Previous ಲಿಂಗದೀಕ್ಷೆಯಾದ ನಂತರ ಪಂಚಸೂತಕವಿರುವುದಿಲ್ಲ ಸ್ವರ್ಗ- ಕೈಲಾಸಕ್ಕೆ ಸಂಬಂಧಿಸಿದ ನಂಬಿಕೆಗಳು Next

ಮಾರಿ, ಮಸಣಿ ಮುಂತಾದ ಕ್ಷುದ್ರ ದೈವಗಳಿಲ್ಲ

*

ಶರಣರು ದೈವ ಒಂದೇ ಎಂದು ಸಾರಿ, ಕ್ಷುದ್ರ ದೈವಾರಾಧನೆಯನ್ನು ಖಂಡಿಸಿದರು.ಆಗಳೂ ಲೋಗರ ಮನೆಯ ಬಾಗಿಲ
ಕಾಯ್ದುಕೊಂಡಿಪ್ಪವು ಕೆಲವು ದೈವಂಗಳು,
ಹೋಗೆಂದಡೆ ಹೋಗವು,
ನಾಯಿಗಿಂದ ಕರಕಷ್ಟ ಕೆಲವು ದೈವಂಗಳು.
ಲೋಗರ ಬೇಡಿಕೊಂಡುಂಬ ದೈವಂಗಳು.
ತಾವೇನ ಕೊಡುವವು ಕೂಡಲಸಂಗಮದೇವಾ? - ೧/೫೫೪[1]

ಗಾಡಿಗ ಡಿಂಬುಗಂಗೆ
ಚಿಕ್ಕುಮುಟ್ಟಿಗೆ, ಹಸುರಂಬಲಿಮುಟ್ಟಿಗೆ, ಹುರಿಬುತ್ತಿಯ ಬೇಡಿ,
ಮನುಷ್ಯರ ಪಿಡಿದು ಪೀಡಿಸಿ, ತಮ್ಮ ಬಸುರ್ಗೆ ಕಾಣದೆ,
ಈಡಾಡಿದ ಕೊಳಂಬಲಿಯನಾಯ್ದು ಕುರುಕುವ
ಹೇಸಿ ದೈವಂಗಳ ಬೇಡಿ ಬೇಡಿ ನಿರರ್ಥ ಕೆಡಬೇಡ, ಎಲವೋ,
ಕೂಡಲಸಂಗಮದೇವರ ನೆರೆನಂಬುವುದೆಲವೂ - ೧/೫೫೫[1]

ಡಿಂಬು = (ಸಂ) ೧) ದೇಹ, ಶರೀರ ೨) ದಿಬ್ಬ, ದಿಣ್ಣೆ ೩) ದೀಪವನ್ನಿಡುವ ಸಣ್ಣ ಪೀಠ, ದೀಪದ ಆಧಾರ
ಮುಟ್ಟಿಗೆ = ಹೆಸರುಪದ (ದೇ)೧) ಮುಚ್ಚಿದ ಅಂಗೈ, ಮುಷ್ಟಿ ೨) ಯಾವುದಾದರೂ ವಸ್ತುವೊಂದನ್ನು ಚಿವುಟಿ ಹಿಡಿಯುವ ಇಕ್ಕುಳದಂತಹ ಸಾಧನ ೩) ದಿಕ್ಕುಗಳಿಗೆ ಎಸೆದು ಚೆಲ್ಲುವ ಬಲಿ ೪) ಸೌದೆ, ಕಟ್ಟಿಗೆ ೫) ಚಿತೆ ೬) ದೊಡ್ಡಪತ್ರೆ ಗಿಡ
ಈಡಾಡಿದ = ಕಿತ್ತು, ಒಗೆ, ಚೆಲ್ಲು
ನೆರೆ = (ದೇ) ಪೂರ್ತಿಯಾಗಿ, ಪೂರ್ಣವಾಗಿ

ಹಾಳು ಮೊರಡಿಗಳಲ್ಲಿ ಊರ ದಾರಿಗಳಲ್ಲಿ
ಕೆರೆ ಬಾವಿ ಹೂಗಿಡ ಮರಂಗಳಲ್ಲಿ
ಗ್ರಾಮ ಮಧ್ಯಂಗಳಲ್ಲಿ ಜಲಪಥ ಪಟ್ಟಣ ಪ್ರವೇಶದಲ್ಲಿ
ಹಿರಿಯಾಲದ ಮರದಲ್ಲಿ ಮನೆಯ ಮಾಡಿ,
ಕರೆವೆಮ್ಮೆಯ ಹಸುಗೂಸು ಬಸುರಿ ಬಾಣಂತಿ
ಕುಮಾರಿ ಕೊಡಗೂಸು ಎಂಬವರ ಹಿಡಿದುಂಬ ತಿರಿದುಂಬ
ಮಾರಯ್ಯ ಬೀರಯ್ಯ ಕೇಚರಗಾವಿಲ ಅಂತರ ಬೆಂತರ
ಕಾಳಯ್ಯ ಮಾರಯ್ಯ ಮಾಳಯ್ಯ ಕೇತಯ್ಯಗಳೆಂಬ ನೂರು ಮಡಕೆಗೆ
ನಮ್ಮ ಕೂಡಲಸಂಗಮದೇವ ಶರಣೆಂಬುದೊಂದೆ ದಡಿ ಸಾಲದೆ? - ೧/೫೫೬[1]

ದಿನ ನಿತ್ಯ ಬಳಸುವ ವಸ್ತುಗಳು ದೇವರಲ್ಲ

ಮಡಿಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ,
ಹಣಿಗೆ ದೈವ, ಬಿಲ್ಲನಾರಿ ದೈವ, ಕಾಣಿರೋ!
ಕೊಳಗ ದೈವ, ಗಿಣ್ಣಿಲು ದೈವ, ಕಾಣಿರೋ!
ದೈವ ದೈವವೆಂದು ಕಾಲಿಡಲಿಂಬಿಲ್ಲ,
ದೈವನೊಬ್ಬನೆ ಕೂಡಲಸಂಗಮದೇವ - ೧/೫೬೨[1]

ಮೊರಡಿ = ಹೆಸರುಪದ (ದೇ) ೧ ದಿಣ್ಣೆ, ಗುಡ್ಡ, ಕಲ್ಲಿನ ರಾಶಿ, mound, hillock, hill.

ಅರಗು ತಿಂದು ಕರಗುವ ದೈವವನೆಂತು ಸರಿಯೆಂಬೆನಯ್ಯಾ
ಉರಿಯ ಕಂಡಡೆ ಮುರುಟುವ ದೈವವನೆಂತು ಸರಿಯೆಂಬೆನಯ್ಯಾ
ಅವಸರ ಬಂದಡೆ ಮಾರುವ ದೈವವನೆಂತು ಸರಿಯೆಂಬೆನಯ್ಯಾ
ಅಂಜಿಕೆಯಾದಡೆ ಹೂಳುವ ದೈವವನೆಂತು ಸರಿಯೆಂಬೆನಯ್ಯಾ
ಸಹಜಭಾವ ನಿಜೈಕ್ಯ ಕೂಡಲಸಂಗಮದೇವನೊಬ್ಬನೆ ದೇವ.

ಅರಗು = Wax, ಒಂದು ಬಗೆಯ ಕೆಂಪುದ್ರವ್ಯ,
ಮುರುಟು = Shrink, ಸುರುಟಿಕೊಳ್ಳು ೨) ಸೊಟ್ಟಾಗು, ವಕ್ರಗೊಳ್ಳು ೩) ಕುಗ್ಗು, ಮುದುಡು

ಮಾರಿಕವ್ವೆಯ ನೋಂತು ಕೊರಳಲ್ಲಿ ಕಟ್ಟಿಕೊಂಬರು,
ಸಾಲಬಟ್ಟಡೆ ಮಾರಿಕೊಂಬರಯ್ಯಾ,
ಸಾಲಬಟ್ಟಡೆ ಅವರನೊತ್ತೆಯಿಟ್ಟು ಕೊಂಡುಂಬರಯ್ಯಾ.
ಮಾರುವೋಗನೊತ್ತೆಯೋಗ
ನಮ್ಮ ಕೂಡಲಸಂಗಮದೇವ. 1/558 [1]

ಉಣಲುಡಲು ಮಾರಿಯಲ್ಲದೆ, ಕೊಲಲು ಕಾಯಲು ಮಾರಿಯೆ
ತನ್ನ ಮಗನ ಜವನೊಯ್ದಲ್ಲಿ ಅಂದೆತ್ತ ಹೋದಳು ಮಾರಿಕವ್ವೆ
ಈವಡೆ ಕಾವಡೆ ನಮ್ಮ ಕೂಡಲಸಂಗಯ್ಯನಲ್ಲದೆ
ಮತ್ತೊಂದು ದೈವವಿಲ್ಲ. 1/559 [1]

ಮೊರನ ಗೋಟಿಲಿ ಬಪ್ಪ ಕಿರುಕುಳದೈವಕ್ಕೆ
ಕುರಿಯನಿಕ್ಕಿಹೆವೆಂದು ನಲಿನಲಿದಾಡುವರು,
ಕುರಿ ಸತ್ತು ಕಾವುದೆ ಹರ ಮುಳಿದವರ
ಕುರಿ ಬೇಡ ಮರಿ ಬೇಡ,
ಬರಿಯ ಪತ್ರೆಯ ತಂದು ಮರೆಯದೆ ಪೂಜಿಸು
ನಮ್ಮ ಕೂಡಲಸಂಗಮದೇವನ. 1/560 [1]

ಬನ್ನಿರೇ ಅಕ್ಕಗಳು, ಹೋಗಿರೇ ಆಲದ ಮರಕ್ಕೆ.
ಕಚ್ಚುವುದೇ ನಿಮ್ಮ, ಚಿಪ್ಪಿನ ಹಲ್ಲುಗಳು.
ಬೆಚ್ಚಿಸುವುವೇ ನಿಮ್ಮ, ಬಚ್ಚಣಿಯ ರೂಹುಗಳು.
ನಮ್ಮ ಕೂಡಲಸಂಗಮದೇವನಲ್ಲದೆ
ಪರದೈವಂಗಳು ಮನಕ್ಕೆ ಬಂದವೆ
ಬಿಕ್ಕನೆ ಬಿರಿವ ದೈವಂಗಳು. 1/561 [1]

ವೀರಭದ್ರ ಬಸವಣ್ಣ ಮಲ್ಲಿಕಾರ್ಜುನರೆಂಬ ದೈವಂಗಳಿಗೆ
ನಮ್ಮ ಕುಲದೈವಗಳೆಂದು ಹೇಳುವವರಿಗೆ
ಗುರುವಿಲ್ಲ ಲಿಂಗವಿಲ್ಲ ಪಾದೋದಕ ಪ್ರಸಾದವಿಲ್ಲ
ಕೂಡಲಚೆನ್ನಸಂಗಮದೇವಾ - ೩/೧೫೬೨ [1]

[1] ಈ ತರಹದ ಸಂಖ್ಯೆಯ ವಿವರ: ಸವಸ-1/554 :- ಸಮಗ್ರ ವಚನ ಸಂಪುಟ -1, ವಚನ ಸಂಖ್ಯೆ-554 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previous ಲಿಂಗದೀಕ್ಷೆಯಾದ ನಂತರ ಪಂಚಸೂತಕವಿರುವುದಿಲ್ಲ ಸ್ವರ್ಗ- ಕೈಲಾಸಕ್ಕೆ ಸಂಬಂಧಿಸಿದ ನಂಬಿಕೆಗಳು Next
cheap jordans|wholesale air max|wholesale jordans|wholesale jewelry|wholesale jerseys