Previous ಉಳಿಯುಮೇಶ್ವರ ಚಿಕ್ಕಣ್ಣ ವೀರ ಗೊಲ್ಲಾಳ-ಕಾಟಕೋಟ Next

ಬಾಲಸಂಗಣ್ಣ ವಚನಗಳು

242
ಊರೊಳಗಣ ಹೊಲೆಯ, ಊರ ಹೊರಗಣ ಕುಲಜ.
ಇವರಲ್ಲಿ ಆರು ಹಿರಿ[ಯರೆಂಬುದ] ಬಲ್ಲಡೆ ಲಿಂಗಪ್ರಾಣಸಂಬಂಧಿಯೆಂಬೆ.
ಅರಿಯದಿರ್ದಡೆ ಪ್ರಾಣಲಿಂಗಸಂಬಂಧಿಯೆಂಬೆ.
ಇಂತೀ ಉಭಯವನರಿದ ಶರಣ ಸರ್ವಾಂಗಲಿಂಗಸಂಬಂಧಿ.
ಆತಂಗೆ ತತ್ತುಗೊತ್ತಿಲ್ಲ, ಇಷ್ಟ ಪ್ರಾಣವೆಂಬ ಗುತ್ತಗೆಯವನಲ್ಲ.
ಕರ್ಪುರ ಉರಿ ಉಭಯರೂಪು ತನ್ಮಯವಾದಂತೆ
ಕಮಠೇಶ್ವರಲಿಂಗದಲ್ಲಿ ಸದಾಸನ್ನದ್ಭನಾದ ಶರಣನು.
243
ಐದರಿಂದ ಕಾಬುದು ಜೀವ, ಮೂವರಿಂದ ಕಾಬುದು ಆತ್ಮ.
ಇಪ್ಪತ್ತೈದರಿಂದ ಕಾಬುದು ಪರಮ, ಮೂವತ್ತಾರರಿಂದ ಕಾಬುದು ಚಿತ್ತ.
ಒಂದರಿಂದ ಕಾಣಿಸಿಕೊಂಬುದು ಚಿದಾನಂದ.
ಚಿದಾನಂದವೆಂಬ ಆನಂದ ನಿಂದು, ಸದಮಲಾನಂದ ತಾನಾದಲ್ಲಿ,
ಸದಾಸನ್ನದ್ಧವೆಂಬ ಆನಂದ ಹಿಂಗಿ
ನಿಂದ ಉಳುಮೆ, ಕಮಠೇಶ್ವರಲಿಂಗ ತಾನಾದ ಶರಣ.
244
ಕಂಗಳು ನುಂಗಿದ ಬಯಲವ, ಕರ್ಣ ಅವಗವಿಸಿದ ನಾದವ,
ನಾಸಿಕದಲ್ಲಿ ನಷ್ಟವಾದ ಸುಗಂಧವ,
ಜಿಹ್ವೆಯ ಕೊನೆಯಲ್ಲಿ ಅಳಿದ ರಸಾನ್ನವ,
ಮುಟ್ಟಿನ ದೆಸೆಯಲ್ಲಿ ನಿಶ್ಚಯವಾದ ಮೃದು ಕಠಿಣಾದಿ,
ಇಂತಿವೆಲ್ಲವೂ ನಿಜನೆಲೆಯಲ್ಲಿ ಅಚ್ಚೊತ್ತಿದಂತೆ ಐಕ್ಯವಾದ ಮತ್ತೆ
ಅರ್ಪಿತವೆಂಬುದು ಹಿಂಚೋ, ಮುಂಚೋ ಎಂಬುದ ತಿಳಿದು,
ಆ ಉಳುಮೆಯಲ್ಲಿ ಕಲೆದೋರದೆ ಅರ್ಪಿತ ನಷ್ಟವಾದುದು.
ಕಮಠೇಶ್ವರಲಿಂಗವ ಕೂಡಿ ಕೂಡಿದೆನೆಂದು
ಎರಡಳಿದ, ಪ್ರಾಣಲಿಂಗ ಲಿಂಗಪ್ರಾಣವೆಂಬ ಸಂದೇಹವಳಿದ ಶರಣ.
245
ಕಾಬುದು ಜೀವನಲ್ಲ, ಕಾಣಿಸಿಕೊಂಬುದು ಪರಮನಲ್ಲ.
ಅಟ್ಟಿ ಮುಟ್ಟಿ ಹರಿದಾಡುವವು ಕರಣಂಗಳಲ್ಲ.
ಸುಖವನನುಭವಿಸುವವು ಇಂದ್ರಿಯಂಗಳಲ್ಲ.
ಇಂತೀ ಭೇದಂಗಳಲ್ಲಿ ಆರೆಂಬುದ ತಿಳಿದು
ಸಸಿ ವೃಕ್ಷಕ್ಕೆ ನೀರನೆರದಡೆ ಆ ನೀರ ಕುಡಿವುದು
ಬೇರೋ, ಮರನೋ ? ಮೀರಿ ಬೆಳೆದ ಫಲವೋ ?
ಎಂಬುದನರಿದು ತಿಳಿದಲ್ಲಿ,
ಅರಿದರುಹಿಸಿಕೊಂಬ ನಿರಿಗೆಯ ಬಲ್ಲ,
ಆತ ಕಮಠೇಶ್ವರಲಿಂಗವನೊಡಗೂಡಿದ ಶರಣ.
246
ಬಂಗಾರಕ್ಕೆ ಒಳಹೊರಗುಂಟೆ ?
ಕರ್ಪುರ ಚಂದನ ಅಗರು ಇರವಂತಿ ಶಾವಂತಿ
ಮೊಲ್ಲೆ ಮಲ್ಲಿಗೆ ಅದ್ರಗಂಚಿ ಮರುಗ ದವನ
ಪಚ್ಚೆ ಮುಡಿವಾಳ ಕೇತಕಿ ಮುಂತಾದ
ಸಕಲ ಪುಷ್ಪಪತ್ರೆಗಳಿಗೆ ಒಳಹೊರಗುಂಟೆ ?
ಅವರಂದವುಳ್ಳನ್ನಕ್ಕ ಸರ್ವಾಂಗದಲ್ಲಿ
ಗಂಧಪರಿಪೂರ್ಣಮಾಗಿರ್ಪುದದರಂತೆ
ಕಮಠೇಶ್ವರಲಿಂಗದಲ್ಲಿ ಉಭಯ ಮುಟ್ಟಳಿದ ಶರಣನಿರವು.
247
ಭಕ್ತ ವಿರಕ್ತಂಗೆ ಜೂಜು ವೇಂಟೆ ಕುತರ್ಕ ಕರ್ಕಶ
ನೆತ್ತ ಚದುರಂಗ ಪಗಡೆ ಪಗುಡಿತನ ಪರಿಹಾಸ
ಕುಸರಸ ಕುಚಿತ್ತ ಕುಟಿಲ ಗಣಿಕಾಸಂಗ
ಇಂತೀ ಸಮೇಳ ಸ್ವಚ್ಫಂಗಳ ಮಾಡುತ್ತ
ವೇದವ ಮರೆದು, ಶಾಸ್ತ್ರವ ತೊರೆದು, ಪುರಾಣದ ಹಾದಿಯನರಿಯದೆ
ಆಗಮದ ಆಗುಚೇಗೆಯ ಕಾಣದೆ
ಶಿವಾಧಿಕ್ಯ ಸಂಬಂಧನಲ್ಲದೆ, ಶಿವಪೂಜೆಯನೊಲ್ಲದೆ
ಶಿವಧ್ಯಾನದಲ್ಲಿ ನಿಲ್ಲದೆ
ಶಿವ ಯಥಾ ಕಥನದಲ್ಲಿ ತ್ರಿಕರಣಶುದ್ಧಾತ್ಮನಲ್ಲದೆ
ಇಂತೀ ಬಹುದುರ್ವಿಕಾರನಾಗಿ ಆಡುತ್ತ
ಮತ್ತವು ತೀರಿದ ಬಳಿಕ ದೇವಂಗೆ ಎಡೆಮಾಡು,
ಜಪಕ್ಕೆ ಮಾಲೆಯ ತಾ ಧ್ಯಾನದಲ್ಲಿದ್ದೆಹೆನೆಂದು
ಮತ್ತೆ ಅನ್ಯರು ಹೊದ್ದಬೇಡಾಯೆಂದು
ಚಿತ್ತಶುದ್ಧನಾಗಿದ್ದೆಹೆನೆಂದು ನುಡಿಗುಟ್ಟುವ ಮಿಟ್ಟೆಯ ಭಂಡಂಗೆ
ಕೃತ್ಯ ನಿತ್ಯ ನೇಮ ಜಪ ತಪ
ವ್ಯೋಮ ಅನುಸಂಧಾನ ಸತ್ಕ್ರಿಯಾಮಾರ್ಗ ಮತ್ತುಂಟೆ ?
ಸಂಸಾರದ ಹರವರಿಯಲ್ಲಿದ್ದಡೂ
ಕೋಲದ ಮಣಿಮಾಡದ ಕೆಳೆಯಲ್ಲಿದ್ದ
ಅರಸಿನ ಎಚ್ಚರಿಕೆಯ ಇರುವಿನಂತೆ ಇರಬೇಕು.
ಇಂತೀ ಸತ್ಕ್ರಿಯಾಮಾರ್ಗಂಗಳಿರವಿನಿಂದ
ಕಾಲಕರ್ಮಟಂಗಳಿಂದ ಕಳೆದು, ಸುಗುಣ ದುರ್ಗುಣಂಗಳ ತಿಳಿದು
ಉಭಯವ ಕಳೆದು, ತನ್ನ ತಾನರಿದು
ಭಿನ್ನಭಾವಿಯಲ್ಲದೆ, ಇಂತೀ ಭಾವ ಸನ್ನೆಗಟ್ಟಿಗೆಯಂತೆ
ಕಮಠೇಶ್ವರಲಿಂಗವನರಿವುದಕ್ಕೆ ಕ್ರಿಯಾಪದ ಭಿತ್ತಿ.
248
ಮಾಂಸದೊಳಗಿದ್ದ ಕ್ಷೀರವ, ಕ್ಷೀರದೊಳಗಿದ್ದ ಬೆಸುಗೆಯ
ಬಿನ್ನಾಣದಿಂದ ತೆಗೆದ ಬೆಣ್ಣೆಯ, ಆರೈದು ನೋಡಿ, ಕರಗಿ
ಕಡೆಯಲ್ಲಿ ಮೀರಿ ಘೃತವಾದುದು ಪಶುವೋ, ಪಯವೋ, ದಧಿಯೋ ?
ನವನೀತವೋ ? ಘೃತಸ್ವಯವೋ ? ಅಲ್ಲ ಬೆಸುಗೆಯ ಎಸಕವೋ ?
ಇಂತೀ ಗುಣವೊಂದರಿಂದೊಂದೊಂದ ಕಂಡು ಕಾಣಿಸಿಕೊಂಬ
ಮನೋನಾಥನ ಅನುವ ವಿಚಾರಿಸಿ
ಮನ ಮನನೀಯ ಭಾವ ಭಾವನೆ
ಧ್ಯಾನ ಪ್ರಮಾಣು ಪೂಜೆ ವಿಶ್ವಾಸ ಇವನರಿದುದು ಅರಿಕೆ.
ಇಂತಿವನೆಲ್ಲವನೂ ತೆರದರಿಶನದಿಂದರಿದು
ಬಿಟ್ಟುದ ಮುಟ್ಟದೆ, ಮುಟ್ಟಿದುದ ಮುಟ್ಟಿ
ತನ್ನಷ್ಟ ಉಭಯಭ್ರಾಂತು ಹುಟ್ಟುಗೆಟ್ಟಲ್ಲಿ
ಕಮಠೇಶ್ವರಲಿಂಗವು ತಾನಾದ ಶರಣ.
249
ಶುದ್ಧಾಧ್ವವಳವಟ್ಟ ಯೋಗಿಯೇ ಪರಮಗುರು.
ಶರಣರ ಮನವಿರ್ದಂತಿರ್ದಲ್ಲಿಯೆ ಇರಬಲ್ಲಡೆ ಪರಮನೇ ಲಿಂಗ.
ಶರಣೈಕ್ಯನುಭಾವವನು ಕೂಡಿದಾತನೇ ಪರಮ ವಿರತ.
ಶರಣ ಸುಮನ ಸುಮ್ಮಾನದೊಳಿರಬಲ್ಲಡಾತನೇ
ಕಮಠೇಶ್ವರಲಿಂಗಕ್ಕೆ ಭಕ್ತನಯ್ಯಾ, ಚೆನ್ನಬಸವಣ್ಣ.

ಗ್ರಂಥಋಣ: ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001

ಪರಿವಿಡಿ (index)
*
Previous ಉಳಿಯುಮೇಶ್ವರ ಚಿಕ್ಕಣ್ಣ ವೀರ ಗೊಲ್ಲಾಳ-ಕಾಟಕೋಟ Next