Previous ಕಲಕೇತಯ್ಯ ನಾಗಲಾಂಬಿಕೆ Next

ಹಡಪದ ರೇಚಣ್ಣ ವಚನಗಳು

1081
ಎನ್ನಾಧಾರಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಬಸವಣ್ಣನು.
ಎನ್ನ ಸ್ವಾದಿಷ್ಠಾನಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಚೆನ್ನಬಸವಣ್ಣನು.
ಎನ್ನ ಮಣಿಪೂರಕಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ
ಘಟ್ಟಿವಾಳ ಮದ್ದಯ್ಯನು.
ಎನ್ನ ಅನಾಹತಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಸಿದ್ಧರಾಮಯ್ಯನು.
ಎನ್ನ ವಿಶುದ್ಧಿಚಕ್ರಸ್ಥಾನದಲ್ಲಿಸ ಮೂರ್ತಿಗೊಂಡನಯ್ಯಾ ಮರುಳಶಂಕರದೇವರು.
ಎನ್ನ ಆಜ್ಞಾಚಕ್ರಸ್ಥಾನದಲ್ಲಿ ಮೂರ್ತಿಗೊಂಡನಯ್ಯಾ ಪ್ರಭುದೇವರು.
ಆಧಾರಕ್ಕಾಚಾರಲಿಂಗವಾದಾತ ಬಸವಣ್ಣ.
ಸ್ವಾಧಿಷ್ಠಾನಕ್ಕೆ ಗುರುಲಿಂಗವಾದಾತ ಚೆನ್ನಬಸವಣ್ಣ.
ಮಣಿಪೂರಕಕ್ಕೆ ಶಿವಲಿಂಗವಾದಾತ ಘಟ್ಟಿವಾಳ ಮದ್ದಯ್ಯ.
ಅನಾಹತಕ್ಕೆ ಜಂಗಮಲಿಂಗವಾದಾತ ಸಿದ್ಧರಾಮಯ್ಯ.
ವಿಶುದ್ಧಿಗೆ ಪ್ರಸಾದಲಿಂಗವಾದಾತ ಮರುಳಶಂಕರದೇವರು.
ಆಜ್ಞೆಗೆ ಮಹಾಲಿಂಗವಾದಾತ ಪ್ರಭುದೇವರು.
ನಿಃಕಳಂಕ ಕೂಡಲ [ಚೆನ್ನ]ಸಂಗಮದೇವಾ,
ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.

1082
ಒಂದನಹುದೆನ್ನದೆ, ಒಂದನಲ್ಲಾ ಎನ್ನದೆ,
ಬಾಯಿಗೆ ಬಂದಂತೆ ಅಂದಚೆಂದವ ಸೇರಿಸಿ,
ಬಾಯಿಗೆ ಬಂದಂತೆ ಒಂದೊಂದ ನುಡಿಯದೆ,
ಇದು ಬಂಧ ಮೋಕ್ಷ ಕರ್ಮವೆಂದು
ದಂದುಗವ ಗಂಡನಿಕ್ಕಿಕೊಂಡಾಡದೆ, ತಾ ನಿಂದಲ್ಲಿ ನಿಜಸುಖಿಯಾದ ಮತ್ತೆ ,
ಇತ್ಯಾದಿಗಳಲ್ಲಿ ಹೊತ್ತುಹೋರಲೇತಕ್ಕೆ ?
ಶಿಲೆ ರಸವನುಂಡಂತೆ, ಮರೀಚಿಕಾ ಜಲದಂತೆ, ಅಂಬುವಿನ ಸಂಭ್ರಮದಂತೆ,
ಕುಂಭದಲ್ಲಿ ಅಡಗಿದ ಸರ್ಪನ ಇಂದ್ರಿಯದಂತೆ,
ಇದು ಗುಣಲಿಂಗಾಂಗಿಯ ನಿರ್ಗಮನ.
ನಿಃಕಳಂಕ ಕೂಡಲಚೆನ್ನಸಂಗಮದೇವ, ತಾನಾದ ಶರಣನ ಇರವು.

1083
ಕಂಡ ಚಿತ್ತ ವಸ್ತುವಿನಲ್ಲಿ ಮಗ್ನವಾದ ಮತ್ತೆ ,
ಸಂಸಾರ ವಿಷಯಕ್ಕೆ ಮತ್ತನಪ್ಪುದೆ ?
ಮತ್ತೆ ಭಕ್ತರ ಗೃಹ ರಾಜದ್ವಾರದ ತಪ್ಪಲ ಕಾಯ್ವದೆ ?
ಆ ಚಿತ್ತ ತೊಟ್ಟುಬಿಟ್ಟ ಹಣ್ಣು, ಕಟ್ಟಿಸತ್ತ ಬಿದಿರು,
ದೃಷ್ಟ ನಷ್ಟವಾದ ಅಂಗಕ್ಕೆ ಮತ್ತೆ ಬಪ್ಪುದೆ ಪುನರಪ್ಪಿಯಾಗಿ ?
ಇದು ನಿಶ್ಚಯ, ನಿಜಲಿಂಗಾಂಗ ನಿರ್ಲೆಪನ ಹೊಲಬು.
ಮತ್ತೆ ಜಗದ ಮೊತ್ತದವನಲ್ಲ ,
ನಿಃಕಳಂಕ ಕೊಡಲಚೆನ್ನ ಸಂಗಮದೇವ ತಾನಾದ ಶರಣ.

1084
ಕರ್ಮದಿಂದ ಕರ್ಮವ ಕಂಡಲ್ಲದೆ, ಮುಂದಣವರ್ಮವನರಿಯಬಾರದು.
ವರ್ಮದಿಂದ ಸರ್ವವ ತಿಳಿದಲ್ಲದೆ, ಸತ್ಕರ್ಮ ನಾಸ್ತಿ ವಿರಕ್ತನಾಗಬಾರದು.
ಮುಕುರದೊಳಗಣ ನೆಳಲ ತಾ ನೋಡಿ ಕಾಬಂತೆ,
ಇದು ಕ್ರಿಯಾಪಥ, ವಿರಕ್ತನ ಶ್ರದ್ಧೆ.
ಅದು ಸನ್ಮು ಕ್ತವಾದಲ್ಲಿ ಮಾಡೆನೆಂಬ ಶಂಕೆ.
ಮಾಡಿದೆನೆಂಬ ಕೃತ್ಯ ಉಭಯದ ಕಲೆಯಿಲ್ಲ ,
ನಿಃಕಳಂಕ ಕೂಡಲಚೆನ್ನಸಂಗಮದೇವ ತಾನಾದ ಶರಣ.

1085
ಗಜ ಗಮನ, ಅಹಿತ ಶರಸಂಧಾನ, ಮಯೂರನ ಶಯನ,
ಮಾರ್ಜಾಲನ ಧ್ಯಾನ, ಕಂಠೀರವನ ಲಾಗು, ಬಕಮೂರ್ತಿಯ ಅನುಸಂಧಾನ,
ಅಳಿಯ ಗಂಧ ಭುಂಜನೆ, ಮಧು ಮಕ್ಷಿಕದ ಘೃತಗೊಡ ವಾಸ,
ಮೂಷಕದ ದ್ವಾರಭೇದ, ಮರೆವಾಸವೈದುವ ಸಂಚ,
ಚೋರನ ಕಾಹು, ಪರಿಚಾರಕನ ವೇಳೆ, ಸಾಹಿತ್ಯನ ಉಪಮೆ,
ಸಂಗೀತರ ಸಂಚು, ತಾಳಧಾರಿಯ ಕಳವು,
ವಾದ್ಯಭೇದಕನ ಮುಟ್ಟು, ಘ್ರಾಣನ ಹರಿತ, ಭಾವಜ್ಞನ ಚಿತ್ತ .
ಇಂತೀ ನಾನಾ ಗಣಂಗಳ ಲಕ್ಷಾಲಕ್ಷಿತವ ತಿಳಿದು,
ಶ್ರುತ ದೃಷ್ಟ ಅನುಮಾನ ಮುಂತಾದ ನಾನಾ ಭೇದಂಗಳಲ್ಲಿ ವಿಚಾರಿಸಿ ಕಂಡು,
ನಾನಾರೆಂಬುದದೇನೆಂದು ತಿಳಿದು, ತನಗೂ ಇದಿರಿಂಗೂ ಪಡಿಪುಚ್ಚವಿಲ್ಲದೆ,
ಸಿಂಧುವಿನೊಳಗಾದ ಸಂಭ್ರಮಂಗಳ ಸಂಚಾರದ
ಅಂಗವೆಲ್ಲ ಹೋಗಿ ನಿರಂಗವಾದಂತೆ.
ಅಂಗವಾತ್ಮನ ಸಂಗ, ಈ ಅಂಗವೆಂದು ತಿಳಿದು,
ಆವ ಸ್ಥಲವನಂಗೀಕರಿಸಿದಲ್ಲಿಯೂ
ಪರಿಪೂರ್ಣವಾಗಿ ಏನ ಹಿಡಿದಲ್ಲಿಯೂ
ತಲೆವಿಡಿಯಿಲ್ಲದೆ ಏನ ಬಿಟ್ಟಲ್ಲಿಯೂ
ಕುಳವಿಡಿಯಿಲ್ಲದೆ ಕರ್ಪುರ ಮಹಾಗಿರಿಯ ಸುಟ್ಟಡೆ
ಒಕ್ಕುಡಿತೆ ಬೂದಿ ಇಲ್ಲದಂತೆ,
ಚಿತ್ತನಿಶ್ಚಯವಾದ ಸದ್ಭಕ್ತ ಪರಮ ವಿರಕ್ತನ ಇರವು ಇದು.
ಎನ್ನೊಡೆಯ ಚೆನ್ನಬಸವಣ್ಣನ ಹರವರಿಯ ತೆರನಿದು.
ಸಾಧ್ಯ ಮೂವರಿಗಾಯಿತ್ತು , ಅಸಾಧ್ಯವಸಂಗತ.
ನಿಃಕಳಂಕ ಕೂಡಲಚೆನ್ನ ಸಂಗಮದೇವರೆಂದರಿದವಂಗೆ
ಅಸಾಧ್ಯ ಸಾಧ್ಯವಾಯಿತ್ತು ?

1086
ಪೃಥ್ವಿಯಲ್ಲಿ ಅಪ್ಪುಸಾರವಿಲ್ಲದಿರೆ ಬೀಜವ ತಳಿಯಲಾಗಿ,
ಪ್ರತ್ಯಕ್ಷ ಅಂಕುರ ದೃಷ್ಟವಪ್ಪುದೆ?
ಶ್ರದ್ಧೆ ಸನ್ಮಾರ್ಗ ಭಕ್ತಿ ವಿಶ್ವಾಸವಿಲ್ಲದಿದ್ದಡೆ ಸದ್ಭಕ್ತನಪ್ಪನೆ ? ಸದ್ಭಕ್ತನಪ್ಪನೆ ?
ಇಂತೀ ದೃಷ್ಟ ಸಿದ್ಧಾಂತದಿಂದ ತಪ್ಪು ಕುಳಿತ ಮತ್ತೆ ,
ದೃಷ್ಟಾಂತರವ ಇದಿರ ಕೈಯಲ್ಲಿ ಕೇಳಲುಂಟೆ ?
ನುಂಗಬಾರದ ಘೃತ, ಉಗುಳಬಾರದ ಪ್ರಿಯ,
ಬಿಡಬಾರದ ಭಕ್ತಿ , ವಿಶ್ವಾಸವಿಲ್ಲದ ಆ ಭಕ್ತಿಪೂಜೆ,
ಘನಸಿಂಧುವಿನಲ್ಲಿ ನಾನಾ ವರ್ಣವ ಕದಡಿದಂತಾಯಿತ್ತು .
ಇದನಿನ್ನಾರಿಗುಸುರುವೆ !
ನಿಃಕಳಂಕ ಕೂಡಲಚೆನ್ನಸಂಗಮದೇವಾ, ನೀನೆ ಬಲ್ಲೆ .

1087
ಭಕ್ತನಂತೆ ತ್ರಿವಿಧ ಮಲಕ್ಕಿಕ್ಕುವನೆ ಚಿತ್ತವ ?
ವಿರಕ್ತನಂತೆ ಸರ್ವವ್ಯಾಪಾರಕ್ಕೆ ಮೊತ್ತದ ಇಂದ್ರಿಯ ವರ್ಗದಲ್ಲಿ ,
ಸುಚಿತ್ತವ ಬಿಟ್ಟು ಮತ್ತೆ ವಿರಕ್ತನಪ್ಪನೆ ?
ಈ ಉಭಯದ ಭಾವವ ನಿಶ್ಚೆ ಸಿದಲ್ಲಿ ,
ಕುಸುಮ ಗಂಧದಂತೆ, ಮುಕುರ ಬಿಂಬದಂತೆ,
ಉರಿ ಕಪುರದಿರವಿನ ತೆರದಂತೆ,
ನಿಃಕಳಂಕ ಕೂಡಲಚೆನ್ನ ಸಂಗಮದೇವ ತಾನಾದ ಶರಣ.

1088
ಮರದ ದೇವರಿಗೆ ಉರಿಯ ಪೂಜೆಯುಂಟೆ ?
ಮಣ್ಣಿನ ಹರುಗುಲದಲ್ಲಿ ತುಂಬಿದ ತೊರೆಯ ಹಾಯಬಹುದೆ ?
ತೆರಕಾರನ ನಚ್ಚಿ ಕಳನೇರಬಹುದೆ ?
ಇಂತೀ ಗುಣದ ದೃಷ್ಟವ ಕಡೆಗಾಣಿಸಿದಲ್ಲಿ,
ಪ್ರಮಾಣಿಸಿದಲ್ಲಿಯೂ ಏತರನು,
ಹಾಂಗೆ ಬರಿಹುಂಡರ, ಆಚಾರಭ್ರಷ್ಟರ, ಅರ್ತಿಕಾರರ,
ಚಚ್ಚಗೋಷ್ಠಿವಂತರ, ಬಹುಯಾಚಕರ,
ಪಗುಡೆ ಪರಿಹಾಸಕರ, ತ್ರಿವಿಧದಲ್ಲಿ ಸೂತವನರಸುವ
ವಿಶ್ವಾಸಘಾತಕರ, ಅಪ್ರಮಾಣ ಪಾತಕರ,
ಭಕ್ಕಿಯ ತೊಟ್ಟಲ್ಲಿ ಭಕ್ತನೆಂದಡೆ,
ವಿರಕ್ತಿಯ ತೊಟ್ಟಲ್ಲಿ ಕರ್ತುವೆಂದಡೆ, ದೀಕ್ಷೆಯ ಮಾಡಿದಲ್ಲಿ ಗುರುವೆಂದಡೆ,
ತಪ್ಪ ಕಂಡಲ್ಲಿ ಎತ್ತಿ ತೋರುವೆನು.
ಗುಟ್ಟಿನಲ್ಲಿ ಚಿತ್ತ ಬಿಡಲಾರದಿರ್ದಡೆ,
ನಿಃಕಳಂಕ ಕೂಡಲಚೆನ್ನ ಸಂಗಮದೇವರಾದಡೂ ಎತ್ತಿಹಾಕುವೆನು.

1089
ಹೊರಗಣ ಸಿಪ್ಪೆ ಒಳಗೆ ಮೆಲುವನ್ನಕ್ಕ ಉಭಯದ ಕೂಟ.
ಅಗಲಿಗೆ ಬಂದ ಮತ್ತೆ ರಸಾನ್ನವಲ್ಲದೆ ಹಿಪ್ಪೆಗೆ ಚಿತ್ತ ಒಪ್ಪಬಲ್ಲುದೆ ?
ಅರಿವನ್ನಬರ ಸ್ಥಲಕುಳಂಗಳ ಹೊಲಹೊಲದ ಹೊಲಬ ತಿಳಿದಲ್ಲಿ ,
ಭಕ್ತಿಜ್ಞಾನವೈರಾಗ್ಯಗಳೆಂಬ ತ್ರಿವಿಧದ ಗೊತ್ತು ನಷ್ಟವಾದ ಶರಣ,
ತಥ್ಯಮಿಥ್ಯಕ್ಕೆ ಸಿಕ್ಕ ಮತ್ತಾವ ಗುಣಂಗಳಲ್ಲಿಯೂ ಹೊರದೃಷ್ಟಕ್ಕೆ ಬಾರ.
ಆತ ನಿಶ್ಚಿಂತ ನೋಡಾ, ನಿಃಕಳಂಕ ಕೂಡಲಚೆನ್ನಸಂಗಮದೇವ
ತಾನಾದ ಶರಣ.

ಗ್ರಂಥಋಣ: ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001

ಪರಿವಿಡಿ (index)
*
Previous ಕಲಕೇತಯ್ಯ ನಾಗಲಾಂಬಿಕೆ Next