1652
ಅಶನ ವ್ಯಸನ ಸರ್ವವಿಷಯಾದಿಗಳಲ್ಲಿ ಹುಸಿದು,
ಪಿಸುಣತ್ವದಿಂದ ಗಸಣಿಗೊಂಡು,
ಮಾಡಿಸಿಕೊಂಬುದು ಸದ್ಗುರುವಿಗೆ ಸಂಬಂಧವಲ್ಲ.
ತಿಲರಸ-ವಾರಿಯ ಭೇದದಂತೆ, ಮಣಿಯೊಳಗಿದ್ದ ಸೂತ್ರದಂತೆ
ಅಂಗವ ತೀರ್ಚಿ ಪಾಯ್ಧು ನಿಂದ ಅಹಿಯ ಅಂಗದಂತೆ
ಗುರುಸ್ಥಲಸಂಬಂಧ,
ಎನ್ನಯ್ಯ ಚೆನ್ನರಾಮೇಶ್ವರಲಿಂಗವನರಿಯಬಲ್ಲಡೆ.
1653
ಕಲ್ಪಿತಾಂತರವನುಂಬುದು ಕಾಯವೋ? ಜೀವವೋ
ಜೀವವೆಂದಡೆ ನಿರ್ನಾಮ ಭೇದ,
ಕಾಯವೆಂದಡೆ ಮೃತ ಅಚೇತನ ಘಟ.
ಉಭಯಸಂಗ ಸಂಬಂಧವಾದಲ್ಲಿ
ಎನ್ನಯ್ಯ ಚೆನ್ನರಾಮ ಭೇದ.
1654
ಕಾಯ ಹಲವು ಭೇದಗಳಾಗಿ
ಆತ್ಮನೇಕವೆಂಬುದು ಅದೇತರ ಮಾತು?
ಬೆಂಕಿಯಿಂದಾದ ಬೆಳಗು ಸುಡಬಲ್ಲುದೆ? ಬೆಂಕಿಯಿಲ್ಲದೆ.
ಹಲವು ಘಟದಲ್ಲಿ ಅವರವರ ಹೊಲಬಿನಲ್ಲಿ ಅನುಭವಿಸುತ್ತ
ಮತ್ತೊಂದರಲ್ಲಿ ಕೂಟಸ್ಥವಪ್ಪ ಸುಖ ಉಂಟೆ?
ಈ ಗುಣ ಎನ್ನಯ್ಯ ಚೆನ್ನರಾಮನನರಿದಲ್ಲಿ.
1655
ಗುರುಭಕ್ತನಾದಲ್ಲಿ ಘಟಧರ್ಮವಳಿದು,
ಲಿಂಗಭಕ್ತನಾದಲ್ಲಿ ಸಂಚಲ ನಿಂದು,
ಜಂಗಮಭಕ್ತನಾದಲ್ಲಿ ತ್ರಿವಿಧಾಂಗ ಸಲೆ ಸಂದು,
ಇಂತೀ ತ್ರಿವಿಧಭಕ್ತಿಯಲ್ಲಿ ತ್ರಿಕರಣಶುದ್ಧನಾದ ಆತ್ಮಂಗೆ
ಮರ್ತ್ಯ-ಕೈಲಾಸವೆಂಬ ಕಾಳುಮಾತಿಲ್ಲ.
ಆತ ನಿತ್ಯಮುಕ್ತ
ಎನ್ನಯ್ಯ ಚೆನ್ನರಾಮನಾಗಿ.
1656
ಮನ ಲಿಂಗದಲ್ಲಿ ನಿಂದಿತ್ತೆಂಬಲ್ಲಿ
ಆ ಮನ ಲಿಂಗಕ್ಕೆ ನೆಲೆಯೊ?
ಲಿಂಗ ಮನದ ಸಂಗಿಯೊ?
ಎಂಬುದ ತಿಳಿದೆನೆಂಬುದು ಸಂಗವೊ? ನಿಸ್ಸಂಗವೊ?
ಬೀಜದೊಳಗಣ ತಿರುಳು ಭೇದಿಸಿ ಪುಟ್ಟುವಲ್ಲಿ
ಅದು ತನ್ನಯ ಸುನಾದದಿಂದವೊ? ಅಪ್ಪುವಿನ ಬಿಂದುವಿನ ಭೇದದಿಂದವೊ?
ಈ ಉಭಯ ನೆಲೆ ಘಟಿಸಿದಲ್ಲಿ ಯೋಗಕೂಟ.
ಆತ್ಮಲಿಂಗದ ಭೇದ, ಮುಕ್ತಿಭೇದ ನಿಂದಲ್ಲಿ
ಎನ್ನಯ್ಯ ಚೆನ್ನರಾಮನ ಕೂಟದ ಬೆಳಗು.
1657
ಮುನ್ನವೆ ಮುನ್ನವೆ ಮೂರರ ಹಂಬಲ ಹರಿದು,
ಚರ ಪರ ವಿರಕ್ತನಾದ ಬಳಿಕ,
ಇನ್ನು ಮೂರರ ಚಿಂತೆಯ ಹಂಬಲೇಕೆ?
ಆವಾವ ಜೀವಂಗಳು ತಮ್ಮ ತಮ್ಮ ಮಲವ ಮುಟ್ಟವು.
ತೊಂಡು ಮುಚ್ಚಿದ ಜೀವಧನದಂತೆ,
ಊರೂರ ತಪ್ಪಲು ಹರಿದು,
ಜೋಗಿಯ ಕಯ್ಯ ಕೋಡಗದಂತೆ ಅನ್ಯರಿಗೆ ಹಲ್ಲಕಿರಿದು,
ವಿರಕ್ತನೆನಿಸಿಕೊಂಬ ಯುಕ್ತಿಹೀನರ ಕಂಡಡೆ,
ಎನ್ನ ಮನ ನಾಚಿತ್ತು ಚೆನ್ನರಾಮ.
1658
ಶಿಲೆ ಹಲವು ತೆರದಲ್ಲಿ
ಹೊಲಬಿಗರಿಗೆ ಹೊನ್ನಾಗಿ
ಒಲವರವಿಲ್ಲದೆ ಅವರ ಭಾವದಲ್ಲಿ ನಿಲ್ಲುವುದು
ಶಿಲೆಯೊ? ಮನವೊ?
ಆ ನಿಜದ ನೆಲೆಯ ತಿಳಿವುದು
ದರ್ಪಣದ ತನ್ನೊಪ್ಪದ ಭಾವ,
ಎನ್ನಯ್ಯ ಚೆನ್ನರಾಮನನರಿವಲ್ಲಿ.
ಗ್ರಂಥಋಣ: ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
*