Previous ವೇದ,ಶಾಸ್ತ್ರ, ಶ್ರುತಿ, ಆಗಮ ಇತ್ಯಾದಿಗಳ ಬಗ್ಗೆ ಅಗ್ನಿ (ಕಿಚ್ಚು), ಜಲ, ನೆಲ, ಕಲ್ಲು ,ಆಕಾಶ ವಾಯು ದೇವರಲ್ಲ Next

ವಚನಸಾಹಿತ್ಯದಲ್ಲಿ ಮೂಢನಂಬಿಕೆಗಳ ನಿವಾರಣೆ

*

ಶರಣರು ಮೂಢನಂಬಿಕೆಗಳಿಗೆ ಆಸ್ಪದ ಕೊಟ್ಟವರಲ್ಲ.

ಶರಣರು ಮೂಢನಂಬಿಕೆಗಳಿಗೆ ಆಸ್ಪದ ಕೊಟ್ಟವರಲ್ಲ. ಆದರೆ ಸಮಾಜದಲ್ಲಿ ಮೂಢನಂಬಿಕೆಗಳು ಮೊದಲಿನಿಂದಲೂ ಬೇರು ಬಿಟ್ಟಿವೆ. ಆದಿ ಮಾನವರನ್ನು ಮೊದಲು ಮಾಡಿ ಇಂದಿನ ಆಧುನಿಕ ಯುಗದ ಮಾನವರ ವರೆಗೆ ಬೆಳೆದು ಬಂದ ಸಮಾಜದಲ್ಲಿ ಈ ಮೂಢನಂಬಿಕೆಗಳು ಸಾಗಿಯೇ ಬಂದಿವೆ. ಇಂದಿನ ವಿಜ್ಞಾನ ಯುಗದಲ್ಲಿ ಎಷ್ಟೋ ಜನರು ಮುಹೂರ್ತ ನೋಡಿಯೇ ತಮ್ಮ ಕಾರ್ಯಗಳಲ್ಲಿ ತೊಡಗುತ್ತಾರೆ. ಬೆಕ್ಕು ಎದುರು ಅಡ್ಡ ಹಾಯ್ದು ಹೋದರೆ ಕೆಲವರಿಗೆ ತಾವು ಹಮ್ಮಿಕೊಂಡ ಕಾರ್ಯ ಸಾಧಿಸುವದಿಲ್ಲವೆಂಬ ನಂಬಿಕೆ. ಹಲ್ಲಿ ಲೊಚಗುಟ್ಟಿದರೆ ಕೆಲವೊಮ್ಮೆ ಶುಭ, ಕೆಲವೊಮ್ಮೆ ಅಶುಭವೆಂದು ಜನ ಭಾವಿಸುವರು. ಕೆಲವರಿಗೆ ಗರುಡ ಶಿಲೆಯ ಉಂಗುರ ಮಂಗಲಕರ ಮತ್ತು ಕೆಲವರಿಗೆ ನೀಲ, ಪುಷ್ಪರಾಗಗಳ ಉಂಗುರಗಳು ಮಂಗಲಕರ. ಮುಂಜಾನೆ ಹೊರಗಡೆ ಹೊರಟಾಗ ಎದುರಿಗೆ ಹಜಾಮನೊಬ್ಬ ಭೇಟಿಯಾದರೆ ಅದು ಅಶುಭ. ಆದರೆ ಅದೇ ಹಡಿಗ ತನ್ನ ಹಸಿಬಿನೊಂದಿಗೆ ಭೇಟಿಯಾದರೆ ಶುಭವೆಂದು ಜನ ಭಾವಿಸಿದ್ದಾರೆ.

ಈ ನಂಬಿಕೆಗಳು ಪ್ರಾದೇಶಿಕವಾಗಿ ಬೇರೆ ಬೇರೆಯಾಗಿವೆ. ವಿಜಾಪೂರ ಜಿಲ್ಲೆಯ ಕೆಲಭಾಗದಲ್ಲಿ ಟೀಂವಕ್ಕಿ ಒದರಿದರೆ ಅಶುಭವೆಂದೂ ಯಾರ ಮನೆ ಹತ್ತಿರ ಒದರುವುದೋ ಆ ಮನೆಯಲ್ಲಿ ಯಾರಾದರೂ ಮರಣ ಹೊಂದುವರೆಂಬ ನಂಬಿಕೆ ಇದೆ. ಆದರೆ ಕೋಲಾರದ ಭಾಗದಲ್ಲಿ ಟೀಂವಕ್ಕಿ ಒದರಿದರೆ ಶುಭವೆಂಬ ನಂಬಿಕೆ ಇದೆ. ಒಂದೇ ಹಕ್ಕಿ ಒದರಿದರೆ ಒಂದು ಕಡೆ ಶುಭ ; ಇನ್ನೊಂದು ಕಡೆ ಅಶುಭ ಎನ್ನುವುದನ್ನು ಕಂಡಾಗ ಜನ ಮೂಢನಂಬಿಕೆಗಳನ್ನು ನಂಬುವುದೇ ಮೂರ್ಖತನ ಎಂಬ ಭಾವನೆ ಬೆಳೆಯದೇ ಇರಲಾರದು. ಆದಾಗ್ಯೂ ಅನೇಕ ಜನ ಈ ಮೂಢನಂಬಿಕೆಗಳಿಂದ ಹೊರತಾಗಿಲ್ಲ. ಇದು ಇಂದಿನ ಕಾಲದ ಸ್ಥಿತಿ. ಇನ್ನು ಬಸವಾದಿ ಶರಣರು ಇದ್ದ ಕಾಲದ ಸ್ಥಿತಿಯು ಹೇಗಿರಬೇಕು ಎಂದು ವಿಚಾರ ಮಾಡಿದರೆ, ಇಂದಿನಕ್ಕಿಂತ ಅಂದು ಕೆಟ್ಟ ಪರಿಸ್ಥಿತಿ ಇತ್ತು ಎಂಬುದೇ ಉತ್ತರವಾಗುತ್ತದೆ.

ಈ ಮೂಢನಂಬಿಕೆಗಳು ಮೂಢರಿಂದ ಆಚರಣೆಯಲ್ಲಿ ಬಂದವು. ಈ ನಂಬಿಕೆಗಳು ಜನರ ಅಜ್ಞಾನದಿಂದ ಹಾಗೂ ಅಸಹಾಯಕ ಸ್ಥಿತಿಯಿಂದ ಬಳಕೆಯಲ್ಲಿ ಬಂದಿರಬೇಕೆನಿಸುತ್ತದೆ. ಯಾಕೆಂದರೆ ಮನುಷ್ಯ ತನ್ನ ಶಕ್ತಿಗಿಂತ ಮಿಗಿಲಾದ ಶಕ್ತಿಗೆ ಅಂಜುತ್ತಾನೆ. ಈ ಭಯವು ಭಕ್ತಿಗೆ, ಮೂಢನಂಬಿಕೆಗೆ ಕಾರಣವಾಗುತ್ತದೆ. ಆ ಭಕ್ತಿಯ ಆವೇಶದಲ್ಲಿ ಏನು ಆರಾಧಿಸಬೇಕು ; ಏನನ್ನು ನಂಬಬೇಕು ಎಂಬುದು ಮನಷ್ಯನಿಗೆ ಸರಿಯಾಗಿ ಹೊಳೆಯಲಾರದು. ಹೀಗಾಗಿಯೇ ಹಾವು ಪೂಜಿಸುವುದು, ಹೊಳೆ ಪೂಜಿಸುವುದು ಬೆಳೆದು ಬಂದಿರಬೇಕು. ಅರಿಯದ ಆಚರಣೆಯೇ ಮೂಢನಂಬಿಕೆ. ಕೆಲವೊಮ್ಮೆ ಅಸಹಾಯಕ ಸ್ಥಿತಿಯಲ್ಲಿದ್ದಾಗ ಮನುಷ್ಯ ಇನ್ನೊಬ್ಬರ ಸಲಹೆಯನ್ನು ಕೇಳುತ್ತಾನೆ. ಅವರು ಯಾವುದಾದರೂ ಮಾರ್ಗವನ್ನು, ಉಪಾಯವನ್ನು ಹೇಳಿದರೆ ತಕ್ಷಣಕ್ಕೆ ಅದನ್ನು ನಂಬಿ ಬಿಡುವ ಪ್ರವೃತ್ತಿ ಮನುಷ್ಯನಲ್ಲಿ ಸಹಜವಾಗಿಯೇ ಇದೆ. ಹಾಗಾಗಿಯೇ ಮೂಢನಂಬಿಕೆಗಳು ಬೆಳೆದು ಬರುತ್ತವೆ.

ಒಟ್ಟಿನಲ್ಲಿ ಮೂಢನಂಬಿಕೆಗಳು ಜನರ ಅಸಹಾಯಕತೆಯಿಂದ ಹಾಗೂ ಅಜ್ಞಾನದಿಂದ ಹುಟ್ಟಿಕೊಂಡಿರುತ್ತವೆ. ಅಂಧ ಶ್ರದ್ಧೆಯೆಂದರೆ ಈ ಜಗತ್ತು ಮತ್ತು ಮಾನವನ ಜೀವಿತಗಳಿಗೆ ಸಂಬಂಧಿಸಿದ, ಕಾರಣವನ್ನು ನೀಡಲು ಸಾಧ್ಯವಾಗದ ಮತ್ತು ಮಾನವನ ಜೀವಿತಗಳಿಗೆ ಸಂಬಂಧಿಸಿದ ಕಾರಣವನ್ನು ನೀಡಲು ಸಾಧ್ಯವಾಗದ ವಿಚಾರವಾಗಿದೆ. ‘ಒಬ್ಬ ವ್ಯಕ್ತಿಗೋ ಅಥವಾ ಒಂದು ಜನಾಂಗಕ್ಕೋ ಇರುವ ವಿಶಿಷ್ಟವಾದ ನಂಬಿಕೆಗಳು, ಅಭ್ಯಾಸಗಳು, ಕಲ್ಪನೆಗಳು ಮುಂತಾದವುಗಳನ್ನು ಅಂಧಃಶ್ರದ್ಧೆಗಳು ಎಂದು ಕರೆಯಬಹುದು.[3]

*

ಶುಭ ಕಾರ್ಯಕ್ಕೆಂದು ಹೊರಟಾಗ ಎದುರಾಗುವ ವಸ್ತುಗಳನ್ನು ಈಗಿನಂತೆಯೇ ವಚನ ಕಾಲದಲ್ಲಿಯೂ ಶುಭಾಶುಭ ಸೂಚಕವೆಂದು ಜನರು ನಂಬುತ್ತಿದ್ದರು. ಅಂಗೈ ನವೆಯಾಗುವುದು ಶುಭ ಸೂಚನೆಯೆಂದೂ ಗಂಡಸಿನ ಎಡಗಣ್ಣು ಅದರುವದು ಅಶುಭ ಶಕುನವೆಂದೂ ನಂಬಲಾಗುತ್ತಿತ್ತು. [4] ವಚನಕಾರರು ತಮ್ಮ ಕಾಲದಲ್ಲಿದ್ದ ಮೂಢನಂಬಿಕೆಗಳನ್ನು ಖಂಡಿಸಿದರು. ಒಳ್ಳೆ ಕಾರ್ಯ ಮಾಡುವುದೇ ಶುಭ, ಕೆಟ್ಟ ಕೆಲಸ ಮಾಡುವುದೇ ಅಶುಭವೆಂದು ವಚನಕಾರರು ನಂಬಿದ್ದರು.

ಶುಭಕ್ಕೆ ವಿಘ್ನವಲ್ಲದೆ ಅಶುಭಕ್ಕೆ ವಿಘ್ನವೆ ಅಯ್ಯಾ?
ಅಭಿಮಾನಿಗೆ ಅಂಜಿಕೆಯಲ್ಲದೆ ಅಪಮಾನಿಗೆ ಅಂಜಿಕೆಯೆ ಅಯ್ಯಾ?
ಶುಭಾಶುಭ ಶಿವಾರ್ಪಣವೆಂದು ನಂಬು ಮನವೆ,
ಕಪಿಲಸಿದ್ಧಮಲ್ಲೇಂದ್ರನಾಲಯದಲ್ಲಿ. [2]

ಮನುಷ್ಯ ಒಳ್ಳೆಯ ಕಾರ್ಯಗಳನ್ನು ಮಾಡಬೇಕು. ಅಂಥ ಕೆಲಸಕ್ಕೆ ಒಳ್ಳೆಯ ಮಹೂರ್ತ ಇದ್ದೇ ಇರುತ್ತದೆ. ಶುಭವಾಗಲಿ, ಅಶುಭವಾಗಲಿ ಎಲ್ಲವೂ ಪರಮಾತ್ಮನಿಗೆ ಅರ್ಪಿಸಿದಾಗ ಭಯದ ಮಾತೆಲ್ಲಿ ಬರುವುದು ಎಂಬುದಾಗಿ ಶರಣರು ಪರಿಭವಿಸುತ್ತಾರೆ. ಸಿದ್ಧರಾಮನು ಒಳ್ಳೆಯ ಕಾರ್ಯ ಮಾಡುವುದೇ ಶುಭವೆಂದು ಹೇಳಿದ್ದಾನೆ. ಯಾಕೆಂದರೆ ವಚನಕಾರರ ಕಾಲದಲ್ಲಿ ಯಜಮಾನಿಕೆಯುಳ್ಳವರು, ಅಜ್ಞಾನಿಗಳನ್ನು ಇನ್ನಷ್ಟು ಅಜ್ಞಾನದಲ್ಲಿಯೇ ಇಟ್ಟು, ಅವರ ಶ್ರಮದ ಫಲವನ್ನು ಕೆಲವರು ಅನಾಮತ್ತಾಗಿ ಎತ್ತಿ ಹಾಕುತ್ತಿದ್ದರು. ದಾರಿದ್ರ್ಯಕ್ಕೆ ಪೂರ್ವಜನ್ಮದ ಕರ್ಮವೇ ಕಾರಣ ; ದಾರಿದ್ರ್ಯ ನಿವಾರಣೆಗಾಗಿ ಯತ್ನಿಸುವದು ದೇವರಿಚ್ಛೆಗೆ ವಿರೋಧವಾಗಿ ವರ್ತಿಸಿದಂತೆ. ಪೂರ್ವಜನ್ಮದ ಪಾಪದ ಫಲವನ್ನು ಈ ಜನ್ಮದಲ್ಲಿ ಅನುಭವಿಸಬೇಕು. ಜೊತೆಗೆ ಮೇಲಿನವರ ಸೇವೆಯನ್ನು ಪ್ರತಿಫಲಾಪೇಕ್ಷೆಯಿಲ್ಲದೆ ಮನಃಪೂರ್ವಕವಾಗಿ ಮಾಡಿದರೆ ಮುಂದಿನ ಜನ್ಮದಲ್ಲಿ ಒಳ್ಳೆಯದನ್ನು ಕಾಣುವಿರಿ. ಆದುದರಿಂದ ಇದ್ದುದರಲ್ಲಿಯೇ ಬಿದ್ದು ಒದ್ದಾಡಿದರೂ ಸುಖವನ್ನೇ ಕಾಣಬೇಕು ಎಂಬ ಬೋಧನೆ ಸಹಜವಾಗಿತ್ತು.

ಜೊತೆಗೆ ಈ ಕುರುಡು ನಂಬಿಕೆಗಳನ್ನು ಭ್ರಾಮಕ ವಾಡಿಕೆಗಳನ್ನು ಪುರಾಣಗಳು ಅಡಗೂಲಜ್ಜಿ ಕತೆಗಳಲ್ಲಿ ಅನಂತ ದೇವ-ದೇವತೆಗಳ ಮೂಲಕ, ಅಂತ್ರ-ತಂತ್ರಗ-ಮಂತ್ರಗಳಲ್ಲಿ ಶ್ರದ್ಧೆಯನ್ನು ಇನ್ನೂ ಆಳವಾಗಿ ಬೆಳೆಯಿಸಲಾಗುತ್ತಿತ್ತು. ಇವುಗಳ ಜೇಡ-ಜಾಲದಲ್ಲಿ ಸಿಕ್ಕ ಈ ನೊಣಗಳು ಎಂದೆಂದೂ ಇವುಗಳಿಂದ ಬಿಡುಗಡೆಯ ಪಡೆಯದಂತೆ ಮಾಡಿದ್ದರು.[5] ಶರಣರು ಮನುಷ್ಯರನ್ನು ಸಾಮಾಜಿಕ ಅಂಧಶ್ರದ್ಧೆಯ ಅನಿಷ್ಟದಿಂದ ಪಾರು ಮಾಡಲು ಪ್ರಯತ್ನಪಟ್ಟರು. ಶುಭಕಾರ್ಯವನ್ನು ಮಾಡುವಾಗ ವಾರ-ತಿಥಿಗಳನ್ನು ನೋಡುವ ಅವಶ್ಯಕತೆಯಿಲ್ಲ ಎಂದಿದ್ದಾರೆ.

ಸೋಮವಾರ ಮಂಗಳವಾರ ಶಿವರಾತ್ರಿಯೆಂದು ಮಾಡುವ ಭಕ್ತರ
ಲಿಂಗಭಕ್ತಂಗೆ ನಾನೆಂತು ಸರಿಯೆಂಬೆನಯ್ಯಾ?
ದಿನ ಶ್ರೇಷ್ಠವೋ ಲಿಂಗ ಶ್ರೇಷ್ಠವೋ?
ದಿನ ಶ್ರೇಷ್ಠವೆಂದು ಮಾಡುವ
ಪಂಚಮಹಾಪಾತಕರ ಮುಖವ ನೋಡಲಾಗದು.
ಸೋಮೇ ಭೌಮೇ ವ್ಯತೀಪಾತೇ ಸಂಕ್ರಾಂತಿಶಿವರಾತ್ರಯೋಃ
ಏಕಭಕ್ತೋಪವಾಸೇನ ನರಕೇ ಕಾಲಮಕ್ಷಯಂ
ಇದು ಕಾರಣ ಕೂಡಲಚೆನ್ನಸಂಗಯ್ಯಾ
ಇಂಥವರ ಮುಖವ ನೋಡಲಾಗದು. /೧೭೫ [1]

ಸೋಮವಾರ ಮಂಗಳವಾರ ಹುಣ್ಣಿಮೆ ಸಂಕ್ರಾಂತಿ ಶಿವರಾತ್ರಿ-
ಮೊದಲಾದ ತಿಥಿವಾರಂಗಳಲ್ಲಿ ಏಕಭುಕ್ತೋಪವಾಸಿಯಾಗಿ
ಆ ಕ್ಷುದ್ರ ತಿಥಿಗಳಲ್ಲಿ, ಮಾಡಿದ ನೀಚೋಚ್ಛಿಷ್ಟವಂ ತಂದು
ತನ್ನ ಕರಸ್ಥಲದ ಇಷ್ಟಲಿಂಗಕ್ಕೆ ಕೊಟ್ಟು ಕೊಂಡು ಭಕ್ತನೆನಿಸಿಕೊಂಡೆನೆಂಬ
ಅನಾಚಾರಿಯ ಮುಖವ ನೋಡಲಾಗದು ನೋಡಲಾಗದು.
ಅದೇನು ಕಾರಣವೆಂದಡೆ:
ದಿನ ಶ್ರೇಷ್ಠವೊ ? ಲಿಂಗ ಶ್ರೇಷ್ಠವೊ ? ದಿನ ಶ್ರೇಷ್ಠವೆಂದು ಮಾಡುವ
ದುರಾಚಾರಿಯ ಮುಖವ ನೋಡಲಾಗದು, ನೋಡಲಾಗದು, ಅದೆಂತೆಂದಡೆ:
ಆವ ದಿನ ಶ್ರೇಷ್ಠವೆಂದು ದಿನವೆ ದೈವವೆಂದು ಮಾಡುವನಾಗಿ,
ಅವನು ದಿನದ ಭಕ್ತನು.
ಅವನಂತಲ್ಲ ಕೇಳಿರಣ್ಣ ಸದ್ಭಕ್ತನು-ಲಿಂಗವೆ ಘನವೆಂದು ಜಂಗಮವೆ ಶ್ರೇಷ್ಠವೆಂದು
ಆ ಲಿಂಗಜಂಗಮವೆ ಶ್ರೇಷ್ಠವೆಂದು ಆ ಲಿಂಗಜಂಗಮವೆ ದೈವವೆಂದು ಮಾಡುವನಾಗಿ
ಆತ ಲಿಂಗಭಕ್ತನು. ಈ ಲಿಂಗಭಕ್ತಂಗೆ ದಿನದ ಭಕ್ತನ ತಂದು
ಸರಿಯೆಂದು ಹೋಲಿಸಿ ನುಡಿವಂಗೆ,
ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲ,
ಅವ ಭಕ್ತನಲ್ಲ, ಅವಂಗೆ ಅಘೋರನರಕ.
ಭವಿ ದಿನ-ತಿಥಿ-ವಾರಂಗಳಲ್ಲಿ ಕೂರ್ತುಮಾಡುವಾತ
ಭಕ್ತನಲ್ಲ. ಅಲ್ಲಿ ಹೊಕ್ಕು ಲಿಂಗಾರ್ಚನೆಯ ಮಾಡುವಾತ ಜಂಗಮವಲ್ಲ.
ಈ ಉಭಯರನು ಕೂಡಲಚೆನ್ನಸಂಗಯ್ಯ ಕುಂಭಿಪಾತಕ
ನಾಯಕನರಕದಲ್ಲಿಕ್ಕುವನು /೧೬೬೮ [1]

ಬಹುದೇವೊಪಾಸನೆ ಯಾವ ರೀತಿ ಚನ್ನಬಸವಣ್ಣನವರ ಭರ್ತ್ಸನಗೆ ಗುರಿಯಾಯಿತೋ ಅದೇ ರೀತಿ ಕೀಳು ದೇವೊಪಾಸನೆ ಕೂಡಾ ಅವರ ಖಂಡನೆಗೆ ಒಳಗಾಗಿತ್ತು.
ಭರ್ತ್ಸನ = ಆಕ್ಷೇಪಣೆ, ಖಂಡನೆ, ಬಯ್ಯುವುದು (invective,reproach)

ಬ್ರಹ್ಮನನಾರಾದಿಸಿ ನಿರ್ಮೂಲವಾದರಯ್ಯ
ವಿಷ್ಣುವನಾರಾದಿಸಿ ಭವಭವಕ್ಕೆ ಬಂದರಯ್ಯ
ಭೈರವನನಾರಾದಿಸಿ ಬಾಹಿರವೋದರಯ್ಯಾ,
ಮೈಲಾರನನಾರಾದಿಸಿ ಕುರುಳು ಬೆರಳ ಕಡಿಸಿಕೊಂಡು ನಾಯಾಗಿ ಬಗಳುತಿಪ್ಪರು,
ಜಿನನನಾರಾದಿಸಿ ಲಜ್ಜೆದೊರೆದರು ನೋಡಾ,
ನಮ್ಮ ಕೂಡಲಚೆನ್ನಸಂಗಯ್ಯನನಾರಾದಿಸಿ ದೇವಾ,
ಭಕ್ತಯೆಂದೆನಿಸಿಕೊಂಬರು ನೋಡಯ್ಯಾ. /೧೪೫ [1]

ಕೀಳು ದೈವಕ್ಕೆರಗುವ ಭವಿಗಳ ಕುರಿತು ಚನ್ನಬಸವಣ್ಣನವರು ಅದೆಷ್ಟೋ ಉಗ್ರರಾಗಿದ್ದರೆಂದರೆ, ಭವಿ ಅದೆಷ್ಟೋ ಸತ್ಸಂಗದಲ್ಲಿದ್ದರೂ ಅದು ಕೆಚ್ಚಲ ಹತ್ತಿರ ಇದ್ದ ಉಣ್ಣಿಗೆ ಸಮಾನ. ಆ ಉಣ್ಣೆ ಕೆಚ್ಚಲ ಹತ್ತಿರವಿದ್ದರೂ ಅದು ಕ್ಷೀರವನ್ನೆಂದೂ ಕುಡಿಯಲಾರದು.

ಸಮಾಜ ಸುಧಾರಣೆಯಾಗಬೇಕು. ಧಾರ್ಮಿಕ ಸುಧಾರಣೆಯಾಗಬೇಕು. ಮೂಢನಂಬಿಕೆಗಳು, ಅಂಧಃ ಶ್ರದ್ಧೆಗಳು, ಕಂದಾಚಾರಗಳು ನಿವಾರಣೆಯಾಗಬೇಕು ಎಂದು ಗುರು ಬಸವಣ್ಣನವರು ಹೇಳುತ್ತಾರೆ.

ನೀರು ಕಂಡಲ್ಲಿ ಮುಳುಗುವರಯ್ಯ
ಮರವ ಕಂಡಲ್ಲಿ ಸುತ್ತುವರಯ್ಯ
ಬತ್ತುವ ಜಲವ ಒಣಗುವ ಮರವ
ಮೆಚ್ಚಿದವರು ನಿಮ್ಮನೆತ್ತಬಲ್ಲರು
ಕೂಡಲ ಸಂಗಮದೇವಾ

ಮೀಂಬುಲಿಗನ ಹಕ್ಕಿಯಂತೆ ನೀರ ತಡಿಯಲಿದ್ದು
ಮೂಗ ಹಿಡಿದು ಧ್ಯಾನಮಾಡುವರಯ್ಯಾ.
ಬಿಟ್ಟ ಮಂಡೆವೆರಸಿ ಬಾಯ ಮಿಡುಕಿಸುತ
ಕಣ್ಣ ಮುಚ್ಚಿ ಬೆರಳನೆಣಿಸುವರಯ್ಯಾ-
[ತ]ಮ್ಮ ಕೈಯಲಿ ಕಟ್ಟಿದ ದರ್ಭೆಯ ಹುಲ್ಲು
ಕೂಡಲಸಂಗನನರಿಯದೆ ಮೊರೆಯಿಡುವಂತೆ. /೫೭೮ [1]

ಬಸವಣ್ಣನವರು ತಮ್ಮ ಕಾಲದಲ್ಲಿ ಬ್ರಾಹ್ಮಣರು ಮಾಡುತ್ತಿದ್ದ ಭಕ್ತಿ, ಪೂಜೆ, ಧ್ಯಾನ, ಸಾಧನೆ, ಪ್ರಾರ್ಥನೆ ಎಲ್ಲವೂ ಬೂಟಾಟಿಕೆ, ಕಪಟವೆಂದು, ಶುಷ್ಕಾಚಾರಗಳೆಂದು ಖಂಡಿಸಿದರು. ಇದರಿಂದ ಕೆಲವು ವಿಚಾರವಾದಿ ಬ್ರಾಹ್ಮಣರು ಪರಿವರ್ತನೆಗೊಂಡದ್ದೂ ಉಂಟು.

‘ವೇದವೆಂಬುದು ಓದಿನ ಮಾತು, ಶಾಸ್ತ್ರವೆಂಬುದು ಸಂತೆಯ ಸುದ್ದಿ, ಪುರಾಣವೆಂಬುದು ಪುಂಡರಗೋಷ್ಠಿ’ ಎಂದು ಶರಣರು ವೇದ, ಶಾಸ್ತ್ರ, ಪುರಾಣಗಳನ್ನು ಖಂಡಿಸುತ್ತಾರೆ. ಅಲ್ಲಮಪ್ರಭುದೇವರು ಈ ಮಾತುಗಳನ್ನು ತುಂಬ ಸ್ಪಷ್ಟವಾಗಿ ಹೇಳಿದ್ದಾರೆ ;

324
ವೇದ ವೇದಿಸಲರಿಯದೆ ಕೆಟ್ಟವು,
ಶಾಸ್ತ್ರ ಸಾಧಿಸಲರಿಯದೆ ಕೆಟ್ಟವು,
ಪುರಾಣ ಪೂರೈಸಲರಿಯದೆ ಕೆಟ್ಟವು,
ಹಿರಿಯರು ತಮ್ಮ ತಾವರಿಯದೆ ಕೆಟ್ಟರು,
ತಮ್ಮ ಬುದ್ಧಿ ತಮ್ಮನ್ನೇ ತಿಂದಿತ್ತು,
ನಿಮ್ಮನೆತ್ತ ಬಲ್ಲರೊ ಗುಹೇಶ್ವರಾ? /೩೨೪ [1]

ಇದೇ ಅಭಿಪ್ರಾಯವನ್ನು ಅಕ್ಕಮಹಾದೇವಿ "ವೇದಾಶಾಸ್ತ್ರಾಗಮ ಪುರಾಣಂಗಳೆಂಬವು ಕೊಟ್ಟಣವ ಕುಟ್ಟಿದ ನುಚ್ಚು ತೌಡು ಕಾಣಿ ಭೋ!" ಎನ್ನುತ್ತಾಳೆ. ವೇದ ವಿರೋಧವಾದ ಇಂತಹ ಇನ್ನೂ ಅನೇಕ ಮಾತುಗಳನ್ನು ವಚನಕಾರರು ಹೇಳಿದ್ದಾರೆ.

"ಶಾಸ್ತ್ರವೆಂಬುದು ಹೋತಿಂಗೆ ಮಾರಿ, ವೇದವೆಂಬುದು ನಿಮಗೆ ತಿಳಿಯದು" ಎಂದು ಗುರು ಬಸವಣ್ಣ ವೇದಾದಿ ಗ್ರಂಥಗಳನ್ನು ಸಾರಾಸಗಟಾಗಿ ಹೇಳಿದ್ದು ಸಾಮಾಜಿಕ ಕಂಟಕಗಳನ್ನು ನಿವಾರಿಸುವ ಸಲುವಾಗಿಯೇ ಎಂಬುದನ್ನು ನಾವು ಗಮನಿಸಬೇಕು.

ಶಾಸ್ತ್ರ ಘನವೆಂಬೆನೆ? ಕರ್ಮವ ಭಜಿಸುತ್ತಿದೆ.
ವೇದ ಘನವೆಂಬೆನೆ? ಪ್ರಾಣ ವಧೆಯ ಹೇಳುತ್ತಿದೆ.
ಶ್ರುತಿ ಘನವೆಂಬೆನೆ? ಮುಂದಿಟ್ಟು ಅರಸುತ್ತಿದೆ.
ಅಲ್ಲೆಲ್ಲಿಯೂ ನೀವಿಲ್ಲದ ಕಾರಣ,
ತ್ರಿವಿಧ ದಾಸೋಹದಲಲ್ಲದೆ ಕಾಣಬಾರದು ಕೂಡಲಸಂಗಮದೇವನ. - ಬಸವಣ್ಣ ಸವಸ1/208 [1]

ಆದಿ ಪುರಾಣ ಅಸುರರಿಗೆ ಮಾರಿ,
ವೇದಪುರಾಣ ಹೋತಿಂಗೆ ಮಾರಿ,
ರಾಮಪುರಾಣ ರಕ್ಕಸರಿಗೆ ಮಾರಿ,
ಭಾರತಪುರಾಣ ಗೋತ್ರಕ್ಕೆ ಮಾರಿ.
ಎಲ್ಲಾ ಪುರಾಣ ಕರ್ಮಕ್ಕೆ ಮೊದಲು,
ನಿಮ್ಮ ಪುರಾಣಕ್ಕೆ ಪ್ರತಿಯಿಲ್ಲ
ಕೂಡಲಸಂಗಮದೇವಾ. - ಸವಸ೧/೫೭೧ [1]

ವೇದ ಪುರಾಣಗಳನ್ನು ಬಸವಣ್ಣ ಕೇವಲ ವಿರೋಧಿಸುವದಕ್ಕಾಗಿ ವಿರೋಧಿಸಲಿಲ್ಲ; ಸಕಾರಣದಿಂದಲೇ ಹಳಿಯುತ್ತಾನೆ. ‘ಪುರಾಣವೆಂಬುದು ಪುಂಡರಗೋಷ್ಠಿ, ಸುಳ್ಳರ ಸಂತೆ’ ಎಂದು ಅಕ್ಕ ಮತ್ತು ಅಲ್ಲಮ ಹೀಯಾಳಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಕಲ್ಪನೆಗೂ ಮೀರಿದ ಭೇದಗಳನ್ನು, ಅಸಮಾನತೆಗಳನ್ನು, ಧರ್ಮದ ಹೆಸರಲ್ಲಿ ಸೃಷ್ಟಿಸಿ ಸಮಾಜದ ಕಣ್ಣಿಗೆ ಕಾರಣವಾದವರನ್ನು ಬೆರಳಿಟ್ಟು ತೋರಿಸಿ, ವೇದಾಗಮ, ಪುರಾಣ, ಶಾಸ್ತ್ರಗಳ ಪ್ರಾವೀಣ್ಯವನ್ನು ಅಲ್ಲಗಳೆದು ಯಜ್ಞ, ಹೋಮ, ಹವನಾದಿ ಕರ್ಮಗಳ ಢಾಂಬಿಕತನವನ್ನು ವಿಡಂಬಿಸಿ ಬಸವಣ್ಣ ಹೊಸ ದಾರಿಯನ್ನು ತೋರಿದ್ದಾನೆ.

ತಿಥಿ, ವಾರ, ನಕ್ಷತ್ರ, ಅಷ್ಟಮಿ, ನವಮಿ, ಕಲ್ಪನೆಗಳನ್ನು ಕಳೆದು ‘ಅದು ಮತ್ತೊಂದು ಎನ್ನಬೇಡ,
ದಿನ ಒಂದೇ ಶಿವಶರಣೆಂಬುವಂಗೆ ದಿನ ಒಂದೇ ಹರಶರಣೆಂಬುವಂಗೆ’ ಎಂದು ಏಕ ನಿಷ್ಠೆಯ ಬೋಧಿಸಿದರು.


ಎಮ್ಮವರು ಬೆಸಗೊಂಡರೆ ಶುಭ ಲಗ್ನವೆನ್ನಿರಯ್ಯ
ರಾಶಿಕೂಟ ಗಣ ಸಂಬಂಧ ಉಂಟೆಂದು ಹೇಳಿರಯ್ಯ
ಚಂದ್ರಬಲ ತಾರಾಬಲ ಉಂಟೆಂದು ಹೇಳಿರಯ್ಯ
ನಾಳಿನ ದಿನಕ್ಕಿಂದಿನ ದಿನ ಲೇಸೆಂದು ಹೇಳಿರಯ್ಯ
ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯ -ಬಸವಣ್ಣ [1]

ಲಗ್ನವೆಲ್ಲಿಯದೋ ವಿಘ್ನವೆಲ್ಲಿಯದೋ ಲಿಂಗಯ್ಯಾ|
ದೋಷವೆಲ್ಲಿಯದೋ ದುರಿತವೆಲ್ಲಿಯದೋ|
ಕೂಡಲಸಂಗಮದೇವಯ್ಯಾ ನಿಮ್ಮ ಮಾಣದೆ ನೆನೆವಂಗೆ
ಭವ ಕರ್ಮವೆಲ್ಲಿಯದೋ -ಬಸವಣ್ಣ [1]

ಇಪ್ಪತ್ತುನಾಲ್ಕು ತಿಥಿಯಿಂದ ವೆಗ್ಗಳ,
ಗ್ರಹಣ ಸಂಕ್ರಾಂತಿಯಿಂದ ವೆಗ್ಗಳ,
ಏಕಾದಶಿ-ವ್ಯತೀಪಾತದಿಂದ ವೆಗ್ಗಳ,
ಸೂಕ್ಷ್ಮ ಶಿವಪಥವನರಿದಂಗೆ
ಹೋಮ-ನೇಮ-ಜಪ-ತಪದಿಂದ ವೆಗ್ಗಳ,
ಕೂಡಲಸಂಗಮದೇವಾ ನಿಮ್ಮ ಮಾಣದೆ ನೆನೆವಂಗೆ. -ಬಸವಣ್ಣ [1]

ಅಚ್ಚ ಶಿವೈಕ್ಯಂಗೆ ಹೊತ್ತಾರೆ ಅಮವಾಸೆ;
ಮಟ್ಟ ಮಧ್ಯಾಹ್ನ ಸಂಕ್ರಾಂತಿ;
ಮತ್ತೆ ಅಸ್ತಮಾನ ಪೌರ್ನಮಿ ಹುಣ್ಣಿಮೆ;
ಭಕ್ತನ ಮನೆಯ ಅಂಗಳವೆ ವಾರಣಾಸಿ ಕಾಣಾ! ರಾಮನಾಥ. /೭೧೪ [1]

ದೇವರ ದಾಸಿಮಯ್ಯನ ನಿಷ್ಠೆ. ಶರಣರ ಈ ವೈಚಾರಿಕ ನಿಲುವು ಇಂದಿನ ವೈಜ್ಞಾನಿಕ ಯುಗದ ಆಧುನಿಕರಲ್ಲಿಯೂ ಬಹುಮಟ್ಟಿಗೆ ಸಾಧ್ಯವಾಗಿಲ್ಲ. ಮಂಗಳವಾರ, ಶನಿವಾರ ಎಂದು ಕೆಲ ದಿನಗಳನ್ನು ಅಶುಭವೆಂದು ಭಾವಿಸಿ ಬಹಿಷ್ಕರಿಸಿದ ವಾಸ್ತವ ನಮ್ಮ ಮುಂದಿದೆ. ರಾಹುಕಾಲ, ಗುಳಿಕಾಲಗಳನ್ನು ಚಾಚೂ ತಪ್ಪದೇ ಪಾಲಿಸುವವರು, ಮನೆಯಿಂದ ಹೊರಡುವಾಗ ಶಕುನಗಳಿಗಾಗಿ ಕಾಯುವವರು, ಗ್ರಹಣದ ನಂತರ ನದಿಯಲ್ಲಿ ಮುಳುಗುವವರೂ ನಮ್ಮಲ್ಲಿ ಇನ್ನೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ವಿಚಾರವಂತರಲ್ಲಿಯೂ ಇದ್ದಾರೆ. ವಿಜ್ಞಾನಿಗಳಲ್ಲಿಯೂ ಇದ್ದಾರೆ. ಪರಿಸರದ ಒತ್ತಡದಿಂದ ರಕ್ತಗತವಾದ ಭಾವನೆಯನ್ನು ಬಿಡುವುದು ಒಂದಿಷ್ಟು ಕಷ್ಟ ಎನ್ನುವ ಮಾತು ಸಹಜವಾಗಿ ಹರಿದು ಬರುತ್ತದೆ. ಇದೆಲ್ಲವನ್ನು ಕಂಡಾಗ 800 ವರ್ಷಗಳ ಹಿಂದೆಯೇ ಶರಣರು ತಳೆದ ಧಾರ್ಮಿಕ ಧೋರಣೆಯ ಮಹತ್ವ ಮನದಟ್ಟಾಗುತ್ತದೆ.

ಬಸವಣ್ಣನವರು ಮೂಢನಂಬಿಕೆಗಳನ್ನು ನಂಬಲಿಲ್ಲ. ಪ್ರಾಣಿಬಲಿಯನ್ನು ವಿರೋಧಿಸಿದರು. ದೇವರನ್ನು ಮೆಚ್ಚಿಸಲು ಪ್ರಾಣಿಬಲಿ ಬೇಕಾಗಿಲ್ಲ ಎಂದು ಹೇಳಿದ ಬಸವಣ್ಣ ದೇವರನ್ನು ಒಲಿಸಿಕೊಳ್ಳಲು ಪರಿಶುದ್ಧವಾದ ನಂಬಿಕೆಯೊಂದೇ ಸಾಕು ಎಂದು ಹೇಳುತ್ತಾರೆ ;

ನಂಬರು ನಚ್ಚರು ಬರಿದೆ ಕರೆವರು,
ನಂಬಲರಿಯರೀ ಲೋಕದ ಮನುಜರು,
ನಂಬಿ ಕರೆದೊಡೇ ಓ ಎನ್ನನೆ ಶಿವನು
ನಂಬದೆ ನಚ್ಚದೆ ಬರಿದೆ ಕರೆವರ
ಕೊಂಬ ಮೆಟ್ಟಿ ಕೂಗೆಂದ ಕೂಡಲಸಂಗಮದೇವ /116 [1]

ಬಸವಣ್ಣ ಕರ್ಮತತ್ವವನ್ನು ಇಲ್ಲವಾಗಿಸಿದರು. ಸಾಮಾನ್ಯ ಜನರನ್ನು ಸುಲಿಯುವ ಜ್ಯೋತಿಷ್ಯ ಶಾಸ್ತ್ರ ಮೊದಲಾದವುಗಳನ್ನು ಖಂಡಿಸಿದರು. ದೇವರು ಧರ್ಮಗಳ ಹೆಸರಿನಲ್ಲಿ ನಡೆಯುವ ಅನಾಚಾರಗಳನ್ನು ಅಲ್ಲಗಳೆದರು. ಭಯಂಕರವಾದ ಎಲ್ಲಾ ಕ್ಷುದ್ರ ದೈವಗಳನ್ನು ಕಿತ್ತೆಸೆದರು. ಈ ಬಗ್ಗೆ ಅವರು ನೀಡುವ ತಿಳುವಳಿಕೆ ಈ ಮುಂದಿನಂತೆ ಇದೆ.

ಅರಗು ತಿಂದು ಕರಗುವ ದೈವವನೆಂತು ಸರಿಯೆಂಬೆನಯ್ಯಾ
ಉರಿಯ ಕಂಡಡೆ ಮುರುಟುವ ದೈವವನೆಂತು ಸರಿಯೆಂಬೆನಯ್ಯಾ
ಅವಸರ ಬಂದಡೆ ಮಾರುವ ದೈವವನೆಂತು ಸರಿಯೆಂಬೆನಯ್ಯಾ
ಅಂಜಿಕೆಯಾದಡೆ ಹೂಳುವ ದೈವವನೆಂತು ಸರಿಯೆಂಬೆನಯ್ಯಾ
ಸಹಜಭಾವ ನಿಜೈಕ್ಯ ಕೂಡಲಸಂಗಮದೇವನೊಬ್ಬನೆ ದೇವ. /೫೫೭ [1]

ಉಳ್ಳವರು ಶಿವಾಲಯ ಮಾಡಿಹರು,
ನಾನೇನ ಮಾಡುವೆ ಬಡವನಯ್ಯಾ.
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೇ ಹೊನ್ನ ಕಲಶವಯ್ಯಾ.
ಕೂಡಲಸಂಗಮದೇವಾ, ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.

ಇಲ್ಲಿ ತನ್ನ ದೇಹವನ್ನು ದೇವಾಲಯ ಮಾಡಿ ಅದಕ್ಕೆ ಪರಿಹಾರ ನೀಡಲು ಪ್ರಯತ್ನಿಸಲಾಗಿದೆ. ದೇವಾಲಯಗಳ ಹಾಗೂ ಅದರ ಪುರೋಹಿತತ್ವವನ್ನು ಒಪ್ಪಿದವರಲ್ಲಿ ಜಾತಿವಾದಿಗಳು ಮತ್ತು ಬಂಡವಾಳಶಾಹಿಗಳು ಪ್ರಮುಖರಾಗಿದ್ದಾರೆ. ಇವರು ಸಮಾನರಾಗಿ ಬೆರೆಯಲು ಒಪ್ಪದಿದ್ದಾಗ ಅವರನ್ನು ವಿರೋಧಿಸಿ ಶರಣರು ಬಂಡಾಯ ಸಾರಿದರು. ದೇವಾಲಯದ ಸುತ್ತಮುತ್ತ ಗಟ್ಟಿಕೊಂಡಿದ್ದ ಜಾತಿವಾದ ಮತ್ತು ಬಂಡವಾಳಶಾಹಿತ್ವಗಳ ಬೇರುಗಳನ್ನು ಅಲುಗಾಡುವಂತೆ ಮಾಡುವಲ್ಲಿ ಶರಣರ ಪ್ರಯತ್ನ ತುಂಬ ಪ್ರಾಮುಖ್ಯತೆಯನ್ನು ಗಳಿಸುತ್ತದೆ. ಎಲ್ಲರಿಗೂ ಸಮಾನವಾಗಿ ಪ್ರವೇಶವಿಲ್ಲದ ದೇವಾಲಯಗಳನ್ನು ಶರಣರು ವಿರೋಧಿಸಿದರು.

ಕಲ್ಲು ನಾಗರ ಕಂಡಡೆ ಹಾಲನೆರೆಯೆಂಬರು
ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯ
ಉಂಬ ಜಂಗಮ ಬಂದಡೆ ನಡೆಯಂಬರು
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರು

ಎನ್ನುವಲ್ಲಿ ಬಸವಣ್ಣನು ಕೆಳವರ್ಗದ ಮತ್ತು ಮೇಲ್ವರ್ಗದ ಮೌಢ್ಯ ದೈವಾರಾಧನೆಗಳನ್ನು ವಿರೋಧಿಸಿದನು. ಅದರ ಬದಲಾಗಿ ಇಷ್ಟಲಿಂಗಾರಾಧನೆಗೆ ಕರೆ ನೀಡಿದನು. ಇಲ್ಲಿ ಬಸವಣ್ಣ ಸಮಾಜ ನಿರ್ಧರಿಸಿದ ಕೆಳವರ್ಗದವರನ್ನು ಒಪ್ಪಿಕೊಳ್ಳುತ್ತಾನೆ. ಅವರನ್ನು ಮೇಲೆತ್ತುವ ಕೆಲಸ ಮಾಡುತ್ತಾರೆ.

ಎಲವೋ, ಎಲವೋ ಪಾಪಕರ್ಮವ ಮಾಡಿದವನೇ,
ಎಲವೋ ಎಲವೋ ಬ್ರಹ್ಮೇತಿಯ (ಬ್ರಹ್ಮಹತ್ಯೆಯ) ಮಾಡಿದವನೇ,
ಒಮ್ಮೆ ಶರಣೆನ್ನೆಲವೋ...
ಒಮ್ಮೆ ಶರಣೆಂದಡೆ ಪಾಪಕರ್ಮ ಓಡುವವು.
ಸರ್ವಪ್ರಾಯಶ್ಚಿತ್ತಕ್ಕೆ ಹೊನ್ನ ಪರ್ವತಂಗಳೈದವು.
ಒಬ್ಬಗೆ ಶರಣೆನ್ನು, ನಮ್ಮ ಕೂಡಲಸಂಗಮದೇವಂಗೆ. /೬೨೦

ಎಂದು ಜನರ ಮನದಲ್ಲಿದ್ದ ಕೀಳರಿಮೆಯನ್ನು ಶರಣರು ದೂರ ಮಾಡಿದರು. ಬಸವಣ್ಣನವರು ತಮ್ಮ ಕಾಲದ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಸಂದರ್ಭದ ಹಿನ್ನೆಲೆಯಲ್ಲಿ ಇಷ್ಟಲಿಂಗವನ್ನು ಆರಾಧಿಸಿ, ಅಸಂಖ್ಯಾತ ದೇವರು ಮತ್ತು ಅಸಂಖ್ಯಾತ ಅಂಧಾಚರಣೆಗಳನ್ನು ಪ್ರತಿಭಟಿಸಿ, ಸಾಮಾನ್ಯ ಜನರು ಆರ್ಥಿಕವಾಗಿ, ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ಶೋಷಣೆಗೆ ಈಡಾಗುವುದನ್ನು ತಪ್ಪಿಸಿದರು. ಜನರಲ್ಲಿ ಬದುಕುವ ಆತ್ಮವಿಶ್ವಾಸ ತುಂಬಿದನು. ಶಕುನವನ್ನು ನಂಬಿದವರ ಕುರಿತು ಬಸವಣ್ಣ ಹೀಗೆ ಹೇಳಿದ್ದಾರೆ ;

ಶಕುನವೆಂದೆಂಬೆ, ಅಪಶಕುನವೆಂದೆಂಬೆ.
ನಿಮ್ಮವರು ಅಳಲಿಕೆ ಅಂದೇಕೆ ಬಂದೆ
ನಿಮ್ಮವರು ಅಳಲಿಕೆ ಇಂದೇಕೆ ಹೋದೆ
ನೀ ಹೋಹಾಗಳಕ್ಕೆ ! ಬಾಹಾಗಳಕ್ಕೆ !
ಅಕ್ಕೆ ಬಾರದ ಮುನ್ನ ಪೂಜಿಸು
ಕೂಡಲಸಂಗಮದೇವನ. 167

ಅಕ್ಕೆ = ಅಳುವಿಕೆ, ವಿಲಾಪ (weeping)

ಕೂಡಲಸಂಗಮನನ್ನು ಪೂಜಿಸಿದರೆ ಅಪಶಕುನವೆಲ್ಲಿ ಎಂದು ಬಸವಣ್ಣ ಪ್ರಶ್ನಿಸಿದ್ದಾನೆ. ತನ್ನ ಕಣ್ಣಿಗೆ ಕಂಡ ಯಾವುದೇ ವೈಚಾರಿಕ ನೆಲೆಗಟ್ಟಿಲ್ಲದ ಆಚರಣೆಗಳನ್ನು, ಅರಿವಿನ ಒರೆಗಲ್ಲಿಗೆ ಹಚ್ಚಿ ಉಜ್ಜುವ ಪ್ರಯತ್ನ ಬಸವಣ್ಣನದು. ಈ ಮೂಲಕ ಸಮಾಜದ ಉನ್ನತ ಸ್ತರದಲ್ಲಿದ್ದವರ ಅಹಂಕಾರ ಹಾಗೂ ಕೆಳವರ್ಗದ ಜನರಲ್ಲಿದ್ದ ಅಜ್ಞಾನ ಇವೆರಡನ್ನು ಹೋಗಲಾಡಿಸಿದರು.

ಹಾವಾಡಿಗನು ಮೂಕೊರತಿಯು: ತನ್ನ ಕೈಯಲ್ಲಿ ಹಾವು,
ಮಗನ ಮದುವೆಗೆ ಶಕುನವ ನೋಡಹೋಹಾಗ
ಇದಿರಲೊಬ್ಬ ಮೂಕೊರತಿಯ ಹಾವಡಿಗನ ಕಂಡು,
ಶಕುನ ಹೊಲ್ಲೆಂಬ ಚದುರನ ನೋಡಾ.
ತನ್ನ ಸತಿ ಮೂಕೊರತಿ, ತನ್ನ ಕೈಯಲ್ಲಿ ಹಾವು,
ತಾನು ಮೂಕೊರೆಯ.
ತನ್ನ ಭಿನ್ನವನರಿಯದೆ ಅನ್ಯರನೆಂಬ
ಕುನ್ನಿಯನೇನೆಂಬೆ ಕೂಡಲಸಂಗಮದೇವಾ 105

ಹೊಲ್ಲ = ಕೆಟ್ಟುದು, ಹೀನವಾದುದು (ಹೊಲ್ಲ + ಎಂಬ = ಹೊಲ್ಲೆಂಬ)
ಮೂಕೊರತಿ = ಮೂಗಿಲ್ಲದವಳು (ಮೂಗು ಕೊಯ್ಸಿಕೊಂಡವಳು)
ಮೂಕೊರೆಯ = ಮೂಗುಹರುಕ (ಮೂಗು ಇಲ್ಲದವ)

ಹಾವಾಡಿಗನೊಬ್ಬ ತನ್ನ ಮಗನ ಮದುವೆಗೆ ಶಕುನ ನೋಡಲು ಹೊರಟಾಗ ಎದುರು ಬಂದ ಇನ್ನೊಬ್ಬ ಹಾವಾಡಿಗನನ್ನು ಕಂಡು ಅಪಶಕುನವಾಯಿತೆಂದು ತಿರುಗಿ ಹೋಗುತ್ತಾನೆ. ತಾನು ಒಬ್ಬ ಹಾವಾಡಿಗ ಎಂಬುದನ್ನು ತನ್ನ ಕೈಯಲ್ಲಿಯೂ ಹಾವು ಇದೆ ಎಂಬ ಕಲ್ಪನೆ ಇಲ್ಲದೆ ಎದುರು ಬೇರೆಯೊಬ್ಬ (ತನ್ನ ವೇಷದವನೆ) ಭೇಟಿಯಾದುದು ಅಪಶಕುನವೆಂದು ಬಗೆದಿದ್ದಾನೆ. ಇಂಥ ಮೂಢನಂಬಿಕೆಗಳು ಜನರಲ್ಲಿ ಸಹಜವಾಗಿ ರೂಢಿಗತವಾಗಿವೆ.

ಶರಣರು ವೇದಗಳನ್ನಷ್ಟೇ ಅಲ್ಲ ಬಹುದೇವತಾ ಉಪಾಸನೆಯನ್ನು ಅಲ್ಲಗಳೆಯುತ್ತಾರೆ. ಭಕ್ತಿ ಏಕಮುಖವಾಗಬೇಕು. ಅಂತರ್ಮುಖಿಯಾಗಬೇಕು. ಕ್ಷುದ್ರ ಬಯಕೆಗಳಿಗಾಗಿ ಗುಡಿ-ಗುಂಡಾರಗಳಲ್ಲಿರುವ ಯಾವಾವುದೋ ದೇವರುಗಳನ್ನು ಪೂಜಿಸುತ್ತಾ ಅದನ್ನು ವ್ಯಾಪಾರದ ಮಟ್ಟಕ್ಕಿಳಿಸಬಾರದು ಎಂಬ ವಿಚಾರ ಶರಣರದ್ದಾಗಿತ್ತು.

ಆದರೆ ಜನಸಾಮಾನ್ಯರು ‘ಮಡಕೆ ದೈವ, ಮಾರ ದೈವ, ಬೀದಿಯ ಕಲ್ಲಿದೇವ’ ಎಂಬ ಕಾಲಿಡಲು ಸಾಧ್ಯವಾಗದಷ್ಟು ದೈವಗಳನ್ನು ಸೃಷ್ಟಿಸಿಕೊಂಡಿರುವದನ್ನು, ತೀರ್ಥಕ್ಷೇತ್ರಗಳಿಗೆ ತಿರುಗುವದನ್ನು ಕಂಡು ಅನುಕಂಪಪಡುತ್ತಾರೆ. ಅವರಲ್ಲಿ ನಿಜವಾದ ದೈವತ್ವದ ಕಲ್ಪನೆಯನ್ನು ಮೂಡಿಸಿ ವಿಚಾರಶೀಲತೆಯ ಕಡೆಗೆ ಅವರ ಅರಿವನ್ನು, ಅನುಭವವನ್ನು ತಿರುಗಿಸುವ ಸಾಮೂಹಿಕ ಪ್ರಯತ್ನವನ್ನು ಶರಣರು ಕೈಗೊಳ್ಳುತ್ತಾರೆ. ಸಮಾಜದಲ್ಲಿ ಈಗಲೂ ಕೂಡಾ ಮಾರಿ ಮಸಣಿಗಳು ಕಾಡುತ್ತವೆ. ಅವುಗಳ ಕಾಟದಿಂದ ಮುಕ್ತರಾಗಬೇಕೆಂದುಕೊಂಡ ಜನ ಏನೇನೋ ಮಾಡಿ, ಆ ದೈವಗಳನ್ನು ತೃಪ್ತಗೊಳಿಸುವ ಸಲುವಾಗಿ
ಹಿಂಸೆ, ರಕ್ತಪಾತ ಮಾಡುತ್ತಾರೆ. ಈ ಮೂಢನಂಬಿಕೆಗಳು ಇಂದಿಗೂ ಜನರಲ್ಲಿವೆ. ಬಸವಣ್ಣ ತನ್ನ ಕಾಲದಲ್ಲಿ ಜನ ನಂಬಿದ ಮಾರಿ ಮಸಣಿಯ ಕುರಿತು ಹೀಗೆ ಹೇಳಿದ್ದಾನೆ.

‘ಮಾರಿ ಮಸಣಿಯೆಂಬುವ ಬೇರಿಲ್ಲ ಕಾಣಿರೋ ! ಮಾರಿಯೆಂಬುದೇನು
ಕಂಗಳು ತಪ್ಪಿ ನೋಡಿದರೆ ಮಾರಿ ನಾಲಿಗೆ ತಪ್ಪಿ ನುಡಿದರೆ ಮಾರಿ
ನಮ್ಮ ಕೂಡಲ ಸಂಗಮದೇವ ನೆನಹ ಮರೆದರೆ ಮಾರಿ !’

ಮಾರಿ ಮಸಣಿಯೆಂಬವು ಬೇರೆ ಇಲ್ಲ. ನಮ್ಮ ನೋಡುವ ದೃಷ್ಟಿಯಲ್ಲಿ ದೋಷವುಂಟಾದರೆ, ಆಡುವ ಮಾತು ತಪ್ಪಿ ಹೋದರೆ ಅಲ್ಲಿಯೇ ಮಾರಿ ಇದೆ. ‘ದೇವನನ್ನು ಮರೆತರೆ ಮಾರಿಯನ್ನು ಆಹ್ವಾನಿಸಿದಂತೆ’ ಎಂದು ಹೇಳಿ, ಸರಿಯಾದ ನಡೆ-ನುಡಿಯಿಲ್ಲದವರಿಗೆ ತನ್ನ ತಪ್ಪೇ ತನಗೆ ಮಾರಿಯಾಗುತ್ತದೆ ಎಂಬುದನ್ನು ವಚನಕಾರರು ತಿಳಿಸಿದ್ದಾರೆ.

ಲಗ್ನಕ್ಕೆ ವಿಘ್ನ ಬಾರದೆಂದು ಜ್ಯೋತಿಷ್ಯ ಕೇಳುವ ಅಣ್ಣಗಳಿರಾ,
ಕೇಳಿರಯ್ಯಾ: ಅಂದೇಕೆ ವೀರಭದ್ರನ ಸೆರಗು ಸುಟ್ಟಿತ್ತು?
ಅಂದೇಕೆ ಮಹಾದೇವಿಯರ ಬಲಭುಜ ಹಾರಿತ್ತು?
ಇಂದೇಕೆ ಎನ್ನ ವಾಮನೇತ್ರ ಚರಿಸಿತ್ತು?
ಕಪಿಲಸಿದ್ಧಮಲ್ಲಿಕಾರ್ಜುನಾ. /೧೫೩೭

ವಾಮನೇತ್ರ = ಎಡ ಕಣ್ಣು (left side eye)
ಚರಿಸು = ತಿರುಗಾಡು, ಅಡ್ಡಾಡು.

ಹೀಗೆ ವಚನಕಾರರು ನಿರಂತರವಾಗಿ ಸಮಾಜದಲ್ಲಿ ಜಡ್ಡುಗಟ್ಟಿದ್ದ ಅನಿಷ್ಟ ಸಂಪ್ರದಾಯಗಳನ್ನೂ ಮೂಢನಂಬಿಕೆಗಳನ್ನೂ ನಿರಾಕರಿಸುವುದು ಮಾತ್ರವಲ್ಲ ; ಸಶಕ್ತವಾಗಿ ಪ್ರತಿಭಟನೆಯನ್ನೂ ತೋರಿದ್ದಾರೆ. ಆ ಮೂಲಕ ಸಮಾಜವಾದಿ ಸಿದ್ಧಾಂತದ ಸಮಾಜ ನಿರ್ಮಾಣದ ಸಫಲತೆಗೆ ಶ್ರಮಿಸಿದ್ದಾರೆ.

*

[1] ಈ ತರಹದ ಸಂಖ್ಯೆಯ ವಿವರ: ಸವಸ-1/554 :- ಸಮಗ್ರ ವಚನ ಸಂಪುಟ -1, ವಚನ ಸಂಖ್ಯೆ-554 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)
[2] ಸಿದ್ಧರಾಮೇಶ್ವರ - ಸಂ. ಡಾ|| ಆರ್.ಸಿ. ಹಿರೇಮಠ, ಪು.ಸಂ. 220 ವ 723.)
[3] ಎನ್‍ಸೈಕ್ಲೋಪೀಡಿಯಾ ಆಫ್ ರಿಲಿಜನ್ ಹಾಗೂ ಎಥಿಕ್, Vol.-12, p-120.
[4] ವಚನ ಸಾಹಿತ್ಯ – ಒಂದು ಸಾಂಸ್ಕೃತಿಕ ಅಧ್ಯಯನ, ಡಾ|| ಪಿ.ವ್ಹಿ. ನಾರಾಯಣ, ಪು.ಸಂ. 117.
[5] ಬಸವಣ್ಣನವರ ಜೀವನ ಹಾಗೂ ಸಂದೇಶ – ಡಾ|| ಸಿದ್ಧಯ್ಯ ಪುರಾಣಿಕ, ಪು.ಸಂ. 118.

Previous ವೇದ,ಶಾಸ್ತ್ರ, ಶ್ರುತಿ, ಆಗಮ ಇತ್ಯಾದಿಗಳ ಬಗ್ಗೆ ಅಗ್ನಿ (ಕಿಚ್ಚು), ಜಲ, ನೆಲ, ಕಲ್ಲು ,ಆಕಾಶ ವಾಯು ದೇವರಲ್ಲ Next
cheap jordans|wholesale air max|wholesale jordans|wholesale jewelry|wholesale jerseys