Previous ಮೇದರ ಕೇತಯ್ಯ ಕಿನ್ನರಿ ಬ್ರಹ್ಮಯ್ಯ Next

ಪುರದ ನಾಗಣ್ಣ ವಚನಗಳು

2
ಅನಿರ್ವಾಚ್ಯವೆ ವಾಚ್ಯವಾಗಿ ಭಾವಿಸಲಿಲ್ಲದ ಬಯಲು.
ಅಗಮ್ಯವೆ ಮನವಾಗಿ ಆನಂದದೊಳಿಪ್ಪ ನೋಡಾ
ಮಹಾಮಹಿಮ ಅಮರಗುಂಡದ ಮಲ್ಲಿಕಾರ್ಜುನ
ನಿರಾಳ ನಿಃಶೂನ್ಯವೆ ತನುವಾಗಿ.

3
ಎನ್ನ ಘ್ರಾಣದಲ್ಲಿ ಆಚಾರಲಿಂಗವಾಗಿ ಬಂದು
ಗಂಧಪದಾರ್ಥವ ಕೈಕೊಂಡನಯ್ಯಾ ಬಸವಣ್ಣ.
ಎನ್ನ ಜಿಹ್ವೆಯಲ್ಲಿ ಗುರುಲಿಂಗವಾಗಿ ಬಂದು
ರುಚಿಪದಾರ್ಥವ ಕೈಕೊಂಡನಯ್ಯಾ ಚನ್ನಬಸವಣ್ಣ.
ಎನ್ನ ನೇತ್ರದಲ್ಲಿ ಶಿವಲಿಂಗವಾಗಿ ಬಂದು
ರೂಪಪದಾರ್ಥವ ಕೈಕೊಂಡನಯ್ಯಾ ಘಟ್ಟಿವಾಳ ಮುದ್ದಯ್ಯ.
ಎನ್ನ ತ್ವಕ್ಕಿನಲ್ಲಿ ಜಂಗಮಲಿಂಗವಾಗಿ ಬಂದು
ಸ್ಪರುಶನಪದಾರ್ಥ ಕೈಕೊಂಡನಯ್ಯಾ ಸಿದ್ಧರಾಮಯ್ಯ.
ಎನ್ನ ಶ್ರೋತ್ರದಲ್ಲಿ ಪ್ರಸಾದಲಿಂಗವಾಗಿ ಬಂದು
ಶಬ್ದಪದಾರ್ಥವ ಕೈಕೊಂಡನಯ್ಯಾ ಮರುಳಶಂಕರದೇವ.
ಎನ್ನ ಹೃದಯದಲ್ಲಿ ಮಹಾಲಿಂಗವಾಗಿ ಬಂದು
ಸಕಲಪದಾರ್ಥವ ಕೈಕೊಂಡನಯ್ಯಾ ಪ್ರಭುದೇವ.
ನೋಟದಲ್ಲಿ ಅನುಮಿಷ, ಕೂಟದಲ್ಲಿ ಅಜಗಣ್ಣ
ಭಾವದಲ್ಲಿ ಬಾಚಿರಾಜಯ್ಯ, ಮನ ದೃಢವೆ ಮೋಳಿಗೆ ಮಾರಯ್ಯ.
ಡೋಹರ ಕಕ್ಕಯ್ಯ ಕಿನ್ನರಿ ಬ್ರಹ್ಮಯ್ಯ ಸೊಡ್ಡಳ ಬಾಚರಸ ಹಡಪದಪ್ಪಣ್ಣ
ಮಡಿವಾಳ ಮಾಚಯ್ಯ ಮುಖ್ಯವಾದ ಅಸಂಖ್ಯಾತ ಮಹಾಪ್ರಮಥಗಣಂಗಳ
ಶ್ರೀಪಾದವನರ್ಚಿಸಿ ಪೂಜಿಸಿ ಸುಖಿಯಾದೆನಯ್ಯಾ
ಅಮರಗುಂಡದ ಮಲ್ಲಿಕಾರ್ಜುನ.

4
ಕಾಯದ ಕಣ್ದೆರೆಯಿಂದುದಯವಾದ ಧಾವತಿ ಎರಡು ನೋಡಯ್ಯಾ : ಅಯ್ಯಾ ಭ್ರಾಂತಿಯತ್ತಲೊಂದೆಳವುತ್ತಲದೆ
ದೇವಾ ನಿಮ್ಮತ್ತಲೊಂದೆಳವುತ್ತಲದೆ.
ಒಂದರ ಸಹಜವನೊಂದು ಗೆಲಲರಿಯದು.
ಮುಂದೆ ಸತ್ಪಥಕ್ಕೆಂತಡಿಯಿಡುವೆನಯ್ಯಾ ನಾನು ?
ಕಾಲಚಕ್ರದಲ್ಲಿ ಹುಟ್ಟಿ, ಕರ್ಮಚಕ್ರದಲ್ಲಿ ಬೆಳೆದು
ಕಲ್ಪಿತದಿಂದವೆ ದಿನಂಗಳು ಸವೆವುತ್ತವೆಯಯ್ಯಾ.
ತಲೆಯೆರಡರ ಪಕ್ಷಿ ವಿಷ ನಿರ್ವಿಷವ ಮೆಲಿದಂತಾಯಿತ್ತೆನಗಯ್ಯಾ.
ಅಂದಂದಿನರಿವು ಅಂದಂದಿನ ಮರವೆಗೆ ಸರಿಯಯ್ಯಾ.
ತಂದೆ ಈ ದಂದುಗವ ಮಾಣಿಸಿ
ನಿಮ್ಮ ನಿಜಾನಂದಭಕ್ತಿಯೆನಗೆ ಕರುಣಿಸಯ್ಯಾ
ಅಮರಗುಂಡದ ಮಲ್ಲಿಕಾರ್ಜುನಾ.

5
ಕಾಯವೆಂಬ ಪಟ್ಟಣಕ್ಕೆ ಸತ್ಯವೆಂಬ ಕೋಟೆಯನಿಕ್ಕಿ
ಧರ್ಮಾಥರ್ಿಕಾಮಮೋಕ್ಷಂಗಳೆಂಬುಕ್ಕಡದವರೆಚ್ಚತ್ತಿರಿ
ಭಯ ಘನ ಭಯ ಘನ.
ಅಜ್ಞಾನವೆಂಬ ತೀವ್ರ ಕತ್ತಲೆ ಕರ ಘನಕರ ಘನ.
ಒಂಬತ್ತು ಬಾಗಿಲ ಜತನವ ಮಾಡಿ
ಜ್ಞಾನಜ್ಯೋತಿಯ ಪ್ರಬಲವ ಮಾಡಿ ಪ್ರಬಲವ ಮಾಡಿ
ಐವರು ಕಳ್ಳರು ಕನ್ನವ ಕೊರೆವುತ್ತೈದಾರೆ.
ಸುಯಿಧಾನವಾಗಿರಿ ಜೀವಧನವ ಜತನವ ಮಾಡಿ ಜತನವ ಮಾಡಿ
ಬಳಿಕಿಲ್ಲ ಬಳಿಕಿಲ್ಲ.
ಆ ಪಟ್ಟಣದ ಮೂಲಸ್ಥಾನದ ಶಿಖರದ ಮೇಲಣ
ಬಾಗಿಲ ತೆರದು ನಡೆವುದೆ ಸುಪಥ, ಸ್ವಯಂಭುನಾಥನಲ್ಲಿರೆ.
ಇದನರಿತು ಮಹಾಮಹಿಮ ಅಮರಗುಂಡದ ಮಲ್ಲಿಕಾರ್ಜುನದೇವರಲ್ಲಿ
ಎಚ್ಚರಿಕೆಗುಂದದಿರಿ, ಎಚ್ಚರಿಕೆಗುಂದನಿರಿ.

6
ಗುರುಪಾದೋದಕ ಪರಮಪಾವನವೆಂದರಿದು
ಗುರುಪಾದೋದಕವನೆ ಧರಿಸುವುದು.
ಧರಿಸಿದಾತಂಗೆ ಅಷ್ಟಾಷಷ್ಟಿತೀಥರ್ಿಂಗಳು
ತನ್ನೊಳಡಗಿಹವಯ್ಯಾ.
ಅದೆಂತೆಂದಡೆ : ಅಂಗುಷ್ಠಾಗ್ರೇ ಅಷ್ಟಾಷಷ್ಟಿತೀರ್ಥಂ ನಿತ್ಯಂ ವಸಂತಿ ವೈ'
ಎಂದುದಾಗಿ, ಶ್ರೀಗುರುವಿನ ಅಂಗುಷ್ಠಾಗ್ರದಲ್ಲಿ
ಸಕಲತೀರ್ಥಂಗಳಿರ್ಪವು.
ಶ್ರೀಗುರುವಿನ ಪಾದೋದಕ ಪರಮಪಾವನವೆಂದರಿದು
ಗುರುಪಾದೋದಕವನೆ ಧರಿಸುವುದು.
ಇದು ಕಾರಣ ಗುರುಪಾದೋದಕದಿಂದವೆ
ಪರಮಪದವಪ್ಪುದು, ಅಮರಗುಂಡದ ಮಲ್ಲಿಕಾರ್ಜುನಾ.

7
ನಾನಾ ಯೋನಿಯಲ್ಲಿ ಬಂದು ಫಲವೇನಯ್ಯಾ
ಪುಣ್ಯಪಾಪವೆಂದರಿಯದನ್ನಕ್ಕ.
ಪುಣ್ಯಪಾಪವೆಂದರಿದಲ್ಲಿ ಫಲವೇನಯ್ಯಾ
ಶಿವಭಕ್ತನಾಗದನ್ನಕ್ಕ.
ಶಿವಭಕ್ತನಾದಲ್ಲಿ ಫಲವೇನಯ್ಯಾ
ಲಿಂಗಜಂಗಮವೆಂದರಿಯದನ್ನಕ್ಕ.
ಲಿಂಗಜಂಗಮವೆಂದರಿದಲ್ಲಿ ಫಲವೇನಯ್ಯಾ
ಭವಿಯ ಕೊಳುಕೊಡೆ ಹಿಂಗದನ್ನಕ್ಕ.
ಭವಿಯ ಕೊಳುಕೊಡೆ ಹಿಂಗಿದಲ್ಲಿ ಫಲವೇನಯ್ಯಾ
ಆಶೆಯಾಮಿಷವಳಿಯದನ್ನಕ್ಕ.
ಆಶೆಯಾಮಿಷಂಗಳಳಿದಲ್ಲಿ ಫಲವೇನಯ್ಯಾ
ಸಮತೆ ನೆಲೆಗೊಳ್ಳದನ್ನಕ್ಕ.
ಸಮತೆ ನೆಲೆಗೊಂಡಲ್ಲಿ ಫಲವೇನಯ್ಯಾ
ಮೂರುಬಟ್ಟೆಯನರಿಯದನ್ನಕ್ಕ.
ಮೂರುಬಟ್ಟೆಯನರಿದಲ್ಲಿ ಫಲವೇನಯ್ಯಾ
ಅಷ್ಟಮದಂಗಳು ಬೆಂದು ನಷ್ಟವಾಗದನ್ನಕ್ಕ.
ಅಷ್ಟಮದಂಗಳು ಬೆಂದು ನಷ್ಟವಾದಲ್ಲಿ ಫಲವೇನಯ್ಯಾ
ಅಮರಗುಂಡದ ಮಲ್ಲಿಕಾರ್ಜುನದೇವರಲ್ಲಿ
ಶಿಖಿಕರ್ಪುರದಂತೆ ಅಡಗದನ್ನಕ್ಕ.

8
ನೆನೆವ ಮನಕ್ಕೆ ಮಣ್ಣನೆ ತೋರಿದೆ.
ನೋಡುವ ಕಣ್ಣಿಗೆ ಹೆಣ್ಣನೆ ತೋರಿದೆ.
ಪೂಜಿಸುವ ಕೈಗೆ ಹೊನ್ನನೆ ತೋರಿದೆ.
ಇಂತೀ ತ್ರಿವಿಧವನೆ ತೋರಿ ಕೊಟ್ಟು
ಮರಹನಿಕ್ಕಿದೆಯಯ್ಯಾ.
ಅಮರಗುಂಡದ ಮಲ್ಲಿಕಾರ್ಜುನಯ್ಯಾ
ನೀ ಮಾಡಿದ ಬಿನ್ನಾಣಕ್ಕೆ ನಾನು ಬೆರಗಾದೆನು.

9
ಭಕ್ತನೆಂಬ ಭೂಮಿಯಲ್ಲಿ
ಗುರೂಪದೇಶವೆಂಬ ನೇಗಲಿಯಂ ಪಿಡಿದು,
ಅಂತಃಕರಣ ಚತುಷ್ಟಯವೆಂಬ ಸೆಳೆಗೋಲಂ ಪಿಡಿದು,
ಉತ್ತರ ಕ್ರಿಯೆಯೆಂಬ ಹಂಸನೇರಿ,
ದುಷ್ಕರ್ಮದ ಕಾಟದ ಕುಲವಂ ಕಡಿದು,
ಅರಿವೆಂಬ ರವಿಕಿರಣದಲ್ಲಿ ಒಣಗಿಸಿ,
ಜ್ಞಾನವೆಂಬ ಬೆಂಕಿಯಲ್ಲಿ ಸುಟ್ಟುರುಹಿ,
ಆ ಹೊಲನ ಹಸನವ ಮಾಡಿ,
ಅದಕ್ಕೆ ಬಿತ್ತುವ ಭೇದವೆಂತೆಂದಡೆ: ಈಡಾ ಪಿಂಗಳ ಸುಷುಮ್ನವೆಂಬ ನಾಳವಂ ಜೋಡಿಸಿ,
ತ್ರಿಕೂಟಸ್ಥಾನವೆಂಬ ಬಟ್ಟಲಂ ಬಲಿದು,
ಕುಂಡಲಿಯೆಂಬ ಹಗ್ಗವಂ ಬಿಗಿದು,
ಹಂಸನೆಂಬ ಎರಡೆತ್ತನ್ನೇ ಹೂಡಿ,
ಶಾಂತಿ ನಿರ್ಮಲವೆಂಬ ಮಳೆಗಾಲದ ಮೇಘಮಂ ಸುರಿದು,
ಆ ಬೀಜ ಪಸರಿಸಿ, ಪ್ರಜ್ವಲಿಸಿ ಫಲಕ್ಕೆ ಬಂದು ನಿಂತಿರಲು,
ಅದಕ್ಕೆ ಒತ್ತುವ ಕಸ ಆವಾವೆಂದಡೆ :
ಅಷ್ಟಮದದ ಹಲವಂ ಕಿತ್ತು, ಸಪ್ತವ್ಯಸನದ ಸೆದೆಯಂ ಕಳೆದು,
ಮನೋರಥವೆಂಬ ಮಂಚಿಗೆಯನ್ನೇರಿ,
ಬಾಲಚಂದ್ರನೆಂಬ ಕವಣಿಯಂ ಪಿಡಿದು,
ಪ್ರಪಂಚವೆಂಬ ಹಕ್ಕಿಯಂ ಹೊಡೆದು,
ಆ ಭತ್ತ ಬಲಿದು ನಿಂದಿರಲು,
ಅದನ್ನು ಕೊಯ್ಯುವ ಭೇದವೆಂತೆಂದಡೆ :
ಇಷ್ಟವೆಂಬ ಕುಡುಗೋಲಿಗೆ, ಪ್ರಾಣವೆಂಬ ಹಿಡಿಯ ಜೋಡಿಸಿ,
ಭವಭವವೆಂಬ ಹಸ್ತದಿಂದ ಪಿಡಿದು,
ಜನನದ ನಿಲವಂ ಕೊಯ್ದು,
ಮರಣದ ಸಿವಡಂ ಕಟ್ಟಿ,
ಸುಜ್ಞಾನಪಥವೆಂಬ ಬಂಡಿಯ ಹೇರಿ,
ಮುಕ್ತಿ ಕೋಟಾರಕ್ಕೆ ತಂದು,
ಉನ್ನತವೆಂಬ ತೆನೆಯಂ ತರಿದು,
ಷಡುವರ್ಣವೆಂಬ ಬೇಗಾರರಂ ಕಳೆದು,
ಅಂಗಜನೆಂಬ ಕಾಮನಂ ಕಣ್ಕಟ್ಟಿ,
ಮಂಗಲನೆಂಬ ಕಣದಲ್ಲಿ
ಯಮರಾಜನಿಗೆ ಕೋರ ಹಾಕದೆ,
ಚಿತ್ರಗುಪ್ತರ ಸಂಪುಟಕ್ಕೆ ಬರಿಸದೆ,
ಈ ಶಂಕರನೆಂಬ ಸವಿಧಾನ್ಯವನುಂಡು,
ಸುಖಿಯಾಗಿರುತಿರ್ಪ ಒಕ್ಕಲಮಗನ
ಎನಗೊಮ್ಮೆ ತೋರು ತೋರಯ್ಯಾ,
ಅಮರಗುಂಡದ ಮಲ್ಲಿಕಾರ್ಜುನ ಪ್ರಭುವೆ.

10
ಶರಣ ಲಿಂಗಸಮರಸವಾಗಿ ಆಚರಿಸುವ.
ಶರಣನ ಲಿಂಗ ಭಿನ್ನವಾಗಿ ಓಸರಿಸಿಹೋದರೆ
ನೋಡಿ, ಅರಸಿ ಸಿಕ್ಕಿದ ಸಮಯದಲ್ಲಿ
ಆ ಲಿಂಗವ ಪರೀಕ್ಷಿಸಿ ನೋಡುವುದು.
ಆರು ಸ್ಥಾನಂಗಳಲ್ಲಿ ಬಿನ್ನವಿಲ್ಲದಿರ್ದಡೆ ಧರಿಸಿಕೊಂಬುದು.
ಸರ್ವಮಾಹೇಶ್ವರರು ನೋಡಿ ಶಂಕೆಯುಳ್ಳಡೆ ಬಿಡುವುದು.
ಅದೆಂತೆಂದಡೆ : ಶರಣನ ಸಂಕಲ್ಪ ಸನ್ಮತ ತನ್ನದೆಂಬುದೆ ದಿಟವೆಂದು ತಾ ನಿಶ್ಚೈಸಿ
ತೆತ್ತಿಗರಾದ ಸರ್ವಮಾಹೇಶ್ವರರು
ಮಂತ್ರಬೋಧನೆಯ ಕರ್ಣದಲ್ಲಿ ಬೋಧಿಸಬೇಕಲ್ಲದೆ
ಆ ಲಿಂಗಧ್ಯಾನಾರೂಢನಪ್ಪಾತಂಗೆ ಧೂಪ ದೀಪ ಅಂಬರಗಳೆಂಬ
ಬಂಧನವೈಕ್ಯವಂ ಮಾಡಲಾಗದು.
ಮಾಡಿದಡೆ ಜ್ಞಾನಿಗಳೊಪ್ಪರು.
ಅದು ಕಾರಣವಾಗಿ ಶಿವಧ್ಯಾನ ನಿಶ್ಚಿಂತವ ಮಾಡಿದ ಕಾರಣ
ಅವರ ತೆತ್ತಿಗರಲ್ಲವೆಂಬೆ, ದಿಟ ಕಾಣಾ ನೀ ಸಾಕ್ಷಿ
ನಿಮ್ಮಾಣೆನಿಮ್ಮಅರ್ಧಾಂಗಿಯಾಣೆ ಅಮರಗುಂಡದ ಮಲ್ಲಿಕಾರ್ಜುನಾ

11
ಸರ್ವಾಂಗಲಿಂಗಿಯಾದ ಶರಣನ ಲಿಂಗ ಭಿನ್ನವಾಗಿ ಹೋಗಲು
ಆ ಲಿಂಗದೊಡನೆ ತನ್ನ ಪ್ರಾಣವ ಬಿಡುವದು.
ಇದಲ್ಲದೆ ಜೀವಕಾಸೆ ಮಾಡಿ ಪುನಃ ಲಿಂಗವ ಧರಿಸಿದನಾದಡೆ
ಶುನಿಯ ಬಸುರಲ್ಲಿ ಬಂದು
ಅನೇಕಕಾಲ ನಾಯಕನರಕದಲ್ಲಿರ್ಪನಯ್ಯಾ
ನೀ ಸಾಕ್ಷಿಯಾಗಿ ಅಮರಗುಂಡದ ಮಲ್ಲಿಕಾರ್ಜುನಾ.

ಗ್ರಂಥಋಣ: ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001

ಪರಿವಿಡಿ (index)
*
Previous ಮೇದರ ಕೇತಯ್ಯ ಕಿನ್ನರಿ ಬ್ರಹ್ಮಯ್ಯ Next