Previous ಅಲ್ಲಮ ಪ್ರಭುವಿನ ವಚನಗಳಲ್ಲಿ ಖಗೋಳ ವಿಜ್ಞಾನ ಶೀಲ ಎಂದರೇನು? ಶೀಲಗಳು ಹೇಗಿರಬೇಕು Next
Untitled Page

ನೇಮಗಳು; ಅರ್ಥವಿಲ್ಲದ ನೇಮಗಳು ಷಟಸ್ಥಲಕ್ಕೆ ಹೊರಗು

*

ಲಿಂಗಾಯತರಲ್ಲಿ ನೇಮಗಳು (ನಿಯಮಗಳು); ಅರ್ಥವಿಲ್ಲದ ನೇಮಗಳು ಷಟಸ್ಥಲಕ್ಕೆ ಹೊರಗು

ಮನುಷ್ಯನು ಪರಮಾತ್ಮನನ್ನು ಒಬ್ಬ ಮಹಾನ್ ಶಕ್ತಿಯುಳ್ಳ ವ್ಯಕ್ತಿಯಂತೆ ಕಲ್ಪಿಸಿಕೊಂಡು, ಅವನಿಗೆ ಎಲ್ಲ ರೀತಿಯ ಮಾನವಗುಣಗಳನ್ನು ಅರೋಪಿಸುವುದುಂಟು. ಆದರೆ ಕೆಲವು ವೇಳೆ ಈ ಮಾನವತ್ವಾರೋಪ ಅತಿರೇಕಕ್ಕೆ ಹೋಗುವುದು ಜನರ ವ್ರತ ಶೀಲ ನೇಮಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಉದಾಹರಣೆಗೆ ದೇವನಿಗೆ ಹಾಲು/ಕಡಲೆ ಇತರೆ ಆಹಾರ ಇಷ್ಟವೆಂದು ಕಲ್ಪಿಸಿಕೊಂಡು ಅದರ ನೇಮ ಮಾಡುವುದು; ಮಾನವರಂತೆ ದೇವರಿಗೆ ಆಯುಧಗಳನ್ನು ಕೈಯಲ್ಲಿ ಇಡುವ ನೇಮ; ಬೇರೇ ಯಾರೊ ಮಾಡಿದ್ದಾರೆ ಅಂತ ಮಾಡುವ ನೇಮಗಳು ಇವೆಲ್ಲ ದೇವನಿಗೆ ಸಲ್ಲವು. ಶರಣರು ಇವನ್ನೆಲ್ಲ ಖಂಡಿಸಿದ್ದಾರೆ; ಅಲ್ಲದೆ ನಿಜವಾದ ನೇಮ ಹೇಗಿರಬೇಕೆಂದೂ ಹೇಳಿದ್ದಾರೆ.

ತಪವೆಂಬುದು ಬಂಧನ, ನೇಮವೆಂಬುದು ತಗಹು,
ಶೀಲವೆಂಬುದು ಸೂತಕ, ಭಾಷೆಯೆಂಬುದು ಪ್ರಾಣಘಾತಕ.
ಈ ಚತುರ್ವಿಧದೊಳಗೆ ಇಲ್ಲ,
ಕೂಡಲಚೆನ್ನಸಂಗಯ್ಯ ಏಕೋಗ್ರಾಹಿ. - ಚೆನ್ನಬಸವಣ್ಣ -೩/೫೮೦ [1]

ಅರ್ಥವಿಲ್ಲದ ನೇಮಗಳು ಷಟಸ್ಥಲಕ್ಕೆ ಹೊರಗು

ಹಾಲ ನೇಮವ ಹಿಡಿದಾತ ಬೆಕ್ಕಾಗಿ ಹುಟ್ಟುವ
ಕಡಲೆಯ ನೇಮವ ಹಿಡಿದಾತ ಕುದುರೆಯಾಗಿ ಹುಟ್ಟುವ
ಅಗ್ಘವಣಿಯ ನೇಮವ ಹಿಡಿದಾತ ಕಪ್ಪೆಯಾಗಿ ಹುಟ್ಟುವ
ಪುಷ್ಪದ ನೇಮವ ಹಿಡಿದಾತ ದುಂಬಿಯಾಗಿ ಹುಟ್ಟುವ
ಇವು ಷಡುಸ್ಥಲಕ್ಕೆ ಹೊರಗು.
ನಿಜಭಕ್ತಿ ಇಲ್ಲದವರ ಕಂಡಡೆ ಮೆಚ್ಚನು ಗುಹೇಶ್ವರನು. - ೨/೧೨೦ [1]

ಯಾರಿಗೊ(ದುಷ್ಟರಿಗೆ) ಹೆದರಿ ಮಾಡುವ ವ್ರತ, ದೇವರ ಮುಂದೆ ಸಲ್ಲದ ನೇಮ

ದುಷ್ಟರಿಗಂಜಿ ಕಟ್ಟಿಕೊಳ್ಳಬಹುದೆ ಕಡ್ಡಾಯದ ವ್ರತವ?
ಆ ವ್ರತದ ವಿಚಾರವೆಂತೆಂದಡೆ;
ಅಲಗಿನ ತುಪ್ಪದ ಸವಿಗೆ ಲಲ್ಲೆಯಿಂದ ನೆಕ್ಕಿದಡೆ
ಅಲಗಿನ ಧಾರೆ ನಾಲಗೆಯ ತಾಗಿ, ಆ ಜೀವ ಹಲುಬುವ ತೆರದಂತೆ,
ಒಲವರವಿಲ್ಲದ ಭಕ್ತಿ, ಛಲವಿಲ್ಲದ ನಿಷ್ಠೆ,
ಎಲವದ ಮರನ ಕಾಯ್ದ ವಿಹಂಗನಂತೆ.
ಇಂತೀ ಸಲೆನೆಲೆಯನರಿಯದವನ ವ್ರತಾಚಾರ
ಕೊಲೆ ಹೊಲೆ ಸೂತಕಕ್ಕೊಡಲಾಯಿತ್ತು.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಹೊರಗಾದ ನೇಮ - ೫/೫೦೪ [1]

ವಂಚನೆಯ ಮಾಡದೆ, ಸುಳ್ಳು ಹೇಳದಿದ್ದರೆ ಅದೇ ದೇವನೋಲಿಸುವ ನೇಮ.

ಬಂದುದ ಕೈಕೊಳ್ಳಬಲ್ಲಡೆ ನೇಮ,
ಇದ್ದುದ ವಂಚನೆಯ ಮಾಡದಿದ್ದಡೆ ನೇಮ.
ನಡೆದು ತಪ್ಪದಿದ್ದಡೆ ಅದು ನೇಮ,
ನುಡಿದು ಹುಸಿಯದಿದ್ದಡೆ ಅದು ಮುನ್ನವೆ ನೇಮ.
ನಮ್ಮ ಕೂಡಲಸಂಗನ ಶರಣರು ಬಂದಡೆ
ಒಡೆಯರಿಗೊಡವೆಯನೊಪ್ಪಿಸುವುದೆ ನೇಮ. -೧/೨೩೧ [1]

ಹಾಲ ನೇಮ, ಹಾಲ ಕೆನೆಯ ನೇಮ,
ಕೆನೆ ತಪ್ಪಿದ ಬಳಿಕ ಕಿಚ್ಚಡಿಯ ನೇಮ,
ಬೆಣ್ಣೆಯ ನೇಮ, ಬೆಲ್ಲದ ನೇಮ,
ಅಂಬಲಿಯ ನೇಮದವರನಾರನೂ ಕಾಣೆ.
ಕೂಡಲಸಂಗನ ಶರಣರಲ್ಲಿ
ಅಂಬಲಿಯ ನೇಮದಾತ ಮಾದಾರ ಚೆನ್ನಯ್ಯ. /೨೩೨ [1]

ಬೇರೇ ಯಾರೊ ಮಾಡಿದ್ದಾರೆ ಅಂತ ಮಾಡುವ ನೇಮಗಳು ದೇವನಿಗೆ ಸಲ್ಲವು

ನೋಡಿ ನೋಡಿ ಮಾಡುವ ನೇಮ ಸಲ್ಲವು, ಸಲ್ಲವು.
ತನುವುದ್ದೇಶ, ಮನವುದ್ದೇಶವಾಗಿ ಮಾಡುವ ನೇಮ ಸಲ್ಲವು, ಸಲ್ಲವು.
ಗುರುಪಥವ ಮೀರಿ ಮಾಡುವ ನೇಮ ಸಲ್ಲವು, ಸಲ್ಲವು.
ಕೂಡಲಸಂಗಮದೇವಯ್ಯಾ
ಇವು ನಿಮ್ಮ ನಿಜದೊಳಗೆ ನಿಲ್ಲವು, ನಿಲ್ಲವು. -೧/೭೧

ಉದಯವಾಯಿತ್ತ ಕಂಡು ಉದರಕ್ಕೆ ಕುದಿವರಯ್ಯಾ
ಕತ್ತಲೆಯಾಯಿತ್ತ ಕಂಡು ಮಜ್ಜನಕ್ಕೆರೆವರಯ್ಯಾ.
ಲಿಂಗಕ್ಕೆ ನೇಮವಿಲ್ಲ.
ಇರುಳಿಗೊಂದು ನೇಮ, ಹಗಲಿಗೊಂದು ನೇಮ ?
ಲಿಂಗಕ್ಕೆ ನೇಮವಿಲ್ಲ.
ಕಾಯ ಒಂದು ದೆಸೆ, ಜೀವ ಒಂದು ದೆಸೆ,
ಗುಹೇಶ್ವರನೆಂಬ ಲಿಂಗ ತಾನೊಂದು ದೆಸೆ. -೨/೧೧೭

ತನ್ನ ತಾ ತಿಳಿಯುವದೇ ನಿಜವಾದ ನೇಮ

ಪತ್ರೆಯ ನೇಮದವರು ಒಂದು ಕೋಟಿ.
ಲಿಂಗಾರ್ಚನೆಯ ನೇಮದವರು ಒಂದು ಕೋಟಿ.
ಜಂಗಮ ತೃಪ್ತಿಯವರು ಒಂದು ಕೋಟಿ.
ತನ್ನ ತಾ ತಿಳಿಯುವ ನೇಮದವರು ಒಬ್ಬರೂ ಇಲ್ಲವಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ. -೪/೧೪೮೮ [1]

ಅರ್ಚನೆ ಪೂಜನೆ ನೇಮವಲ್ಲ;
ಮಂತ್ರತಂತ್ರ ನೇಮವಲ್ಲ;
ಧೂಪ ದೀಪಾರತಿ ನೇಮವಲ್ಲ;
ಪರಧನ ಪರಸ್ತ್ರೀ ಪರದೈವಂಗಳಿಗೆರಗದಿಪ್ಪುದೆ ನೇಮ.
ಶಂಭುಜಕ್ಕೇಶ್ವರನಲ್ಲಿ ಇವು ಕಾಣ - ಸತ್ಯಕ್ಕ /೧೨೦೭ [1]

ಪರಧನ, ಪರಸ್ತ್ರೀ, ಪರದೈವಂಗಳಿಗೆರಗದಿಪ್ಪುದೆ ನೇಮ.

ಜಪತಪ ನೇಮವಲ್ಲ, ಮಂತ್ರತಂತ್ರ ನೇಮವಲ್ಲ,
ಧೂಪದೀಪಾರತಿ ನೇಮವಲ್ಲ,
ಪರಧನ, ಪರಸ್ತ್ರೀ, ಪರದೈವಂಗಳಿಗೆರಗದಿಪ್ಪುದೆ ನೇಮ.
ಸೌರಾಷ್ಟ್ರ ಸೋಮೇಶ್ವರಲಿಂಗವಲ್ಲಿದ್ದ ಕಾರಣ ನಿತ್ಯನೇಮ. - ಆದಯ್ಯ /೯೩೧ [1]

ನೇಮವ ಮಾಡುವರೆಲ್ಲರೂ ಬ್ರಹ್ಮಪಾಶಕ್ಕೊಳಗಾದರು.
ನಿತ್ಯವ ಮಾಡುವರೆಲ್ಲರು ವಿಷ್ಣುಪಾಶಕ್ಕೊಳಗಾದರು.
ಜಪವ ಮಾಡುವರೆಲ್ಲರು ರುದ್ರಪಾಶಕ್ಕೊಳಗಾದರು.
ತಪವ ಮಾಡುವರೆಲ್ಲರು ರತಿಪಾಶಕ್ಕೊಳಗಾದರು.
ಇಂತಿವು ಮೊದಲಾದ ನಾನಾ ಕೃತ್ಯವ ಮಾಡುವ
ಸಂಕಲ್ಪಜೀವಿಗಳೆಲ್ಲರು ನಾನಾ ಯೋನಿಸಂಭವದಲ್ಲಿ ಬರ್ಪುದಕ್ಕೆ
ತಮ್ಮ ತಾವೇ ಲಕ್ಷವಿಟ್ಟುಕೊಂಡರು.
ಅಲಕ್ಷ ಅತೀತ ಅನಾಮಯ ಅಮಲ ಅದ್ವಂದ್ವ
ಕಾಲಭೇದಚ್ಫೇದನಕುಠಾರ ನಾನಾ ಶಾಸ್ತ್ರ ನಿರ್ಲೆಪ
ಸಕಲ ಕೃತ್ಯ ಹೇತುದಾವಾನಲ ನಿಃಕಾರಣಮೂರ್ತಿ ಸಹಜಭರಿತಂಗೆ
ಹಿಡಿಯಲ್ಲಿಲ್ಲಾಗಿ ಬಿಡಲಿಲ್ಲ, ಅರಿಯಲಿಲ್ಲಾಗಿ ಅರಿದೆನೆಂಬ ತೆರನಿಲ್ಲ.
ಮತ್ತೆ ಕುರುಹಿನಿಂದ ಕಂಡ ಅರಿಕೆ ಇನ್ನೇಕೆ ?
ಸಿಪ್ಪೆಯ ಕಳೆದು, ಸುಭಿಕ್ಷವ ಸೇವಿಸಿ, ಬಿತ್ತನುಳಿದೆ,
ನಿತ್ಯವ ಪರಿದು, ಅನಿತ್ಯವ ಕಳೆದು,
ಮತ್ತೇನು ಎನ್ನದಿರ್ಪುದೆ ಲಿಂಗೈಕ್ಯವು, ನಿಃಕಳಂಕ ಮಲ್ಲಿಕಾರ್ಜುನಾ. - ಮೋಳಿಗೆ ಮಾರಯ್ಯ /೧೮೮೮ [1]

ಹಾಲು ಹಣ್ಣು ಬೇಳೆ ಬೆಲ್ಲದ ನೇಮಸ್ತರು ನೀವು ಕೇಳಿರೊ.
ಬಾಲೆಯರ ಮೇಲಣ ಭ್ರಾಂತು ಬಿಟ್ಟುದೆ ಹಾಲನೇಮ.
ಶಿವಯುಕ್ತವಲ್ಲದ ಪರಹೆಣ್ಣು ಹೊನ್ನು ಮಣ್ಣು ಬಿಟ್ಟುದೆ
ಹಣ್ಣಿನ ನೇಮ.
ತಾರ ತಮ್ಮುಸ ಗರಗಳು ಪಿಶಾಚಿಗಳಿದ್ದುವೆ ಬೇಳೆಯನೇಮ.
ಇಂತಲ್ಲಿ ಸಲ್ಲ, ಇಲ್ಲಿ ಉಂಟುಯೆಂಬ
ತಳ್ಳಿ ಬಳ್ಳಿಯ ಬಿಟ್ಟುದೆ ಬೆಲ್ಲದ ನೇಮ.
ಇಂತಲ್ಲದೆ ಉಳಿದಾದ ಭ್ರಾಂತುನೇಮದವರಿಗೆ
ಭಕ್ತಿ ಯುಕ್ತಿ ಮುಕ್ತಿಯೆಲ್ಲಿಯದೊ ? ಇಲ್ಲ,
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ. - ಕುಷ್ಟಗಿ ಕರಿಬಸವೇಶ್ವರ / ೫೬೮ [1]

[1] ಈ ತರಹದ ಸಂಖ್ಯೆಯ ವಿವರ: ಸವಸ-3/580 :- ಸಮಗ್ರ ವಚನ ಸಂಪುಟ-3, ವಚನ ಸಂಖ್ಯೆ-580 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)


ಪರಿವಿಡಿ (index)
*
Previous ಅಲ್ಲಮ ಪ್ರಭುವಿನ ವಚನಗಳಲ್ಲಿ ಖಗೋಳ ವಿಜ್ಞಾನ ಶೀಲ ಎಂದರೇನು? ಶೀಲಗಳು ಹೇಗಿರಬೇಕು Next
cheap jordans|wholesale air max|wholesale jordans|wholesale jewelry|wholesale jerseys