Previous ಲಿಂಗಸೀಮೇ ಸೀಮೋಲಂಘನವಾದಲ್ಲಿ ಕಡಲೊಳಗಣ ವಡಬ ಹೊದ್ದಿಯೂ ಹೊದ್ದದಂತೆ Next

ಅಂಗಜಂಗುಳಿಗಳೆಲ್ಲಾ ಅಶನಕ್ಕೆ ನೆರೆದರು

*

✍ ಶ್ರೀಮತಿ ರುದ್ರಮ್ಮ ಅಮರೇಶ
ಹಾಸಿನಾಳ ಗಂಗಾವತಿ, ವಿಶ್ವಲಿಂಗಾಯತ ಸಮಿತಿ.

ಅಲ್ಲಮಪ್ರಭುದೇವರು ವಚನ

|| ಓ೦ ಶ್ರೀಗುರು ಬಸವಲಿಂಗಾಯ ನಮಃ ||

ಅಂಗಜಂಗುಳಿಗಳೆಲ್ಲಾ ಅಶನಕ್ಕೆ ನೆರೆದರು,
ಲಿಂಗದ ಹವಣನಿವರೆತ್ತ ಬಲ್ಲರು?
ಕಾಯಜೀವಿಗಳು ಕಳವಳಧಾರಿಗಳು,
ದೇವರ ಸುದ್ದಿಯನಿವರೆತ್ತ ಬಲ್ಲರು?
ಮದ್ಯಪಾನವನುಂಡು ಮದವೆದ್ದ ಜೋಗಿಯಂತೆ ನುಡಿವರು
ಗುಹೇಶ್ವರನ ನಿಲವನಿವರೆತ್ತ ಬಲ್ಲರು?. - ಅಲ್ಲಮಪ್ರಭುದೇವರು

ಭಾವಾರ್ಥ: ನಮ್ಮ ಶರಣರು ಪರಿಸರವಾದಿಗಳು. ಈ ಪರಿಸರ ಹೇಗಿದಿಯೊ ಅದೆ ರೀತಿ ತಮ್ಮ ಬದುಕನ್ನು ಸಹಜವಾಗಿ ಕಟ್ಟಿಕೊಳ್ಳುವುದರ ಮೂಲಕ ಈ ಸೃಷ್ಟಿ ಸ್ಥಿತಿ ಲಯಕ್ಕೆ ಸಿಲುಕದಂತೆ ಬಯಲೊಳಗೆ ಬಯಲಾದವರು. ಇಂಥ ಮಹಾನ್ ನಮ್ಮ ಶಿವಶರಣರ ವಿಷಯ ಸದ ವೈಭೋಗದಲ್ಲಿ ವಿಲಾಸದಲ್ಲಿರುವ ಈ ಭೋಗಾಸಕ್ತರಿಗೆ ಏನು ಗೊತ್ತು? ಎಂಬುದಾಗಿ ಪ್ರಶ್ನೆ ಮಾಡಿದ್ದಾರೆ ಅಲ್ಲಮಪ್ರಭುಗಳು ತಮ್ಮ ಈವೊಂದು ವಚನದಲ್ಲಿ.

ಅಂಗಜಂಗುಳಿಗಳೆಲ್ಲಾ ಅಶನಕ್ಕೆ ನೆರೆದರು, ಲಿಂಗದ ಹವಣನಿವರೆತ್ತ ಬಲ್ಲರು?

ಈ ಪ್ರಾಪಂಚಿಕರು ಸದ ತಮ್ಮ ಶರೀರಕ್ಕಾಗಿಯೆ ಹೋರಾಟ ನಡೆಸಿದ್ದಾರೆ. ಈ ಶರೀರವೆ ನಾನೆಂದುಕೊಂಡು ನಿತ್ಯ ಬಳಲುತ್ತ ದೇಹಪ್ರಕೃತಿಯ ಸಹಜ ಹಸಿವುಗಳನ್ನ ಮರೆತು ಅಸಹಜವಾಗಿ ವರ್ತಿಸುತ್ತಿದ್ದಾನೆ. ಅಂದರೆ ತನ್ನ ಶರೀರವನ್ನು ಕೇವಲ ಭೋಗ ವಿಲಾಸಕ್ಕೆ ಸೀಮಿತಗೊಳಿಸಿ ಕಾಯಕದ ಆಚರಣೆಯಿಂದ ದೂರ ಉಳಿದು ಸಮಷ್ಠಿಪ್ರಜ್ಞೆ ಕಳೆದುಕೊಂಡಿದ್ದಾನೆ. ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯು ತಾನು ಬೇರೆಯಲ್ಲ ಈ ಸಮಾಜವು ಬೇರೆಯಲ್ಲ ಎಂಬುದನ್ನರಿಯದೆ ಕೇವಲ ತನ್ನ ವೈಯಕ್ತಿಕ ಬದುಕಿಗೆ ತನ್ನ ಶರೀರಕ್ಕೆ ಹೆಚ್ಚು ಒತ್ತು ಕೊಟ್ಟು ನಿತ್ಯ ಅಹಾರಕ್ಕಾಗಿ ಚಡಪಡಿಸುತ್ತಿದ್ದಾನೆ. ಇಲ್ಲಿ ಕೇವಲ ಉದರದ ಹಸಿವಿಗೆ ಉಣಬಡಿಸುವ ಆಹಾರ ಮಾತ್ರವಲ್ಲ ಇದರ ಜೊತೆಗೆ ಕಾಮದ ಹಸಿವು, ಹಣದ ಹಸಿವು,  ಅಧಿಕಾರ ಅಂತಸ್ತಿನ ಹಸಿವು ಒಟ್ಟಾರೆ ತನ್ನ ಎಲ್ಲ ಹಸಿವುಗಳಿಗೆ ತನ್ನ ಶರೀರವನ್ನ ಒಟ್ಟುಗೂಡಿಸಿಕೊಂಡಿದ್ದಾನೆ. ಈ ರೀತಿ ನಿತ್ಯ ಅಂಗಸಂಗದಲ್ಲಿದ್ದವರಿಗೆ ಲಿಂಗದ ಅಳತೆ ಅದರ ಪ್ರಮಾಣ ಜ್ಞಾನ ಅವರಿಗೇನು ತಿಳಿದೀತು? ಎಂಬುದಾಗಿ ಪ್ರಶ್ನೆ ಮಾಡಿದ್ದಾರೆ ಅಲ್ಲಮಪ್ರಭುಗಳು. ಅಂದರೆ ಸದ ಅಂಗಸಂಗದಲ್ಲಿದ್ದ ವ್ಯಕ್ತಿಗಳಿಗೆ ಲಿಂಗದ ಆಚರಣೆಯನ್ನ ಹೇಳಿದರೆ ಅವರಿಗೆ ವೇದ್ಯವಾಗುವುದಿಲ್ಲ ಅಂದರೆ ತಿಳಿಯುವುದಿಲ್ಲ ಎನ್ನುತ್ತಾರೆ ಇಲ್ಲಿ ಅಲ್ಲಮರು.

ಕಾಯಜೀವಿಗಳು ಕಳವಳಧಾರಿಗಳು, ದೇವರ ಸುದ್ದಿ ಯನಿವರೆತ್ತ ಬಲ್ಲರು?

ನಮ್ಮ ಶರಣರು ತಮ್ಮ ತಾವರಿದು ಕಾಯಕಜೀವಿಗಳಾಗಿದ್ದರು, ಅವರು ಯಾವತ್ತೂ  ಕಾಯಜೀವಿಗಳಾಗಿರಲಿಲ್ಲ. ಕಾಯಕವೆ ತಮ್ಮ ಉಸಿರೆಂದು ಅದಕ್ಕಾಗಿಯೆ ಪ್ರಾಣ ಬಿಟ್ಟಿದ್ದಾರೆ. ಶರಣರು ಕಾಯಕ ದಾಸೋಹ ಮಾಡದೆ ಏನನ್ನು ಸ್ವೀಕರಿಸುತ್ತಿರಲಿಲ್ಲ. ಕಾಯಕವೆ ನಿಜವಾದ ಲಿಂಗಾರ್ಚನೆಯೆಂದು ತಿಳಿದುಕೊಂಡು ನಿತ್ಯ ಕಾಯಕ ದಾಸೋಹ ಮಾಡಿ ನಿತ್ಯ ಮುಕ್ತರಾದ ಕಾರಣ ಅವರಿಗೆ ಚಿಂತೆ ವ್ಯಸನಗಳು ಕಾಡಿರಲಿಲ್ಲ. ಏಕೆಂದರೆ ಅವರು ಉಸಿರಾಡಿದ್ದು ತಮ್ಮ ಅರಿವನ್ನು ಮಾತ್ರ. ಆ ಅರಿವೆ ಗುರುಲಿಂಗಜಂಗಮವೆಂದು ಭಾವಿಸಿ  ಅಂತಿಮವಾಗಿ ಜಂಗಮವೆ ನಮ್ಮ ಪ್ರಾಣಲಿಂಗ ಅರ್ಥಾತ್ ಈ ಸಮಾಜಸೇವೆಯೆ ನಮ್ಮ ಉಸಿರು ಎಂದುಕೊಂಡು ಆ ಸೇವೆಗಾಗಿಯೆ ತಮ್ಮ ಪ್ರಾಣವನ್ನ ಮೀಸಲಿಟ್ಟು ನಿಶ್ಚಿಂತರಾಗಿದ್ದರು. ಈ ರೀತಿ  ಜಂಗಮವೆ ನಮ್ಮ ಪ್ರಾಣಲಿಂಗವೆದೇಳಿದ ನಮ್ಮ ಶರಣರನ್ನು ತಮ್ಮ ಶರೀರದ ಮೇಲೆಯೆ ನಿತ್ಯ ಜೀವ ಇಟ್ಟುಕೊಂಡು ಚಿಂತೆ ವ್ಯಸನದಿಂದ ಬದುಕುತ್ತಿರುವ ಈ ವ್ಯಸನಿಗಳಿಗೆ ನಿಶ್ಚಿಂತರಾದ ನಮ್ಮ ಶರಣರ ವಿಚಾರ ಇವರಿಗೇನು ಗೊತ್ತು? ಎಂಬುದಾಗಿ ಪ್ರಶ್ನಿಸಿದ್ದಾರೆ ಅಲ್ಲಮಪ್ರಭುಗಳು. ಅಂದರೆ ತಮ್ಮನ್ನು ತಾವರಿಯದೆ ಹಲವು ಚಿಂತೆಗಳಲ್ಲಿ ಮುಳುಗಿದ ಈ ಹುಲುಮಾನವರಿಗೆ ಶಿವಚಿಂತೆಯಲ್ಲಿರುವ ನಮ್ಮ ಶರಣರ ವಿಷಯ ಇವರಿಗೆ ಗೊತ್ತಾಗುವುದಿಲ್ಲ ಎಂಬುದನ್ನ ತಮ್ಮ ಅನುಭವದ ಮೂಲಕ ಹೇಳಿಕೊಂಡಿದ್ದಾರೆ ಇಲ್ಲಿ ಅಲ್ಲಮರು.

ಮದ್ಯಪಾನವನುಂಡು ಮದವೆದ್ದ ಜೋಗಿಯಂತೆ ನುಡಿವರು ಗುಹೇಶ್ವರನ ನಿಲವನಿವರೆತ್ತ ಬಲ್ಲರು?

ನಿತ್ಯ ಮದ್ಯಪಾನವನ್ನ ಸೇವಿಸುತ್ತ ಮದವೇರಿಸಿಕೊಂಡು ಎಲ್ಲ ಬಲ್ಲವರ ಹಾಗೆ ಮಹಾತಪಸ್ವಿಗಳಂತೆ ಯೋಗಿಗಳಂತೆ ನುಡಿದು ಕೇವಲ ಶಬ್ದಗಳ ಬಳಲಿಕೆಯಲ್ಲಿ ಬಳಲುತ್ತಿರುವ ಇವರುಗಳು ನಮ್ಮ ಗುಹೇಶ್ವರನ ಸ್ಥಿತಿ ಎತ್ತರ ಈ ಮದ್ಯಪಾನಿಗಳಿಗೇನು ತಿಳಿಯುವುದು? ಎಂದು ಪ್ರಶ್ನಿಸಿದ್ದಾರೆ ಅಲ್ಲಮಪ್ರಭುಗಳು. ಅಂದರೆ ನಮ್ಮ ಶರಣರು ಜ್ಞಾನಾಮೃತವನ್ನ ಸೇವಿಸಿ ಎಲ್ಲೆಯನ್ನು ಮೀರಿ ಬಯಲಲ್ಲಿ ಸ್ಥಿರವಾಗಿ ನಿಂತ ಸ್ಥಿರಸ್ಥಾಯಿಗಳು. ಇಂಥ ಲಿಂಗಸಾಧಕರಾಗಿ ಸ್ವಯಂ ಲಿಂಗಸ್ವರೂಪಿಗಳಾದ ನಮ್ಮ ಶರಣರ ಸ್ಥಿತಿ ಯಾರಿಗೂ ಅರ್ಥವಾಗುವುದಿಲ್ಲ ಎಂಬುದನ್ನ ತಿಳಿಸಿಕೊಟ್ಟಿದ್ದಾರೆ ಇಲ್ಲಿ ಅಲ್ಲಮಪ್ರಭುಗಳು. ಒಟ್ಟಾರೆ ಈ ವಚನವು ಶರಣರು ಸಾಧಿಸಿದ ಪರಿಪೂರ್ಣ ಜ್ಞಾನವನ್ನ ಅದರ ಅನಂತತೆಯನ್ನ ಪರಿಚಯಿಸುತ್ತದೆ ನಮಗಿಲ್ಲಿ ಎಂಬುದನ್ನ ನಾವಿಲ್ಲಿ ಅರ್ಥೈಸಿಕೊಳ್ಳಬೇಕಾಗಿದೆ.

ಪರಿವಿಡಿ (index)
*
Previous ಲಿಂಗಸೀಮೇ ಸೀಮೋಲಂಘನವಾದಲ್ಲಿ ಕಡಲೊಳಗಣ ವಡಬ ಹೊದ್ದಿಯೂ ಹೊದ್ದದಂತೆ Next
cheap jordans|wholesale air max|wholesale jordans|wholesale jewelry|wholesale jerseys