ಮಾಡಿಕೊಳ್ಳಲಿಕ್ಕೆ ಆಗುವುದು ಇಲ್ಲ ಇಂಥವೊಂದು ತರಾತುರಿಯಲ್ಲಿ ನಾವೀಗ ಕೆಲಸ ಮಾಡುತ್ತಿದ್ದೇವೆ ಎಂಬುದಾಗಿ ಎಚ್ಚರಿಸುವುದು ಈ ವಚನದ ಮೂಲ ಸಂದೇಶವಾಗಿದೆ.

ಪರಿವಿಡಿ (index)
*
Previous ಲಿಂಗಾಯತ ಧರ್ಮ ಶುದ್ಧ ಸಸ್ಯಾಹಾರಿಗಳ ಧರ್ಮ ಲಿಂಗಸೀಮೇ ಸೀಮೋಲಂಘನವಾದಲ್ಲಿ Next
cheap jordans|wholesale air max|wholesale jordans|wholesale jewelry|wholesale jerseys