Previous ಲಿಂಗಾಯತರಲ್ಲಿ ಗ್ರಹಣದ ಬಗ್ಗೆ ಶರಣರ ವಚನಗಳಲ್ಲಿ *ಲಿಂಗ*ದ ಸ್ವರೂಪ Next

ಲಿಂಗಾಯತ ಧರ್ಮ ಸಂಹಿತೆ ವಚನ ಸಾಹಿತ್ಯ

*

೧೨ನೇ ಶತಮಾನದಲ್ಲಿ ಉದಯಿಸಿದ ಧರ್ಮ ಪ್ರೇರಿತ ಸಾಹಿತ್ಯ

೧೨ನೇ ಶತಮಾನದಲ್ಲಿ ಉದಯಿಸಿದ ಧರ್ಮ ಪ್ರೇರಿತ ಸಾಹಿತ್ಯವಾದ ವಚನವು, ಕನ್ನಡದ ಪ್ರಾಚೀನ ಸಾಹಿತ್ಯದಡಿಯಲ್ಲಿ ವರ್ಗಾಯಿಸಲ್ಪಟ್ಟಿದೆ. ಸ್ವಂತಿಕೆಯಿಂದ ಮೆರೆವ ವಚನಗಳು ಕನ್ನಡ ಸಾಹಿತ್ಯದಲ್ಲಿ ಪ್ರಭಾವಶಾಲೀ ಆತ್ಮವಿಮರ್ಶೆಯ ಮಾಧ್ಯಮವಾಗಿ ಸ್ವತಂತ್ರವಾಗಿ ಬೆಳೆದು ವಿಜೃಂಭಿಸಿ ಮುಂದಿನ ಸಾಹಿತ್ಯ ಪರಂಪರೆಗಳ ಮೇಲೆ ಪ್ರಭಾವ ಬೀರಿ ವಿಶ್ವಸಾಹಿತ್ಯದಲ್ಲೂ ಒಂದು ಅವಿಭಾಜ್ಯ ಅಂಗವಾಗಿದೆ.ವಚನ ಸಾಹಿತ್ಯವನ್ನು ಗುರು ಬಸವಣ್ಣನವರು ಮತ್ತು ಅವರ ಸಮಕಾಲೀನ ಶರಣರು ನೀಡಿದರು.ವಚನ ಸಾಹಿತ್ಯ ಲಿಂಗಾಯತ ಧರ್ಮವನ್ನು ಹುಟ್ಟುಹಾಕಿತು.

ವಚನ ಎಂದರೆ 'ಪ್ರಮಾಣ' ಎಂದರ್ಥ - ಕನ್ನಡದ ಸಾಹಿತ್ಯ ರೂಪಗಳಲ್ಲಿ ಬಹು ಪ್ರಮುಖವಾದದ್ದು. ಇದು ಸಾಹಿತ್ಯ ಪರಿಭಾಷೆಯಾಗಿ ಒಂದು ಪ್ರಕಾರದ ಕಾವ್ಯ. ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ ಕನ್ನಡದ ವಿಶಿಷ್ಟ ಕಾವ್ಯ ಪ್ರಕಾರ. ವಚನ ಸಾಹಿತ್ಯವು ಲಿಂಗಾಯತರ ಆಂದೋಲನ ಮತ್ತು ಅಭಿವ್ಯಕ್ತಿಗೆ ಸಂಗಾತಿಯಾಯಿತು.

ಸಮಾಜದ ಎಲ್ಲಾ ಜಾತಿಯವರೂ ವಚನವನ್ನು ಮುಖ್ಯ ಮಾಧ್ಯಮವನ್ನಾಗಿ ಮಾಡಿಕೊಂಡು, ತಮ್ಮ ಅನುಭವಗಳನ್ನು ಹೇಳಿಕೊಳ್ಳತೊಡಗಿದ್ದರಿಂದ ವಚನ ಸಾಹಿತ್ಯ ಒಂದು ಚಳವಳಿಯೂ ಆಯಿತು. ಬಂಡಾಯ ಸಾಹಿತ್ಯಕ್ಕಿಂತ ಮೊದಲು ಕನ್ನಡ ನಾಡಿನಲ್ಲಿ ವಚನ ಒಂದು ಚಳವಳಿಯ ಮುಖವಾಣಿಯಾಗಿತ್ತೆಂದರೆ ಅದರ ಸಾಮಾಜಿಕ ವ್ಯಾಪಕತೆ ಅಪಾರವಾದುದೆಂಬುದು ಅರಿವಿಗೆ ಬಾರದೆ ಇರದು. ವಚನಗಳು ಅತ್ಯಂತ ಸರಳ ಹಾಗೂ ನೇರವಾಗಿವೆ.

ಹಲವಾರು ಕವಿಗಳು, ಜನಸಾಮಾನ್ಯರು, ಸಾಹಿತ್ಯ ರಚಿಸಿದ್ದರೂ, ಇಡೀ ಲಿಂಗಾಯತ ಸಾಹಿತ್ಯದಲ್ಲಿ ಮುಖ್ಯ ಮತ್ತು ಅಪರೂಪದ ಅಭಿವ್ಯಕ್ತಿಯೆಂದರೆ ವಚನ ಸಾಹಿತ್ಯ. ಅದು ಸ್ಥಾವರ ಸಮಾಜವನ್ನು ತಿರಸ್ಕರಿಸಿ ಜಂಗಮ ಸಮಾಜವನ್ನು ನಂಬಿದ ಬಹಳ ದೊಡ್ಡ ಮಾನವೀಯ ಮೌಲ್ಯ. ಕಾಯಕ ಮತ್ತು ದಾಸೋಹಗಳ ಮೂಲಕ ಸಮಾಜೋತ್ಪನ್ನಗಳ ಸಮಪಾಲು ಸಿದ್ಧಾಂತವನ್ನು ಮಂಡಿಸುವ ಈ ಚಳವಳಿ ಭಾರತೀಯ ಸಂಸ್ಕ್ರಿತಿಯಲ್ಲೇ ಅತಿ ಮುಖ್ಯವಾದುದು.

ವಚನ ಸಾಹಿತ್ಯದ ಶ್ರೀಮಂತನಕ್ಕೆ ನೂರಾರು ಶರಣರು ಶ್ರಮಿಸಿದ್ದಾರೆ. ತಮ್ಮ ವಚನಗಳಲ್ಲಿ ತಮ್ಮದೇ ಆದ ಅಂಕಿತನಾಮಗಳನ್ನು ಬಳಸಿದ್ದಾರೆ. ಅಲ್ಲಮ ಪ್ರಭು 'ಗುಹೇಶ್ವರ' ಎಂದು ಬಳಸಿದರೆ, ಅಕ್ಕಮಹಾದೇವಿಯು 'ಚೆನ್ನಮಲ್ಲಿಕಾರ್ಜುನ' ಹಾಗು ಬಸವಣ್ಣನವರು 'ಕೂಡಲ ಸಂಗಮದೇವ' ಎಂದು ಬಳಸಿದ್ದಾರೆ. ಮತ್ತಿತರ ಸುಪ್ರಸಿದ್ಧ ವಚನಕಾರರೆಂದರೆ: ಸಿದ್ಧರಾಮೇಶ್ವರ, ಅಂಬಿಗರ ಚೌಡಯ್ಯ, ಮಾದಾರ ಚೆನ್ನಯ್ಯ, ಸೂಳೆ ಸಂಕವ್ವೆ, ಏಕಾಂತ ರಾಮಯ್ಯ, ಹಡಪದ ಅಪ್ಪಣ್ಣ, ಒಕ್ಕಲು ಮಾದಯ್ಯ, ಮಡಿವಾಳ ಮಾಚಯ್ಯ, ಅಯಿದಕ್ಕಿ ಲಕ್ಕಮ, ಹೆಂಡದ ಮಾರಯ್ಯ ಮುಂತಾದ ೧೫೦ಕ್ಕೂ ಹೆಚ್ಚು ಶರಣರು ೫೦ಕ್ಕೂ ವೈವಿಧ್ಯಮಯ ಕಸುಬುಗಳಲ್ಲಿ ತೊಡಗಿದ್ದವರಾಗಿದ್ದರು.

ಲಿಂಗಾಯತ ಧರ್ಮ ಸಂಹಿತೆ ವಚನ ಸಾಹಿತ್ಯ

ಆದ್ಯರ ವಚನ ಪರುಷ ಕಂಡಣ್ಣಾ;
ಸದಾಶಿವನೆಂಬ ಲಿಂಗವ ನಂಬುವುದು,
ನಂಬಲೊಡನೆ ನೀ ವಿಜಯ ಕಂಡಣ್ಣಾ.
ಅಧರಕ್ಕೆ ಕಹಿ, ಉದರಕ್ಕೆ ಸಿಹಿ
ಕೂಡಲಸಂಗನ ಶರಣರ ವಚನ ಬೇವ ಸವಿದಂತೆ. ೧/೧೭೧[1]

ಆದಿ ಶರಣರು (ಬಸವಣ್ಣನವರೇ ಆದಿ ಪ್ರಮಥರಾಗಿ ಅವರ ಸಮಕಾಲೀನರು) ನುಡಿದ ಮಾತೇ ಪರುಷ, ಇದು ನಿಜವಾದ ದೇವರನ್ನು ನಂಬಲು ಕಲಿಸುತ್ತದೆ. ನಂಬುತ್ತಲೇ ಯಶಸ್ಸು ಸಿಗುತ್ತದೆ. ಶರಣರ ಮಾತು ಬೇವಿನಂತೆ; ನಾಲಿಗೆಗೆ ಕಹಿ ಎನಿಸಿದರೂ ಹೊಟ್ಟೆಗೆ (ಆರೋಗ್ಯಕ್ಕೆ) ಒಳ್ಳೆಯದು.

ಹಾಲತೊರೆಗೆ ಬೆಲ್ಲದಂತಹ ಕೆಸರು; ಸಕ್ಕರೆಯಂತಹ ಮಳಲು
ತವರಾಜದಂತಹ ನೊರೆತೆರೆಗಳು,
ಇಂತಪ್ಪ ಆದ್ಯರ ವಚನವಿರಲು ಬೇರೆ ಬಾವಿಯ ತೋಡಿ
ಉಪ್ಪನೀರು ಸವಿದಂತಾಯಿತ್ತಯ್ಯ ಎನ್ನ ಯುಕ್ತಿ.
ನಿಮ್ಮ ವಚನಂಗಳ ಕೇಳದೆ ಅನ್ಯ ಪುರಾಣಂಗಳ ಕೇಳಿ,
ಕೆಟ್ಟೆನಯ್ಯ ಕೂಡಲಸಂಗಮದೇವ

ಹಾಲಿನ ತೊರೆಯೇ ಹರಿಯುತ್ತಿದೆ ಅದಕ್ಕೆ ಬೆಲ್ಲದಂತಹ ಕೆಸರು, ಸಕ್ಕರೆಯಂತಹ ಮರಳು, ಅಮೃತದ ನೊರೆತೆರೆ, ಈ ರೀತಿ ಇರುವಾಗ ಬೇರೆ ಬಾವಿಯ ತೋಡಿ ಉಪ್ಪುನೀರು ಪಡೆವರೆ? ಶರಣರ ವಚನಗಳನ್ನು ಬಿಟ್ಟು ಅನ್ಯಪುರಾಣಗಳನ್ನು ಕೇಳುವುದೂ ಇಷ್ಟೇ ಮೂರ್ಖತನ.

ಪಾತಾಳದಗ್ಘವಣಿಯ ನೇಣಿಲ್ಲದೆ, ಸೋಪಾನದ ಬಲದಿಂದಲ್ಲದೆ
ತೆಗೆಯಬಹುದೆ? ಸಬ್ದ ಸೋಪಾನವ ಕಟ್ಟಿ ನಡೆಸಿದರು ನಮ್ಮ
ಪುರಾತನರು, ದೇವಲೋಕಕ್ಕೆ ಬಟ್ಟೆ ಕಾಣಿರೋ
ಮರ್ತ್ಯಲೋಕದವರ ಮನದ ಮೈಲಿಗೆಯ ಕಳೆಯಲೆಂದು
ಗೀತ ಮಾತೆಂಬ ಜ್ಯೋತಿಯ
ಬೆಳಗಕೊಟ್ಟರು ಕೂಡಲ ಚೆನ್ನ ಸಂಗನ ಶರಣರು

ಆಳವಾದ ಬವಿಯಲ್ಲಿರುವ ನಿರನ್ನು ಹಗ್ಗದ ಸಹಾಯದಿಂದ ಇಲ್ಲವೇ ಮೆಟ್ಟಿಲುಗಳ ಸಹಾಯದಿಂದ ಹೊರಗೆ ತೆಗೆಯಬೇಕಷ್ಟೆ. ಹಾಗೆ ಸಬ್ದಗಳು ಎಂಬ ಸೋಪಾನದ ಸಹಾಯದಿಂದ ಜ್ಞಾನದ ನೀರನ್ನು ತಮ್ಮ ಹೃದಯಾಂತರಾಳದಿಂದ ಶರಣರು ತೆಗೆದರು. ಲೋಕದ ಜನರ ಮನದ ಮೈಲಿಗೆಯ ಕಳೆಯಲು ವಚನ ಶಾಸ್ತ್ರವೆಂಬ ಜ್ಯೋತಿಯ ಬೆಳಕನ್ನು ಕೊಟ್ಟರು.

ವೇದಂಗಳ ಹಿಂದೆ ಹರಿಯದಿರು, ಹರಿಯದಿರು
ಶಾಸ್ತ್ರಂಗಳ ಹಿಂದೆ ಸುಳಿಯದಿರು, ಸುಳಿಯದಿರು
ಪುರಾಣಂಗಳ ಹಿಂದೆ ಬಳಲದಿರು, ಬಳಲದಿರು
ಆಗಮಂಗಳ ಹಿಂದೆ ತೊಳಲದಿರು, ತೊಳಲದಿರು
ಸೌರಾಷ್ಟ್ರ ಸೋಮೇಶ್ವರನ ಕೈಪಿಡಿದು
ಶಬ್ದ ಜಾಲಂಗಳಿಗೆ ಬಳಲದಿರು ಬಳಲದಿರು - ಆದಯ್ಯ

ವೇದ, ಶಾಸ್ತ್ರ, ಪುರಾಣ, ಆಗಮಗಳ ಬೆನ್ನು ಹತ್ತಿ ವ್ಯರ್ಥವಾಗಿ ಬಳಲಬೇಡ, ಸಬ್ದ ಜಾಲಗಳಿಗೆ ಸಿಕ್ಕಿ ತೊಳಲಬೇಡ, ಪರಮಾತ್ಮನ ದಿವ್ಯಾನುಭವ ಪಡೆಯುವ ಅನುಭಾವ ಮಾರ್ಗ ಹಿಡಿ.

ವೇದಂಗಳಿಗೆ ಅಭೇದ್ಯವಾದ ಶಿವನ ಭೇದಿಸಿ
ಕಂಡರು ನೋಡಾ ಶರಣರು,
ಸಾಸ್ತ್ರಂಗಳಿಗಸಾಧ್ಯವಾದ ಶಿವನ ಸಾಧಿಸಿ
ಕಂಡರು ನೋಡಾ ಶರಣರು,
ಆಗಮಂಗಳ ಇತಿಹಾಸ ತರ್ಕಕ್ಕಸಾಧ್ಯವಾದ ಶಿವನ ಅರಸಿ
ಕಂಡರು ನೋಡಾ ಶರಣರು,
ಅಗಮ್ಯ ಅಪ್ರಮಾಣವಾದ ಪರಶಿವನ ಪ್ರಮಾಣಿಸಿ ಕಂಡು
ಒಳಹೊಕ್ಕು ಬೆರೆಸಿದರು ನೋಡಾ ನಮ್ಮ ಶರಣರು ಅಖಂಡೇಶ್ವರಾ - ಷಣ್ಮುಖ ಸ್ವಾಮಿಗಳು.

ವೇದ, ಶಾಸ್ತ್ರ, ಪುರಾಣ, ಆಗಮ, ಇತಿಹಾಸ ಇವುಗಳಿಗೆ ದೇವನು ಅತೀತನಾಗಿ ಇದ್ದಾನೆ. ವಾಜ಼್ಮನಾತೀತನಾದ ದೇವನನ್ನು ಸಾಧನೆಯಿಂದ ಒಳಹೊಕ್ಕು ಬೆರಸಿದರು ಅನುಭಾವಿಗಳಾದ ನಮ್ಮ ಶರಣರು.

ಈ ವಚನಾನುಭಾವದಲ್ಲುಳ್ಳರ್ಥವು ಸಕಲವೇದಾಗಮ ಶಾಸ್ತ್ರ ಪುರಾಣಂಗಳಲ್ಲಿ ಉಂಟು ನೋಡ
ಈ ವಚನಾನುಭಾವದಲ್ಲುಳ್ಳರ್ಥವು ಸಕಲವೇದಾಗಮ ಶಾಸ್ತ್ರ ಪುರಾಣಂಗಳಲ್ಲಿಯೂ ಎಲ್ಲ ನೋಡ
ಈ ವಚನಾನುಭಾವದರ್ಥವು ಸಕಲವೇದಾಗಮ ಶಾಸ್ತ್ರ ಪುರಾಣಂಗಳಿಗೂ ನಿಲುಕದು ನೊಡಾ
ಈ ವಚನಾನುಭಾವದರ್ಥವು ಸಕಲವೇದಾಗಮ ಶಾಸ್ತ್ರ ಪುರಾಣಂಗಳಿಗತೀತವು ನೋಡಾ
ಅಪ್ರಮಾಣ ಕೂಡಲಸಂಗಮದೇವಾ -ಬಾಲ ಸಂಗಯ್ಯನವರ ವಚನ (66. ಪುಟ ಸಂಖ್ಯೆ 21-22)[1]

ಎಮ್ಮವಚನದೊಂದು ಪಾರಾಯಣಕ್ಕೆ
ವ್ಯಾಸನದೊಂದು ಪುರಾಣ ಸಮಬಾರದಯ್ಯಾ.
ಎಮ್ಮ ವಚನದ ನೂರೆಂಟರಧ್ಯನಕ್ಕೆ
ಶತರುದ್ರೀ(ಯಾಗ)ಸಮ ಬಾರದಯ್ಯಾ.
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರೀ ಲಕ್ಷ ಜಪ ಸಮ ಬಾರದಯ್ಯಾ,
ಕಪಿಲಸಿದ್ದಮಲ್ಲಿಕಾರ್ಜುನ. - ಸಿದ್ದರಾಮೇಶ್ವರ ಸವಸ4/1613 [1]

ಅಲ್ಲಮ ಪ್ರಭುಗಳ ವಚನ

ಹೊನ್ನು ಮಾಯೆಯೆಂಬರು,
ಹೆಣ್ಣು ಮಾಯೆಯೆಂಬರು,
ಮಣ್ಣು ಮಾಯೆಯೆಂಬರು
ಹೊನ್ನು ಹೆಣ್ಣು ಮಣ್ಣು ಮಾಯೆಯಲ್ಲ
ಮನದ ಮುಂದಣ ಆಶೆಯೇ ಮಾಯೆ ಕಾಣ ಗುಹೇಶ್ವರ ||

ಉತ್ತಮ ಜೀವನಕ್ಕಾಗಿ ಬಸವಣ್ಣನವರ ಸಪ್ತಸೂತ್ರಗಳು (For a better life Basava's seven principles)

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯ ಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ,
ಇದೇ ಅಂತರಂಗ ಶುದ್ಧಿ! ಇದೆ ಬಹಿರಂಗ ಶುದ್ಧಿ!
ಇದೆ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ. -ವಿಶ್ವಗುರು ಬಸವಣ್ಣ

ಅಸಹ್ಯ = disgust, ಹೇಸಿಗೆ ಹಳಿ = ದೂಸಿಸು, ನಿಂದಿಸು, scold, reprehend,

ಸಾಮಾಜಿಕ ಸಮಾನತೆ (Social equality)

ಇವನಾರವ ಇವನಾರವ ಇವನಾರವ ನೆಂದಿನಸದಿರಯ್ಯಾ
ಇವನಮ್ಮವ ಇವನಮ್ಮವ ಇವನಮ್ಮವ ನೆಂದಿನಸಯ್ಯಾ
ಕೂಡಲಸಂಗಮದೇವಾ ನಿಮ್ಮ ಮಹಾಮನೆಯ ಮಗನೆಂದನಿಸಯ್ಯ. -ವಿಶ್ವಗುರು ಬಸವಣ್ಣ

ಮಹಾಮನೆ = world, universe, ಪ್ರಪಂಚ, ಭೂಮಿ, ಭೂಲೋಕ

ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ?
ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆತೆರೆಗಳಿಗಂಜಿದೊಡೆಂತಯ್ಯ?
ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯ?
ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯ ಈ ಲೋಕದೊಳಗೆ ಹುಟ್ಟಿದ ಬಳಿಕ
ಸ್ತುತಿ-ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು. -ಆಕ್ಕಮಹಾದೇವಿ

ತಂದೆ, ತಾಯಿ ಗುರುವಿನ ಮಹತ್ವ (importance of parents and a Guru [Teacher])

ವಿದ್ಯೆ ಕಲಿಸದ ತಂದೆ, ಬುದ್ದಿ ಹೇಳದ ಗುರು,
ಬಿದ್ದಿರಲು ಬಂದು ನೋಡದ ತಾಯಿ
ಶುದ್ಧ ವೈರಿಗಳು ಸರ್ವಜ್ಞ||

ವೈರಿ = ಶತ್ರು, enemy, foe

ದಾನದ ಮಹತ್ವ (Importance of sharing/donation)

ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ,
ಕೊಟ್ಟು ತಾ ಕೆಟ್ಟೆನೆನಬೇಡ, ಮುಂದಕ್ಕೆ
ಕಟ್ಟಿಹುದು ಬುತ್ತಿ ಸರ್ವಜ್ಞ||

[1] ಈ ತರಹದ ಸಂಖ್ಯೆಯ ವಿವರ: ಸವಸ-೧/೧೭೧ :- ಸಮಗ್ರ ವಚನ ಸಂಪುಟ -೧, ವಚನ ಸಂಖ್ಯೆ-೧೭೧ (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previous ಲಿಂಗಾಯತರಲ್ಲಿ ಗ್ರಹಣದ ಬಗ್ಗೆ ಶರಣರ ವಚನಗಳಲ್ಲಿ *ಲಿಂಗ*ದ ಸ್ವರೂಪ Next
cheap jordans|wholesale air max|wholesale jordans|wholesale jewelry|wholesale jerseys