Previous ಸ್ತ್ರೀ ಪುರುಷ ಸಮಾನತೆ (Male Female Equality) *ಲಿಂಗದೇವ* ಲಿಂಗಾಯತರ ದೇವರ ಹೆಸರು. Next

ಕಾಯಕ ಸಿದ್ಧಾಂತ

*

“ಕಾಯಕವೇ ಕೈಲಾಸ” ವೆಂದು ಸಾರಿದ ಬಸವಣ್ಣ

ಕಾಯಕದಲ್ಲಿ ಮೇಲಿಲ್ಲ-ಕೀಳಿಲ್ಲ "ಆವ ಕಾಯಕ ಮಾಡಿದೊಡೆ ಒಂದೇ ಕಾಯಕ" ಎಂದು ಗಂಗಮ್ಮ ಹೇಳಿದಂತೆ ಕಾಯಕದಲ್ಲಿ ಮೇಲು-ಕೀಳಿಲ್ಲ. ಕಾಯಕದ ಮಹತ್ವವನ್ನು ತಿಳಿದುಕೊಂಡ ಶರಣೆ ಕಾಳವ್ವೆಯ ಈ ವಚನ

ಕೃತ್ಯ ಕಾಯವಿಲ್ಲದವರು ಭಕ್ತರಲ್ಲ,
ನಿಂದಿಸಿಕೊಂಬ ಪ್ರಸಾದ ಕುನ್ನಿಯ ಪ್ರಸಾದ
ಅವರು ತ್ರಿವಿಧಕ್ಕೆ ಇಚ್ಚಿಸರು
ಅಲ್ಲಿ ನಿಂದಿಸಿ ಅವರ ಬಿಟ್ಟಿಲ್ಲ,
ಅವರ ಹಿಂದೆ ಕೊಂಡುದು ಅವರ ಮಲ ಮೂತ್ರ
ತೂಬುರದ ಕೊಳ್ಳಿಯಂತೆ ಊರಿವಾತ ಭಕ್ತನೆ ?

ಬಸವಣ್ಣನವರ ಕಾಯಕ ತತ್ವದ ಪ್ರೇರಣೆಯಿಂದ ಶರಣೆಯರು ಅನೇಕ ಕಾಯಕಗಳನ್ನು ಕೈಗೆತ್ತಿಕೊಂಡರು, ಉದಾಹರಣೆಗೆ: ಲಕ್ಕಮ್ಮ ಬಿದ್ದ ಅಕ್ಕಿಗಳನ್ನು ಆಯ್ದು ತರುವ, ಮೋಳಿಗೆ ಮಹಾದೇವಿ ಕಟ್ಟಿಗೆ ಹೊತ್ತು ತರುವ, ರಾಯಮ್ಮ ಅಮುಗೆ ಕಾಯಕ, ರೇಮವ್ವೆ ಕದಿರಿನಿಂದ ನೂಲು ತೆಗೆಯುವುದು, ನಿಂಬವ್ವೆ ನೀರು ಹೊರುವ ಮೊದಲಾದ ಕಾಯಕಗಳನ್ನು ಮಾಡಿ ತಮ್ಮ ಬಾಳನ್ನು ಸಾರ್ಥಕ ಮಾಡಿಕೊಂಡರು, ಕಾಳವ್ವೆ. ಕನ್ನಡಿಕಾಯಕ ರೇವಮ್ಮೆ, ಕೊಟ್ಟಣದ ಸೋಮಮ್ಮ ಇವರೆಲ್ಲ ಕಾಯಕ ಶರಣೆಯರು. ಸ್ತ್ರೀ ಅವಲಂಬಿತಳಲ್ಲ ಅನ್ನುವುದನ್ನು ತೋರಿಸಿ ಕೊಟ್ಟು, ಕಾಯಕ ತತ್ವದ ಮೂಲಕ ಆರ್ಥಿಕ ಸ್ವಾತಂತ್ರ್ಯ ಅನುಭವಿಸಿದರು.

ಖಂಡಿತ ಕಾಯಕದ ವ್ರತಾಂಗಿಯ ಮಾಟದ ಇರವೆಂತೆಂದಡೆ
ಕೃತ್ಯದ ನೇಮದ ಸುಯಿದಾನವ ಅಚ್ಚೊತ್ತಿದಂತೆ ತಂದು
ಒಡೆಯರ ಭಕ್ತರ ತನ್ನ ಮಡದಿ ಮಕ್ಕಳು ಸಹಿತಾಗಿ ಒಡಗೂಡಿ,
ಎಡೆಮಾಡಿ ಗಡಿಗೆ ಭಾಜನದಲ್ಲಿ ಮತ್ತೊಂದೆಡೆಗೆ, ಈಡಿಲ್ಲದಂತೆ,
ಬಿಡುಮುಡಿಯನರಿಯದೆ,
ಮತ್ತೆ ಇರುಳೆಡೆಗೆಂದಿರಿಸದೆ, ಹಗಲೆಡೆಯ ನೆನೆಯದೆ,
ಇಂದಿಗೆ ನಾಳಿಗೆ ಎಂಬ ಸಂದೇಹಮಂ ಬಿಟ್ಟು
ಮುಂದಣ ಕಾಯಕ ಅಂದಂದಿಗೆ ಉಂಟು ಎಂಬುದನರಿತು
ಬಂದುದ ಕೂಡಿಕೊಂಡು ಲಿಂಗಾರ್ಚನೆಯ ಮಾಡಿ
ಸದಾನಂದದಲ್ಲಿಪ್ಪ ಭಕ್ತನಂಗಳ ಮಂಗಳಮಯ ಕೈಲಾಸದ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಬೆಳಗು.

ಭಕ್ತಿ-ಶ್ರದ್ಧೆಯಿಂದ ಕಾಯಕ ಮಾಡಿ ಬಂದ ಆದಾಯವನ್ನು ಸದ್ವಿನಿಯೋಗ ಮಾಡುವ ಪರಿಯನ್ನು ಅಕ್ಕಮ್ಮ ಈ ಮೇಲಿನ ವಚನದಲ್ಲಿ ಹೇಳಿದ್ದಾಳೆ.

ಎಮ್ಮ ತಾಯಿ ನಿಂಬಿಯವ್ವೆ ನೀರನೆರೆದುಂಬಳು,
ಎಮ್ಮಯ್ಯ ಚೆನ್ನಯ್ಯ ರಾಯಕಂಪಣವ ಹೇರುವ.
ಎಮಗೆ ಆರೂ ಇಲ್ಲವೆಂಬಿರಿ,
ಎಮ್ಮಕ್ಕ ಕಂಚಿಯಲ್ಲಿ ಬಾಣಸವ ಮಾಡುವಳು.
ಎಮಗೆ ಆರೂ ಇಲ್ಲವೆಂಬಿರಿ,
ಎಮ್ಮ ಅಜ್ಜರ ಅಜ್ಜರು ಹಡೆದ ಭಕ್ತಿಯ ನಿಮ್ಮ ಕೈಯಲು ಕೊಂಬೆ,
ಕೂಡಲಸಂಗಮದೇವಾ. 1/352 [1]

ಎಂಬ ವಚನದಲ್ಲಿ ಆತ್ಮಗೌರವದ ಕಾಯಕ ಮಹತ್ವವನ್ನು ಗುರು ಬಸವಣ್ಣನವರು ತಿಳಿಸಿದ್ದಾರೆ.

ಕಾಯಕ ಸಿದ್ಧಾಂತದ ರೂವಾರಿ ಆಯ್ದಕ್ಕಿ ಲಕ್ಕಮ್ಮ

ಕಾಯಕ ಸಿದ್ಧಾಂತವನ್ನು ಅಕ್ಷರಶಃ ಬದುಕಿದವಳು ಆಯ್ದಕ್ಕಿ ಲಕ್ಕಮ್ಮ. ಆಯ್ದಕ್ಕಿ ಲಕ್ಕಮ್ಮ ಕಾಯಕ ತತ್ವದಂತೆ ಅಕ್ಕಿ ಆಯ್ದು ತಂದು ಜೀವನ ಸಾಗಿಸುತ್ತಾಳೆ. ಕಾಯಕಕ್ಕೆ ಸಂಬಂಧಿಸಿದಂತೆ ಲಕ್ಕಮ್ಮನು ತನ್ನ ಗಂಡನಿಗೆ ಉಪದೇಶ ನೀಡುವ ಕೆಲಸ ಮಾಡುತ್ತಾಳೆ. ಒಂದು ವಿಧದಲ್ಲಿ ಗಂಡನಿಗೆ ತಾನೇ ‘ಗುರು’ವಾಗುತ್ತಾಳೆ. ಮಾರಯ್ಯ ಕಾಯಕವನ್ನು ಮರೆತಾಗ ಲಕ್ಕಮ್ಮನು ಎಚ್ಚರಿಕೆ ನೀಡಿ ಕಾಯಕಕ್ಕೆ ಕಳುಹಿಸುತ್ತಾಳೆ.

‘ಕಾಯಕ ನಿಂದಿತ್ತು ಹೋಗಯ್ಯ ಎನ್ನಾಳ್ದನೆ
ಭಾವಶುದ್ಧವಾಗಿ ಮಹಾಶರಣರ ತಿಪ್ಪೆಯ ತಪ್ಪಲ ಅಕ್ಕಿಯ ತಂದು
ನಿಶ್ಚೈಸಿ ಮಾಡಬೇಕು ಮಾರಯ್ಯ ಪ್ರಿಯ ಅಮಲೇಶ್ವರ ಲಿಂಗಕ್ಕೆ
ಬೇಗ ಹೋಗು ಮಾರಯ್ಯ’.

ಈ ವಚನದಲ್ಲಿ ಲಕ್ಕಮ್ಮನು ಕಾಯಕಕ್ಕೆ ‘ಹೋಗು’ ಎಂಬುದನ್ನು ಒತ್ತಿ ಹೇಳುತ್ತಾಳೆ. ಇನ್ನೊಂದು ವಚನದಲ್ಲಿ ಆಕೆಯು ಕಾಯಕ ಮತ್ತು ಸಂಪಾದನೆಗಳ ನಡುವಿನ ಸಂಬಂಧದ ಬಗ್ಗೆ ಮಾತನಾಡುತ್ತಾಳೆ. ಕಾಯಕದಿಂದ ದ್ರವ್ಯದ ಸಂಪಾದನೆಯಾಗುತ್ತದೆ. ಆದ್ದರಿಂದ ಕಾಯಕದಲ್ಲಿ ನಿರತರಾದ ಶರಣ-ಶರಣೆಯರಿಗೆ ಬಡತನ ಸಾಧ್ಯವಿಲ್ಲ ಎಂಬ ಸೂಕ್ಷ್ಮವನ್ನು ಅವಳು ಹೇಳುತ್ತಿದ್ದಾಳೆ.

‘ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತ ಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯ ಪ್ರಿಯ ಅಮಲೇಶ್ವರ ಲಿಂಗದ ಸೇವೆಯುಳ್ಳನ್ನಕ್ಕರ.’

ಲಕ್ಕಮ್ಮನು ‘ಕಾಯಕಯುಕ್ತ ಭಕ್ತಿ’ಯ ಸಿದ್ಧಾಂತದ ಬಗ್ಗೆ ಮಾತನಾಡುತ್ತಿದ್ದಾಳೆ. ಭಕ್ತಿ ಯಿಲ್ಲದ ಕಾಯಕ ಮತ್ತು ಕಾಯಕವಿಲ್ಲದ ಭಕ್ತಿ ಅವಳಿಗೆ ಅರ್ಥಹೀನ. ಕಾಯಕದಿಂದ ಮಾತ್ರವೇ ಭಕ್ತಿಗೆ ಶಕ್ತಿ ಪ್ರಾಪ್ತವಾಗುತ್ತದೆ. ಕಾಯಕವಿಲ್ಲದವನ ಭಕ್ತಿ ವ್ಯರ್ಥವೆಂಬ ಮಾತನ್ನು ಲಕ್ಕಮ್ಮ ಆಡುತ್ತಾಳೆ. ವಚನ ಸಂಸ್ಕೃತಿಯು ಚಿತ್ತಶುದ್ಧ ಕಾಯಕದ ಬಗ್ಗೆ ಮಾತನಾಡುತ್ತದೆ. ಅವಳ ಕೆಳಗಿನ ವಚನವು ಇದಕ್ಕೆ ಸಾಕ್ಷಿಯಾಗಿದೆ.

‘ಪೂಜೆಯುಳ್ಳನ್ನಕ್ಕ ಪುಣ್ಯದ ಗೊತ್ತು ಕಾಣ ಬಂದಿತ್ತು
ಮಾಟವುಳ್ಳನ್ನಕ್ಕ ಮಹಾ ಪ್ರಮಥರ ಭಾಷೆ ದೊರೆಕೊಂಡಿತ್ತು
ಮಾಟವಿಲ್ಲದವನ ಭಕ್ತಿ ಹಾಳೂರ ವಂಕಕ್ಕೆ ಕೋಲ ಹಿಡಿದಂತಾಯಿತ್ತು
ಮಾಡುವಲ್ಲಿ ಉಭಯವಳಿದು ಮಾಡಬಲ್ಲಡೆ
ಮಾರಯ್ಯ ಪ್ರಿಯ ಅಮಲೇಶ್ವರ ಲಿಂಗವ ಕೂಡುವ ಕೂಟ.’

ಹೀಗೆ ಆಯ್ದಕ್ಕಿ ಲಕ್ಕಮ್ಮನು ಕಾಯಕದ ಮಹತ್ವವನ್ನು ಅದರ ಸಿದ್ಧಾಂತವನ್ನು ಇಲ್ಲಿ ಪ್ರತಿಪಾದಿಸಿದ್ದಾಳೆ. ಲಕ್ಕಮ್ಮನ ಪತಿ ಮಾರಯ್ಯ ಪ್ರತಿ ದಿನ ತರುವುದಕ್ಕಿಂತ ಹೆಚ್ಚು ಅಕ್ಕಿ ತಂದಾಗ ’ನಮಗೆ ಎಂದಿನಂದವೆ ಸಾಕು ಮತ್ತೆ ಕೊಂಡು ಹೋಗಿ ಅಲ್ಲಿಯೇ ಸುರಿ’ ಎಂದು ಪತಿಗೆ ಹೇಳುತ್ತಾಳೆ. ಈ ತತ್ವದ ಹಿನ್ನೆಲೆ ಅಸಂಗ್ರಹ. ಅಂದಿನ ಕಾಯಕ ಅಂದಿಗೆ ಬೇಕಾದಷ್ಟು ಅದರಲ್ಲಿ ಕೆಲಭಾಗ ಗುರು-ಲಿಂಗ-ಜಂಗಮಕ್ಕೆ ವಿನಿಯೋಗವಾಗಬೇಕು ಅವಾಗಲೆ ಅದು ಪರಿಪೂರ್ಣ ಕಾಯಕ-ದಾಸೋಹ ಸಿದ್ಧಾಂತ.

[1] ಈ ತರಹದ ಸಂಖ್ಯೆಯ ವಿವರ: ಸವಸ-1/352 :- ಸಮಗ್ರ ವಚನ ಸಂಪುಟ-1, ವಚನ ಸಂಖ್ಯೆ-352 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previous ಸ್ತ್ರೀ ಪುರುಷ ಸಮಾನತೆ (Male Female Equality) *ಲಿಂಗದೇವ* ಲಿಂಗಾಯತರ ದೇವರ ಹೆಸರು. Next
cheap jordans|wholesale air max|wholesale jordans|wholesale jewelry|wholesale jerseys